Tag: ವಾಹನ ಸವಾರರು

  • ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಆಲಿಕಲ್ಲು ಮಳೆ

    ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಆಲಿಕಲ್ಲು ಮಳೆ

    – ಕೋಲಾರದಲ್ಲಿ ಗುಡುಗು, ಗಾಳಿ ಸಹಿತ ಭರ್ಜರಿ ಮಳೆ

    ಚಿಕ್ಕಬಳ್ಳಾಪುರ/ಕೋಲಾರ: ಚಿಕ್ಕಬಳ್ಳಾಪುರ ತಾಲೂಕಿನ ಗಂಗರೆಕಾಲುವೆ, ಗೊಳ್ಳು, ಕತ್ರಿಗುಪ್ಪೆ ಸೇರಿದಂತೆ ಕೆಲ ಗ್ರಾಮಗಳಲ್ಲಿ ಇಂದು ಆಲಿಕಲ್ಲು ಸಹಿತ ಮಳೆಯಾಗಿದೆ.

    ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಇಂದು ಮಳೆ ಆಗಿದೆ. ಇನ್ನೂ ದಿಢೀರನೆ ಸುರಿದ ಆಲಿಕಲ್ಲು ಮಳೆಗೆ ದ್ರಾಕ್ಷಿ ಹಾಗೂ ತರಕಾರಿ, ಹೂ-ಹಣ್ಣಿನ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ. ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ.

    ಹಳ್ಳಿಗಳಲ್ಲಿ ಆಲಿಕಲ್ಲು ಮಳೆ ಆಗಿದೆ ಎಂದು ತಿಳಿದ ನಗರದ ಜನತೆ ನಗರದಲ್ಲಿ ಮಳೆನಾ ಇಲ್ವಲ್ವಾ. ಇಷ್ಟೊಂದು ಆಲಿಕಲ್ಲು ಮಳೆನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲೂ ಮಳೆಯಾಗಿದೆ.

    ಇತ್ತ ಕೋಲಾರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆರಾಯನ ಸಿಂಚನವಾಗಿದೆ. ಕೋಲಾರ ಹೊರಹೊಲಯದಲ್ಲಿ ಭರ್ಜರಿ ಮಳೆ ಆಗಿದೆ. 20 ನಿಮಿಷದಿಂದ ಭರ್ಜರಿ ಮಳೆ ಸುರಿಯುತ್ತಿದ್ದು, ಬಿಸಿಲ ಬೇಗೆಯಿಂದ ಬಳಲಿ ಬೆಂಡಾಗಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.

    ದಿಢೀರನೆ ಆರಂಭವಾದ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತಿದೆ. ಸದ್ಯ ಜನರಿಗೆ ಮಳೆಯಿಂದ ಮತ್ತಷ್ಟು ಕೊರೊನಾ ವೈರಸ್‍ನ ಆತಂಕ ಹೆಚ್ಚಾಗಿದೆ.

  • ಡ್ರಂಕ್ & ಡ್ರೈವ್ ಕೇಸ್‍ಗಳಿಗೆ ತಟ್ಟಿದ ಕೊರೊನಾ ಬಿಸಿ

    ಡ್ರಂಕ್ & ಡ್ರೈವ್ ಕೇಸ್‍ಗಳಿಗೆ ತಟ್ಟಿದ ಕೊರೊನಾ ಬಿಸಿ

    ಬೆಂಗಳೂರು: ಡೆಡ್ಲಿ ಕೊರೊನಾ ಭೀತಿಯ ಎಫೆಕ್ಟ್ ಈಗ ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೂ ತಟ್ಟಿದೆ. ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದ ಡ್ರಂಕ್ & ಡ್ರೈವ್ ಕೇಸ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ.

    ಕೊರೊನಾ ಎಫೆಕ್ಟ್ ಹಂತ ಹಂತವಾಗಿ ಎಲ್ಲಾ ವಲಯಗಳಿಗೂ ತಟ್ಟುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಪತ್ತೆಯಾದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಡಿಡಿ ಕೇಸ್‍ಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿವೆ. ವಾಹನ ಸವಾರರಿಂದ ಎಲ್ಲಿ ನಮಗೆ ಕೊರೊನಾ ಬರುತ್ತೋ ಎನ್ನುವ ಭೀತಿಯಲ್ಲಿ ಟ್ರಾಫಿಕ್ ಪೊಲೀಸರು ಡಿಡಿ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕಿದರು.

