Tag: ವಾಹನ ಚಾಲನೆ

  • ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ನವದೆಹಲಿ: ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಟೋಲ್ ಪ್ಲಾಜಾಗಳನ್ನು (Toll Plaza) ನೋಡುತ್ತವೆ. ಅಲ್ಲಿ ಟೋಲ್ (Toll) ಪಾವತಿಗಾಗಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಆಗುವುದುಂಟು. ಆದರೆ ಭವಿಷ್ಯದಲ್ಲಿ ಈ ಟೋಲ್ ಪ್ಲಾಜಾಗಳಿಂದ ಕಿರಿಕಿರಿ ಆಗುವುದೇ ಇಲ್ಲ.

    ಈ ಕುರಿತು ಮಾತನಾಡಿರುವ ಕೇಂದ್ರ ನಿತಿನ್ ಗಡ್ಕರಿ (Nitin Gadkari), ಶೀಘ್ರದಲ್ಲೇ ಸ್ವಯಂಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸುವ ವ್ಯವಸ್ಥೆ ಅಳವಡಿಸಲಾಗುವುದು. ಸ್ವಯಂ ಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈಗಾಗಲೇ ಪ್ರಾಯೋಗಿಕ ಯೋಜನೆಗಳನ್ನು ನಡೆಸುತ್ತಿದೆ. ಇದು ವಾಹನ ಮಾಲೀಕರ ಬ್ಯಾಂಕ್ ಖಾತೆಗಳಿಂದ (Bank Account) ಶುಲ್ಕವನ್ನು ಖಡಿತಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ: ಆರಗ ಜ್ಞಾನೇಂದ್ರ

    ಫಾಸ್ಟ್ಯಾಗ್‌ಗಳನ್ನು (FASTags) ಪರಿಚಯಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(NHAI) ಟೋಲ್ ಆದಾಯವು ವರ್ಷಕ್ಕೆ 15 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಅದಕ್ಕಾಗಿ ಈಗ ಆಟೋ ಮೊಬೈಲ್ ನಂಬರ್‌ಪ್ಲೇಟ್(ಸ್ವಯಂಚಾಲಿನ ನಂಬರ್‌ಪ್ಲೇಟ್ ರೀಡರ್ ಕ್ಯಾಮೆರಾ) (Automatic Number Plate Reader Cameras) ತ್ರಜ್ಞಾನವನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳ ಎದೆ ಮೇಲೆ ಕಾಲಿಟ್ಟು ಸೊಪ್ಪು ತಿಂದ ಆಡು

    2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ (Toll Plaza) ವಾಹನಗಳು ಕಾಯುತ್ತಿದ್ದ ಸಮಯ ಸರಿಸುಮಾರು 8 ನಿಮಿಷಗಳಿತ್ತು. 2020 ರಿಂದ 2022ರ ಅವಧಿಯಲ್ಲಿ ಫಾಸ್ಟ್ಯಾಗ್‌ಗಳನ್ನು ಪರಿಚಯಿಸಿದ ನಂತರ ವಾಹನಗಳ ಸರಾಸರಿ ಸಮಯವು 47 ಸೆಕೆಂಡುಗಳಿಗೆ ಇಳಿಕೆಯಾಯಿತು. ಹೀಗಿದ್ದೂ ಕೆಲವು ನಗರಗಳಲ್ಲಿ ಸಂದಿಗ್ಧ ಸಮಯಗಳಲ್ಲಿ ಹೆಚ್ಚಿನ ವಿಳಂಬವಾಗುತ್ತಿವೆ. ಅದಕ್ಕಾಗಿ ಸಂಪೂರ್ಣ ಬದಲಿ ವ್ಯವಸ್ಥೆ ಕಲ್ಪಿಸಲು ಸ್ವಯಂಚಾಲಿನ ಟೋಲ್ ಸಂಗ್ರಹಿಸುವ ವಿಧಾನವನ್ನು ಪರಿಚಯಿಸಲಾಗುತ್ತಿದೆ ಎಂದಿದ್ದಾರೆ.

