Tag: ವಾಹನಗಳು

  • DL, RC, ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

    DL, RC, ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಕೊರೊನಾ ಹಿನ್ನೆಲೆ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ವಾಹನ ಪರ್ಮಿಟ್‍ಗಳ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯ ಸರ್ಕಾರಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನಿರ್ದೇಶನ ನೀಡಿದ್ದು, ವಾಹನಗಳ ಫಿಟ್ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಹಾಗೂ ಇತರೆ ದಾಖಲೆಗಳ ಅವಧಿಯನ್ನು ಕೊರೊನಾ ಕಾರಣದಿಂದಾಗಿ ವಿಸ್ತರಿಸಲಾಗಿದೆ. ಫೆಬ್ರವರಿ 1, 2020 ರಿಂದ ಮಾರ್ಚ್ 21, 2021ರೊಳಗೆ ಅವಧಿ ಮುಗಿಯುವ ದಾಖಲೆಗಳಿಗೆ ಇದು ಅನ್ವಯವಾಗಲಿದೆ.

    ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಅರ್ಜಿ ಸಲ್ಲಿಸಿದವರಿಗೆ ಕೊರೊನಾ ಕಾರಣದಿಂದಾಗಿ ದಾಖಲೆಗಳನ್ನು ನವೀಕರಿಸುವಲ್ಲಿ ವಿಳಂಬವಾಗಿದ್ದು, ಇವುಗಳಿಗೂ ಫೆಬ್ರವರಿ 1ಕ್ಕೆ ಮುಕ್ತಾಯಗೊಳ್ಳುವ ದಾಖಲೆಗಳ ಅವಧಿಯನ್ನು ಜೂನ್ 30ರ ವರೆಗೆ ಮಾನ್ಯವೆಂದು ಪರಿಗಣಿಸಬಹದು ಎಂದು ತಿಳಿಸಲಾಗಿದೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಿಕರು, ವಾಹನ ಸವಾರರು, ಇತರ ಸಂಸ್ಥೆಗಳಿಗೆ ದಾಖಲೆಗಳ ಕುರಿತು ಕಿರುಕುಳ, ತೊಂದರೆ ನಿಡದೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಸಲಹಾ ಪತ್ರವನ್ನು ಜಾರಿಗೆ ತರಬೇಕೆಂದು ಸಚಿವಾಲಯ ಮನವಿ ಮಾಡಿದೆ.

  • ಸಕಲೇಶಪುರದ ಬಳಿ ನಾಳೆ ಬೆಂಗಳೂರು-ಮಂಗಳೂರು ಹೆದ್ದಾರಿ ಬಂದ್

    ಸಕಲೇಶಪುರದ ಬಳಿ ನಾಳೆ ಬೆಂಗಳೂರು-ಮಂಗಳೂರು ಹೆದ್ದಾರಿ ಬಂದ್

    – ವಾಹನ ಸಂಚಾರ ನಿರ್ಬಂಧ, ಬದಲಿ ವ್ಯವಸ್ಥೆ

    ಹಾಸನ: ಸಕಲೇಶಪುರ ನಗರದ ಶ್ರೀ ಸಕಲೇಶ್ವರ ಸ್ವಾಮಿಯ ರಥೋತ್ಸವ ಫೆ.28 ರಂದು ನಡೆಯಲಿದೆ. ಹೀಗಾಗಿ ಬೆಂಗಳೂರು-ಮಂಗಳೂರು ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.

    ರಥೋತ್ಸವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಕಲೇಶ್ವರ ಸ್ವಾಮಿ ದೇವಸ್ಥಾನದ ವೃತ್ತದಿಂದ ಪುರಸಭೆವರೆಗೆ ಸಾಗಲಿದೆ. ಈ ಸಮಯದಲ್ಲಿ ಸುಮಾರು ಹತ್ತರಿಂದ ಹದಿನೈದು ಸಾವಿರ ಭಕ್ತರು ಸೇರಲಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಾಧ್ಯವಾಗದೇ ಇರುವ ಕಾರಣ, ಫೆಬ್ರವರಿ 28 ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಸಕಲೇಶಪುರ ನಗರದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಎಸ್‍ಅರ್ ಟಿಸಿ ಬಸ್ ಹೊರತು ಪಡಿಸಿ ಬೇರೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

    ಮಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ಲಘು ವಾಹನಗಳು ಸಕಲೇಶಪುರ ನಗರದ ಪಶು ಚಿಕಿತ್ಸಾಲಯದ ಕಡೆಯಿಂದ ಹಳೆ ಸಂತೆ ಮೇರಿ ರಸ್ತೆಯಲ್ಲಿ ಪ್ರವೇಶಿಸಿ ಆಜಾದ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಾದು ಹೋಗಲು ಸೂಚಿಸಿದೆ. ಅದೇ ರೀತಿ ಹಾಸನದಿಂದ ಬರುವ ವಾಹನಗಳು, ಬಸವೇಶ್ವರ ರಸ್ತೆಯ ಮೂಲಕ ಕಾಸ್ಮೋಪಾಲಿಟನ್ ಕ್ಲಬ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 75 ಪ್ರವೇಶಿಸಲು ತಿಳಿಸಲಾಗಿದೆ.

    ಮಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ವಿವಿಧ ಮಾದರಿಯ ಟ್ರಕ್, ಟ್ಯಾಂಕರ್ ಇತರೆ ಭಾರಿ ವಾಹನಗಳು ಮಾರನಹಳ್ಳಿ ಬಳಿ ನಿಲ್ಲಿಸಲು ಸೂಚಿಸಿದೆ. ಹಾಸನದ ಕಡೆಯಿಂದ ಬರುವ ವಾಹನಗಳನ್ನು ಪೇಟೆಯ ಬಳಿ ನಿಲ್ಲಿಸಲು ಸೂಚಿಸಿದೆ. ಸಂಜೆ ರಥೋತ್ಸವ ಸಂಚರಿಸುವ ವೇಳೆ ಪರಿಸ್ಥಿತಿ ಅವಲೋಕಿಸಿ ಬಾರಿ ವಾಹನ ಸಂಚರಿಸಲು ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

  • ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಇಂದಿನಿಂದ ದುಪ್ಪಟ್ಟು ಟೋಲ್ ಕಟ್ಟಿ

    ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಇಂದಿನಿಂದ ದುಪ್ಪಟ್ಟು ಟೋಲ್ ಕಟ್ಟಿ

    – ಟೋಲ್‍ಗಳಲ್ಲಿ ನೋ ಫಾಸ್ಟ್‌ಟ್ಯಾಗ್, ನೋ ಎಂಟ್ರಿ ಬೋರ್ಡ್

    ಬೆಂಗಳೂರು: ಇವತ್ತಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿದ್ದು, ಫಾಸ್ಟ್‌ಟ್ಯಾಗ್ ಇಲ್ಲವಾದರೆ ಟೋಲ್‍ಗಳಲ್ಲಿ ಪ್ರವೇಶವೇ ಇಲ್ಲ. ಇಲ್ಲವೇ 2 ಪಟ್ಟು ಟೋಲ್ ಕಟ್ಟಿ ಪ್ರಯಾಣಿಸಬೇಕಿದೆ.

    ಫಾಸ್ಟ್‌ಟ್ಯಾಗ್ ಕಡ್ಡಾಯ ಹಿನ್ನೆಲೆ ಎಲ್ಲ ಟೋಲ್‍ಗಳಲ್ಲಿ `ನೋ ಫಾಸ್ಟ್‌ಟ್ಯಾಗ್, ನೋ ಎಂಟ್ರಿ’ ಬೋರ್ಡ್ ಹಾಕಲಾಗಿದ್ದು, ಫಾಸ್ಟ್‌ಟ್ಯಾಗ್ ಇಲ್ಲವಾದರೆ ಟೋಲ್‍ನ 2 ಪಟ್ಟು ಹಣ ಕಟ್ಟಬೇಕು. ಇಂದು ಮಧ್ಯ ರಾತ್ರಿಯಿಂದ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ಒಂದೆಡೆ ಫಾಸ್ಟ್‌ಟ್ಯಾಗ್ ಪಡೆಯುವುದು ಸಮಸ್ಯೆಯಾದರೆ, ಮತ್ತೊಂದೆಡೆ ಫಾಸ್ಟ್‌ಟ್ಯಾಗ್ ನಲ್ಲಿ ಹಣ ಇದ್ದರೂ ಸ್ಕ್ಯಾನ್ ಆಗ್ತಿಲ್ಲ. ಹೀಗಾಗಿ ದುಪ್ಪಟ್ಟು ಟೋಲ್ ವಸೂಲಿ ಮಾಡಲಾಗುತ್ತಿದ್ದು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಲ್ ಸಿಬ್ಬಂದಿ ಜೊತೆಗೆ ವಾಹನ ಸವಾರರು ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲದವರ ಬಳಿ ಡಬಲ್ ಚಾರ್ಜ್ ಕಟ್ಟಿಸಿಕೊಳ್ಳಲಾಗುತ್ತಿದೆ.

    ಏರ್ ಪೋರ್ಟ್ ಟೋಲ್ ಪ್ಲಾಜಾ ಬಳಿ ವಾಹನ ಸವಾರರು ಕಿರಿಕ್ ಮಾಡಿಕೊಳ್ಳುತ್ತಿದ್ದು, ಫಾಸ್ಟ್‌ಟ್ಯಾಗ್ ಮಾಡುವ ಸ್ಥಳದಲ್ಲಿ ಹಗ್ಗಜಗ್ಗಾಟ ಶುರುವಾಗಿದೆ. ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಕಿರಿಕ್ ಶುರುವಾಗಿದೆ. ಮತ್ತೊಂದೆಡೆ ಟೋಲ್ ಪ್ಲಾಜಾ ಬಳಿಯೇ ಫಾಸ್ಟ್‌ಟ್ಯಾಗ್ ಅಳವಡಿಕೆ ನಡೆದಿದೆ.

    ತೀವ್ರಗೊಂಡ ವಾಗ್ವಾದ
    ಹೊಸಕೋಟೆ ಟೋಲ್ ನಲ್ಲಿ ಸ್ಟೋರ್ ಸಿಬ್ಬಂದಿ ಮತ್ತು ವಾಹನ ಸವಾರರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಫಾಸ್ಟ್‌ಟ್ಯಾಗ್ ಮಾಡಿಸದಿದ್ದರೆ ದುಪ್ಪಟ್ಟು ಹಣದ ಬರೆ. ಎಲ್‍ಸಿವಿ ವಾಹನಗಳಿಗೆ 30 ರೂ. ಇದ್ದ ಟೋಲ್ ದರ 60 ರೂ. ಆಗಿದೆ. ಬಸ್, ಲಾರಿಗಳಿಗೆ ಇದ್ದ 65 ರೂ. ಇದೀಗ 135 ರೂ. ಆಗಿದೆ. ಫಾಸ್ಟ್‌ಟ್ಯಾಗ್ ಮಾಡಿಸಿದವರಿಗೆ ಮಾತ್ರ ದುಪ್ಪಟ್ಟು ಹಣ ಪಡೆಯುತ್ತಿಲ್ಲ. ಫೆ.15 ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗಿದೆ.