    ಅಲ್ಲದೆ ವಾಹನ ಸವಾರರು ಕೂಡ ಒಂದೇ ಅಲ್ಕೋಮೀಟರಿನಲ್ಲಿ ಎಲ್ಲರಿಗೂ ಚೆಕ್ ಮಾಡುತ್ತಾರೆ. ಹೀಗಾಗಿ ಬೇರೆ ವಾಹನ ಸವಾರರಿಂದ ನಮಗೂ ವೈರಸ್ ಬರುವ ಭೀತಿ ಇದೆ ಎಂದು ಡಿಡಿ ಚೆಕ್ ಮಾಡಿಸಿಕೊಳ್ಳುವುದಕ್ಕೆ ವಾಹನ ಸವಾರರು ಕೂಡ ಹಿಂದೇಟು ಹಾಕಿದರು. ಪ್ರಮುಖವಾಗಿ ಪೊಲೀಸರು ಮಾಸ್ಕ್ ಇಲ್ಲದೇ ಕೆಲಸ ಮಾಡುವುದಕ್ಕೆ ಬೇಸರ ವ್ಯಕ್ತಪಡಿಸಿ, ಮಾಸ್ಕ್ ಕೊಡಿಸುವಂತೆ ಮೇಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು.

    ಇದನ್ನು ಅರಿತ ಪೊಲೀಸ್ ಇಲಾಖೆಯೇ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಧರಿಸಿ ಡಿಡಿ ಚೆಕ್ ಮಾಡುವಂತೆ ಆದೇಶ ಹೊರಡಿಸಿ ಇಲಾಖೆ ಕಡೆಯಿಂದ ಮಾಸ್ಕ್‍ಗಳನ್ನು ನೀಡಿತ್ತು. ಇಷ್ಟದ್ರು ಕಳೆದ ಒಂದು ವಾರದಿಂದೀಚೆಗೆ ಡಿಡಿ ಕೇಸ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದಿನಕ್ಕೆ 400-500 ಕೇಸ್‍ಗಳು ಬುಕ್ ಆಗುತ್ತಿದ್ದ ಜಾಗದಲ್ಲಿ ದಿನಕ್ಕೆ ಕೇವಲ 30-40 ಕೇಸ್‍ಗಳು ಮಾತ್ರ ಪತ್ತೆಯಾಗುತ್ತಿವೆ. ಕಳೆದ ಶನಿವಾರ 494 ಡ್ರಂಕ್ & ಡ್ರೈವ್ ಕೇಸ್‍ಗಳು ಬುಕ್ ಆಗಿದ್ರೆ, ಈ ವಾರ ಕೇವಲ 28 ಕೇಸ್‍ಗಳು ಮಾತ್ರ ಬುಕ್ ಆಗಿವೆ.

  • ರಾಮನಗರದಲ್ಲಿ ರಾತ್ರಿ ತಂಪೆರೆದ ಮಳೆರಾಯ- ಬಿಸಿಲ ಝಳಕ್ಕೆ ತತ್ತರಿಸಿದ್ದ ಜನರಲ್ಲಿ ಮಂದಹಾಸ

    ರಾಮನಗರದಲ್ಲಿ ರಾತ್ರಿ ತಂಪೆರೆದ ಮಳೆರಾಯ- ಬಿಸಿಲ ಝಳಕ್ಕೆ ತತ್ತರಿಸಿದ್ದ ಜನರಲ್ಲಿ ಮಂದಹಾಸ

    ರಾಮನಗರ: ಬಿಸಿಲ ಝಳದಿಂದ ತತ್ತರಿಸಿದ್ದ ರೇಷ್ಮೆನಗರಿ ರಾಮನಗರದಲ್ಲಿ ರಾತ್ರಿ ಮಳೆರಾಯ ಜಿಲ್ಲೆಯ ಹಲವೆಡೆ ತಂಪೆರೆದಿದ್ದಾನೆ. ರಾಮನಗರದಲ್ಲಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ತುಂತುರು ಮಳೆಯಾಗಿದೆ. ಜಿಲ್ಲೆಯ ಹಲವೆಡೆಯಲ್ಲಿಯೂ ಮಳೆ ಬಿದ್ದು ಭೂಮಿ ತಂಪಾಗುವಂತೆ ಮಾಡಿದೆ.

