Tag: ವಾಹನ ಸಂಚಾರ

  • ತುಮಕೂರು ದಸರಾ – ಇಂದಿನಿಂದ ಮೂರು ದಿನ ವಾಹನ ಸಂಚಾರ ಬದಲಾವಣೆ

    ತುಮಕೂರು ದಸರಾ – ಇಂದಿನಿಂದ ಮೂರು ದಿನ ವಾಹನ ಸಂಚಾರ ಬದಲಾವಣೆ

    ತುಮಕೂರು: ತುಮಕೂರು ದಸರಾ (Tumkur Dasara) ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಪ್ರವೇಶ ಮಾಡುವ ವಾಹನಗಳ (Vehicles) ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಸೆ.30, ಅ.1 ಹಾಗೂ ಅ.2ರಂದು ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ವಾಹನಗಳ ಮಾರ್ಗ ಬದಲಾವಣೆ ಮಾಡಿ ಪ್ರಕಟಣೆ ಹೊರಡಿಸಿದೆ. ನಗರ ಪ್ರವೇಶ ಮಾಡದೇ ರಿಂಗ್ ರಸ್ತೆ ಮೂಲಕ ವಾಹನ ಚಲಾಯಿಸುವುದು ಹಾಗೂ ಅಂತರಸನಹಳ್ಳಿ, ಶಿರಾ ಗೇಟ್ ಮೂಲಕ ಬಸ್ ನಿಲ್ದಾಣಕ್ಕೆ ಹೋಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ರೇಪಿಸ್ಟ್ ಉಮೇಶ್ ರೆಡ್ಡಿಗೆ VIP ಸೌಲಭ್ಯ ಕೊಡ್ತಿದ್ದಾರೆ, ಆದ್ರೆ ದರ್ಶನ್‌ಗೆ ಏನೂ ಇಲ್ಲ: ವಕೀಲರ ವಾದ ಏನು?

    ಅದರ ಜೊತೆಗೆ ಸಂಜೆ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಜೂನಿಯರ್ ಕಾಲೇಜು ಮೈದಾನಕ್ಕೆ ತರದೇ ನಿಗದಿ ಪಡಿಸಿದ ಸ್ಥಳದಲ್ಲೇ ಬಿಟ್ಟು ಬರುವಂತೆ ಸೂಚಿಸಲಾಗಿದೆ. ಇಂದು ರಾತ್ರಿ ಮೋಹಕತಾರೆ ರಮ್ಯಾ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾರ್ಯಕ್ರಮ ನೀಡಲಿದ್ದಾರೆ. ಅದೇ ರೀತಿ ನಾಳೆ ಗಾಯಕಿ ಅನನ್ಯ ಭಟ್ ಮತ್ತು ಅರ್ಜುನ್ ಜನ್ಯರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: RSSಗೆ 100 ವರ್ಷ – ನಾಳೆ ಪೋಸ್ಟ್ ಸ್ಟ್ಯಾಂಪ್, ನಾಣ್ಯ ಬಿಡುಗಡೆ ಮಾಡಲಿದ್ದಾರೆ ಪ್ರಧಾನಿ ಮೋದಿ

  • Shiradi Ghat: ವರುಣನ ಆರ್ಭಟ; ಶಿರಾಡಿಘಾಟ್ ರಸ್ತೆ ತಾತ್ಕಾಲಿಕ ಬಂದ್ – ಸಂಚಾರಕ್ಕೆ ಬದಲಿ ಮಾರ್ಗ!

    Shiradi Ghat: ವರುಣನ ಆರ್ಭಟ; ಶಿರಾಡಿಘಾಟ್ ರಸ್ತೆ ತಾತ್ಕಾಲಿಕ ಬಂದ್ – ಸಂಚಾರಕ್ಕೆ ಬದಲಿ ಮಾರ್ಗ!

    – ಗುಡ್ಡ ಕುಸಿತದಿಂದ 10 ಕಿಮೀ ಟ್ರಾಫಿಕ್‌ ಜಾಮ್‌!

    ಹಾಸನ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ (Bengaluru, Mangaluru Highway) ಹಲವೆಡೆ ಗುಡ್ಡ, ತಡೆಗೋಡೆ ಕುಸಿತ ಸಂಭವಿಸುತ್ತಿವೆ. ಈ ಹಿನ್ನಲೆ ತುರ್ತು ದುರಸ್ತಿ ಕಾರ್ಯ ನಡೆಸಬೇಕಿದ್ದು, ಹಾಸನದಿಂದ (Hassan) ಮಾರನಹಳ್ಳಿವರೆಗೆ ತುರ್ತು ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

    ಮಳೆಯ ಆರ್ಭಟದಿಂದ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್‌ನಲ್ಲಿ (Shiradi Ghat) ಗುಡ್ಡ ಕುಸಿತ ಸಂಭವಿಸಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಗುರುವಾರ (ಜು.18) ನಸುಕಿನ ಜಾವ ನಡೆದ ಘಟನೆಯಿಂದಾಗಿ 10 ಕಿಮೀ ವರೆಗೆ ಟ್ರಾಫಿಕ್‌ ಜಾಮ್‌ ಆಗಿದ್ದು, ಟ್ರಕ್‌, ಲಾರಿ, ಟ್ರ್ಯಾಕ್ಟರ್‌ ಮೊದಲಾದ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಹಾಸನದ ಕುಂದಲಿ ಗ್ರಾಮದ ಬಳಿಯೇ ಪೊಲೀಸರು ವಾಹನಗಳನ್ನ ತಡೆದು ನಿಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ ಸರ್ಕಾರವೇ ಇರೋದು: ಬಿಜೆಪಿಗೆ ಸಿಎಂ ತಿರುಗೇಟು

