Tag: ವಾಹನ ಸವಾರರು

  • Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್‌ ಜಾಮ್!

    Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್‌ ಜಾಮ್!

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ (Deepavali festival) ಸಾಲು ಸಾಲು ರಜೆ ಹಿನ್ನೆಲೆ ತಮ್ಮ ಊರುಗಳಿಗೆ ತೆರಳಿದ್ದ ಜನ, ರಜೆ ಮುಗಿಸಿ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಾರೆ. ಈ ಹಿನ್ನೆಲೆ ನಗರದ ವಿವಿಧೆಡೆ ಟ್ರಾಫಿಕ್‌ ಜಾಮ್‌ (Traffic Jam) ಸಮಸ್ಯೆ ಉಂಟಾಗಿದೆ.

    ಬೆಂಗಳೂರು-ತುಮಕೂರು ರಸ್ತೆ (Bengaluru Tumkur Road), ಕೆ.ಆರ್ ಪುರಂ ಮುಖ್ಯರಸ್ತೆ ಹಾಗೂ ಗೊರಗುಂಟೆಪಾಳ್ಯದಿಂದ ಗೋವರ್ಧನ್‌ ವೃತ್ತದ ವರೆಗೂ ಫುಲ್‌ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಭಾನುವಾರ ತಡರಾತ್ರಿಯಿಂದಲೇ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿದ್ದು, ಇದರಿಂದ ಅನ್ಯಜಿಲ್ಲೆಯ ಉದ್ಯೋಗಿಗಳು ಪರದಾಡುವಂತಾಗಿದೆ. ಇದನ್ನೂ ಓದಿ: Canada | ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಖಲಿಸ್ತಾನಿ ಗುಂಪು ಅಟ್ಯಾಕ್‌ – ಜಸ್ಟಿನ್‌ ಟ್ರುಡೋ ಖಂಡನೆ

    ಮೆಟ್ರೋದತ್ತ ಮುಖ ಮಾಡಿದ ಜನ:
    ದೀಪಾವಳಿ ರಜೆ ಮುಗಿಸಿ ಬೆಂಗಳೂರಿನತ್ತ ಜನ ದಾಂಗುಡಿ ಇಡುತ್ತಿದ್ದಾರೆ. ಹೀಗಾಗಿ ತುಮಕೂರು ರಸ್ತೆಯಲ್ಲಿ ಜನರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಟ್ರಾಫಿಕ್‌ಗೆ ಬೇಸತ್ತು ನಾಗಸಂಧ್ರ ಮೆಟ್ರೋ ನಿಲ್ದಾಣದ ಬಳಿ ಇಳಿದು ಜನ ಮೆಟ್ರೋ ಸಂಚಾರದ ಮೊರೆ ಹೋಗುತ್ತಿದ್ದಾರೆ. ಈ ಹಿನ್ನಲೆ ನಾಗಸಂಧ್ರ ಮೆಟ್ರೋ ನಿಲ್ದಾಣ ಫುಲ್ ರಶ್ ಆಗಿದೆ.

    ನಗರದ ಗೊರಗುಂಟೆಪಾಳ್ಯದ ಬಳಿಯೂ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಗೊರಗುಂಟೆಪಾಳ್ಯದಿಂದ ಗೋವರ್ಧನ್‌ ವೃತ್ತದ ವರೆಗೆ ಫುಲ್‌ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಇದರಿಂದ ಬೆಂಗಳೂರು ನಗರ ಪ್ರವೇಶಿಸುವಷ್ಟರಲ್ಲಿ ಜನ ಹೈರಾಣಾಗುತ್ತಿದ್ದಾರೆ. ಇದನ್ನೂ ಓದಿ: ಗುರು ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢ – ಮೊಬೈಲ್‌, ಟ್ಯಾಬ್‌ FSLಗೆ ಕಳಿಸಲು ತಯಾರಿ

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ವಾಲಿದ ವಿದ್ಯುತ್ ಕಂಬ – ಆತಂಕದಲ್ಲಿ ಸವಾರರು

    ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ವಾಲಿದ ವಿದ್ಯುತ್ ಕಂಬ – ಆತಂಕದಲ್ಲಿ ಸವಾರರು

    ನೆಲಮಂಗಲ: ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48 ರ ದಾಸನಪುರದ ಹೆದ್ದಾರಿಯಲ್ಲಿ ವಿದ್ಯುತ್ ಕಂಬವೊಂದು ಅಪಘಾತದಿಂದ ವಾಲಿದ್ದು, ಸವಾರರು ಸಾರ್ವಜನಿಕರು ಭಯದಲ್ಲಿ ಚಲಿಸುವಂತಾಗಿದೆ.

    ರಾಷ್ಟ್ರೀಯ ಹೆದ್ದಾರಿಗೆ ಬೆಳಕು ನೀಡುವ ಸಲುವಾಗಿ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಕಂಪನಿ ವಿದ್ಯುತ್ ಕಂಬವನ್ನು ನೆಟ್ಟಿತ್ತು. ಅಪಘಾತವಾದ ಸಮಯದಲ್ಲಿ ಕಂಬವು ಸರ್ವೀಸ್ ರಸ್ತೆಯ ಭಾಗಕ್ಕೆ ವಾಲಿ ನಿಂತಿದ್ದು, ಮತ್ತೊಂದು ಅಪಘಾತಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ:  ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ

    ಬೆಂಗಳೂರು ಮಾರ್ಗವಾಗಿ ಚಲಿಸುವ ವಾಹನ ಸವಾರರ ತಲೆಯ ಮೇಲೆಯೇ ವಾಲಿರುವುದರಿಂದ ಕಂಬ ಮೇಲೆ ಬೀಳುವ ಆತಂಕದಲ್ಲಿ ಸವಾರರು ವಾಹನವನ್ನು ಚಲಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

    ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಕಂಪನಿ ಕೂಡಲೇ ಎಚ್ಚೆತ್ತುಕೊಳ್ಳಬೇಕು. ವಾಲಿರುವ ವಿದ್ಯುತ್ ಕಂಬವನ್ನು ಸರಿಪಡಿಸಿ ಸಾರ್ವಜನಿಕರ ಆತಂಕ ದೂರಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!

  • ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ವಾಹನ ಸವಾರರ ಮಿಶ್ರ ಪ್ರತಿಕ್ರಿಯೆ

    ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ವಾಹನ ಸವಾರರ ಮಿಶ್ರ ಪ್ರತಿಕ್ರಿಯೆ

    ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿದೆ. ಈ ಕುರಿತು ವಾಹನ ಸವಾರರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇತ್ತೀಚೆಗೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ಲೀಟರ್ ಗೆ 112.64 ರೂ. ತಲುಪಿತ್ತು. ಡೀಸೆಲ್ ಬೆಲೆ ಕೂಡ ಶತಕ ಬಾರಿಸಿ ಮುನ್ನುಗ್ಗುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಡೀಸೆಲ್ ಬೆಲೆ ಮೇಲೆ 10 ರೂ. ಮತ್ತು ಪೆಟ್ರೋಲ್ ಮೇಲೆ 5 ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಈ ನೂತನ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ

    ಈ ಹಿನ್ನೆಲೆ ವಾಹನ ಸವಾರರು ಕೊಂಚ ನಿರಾಳವಾಗಿದ್ದಾರೆ. ಪೆಟ್ರೋಲ್ ಬೆಲೆ ಕಡಿಮೆ ಮಾಡಿರೋದನ್ನ ಸ್ವಾಗತ ಮಾಡ್ತಿರೋ ವಾಹನ ಸವಾರರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಕಡಿಮೆ ಆದ್ರೆ ಸರಿ, ಮತ್ತೆ ಜಾಸ್ತಿ ಮಾಡಿದರೆ ಏನು ಮಾಡೋದು ಎನ್ನುವ ಆತಂಕವನ್ನು ಸಹ ಹೊರ ಹಾಕುತ್ತಿದ್ದಾರೆ.