    ದುಪ್ಪಟ್ಟು ಹಣ ಕೇಳುತ್ತಿದ್ದಂತೆ ಕೆಲವು ಕಾರುಗಳು ಹಿಂದಕ್ಕೆ ಹೋಗುತ್ತಿವೆ. ದುಪ್ಪಟ್ಟು ಹಣ ವಸೂಲಿ ಹಿನ್ನೆಲೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ನಿನ್ನೆಯಿಂದಲೇ ಟೋಲ್ ರಸ್ತೆಗೆ ಹೋಗುತ್ತಿಲ್ಲ. ಅಲ್ಲದೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಬಳಿಯೇ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲ ವಾಹನ ಮಾಲೀಕರು ದುಪ್ಪಟ್ಟು ಹಣ ಯಾಕೆ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಿರುವುದು ಕೆಲ ವಾಹನಗಳ ಮಾಲೀಕರಿಗೆ ಗೊತ್ತಿಲ್ಲ.

  • 20 ವರ್ಷದ ಹಳೆಯ ವಾಹನಗಳು ಗುಜುರಿಗೆ – ಸೀತಾರಾಮನ್‌ ಹೇಳಿದ್ದು ಏನು? ಏನಿದು ಗುಜುರಿ ನೀತಿ?

    20 ವರ್ಷದ ಹಳೆಯ ವಾಹನಗಳು ಗುಜುರಿಗೆ – ಸೀತಾರಾಮನ್‌ ಹೇಳಿದ್ದು ಏನು? ಏನಿದು ಗುಜುರಿ ನೀತಿ?

    ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಪದೇ ಪದೇ ಹೇಳುತ್ತಿದ್ದ ʼಗುಜುರಿ ನೀತಿʼಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

    ಇಂದಿನ ಬಜೆಟ್‌ ಭಾಷಣದಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಜಾರಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪ ಮಾಡಿದ್ದಾರೆ. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ಕಮರ್ಷಿಯಲ್‌ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು 42 ನಗರ ಕೇಂದ್ರಗಳಿಗೆ ಒಟ್ಟು 2,217 ಕೋಟಿ ರೂ. ಅನುದಾನವನ್ನು ಸೀತಾರಾಮನ್‌ ಪ್ರಕಟ ಮಾಡಿದ್ದಾರೆ.

    ಗಡ್ಕರಿ ಹೇಳಿದ್ದು ಏನು?
    ದೇಶದ ಅಟೋಮೊಬೈಲ್‌ ಉದ್ಯಮದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ‘ಗುಜುರಿ ನೀತಿʼಯನ್ನು ಜಾರಿಗೆ ತರಲು ಮಂದಾಗುತ್ತಿದೆ. ವಾಹನ ಕ್ಷೇತ್ರ ಸಂಕಷ್ಟದಲ್ಲಿದೆ ಎಂಬುದು ಸರ್ಕಾರಕ್ಕೆ ತಿಳಿದಿದೆ. ಕಳೆದ ಒಂದೂವರೆ ವರ್ಷಗಳಿಂದ ನಾನು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದೇನೆ. ಈಗ ಇದು ಅಂತಿಮಗೊಂಡಿದ್ದು ಕೊನೆಯ ಹಂತದಲ್ಲಿದೆ ಎಂದು ಈ ಹಿಂದೆ ನಿತಿನ್‌ ಗಡ್ಕರಿ ಹೇಳಿದ್ದರು.

    ಅಟೋಮೋಟಿವ್ ಕಾಂಪೋನೆಂಟ್ ತಯಾರಕರ ಸಂಘ ಆಯೋಜಿಸಿದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ‘ಗುಜುರಿ ನೀತಿ’ ಜಾರಿಯ ಬಗ್ಗೆ ಗಡ್ಕರಿ ಮಾತನಾಡಿದ್ದರು. ಕಳೆದ ಒಂದೂವರೆ ವರ್ಷದಿಂದ ಈ ಗುಜುರಿ ನೀತಿಯ ಬಗ್ಗೆ ಹೇಳುತ್ತಲೇ ಇದ್ದೇನೆ. ಈಗ ಅದು ಅಂತಿಮಗೊಂಡಿದೆ. ಇದರಿಂದ ಭಾರತೀಯ ಉತ್ಪಾದಕರಿಗೆ ನೆರವಾಗಲಿದೆ. ತಡವಾಗಿ ನೀತಿ ಜಾರಿಯಾಗುತ್ತಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದರು.

    ಮುಂದಿನ 5 ವರ್ಷದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಟೋಮೊಬೈಲ್‍ ಕ್ಷೇತ್ರದ ಹಬ್‍ ಆಗಿ ಪರಿವರ್ತನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಕಂಪನಿಗಳು ವಿದೇಶದ ಆಮದು ಅವಲಂಬನೆ ಕಡಿಮೆ ಮಾಡಬೇಕು. ಮುಂದಿನ ದಿನಗಳಲ್ಲಿ ಆಮದು ಸುಂಕವನ್ನ ಸರ್ಕಾರ ಹೆಚ್ಚಿಸಲಿದೆ ಎಂದು ಈ ವೇಳೆ ಹೇಳಿದ್ದರು.

    ಏನಿದು ನೀತಿ?
    ಹಳೆಯ ವಾಹನಗಳನ್ನು ಗುಜುರಿಗೆ ಹಾಕಿದರೆ ಅದಕ್ಕೆ ಹಣಕಾಸಿನ ಸಹಾಯದ ಜೊತೆಗೆ ಹೊಸ ವಾಹನದ ಖರೀದಿಗೆ ಉತ್ತೇಜನ ನೀಡುವುದು ಈ ನೀತಿಯ ಮುಖ್ಯ ಉದ್ದೇಶ. ಕಳೆದ ಎರಡು ವರ್ಷದಿಂದ ಅಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಕಡಿಮೆಯಾಗುತ್ತಿದೆ. ಹೀಗಾಗಿ ವಿದೇಶಗಳಲ್ಲಿ ಇರುವಂತೆ ಭಾರತದಲ್ಲೂ ಗುಜುರಿ ನೀತಿ ಜಾರಿ ಮಾಡುವಂತೆ ವಾಹನ ತಯಾರಕ ಕಂಪನಿಗಳು ಸರ್ಕಾರವನ್ನು ಒತ್ತಾಯಿಸಿದ್ದವು.