    ಅತ್ತ ಚಾರ್ಮಾಡಿ ಘಾಟ್‌ನಲ್ಲೂ ಪ್ರಯಾಣ ದುಸ್ಥರ ಹಿನ್ನೆಲೆಯಲ್ಲಿ ಹಾಸನದಲ್ಲಿಯೇ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಸಕಲೇಶಪುರದವರೆಗೆ ತೆರಳುವ ಸಾರಿಗೆ ಬಸ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಂಗಳೂರು ಕಡೆಗೆ ಹೋಗುವ ಬಸ್‌ಗಳಿಗೂ ಹಾಸನ ತಾಲ್ಲೂಕಿನ ಕಂದಲಿ ಬಳಿ ತಡೆದು ವಾಪಸ್‌ ಕಳುಹಿಸುತ್ತಿದ್ದಾರೆ. ಸದ್ಯ ವಾಹನ ಸಂಚಾರಕ್ಕೆ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ತಡೆ ನೀಡಲಾಗಿದ್ದು, ರಸ್ತೆಗೆ ಕುಸಿದ ಮಣ್ಣು ತೆರವು ಮಾಡಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಜಲ್‌ ಖಾನ್‌ ಕೊಲ್ಲಲು ಛತ್ರಪತಿ ಶಿವಾಜಿ ಬಳಿಸಿದ್ದ ‘ವಾಘ್‌ ನಖ್‌’ ಅಸ್ತ್ರ ಜು.19ಕ್ಕೆ ಲಂಡನ್‌ನಿಂದ ಭಾರತಕ್ಕೆ

    ಈ ಕುರಿತು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಆದೇಶ ಹೊರಡಿಸಿದ್ದು, ಶುಕ್ರವಾರ ಬೆಳಗ್ಗೆಯಿಂದ ದುರಸ್ತಿ ಕಾರ್ಯಗಳು ಮುಗಿಯುವವರೆಗೂ ಮುನ್ನೆಚ್ಚರಿಕೆ ಕ್ರಮ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹಾಸನ ಜಿಲ್ಲೆ ಮಾರ್ಗವಾಗಿ ಬೆಂಗಳೂರು-ಮಂಗಳೂರ ನಡುವೆ ಪ್ರಯಾಣಿಸುವ ವಾಹನಗಳು ಹಾಸನ, ಬೇಲೂರು, ಮೂಡಿಗೆರೆ, ಚಾರ್ಮಾಡಿ ಮಾರ್ಗವಾಗಿ ಸಂಚಿರಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ – ಕಾಂಗ್ರೆಸ್‌ ಸದಸ್ಯ ಬಾಂಬ್‌!

  • ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

    ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

    ಬೆಂಗಳೂರು: ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ರಾತ್ರಿ ವೇಳೆ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

    ಮೇಲ್ಸೇತುವೆಯಲ್ಲಿ ಭಾರೀ ವಾಹನ ಹಾಗೂ ಲಘು ವಾಹನ ಪ್ರತ್ಯೇಕಿಸಿ ಕಳುಹಿಸುವುದಕ್ಕೆ ಪೊಲೀಸರಿಗೆ ಕಷ್ಟವಾಗುತ್ತಿರುವ ಹಿನ್ನೆಲೆ, ಜೊತೆಗೆ ಭಾರೀ ವಾಹನಗಳ ತಡೆಗಟ್ಟಲು ಅಳವಡಿಸಿರುವ ಗ್ಯಾಂಟ್ರಿ ಪದೇ, ಪದೇ ಡ್ಯಾಮೇಜ್ ಆಗುತ್ತಿರುವ ಕಾರಣ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ನಿರ್ಬಂಧ ಹೇರಿದ್ದಾರೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ವ್ಯಕ್ತಿ ಸಹಿತ ಕಾರು ಸುಟ್ಟು ಕರಕಲು

    ರಾತ್ರಿ 12 ಗಂಟೆ ನಂತರ ಸರ್ವಿಸ್ ರಸ್ತೆ ಮೂಲಕ ದಾಸರಹಳ್ಳಿ, ಪೀಣ್ಯ, ಜಾಲಹಳ್ಳಿ ಕ್ರಾಸ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ. ಗೊರಗುಂಟೆಪಾಳ್ಯದಿಂದ ಔಟರ್ ರಿಂಗ್ ರೋಡ್ ಬಳಸಿ ನಗರದಿಂದ ಹೊರ ಹೋಗಬಹುದು ಮತ್ತು ನಗರಕ್ಕೆ ಬರುವ ವಾಹನಗಳು ಮಾದಾವಾರ ಬಳಿ ನೈಸ್ ರಸ್ತೆ ಬಳಸಿಕೊಂಡು ಬರಬಹುದು ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಗಾಗಿ ಕೂದಲು ಕಸಿ ಮಾಡಿಸಿಕೊಂಡು ಮಸಣ ಸೇರಿದ