    ರಾಜ್ಯ ಸರ್ಕಾರ ಕೂಡಾ ತನ್ನ ವ್ಯಾಟ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 7 ರೂ. ಕಡಿಮೆ ಮಾಡಿದ್ದು, ಇಂದು ಸಂಜೆ ಬಳಿಕ ಕಡಿಮೆಯಾಗಿರೋ ದರ ಜಾರಿಗೆ ಬರಲಿದೆ. ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ 107.64 ಇದ್ರೆ, ಡೀಸೆಲ್ ಬೆಲೆ 92.03 ಆಗಿದೆ. ಸಂಜೆ ವೇಳೆಗೆ ರಾಜ್ಯ ಸರ್ಕಾರದ ವಿನಾಯತಿ ನೀಡಿರೋ ದರ ಜಾರಿಗೆ ಬಂದ್ರೇ ಪೆಟ್ರೋಲ್ ಬೆಲೆ 100 ರೂ. ಡೀಸೆಲ್ 85 ರೂ.ಗೆ ಬರಲಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ 7 ರೂ. ಗಳಷ್ಟು ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ- ನಾಳೆ ಸಂಜೆಯಿಂದ ಜಾರಿಗೆ

  • ಗುಂಡಿ ಬಿದ್ದಿರುವ ಗ್ರಾಮೀಣ ಭಾಗದ ರಸ್ತೆಗಳು- ಪ್ರಯಾಣಿಕರು ಹೈರಾಣು

    ಗುಂಡಿ ಬಿದ್ದಿರುವ ಗ್ರಾಮೀಣ ಭಾಗದ ರಸ್ತೆಗಳು- ಪ್ರಯಾಣಿಕರು ಹೈರಾಣು

    ಹಾವೇರಿ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ, ನೆರೆಯಿಂದಾಗಿ 1,292 ಕಿ.ಮೀ.ಯಷ್ಟು ರಸ್ತೆ ಹಾಳಾಗಿ, 197 ಕೋಟಿ ರೂ. ನಷ್ಟ ಉಂಟಾಗಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಜನ ಸಂಚಾರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಅತಿವೃಷ್ಟಿ ಹಾಗೂ ನೆರೆ ಹಾವಳಿಗೆ ಲೋಕೋಪಯೋಗಿ ಇಲಾಖೆಯ 246 ಕಿ.ಮೀ. ರಸ್ತೆ ಹಾನಿಯಾಗಿದ್ದು, ಇದರಲ್ಲಿ 63.82ಕಿ.ಮೀ. ರಾಜ್ಯ ಹೆದ್ದಾರಿ, 182.22ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಹಾಳಾಗಿದೆ. ಇದರ ಹಾನಿಯ ಅಂದಾಜು ಮೌಲ್ಯ 183.55 ಕೋಟಿ ರೂ.ಗಳಷ್ಟಾಗಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ 1046.8ಕಿಮೀ ಗ್ರಾಮೀಣ ರಸ್ತೆ ಹಾಳಾಗಿದ್ದು, ಹಾನಿಯ ಅಂದಾಜು ಮೌಲ್ಯ 13.84ಕೋಟಿ ರೂ. ಆಗಿದೆ. ಇದನ್ನೂ ಓದಿ: ನಾಳೆ ಗಡಿ ಭಾಗದ 8 ಜಿಲ್ಲೆಗಳಿಗೆ ಸಿಗುತ್ತಾ ರಿಲೀಫ್?-ಗಣೇಶೋತ್ಸವ ಮಾರ್ಗಸೂಚಿ ಸಡಿಲಕ್ಕೆ ಸರ್ಕಾರ ಪ್ಲಾನ್