    ಸರ್ಕಾರ ಒಟ್ಟು ಎರಡು ರೀತಿಯ ಆಯ್ಕೆಗಳನ್ನು ಎದುರುನೋಡುತ್ತಿದೆ. ಮೊದಲಿಗೆ ಟೋಲ್ ಅನ್ನು ನೇರವಾಗಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುವುದು, 2ನೇ ಅಯ್ಕೆಯಾಗಿ ಕಾರಿನಲ್ಲಿ ಜಿಪಿಎಸ್ ಅಳವಡಿಸಿ ಉಪಗ್ರಹ ಆಧಾರಿತವಾಗಿ ಟೋಲ್ ಸಂಗ್ರಹ ಮಾಡುವ ವಿಧಾನವನ್ನು ಎದುರು ನೋಡುತ್ತಿದೆ. ಉಪಗ್ರಹ ವಿಧಾನ ಅನುಸರಿಸಿದರೆ ಫಾಸ್ಟ್ಯಾಗ್‌ ಬದಲಾಗಿ ಜಿಪಿಎಸ್ ಅಳವಡಿಸಬೇಕಾಗುತ್ತದೆ. ಯಾವ ಆಯ್ಕೆಯನ್ನು ಈಗಲೇ ಅಂತಿಮಗೊಳಿಸಿಲ್ಲ. ಆದರೆ ಟೋಲ್ ಪ್ಲಾಜಾಗಳಿಂದ ಮುಕ್ತಿ ನೀಡುವುದು ಖಚಿತ. ಸ್ವಯಂ ಚಾಲಿತ ಟೋಲ್ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತ ಮಕ್ಕಳ ವಾಹನ ಚಾಲನೆಗೆ ಅನುಮತಿ ನೀಡಿದ್ದಕ್ಕೆ 69 ಪೋಷಕರಿಗೆ ಜೈಲು

    ಅಪ್ರಾಪ್ತ ಮಕ್ಕಳ ವಾಹನ ಚಾಲನೆಗೆ ಅನುಮತಿ ನೀಡಿದ್ದಕ್ಕೆ 69 ಪೋಷಕರಿಗೆ ಜೈಲು

    ಹೈದರಾಬಾದ್: ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಆರೋಪದಡಿ ಕಳೆದ ಒಂದು ತಿಂಗಳಿನಲ್ಲಿ 69 ಪೋಷಕರು ಆಂಧ್ರಪ್ರದೇಶ ರಾಜಧಾನಿ ಹೈದರಾಬಾದ್ ನಗರದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಕಳೆದ ಕೆಲ ತಿಂಗಳಿನಿಂದ ಹೈದರಾಬಾದ್ ಟ್ರಾಫಿಕ್ ಪೊಲೀಸರು ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದರ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದರು. ಈ ವೇಳೆ 14 ರಿಂದ 16 ವರ್ಷದ ಮಕ್ಕಳು ಬೈಕ್, ಸ್ಕೂಟರ್, ತ್ರಿಚಕ್ರ ವಾಹನ ಮತ್ತು ಕಾರು ಚಾಲನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 69 ಅಪ್ರಾಪ್ತರ ಪೋಷಕರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ದಿನದಿಂದ ಮೂರು ದಿನಗಳ ವರೆಗೆ ಪೋಷಕರಿಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ರಂಗನಾಥ್ ಮಾಹಿತಿ ನೀಡಿದ್ದಾರೆ.

    ಜನವರಿ ಮೊದಲ ವಾರದಲ್ಲಿ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಅಪ್ರಾಪ್ತರು ಸಾವನ್ನಪ್ಪಿದ್ದ ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ಅಭಿಯಾನ ಆರಂಭಿಸಲಾಗಿತ್ತು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ದಂಡ ಮಾತ್ರ ಪಡೆಯಲಾಗುತ್ತಿತ್ತು. ಆದರೆ ಇದು ಹೆಚ್ಚು ಪರಿಣಾಮಕಾರಿ ಆಗದ ಕಾರಣ ಕಠಿಣ ಕ್ರಮಕೈಗೊಳ್ಳಲು ಮುಂದಾಗಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.

