Tag: ವಾಹನಗಳು

  • ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನ ಸೀಜ್- ಸಿಲಿಕಾನ್‍ ಸಿಟಿಯಲ್ಲಿ ಮಿಂಚಿನ ಕಾರ್ಯಾಚರಣೆ

    ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನ ಸೀಜ್- ಸಿಲಿಕಾನ್‍ ಸಿಟಿಯಲ್ಲಿ ಮಿಂಚಿನ ಕಾರ್ಯಾಚರಣೆ

    ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ವಿವಿಧೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್‍ಡೌನ್ ಬಿಗಿಗೊಳಿಸಿದ್ದು, ಪೊಲೀಸರೂ ಸಷ್ಟೇ ಕಾರ್ಯಪ್ರವೃತ್ತರಾಗಿದ್ದಾರೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.

    ಬೆಂಗಳೂರು ತುಮಕೂರು ಹೆದ್ದಾರಿಯ ಎಸ್‌ಆರ್‌ಎಸ್ ಬಸ್ ನಿಲ್ದಾಣದ ಬಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಂಚರಿಸುವ ಬೈಕ್ ಹಾಗೂ ಕಾರುಗಳನ್ನು ಸೀಜ್ ಮಾಡುತ್ತಿದ್ದಾರೆ. ಮಂಗಳವಾರ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಆನಂದರಾವ್ ಸರ್ಕಲ್ ಸೇರಿದಂತೆ ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಆಗಿತ್ತು. ಆ ಪ್ರಮಾಣದಲ್ಲಿ ವಾಹನಗಳು ರಸ್ತೆಗೆ ಇಳಿದಿದ್ದವು. ಈ ಹಿನ್ನೆಲೆ ಪೊಲೀಸರು ಲಾಕ್‍ಡೌನ್ ಬಿಗಿಗೊಳಿಸಿದ್ದಾರೆ. ಪ್ರತಿ ವಾಹನವನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

    ಲಾಕ್‍ಡೌನ್ ಇದ್ದರೂ ಇಂದು ಎಸ್‌ಆರ್‌ಎಸ್ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ಜಾಮ್ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಕಟ್ಟು ನಿಟ್ಟಾಗಿ ಪರಿಶೀಲನೆ ನಡೆಸಿದ್ದಾರೆ. ಒಂದೊಂದೇ ವಾಹನ ತಪಾಸಣೆ ಮಾಡಿ ಕಳಿಸುತ್ತಿದ್ದಾರೆ. ಇಂಟರ್ ವ್ಯೂವ್ ಇದೆ ಸರ್ ಬಿಡಿ, ಪಾಸ್ ಇಲ್ಲ ಎಂದು ಕುಂಟು ನೆಪ ಹೇಳಿಕೊಂಡು ಜನ ಓಡಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಇದೆ ಈ ಹೊತ್ತಲ್ಲಿ ಯಾವ ಇಂಟರ್ ವ್ಯೂವ್ ಇದೆ ತೋರಿಸು ಎಂದು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಪಾಸ್ ಇಲ್ಲ ಸರ್ ಬಿಡಿ ಎಂದು ಯುವಕ ಗೋಗರೆದರೂ, ಪಾಸ್ ಇಲ್ಲದೆ ಬಿಡುವುದಿಲ್ಲ ಎಂದು ಪೊಲೀಸರು ಖಡಾಖಂಡಿತವಾಗಿ ಹೇಳಿದ್ದಾರೆ.

    ಪ್ರತಿ ವಾಹನವನ್ನೂ ತಪಾಸಣೆ ನಡೆಸುತ್ತಿರುವುದರಿಂದ ಎಸ್‌ಆರ್‌ಎಸ್ ಸಿಗ್ನಲ್ ಬಳಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ನೂರಕ್ಕೂ ಹೆಚ್ಚು ಬೈಕ್‍ಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.

  • ಲಾಕ್‍ಡೌನ್ ಇದ್ರೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

    ಲಾಕ್‍ಡೌನ್ ಇದ್ರೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ವಾಹನ ದಟ್ಟಣೆ ಉಂಟಾಗಿದ್ದು, ಅಚ್ಚರಿ ಮೂಡಿಸಿದೆ.

    ಬೆಳಗ್ಗೆ ಈ ದೃಶ್ಯ ಕಂಡ ಸಿಲಿಕಾನ್ ಸಿಟಿ ಜನತೆಗೆ ಅಚ್ಚರಿ ಉಂಟಾಗಿದ್ದು, ಲಾಕ್‍ಡೌನ್ ಜಾರಿಯಲ್ಲಿದೆಯೋ ಅಥವಾ ಇಲ್ಲವೋ, ಇಷ್ಟು ಬೇಗ ಲಾಕ್‍ಡೌನ್ ಹಿಂಪಡೆದುಬಿಟ್ಟರಾ, ಪ್ರಧಾನಿ ಮೋದಿ ಲಾಕ್‍ಡೌನ್ ಆದೇಶ ಹಿಂಪಡೆದರಾ ಎಂಬ ಅನುಮಾನ ಮೂಡುವಷ್ಟರಮಟ್ಟಿಗೆ ವಾಹನಗಳು ರಸ್ತೆಗಿಳಿದಿವೆ.