    ಕಳೆದ ತಿಂಗಳು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜನಜೀವನವೇ ತತ್ತರಗೊಂಡಿತ್ತು. ಅನೇಕ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿತ್ತು, ರಸ್ತೆಗಳೆಲ್ಲ ಕೊಚ್ಚಿ ಹಳ್ಳಗಳಾಗಿದ್ದವು. ನದಿ ತೀರದ ಪ್ರದೇಶಗಳ ರಸ್ತೆ ಮುಳುಗಿದ್ದವು. ಪ್ರವಾಹದಿಂದ ಆಗಿರುವ ರಸ್ತೆ ಹಾನಿಯಿಂದ ಗ್ರಾಮೀಣ ಭಾಗದಲ್ಲಿ ಸಂಚಾರವೇ ದುಸ್ತರವಾಗಿದೆ. ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ವಾಹನ ಓಡಿಸುವುದೆಂದರೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

    ಗ್ರಾಮೀಣ ಭಾಗದ ಜನರು ಜಿಲ್ಲಾಡಳಿತಕ್ಕೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸದ್ಯ ನಮ್ಮ ಜಿಲ್ಲೆಯ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಹೆಚ್ಚು ಅನುದಾನ ನೀಡಿ ರಸ್ತೆಗಳ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • ಕಲಬುರಗಿಯಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಬಸ್ಕಿ ಹೊಡೆಯುವ ಶಿಕ್ಷೆ

    ಕಲಬುರಗಿಯಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಬಸ್ಕಿ ಹೊಡೆಯುವ ಶಿಕ್ಷೆ

    ಕಲಬುರಗಿ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಲಾಕ್‍ಡೌನ್ ಜಾರಿ ಮಾಡಲಾಗಿದ್ದು, ಸಂಪೂರ್ಣ ಕಟ್ಟೆಚ್ಚರ ವಹಿಸಲಾಗಿದೆ. ಅನಗತ್ಯವಾಗಿ ಸಂಚರಿಸುವವರಿಗೆ ದಂಡ, ವಾಹನ ಸೀಜ್ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಬಿಸಿ ಮುಟ್ಟಿಸಲಾಗುತ್ತಿದ್ದು, ಇದೀಗ ನಗರದಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ಬಸ್ಕಿ ಹೊಡೆಲಾಗುತ್ತಿದೆ.

    ನಗರದಲ್ಲಿ ಲಾಕ್‍ಡೌನ್‍ಗೆ ಸಾರ್ವಜನಿಕರು ಡೋಂಟ್‍ಕೇರ್ ಎಂದು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ನಗರದ ಜಗತ್ ವೃತ್ತದಲ್ಲಿ ರೌಡಿನಿಗ್ರಹ ದಳ ಪಿಎಸ್‍ಐ ವಾಹೀದ್ ಕೊತ್ವಾಲ್‍ರಿಂದ ಸಖತ್ ಟ್ರೀಟ್‍ಮೆಂಟ್ ಶುರುವಾಗಿದ್ದು, ಸುಖಾಸುಮ್ಮನೆ ಒಡಾಡುತ್ತಿದ್ದ ಬೈಕ್ ಸವಾರರಿಗೆ ಬಸ್ಕಿ ಹೊಡೆಸಲಾಗಿದೆ. ಅಲ್ಲದೆ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಸಂಚರಿಸಿದರೆ ಪೊಲೀಸರು ಎಚ್ಚರಿಸಿದ್ದಾರೆ.

    ರಾಜ್ಯದಲ್ಲಿ ದಿನದ ಸೋಂಕಿತರ ಸಂಖ್ಯೆ 40 ಸಾವಿರದ ಗಡಿಯತ್ತ ಸಾಗಿದ್ದು, ಕಲಬುರಗಿಯಲ್ಲಿ ಸಹ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದ ಹಲವೆಡೆ ಆಕ್ಸಿಜನ್ ಕೊರತೆಯಿಂದ ಜನ ನರಳುತ್ತಿದ್ದಾರೆ. ಇಷ್ಟಾದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ. ಬೇಕಾಬಿಟ್ಟಿಯಾಗಿ ಸಂಚರಿಸುವ ಮೂಲಕ ನಿಯಮ ಉಲ್ಲಂಘಿಸುತ್ತಿದ್ದಾರೆ.