    ಬೇಸಿಗೆ ಆರಂಭದ ಹೊಸ್ತಿಲಲ್ಲೇ ಬಿಸಿಲ ಬೇಗೆಯಿಂದ ರೇಷ್ಮೆನಗರಿ ರಾಮನಗರದ ಜನರು ಸಾಕಷ್ಟು ಕಂಗಲಾಗಿದ್ದರು. ಬೆಳಗ್ಗೆಯಿಂದ ಸಂಜೆವರೆಗೂ ಸೂರ್ಯನ ಬಿಸಿಲಿನ ಝಳಕ್ಕೆ ನೆರಳು ಹುಡುಕಾಟ, ರಾತ್ರಿಯ ವೇಳೆ ರಾಮನಗರದ ಸುತ್ತಲು ಇರುವ ಏಳು ಬೆಟ್ಟಗಳ ಬಂಡೆಗಳಿಂದ ಹೊರಬೀಳುವ ಬಿಸಿಯ ಕಾವು ಜನರನ್ನು ತತ್ತರಿಸಿತ್ತು. ಬೆಳಗ್ಗಿನ ವೇಳೆ ಜನರು ಸೂರ್ಯನ ಆರ್ಭಟಕ್ಕೆ ಛತ್ರಿಯ ಮೊರೆ ಹೋಗಿದ್ದರು.

    ರಾತ್ರಿ ಸುಮಾರು 10 ಗಂಟೆ ವೇಳೆಗೆ ಕೆಲಕಾಲ ಬಿರುಸಾಗಿಯೇ ಗಾಳಿ ಸಹಿತ ಜೋರಾಗಿ ಮಳೆಯಾಯಿತು. ಬಳಿಕ ಸುಮಾರು 10 ನಿಮಿಷಗಳಿಗೂ ಅಧಿಕ ಕಾಲ ತುಂತುರು ಮಳೆಯಾಗಿದೆ. ಮಳೆಯಿಂದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    ಬೆಟ್ಟಕ್ಕೆ ಬೆಂಕಿ ಬೀಳುವ ಹೊತ್ತಿನಲ್ಲಿ ಮಳೆಯಾಗಿರುವುದು ಪರಿಸರ ಪ್ರಿಯರಲ್ಲೂ ಸಂತೋಷನ್ನುಂಟು ಮಾಡಿದೆ. ಎರಡ್ಮೂರು ದಿನಗಳಲ್ಲಿ ಮತ್ತೊಮ್ಮೆ ಮಳೆಯಾಗುವ ಸಂಭವವಿರುವುದಾಗಿ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡ ಬೆಂಕಿ

    ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡ ಬೆಂಕಿ

    ಮಂಡ್ಯ: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಬೆಂಕಿಯಿಂದ ಹೊತ್ತಿ ಉರಿದಿರುವ ಘಟನೆ ಮಂಡ್ಯ ನಗರದಲ್ಲಿ ಜರುಗಿದೆ.

    ಬೆಂಗಳೂರಿನಿಂದ ಮೈಸೂರು ಕಡೆಗೆ ಚಲಿಸುತ್ತಿದ್ದ ಹುಂಡೈ ಕಂಪನಿಯ ಕಾರಿನ ಡಿಸೇಲ್ ಟ್ಯಾಂಕ್‍ನಿಂದ ಡಿಸೇಲ್ ಸೋರಿಕೆಯಾಗಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ವಾಹನ ಸವಾರರು ಕಾರು ಚಾಲಕನಿಗೆ ತಿಳಿಸಿದ್ದಾರೆ. ನಂತರ ಕಾರಿನಿಂದ ಕೆಳಗೆ ಇಳಿದು ಕಾರು ಚಾಲಕ ನೋಡಿದ್ದಾನೆ.

    ಚಾಲಕ ಇಳಿಯುವಷ್ಟರಲ್ಲಿ ಕಾರು ಹೀಟ್ ಆಗಿದ್ದ ಕಾರಣ ಬೆಂಕಿ ಕಾಣಿಸಿಕೊಂಡಿದೆ. ನಂತರ ಕಾರು ಬೆಂಕಿಯಿಂದ ಹೊತ್ತಿ ಉರಿದಿದೆ. ಬಳಿಕ ಅಲ್ಲಿಯೇ ಇದ್ದ ಟ್ಯಾಂಕರ್ ನಿಂದ ಕಾರಿಗೆ ನೀರು ಹಾರಿಸಿ ಬೆಂಕಿಯನ್ನು ಆರಿಸಲು ಯತ್ನಿಸಿದ್ದಾರೆ. ಆದರೆ ಬೆಂಕಿ ಆರಲಿಲ್ಲ.

    ಬೆಂಕಿ ಆರಿದಿದ್ದಾಗ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರಿನ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿ ಆಗಿದ್ದಾರೆ.

  • ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಂಜು

    ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಂಜು

    ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯಾದ್ಯಂತ ಚಳಿ ಹಾಗೂ ಮುಂಜಾನೆಯ ಮಂಜು ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ದಟ್ಟ ಮಂಜು ಬೆಳಗ್ಗೆ 9 ಗಂಟೆಯಾದರೂ ಕೂಡ ಸೂರ್ಯನ ದರ್ಶನವಾಗದ ಮಟ್ಟಿಗೆ ಬೀಳುತ್ತಿದೆ.

    ಬೆಳಗ್ಗಿನ ಜಾವಕ್ಕೆ ಶುರುವಾದ ಮಂಜು ಬೆಳಗ್ಗೆ 9.30 ಗಂಟೆಯಾದರೂ ಕೂಡ ಬೀಳುತ್ತಲೇ ಇತ್ತು. ಕುಂದಾನಗರಿ ಜನ ಒಂದು ಕ್ಷಣ ಇದು ಮಂಜೋ, ಮಳೆಯೋ ಎಂದು ಆಶ್ಚರ್ಯಗೊಂಡರು. ಕೆಲ ಜನರು ಈ ಮಂಜಿನ ವಾತಾವರಣದ ಖುಷಿಪಟ್ಟರೆ, ವಾಹನ ಸವಾರರು ಮುಂದಿನ ದೃಶ್ಯ ಕಾಣದೇ ಪೇಚಿಗೆ ಸಿಲುಕಿದರು.

    ಶಾಲಾ-ಕಾಲೇಜು, ನೌಕರಿ ಬೇರೆಡೆ ಹೋಗುವ ಜನ ಸ್ವೇಟರ್, ಟೋಪಿ ಧರಿಸಿಕೊಂಡೆ ಮನೆಯಿಂದ ಹೊರ ಬರುತ್ತಿದ್ದರು. ಬೆಳಗಾವಿಯ ನಗರ ಪ್ರದೇಶ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ಪ್ರದೇಶದಲ್ಲೂ ಮಂಜು ಆವರಿಸುತ್ತಿದೆ. ಇದು ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಿದಂತಾಗುತ್ತಿದೆ.

    ನಗರದಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ 8ರವರೆಗೆ ಯಾವುದೇ ದಿಕ್ಕಿಗೂ ಕಣ್ಣು ಹಾಯಿಸಿದರೂ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ವಾಯು ವಿಹಾರಕ್ಕೆ ಹೊರಟ ಜನರಿಗೆ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಜನರು, ಎಲ್ಲವೂ ಅಸ್ಪಷ್ಟವಾಗಿ, ಅಸದೃಶ್ಯವಾಗಿ ಕಾಣುತ್ತಿದ್ದಾರೆ. ಜನರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾರೆ.

  • ಕೊಡಗಿನ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ – ವ್ಯಾಘ್ರನ ಕಂಡು ಆತಂಕಕ್ಕೆ ಒಳಗಾದ ವಾಹನ ಸವಾರರು

    ಕೊಡಗಿನ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ – ವ್ಯಾಘ್ರನ ಕಂಡು ಆತಂಕಕ್ಕೆ ಒಳಗಾದ ವಾಹನ ಸವಾರರು

    ಮಡಿಕೇರಿ: ಅರಣ್ಯ ಪ್ರದೇಶದ ಮಖ್ಯ ರಸ್ತೆಯಲ್ಲಿ ಯಾವುದೇ ಭಯ ಇಲ್ಲದೇ ಜನರ ವಾಹನ ಸವಾರರ ನಡುವೆ ಓಡಾಡಿದ ಹುಲಿಯನ್ನು ಕಂಡು ಸ್ಥಳೀಯರು ಅಂತಕಕ್ಕೆ ಒಳಗಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾರ್ಮಾಡ್ ಬಾಳೆಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಇಂದು ಸಂಜೆ ಗ್ರಾಮದ ರಸ್ತೆಯಲ್ಲಿ ಯಾವುದೇ ಅಂತಕ ಇಲ್ಲದೇ ಹುಲಿರಾಯ ರಸ್ತೆಯಲ್ಲಿ ರಾಜಗಂಭೀರ್ಯದಿಂದ ನಡೆದಾಡಿದ್ದಾನೆ. ಇದನ್ನು ಗಮನಿಸಿದ ವಾಹನ ಚಾಲಕರು ಗ್ರಾಮಸ್ಥರು ತಮ್ಮ ಮೊಬೈಲ್ ನಲ್ಲಿ ಹುಲಿರಾಯ ಓಡಾಡುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ಹುಲಿ ಮಾತ್ರ ವಾಹನವನ್ನು ನೋಡಿದ್ರು ಯಾವುದೇ ಭಯ ಇಲ್ಲದೇ ವಾಹನದ ನಡುವೇ ರಸ್ತೆಯನ್ನು ದಾಟಿದೆ.