    ದರ ನಿಗದಿ ಹೇಗೆ?
    ವಾಹನದ ಬಿಡಿಭಾಗಗಳ ಕಂಡೀಷನ್‌ ನೋಡಿಕೊಂಡು ಸರ್ಕಾರ ವಾಹನವನ್ನು ಗುಜುರಿಗೆ ಹಾಕುವ ಮಾಲೀಕರಿಗೆ ಹಣ ನೀಡಲಿದೆ.

    ಗುಜುರಿ ನೀತಿಯ ಲಾಭ ಏನು?
    15 ವರ್ಷಕ್ಕಿಂತ ಹೆಚ್ಚಿನ ವರ್ಷದ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಇವುಗಳನ್ನು ಗುಜುರಿಗೆ ಹಾಕಿದರೆ ವಾಯ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಹಳೇ ವಾಹನಗಳು ಗುಜುರಿ ಸೇರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

    ವಿರೋಧ ಯಾಕೆ?
    ಮಧ್ಯಮ ವರ್ಗದವರು ಖರೀದಿಸಿದ ವಾಹನ ಹಳೆಯಾದರೂ ಈಗಲೂ ಉತ್ತಮ ಸ್ಥಿತಿಯಲ್ಲಿದೆ. ಹೀಗಿರುವಾಗ ಈ ವಾಹನಗಳನ್ನು ಗುಜುರಿಗೆ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಎದ್ದಿದೆ. ಸದ್ಯದ ಸಂಚಾರಿ ನಿಯಮಗಳ ಪ್ರಕಾರ ಪ್ರತಿ ವಾಹನ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಎಮಿಶನ್ ಟೆಸ್ಟ್ ಮಾಡಿಸಬೇಕು. ಎಮಿಶನ್‌ ಟೆಸ್ಟ್‌ನಲ್ಲಿ ಪಾಸಾದರೂ 15 ವರ್ಷ ಆಗಿದೆ ಎಂಬ ಕಾರಣಕ್ಕೆ ಅದನ್ನ ಗುಜುರಿಗೆ ಹಾಕುವುದು ಎಷ್ಟು ಸರಿ? ಹಾಗಾದರೆ ಎಮಿಶನ್‌ ಟೆಸ್ಟ್‌ ಸರಿ ಇಲ್ಲವೇ ಎಂಬ ಮತ್ತೊಂದು ಪ್ರಶ್ನೆಯೂ ಎದ್ದಿದೆ.

    ಈಗ 10 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕಾಗುತ್ತದೆ. ಗುಜುರಿ ನೀತಿ ಜಾರಿಗೆ ಬಂದರೆ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ ಏನು ಎಂಬ ಮೂರನೇ ಪ್ರಶ್ನೆಯೂ ಎದ್ದಿದೆ. ಈ ಎಲ್ಲ ಪ್ರಶ್ನೆಗಳಿಗೆ ಅಂತಿಮವಾಗಿ ಬರಲಿರುವ ನೀತಿಯಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

    ಬಿಡಿ ಭಾಗಗಳು ಮರುಬಳಕೆ:
    ಗುಜರಿ ನೀತಿ ಜಾರಿಗೆ ಬಂದರೆ 2020-21ರ ಹಣಕಾಸು ವರ್ಷದಲ್ಲಿ 90 ಲಕ್ಷ ವಾಹನಗಳು, 2025ರೊಳಗೆ 2.8 ಕೋಟಿ ವಾಹನಗಳು ಸಂಚಾರ ನಿಲ್ಲಿಸಬಹುದು ಎಂದು ಅಂದಾಜಿಸಲಾಗಿದೆ. ಈ ಹಳೆಯ ವಾಹನಗಳ ಬಿಡಿ ಉಪಕರಣ ಗಳನ್ನು ಮರುಬಳಕೆ ಮಾಡಲು ಅಗತ್ಯ ಘಟಕಗಳಿಗೆ ಉತ್ತೇಜನ ನೀಡಲಾಗುತ್ತದೆ. ಇದನ್ನೂ ಓದಿ: ಇಂದಿನಿಂದ ನೀವು ಕಡಿಮೆ ಬೆಲೆಗೆ‌ ಕಾರು, ಬೈಕ್ ಖರೀದಿಸಬಹುದು.

    ತಡವಾಗಿದ್ದು ಯಾಕೆ?
    ಕಳೆದ ಒಂದೂವರೆ ವರ್ಷಗಳಿಂದ ನಿತಿನ್‌ ಗಡ್ಕರಿ ಈ ಬಗ್ಗೆ ಮಾತನಾಡುತ್ತಿದ್ದರು. ಆದರೆ ಆರಂಭದಲ್ಲಿ ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಈ ವರ್ಷದ ಆರಂಭದಲ್ಲಿ ಈ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಆದರೆ ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಮುಂದಕ್ಕೆ ಹೋಗಿತ್ತು. ಸದ್ಯ ಕೇಂದ್ರ ಸರ್ಕಾರದ ‘ಆತ್ಮನಿರ್ಭರ್‌ ಭಾರತʼ ಜಪವನ್ನು ಜಪಿಸುತ್ತಿರುವ ಸಮಯದಲ್ಲಿ ಈ ಗುಜುರಿ ನೀತಿ ಜಾರಿ ಮಾಡಲು ಸಿದ್ಧತೆ ಮಾಡುತ್ತಿದೆ.