    ಅಪ್ರಾಪ್ತರು ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೇ ಇಂತಹ ಘಟನೆಗಳಲ್ಲಿ ಅಪ್ರಾಪ್ತರು ತಮ್ಮ ಜೀವ ಕಳೆದುಕೊಳ್ಳುವುದರೊಂದಿಗೆ ಇತರರ ಜೀವಕ್ಕೂ ಅಪಾಯಕಾರಿಯಾಗುತ್ತಿದ್ದಾರೆ. ಸುಪ್ರೀಂ ಕೋರ್ಟ್ ಈ ಕುರಿತ ಪ್ರಕರಣಗಳ ಬಗ್ಗೆ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯಗಳು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿವೆ.

    ಇಂತಹ ಪ್ರಕರಣಗಳನ್ನು ವಾಹನ ಕಾಯ್ದೆಯ 180 (ಅನಧಿಕೃತ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅನುಮತಿ) ಮತ್ತು 181 (ಚಾಲನ ಪರವಾನಗಿ ಇಲ್ಲದೆ ಚಾಲನೆ) ಸೆಕ್ಷನ್ ಅಡಿಯಲ್ಲಿ ಪರಿಗಣಿಸಲಾಗುತ್ತಿದೆ. ಅಲ್ಲದೇ ಈ ಅಭಿಯಾನವನ್ನು ವರ್ಷದ ಕೊನೆಯವರೆಗೂ ಮುಂದುವರೆಸುವುದಾಗಿ ಡಿಜಿಪಿ ತಿಳಿಸಿದ್ದಾರೆ.

    10 ದಿನಗಳ ಹಿಂದೆ 10 ಜನ ಪೋಷಕರಿಗೆ ಶಿಕ್ಷೆಯಾಗಿತ್ತು. ಈಗ ಈ ಸಂಖ್ಯೆ ಏರಿಕೆಯಾಗಿದ್ದು, ಹೈದರಾಬಾದ್ ಪೊಲೀಸರ ಈ ಕಠಿಣ ನಿರ್ಧಾರಕ್ಕೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳು ಬೈಕ್ ಹಾಗೂ ವಾಹನ ಚಾಲನೆ ಮಾಡಿ ಉಂಟು ಮಾಡಬಹುದಾದ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದಕ್ಕೆ 10 ಪೋಷಕರಿಗೆ ಜೈಲು

    ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದಕ್ಕೆ 10 ಪೋಷಕರಿಗೆ ಜೈಲು

    – 14 ವರ್ಷದ ಬಾಲಕನನ್ನು ರಿಮ್ಯಾಂಡ್ ಹೋಮ್‍ಗೆ ಕಳಿಸಿದ ಕೋರ್ಟ್

    ಹೈದರಾಬಾದ್: ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದಕ್ಕೆ ಹೈದರಾಬಾದ್ ಕೋರ್ಟ್ ಗುರುವಾರದಂದು 10 ಪೋಷಕರಿಗೆ 1 ದಿನದ ಜೈಲು ಶಿಕ್ಷೆ ವಿಧಿಸಿದೆ.

    ಅಪ್ರಾಪ್ತರು ವಾಹನ ಚಾಲನೆ ಮಾಡೋ ಪ್ರಕರಣಗಳಿಗೆ ಬ್ರೇಕ್ ಹಾಕೋ ಸಲುವಾಗಿ ಇದೇ ಮೊದಲ ಬಾರಿಗೆ 14 ವರ್ಷದ ಬಾಲಕನನ್ನು ಒಂದು ದಿನದ ಮಟ್ಟಿಗೆ ರಿಮ್ಯಾಂಡ್ ಹೋಮ್‍ಗೆ ಕಳಿಸಲಾಗಿದೆ.

