Tag: ವಾಹನಗಳು

  • ಬೆಂಗ್ಳೂರು ಸುತ್ತಮುತ್ತ ಭಾರೀ ಮಳೆ – ಹೈವೇಯಲ್ಲೇ ನಿಂತ ನೀರು

    ಬೆಂಗ್ಳೂರು ಸುತ್ತಮುತ್ತ ಭಾರೀ ಮಳೆ – ಹೈವೇಯಲ್ಲೇ ನಿಂತ ನೀರು

    ಬೆಂಗಳೂರು: ಗುರುವಾರ ನಗರದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ರಸ್ತೆ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಮಲ್ಲೇಶ್ವರಂ, ಸದಾಶಿವನಗರ, ಶೇಷಾದ್ರಿಪುರಂ, ಸ್ಯಾಂಕಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಇತ್ತ ಮೆಜೆಸ್ಟಿಕ್, ವಿಧಾನಸೌಧ, ಶಿವಾಜಿನಗರ, ಹಲಸೂರು, ಕೆ.ಆರ್.ಮಾರ್ಕೆಟ್ ಸೇರಿದಂತೆ ಹಲವೆಡೆ ಭಾರೀ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.

    ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ 7ರ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ಮಳೆಯಿಂದ ನಾಲ್ಕೈದು ಅಡಿಯಷ್ಟು ಮಳೆನೀರು ರಸ್ತೆಯಲ್ಲಿ ನಿಂತು ಸಂಪೂರ್ಣ ಕೆರೆಯಂತಾಗಿತ್ತು. ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದ್ದು, ಮಳೆನೀರು ರಸ್ತೆಯಲ್ಲಿ ನಿಂತಿರುವುದರಿಂದ ಕೆಲ ವಾಹನಗಳು ಕೆಟ್ಟು ಹೋಗಿದ್ದವು. ಇದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸಹ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು.

    ಪ್ರತಿ ಬಾರಿ ಮಳೆ ಬಂದಾಗಲೂ ಸಹ ವೀರಸಂದ್ರ ಸಿಗ್ನಲ್ ಬಳಿ ರಸ್ತೆ ಜಲಾವೃತಗೊಂಡು ಕೆಲ ವಾಹನ ಸವಾರರು ಹಾಗೂ ಪಾದಚಾರಿಗಳು ಗುಂಡಿಗಳು ಕಾಣದೆ ಬಿದ್ದು ಕೈ ಕಾಲು ಮುರಿದುಕೊಂಡಿರುವಂತಹ ಘಟನೆಗಳು ಸಹ ಸಾಕಷ್ಟು ಬಾರಿ ನಡೆದಿವೆ. ಮಳೆ ಬಿದ್ದು ಗಂಟೆಗಳು ಕಳೆದರೂ ಮಳೆ ನೀರು ಹೊರ ಹೋಗದೆ ರಸ್ತೆಯಲ್ಲಿ ನಿಲ್ಲುತ್ತದೆ. ಹೀಗಾಗಿ ಕೂಡಲೇ ಮಳೆ ನೀರು ರಸ್ತೆಯಲ್ಲಿ ನಿಲ್ಲದೆ ಹೊರ ಹೋಗುವ ಹಾಗೆ ಮಾಡಬೇಕೆಂಬುದು ವಾಹನ ಸವಾರರು ಆಗ್ರಹಿಸಿದ್ದರು.

  • ಕಾಶ್ಮೀರ ಕಣಿವೆಯಾದ ಯಾದಗಿರಿ – ಊಟಿಯಾದ ಕೊಪ್ಪಳ

    ಕಾಶ್ಮೀರ ಕಣಿವೆಯಾದ ಯಾದಗಿರಿ – ಊಟಿಯಾದ ಕೊಪ್ಪಳ

    ಯಾದಗಿರಿ/ಕೊಪ್ಪಳ: ಬಿಸಿಲನಾಡು ಎಂದೆ ಪ್ರಸಿದ್ಧಿ ಪಡೆದಿರುವ ಯಾದಗಿರಿ ಈಗ ಕಾಶ್ಮೀರ ಕಣಿವೆಯಂತಾಗಿದೆ.