    ಬೆಂಗಳೂರಿನ ಕೆ.ಆರ್.ಮಾರ್ಕೆಟ್‍ನಲ್ಲಿ ಈ ದೃಶ್ಯ ಕಂಡುಬಂದಿದ್ದು, ಲಾಕ್‍ಡೌನ್, ಟಫ್ ರೂಲ್ಸ್ ಮಧ್ಯೆ ಭಾರೀ ಪ್ರಮಾಣದ ವಾಹನಗಳು ರಸ್ತೆಗಿಳಿದಿವೆ. ಅಕ್ಕಪಕ್ಕದ ರಸ್ತೆಗಳೆಲ್ಲ ಬಂದ್ ಆದ ಹಿನ್ನೆಲೆ ಕೆ.ಆರ್.ಮಾರ್ಕೆಟ್ ನ ದೃಶ್ಯ ಬೆಚ್ಚಿ ಬೀಳುವಂತಿದೆ. ಬೇರೆ ದಿನಗಳಲ್ಲಿ ಪೀಕ್ ಅವರ್ ನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಕಂಡುಬರುವಂತ ಟ್ರಾಫಿಕ್ ಲಾಕ್‍ಡೌನ್‍ನಲ್ಲಿಯೂ ಕಂಡುಬಂದಿದೆ. ಹೀಗಾಗಿ ಬಂದ್ ಆಗಿದ್ದ ಟ್ರಾಫಿಕ್ ಸಿಗ್ನಲ್ ಗಳನ್ನು ಮತ್ತೆ ಪ್ರಾರಂಭಿಸಬೇಕು. ಸಿಗ್ನಲ್‍ನಲ್ಲಿ ಟ್ರಾಫಿಕ್ ನಿರ್ವಹಣೆಗೆ ಪೊಲೀಸರನ್ನು ನಿಯೋಜಿಸಬೇಕು ಆ ರೀತಿಯ ದೃಶ್ಯಗಳು ಎದುರಾಗಿವೆ.

    ಆನಂದ್ ರಾವ್ ಸರ್ಕಲ್ ನಲ್ಲಿ ಫುಲ್ ಜಾಮ್ ಆಗಿದ್ದು, ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿವೆ. ತಪಾಸಣೆ ಮಾಡಿ ಬಿಡುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಆನಂದ್ ರಾವ್ ಸರ್ಕಲ್, ಫ್ಲೈ ಓವರ್ ಕೆಳಗೆ ಇಂದು ಬೆಳಗ್ಗೆ ಟ್ರಾಫಿಕ್ ಫುಲ್ ಜಾಮ್ ಆಗಿದ್ದ ದೃಶ್ಯ ಕಂಡುಬಂದಿತ್ತು. ಅತ್ತ ಪ್ಯಾಲೆಸ್ ಗುಟ್ಟಹಳ್ಳಿ, ಅರಮನೆ ಮೈದಾನದ ಬಳಿ ಪೊಲೀಸರು ವಾಹನ ತಪಾಸಣೆಗೆ ಇಳಿದಿದ್ದು, ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

  • ಲಾಕ್‍ಡೌನ್ ಉಲ್ಲಂಘನೆ – 154 ವಾಹನ ಸೀಜ್

    ಲಾಕ್‍ಡೌನ್ ಉಲ್ಲಂಘನೆ – 154 ವಾಹನ ಸೀಜ್

    ಮಂಗಳೂರು: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 154 ವಾಹನಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಜಪ್ತಿ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಮಂಗಳೂರು ಕಮಿಷನರ್ ಡಾ.ಪಿ.ಎಸ್.ಹರ್ಷ, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಮಂಗಳೂರು ನಗರ ಕಮಿಷನರ್ ವ್ಯಾಪ್ತಿಯಲ್ಲಿ ಇಂದು ಕೊರೊನಾ ಲಾಕ್‍ಡೌನ್ ಆದೇಶ ಉಲ್ಲಂಘಿಸಿದ 154 ವಾಹನಗಳನ್ನು ಸೀಜ್  ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಲಾಕ್ ಡೌನ್ ಹಿನ್ನಲೆಯಲ್ಲಿ ದ.ಕ. ಜಿಲ್ಲಾದ್ಯಂತ ದಿನಬಳಕೆ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ಬೆಳಿಗ್ಗೆ 7ರಿಂದ 12ರವರೆಗೂ ಖರೀದಿಗಾಗಿ ವಾಹನಗಳಿಗೂ ಅವಕಾಶ ನೀಡಲಾಗಿತ್ತು. ಆದರೆ ಮಧ್ಯಾಹ್ನ 12 ಗಂಟೆಯ ಬಳಿಕವೂ ಕೆಲವು ವಾಹನ ಸವಾರರು ರಸ್ತೆಯಲ್ಲಿ ಸಂಚಾರ ನಡೆಸಿ ಕೊರೊನಾ ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡಿದ್ದರು. ಪೊಲೀಸ್ ಆಯುಕ್ತರು ಮೊದಲೇ ಎಚ್ಚರಿಕೆ ನೀಡಿದ್ದರೂ ಆದೇಶ ಧಿಕ್ಕರಿಸಿದ ರಸ್ತೆಗಿಳಿದ ವಾಹನಗಳನ್ನು ಕಮಿಷನರ್ ಆದೇಶದಂತೆ ಸೀಜ್ ಮಾಡಲಾಗಿದೆ.

  • ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್-ಸುಳ್ಳು ಹೇಳಿ ತಗ್ಲಾಕೊಂಡ ಜನ

    ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್-ಸುಳ್ಳು ಹೇಳಿ ತಗ್ಲಾಕೊಂಡ ಜನ

    – ಗಾಡಿ ಪಾರ್ಕ್ ಮಾಡಿ, ಮನೆಗೆ ಹೋಗಿ

    ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇಂದು ಬೆಳ್ಳಂಬೆಳಗ್ಗೆ ವಾಕಿಂಗ್ ಡ್ರೆಸ್‍ನಲ್ಲೇ ರಸ್ತೆಗಿಳಿದಿದ್ದಾರೆ. ತಾವೇ ಖುದ್ದು ವಾಹನ ತಪಾಸಣೆ ನಡೆಸಿ, ಮುಲಾಜಿಲ್ಲದೆ ವಾಹನಗಳನ್ನು ಸೀಜ್ ಮಾಡಿದ್ದಾರೆ.

    ನಗರದ ಟೌನ್ ಹಾಲ್ ಬಳಿ ಭಾಸ್ಕರ್ ರಾವ್ ಚೆಕಿಂಗ್ ಮಾಡಿದ್ದು, ಎಲ್ಲಿಂದ ಬರ್ತಾ ಇರೋದು, ಗಾಡಿ ಸೈಡ್‍ಗೆ ಹಾಕು, ಪಾಸ್ ಇದ್ಯಾ, ಗಾಡಿ ನಿಲ್ಲಿಸು. ದೂರ ನಿಲ್ಲಪ್ಪ ನೀನು ಎಂದು ಹೇಳುತ್ತಲೇ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಸೀಜ್ ಮಾಡಿದ್ದಾರೆ. ಹೀಗೆ ಸುಖಾಸುಮ್ಮನೆ ಓಡಾಡುತ್ತಿದ್ದ ಇನ್ನೋವಾ ಕಾರನ್ನು ಮುಲಾಜಿಲ್ಲದೆ ಸೀಜ್ ಮಾಡಿದ್ದಾರೆ.

    ಕಮೀಷನರ್ ಎದುರೇ ಪಾಸ್ ಇಲ್ಲದೆ ವಾಹನಗಳ ಓಡಾಟ ಹೆಚ್ಚಾಗಿದ್ದು, ಹಲವು ಬೈಕ್, ಕಾರುಗಳನ್ನು ಜಪ್ತಿ ಮಾಡಿಸಿದ್ದಾರೆ. ಕೆಎಸ್‍ಆರ್‍ಟಿಸಿ ಸಿಬ್ಬಂದಿ, ಆರ್ಮಿ ಪ್ಲೇಟ್ ಹಾಕಿದ್ದ ವಾಹನಗಳು ಸೇರಿ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೈಕ್ ನಲ್ಲಿ ದೇವಸ್ಥಾನಕ್ಕೆ ಹೊರಟವರು, ಅಂತ್ಯಕ್ರಿಯೆಗೆ ಹೊರಟವರು, ತರಕಾರಿಗೆ ಹೊರಟವರು, ನೆಂಟರ ಮನೆಗೆ ಹೊರಟವರು ಕಮೀಷನರ್‍ಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಕಮಿಷನರ್ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ವಾಹನ ತಪಾಸಣೆ ಸರಿಯಾಗಿ ಅಗ್ತಿಲ್ಲ. ಮತ್ತಷ್ಟು ಬಿಗಿಗೊಳಿಸಿ ಚೆಕಿಂಗ್ ಮಾಡಬೇಕು ಎಂದು ಕಂಟ್ರೋಲ್ ರೂಂ ಮೂಲಕ ಮತ್ತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಾಕಿ ಟಾಕಿ ಮೂಲಕ ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡಿ. ಬಹುತೇಕ ಮಂದಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಆದರೂ ತಪಾಸಣೆ ಸರಿಯಾಗಿ ಅಗ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

  • ಸಿಸಿಟಿವಿ ದೃಶ್ಯ ಆಧರಿಸಿ ವಾಹನ ಮಾಲೀಕರಿಗೆ ನೋಟಿಸ್- 303 ವಾಹನಗಳು ಸೀಜ್

    ಸಿಸಿಟಿವಿ ದೃಶ್ಯ ಆಧರಿಸಿ ವಾಹನ ಮಾಲೀಕರಿಗೆ ನೋಟಿಸ್- 303 ವಾಹನಗಳು ಸೀಜ್

    – ಕೊರೊನಾ ನಿವಾರಣೆಗೆ ಮಹಾ ಪ್ರತ್ಯಂಗಿರ ಹೋಮ

    ಮೈಸೂರು: ಕೊರೊನಾ ನಿವಾರಣೆಗೆ ಒಂದೆಡೆ ಪ್ರತ್ಯಂಗಿರ ಹೋಮ ಮಾಡಲಾಗುತ್ತಿದ್ದು, ಇನ್ನೊಂದೆಡೆ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಅನಗತ್ಯವಾಗಿ ಸಂಚರಿಸುವ ವಾಹನಗಳ ಮಾಲೀಕರಿಗೆ ನೋಟಿಸ್ ನೀಡುತ್ತಿದ್ದಾರೆ.