  • ಎರಡು ಗಂಟೆಗಳಲ್ಲಿ 26.26 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

    ಎರಡು ಗಂಟೆಗಳಲ್ಲಿ 26.26 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

    ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಎರಡು ಗಂಟೆಯಲ್ಲಿ ಬರೋಬ್ಬರಿ 26.26 ಲಕ್ಷ ರೂ. ದಂಡವನ್ನು ಸಂಗ್ರಹಿಸಿದ್ದಾರೆ.

    ಕೇವಲ ಎರಡು ಗಂಟೆಯಲ್ಲಿ ಬರೋಬ್ಬರಿ 5,672 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಎರಡು ಗಂಟೆ ಅವಧಿಯಲ್ಲಿ 26,26,800 ರೂಪಾಯಿ ದಂಡ ಸಂಗ್ರಹಿಸಿದ್ದಾರೆ. ನಗರದ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ 5,672 ಪ್ರಕರಣ ದಾಖಲಾಗಿವೆ. ನಿತ್ಯ ಇರುವ ಸ್ಥಳಗಳನ್ನು ಬಿಟ್ಟು ಬೇರೆ ಸ್ಥಳಗಳಲ್ಲಿ ನಿಂತು. ವಾಹನ ಸವಾರರಿಗೆ ಬಲೆ ಬೀಸಿದ್ದಾರೆ.

    ಈ ಸ್ಥಳಗಳಲ್ಲಿ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕಾರ್ಯಚಾರಣೆ ನಡೆಸಿದ್ದಾರೆ. ಈ ರಸ್ತೆಗಳಲ್ಲಿ ಪೊಲೀಸರು ಇರುವುದಿಲ್ಲ ಎಂದು ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುತ್ತಾರೆ ಎಂದು ಸಾರ್ವಜನಿಕರಿಂದ ದೂರಿದ್ದರು. ಈ ಹಿನ್ನಲೆ ಇಂದು ಪೀಕ್ ಹವರ್ಸ್ ಅಲ್ಲದೆ ಸಮಯದಲ್ಲಿ ಕಾರ್ಯಚಾರಣೆ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ. ಈ ಕುರಿತು ಸಂಚಾರ ವಿಭಾಗದ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

  • ಕೊಡಗಿನಲ್ಲಿ ಮತ್ತೆ ವರುಣನ ಅಬ್ಬರ- ಜನರಲ್ಲಿ ಹೆಚ್ಚಿದ ಆತಂಕ

    ಕೊಡಗಿನಲ್ಲಿ ಮತ್ತೆ ವರುಣನ ಅಬ್ಬರ- ಜನರಲ್ಲಿ ಹೆಚ್ಚಿದ ಆತಂಕ

    ಮಡಿಕೇರಿ: ಭಾರೀ ಮಳೆಯಿಂದಾಗಿ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಅರ್ಚಕರ ಕುಟುಂಬ ಮಣ್ಣಲ್ಲಿ ಸಿಲುಕಿದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರಿದಿದೆ. ಇದರಿಂದಾಗಿ ಜನ ತೀವ್ರ ಆತಂಕಗೊಂಡಿದ್ದಾರೆ.

    ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇತ್ತೀಚೆಗೆ ಮಳೆ ಕಡಿಮೆ ಆಯಿತೆಂದು ನಿಟ್ಟುಸಿರು ಬಿಟ್ಟ ಜನತೆಗೆ ಇದೀಗ ಮತ್ತೆ ಆರಂಭವಾಗಿರುವುದು ನಡುಕ ಹುಟ್ಟಿಸಿದೆ.

    ಅಕ್ಟೋಬರ್ 14ರ ವರಗೆ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯ ಜನರಲ್ಲಿ ಅತಂಕ ಹೆಚ್ಚಾಗಿದೆ. ಅಲ್ಲದೆ ಮತ್ತೆ ಮಳೆ ಮುಂದುವರಿದಿದ್ದರಿಂದ ಗುಡ್ಡಗಾಡು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದರೆ ಏನು ಗತಿ ಎಂಬ ಭಯದಲ್ಲೇ ಜನ ಜೀವನ ನಡೆಸುವಂತಾಗಿದೆ. ಮಳೆಯಿಂದಾಗಿ ಕೊಡಗು ಜನ ನಿದ್ದೆಗೆಡುವಂತಾಗಿದೆ.

    ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕುಗೊಂಡಿದ್ದು, ಧಾರಾಕಾರವಾಗಿ ಸುರಿಯುತ್ತಿದೆ. ತೀವ್ರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಪರದಾಡುವಂತಾಗಿದೆ. ಕೆಲ ದಿನಗಳಿಂದ ಬೀಡುವು ನೀಡಿದ್ದ ಮಳೆ ಇದೀಗ ಮತ್ತೆ ಅಬ್ಬರಿಸುತ್ತಿದ್ದು, ಇಂದು ಸಂಜೆ 4 ಗಂಟೆಯಿಂದ ಮಳೆ ಬಿರುಸು ಪಡೆದುಕೊಂಡಿದೆ. ಮಡಿಕೇರಿಯಲ್ಲಿ ಜನ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ಸಾವಿಗೆ ಆಹ್ವಾನ ನೀಡುತ್ತಿರುವ ದೇವದುರ್ಗದ ರಸ್ತೆ

    ಸಾವಿಗೆ ಆಹ್ವಾನ ನೀಡುತ್ತಿರುವ ದೇವದುರ್ಗದ ರಸ್ತೆ

    – ಕೆಸರು ಗದ್ದೆಯಂತಾದ ರಸ್ತೆ
    – ನಿತ್ಯ ಪ್ರಯಾಣಿಕರ ಪರದಾಟ

    ರಾಯಚೂರು: ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿದ್ದು, ಹೇಗಪ್ಪ ಮನೆ ಮುಟ್ಟೋದು ಎಂದು ವಾಹನ ಸವಾರರು ತಲೆ ಕೆಡಿಸಿಕೊಂಡು ಕೆಸರಿನಲ್ಲೇ ವಾಹನ ಚಲಾಯಿಸುತ್ತಿದ್ದಾರೆ.

    ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಸುಂಕೇಶ್ವರಹಾಳ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆ ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ಯಾರಿಗಾದರೂ ಆರೋಗ್ಯ ತೀವ್ರ ಹದಗೆಟ್ಟರೆ ಅಂಬುಲೆನ್ಸ್ ಸಹ ಇಲ್ಲಿಗೆ ಬರುವುದಿಲ್ಲ. ಗರ್ಭಿಣಿಯರ ಪರಸ್ಥಿತಿಯಂತೂ ಹೇಳತೀರದು. ಅಲ್ಲದೆ ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಅಸಾಧ್ಯ ಎನ್ನವ ಹಾಗೆ ರಸ್ತೆ ಹದಗೆಟ್ಟಿದೆ.

    ಯಮನಾಳದಿಂದ ಗೂಗಲ್, ಗೂಗಲ್ ನಿಂದ ಸುಂಕೇಶ್ವರಹಾಳ ಸೇರಿದಂತೆ ಸುಮಾರು 45 ಕಿ.ಮೀ. ರಸ್ತೆ ವಿಪರೀತ ಹಾಳಾಗಿದೆ. ಇದೇ ಮಾರ್ಗದ ಒಟ್ಟು 95 ಕಿ.ಮೀ. ರಸ್ತೆಗೆ ಈಗಾಗಲೇ ಸುಮಾರು 118 ಕೋಟಿ ಘೋಷಣೆಯಾಗಿದೆ. ಆದರೆ ಕೋವಿಡ್ ಲಾಕ್‍ಡೌನ್ ಬಳಿಕ ಸರ್ಕಾರದಿಂದ ಆರ್ಥಿಕ ಅನುಮೋದನೆ ಸಿಗುತ್ತಿಲ್ಲ. ಸರ್ಕಾರದಲ್ಲಿ ರಸ್ತೆಗೆ ಖರ್ಚು ಮಾಡಲು ಹಣವಿಲ್ಲದ ಪರಸ್ಥಿತಿ ಬಂದಿರೋದು ವಿಪರ್ಯಾಸ. ಹೀಗಾಗಿ ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿ ಯಾವಾಗ ಆರಂಭವಾಗುತ್ತೋ ಎಂದು ಸ್ಥಳೀಯರು ಕಾಯುತ್ತಿದ್ದಾರೆ.