    ಸುಮಾರು ವರ್ಷಗಳ ನಂತರ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಂಜು ಆವರಿಸಿದ್ದು, ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿದೆ. ಇನ್ನೂ ರಸ್ತೆಗಳಲ್ಲಿ ಅಪಾರ ಪ್ರಮಾಣದ ಮಂಜು ಆವರಿಸಿದ್ದು, ಇದರಿಂದ ವಾಹನ ರಸ್ತೆಗಿಳಿಸಲು ನಗರದ ನಿವಾಸಿಗಳು ಹರಸಾಹಸ ಪಡುವಂತಾಗಿದೆ.

    ಬೆಳಗಿನ ಜಾವದಿಂದ ಸತತವಾಗಿ ಮಂಜು ಬೀಳುತ್ತಿರುವ ಹಿನ್ನೆಲೆಯಲ್ಲಿ ಚಳಿಯ ಹೊಡೆತಕ್ಕೆ ಮತ್ತೆ ಯಾದಗಿರಿ ಜನತೆ ಗಢ ಗಢ ನಡುಗುವಂತಾಗಿದೆ. ಸುಮಾರು ಬೆಳಗ್ಗೆ 8 ಗಂಟೆ ಆದರೂ ಮನೆಯಿಂದ ಹೊರ ಬಾರದಂತಾಗಿದೆ. ಮನೆಯಿಂದ ಹೊರ ಬಂದರೆ ಎಲ್ಲಿ ನೋಡಿದರೂ ಮಂಜು ಆವರಿಸಿದ್ದು, ಏನು ಕಾಣದ ಸ್ಥಿತಿಯಲ್ಲಿ ಜನರು ಇದ್ದಾರೆ. ಇತ್ತ ರಸ್ತೆಗಿಳಿದ ವಾಹನಗಳು ದಾರಿ ಕಾಣದೆ ನಿಧಾನವಾಗಿ ಬೆಳಗ್ಗೆಯಾದರೂ ವಾಹನಗಳ ಹೆಡ್ ಲೈಟ್ ಆನ್ ಮಾಡಿಕೊಂಡು ಸವಾರರು ಚಲಾಯಿಸುತ್ತಿದ್ದಾರೆ.

    ಇತ್ತ ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ 8 ಗಂಟೆ ಆದರೆ ಸಾಕು ಮುಂಜಾನೆಯ ಸೂರ್ಯ ಉರಿಯುವುದಕ್ಕೆ ಸ್ಟಾರ್ಟ್ ಮಾಡುತ್ತಾನೆ. ಆದರೆ ಇಂದು ಕೊೂಪ್ಪಳ ಜಿಲ್ಲಾದ್ಯಾಂತ ಮುಂಜಾನೆಯಿಂದ ಚುಮು ಚುಮು ಚಳಿ ಜೊತೆ ಮುಂಜು ಮುಸುಕಿಕೊಂಡಿದೆ. ಬೆಳಗ್ಗೆ ಎಂಟು ಗಂಟೆ ಆದರೂ ಮಾಯವಾಗದ ಮಂಜು ಊಟಿಯಂತೆ ಕಾಣುತ್ತಿದೆ.

    ಇನ್ನೂ ತೀವ್ರ ಮಂಜಿನಿಂದ ರಸ್ತೆಯು ಸಹ ಕಾಣದಂತೆ ಆಗಿದೆ. ವಾಹನ ಸವಾರರು ತಮ್ಮ ಗಾಡಿಗಳಿಗೆ ಲೈಟ್ ಹಾಕಿಕೊಂಡು ಒಡಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಂಜಿನ ದೃಶ್ಯಗಳು ಮನ ಮೋಹಕವಾಗಿದ್ದು, ನೋಡಿದವರೆಲ್ಲಾ ನಮ್ಮುರೂ ಇವತ್ತು ಊಟಿ ತರಾ ಕಾಣುತ್ತಿದೆ ಎಂದು ಖುಷಿ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಿಂದೂಗಳಂತೆ ಆಯುಧ ಪೂಜೆ ಮಾಡಿ ಸಂಭ್ರಮಿಸಿದ ಮುಸ್ಲಿಮ್ ವ್ಯಕ್ತಿ!