    ಕೊರೊನಾ ಸೋಂಕು ಹರಡುವಿಕೆಯ ಭೀತಿಯಲ್ಲಿ ಜನರ ಅನಗತ್ಯ ಸಂಚಾರ ನಿಲ್ಲಿಸಲು ಮೈಸೂರು ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಕಾರು ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡರಿಂದ ನೋಟಿಸ್ ನೀಡಲಾಗತ್ತಿದೆ. ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದೀರಿ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‍ನಲ್ಲಿ ಪ್ರಶ್ನಿಸಲಾಗಿದೆ.

    ಕಾರು ಮಾಲೀಕರಿಗೆ ಪೊಲೀಸರಿಂದ ನೋಟಿಸ್ ನೀಡಲಾಗುತ್ತಿದ್ದು, ಲಾಕ್‍ಡೌನ್ ವೇಳೆ ಅನಗತ್ಯವಾಗಿ ನಗರದಲ್ಲಿ ಸಂಚರಿಸಿರುವ 303 ವಾಹನಗಳನ್ನು ಸೀಜ್ ಮಾಡಲಾಗಿದೆ. 285 ದ್ವಿಚಕ್ರ ವಾಹನಗಳು, 10 ತ್ರಿ ಚಕ್ರ ವಾಹನಗಳು, 08 ನಾಲ್ಕು ಚಕ್ರ ವಾಹನಗಳು ಸೇರಿ ಒಟ್ಟು 303 ವಾಹನಗಳನ್ನು ಸೀಜ್ ಮಾಡಲಾಗಿದೆ.

    ಮಹಾಪ್ರತ್ಯಂಗಿರ ಹೋಮ

    ಮೈಸೂರಿನ ಶೆಟ್ಟನಾಯಕನಹಳ್ಳಿಯ ಮಹಾಪ್ರತ್ಯಂಗಿರ ದೇವಾಲಯದಲ್ಲಿ ಕೊರೊನಾ ನಿವಾರಣೆಗಾಗಿ ಮಹಾಪ್ರತ್ಯಂಗಿರ ಹೋಮ ಮಾಡಲಾಗಿದ್ದು, ಪೂಜೆ ನಡೆದಿದೆ. ಸರ್ಕಾರದ ಆದೇಶದಂತೆ ದೇವಾಲಯ ಬಾಗಿಲು ಹಾಕಿದ್ದ ಅರ್ಚಕರು, ನಿನ್ನೆ ರಾತ್ರಿ ದೇವಾಲಯದ ಆವರಣದಲ್ಲಿ ಕೋವಿಡ್-19 ಶತ್ರು ಸಂಹಾರ ಪ್ರತ್ಯಂಗಿರ ಹೋಮ ನೆರವೇರಿಸಿದ್ದಾರೆ.

    ಪ್ರತ್ಯಂಗಿರ ದೇವಾಲಯದ ಸಂಸ್ಥಾಪಕ ಯಾಗವಿದಾನಂದ ತಾಂತ್ರಿಕ್ ಅರ್ಚಕರು ಹೋಮ ಮಾಡಿದ್ದು, ಜಗತ್ತಿಗೆ ಪ್ರತ್ಯಂಗಿರ ದೇವಿ ತಾಯಿಯಾಗಿದ್ದಾಳೆ. ಇಂದು ಜಗತ್ತಿಗೆ ಕಂಟಕವಾಗಿರೋ ಕೊರೊನಾ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ನೀವೂ ನಿಮ್ಮ ಮನೆಗಳಲ್ಲಿ ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಿ. ಆಸ್ತಿಕರಾಗಿ ನಾವೆಲ್ಲ ಕೊರೊನಾ ವಿರುದ್ಧ ಹೋರಾಡೋಣ ಎಂದು ಹೇಳಿದ್ದಾರೆ.

  • ಬಾಗಲಕೋಟೆಯಲ್ಲಿ ಮೂರು ಚೆಕ್ ಪೋಸ್ಟ್ – ಸರ್ಕಾರಿ, ಖಾಸಗಿ ವಾಹನಗಳಲ್ಲಿ ಬರುವವರ ತಪಾಸಣೆ

    ಬಾಗಲಕೋಟೆಯಲ್ಲಿ ಮೂರು ಚೆಕ್ ಪೋಸ್ಟ್ – ಸರ್ಕಾರಿ, ಖಾಸಗಿ ವಾಹನಗಳಲ್ಲಿ ಬರುವವರ ತಪಾಸಣೆ

    ಬಾಗಲಕೋಟೆ: ಕೊರೊನಾ ಭೀತಿ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಮೂರು ಕಡೆಗಳಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್ ತೆರೆಯುವ ಮೂಲಕ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡುತ್ತಿದೆ.

    ಜಿಲ್ಲೆಯ ಇಳಕಲ್ ತಾಲೂಕಿನ ಗುಗ್ಗಲಮರಿ, ಮುಧೋಳ ತಾಲೂಕಿನ ಲೋಕಾಪುರ, ಬಾದಾಮಿ ತಾಲೂಕಿನ ಕುಳಗೇರಿ ಬಳಿಯಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್‌ಗಳನ್ನು ತೆರೆದಿದೆ. ಶನಿವಾರ ರಾತ್ರಿಯಿಂದಲೇ ಈ ಚೆಕ್ ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ ಬರುವ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ.