    ಆದರೆ ಹುಲಿಯನ್ನು ಕಂಡ ವಾಹನ ಸವಾರರು ಮಾತ್ರ ಅಂತಕಕ್ಕೆ ಒಳಗಾಗಿದ್ದಾರೆ. ಸದ್ಯ ಈಗ ಬಾಳೆಲೆ ಕಾರ್ಮಾಡ್ ಗ್ರಾಮೀಣ ರಸ್ತೆಯಿಂದ ಹುಲಿ ದಾಟಿ ಹೋಗಿದ್ದು, ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಹುಲಿ ಪ್ರತ್ಯಕ್ಷವಾಗಿದ್ದು, ನಾಗರಹೊಳೆ ಅಕ್ಕ ಪಕ್ಕದ ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ.

  • ತುಮಕೂರಲ್ಲಿ ಬೆಳ್ಳಂಬೆಳಗ್ಗೆ ದಟ್ಟ ಮಂಜು- ಪರದಾಡಿದ ವಾಹನ ಸವಾರರು

    ತುಮಕೂರಲ್ಲಿ ಬೆಳ್ಳಂಬೆಳಗ್ಗೆ ದಟ್ಟ ಮಂಜು- ಪರದಾಡಿದ ವಾಹನ ಸವಾರರು

    ತುಮಕೂರು: ಜಿಲ್ಲೆಗೆ ಇಂದು ಭಾಗಶಃ ಮಂಜಿನ ಮುಸುಕು ಧರಿಸಿತ್ತು. ಬೆಳಗ್ಗಿನ ಜಾವ ಆವರಿಸಿದ ಮಂಜು ತಣ್ಣನೆಯ ಅನುಭವದೊಂದಿಗೆ ಒಂದಿಷ್ಟು ಕಿರಿಕಿರಿಯನ್ನೂ ನೀಡಿತ್ತು. ತುಮಕೂರು ನಗರ, ನಾಮದ ಚಿಲುಮೆ, ಗುಬ್ಬಿಯ ದೊಡ್ಡಗುಣಿ, ಕುಣಿಗಲ್ ತಾಲೂಕಿನಾದ್ಯಂತ ಬೆಳಗ್ಗೆ 8-30ರ ವರೆಗೆ ಸೂರ್ಯನ ದರ್ಶನವಾಗಿಲ್ಲ. ಅಷ್ಟರ ಮಟ್ಟಿಗೆ ದಟ್ಟವಾದ ಮಂಜು ಮುಸುಕಿತ್ತು.

    ವಾತಾವರಣದಲ್ಲಿ ಮಂಜು ಮುಸುಕಿರೋದರ ಆಹ್ಲಾದ, ತಣ್ಣನೆಯ ಅನುಭವವನ್ನು ಪಡೆದ ಜನರು, ಕೆಲ ಹೊತ್ತು ಖುಷಿಯಿಂದ ಕಾಲ ಕಳೆದರು. ಜಾಗಿಂಗ್ ಹೋಗಿದ್ದೋರು ಚುಮುಚುಮು ಚಳಿ, ಮಂಜಿನ ಮಬ್ಬಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಕಾಡಂಚಿನ ಪ್ರದೇಶಗಳು, ಬೆಟ್ಟ-ಗುಡ್ಡಗಳು ಶುಭ್ರವಾದ ಶ್ವೇತವರ್ಣದ ಚಾದರ ಹೊದ್ದಂತೆ ಕಂಗೊಳಿಸುತ್ತಿತ್ತು. ಬೆಳ್ಳಂಬೆಳಗ್ಗೆ ಚಿಲಿಪಿಲಿಯಾಡಬೇಕಿದ್ದ ಪಕ್ಷಿಗಳು ಶೀತದ ಪರಿಣಾಮ ಕೊಂಚ ತಡವಾಗಿ ಸದ್ದು ಮಾಡಿದವು.

    ಮಂಜು ಮುಸುಕಿದ್ದರ ಪರಿಣಾಮ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು. ವಾಹನ ಹೋಗಲು ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲವಾದ್ದರಿಂದ ವೇಗವಾಗಿ ವಾಹನ ಚಲಿಸಲು ಆಗಿಲ್ಲ. ಬೆಳಗ್ಗೆ 9 ಗಂಟೆ ನಂತರ ನಿಧಾನವಾಗಿ ಸೂರ್ಯನ ದರ್ಶನವಾಯಿತು. ಆ ನಂತರ ವಾತಾವರಣ ಸಹಜ ಸ್ಥಿತಿಗೆ ಬಂದಿದೆ.

  • ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಐದು ದಿನ ಬಾಕಿ

    ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಐದು ದಿನ ಬಾಕಿ

    ಬೆಂಗಳೂರು: ಫಾಸ್ಟ್ ಟ್ಯಾಗ್ ಅಳವಡಿಸಲು ಕೇವಲ ಐದೇ ದಿನ ಬಾಕಿಯಿದೆ.

    ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ಶೇ. 60ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದ್ದು, ಅಂತಿಮ ಗಡುವಿಗೆ  ಬಾಕಿ ಉಳಿದ ಐದು ದಿನಗಳಲ್ಲಿ ಶೇ.25ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳುವುದು ಬಾಕಿಯಿದೆ.

    ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅಳವಡಿಕೆ ನೀಡಿದ್ದ ಗಡುವು ವಿಸ್ತರಣೆ ಐದು ದಿನಗಳಲ್ಲಿ (ಜ.15) ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದಿದ್ದರೆ ಕ್ಯಾಶ್ ಲೈನ್ ನಲ್ಲಿ ಮಾತ್ರ ಸಂಚರಿಸಬೇಕು.

    ರಾಜ್ಯದಲ್ಲಿ ಫಾಸ್ಟ್ ಟ್ಯಾಗ್‍ಗೆ ಬೇಡಿಕೆ ಕಡಿಮೆಯಾಗಿದೆ. ಟೋಲ್ ಪ್ಲಾಜಾಗಳಲ್ಲಿ ತೆರೆದಿರುವ ಫಾಸ್ಟ್ ಟ್ಯಾಗ್ ಸೆಂಟರ್ ಗಳು, ಬ್ಯಾಂಕ್‍ಗಳು, ಆನ್‍ಲೈನ್ ಮಾರ್ಕೆಟ್‍ನಲ್ಲಿ ಫಾಸ್ಟ್ ಟ್ಯಾಗ್ ಗೆ ಬೇಡಿಕೆ ಇಳಿಮುಖವಾಗಿದೆ. ಡಿಸೆಂಬರ್ 15ರ ವೇಳೆಗೆ ರಾಜ್ಯದಲ್ಲಿ ಶೇ.40ರಷ್ಟಿದ್ದ ಫಾಸ್ಟ್ ಟ್ಯಾಗ್ ಅಳವಡಿಕೆ ಪ್ರಮಾಣ ಕಳೆದ 25 ದಿನಗಳಲ್ಲಿ ಶೇ. 20ರಷ್ಟು ಹೆಚ್ಚಾಗಿದೆ. ಅಂದರೆ ಇವರೆಗೆ ರಾಜ್ಯದಲ್ಲಿ ಒಟ್ಟು ಶೇ.60ರಷ್ಟು ಫಾಸ್ಟ್ ಟ್ಯಾಗ್ ಅಳವಡಿಕೆಯಾಗಿದೆ.

    ವಾಹನಗಳಿಗೆ ಫಾಸ್ಟ್ ಟ್ಯಾಗ್ ಸ್ಟಿಕರ್ ಅಳವಡಿಕೆ ನಿರೀಕ್ಷಿತ ಮಟ್ಟಕ್ಕೆ ಮುಟ್ಟಿಲ್ಲ. ಆದರೂ ಇನ್ನೈದು ದಿನಗಳಲ್ಲಿ ಫಾಸ್ಟ್ ಟ್ಯಾಗ್ ವಾಹನಗಳ ಸಂಖ್ಯೆ ಶೇ.80ಕ್ಕೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ಸಂಚಾರಕ್ಕೆ ಟೋಲ್ ಪ್ಲಾಜಾಗಳಲ್ಲಿ ಒಂದು ಪಥ ಮೀಸಲಿಡಲು ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.

  • ವಾಹನ ಸವಾರರನ್ನು ಬಲಿ ಪಡೆದ ಅಂಬುಲೆನ್ಸ್

    ವಾಹನ ಸವಾರರನ್ನು ಬಲಿ ಪಡೆದ ಅಂಬುಲೆನ್ಸ್

    ಬೆಂಗಳೂರು: ಜೀವ ರಕ್ಷಕ ಅಂಬುಲೆನ್ಸ್ ಇಬ್ಬರು ವಾಹನ ಸವಾರರನ್ನು ಬಲಿ ಪಡೆದಿರುವ ಘಟನೆ ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್‌ ರಸ್ತೆಯ ಜಂಕ್ಷನ್ ನಲ್ಲಿ ನಡೆದಿದೆ.