    ಹಿಂದೂಗಳಂತೆ ಆಯುಧ ಪೂಜೆ ಮಾಡಿ ಸಂಭ್ರಮಿಸಿದ ಮುಸ್ಲಿಮ್ ವ್ಯಕ್ತಿ!

    ಚಿಕ್ಕಮಗಳೂರು: ನಾಡಿನೆಲ್ಲೆಡೆ ಇಂದು ದಸರಾ ಹಾಗೂ ಆಯುಧ ಪೂಜೆಯ ಸಂಭ್ರಮ. ಕಾಫಿನಾಡಿ ಚಿಕ್ಕಮಗಳೂರಿನಲ್ಲೂ ಜನಸಾಮಾನ್ಯರು ಸಂಭ್ರಮದಿಂದ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಆದರೆ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಂತೆ ತನ್ನ ವಾಹನಗಳಿಗೆ ಆಯುಧ ಪೂಜೆ ಮಾಡಿರೋದು ಮಾತ್ರ ವಿಶೇಷವಾಗಿದೆ.

    ಎಸ್‍ಎಂಎಸ್ ಬಸ್ ಮಾಲೀಕರಾದ ಸಿರಾಜ್ ಹಿಂದೂಗಳಿಗೆ ಕಡಿಮೆ ಇಲ್ಲದಂತೆ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಹಿಂದು-ಮುಸ್ಲಿಂ ಎಂಬ ಭೇದ-ಭಾವವಿಲ್ಲ. ನಾವು ವಾಹನಗಳನ್ನ ಇಟ್ಟಿದ್ದೇವೆ. ಅನ್ನ ತಿನ್ನುತ್ತಿರೋದು ಅದರಲ್ಲೇ. ನಾವೆಲ್ಲರೂ ಒಂದೇ. ಭೂಮಿಯ ಮೇಲೆ ಇರುವುದು ಎರಡೇ ಜಾತಿ. ಒಂದು ಹೆಣ್ಣು, ಮತ್ತೊಂದು ಗಂಡು ಹಿಂದೂ ಮುಸ್ಲಿಂ ಎಂಬ ಭೇದ-ಭಾವ ಮಾಡೋದು ಕಿಡಿಗೇಡಿಗಳು ನಾವೆಲ್ಲರೂ ಒಂದೇ ಎಂದು ಹೇಳಿ ಅದ್ಧೂರಿಯಾಗಿ ಆಯುಧ ಪೂಜೆ ಆಚರಿಸಿದ್ದಾರೆ.

    ತನ್ನ ಬಸ್ಸುಗಳಿಗೆ ಚೆಂಡು ಹೂವಿನಿಂದ ಸಿಂಗಾರ ಮಾಡಿ, ಬಲೂನ್, ಬಾಳೆದಿಂಡು, ಮಾವಿನತೋರಣ ಕಟ್ಟಿ ಪೂಜೆ ಮಾಡಿ ಅಕ್ಕಪಕ್ಕದವರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಶಿರಾಡಿ, ಸಂಪಾಜೆ ಬಂದ್: ಚಾರ್ಮಾಡಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಶಿರಾಡಿ, ಸಂಪಾಜೆ ಬಂದ್: ಚಾರ್ಮಾಡಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಸಂಪಾಜೆ, ಶಿರಾಡಿ ಘಾಟಿ ಬಂದ್ ಆಗಿರೋ ಹಿನ್ನೆಲೆ ಸಾವಿರಾರು ವಾಹನಗಳು ಚಾರ್ಮಾಡಿಘಾಟ್‍ನಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.

    ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್, ಆರಂಭದಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಗಡಿ ಮುಟ್ಟುವವರೆಗೂ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ದೊಡ್ಡ ಗಾಡಿಗಳ ಸಂಚಾರ ಕೂಡ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತೊಂದೊಡ್ಡುತ್ತಿವೆ. ನಾಲ್ಕೈದು ಕಿಮೀ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಜೊತೆಗೆ ಮಳೆ, ಗಾಳಿ, ದಟ್ಟವಾದ ಮಂಜಿನಿಂದ ಪ್ರಯಾಣಿಕರು ಕಂಗಾಲಾಗಿದ್ದು, ವಾಹನಗಳ ಮಂದಗತಿಯ ಸಂಚಾರದಿಂದ ಮೊದಲು ಬೆಳ್ತಂಗಡಿಯ ಗಡಿ ಮುಟ್ಟಿದರೆ ಸಾಕೆಂದು ಆತಂಕದಿಂದಲೇ ಸಂಚರಿಸುತ್ತಿದ್ದಾರೆ.

    ಶಿರಾಡಿ ಘಾಟ್ ನಲ್ಲಿ ಆಗಸ್ಟ್ 20 ರವರೆಗೆ ಲಘು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟ್ ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವ ಕಾರಣ ಸಂಚಾರವನ್ನು ಬಂದ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೆಡ್ ಕುಸಿತ – ಕಾರು, ಜೀಪು, ಬೈಕ್, ಸಂಪೂರ್ಣ ಜಖಂ

    ಶೆಡ್ ಕುಸಿತ – ಕಾರು, ಜೀಪು, ಬೈಕ್, ಸಂಪೂರ್ಣ ಜಖಂ

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಹಲವೆಡೆ ಪ್ರವಾಹದ ಸ್ಥಿತಿ ಎದುರಾಗಿದೆ.

    ಜಿಲ್ಲೆಯ ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಪಂಚಾಯತಿ ವ್ಯಾಪ್ತಿಯ ನಿವಾಸಿ ಚಂಗಪ್ಪನವರ ಶೆಡ್ ಕುಸಿದಿದ್ದು, ಪರಿಣಾಮ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು, ಜೀಪು, ಬೈಕ್ ಮತ್ತು ಟ್ರೇಲರ್ ಸಂಪೂರ್ಣ ಜಖಂಗೊಂಡಿದೆ. ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಸಮೀಪದ ಬರೆಯಲ್ಲಿ ನೀರಿನ ಜಲ ಹರಿಲಾರಂಭಿಸಿದ ಪರಿಣಾಮ ಬರೆ ಕುಸಿತಗೊಂಡಿದೆ.

    ಬರೆ ಕುಸಿದು ಕಾಂಪೌಂಡ್ ಮೇಲೆ ಬಿದ್ದದೆ. ನಂತರ ಕುಸಿತದ ರಭಸಕ್ಕೆ ಕಾಂಪೌಂಡ್ ಶೆಡ್ ನ ಮೇಲೆ ಉರುಳಿದೆ. ಆದ್ದರಿಂದ ಶೆಡ್ ನಲ್ಲಿ ನಿಲ್ಲಿಸಿದ್ದ ವಾಹನಗಳು ತೀವ್ರ ಜಖಂಗೊಂಡಿದೆ. ಸದ್ಯಕ್ಕೆ ಈ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಸ್ಥಳಕ್ಕೆ ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ ತೆರಳಿ ರೆವಿನ್ಯೂ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸುಮಾರು 7 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನ ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ- ಪ್ರಾಣಾಪಾಯದಿಂದ ಪಾರು

    ಮೈಸೂರಿನ ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ- ಪ್ರಾಣಾಪಾಯದಿಂದ ಪಾರು

    ಮೈಸೂರು: ಜೀಪ್ ನ ಹಳೆಯ ಟೈರ್ ಗಳು ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಟಿ. ನರಸೀಪುರದ ಮಿನಿ ವಿಧಾನಸೌಧದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಮಿನಿ ವಿಧಾನಸೌಧದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಈ ಘಟನೆ ಸಂಭವಿಸಿದ್ದು, ವಾಹನಗಳ ಟೈರುಗಳು ಹಳೆಯದಾದ ಕಾರಣ ತಹಶೀಲ್ದಾರರ ಹಳೆಯ ಜೀಪು ಹಾಗೂ ಮೂರು ಬೈಕ್‍ಗಳು ಭಸ್ಮವಾಗಿದೆ.