    ಇಳಕಲ್ ತಾಲೂಕಿನ ಗುಗ್ಗಲಮರಿ ಚೆಕ್ ಪೋಸ್ಟ್‌ನಲ್ಲಿ ಶನಿವಾರ ರಾತ್ರಿಯಿಂದ ಬೆಳಿಗ್ಗೆಯವರೆಗೆ 65 ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ಪ್ರತಿ ಬಸ್ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಖಾಸಗಿ ವಾಹನಗಳ ತಪಾಸಣೆ ಕೂಡಾ ಮಾಡಲಾಗುತ್ತಿದೆ.

    ಮಕ್ಕಳು, ಮಹಿಳೆಯರು ಸೇರಿ ಬಸ್‍ನಲ್ಲಿದ್ದ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್‍ಗೆ ಒಳಪಡಿಸಲಾಗುತ್ತಿದೆ. ಪ್ರತಿಯೊಂದು ಚೆಕ್ ಪೋಸ್ಟ್‌ಗಳಿಗೂ ಆಯಾ ತಾಲೂಕಿನ ವೈದ್ಯಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ವೈದ್ಯರು, ನರ್ಸ್‍ಗಳನ್ನು ನಿಯೋಜನೆ ಮಾಡಲಾಗಿದೆ.

  • ವಾಹನಗಳಿಗೆ ಐಎನ್‍ಡಿ ನಾಮಫಲಕ ಕಡ್ಡಾಯ, ಸ್ಟಿಕ್ಕರ್ ನಂಬರ್ ಪ್ಲೇಟಿಗೆ ಗುಡ್ ಬೈ

    ವಾಹನಗಳಿಗೆ ಐಎನ್‍ಡಿ ನಾಮಫಲಕ ಕಡ್ಡಾಯ, ಸ್ಟಿಕ್ಕರ್ ನಂಬರ್ ಪ್ಲೇಟಿಗೆ ಗುಡ್ ಬೈ

    ದಾವಣಗೆರೆ: ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಎಲ್ಲ ವಾಹನ ಸವಾರರು ಕಡ್ಡಾಯವಾಗಿ ಭಾರತೀಯ ಮೋಟರು ವಾಹನ ಕಾಯ್ದೆಯ ನಿಯಮಾನುಸಾರ ನೋಂದಣಿ ಫಲಕಗಳನ್ನು (ನಂಬರ್ ಪ್ಲೇಟ್) ಅಳವಡಿಸಿಕೊಳ್ಳಬೇಕು. ನಿರ್ಧಿಷ್ಟ ಅಳತೆ ಹಾಗೂ ನಂಬರ್ ಪ್ಲೇಟ್‍ನ ಮೂರನೇ ಒಂದು ಭಾಗದಲ್ಲಿ ಸರ್ಕಾರದ ಹಾಲೋಗ್ರಾಮ್ ಮತ್ತು ಐ.ಎನ್.ಡಿ ಎಂದು ನಮೂದಾಗಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಾಹನ ನೋಂದಣಿ ಫಲಕಗಳ ಕಾನೂನು ತಯಾರಿಸುವ ಕುರಿತು ಏರ್ಪಡಿಸಿಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ನೋಂದಣಿ ಫಲಕಗಳನ್ನು ಸ್ವ ಇಚ್ಛೆಯಂತೆ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತದ ಸಂದರ್ಭದಲ್ಲಿ ವಾಹನಗಳ ನೋಂದಣಿ ಪತ್ತೆ ಹಚ್ಚುವುದು ಮತ್ತು ಅಪರಾಧ ಮಾಡಿದ ಸಂದರ್ಭದಲ್ಲಿ ವಾಹನಗಳ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಅಲ್ಲದೆ ಇದು ಭಾರತೀಯ ಮೋಟರು ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಇನ್ನು ಮುಂದೆ ಪ್ರತಿಯೊಬ್ಬ ವಾಹನ ಸವಾರರು ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

    ವಾಹನ ನೊಂದಣಿ ಸಂಖ್ಯೆಯ ಫಲಕದ ಅಕ್ಷರಗಳು ಆಂಗ್ಲ ಭಾಷೆ ಮತ್ತು ಅಂಕಿಗಳು ಹಿಂದೂ ಅರೇಬಿಕ್ ಸಂಖ್ಯೆಯಲ್ಲಿರಬೇಕು. ವಾಹನಕ್ಕೆ ಹಿಂಬದಿ ಮತ್ತು ಮುಂಬದಿ ನೋಂದಣಿ ಫಲಕ ಹೊಂದಿರಬೇಕು. ಇದರ ಅಳತೆ 1.0 ಎಂ.ಎಂ ಇರಬೇಕು. ಅಲ್ಯೂಮಿನಿಯಂ ಲೋಹದಿಂದ ಮಾಡಿದ್ದಾಗಿರಬೇಕು. ಐ.ಎಸ್.ಓ 759 ಮಾದರಿಯಲ್ಲಿ ರಚಿತವಾಗಿರಬೇಕು. ಅದರ ಅಂಚುಗಳು ಹಾಳಾಗದಂತೆ 10 ಎಂ.ಎಂ ದುಂಡದಾಗಿ ಮಾಡಿಸಬೇಕು. 2 ಮತ್ತು 3 ಚಕ್ರದ ವಾಹನಗಳಿಗೆ 200*100 ಎಂ.ಎಂ ಗಾತ್ರದ ನೊಂದಣಿ ಫಲಕ ಹೊಂದಿರಬೇಕು ಎಂದು ವಿವರಿಸಿದರು.