  • ಹೊಸ ವರ್ಷ ಸಂಭ್ರಮಾಚರಣೆ ತಡೆಯಲು ಚೆನ್ನೈನಲ್ಲಿ ವಾಹನ ಸಂಚಾರ ಬ್ಯಾನ್

    ಹೊಸ ವರ್ಷ ಸಂಭ್ರಮಾಚರಣೆ ತಡೆಯಲು ಚೆನ್ನೈನಲ್ಲಿ ವಾಹನ ಸಂಚಾರ ಬ್ಯಾನ್

    ಚೆನ್ನೈ: ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕುವ ಸಲುವಾಗಿ ತಮಿಳುನಾಡು ಪೊಲೀಸರು ಚೆನ್ನೈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದ್ದಾರೆ. ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಯಿಂದ ಜನವರಿ 1ರ ಬೆಳಗ್ಗೆ 5 ಗಂಟೆಯವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ.

    ಬೀಚ್‍ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆಯನ್ನು ನಿಷೇಧಿಸುವ ಸಲುವಾಗಿ ಡಿಸೆಂಬರ್ 28 ರಂದು ಪ್ರಕಟಿಸಲಾದ ನಿಯಮಗಳಲ್ಲಿ ವಾಹನ ಸಂಚಾರ ನಿರ್ಬಂಧವನ್ನು ಸಹ ಜಾರಿಗೊಳಿಸಲಾಗಿದೆ.  ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

    ಡಿಸೆಂಬರ್ 31 ರಂದು ಮಧ್ಯರಾತ್ರಿ 12 ಗಂಟೆಯೊಳಗೆ ನಾಗರಿಕರು ಮನೆಗೆ ತಲುಪಲು ಪೊಲೀಸರು ಸೂಚಿಸಿದ್ದು, ಈ ನಿಯಮದ ಅಡಿಯಲ್ಲಿ ಅಗತ್ಯ ಮತ್ತು ತುರ್ತು ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಭಾರತದ ರಫೇಲ್‌ಗಳಿಗೆ ಪೈಪೋಟಿ ನೀಡಲು ಚೀನಾದ ಜೆ-10ಸಿ ಸ್ಕ್ವಾಡ್ರನ್ ಖರೀದಿಗೆ ಮುಂದಾದ ಪಾಕ್

    ಬೀಚ್ ಬಳಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ಡಿಸೆಂಬರ್ 31 ರಂದು ರಾತ್ರಿ 9 ಗಂಟೆಯಿಂದ ಬೀಚ್ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ಸಹ ನಿಷೇಧಿಸಲಾಗಿದೆ. ಹೊಸ ವರ್ಷದಂದು ನಗರದಲ್ಲಿ 10,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಿಯಮ ಉಲ್ಲಂಘನೆ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ.

  • ಸ್ವಂತ ಹಣ ಹಾಕಿ ಸಾರ್ವಜನಿಕರಿಂದಲೇ ರಸ್ತೆ ದುರಸ್ತಿ- ಭಾರೀ ವಾಹನಕ್ಕೆ ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಆಗ್ರಹ

    ಸ್ವಂತ ಹಣ ಹಾಕಿ ಸಾರ್ವಜನಿಕರಿಂದಲೇ ರಸ್ತೆ ದುರಸ್ತಿ- ಭಾರೀ ವಾಹನಕ್ಕೆ ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಆಗ್ರಹ

    ಕಾರವಾರ: ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿ 34 ರಲ್ಲಿ ಮೊದಲಿನಂತೆ ಎಲ್ಲ ಬಸ್ ಗಳ ಸಂಚಾರಕ್ಕೆ ಹಾಗೂ ಜಲ್ಲಿ, ಮರಳು ಸಾಗಾಟಕ್ಕೆ ಅನುಕೂಲ ಮಾಡಿಕೊಡುವಂತೆ ಜೊಯಿಡಾ ತಾಲೂಕಿನ ಸ್ಥಳೀಯರು ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

    ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತವಾಗಿ ಸಂಪೂರ್ಣ ಸಂಚಾರ ಬಂದಾಗಿತ್ತು. ಗುಡ್ಡ ಕುಸಿತವಾದ ಭಾಗವನ್ನು ಸ್ಥಳೀಯರೇ ತೆರವುಗೊಳಿಸಿ, ರಸ್ತೆ ನಿರ್ಮಾಣ ಮಾಡಿದ್ದು, ಇದೀಗ ತಾತ್ಕಾಲಿಕವಾಗಿ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಸಣ್ಣ ವಾಹನಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಕಾರವಾರ ಹಾಗೂ ಜೊಯಿಡಾ ಸುತ್ತಲಿನ ಭಾಗದ ಜನರು ನಿತ್ಯ ಒಂದಲ್ಲ ಒಂದು ಕಾರಣದಿಂದಾಗಿ ಓಡಾಟ ಮಾಡುವುದರಿಂದ ಈ ಸಮಯದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬಸ್ ಸಂಚಾರ ಕೂಡ ಮೊದಲಿನಂತೆ ಇರದೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದನ್ನೂ ಓದಿ: ನಗರಸಭೆ ಕರ ವಸೂಲಾತಿಯ ಲಕ್ಷಾಂತರ ರೂ. ದುರುಪಯೋಗ- ಸಿಬ್ಬಂದಿ ಆಸ್ತಿ ಮುಟ್ಟುಗೋಲು ಹಾಕಲು ಮುಂದಾದ ಅಧಿಕಾರಿಗಳು

