Tag: ವಾಹನ ಪೂಜೆ

  • ಕಟೀಲಿನಲ್ಲಿ ಎಲ್ಲ ಸೇವೆಗಳು ಆರಂಭ – ಭಕ್ತರು ಪಾಲನೆ ಮಾಡಬೇಕಾದ ನಿಯಮಗಳೇನು?

    ಕಟೀಲಿನಲ್ಲಿ ಎಲ್ಲ ಸೇವೆಗಳು ಆರಂಭ – ಭಕ್ತರು ಪಾಲನೆ ಮಾಡಬೇಕಾದ ನಿಯಮಗಳೇನು?

    ಮಂಗಳೂರು: ಸರಕಾರದ ನಿರ್ದೇಶನದಂತೆ  ಬುಧವಾರದಿಂದ ಕಟೀಲು ಶ್ರೀದುರ್ಗಾಪರಮೇಶ್ವರೀ  ದೇವಳದಲ್ಲಿ  ಕೆಲವನ್ನು ಹೊರತು ಪಡಿಸಿ ಎಲ್ಲ ಸೇವೆಗಳು ಆರಂಭಗೊಂಡಿದೆ.

    ದುರ್ಗಾನಮಸ್ಕಾರ, ಹೂವಿನಪೂಜೆ ಇತ್ಯಾದಿ ಎಲ್ಲ ಸೇವೆಗಳು ಕೋವಿಡ್‌19 ವಿಚಾರವಾಗಿ ಸರಕಾರ ನಿರ್ದೇಶಿಸಿರುವ ನಿಯಮಗಳನ್ನು ಪಾಲಿಸಿ ನಡೆಯುತ್ತವೆ. ಹಾಗಾಗಿ ಸಾಮಾಜಿಕ ಅಂತರ ಕಡ್ಡಾಯ. ವೃದ್ಧರಿಗೆ ಹಾಗೂ ಹತ್ತು ವರ್ಷದ ಕೆಳಗಿನ ಮಕ್ಕಳಿಗೆ ದೇವಳದ ಪ್ರವೇಶ ನಿಷೇಧವೇ ಮೊದಲಾದ ನಿಯಮಗಳು ಮುಂದುವರಿಯಲಿದೆ.

    1. ಎಲ್ಲ 12 ರಂಗಪೂಜೆಗಳನ್ನು ಮಾಡಿಸಿದಲ್ಲಿ ಸಾಮಾಜಿಕ ಅಂತರಕ್ಕೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಸದ್ಯ 5 ರಂಗಪೂಜಾಸೇವೆಗೆ ಮಾತ್ರಾವಕಾಶ ನೀಡಲಾಗುವುದು.

    2. ಹಣ್ಣುಕಾಯಿಸೇವೆಯನ್ನು ಕೊರೊನಾ ಮುಗಿಯುವ ವರೆಗೆ ನಡೆಸದಂತೆ ನಿರ್ಬಂಧಿಸಲಾಗಿದೆ.

    3.ತೀರ್ಥಕ್ಕೆ ಭಕ್ತಾದಿಗಳೇ  ಬಾಟಲಿ ತಂದಲ್ಲಿ ತೀರ್ಥಕೊಡಲಾಗುವುದಿಲ್ಲ. ತಂಬಿಗೆ ತಂದಲ್ಲಿ ಅದನ್ನು ಮುಟ್ಟುವ ಪ್ರಮೇಯ ಇಲ್ಲದಿರುವುದರಿಂದ ತೀರ್ಥ ನೀಡಲಾಗುವುದು.  ರಶೀದಿ ಮಾಡಿದವರಿಗೆ ದೇವಳದ ತೀರ್ಥ ಬಾಟಲಿ ನೀಡಲಾಗುವುದು.

    4. ಅನ್ನಪ್ರಾಶನ ಸೇವೆಗೆ ಮಕ್ಕಳಿಗೆ ದೇವಳಕ್ಕೆ ಪ್ರವೇಶವಿಲ್ಲ. ಸಮಯ ಮೀರಿ ಅನ್ನಪ್ರಾಶನ ಸಂಸ್ಕಾರ ಸಾಧುವಲ್ಲ. ಈ ಎರಡನ್ನೂ ಗಮನದಲ್ಲಿರಿಸಿ ಅನ್ನಪ್ರಾಶನ ಸೇವೆ ರಶೀದಿ ಮಾಡಿಸಿದ ಬಂಧುಗಳಿಗೆ ಅನ್ನಪ್ರಾಶನಕ್ಕೆ ನೀಡಲಾಗುವ ಗುಡಾನ್ನ ಪಾಯಸ  ಪ್ರಸಾದ ನೀಡಲಾಗುವುದು. ಹೆತ್ತವರು ಅವರವರ ಮನೆಯಲ್ಲಿ ತಮ್ಮ ಮಕ್ಕಳಿಗೆ ನೀಡುವುದು.

    5. ಸ್ವಯಂವರಪಾರ್ವತೀ ಅರ್ಚನೆ ಮಾಡಿಸುವವರು ದೇವಳದಲ್ಲಿ ಪ್ರಾರ್ಥನೆ ಮುಗಿಸಿ ಮೂಲಸ್ಥಾನ ಭ್ರಾಮರೀವನದಲ್ಲಿ ದೇವಿಗೆ ಪ್ರದಕ್ಷಿಣೆ ಬಂದು   ದೇವಳದಲ್ಲಿ ಪೂಜಾನಂತರ  ಪ್ರಸಾದ ಸ್ವೀಕರಿಸುವುದು.

    6. ವಾಹನ ಪೂಜೆಯು ಹಿಂದಿನಂತೆಯೇ ನಡೆಯಲಿದೆ.

    7. ಮದುವೆಯ ಶುಭದಿನದಂದು ದೇವಳವು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸರದಿಯಂತೆ ಏಕಕಾಲದಲ್ಲಿ ಒಂದೇ ಮದುವೆ ನಡೆಸುವ ಅವಕಾಶ ಕಲ್ಪಿಸಲಾಗುತ್ತದೆ.  ಮೊದಲಾಗಿ ನಿಗದಿಪಡಿಸಿದ ಸಮಯವನ್ನು ಭಕ್ತಾದಿಗಳು ಕಾದಿರಿಸಬೇಕಾಗುತ್ತದೆ.

    8. ಅಕ್ಷರಾಭ್ಯಾಸ ಸಂಸ್ಕಾರಕ್ಕೆ ಮಗುವಿನ ಉಪಸ್ಥಿತಿ ಅನಿವಾರ್ಯವಾಗಿರುವುದರಿಂದ ಸದ್ಯಕ್ಕೆ ಈ ಸೇವೆ  ಇಲ್ಲ.

    9. ಚಂಡಿಕಾಹೋಮ ಇತ್ಯಾದಿ ಹೋಮಗಳನ್ನು ಮೊದಲೇ‌ ನಿಗದಿಪಡಿಸಿದಲ್ಲಿ ನೆರವೇರಿಸಲಾಗುವುದು.

    10. ಅನ್ನಪ್ರಸಾದ ಇರುವುದಿಲ್ಲ. ಅನ್ನಪ್ರಸಾದದ ಕುರಿತಾಗಿ  ಏನನ್ನೂ ನಿರ್ದೇಶಿಸಲಾಗಿಲ್ಲ. ಆದ್ದರಿಂದ ಈ ಕುರಿತು ಮೇಲಧಿಕಾರಿಗಳಿಂದ ಸ್ಪಷ್ಟೀಕರಣ ಪಡೆದುಕೊಂಡು ನಂತರ ನಿರ್ಧರಿಸಲಾಗುವುದು.