    ಕಾರುಗಳ ನಂಬರ್ ಪ್ಲೇಟ್ ಅಳತೆ 500*200 ಎಂ.ಎಂ,. ಲಘು ಮತ್ತು ಭಾರೀ ಗಾತ್ರದ ವಾಹನಗಳಿಗೆ 340*200 ಎಂ.ಎಂ ಗಾತ್ರದ ನೋಂದಣಿ ಫಲಕ ಹೊಂದಿರಬೇಕು. 2 ಮತ್ತು 3 ಚಕ್ರದ, ಮತ್ತು 4 ಚಕ್ರದ ವಾಹನಗಳ ಮುಂಭಾಗದ ನೊಂದಣಿ ಫಲಕದಲ್ಲಿ ಅಕ್ಷರಗಳ ಎತ್ತರ 35 ಎಂ.ಎಂ, 7 ಎಂ.ಎಂ ದಪ್ಪ ಹಾಗೂ ಹಿಂಭಾಗದ ನೋಂದಣಿ ಫಲಕದಲ್ಲಿ ಅಕ್ಷರಗಳ ಎತ್ತರ 40 ಎಂ.ಎಂ, 7 ಎಂ.ಎಂ ದಪ್ಪ ಇರಬೇಕು. ಮಧ್ಯದ ಅಂತರ 5 ಎಂ.ಎಂ ಇರಬೇಕು ಎಂದು ಸೂಚಿಸಿದ್ದಾರೆ.

    ನೋಂದಣಿ ಫಲಕಗಳಲ್ಲಿ ಅಲಂಕಾರಿಕ ಅಕ್ಷರಗಳು, ಯಾವುದೇ ಚಿತ್ರ, ಹೆಸರು, ದೇವರ ಚಿತ್ರಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಯಾವುದೇ ವಾಹನಗಳ ನೊಂದಣಿ ಫಲಕವನ್ನು ಹಾಕಿಸುವ ಸಮಯದಲ್ಲಿ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ನಿಯಮವನ್ನು ಇಂದಿನಿಂದಲೇ ಜಾರಿಗೊಳಿಸಲಾಗಿದ್ದು, ನಿಯಮ ಪಾಲಿಸದಿದ್ದಲ್ಲಿ 1,000ರೂ. ದಂಡ ವಿಧಿಸಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ಕಾಸು ಕೊಡದಿದ್ರೆ ಬೀದಿ ರಂಪಾಟ- ಕಾರನ್ನು ಅಡ್ಡಗಟ್ಟಿ ಕಾಟ ಕೊಟ್ಟ ಕುಡುಕ

    ಕಾಸು ಕೊಡದಿದ್ರೆ ಬೀದಿ ರಂಪಾಟ- ಕಾರನ್ನು ಅಡ್ಡಗಟ್ಟಿ ಕಾಟ ಕೊಟ್ಟ ಕುಡುಕ

    ಬೆಂಗಳೂರು: ಗಾಂಜಾ, ಮದ್ಯ ಹೀಗೆ ದುಷ್ಚಟಗಳಿಗೆ ದಾಸನಾಗಿರುವ ವ್ಯಕ್ತಿಯೋರ್ವ ರಸ್ತೆ ಮಧ್ಯೆ ಮಲಗಿ, ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಹಣ ನೀಡುವಂತೆ ಕಾಟ ಕೊಟ್ಟ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.

    ನೆಲಮಂಗಲ ಪಟ್ಟಣದ ಕೆಇಬಿ ಆಂಜನೇಯ ದೇವಾಲಯದ ರಸ್ತೆಯಲ್ಲಿ ಕುಡುಕ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾನೆ. ರಸ್ತೆಯಲ್ಲಿ ಬರುವ ಕಾರು, ಬೈಕ್‍ಗಳಿಗೆ ಅಡ್ಡ ಮಲಗಿ ಹಣಕ್ಕೆ ಬೇಡಿಕೆ ಇಟ್ಟು ತೊಂದರೆ ಕೊಡುತ್ತಾ, 100 ರೂ. ಕೊಡುವವರೆಗೂ ಬಿಡದೇ ರಂಪಾಟ ಮಾಡಿ ಹಣ ತೆಗೆದುಕೊಳ್ಳುತ್ತಾನೆ. ಒಂದು ವೇಳೆ ಆತ ಕೇಳಿದಾಗ ಹಣ ನೀಡದಿದ್ದರೆ ಬೀದಿ ರಂಪಾಟ ಮಾಡಿ ಗಲಾಟೆ ಮಾಡುತ್ತಾನೆ. ಹೀಗಾಗಿ ಈತನ ಕಾಟ ತಾಳಲಾರದೆ ಜನರು ಹಣ ಕೊಟ್ಟು ದಯವಿಟ್ಟು ಕಾಟ ಕೊಡಬೇಡಪ್ಪ ಎಂದು ಜಾಗ ಖಾಲಿ ಮಾಡುತ್ತಾರೆ.

    ಪ್ರತಿನಿತ್ಯ ಈ ವ್ಯಕ್ತಿಯದ್ದು ಇದೇ ಗೋಳಾಗಿ ಬಿಟ್ಟಿದೆ. ಈತನ ಪುಂಡಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಗಾಂಜಾ ಇನ್ನಿತರ ಮಾದಕವಸ್ತುಗೆ ಯುವಕರು ಮಾರು ಹೋಗಿದ್ದು, ನಶೆಯಲ್ಲಿ ಈ ರೀತಿ ಬೀದಿ ರಂಪಾಟ ಮಾಡಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾರೆ.