    ಆದ್ದರಿಂದ ಈ ಮೊದಲಿನಂತೆ ಎಲ್ಲ ಬಸ್ ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಗುಡ್ಡ ಕುಸಿತ ಭಾಗಗಳನ್ನು ಪರಿಶೀಲಿಸಿ ಸಣ್ಣ ಪುಟ್ಟ ತೊಂದರೆಗಳಿದ್ದಲ್ಲಿ ತಕ್ಷಣ ಸರಿಪಡಿಸಿ ಮರಳು, ಜಲ್ಲಿಗಳನ್ನು ಕೊಂಡೊಯ್ಯೊಲು ಅವಕಾಶ ಮಾಡಿಕೊಡಬೇಕು. ಕಾರವಾರ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಜೊಯಿಡಾ ಭಾಗದಿಂದ ಜಲ್ಲಿ ಹಾಗೂ ಎಂ ಸ್ಯಾಂಡ್ ನ್ನು ಪಡೆಯುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಕೂಡಲೇ ಈ ಬಗ್ಗೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಸಿದ್ದಾರೆ. ಇದನ್ನೂ ಓದಿ: ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಯುವತಿ ಪಿಯುಸಿ ಪಾಸ್

    ಈ ವೇಳೆ ಗ್ರಾ.ಪಂ ಸದಸ್ಯ ಕೃಷ್ಣಾ ದೇಸಾಯಿ, ದಿಗಂಬರ ದೇಸಾಯಿ, ಪ್ರವೀಣ ನಾಯ್ಕ, ರತ್ನಾಕರ್ ದೇಸಾಯಿ, ಮಂಜುನಾಥ ಮುಕಾಶಿ, ಅನಂತ್ ಭಟ್, ರಾಮಚಂದ್ರ ಭಟ್ ಇನ್ನಿತರರು ಇದ್ದರು.

  • ಸಂಪಾಜೆ ಘಾಟಿಯಲ್ಲಿ ಉಕ್ಕುತ್ತಿರುವ ಅಂತರ್ಜಲ – ರಸ್ತೆ ಕುಸಿಯುವ ಅತಂಕ

    ಸಂಪಾಜೆ ಘಾಟಿಯಲ್ಲಿ ಉಕ್ಕುತ್ತಿರುವ ಅಂತರ್ಜಲ – ರಸ್ತೆ ಕುಸಿಯುವ ಅತಂಕ

    – ರಸ್ತೆಯ ಮೇಲ್ಭಾಗದಲ್ಲಿಯೇ ಹರಿಯಲಾರಂಭಿಸಿದ ನೀರು
    – ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು
    – ಮನೆ ಮೇಲೆ ಉರುಳಿದ ಬಂಡೆಗಳು

    ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಕುಸಿದು ಬಂದ್ ಆಗುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲದೇ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಹೆದ್ದಾರಿಗಳ ಮೇಲೆಯೇ ಇದೀಘ ಜಲಾದ ಮೂಲಗಳು ಹೆಚ್ಚಾಗಿದ್ದು, ರಸ್ತೆಯ ಮೇಲ್ಭಾಗದಲ್ಲಿ ನೀರು ಹರಿಯಲು ಅರಂಭಿಸಿದೆ.

    ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು:
    ಕಳೆದ ಒಂದು ವಾರದವರೆಗೆ ಜಿಲ್ಲೆಯಲ್ಲಿ 1,600 ಮಿಲಿ ಮೀಟರ್ ಗೂ ಅಧಿಕ ಮಳೆ ಸುರಿದಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂರು ಕಡೆಗಳಲ್ಲಿ ಅತ್ಯಂತ ಅಪಾಯಕಾರಿ ಮತ್ತು ತೀವ್ರ ಕುಸಿಯುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈಗಾಗಲೇ ಮೂರು ಕಡೆಗಳಲ್ಲಿ ಬಿರುಕು ಮೂಡಿದೆ. ಎರಡನೇ ಮೊಣ್ಣಂಗೇರಿಯಲ್ಲಿ ಎರಡು ಕಡೆ ಬಿರುಕು ಬಿಟ್ಟಿದ್ದರೆ, ಮದೆನಾಡು ಬಳಿ ರಸ್ತೆ ಉಬ್ಬುತ್ತಿದೆ. ಕರ್ತೋಜಿ ಬೆಟ್ಟ ಕುಸಿಯುತ್ತಿರುವುದರಿಂದ ಅದರ ಒತ್ತಡಕ್ಕೆ ಹೆದ್ದಾರಿ ಉಬ್ಬುತ್ತಿದೆ. ಹೀಗೆ ಉಬ್ಬಿದಂತೆಲ್ಲಾ ಮಣ್ಣು ತೆಗೆಯಲಾಗುತ್ತಿದ್ದು, ಕಳೆದ ಮೂರು ದಿನಗಳಿಂದ 100 ಲೋಡಿಗೂ ಹೆಚ್ಚು ಮಣ್ಣನ್ನು ಉಬ್ಬಿದ ಸ್ಥಳದಿಂದ ತೆಗೆಯಲಾಗಿದೆ.