    ಹಲವು ದೇಶಗಳಲ್ಲಿ ಜಾರಿ
    ಆರ್ಥಿಕ ಹಿಂಜರಿತದಿಂದ ಚೇತರಿಸಿದ ಬಳಿಕ 2008-09ರಲ್ಲಿ ಹಲವು ದೇಶಗಳು ಈ ಗುಜುರಿ ನೀತಿಯನ್ನು ಜಾರಿ ಮಾಡಿವೆ. ಅಮೆರಿಕ, ಆಸ್ಟ್ರೀಯಾ, ಕೆನಡಾ, ಚೀನಾ, ಜರ್ಮನಿ, ಜಪಾನ್‌, ಇಂಗ್ಲೆಂಡ್‌ ಸೇರಿದಂತೆ ಹಲವು ಯುರೋಪಿಯನ್‌ ದೇಶಗಳಲ್ಲಿ ಈ ನೀತಿ ಈಗಾಗಲೇ ಜಾರಿಯಾಗಿವೆ. ಜರ್ಮನಿಯಲ್ಲಿ 9 ವರ್ಷ ಮೀರಿದ ವಾಹನಗಳಿಗೆ 2,500 ಯುರೋ(ಅಂದಾಜು2.16 ಲಕ್ಷ ರೂ.), ಇಟಲಿಯಲ್ಲಿ 10 ವರ್ಷ ಮೀರಿದ ವಾಹನಗಳಿಗೆ 3,500 ಯುರೋ( ಅಂದಾಜು 3.03 ಲಕ್ಷ ರೂ.) ನೀಡುತ್ತದೆ.

    ಹೊಸ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ ತಿಳಿಸಿ

  • ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

    ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

    ನವದೆಹಲಿ: ಜನವರಿ 1ರಿಂದ ದೇಶದ ಎಲ್ಲ 4 ಚಕ್ರ ಮೇಲ್ಪಟ್ಟ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಪ್ರಸ್ತುತ ದಿನಗಳಲ್ಲಿ ಫಾಸ್ಟ್ ಟ್ಯಾಗ್ ಉಪಯುಕ್ತವಾಗಿದ್ದು, ವಾಹನಗಳನ್ನು ಎಲ್ಲ ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸುವ ಅಗತ್ಯವಿಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಹ ಈ ಕುರಿತು ಆದೇಶ ಹೊರಡಿಸಿತ್ತು. ಹಳೆ ವಾಹನ ಸೇರಿ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ತಿಳಿಸಿತ್ತು. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    ನವೆಂಬರ್ 2020ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸುತ್ತೋಲೆ ಹೊರಡಿಸಿ, ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಹಾಗೂ ಐಟಿ ತಂತ್ರಜ್ಞಾನ ಆಧರಿತ ಶುಲ್ಕ ಪಾವತಿಯನ್ನು ಉತ್ತೇಜಿಸಲಾಗುವುದು. ಜನವರಿ 1, 2021ರಿಂದ ಹಳೆ ವಾಹನಗಳು ಸೇರಿ ಎಂ ಹಾಗೂ ಎನ್ ಮಾದರಿಯ ಎಲ್ಲ ವಾಹನಗಳಿಗೆ ಕಡ್ಡಾಯವಾಗಿದೆ ಎಂದು ತಿಳಿಸಿದೆ.

    ಡಿಸೆಂಬರ್ 1,2017ರಿಂದ ಇತ್ತೀಚಿನ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ವಾಹನ ಉತ್ಪಾದನೆ ಕಂಪನಿಗಳು ಅಥವಾ ಡೀಲರ್ ಗಳು ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ನೀಡಬೇಕು. ಅಲ್ಲದೆ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಬೇಕಾದರೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ನ್ಯಾಷನಲ್ ಪರ್ಮಿಟ್ ವಾಹನಗಳಿಗೆ ಅಕ್ಟೋಬರ್ 1, 2019ರಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.

  • ಗಮನಿಸಿ, ಜನವರಿ 1 ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ

    ಗಮನಿಸಿ, ಜನವರಿ 1 ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ

    ನವದೆಹಲಿ: ಜನವರಿ 1, 2021ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, 2017ಕ್ಕಿಂತ ಹಿಂದಿನ ಹಾಗೂ ನಂತರದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿದೆ. 2021ರ ಜನವರಿಯಿಂದ ಇದು ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.

    2017ರ ಡಿಸೆಂಬರ್‌ 1 ರಿಂದ ಮಾರಾಟವಾಗುವ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿತ್ತು. 2017ಕ್ಕಿಂತ ಮೊದಲು ಮಾರಾಟವಾಗಿದ್ದ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಈಗ ಈ ವಿನಾಯಿತಿಯನ್ನು ತೆಗೆಯಲಾಗಿದ್ದು ಎಲ್ಲ 4 ಚಕ್ರದ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್‌ ಅಳವಡಿಸಿರಬೇಕೆಂದು ಸರ್ಕಾರ ಸೂಚಿಸಿದೆ.

    ಏಪ್ರಿಲ್‌ 2021 ರಿಂದ ಥರ್ಡ್‌ ಪಾರ್ಟಿ ವಿಮೆ ಮಾಡಿಸಬೇಕಿದ್ದರೂ ಫಾಸ್ಟ್‌ಟ್ಯಾಗ್‌ ಕಡ್ಡಾಯ. ಇದರ ಜೊತೆ ಹಳೆ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ನವೀಕರಣಕ್ಕೂ ಫಾಸ್ಟ್‌ ಟ್ಯಾಗ್‌ ಅಳವಡಿಸರಬೇಕು.