    ಜೈಲಿಗೆ ಕಳಿಸಲಾಗಿರೊ ಪೋಷಕರ ವಿರುದ್ಧ ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 180ರಡಿ ಪ್ರಕರಣ ದಾಖಲಾಗಿದೆ. ಜೈಲು ಶಿಕ್ಷೆಯ ಜೊತೆಗೆ ಪೋಷಕರಿಗೆ 500 ರೂ. ದಂಡವನ್ನೂ ವಿಧಿಸಲಾಗಿದೆ.

    ರಸ್ತೆ ಸುರಕ್ಷತಾ ಕಾರ್ಯಕರ್ತರೊಬ್ಬರು ಈ ಬಗ್ಗೆ ಮಾತನಾಡಿ, ಪ್ರತಿನಿತ್ಯ ಪೊಲೀಸರು ಇಂತಹ 10ಕ್ಕೂ ಹೆಚ್ಚು ಪ್ರಕರಣಗಳನ್ನ ದಾಖಲಿಸಿಕೊಂಡು ಅವರೆಲ್ಲರನ್ನೂ ನ್ಯಾಯಾಲಯ ಜೈಲಿಗೆ ಕಳಿಸಿದ್ರೆ ಖಂಡಿತವಾಗಿಯೂ ಪೋಷಕರಲ್ಲಿ ಬದಲಾವಣೆ ತರುತ್ತದೆ. ಅಪ್ರಾಪ್ತರ ಮೇಲೂ ಇದರಿಂದ ಪರಿಣಾಮವಾಗುತ್ತದೆ ಎಂದು ಹೇಳಿದ್ದಾರೆ.

    ಅಪ್ರಾಪ್ತರು ವಾಹನ ಚಾಲನೆ ಮಾಡಿ ನಿಯಮ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ಈವರೆಗೆ 1079 ಪ್ರಕರಣಗಳು ದಾಖಲಾಗಿವೆ. ಫೆಬ್ರವರಿ ತಿಂಗಳಲ್ಲೇ 45 ಪೋಷಕರನ್ನು ಜೈಲಿಗೆ ಕಳಿಸಲಾಗಿದೆ ಎಂದು ವರದಿಯಾಗಿದೆ.

  • ಕುಡಿದ ಮತ್ತಲ್ಲಿ ಭಕ್ತರ ಮೇಲೆ ಕಾರು ಹರಿಸಿ ಪರಾರಿ- ಮಕ್ಕಳು ಸೇರಿ ನಾಲ್ವರು ಗಂಭೀರ

    ಕುಡಿದ ಮತ್ತಲ್ಲಿ ಭಕ್ತರ ಮೇಲೆ ಕಾರು ಹರಿಸಿ ಪರಾರಿ- ಮಕ್ಕಳು ಸೇರಿ ನಾಲ್ವರು ಗಂಭೀರ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಾಲಕನೊಬ್ಬ ದೊಡ್ಡಗಣಪತಿ ದೇವಾಲಯದ ಭಕ್ತರ ಮೇಲೆ ಕಾರು ಹರಿಸಿದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ರಿಂಗ್ ರಸ್ತೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಹನುಮಂತನಗರದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಗಣಪತಿ ದೇವಾಲಯದ 8ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನೂರಾರು ಭಕ್ತರು ಜಮಾಯಿಸಿದ್ದರು. ಈ ವೇಳೆ ಜನರಿದ್ದ ಪೆಂಡಾಲ್‍ಗೆ ಮಾರುತಿ ಜೆನ್ ಕಾರ್ ಡಿಕ್ಕಿ ಹೊಡೆದಿದೆ. ಬಳಿಕ ಭಕ್ತರ ಮೇಲೆ ನುಗ್ಗಿದೆ. ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳದಲ್ಲಿ ಜನರು ನೆರೆದಿದ್ದು, ಕಾರು ಚಾಲಕನನ್ನು ಹಿಡಿಯಲು ಪ್ರಯತ್ನಿಸಿದರಾದರೂ ಆತ ಪರಾರಿಯಾಗಿದ್ದಾನೆ.