    ಬೆಂಕಿ ಕಾಣಿಸಿಕೊಂಡ ಪರಿಣಾಮ ಯಾರಾದರೂ ಒಳಗೆ ಸಿಲುಕಿ ಕೊಂಡಿರಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಅವಘಡ ಸಂಭವಿಸಿದ ಕೂಡಲೇ ಎಲ್ಲರೂ ಹೊರಬಂದಿದ್ದಾರೆ. ಜೀಪ್ ನ ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಬೆಂಕಿ ಕಾಣಿಕೊಂಡಿದ್ದು, ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದ ಮೂರು ಬೈಕ್ ಗಳು ಕೂಡ ಬೆಂಕಿಗೆ ಆಹುತಿಯಾಗಿವೆ.

    ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

  • ಯಾದಗಿರಿಯಲ್ಲಿ ರಾಜ್ಯ ಹೆದ್ದಾರಿಯಾಯ್ತು ಹಳ್ಳ – ಸವಾರರು ಸಾವಿರ ಕಣ್ಣಿಟ್ಟು ವಾಹನ ಓಡಿಸಬೇಕು

    ಯಾದಗಿರಿಯಲ್ಲಿ ರಾಜ್ಯ ಹೆದ್ದಾರಿಯಾಯ್ತು ಹಳ್ಳ – ಸವಾರರು ಸಾವಿರ ಕಣ್ಣಿಟ್ಟು ವಾಹನ ಓಡಿಸಬೇಕು

    ಯಾದಗಿರಿ: ಕೆರೆ ನೀರಿನಿಂದ ಹೆದ್ದಾರಿ ಸೇತುವೆ ಮುಳುಗಿ ವಾಹನ ಸವಾರರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ.

    ಕೊಡಂಗಲ್-ಸಿಂದಗಿಯ, ರಾಜ್ಯ ಹೆದ್ದಾರಿ 16ರ ರಸ್ತೆ ಮೇಲೆ ಕೆರೆ ನೀರು 15 ದಿನಗಳಿಂದ ಪ್ರತಿನಿತ್ಯವು ಜಲಪಾತದಂತೆ ಹರಿಯುತ್ತಿದ್ದು, ಗ್ರಾಮಸ್ಥರು ಹಾಗೂ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಕೆರೆ ನೀರಿನ ಹರಿವಿನ ರಭಸಕ್ಕೆ ರಾಜ್ಯ ಹೆದ್ದಾರಿ 16ರಲ್ಲಿರುವ ಸೇತುವೆ ಕೊಚ್ಚಿಹೋಗಿದೆ. ಜಲಪಾತದ ರೀತಿಯಲ್ಲಿ ನೀರು ಹರಿಯುತ್ತಿದೆ.

    ಈ ರಸ್ತೆಯಲ್ಲಿ ಪ್ರಯಾಣ ಮಾಡುವವರು ಭಯಪಡುವಂತಾಗಿದೆ. ಹಗಲು ಹೊತ್ತಿನಲ್ಲಿ ಕಷ್ಟಪಟ್ಟು ವಾಹನ ಚಲಾಯಿಸಬಹುದು. ಆದರೆ ರಾತ್ರಿ ಇಲ್ಲಿ ಹೋಗೋದು ಕಷ್ಟ ಆದ್ದರಿಂದ ಅನಾಹುತದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಕಣ್ಣಲ್ಲಿ ಕಣ್ಣಿಟ್ಟು ವಾಹನ ನಡೆಸಬೇಕಾಗಿದೆ, ಹೀಗಾಗಲೇ ಇಲ್ಲಿ ಸಾಕಷ್ಟು ಅಪಘಾತಗಳು ಕೂಡ ಸಂಭವಿಸಿವೆ. ಇಷ್ಟೆಲ್ಲಾ ಆದರೂ ಕೂಡ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ಸೂಚನಾ ಫಲಕ ಕೂಡ ಹಾಕಿಲ್ಲ.

    ಹೀಗಾಗಿ ಇನ್ನಷ್ಟು ಅನಾಹುತಗಳು ಸಂಭವಿಸುವುದಕ್ಕೂ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.