    ಇಬ್ರಾಹಿಂ ಖಲೀಲ್ (30) ಹಾಗೂ ಮನ್ಸೂರ್ (28) ಅಂಬುಲೆನ್ಸ್ ಗೆ ಬಲಿಯಾದ ಯುವಕರು. ಖಲೀಲ್ ಹಾಗೂ ಮನ್ಸೂರ್ ಓಲ್ಡ್ ಏರ್‌ಪೋರ್ಟ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ಇಬ್ಬರು ನಾಗರವಾರದ ಕಡೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

    ಯಮಸ್ವರೂಪಿ ಒನ್ ವೇನಲ್ಲಿ ಅತಿವೇಗವಾಗಿ ಬಂದ ಅಂಬುಲೆನ್ಸ್ ಡಿಯೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಯೋದಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತು. ಮಂಗಳವಾರ ರಾತ್ರಿ ಸುಮಾರು 9.00 ಗಂಟೆಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು.

    ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಇಂದು ಮಧ್ಯಾಹ್ನ 12.00 ಗಂಟೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಅಶೋಕ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಂಬುಲೆನ್ಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

  • ಮರೆಯಾಗುತ್ತಿದೆ ಕಣದ ಒಕ್ಕಣೆ – ಡಾಂಬಾರು ರಸ್ತೆಯ ಒಕ್ಕಣೆಯಿಂದ ವಾಹನ ಸವಾರರಿಗೆ ಕಿರಿಕಿರಿ

    ಮರೆಯಾಗುತ್ತಿದೆ ಕಣದ ಒಕ್ಕಣೆ – ಡಾಂಬಾರು ರಸ್ತೆಯ ಒಕ್ಕಣೆಯಿಂದ ವಾಹನ ಸವಾರರಿಗೆ ಕಿರಿಕಿರಿ

    ಮಂಡ್ಯ: ಸುಗ್ಗಿ ಕಾಲ ಬಂತು ಎಂದರೆ ಕಟಾವಿಗೆ ಬಂದ ಬೆಳೆಯನ್ನು ಕಟಾವು ಮಾಡಿ ಕಣದಲ್ಲಿ ಒಕ್ಕಣೆ ಮಾಡಿ ಫಸಲಿಗೆ ಪೂಜೆ ಮಾಡಿ ಮನೆಗೆ ತರುವ ಸಂಪ್ರದಾಯ ಕರ್ನಾಟದಲ್ಲಿ ಇತ್ತು. ಆದರೆ ಇದೀಗ ಕಣದಲ್ಲಿ ಒಕ್ಕಣೆ ಮಾಡುವ ಪದ್ದತಿ ಮರೆಯಾಗುತ್ತಿದ್ದು, ಬಹುಪಾಲು ರೈತರು ಡಾಂಬಾರು ರಸ್ತೆಯಲ್ಲಿ ಒಕ್ಕಣೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಕಣದಲ್ಲಿ ಒಕ್ಕಣೆ ಮಾಡುವ ಸಂಪ್ರದಾಯ ಮರೆಯಾಗುವುದರ ಜೊತೆಗೆ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೂ ಕಿರಿಕಿರಿ ಉಂಟಾಗುತ್ತಿದೆ.

    ಹೌದು ಮಂಡ್ಯ ಜಿಲ್ಲೆ ಅಕ್ಷರಶಃ ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ರಾಗಿ, ಭತ್ತ, ಹುರುಳಿ ಸೇರಿದಂತೆ ಇತರ ಧಾನ್ಯ ಬೆಳೆಗಳನ್ನು ಬೆಳೆಯುತ್ತಾರೆ. ಸದ್ಯ ಈ ಎಲ್ಲಾ ಬೆಳೆಗಳನ್ನು ಒಕ್ಕಣೆ ಮಾಡುವ ಸುಗ್ಗಿ ಕಾಲ ಇದು. ಮೊದಲೆಲ್ಲಾ ಭತ್ತ, ರಾಗಿ, ಹುರುಳಿ ಸೇರಿದಂತೆ ಇತರೆ ಬೆಳೆಗಳನ್ನು ಕಣವನ್ನು ಸಿದ್ಧಪಡಿಸಿ ಅಲ್ಲಿ ಒಕ್ಕಣೆ ಮಾಡಿ, ಬಂದ ಫಸಲಿಗೆ ಪೂಜೆ ಮಾಡಿ ಮನೆಗೆ ಹಾಕಿಕೊಳ್ಳಲಾಗುತಿತ್ತು. ಆದರೆ ಇದೀಗ ಕಣದಲ್ಲಿ ಒಕ್ಕಣೆ ಮಾಡುವ ಪದ್ಧತಿ ಮಂಡ್ಯ ಜಿಲ್ಲೆಯಲ್ಲಿ ಕಾಲಕ್ರಮೇಣ ಮರೆಯಾಗುತ್ತಿದೆ.