    ಉಕ್ಕುತ್ತಿರುವ ಅಂತರ್ಜಲ:
    ಜೊತೆಗೆ ಎರಡನೇ ಮೊಣ್ಣಂಗೇರಿಯಿಂದ ಮದೆನಾಡುವರೆಗೆ ಹೆದ್ದಾರಿಯಲ್ಲೇ ಅಂತರ್ಜಲ ಉಕ್ಕುತ್ತಿದೆ. ಇದರ ಜೊತೆಗೆ ಬೆಟ್ಟದ ಕೆಳ ಭಾಗದಲ್ಲಿಯೂ ಜಲ ಹೊರ ಬರುತ್ತಿದೆ. ಇದರಿಂದಾಗಿ ಈ ಬಾಗದ ಜನರಲ್ಲಿ ಅತಂಕ ಶುರುವಾಗಿದೆ. ಕಾರಣ ಕಳೆದ ವರ್ಷ ತಲಕಾವೇರಿಯಲ್ಲಿ ನಡೆದ ಭೀಕರ ದುರಂತಕ್ಕೂ ಮೊದಲು ಗಜಗಿರಿ ಬೆಟ್ಟದಿಂದ ಭಾರೀ ಪ್ರಮಾಣದಲ್ಲಿ ಅಂತರ್ಜಲ ಹರಿಯಲಾರಂಭಿಸಿತ್ತು. ಹೀಗೆ ಅಂತರ್ಜಲ ಹರಿದ ಕೆಲವೇ ತಿಂಗಳಲ್ಲಿ ಇಡೀ ಗಜಗಿರಿ ಬೆಟ್ಟ ಕುಸಿದು ಹೋಗಿತ್ತು. ಇದೀಗ ಮದೆನಾಡು, ಮೊಣ್ಣಂಗೇರಿಗಳಲ್ಲಿ ಒಂದೆಡೆ ಹೆದ್ದಾರಿ ಕುಸಿದ್ದಿದ್ರೆ, ಮತ್ತೊಂದೆಡೆ ಭಾರೀ ಪ್ರಮಾಣದಲ್ಲಿ ಅಂತರ್ಜಲ ಉಕ್ಕಿ ಹರಿಯುತ್ತಿರುವುದು ಆತಂಕ ಮೂಡಿಸಿದೆ.

    ಇನ್ನೂ ಮಡಿಕೇರಿ ಸೋಮವಾರಪೇಟೆ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಟ್ಟಿಹೊಳೆ ಸಮೀಪ ಬರೋಬ್ಬರಿ ಅರ್ಧ ಕಿಲೋಮೀಟರ್ ದೂರದವರೆಗೆ ಭಾರೀ ಬಿರುಕುಬಿಟ್ಟಿದೆ. ಮತ್ತೊಂದೆಡೆ ಮಡಿಕೇರಿಯಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಚೆಟ್ಟಳ್ಳಿ ಬಳಿ ಕುಸಿದಿದ್ದು, ಮಣ್ಣನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

    ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ. ಒಂದು ವೇಳೆ ಭಾರೀ ಮಳೆಯಾದಲ್ಲಿ ಈ ಎಲ್ಲಾ ರಸ್ತೆಗಳು ಕುಸಿದು ಹೋಗುವ ಸಾಧ್ಯತೆ ಇದ್ದು ಮಡಿಕೇರಿ ಕುಶಾಲನಗರ ಸಂಪರ್ಕವನ್ನು ಬಿಟ್ಟು ಉಳಿದೆಲ್ಲಾ ಸಂಪರ್ಕವನ್ನು ಕಡಿದುಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಹೆದ್ದಾರಿ ಸಂಪರ್ಕದ ಬಗ್ಗೆ ನಿತ್ಯ ಪರಿಶೀಲನೆಗೆ ಸೂಚಿಸಲಾಗಿದ್ದು, ಭಾರೀ ವಾಹನಗಳ ನಿಯಂತ್ರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಉರುಳಿದ ಬಂಡೆಗಳು:
    ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮಪಂಚಾಯತಿ ವ್ಯಾಪ್ತಿಯ ನವಗ್ರಾಮದಲ್ಲಿ ಬಸಪ್ಪ ಮತ್ತು ಮಂಜುಳ ದಂಪತಿ ಮನೆ ಪಕ್ಕದಲ್ಲೇ ಬೆಟ್ಟ ಕುಸಿದಿದೆ. ಈ ವೇಳೆ ಭಾರೀ ಗಾತ್ರದ ಎರಡು ಬಂಡೆಗಳು ಬಸಪ್ಪ ಅವರ ಮನೆ ಮೇಲೆ ಉರುಳಿವೆ. ಭಾರೀ ಗಾತ್ರದ ಬಂಡೆಗಳು ಮನೆಗೆ ಅಪ್ಪಳಿಸಿದ್ದರಿಂದ ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ. ಆ ವೇಳೆಗೆ ಮನೆಯಲ್ಲೇ ಎಲ್ಲರೂ ಇದ್ದರಾದರೂ ಬಂಡೆಗಳು ಉರುಳಿದ ಭಾಗದಲ್ಲಿ ಯಾರು ಇರಲಿಲ್ಲ. ಹೀಗಾಗಿ ಅದೃವಷಾತ್ ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.

    ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯ ಶಂಷುದ್ದಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಿಯಮ ಪ್ರಕಾರ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸ್ಥಳೀಯರು ತಮಗೆ ಸುರಕ್ಷಿತ ಸ್ಥಳದಲ್ಲಿ ಬದಲಿ ನಿವೇಶನ ಅಥವಾ ಮನೆ ನೀಡುವಂತೆ ಒತ್ತಾಯಿಸಿದ್ದಾರೆ.

  • ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ

    ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ

    ಶಿವಮೊಗ್ಗ: ಪ್ರಸ್ತುತ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ.

    ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ- ಉಡುಪಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಆಗುಂಬೆ ಘಾಟಿಯ ರಸ್ತೆಯು ಕಿರಿದಾದ ಪರಿಣಾಮ ರಸ್ತೆಯ ಇಕ್ಕೆಲಗಳಲ್ಲಿ ಭಾರ ತಡೆಯುವ ಕ್ಷಮತೆ ಕ್ಷೀಣಿಸುತ್ತಿತ್ತು. ಭಾರೀ ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ ರಸ್ತೆಯ ಬದಿಯ ಮಣ್ಣು ಕುಸಿತ ಉಂಟಾಗಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಸಾಕಷ್ಟು ಅಪಘಾತಗಳಿಗೆ ಕಾರಣವಾಗುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಅಧಿಕ ಭಾರದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಅಕ್ಟೋಬರ್ 15 ರವರೆಗೆ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿತ್ತು.

    ಇದೀಗ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಸಾರ್ವಜನಿಕರ ಸುಮಗ ಸಂಚಾರಕ್ಕಾಗಿ ಈಗ ಭಾರೀ ವಾಹನಗಳಿಗೆ ಅವಕಾಶ ನೀಡಲಾಗಿದೆ. ಈ ಮಾರ್ಗದಲ್ಲಿ ಅಧಿಕ ಮಳೆ ಪ್ರಮಾಣ ಇರುವ ದಿನಗಳಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು. ಮಳೆ ಕಡಿಮೆ ಇರುವ ದಿನಗಳಲ್ಲಿ ಎಲ್ಲ ವಾಹನಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ.

    ಪರ್ಯಾಯ ಮಾರ್ಗಗಳು
    * ಶಿವಮೊಗ್ಗ- ತೀರ್ಥಹಳ್ಳಿ- ಆಗುಂಬೆ – ಉಡುಪಿ.
    * ಶಿವಮೊಗ್ಗ-ತೀರ್ಥಹಳ್ಳಿ-ಉಂಟೂರುಕಟ್ಟೆ ಕೈಮರ – ಮಾಸ್ತಿಕಟ್ಟೆ- ಹುಲಿಕಲ್ – ಕುಂದಾಪುರ
    * ಶಿವಮೊಗ್ಗ – ತೀರ್ಥಹಳ್ಳಿ – ಕಮ್ಮರಡಿ – ಶೃಂಗೇರಿ- ಕೆರೆಕಟ್ಟೆ- ಕಾರ್ಕಳ

  • ವೀಕೆಂಡ್‍ನಲ್ಲಿ ಚರ್ಚ್ ಸ್ಟ್ರೀಟ್‍ಗೆ ವಾಹನಗಳು ನೋ ಎಂಟ್ರಿ

    ವೀಕೆಂಡ್‍ನಲ್ಲಿ ಚರ್ಚ್ ಸ್ಟ್ರೀಟ್‍ಗೆ ವಾಹನಗಳು ನೋ ಎಂಟ್ರಿ

    – ಮಾಲಿನ್ಯ ತಡೆಯಲು ಕ್ರಮ

    ಬೆಂಗಳೂರು: ವೀಕೆಂಡ್ ನಲ್ಲಿ ಸಿಲಿಕಾನ್ ಸಿಟಿಯ ಹೈಫೈ ಏರಿಯಾಗೆ ಹೋಗುವ ಮುನ್ನ ಯೋಚಿಸಿ, ಚರ್ಚ್ ಸ್ಟ್ರೀಟ್ ನಲ್ಲಿ ಇನ್ನು ವೀಕೆಂಡ್ ವೆಹಿಕಲ್ಸ್ ನಿಷೇಧ ಮಾಡಲಾಗಿದೆ. ಹೀಗಾಗಿ ಇನ್ಮುಂದೆ ವಿಕೇಂಡ್ ಬಂತೆಂದು ಚರ್ಚ್ ಸ್ಟ್ರೀಟ್ ಕಡೆಗೆ ಗಾಡಿ ತಗೋಂಡು ಜಾಲಿ ರೌಂಡ್ ಹೋಗಲು ಆಗಲ್ಲ.