  • ರಸ್ತೆ ಮಧ್ಯೆ ಕೂತು ಎಣ್ಣೆ ಪಾರ್ಟಿ ಮಾಡಿದ ಭೂಪ

    ರಸ್ತೆ ಮಧ್ಯೆ ಕೂತು ಎಣ್ಣೆ ಪಾರ್ಟಿ ಮಾಡಿದ ಭೂಪ

    – ಲಾರಿ ಬಂದರೂ ಕ್ಯಾರೆ ಮಾಡಿಲ್ಲ

    ಕೋಲಾರ: ಟಿವಿಯಲ್ಲಿ ಬರುವ ಆಸೆಗೆ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಕೂತು ಕಂಠ ಪೂರ್ತಿ ಕುಡಿದು ಗಲಾಟೆ ಮಾಡಿದ ಘಟನೆ ಕೋಲಾರದ ಕೆಜಿಎಫ್ ನಗರದಲ್ಲಿ ನಡೆದಿದೆ.

    ಕೆಜಿಎಫ್ ನಗರದ ಪಾರಂಡಳ್ಳಿ ರಸ್ತೆಯಲ್ಲಿ ಕುಡುಕ ಅವಾಂತರ ಮಾಡಿದ್ದಾನೆ. ಸಾವನ್ನು ಲೆಕ್ಕಿಸದೆ ರಸ್ತೆ ಮಧ್ಯೆ ಕುಳಿತು ಕುಡುಕ ಎಣ್ಣೆ ಪಾರ್ಟಿ ಮಾಡಿದ್ದಾನೆ. ರಸ್ತೆಯಲ್ಲಿಯೇ ಕುಳಿತು ಕಂಠ ಪೂರ್ತಿ ಕುಡಿದು ಎಲ್ಲರಿಗೂ ಫುಲ್ ಅವಾಜ್ ಹಾಕಿ ಗಲಾಟೆ ಮಾಡಿದ್ದಾನೆ.

    ಅಷ್ಟೇ ಅಲ್ಲದೆ ಪಾದಚಾರಿಗಳಿಗೆ ಆವಾಜ್ ಹಾಕಿ ಕಿರಿಕಿರಿ ಮಾಡುತ್ತ ತೊಂದರೆ ಕೊಟ್ಟಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದ ವೇಳೆ, ವಿಡಿಯೋ ಮಾಡಿ ಟಿವಿಯಲ್ಲಿ ಬರುತ್ತಲ್ಲ ಎಂದು ಕೇಳಿರುವುದು ಸೆರೆಯಾಗಿದೆ. ಟಿವಿಯಲ್ಲಿ ಬರುವ ಆಸೆಯಿಂದ ಕುಡುಕ ಈ ರೀತಿ ಅವಾಂತರ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

    ರಸ್ತೆಯಲ್ಲಿ ಕೂತು ಕುಡುಕ ಮಾಡಿದ ಅವಾಂತರಕ್ಕೆ ವಾಹನ ಸವಾರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯಲ್ಲಿ ಲಾರಿ ಬರುತ್ತಿದ್ದರೂ ಕ್ಯಾರೆ ಅನ್ನದೆ ಈ ವ್ಯಕ್ತಿ ಕುಡಿಯುತ್ತ ಕುಳಿತ್ತಿದ್ದನು. ಹೀಗಾಗಿ ಲಾರಿ ಚಾಲಕನೇ ವಾಹನವನ್ನು ರಸ್ತೆ ಬದಿಯಿಂದ ಚಲಾಯಿಸಿಕೊಂಡು ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

  • ಕುಸಿದ ಅಟೋಮೊಬೈಲ್ ಕ್ಷೇತ್ರ – ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆ

    ಕುಸಿದ ಅಟೋಮೊಬೈಲ್ ಕ್ಷೇತ್ರ – ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆ

    ನವದೆಹಲಿ: ಸತತ 8 ತಿಂಗಳಿನಿಂದ ಅಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಇಳಿಕೆ ಆಗುತ್ತಿದ್ದು ಆಗಸ್ಟ್ ತಿಂಗಳಿನಲ್ಲೂ ಮುಂದುವರಿದಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆಯಾಗಿದ್ದು 1997-98ರ ನಂತರ ಅತಿ ಕಡಿಮೆ ಪ್ರಯಾಣಿಕ ವಾಹನ ಮಾರಾಟವಾದ ತಿಂಗಳು ಎಂಬ ಕೆಟ್ಟ ಇತಿಹಾಸವನ್ನು ಬರೆದಿದೆ.

    2018ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಪ್ರಯಾಣಿಕ ವಾಹನಗಳ ಮಾರಾಟ ಶೇ.31.57 ಕುಸಿತ ದಾಖಲಿಸಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 2,87,198 ಪ್ರಯಾಣಿಕ ವಾಹನಗಳು ಮಾರಾಟಗೊಂಡರೆ ಕಳೆದ ತಿಂಗಳು ಒಟ್ಟು 1,96,524 ವಾಹನಗಳು ಮಾರಾಟಗೊಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ತಿಂಗಳ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: 2 ಲಕ್ಷ ರೂ. ಡಿಸ್ಕೌಂಟ್ ಆಫರ್ – ಯಾವ ಕಾರಿನ ಬೆಲೆ ಎಷ್ಟು ಇಳಿಕೆ?