    ಈ ಹದಗೆಟ್ಟ ರಸ್ತೆಯಿಂದಾಗಿ ರಾಮನಾಳ, ಅರಷಿಣಗಿ, ಕರ್ಕಿಹಳ್ಳಿ, ಕೊಪ್ಪರ, ಗಾಗಲ್, ಗೂಗಲ್, ಯಾಟಗಲ್, ಹೇರೂರು ಸೇರಿ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಮುಂಬರುವ ಎಲ್ಲ ಚುನಾವಣೆಗಳ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

    ರಸ್ತೆ ಅವ್ಯವಸ್ಥೆ ಕುರಿತು ಪಬ್ಲಿಕ್ ಟಿವಿ ಈಗಾಗಲೇ ಸಾಕಷ್ಟು ಬಾರಿ ವರದಿ ಪ್ರಸಾರ ಮಾಡಿದೆ. 2013ರಲ್ಲಿ ಡಿಎನ್‍ಆರ್ ಹೆಸರಿನ ಖಾಸಗಿ ಕಂಪನಿಗೆ ರಸ್ತೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಆದರೆ ಕಾಮಗಾರಿ ಆರಂಭಿಸಿ ಕೆಲವೇ ದಿನಗಳಲ್ಲಿ ಕಂಪನಿ ಬಿಲ್ ಮೊತ್ತ ಬಿಡುಗಡೆಯಾಗುತ್ತಿಲ್ಲ ಎಂದು ಕಾಮಗಾರಿ ನಿಲ್ಲಿಸಿತು. ಅಲ್ಲಿಂದ ಇಲ್ಲಿಯವರೆಗೆ ಕನಿಷ್ಟ ಮಟ್ಟದ ನಿರ್ವಹಣೆಯೂ ಇಲ್ಲದೆ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಾರೀ ಸುರಿದ ಅತಿಯಾದ ಮಳೆಯಿಂದಾಗಿ ಜನ ರಸ್ತೆಗೆ ಇಳಿಯದಂತಹ ಪರಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನ ಸಿಟ್ಟಿಗೆದ್ದಿದ್ದು, ನಿರಂತರ ಹೋರಾಟಕ್ಕೆ ಮುಂದಾಗುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

    ವಿಧಾನ ಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಈ ಕುರಿತು ಪ್ರತಿಕ್ರಿಯಿಸಿ, ನಾನು ಪ್ರಯತ್ನ ಮಾಡುತ್ತಿದ್ದೇನೆ, ಕಾಮಗಾರಿಗೆ ಶೀಘ್ರದಲ್ಲೇ ಆರ್ಥಿಕ ಅನುಮೋದನೆ ಸಿಗುವ ಭರವಸೆಯಿದೆ. ಕೋವಿಡ್ ಲಾಕ್‍ಡೌನ್ ಬಳಿಕ ರಸ್ತೆ ಕಾಮಗಾರಿ ಹಣ ಬಿಡುಗಡೆಯಾಗುವುದು ಕಷ್ಟಕರವಾಗಿದೆ. ಆರ್ಥಿಕ ಇಲಾಖೆ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

  • ಮಳೆ ಆರ್ಭಟ – ಕೊಚ್ಚಿಹೋಯ್ತು ರಾಯಚೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ

    ಮಳೆ ಆರ್ಭಟ – ಕೊಚ್ಚಿಹೋಯ್ತು ರಾಯಚೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ

    ರಾಯಚೂರು: ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಹಳ್ಳದ ರಸ್ತೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

    ರಾತ್ರಿ ಪೂರ್ತಿ ಸುರಿದ ಮಳೆಗೆ ರಾಯಚೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕೊಚ್ಚಿಹೋಗಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಹಳ್ಳದಲ್ಲಿನ ನೀರಿನ ಹರಿವು ಹೆಚ್ಚಾದ ಹಿನ್ನೆಲೆ ರಭಸಕ್ಕೆ ರಸ್ತೆ ಕೊಚ್ಚಿಹೋಗಿದೆ. ವಾಹನ ಸವಾರರು ಪರದಾಡಿದ್ದಾರೆ.