    ಫಾಸ್ಟ್‌ಟ್ಯಾಗ್‌ ಇದ್ದರೆ ವಾಹನಗಳು ಸರಾಗವಾಗಿ ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುತ್ತದೆ. ಸಮಯ ಮತ್ತು ಇಂಧನ ಉಳಿತಾಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. 2019ರ ಅಕ್ಟೋಬರ್ 1 ರಿಂದ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

    ಏನಿದು ಫಾಸ್ಟ್‌ಟ್ಯಾಗ್‌?
    ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದಾಗಿದೆ.

    ಶುಲ್ಕ ಪಾವತಿ ಹೇಗೆ?
    ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‍ಐಡಿ) ಆಧಾರಿತ ಫಾಸ್ಟ್‌ಟ್ಯಾಗನ್ನು ವಾಹನದ ಮುಂಭಾಗದ ಗ್ಲಾಸ್‍ಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರಿಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣವನ್ನು ಇಟ್ಟಿರಬೇಕಾಗುತ್ತದೆ.

    ಎಲ್ಲ ಪ್ರಮುಖ ಬ್ಯಾಂಕುಗಳು ಫಾಸ್ಟ್‌ಟ್ಯಾಗ್‌ ಸೌಲಭ್ಯ ನೀಡುತ್ತಿದ್ದು, ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ನೋಂದಾಯಿತ ವಾಹನ ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿದ್ದಂತೆ ಅಲ್ಲಿನ ರೀಡರ್, ಟ್ಯಾಗನ್ನು ರೀಡ್ ಮಾಡುತ್ತದೆ. ಆಗ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಆದರೆ ಖಾತೆಯಲ್ಲಿ ಮೊದಲೇ ಹಣ ಜಮೆಯಾಗಿರಬೇಕು. ಫಾಸ್ಟ್ ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.

    ಎಲ್ಲಿ ಪಡೆಯಬೇಕು, ಹೇಗೆ ಪಡೆಯಬೇಕು?
    ಫಾಸ್ಟ್‌ಟ್ಯಾಗನ್ನು ವಿವಿಧ ಬ್ಯಾಂಕುಗಳಲ್ಲಿ, ಎನ್‍ಎಚ್‍ಎಐ, ಟೋಲ್ ಪ್ಲಾಜಾ, ಆರ್ ಟಿಓ ಕಚೇರಿ, ಟ್ರಾನ್ಸ್ ಪೋರ್ಟ್ ಕೇಂದ್ರಗಳು, ಆನ್‌ಲೈನ್‌ ಶಾಪಿಂಗ್‌ ತಾಣದಿಂದ ಖರೀದಿಸಬಹುದು.

    ಫಾಸ್ಟ್ ಟ್ಯಾಗ್ ಟೈಂಲೈನ್:
    2014ರಲ್ಲಿ ಮುಂಬೈ ಅಹಮದಾಬಾದ್ ಸುವರ್ಣ ಚತುಷ್ಪತ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಫಾಸ್ಟ್ ಟ್ಯಾಗ್ ಜಾರಿ ಆಗಿತ್ತು. 2016ರಲ್ಲಿ ದೇಶದ 247(ಶೇ.70) ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ಬಂದಿತು. 2017ರ ನ.8 ರಂದು ಡಿಸೆಂಬರ್ ನಂತರ ಮಾರಾಟವಾಗುವ ಎಲ್ಲ ವಾಹನಗಳಲ್ಲಿ ಫಾಸ್ಟ್ ಕಡ್ಡಾಯವಾಗಿ ಇರಬೇಕೆಂದು ಆದೇಶ ಹೊರಡಿಸಲಾಯಿತು.

  • ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು – ಫುಲ್ ಟ್ರಾಫಿಕ್ ಜಾಮ್

    ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು – ಫುಲ್ ಟ್ರಾಫಿಕ್ ಜಾಮ್

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡುವ ಭೀತಿಯಿಂದ ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅನ್‍ಲಾಕ್ ನಿಯಮ ಜಾರಿ ಬಳಿಕ ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದೆ. ಇದೀಗ ವಿಕೇಂಡ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಆಗಮಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು.

    ನಂದಿಗಿರಿಧಾಮದ ಸೂರ್ಯೋದಯ ಸೌಂದರ್ಯ ಸವಿಯೋಕೆ ಮುಂಜಾನೆ 4-5 ಗಂಟೆಯಿಂದಲೇ ನಂದಿಗಿರಿಧಾಮದತ್ತ ಪ್ರವಾಸಿಗರ ದಂಡೇ ಆಗಮಿಸಿದೆ. ಆದರೆ ಬೆಳಗ್ಗೆ 8 ಗಂಟೆ ನಂತರ ನಂದಿಗಿರಿಧಾಮಕ್ಕೆ ಪ್ರವಾಸಿಗರ ವಾಹನಗಳ ಪ್ರವೇಶಕ್ಕೆ ಅನುಮತಿ ಇದೆ. ಹೀಗಾಗಿ ಚೆಕ್ ಪೋಸ್ಟ್ ನಲ್ಲಿ ವಾಹನಗಳಿಗೆ ತಡೆಯೊಡ್ಡಲಾಗಿತ್ತು. ಹೀಗಾಗಿ ಚೆಕ್‍ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಸರಿಸುಮಾರು 4-5 ಕಿಲೋಮೀಟರ್ ದೂರ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. 8 ಗಂಟೆಗೆ ಚೆಕ್ ಪೋಸ್ಟ್ ಗೇಟ್ ತಡೆದಿದ್ದೆ ತಡ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಡಿದ್ದಾರೆ.