    ಕಳೆದ ತಿಂಗಳು ಪ್ರಯಾಣಿಕ ಕಾರು ವಿಭಾಗ ಭಾರೀ ಹೊಡೆತ ತಿಂದಿದೆ. ಪ್ರಯಾಣಿಕ ಕಾರುಗಳ ಮಾರಾಟ ಶೇ.41.09 ರಷ್ಟು ಇಳಿಕೆಯಾಗಿದೆ. 2018ರ ಆಗಸ್ಟ್ ನಲ್ಲಿ 1,96,847 ಕಾರುಗಳು ಮಾರಾಟಗೊಂಡಿದ್ದರೆ ಈ ಬಾರಿ 1,15,957 ಕಾರುಗಳು ಮಾರಾಟ ಕಂಡಿವೆ.

    ಯುಟಿಲಿಟಿ ವೆಹಿಕಲ್(ಸಣ್ಣ ಪ್ರಮಾಣದ ವಸ್ತುಗಳನ್ನು ಸಾಗಿಸುವ ವಾಹನ) ಮಾರಾಟ ಕಳೆದ ವರ್ಷದ ಆಗಸ್ಟ್ ಗೆ ಹೋಲಿಸಿದರೆ ಸ್ವಲ್ಪ ಕುಸಿತ ಕಂಡಿದೆ. ಈ ಬಾರಿ ಶೇ.2.2 ರಷ್ಟು ಮಾರಾಟ ಕುಸಿದಿದೆ. ಈ ಬಾರಿ 71,085 ವಾಹನಗಳು ಮಾರಾಟಗೊಂಡರೆ ಕಳೆದ ಆಗಸ್ಟ್ ನಲ್ಲಿ 73,085 ವಾಹನಗಳು ಮಾರಾಟ ಕಂಡಿತ್ತು.

    ವ್ಯಾನ್ ವಿಭಾಗದಲ್ಲಿ ಶೇ.47.36 ಇಳಿಕೆಯಾಗಿದ್ದು ಕಳೆದ ಬಾರಿ 17,266 ವಾಹನಗಳು ಮಾರಾಟಗೊಂಡಿದ್ದು, ಈ ಆಗಸ್ಟ್ ತಿಂಗಳಿನಲ್ಲಿ 9,089 ವಾಹನಗಳು ಮಾರಾಟಗೊಂಡಿದೆ.

    ದ್ವಿಚಕ್ರ ವಾಹನಗಳ ಮಾರಾಟದಲ್ಲೂ ಶೇ.22.24 ರಷ್ಟು ಇಳಿಕೆಯಾಗಿದೆ. ಈ ಬಾರಿ 15,14,196 ವಾಹನಗಳು ಮಾರಾಟಗೊಂಡರೆ ಕಳೆದ ಬಾರಿ 19,47,304 ದ್ವಿಚಕ್ರ ವಾಹನಗಳು ಮಾರಾಟಗೊಂಡಿತ್ತು. ಸ್ಕೂಟರ್ಸ್, ಮೋಟರ್ ಸೈಕಲ್, ಮೊಪೆಡ್ ಗಳ ಮಾರಾಟ ಅನುಕ್ರಮವಾಗಿ ಶೇ.22, ಶೇ.22 ಮತ್ತು ಶೇ.21 ರಷ್ಟು ಇಳಿಕೆ ಕಂಡಿದೆ. ಮಧ್ಯಮ ಮತ್ತು ಹೆವಿ ಕಮರ್ಷಿಯಲ್ ವಾಹನ ಮಾರಾಟದಲ್ಲಿ ಶೇ.54.3 ಇಳಿಕೆಯಾಗಿದೆ. ಈ ಬಾರಿಯ ಆಗಸ್ಟ್ ನಲ್ಲಿ 15,573 ವಾಹನಗಳು ಮಾರಾಟಗೊಂಡಿದ್ದರೆ ಕಳೆದ ಬಾರಿ 34,073 ವಾಹನಗಳು ಮಾರಾಟ ಕಂಡಿತ್ತು. ಲೈಟ್ ಕಮರ್ಷಿಯಲ್ ವಾಹನಗಳು ಕಳೆದ ಆಗಸ್ಟ್ ನಲ್ಲಿ 50,595 ಮಾರಾಟ ಕಂಡಿದ್ದರೆ ಈ ಬಾರಿ 36,324 ವಾಹನಗಳು ಮಾರಾಟ ಕಂಡಿದೆ.

    ಒಟ್ಟು ದೇಶದಲ್ಲಿ 97,32,040 ವಾಹನಗಳು ಮಾರಾಟವಾಗಿದೆ. 2018ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.15.89 ರಷ್ಟು ಕುಸಿತಗೊಂಡಿದ್ದು, 1,15,70,401 ವಾಹನಗಳು ಮಾರಾಟಗೊಂಡಿತ್ತು.

    2018 ಏಪ್ರಿಲ್ ಆಗಸ್ಟ್ ನಡುವೆ ಒಟ್ಟು 1,36,99,848 ವಾಹನಗಳು ಮಾರಾಟ ಕಂಡಿದ್ದರೆ 2019ರ ಏಪ್ರಿಲ್ ಆಗಸ್ಟ್ ನಡುವೆ 1,20,20,944 ವಾಹನಗಳು ಮಾರಾಟಗೊಂಡಿದೆ.