    ಕೆಲ ರೈತರು ಸದ್ಯ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಗದ್ದೆಯಲ್ಲೇ ಯಂತ್ರಗಳಿಂದ ಬೆಳೆಯನ್ನು ಕಟಾವುಗೊಳಿಸಿ ಅಲ್ಲೆ ಒಕ್ಕಣೆ ಮಾಡಿಸುತ್ತಿದ್ದಾರೆ. ಇದರಿಂದ ಸಮಯ ವ್ಯರ್ಥವಾಗುವುದಿಲ್ಲ ಮತ್ತು ಮ್ಯಾನ್ ಪವರ್ ಕೂಡ ಬೇಕಾಗುವುದಿಲ್ಲ. ಹೀಗಾಗಿ ಕೆಲ ರೈತರು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

    ಇನ್ನೂ ಕೆಲ ರೈತರು ಆಧುನಿಕ ತಂತ್ರಜ್ಞಾನವನ್ನು ನಿರಾಕರಣೆ ಮಾಡಿ ತಾವೇ ಸ್ವತಃ ಕಟಾವು ಮಾಡಿ ಒಕ್ಕಣೆ ಮಾಡುತ್ತಾರೆ. ಹಿಂದೆ ಎಲ್ಲಾ ರೈತರು ತಮ್ಮ ಜಮೀನುಗಳಲ್ಲಿ ಭತ್ತ, ರಾಗಿ, ಹುರುಳಿ ಇತರೆ ಬೆಳೆಗಳನ್ನು ದನಗಳ ಸಹಾಯದಿಂದ ಹಾಗೂ ಕಲ್ಲಿನ ಸಹಾಯದಿಂದ ಒಕ್ಕಣೆ ಮಾಡುತ್ತಿದ್ದರು. ಆದರೆ ಇದೀಗ ಮಂಡ್ಯ ಭಾಗದಲ್ಲಿ ಕೆಲ ರೈತರು ಡಾಂಬಾರು ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ಅಪಾರ ಪ್ರಮಾಣದಲ್ಲಿ ಫಸಲು ಹಾಗೂ ಹುಲ್ಲು ರಸ್ತೆ ಪಾಲಾಗುತ್ತಿದೆ.

    ಡಾಂಬಾರು ರಸ್ತೆಯಲ್ಲಿ ರೈತರು ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೆಲ ದ್ವಿಚಕ್ರ ವಾಹನ ಸವಾರರು ಒಕ್ಕಣೆ ಮೇಲೆ ಹೋಗಿ ಬಿದ್ದು ಗಾಯಾಳುಗಳಾಗಿದ್ದಾರೆ. ಇನ್ನೂ ಕೆಲವರಿಗೆ ಒಕ್ಕಣೆಯ ಧೂಳು ಕಣ್ಣಿಗೆ ಬಿದ್ದು ಅಪಘಾತಗಳನ್ನು ಮಾಡಿಕೊಂಡಿದ್ದಾರೆ. ಕಾರುಗಳು ಒಕ್ಕಣೆಯ ಮೇಲೆ ಹೋದ ಸಂದರ್ಭದಲ್ಲಿ ಹುಲ್ಲು ಕಾರಿನ ಕೆಳ ಭಾಗದಲ್ಲಿ ಸೇರಿಕೊಳ್ಳುತ್ತದೆ. ಕಾರಿನ ಇಂಜಿನ್ ಬಿಸಿ ಆದ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಹಲವಾರು ಉದಾಹರಣೆಗಳು ಸಹ ಇವೆ.

    ಈಗಲಾದರು ರೈತರು ಡಾಂಬಾರು ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ನಿಲ್ಲಿಸಿ ಕಣದಲ್ಲಿ ಒಕ್ಕಣೆ ಮಾಡಬೇಕಿದೆ. ಈ ಮೂಲಕ ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವುದರ ಜೊತೆಗೆ ತಾವು ಬೆಳೆದ ಬೆಳೆಯನ್ನು ಸಹ ರಕ್ಷಣೆ ಮಾಡಿಕೊಳ್ಳಬಹುದು.