    ಮಾರ್ಚ್ 14ರಿಂದ ಲಾಕ್‍ಡೌನ್ ಆಗಿದ್ದ ನಂದಿಗಿರಿಧಾಮ ಬರೋಬ್ಬರಿ ಐದು ತಿಂಗಳ ನಂತರ ಕೆಲ ದಿನಗಳ ಹಿಂದೆಯಷ್ಟೇ ಅನ್‍ಲಾಕ್ ಆಗಿದೆ. ಹೀಗಾಗಿ ವಿಕೇಂಡ್ ದಿನದಂದು ಸಾವಿರಾರು ಮಂದಿ ನಂದಿಗಿರಿಧಾಮಕ್ಕೆ ಆಗಮಿಸಿ ಬೆಟ್ಟದ ಅನನ್ಯ ಪ್ರಾಕೃತಿಕ ಸೌಂದರ್ಯದ ಸೊಬಗನ್ನ ಸವಿಯುತ್ತಿದ್ದಾರೆ.

  • ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ, ರಸ್ತೆ ಸಂಚಾರ ಸ್ತಬ್ಧ

    ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ, ರಸ್ತೆ ಸಂಚಾರ ಸ್ತಬ್ಧ

    ಉಡುಪಿ: ರಾಜ್ಯದಲ್ಲಿ ಮುಂದಿನ ಎರಡು ದಿನ ಮಹಾ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಕಟ್ಟೆಚ್ಚರಿಕೆ ನೀಡಿದೆ. ಇತ್ತ ಉಡುಪಿಯಲ್ಲಿ ಶನಿವಾರ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿಪಾತ್ರದ ಊರುಗಳಿಗೆ ನೀರು ನುಗ್ಗಿದೆ.

    ಉಡುಪಿ ನಗರದ ಕೆಲಭಾಗ ಕೂಡ ಮುಳುಗಡೆಯಾಗಿದೆ. ಕಲ್ಸಂಕ, ಬೈಲಕೆರೆ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಬಾರಿ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತಡೆಯಾಗಿದೆ. ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸ್ತಬ್ಧವಾಗಿದೆ. ಹಿರಿಯಡ್ಕದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ.

    ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉಡುಪಿ ಶ್ರೀಕೃಷ್ಣ ಮಠದ ಸಮೀಪ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವು ಮುಳುಗಡೆಯಾಗಿದೆ. ಇಂದ್ರಾಣಿ ನದಿಯ ಅಕ್ಕ ಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ. ಬೈಲಕೆರೆ ಪರಿಸರದಲ್ಲಿ ನೀರಿನ ಮಟ್ಟ ಏರಿದ್ದು, ಹಲವಾರು ಮನೆಗಳಿಗೆ ನೀರು ಹೊಕ್ಕಿರುವ ಘಟನೆ ನಡೆದಿದೆ. ಮನೆ ಅಂಗಳದಲ್ಲಿ ನಿಲುಗಡೆಗೊಳಿಸಿರುವ ವಾಹನಗಳು ಮುಳುಗಡೆಯಾಗಿದೆ.

    ಮಲ್ಪೆ ಕಡಲತೀರದಲ್ಲಿ ಇಂದ್ರಾಣಿ ನದಿ ಉಕ್ಕಿ ಹರಿದಿದ್ದು, ಆಸುಪಾಸಿನಲ್ಲಿ ಜಲ ದಿಗ್ಭಬಂಧನವಾಗಿದೆ. ಗದ್ದೆಗಳು ಜಲಾವೃತಗೊಂಡಿದೆ. ಇನ್ನೂ ಬ್ರಹ್ಮಾವರ ತಾಲೂಕಿನ ನೀಲಾವರ, ಮಟಪಾಡಿ ಗ್ರಾಮಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಜನಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ನೆರೆಯ ಮಟ್ಟ ಕಡಿಮೆಯಾಗುತ್ತಿಲ್ಲ. ಅರಬ್ಬಿ ಸಮುದ್ರದಲ್ಲಿ ವಿಪರೀತವಾಗಿ ಗಾಳಿ ಇರುವುದರಿಂದ ನದಿಯ ನೀರು ಸರಾಗವಾಗಿ ಸಾಗರಕ್ಕೆ ಹರಿಯುತ್ತಿಲ್ಲ.

    ಇಂದು ಮತ್ತು ನಾಳೆ ಕರಾವಳಿ ಭಾಗ, ಕೊಡಗು, ಚಿಕ್ಕಮಗಳೂರು, ಬಳ್ಳಾರಿ ಮತ್ತು ಧಾರವಾಡ ಭಾಗದಲ್ಲಿ ಭಾರೀ ವರ್ಷಧಾರೆ ಆಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಅತ್ತ ಉತ್ತರ ಕರ್ನಾಟಕದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ರಾಯಚೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ರಾತ್ರಿ ವೇಳೆ ಭಾರೀ ಮಳೆಯಾಗುತ್ತಿದ್ದು, ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

    ಜೆಸ್ಕಾಂ ಉಗ್ರಾಣ, ಕಚೇರಿಗೆ ರಾಜಕಾಲುವೆ ನೀರು ನುಗ್ಗಿದೆ. ರಾಯಚೂರಿನ ಸೀಯತಲಾಬ್, ಸುಖಾಣಿ ಕಾಲೋನಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಯಾದಗಿರಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕಂಗಳೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ದೇವಸ್ಥಾನದ ಮೇಲೆ ಐದಡಿ ನೀರು ಹರಿಯುತ್ತಿದೆ.