    ಇಂದಿನಿಂದ ಫೆಬ್ರವರಿ 28ರ ವರೆಗೆ ಚರ್ಚ್ ಸ್ಟ್ರೀಟ್ ಕ್ಲೀನ್ ಏರ್ ಸ್ಟ್ರೀಟ್ ಎಂದು ಘೊಷಿಸಲಾಗಿದ್ದು, ಭಾರತದ ಮೊದಲ ಸ್ವಚ್ಛ ವಾಯು ಸ್ಟ್ರೀಟ್ ಚರ್ಚ್ ಸ್ಟ್ರೀಟ್ ಫಸ್ಟ್- ಟೆಸ್ಟ್ ಬೆಡ್ ಗೆ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕಾಲ್ನಡಿಗೆಯಲ್ಲಿ ತೆರಳುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾಯು ಮಾಲಿನ್ಯ ಕಡಿಮೆ ಮಾಡಲು ಹೊಸ ಪ್ರಯೋಗ ಮಾಡಲಾಗುತ್ತಿದ್ದು, ಭೂ ಸಾರಿಗೆ ನಿರ್ದೇಶನಾಲಯ, ಡಲ್ಟ್(ಡೈರೆಕ್ಟರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‍ಪೋರ್ಟ್) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ರೂಪಿಸಲಾಗಿದೆ. ಅಲ್ಲದೆ ಚರ್ಚ್ ಸ್ಟ್ರೀಟ್ ನಲ್ಲಿ ಯುರೋಪ್ ಮಾದರಿಯನ್ನು ಅಳವಡಿಕೆ ಮಾಡಲಾಗುತ್ತದೆಯಂತೆ.

    ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ಚಾಲನೆ ನೀಡಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಾತ್ ನೀಡಿದ್ದಾರೆ. ಚರ್ಚ್ ಸ್ಟ್ರೀಟ್ ನ ರಸ್ತೆಗಳನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದ್ದು, ಭಾರತದ ಮೊದಲ ಸ್ವಚ್ಛ ವಾಯು ಬೀದಿ(ಕ್ಲೀನ್ ಏರ್ ಸ್ಟ್ರೀಟ್) ಎಂದಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿ ವೀಕೆಂಡ್ ನಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವಾರದಲ್ಲಿ ಎರಡು ದಿನ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸ್ವಚ್ಛ ಗಾಳಿ, ನೀರು ಪ್ರತಿಯೊಬ್ಬರ ಹಕ್ಕು. ಸೈಕಲ್ ಹೆಚ್ಚು ಉಪಯೋಗಿಸಿ, ನಡಿಯಿರಿ ಎಂದು ಸಿಎಂ ಸಲಹೆ ನೀಡಿದ್ದಾರೆ.

    ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಶನಿವಾರ ಹಾಗೂ ಭಾನುವಾರ ಎರಡು ದಿನ ಚರ್ಚ್ ಸ್ಟ್ರೀಟ್ ನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಎರಡು ದಿನ ಈ ರಸ್ತೆಯಲ್ಲಿ ವಾಯುಮಾಲಿನ್ಯದ ಪ್ರಮಾಣ ಅಳೆಯಲಾಗುತ್ತೆದೆ. ನಂತರದ ದಿನಗಳಲ್ಲಿ ಹೆಚ್ಚಿನ ದಿನಗಳನ್ನು ವಿಸ್ತರಿಸುವ ಕುರಿತು ಚಿಂತಿಸಲಾಗುತ್ತದೆ. ಇದು ಮೊದಲ ಹಂತ, ನಂತರ ಬೇರೆ ಪ್ರದೇಶಗಳಲ್ಲಿ ವಿಸ್ತರಿಸಲು ಆಲೋಚನೆ ನಡೆಸಲಾಗುತ್ತಿದೆ ಎಂದರು.

  • ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ನಿಷೇಧ ಸಾಧ್ಯತೆ

    ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ನಿಷೇಧ ಸಾಧ್ಯತೆ

    – ತೋಟಗಾರಿಕೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

    ಬೆಂಗಳೂರು: ಸಧ್ಯದಲ್ಲೇ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸುವ ಸಾಧ್ಯತೆ ಇದೆ.

    ಇಂದು ತೋಟಗಾರಿಕೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ವಾಹನ ಸಂಚಾರ ಸ್ಥಗಿತಕ್ಕೆ ತೀರ್ಮಾನ ಕೈಗೊಳ್ಳಲಾಗಿದ್ದು, ಅಧಿಕಾರಿಗಳ ಜೊತೆ ಸಭೆ ನಡೆಸಿದ ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ, ವಾಹನ ಸಂಚಾರ ನಿಷೇಧಿಸುವ ನಿರ್ಣಯವನ್ನು ಕೈಗೊಂಡರು. ಬಳಿಕ ಈ ಕುರಿತ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಳ್ಳಬೇಕು ಎಂದು ಸಚಿವ ನಾರಾಯಣಗೌಡ ತಿಳಿಸಿದರು.

    ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಎಂದು ಪರಿಸರ ಪ್ರೇಮಿಗಳಿಂದ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು ಸಭೆ ಕರೆದು ಚರ್ಚಿಸಲಾಗಿದೆ. ಈ ಹಿಂದೆ ಪ್ರತಿ ಭಾನುವಾರ, ಸರ್ಕಾರಿ ರಜಾದಿನಗಳಂದು ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ಸ್ಥಗಿತ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 8 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸಲು ನಿರ್ಣಯ ಕೈಗೊಳ್ಳಲಾಗಿದೆ.

    ಕಬ್ಬನ್ ಪಾರ್ಕ್‍ಗೆ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕಾಗಿ 4 ರಿಂದ 5 ಸಾವಿರ ಜನ ಬರುತ್ತಾರೆ. 5 ರಿಂದ 6 ಸಾವಿರ ಜನ ಪ್ರತಿ ನಿತ್ಯ ಪಾರ್ಕ್ ವೀಕ್ಷಣೆಗಾಗಿ ಬರುತ್ತಿದ್ದಾರೆ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕಬ್ಬನ್ ಉದ್ಯಾನವನದಲ್ಲಿ ವಾಹನ ಸಂಚಾರ ನಿಷೇಧಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿತ್ತು. ಜೂನ್ 30 ರಂದು ನಡೆದ ಸಭೆಯಲ್ಲಿ ಬಿಬಿಎಂಪಿ ನಿರ್ಧಾರ ತೆಗೆದುಕೊಂಡಿತ್ತು. ಜೂನ್ 3 ರಂದು ನಡೆದ ಭರವಸೆಗಳ ಸಮಿತಿ ಸಭೆಯಲ್ಲೂ ವಾಹನ ಸಂಚಾರ ನಿಷೇಧಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಸಚಿವರು ಸಹ ಇದೇ ನಿಲುವು ವ್ಯಕ್ತಪಡಿಸಿದ್ದಾರೆ.

  • ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಚಾರ್ಮಾಡಿ ಸಂಚಾರ ಬಂದ್

    ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಚಾರ್ಮಾಡಿ ಸಂಚಾರ ಬಂದ್

    ಚಿಕ್ಕಮಗಳೂರು: ಕಳೆದ ಬಾರಿ ತಿಂಗಳುಗಟ್ಟಲೇ ಬಂದ್ ಆಗಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶಿಸಿದ್ದಾರೆ.

    ಕಳೆದ ಬಾರಿ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನ ಹಲವೆಡೆ ಬೆಟ್ಟ-ಗುಡ್ಡಗಳು ಕುಸಿದಿದ್ದವು. ತಿಂಗಳುಗಟ್ಟಲೇ ಚಾರ್ಮಾಡಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಕುಸಿದಿದ್ದ ಬೆಟ್ಟಗುಡ್ಡಗಳ ಮಣ್ಣನ್ನು ತೆಗೆಯಲು ಮೂರ್ನಾಲ್ಕು ಜೆಸಿಬಿಗಳು ತಿಂಗಳುಗಟ್ಟಲೇ ಕೆಲಸ ಮಾಡಿದ್ದವು. ಅಷ್ಟೆ ಅಲ್ಲದೆ ರಸ್ತೆ ಕೂಡ ಕುಸಿದಿದ್ದು ಮತ್ತೆ ಸಂಚಾರ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

    ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಾತ್ಕಾಲಿಕವಾಗಿ ಲಘು ವಾಹನಗಳು ಸಂಚರಿಸುವಂತೆ ದುರಸ್ಥಿ ಮಾಡಿತ್ತು. ತದನಂತರ ಎಲ್ಲ ರೀತಿಯ ವಾಹನಗಳು ಓಡಾಟ ಮುಂದುವರಿಸಿದ್ದವು. ಈ ವರ್ಷವೂ ಕಳೆದೊಂದು ವಾರದಿಂದ ಚಾರ್ಮಾಡಿ ಭಾಗದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲಾಡಳಿತ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಚಾರ್ಮಾಡಿ ಘಾಟಿಯಲ್ಲಿ ಮುಂದಿನ ಆದೇಶದವರೆಗೆ ಯಾವುದೇ ರೀತಿ ವಾಹನಗಳು ಸಂಚರಿಸುವಂತಿಲ್ಲ ಎಂದು ಆದೇಶಿಸಿದೆ.

    ಯಾಕಂದರೆ ಇಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಬೆಟ್ಟಗುಡ್ಡಗಳು ತೀವ್ರ ತೇವಾಂಶದಿಂದ ಕೂಡಿದ್ದು, ಮತ್ತೆ ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಪ್ರವಾಸಿಗರು ಹಾಗೂ ಜನಸಾಮಾನ್ಯರ ಹಿತದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ಈ ಆದೇಶ ಜಾರಿಗೆ ತಂದಿದೆ. ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಮಂಜು ಸುರಿಯುತ್ತಿದ್ದು, ರಸ್ತೆಗಳಿಗೆ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಿದ್ದು, ರಾತ್ರಿ ವೇಳೆ ಸಂಚಾರ ಸೂಕ್ತವಲ್ಲ ಎಂದು ಜಿಲ್ಲಾಡಳಿತ ಸಂಚಾರ ನಿಷೇಧಿಸಿದೆ.