    ಬೈಕ್ ಹೊರತು ಪಡಿಸಿ ಉಳಿದ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. 20 ಕಿ.ಮೀ ಸುತ್ತುವರಿದು ಗ್ರಾಮಸ್ಥರು ಓಡಾಡಬೇಕಿದೆ. ಮಳೆ ನಿರಂತರವಾಗಿ ಬಂದರೆ ಸಂಪೂರ್ಣವಾಗಿ ರಸ್ತೆ ಕೊಚ್ಚಿಕೊಂಡು ಹೋಗುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ರಸ್ತೆ ಕೊಚ್ಚಿಹೋದರೂ ಅಧಿಕಾರಿಗಳಾಗಲಿ, ಜನಪ್ರತಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಭಾನುವಾರದ ಲಾಕ್‍ಡೌನ್ ಉಲ್ಲಂಘನೆ- ಪೊಲೀಸರಿಂದ ಲಾಠಿ ಚಾರ್ಜ್

    ಭಾನುವಾರದ ಲಾಕ್‍ಡೌನ್ ಉಲ್ಲಂಘನೆ- ಪೊಲೀಸರಿಂದ ಲಾಠಿ ಚಾರ್ಜ್

    ರಾಯಚೂರು: ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಇದರಿಂದ ಬೇಸತ್ತ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    ಈ ತಿಂಗಳ ಅಂತ್ಯದ ವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಜನ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಹೀಗೆ ನಗರದಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ರಾಜ್ಯದ ಬಹುತೇಕ ಕಡೆ ಲಾಕ್‍ಡೌನ್ ಉಲ್ಲಂಘಿಸಲಾಗುತ್ತಿದ್ದು, ಜನ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ರಾಯಚೂರಿನಲ್ಲಿ ಸಹ ಇಂದು ಬೈಕ್ ಸಂಚಾರ ಹೆಚ್ಚಾಗಿತ್ತು. ಹೀಗಾಗಿ ಪೊಲೀಸರು ಲಾಠೀ ಚಾರ್ಜ್ ಮಾಡಿದ್ದಾರೆ.

    ಲಾಠಿ ಏಟು ಕೊಟ್ಟು ಜನರನ್ನು ವಾಪಾಸ್ ಓಡಿಸಿದ್ದು, ಸಿಪಿಐ ಫಸಿಯುದ್ದೀನ್ ಸ್ವತಃ ರಸ್ತೆಗೆ ಇಳಿದು ಅನಗತ್ಯವಾಗಿ ರಸ್ತೆಗಿಳಿದವರಿಗೆ ಲಾಠಿ ಏಟು ಕೊಟ್ಟಿದ್ದಾರೆ. ಬೇಕಾಬಿಟ್ಟಿಯಾಗಿ ಓಡಾಡಿದ್ದಲ್ಲದೆ, ಮಾಸ್ಕ್ ಹಾಕದೇ ಬೈಕ್ ಡಬಲ್, ತ್ರಿಬಲ್ ರೈಡಿಂಗ್ ಮಾಡುತ್ತಿದ್ದವರ ಬೈಕ್ ಸೀಜ್ ಮಾಡಿದ್ದಾರೆ. ಈ ಮೂಲಕ ಲಾಕ್‍ಡೌನ್ ನಿಯಮ ಪಾಲಿಸುವಂತೆ ಸೂಚಿಸಿದ್ದು, ಇಲ್ಲವಾದಲ್ಲಿ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಸಿದ್ದಾರೆ.