    ಯಾದಗಿರಿ ನಗರದತ್ತಲೂ ನೀರು ಆವರಿಸುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದೆ. ಉಡುಪಿ-ಕೊಡಗಿನಲ್ಲಿ ಸೆಪ್ಟೆಂಬರ್ 22ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

  • ಸರಣಿ ಅಪಘಾತ – ನುಜ್ಜುಗುಜ್ಜಾದ ಐದು ವಾಹನಗಳು

    ಸರಣಿ ಅಪಘಾತ – ನುಜ್ಜುಗುಜ್ಜಾದ ಐದು ವಾಹನಗಳು

    ಬಾಗಲಕೋಟೆ: ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ಪರಿಣಾಮ ಐದು ವಾಹನಗಳ ಮುಂಭಾಗ ನುಜ್ಜುಗುಜ್ಜಾಗಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ನಡೆದಿದೆ.

    ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಈ ಸರಣಿ ಅಪಘಾತ ಸಂಭವಿಸಿದ್ದು, ಮೂರು ಲಾರಿ ಮತ್ತು ಎರಡು ಕ್ಯಾಂಟರ್ ನಡುವೆ ಅಪಘಾತ ನಡೆದಿದೆ. ಪರಿಣಾಮ ಐದು ವಾಹನಗಳು ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

    ಮೊದಲಿಗೆ ರಸ್ತೆ ಪಕ್ಕ ನಿಂತಿದ್ದ ಒಂದು ಲಾರಿಗೆ ಮತ್ತೊಂದು ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ನಂತರ ಹಿಂದಿನಿಂದ ಬಂದ ಇನ್ನೊಂದು ಲಾರಿ ಕ್ಯಾಂಟರ್‌ಗಳಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಓರ್ವ ಲಾರಿ ಚಾಲಕನಿಗೆ ಮಾತ್ರ ಗಾಯವಾಗಿದೆ.

    ಕೂಡಲೇ ಗಾಯಗೊಂಡ ಲಾರಿ ಚಾಲಕನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

  • ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳು ಪುಡಿ ಪುಡಿ

    ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳು ಪುಡಿ ಪುಡಿ

    ಬೆಂಗಳೂರು: ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಡಿಗೇಡಿಗಳ ದಾಂಧಲೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.

    ಪೊಲೀಸ್ ಠಾಣೆಯ ಪೊಲೀಸರ ಕಾರುಗಳು ಮತ್ತು 50ಕ್ಕೂ ಹೆಚ್ಚು ಬೈಕ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಲ್ಲದೇ ಪೊಲೀಸ್ ಠಾಣೆಯ ಪೀಠೋಪಕರಣಗಳು ಮತ್ತು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳನ್ನು ಸುಟ್ಟು ಹಾಕಿದ್ದಾರೆ.

    ಮೊದಲಿಗೆ ಗಲಭೆಯ ಸ್ಪಾಟ್‍ಗೆ ಹೋಗೋಕೆ ಹೋದ ಡಿಜಿ ಹಳ್ಳಿ ಇನ್ಸ್‌ಪೆಕ್ಟರ್ ಗಾಡಿಯನ್ನ ಪುಡಿ ಪುಡಿ ಮಾಡಿದ್ದಾರೆ. ಆ ಬಳಿಕ ಕೆಜಿ ಹಳ್ಳಿ ಇನ್ಸ್‌ಪೆಕ್ಟರ್ ಗಾಡಿಯನ್ನು ಹೊಡೆದು ಹಾಕಿದ್ದಾರೆ. ಇತ್ತ ಸ್ಪಾಟ್‍ಗೆ ಬರುತ್ತಿದ್ದ ಬಾಣಸವಾಡಿ ಎಸಿಪಿ ಜೀಪನ್ನು ಸಹ ಪುಡಿ ಪುಡಿ ಮಾಡಿದ್ದಾರೆ. ಎಸಿಪಿ ನಂತರ ಡಿಸಿಪಿ ಪೂರ್ವ ವಿಭಾಗದ ಶರಣಪ್ಪರ ಕಾರು ಕೂಡ ಪುಡಿ ಪುಡಿ ಆಗಿದೆ.

    ಹೆಚ್ಚಿನ ಪೋರ್ಸ್ ಸ್ಪಾಟ್‍ಗೆ ಬರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸ್ಪಾಟ್‍ಗೆ ಬರುತ್ತಿದ್ದ ಈಶಾನ್ಯ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಕಾರು ಜಖಂ ಮಾಡಿದ್ದಾರೆ. ಬಳಿಕ ಸ್ಪಾಟ್‍ಗೆ ಬಂದ ಕೆಎಸ್‌ಆರ್‌ಪಿ ಗರುಡ ಪಡೆ, ಫೈರ್ ವಾಹನಗಳಿಗೂ ಕಲ್ಲು ತೂರಿ ಜಖಂ ಮಾಡಿದ್ದಾರೆ.

    ದುಷ್ಕರ್ಮಿಗಳು ದಾಂಧಲೆ ನಡೆಸಿದ ಎಲ್ಲಾ ಕಡೆಗಳಲ್ಲೂ ಸಿಸಿಟಿವಿಗಳನ್ನ ಧ್ವಂಸ ಮಾಡಿದ್ದಾರೆ. ಇತ್ತ ಕಾವಲ್ ಬೈರಸಂದ್ರದ ಪ್ರತಿರಸ್ತೆಯಲ್ಲೂ ನೀರವ ಮೌನ ಆವರಿಸಿದೆ. ಇದರಿಂದ ಭಯಗೊಂಡ ಸ್ಥಳೀಯರು ಮನೆಯಿಂದ ಹೊರಬರೋಕೆ ಹಿಂದೇಟು ಹಾಕುತ್ತಿದ್ದಾರೆ.

    ಗಲಭೆಗೆ ಕಾರಣವಾಗಿದ್ದ ಆರೋಪಿ ನವೀನ್ ಮತ್ತು 110 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದೀವಿ. ದಯಮಾಡಿ ಶಾಂತಿಯನ್ನು ಕಾಪಾಡಿ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ಬೆಂಗಳೂರಿನ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.