Tag: ವಾಸ್ತವ್ಯ

  • ಬಳ್ಳಾರಿ ಬದಲು ಚಿತ್ರದುರ್ಗ ಉಸ್ತುವಾರಿ – ಮಲತಾಯಿ ಧೋರಣೆ ತೋರಿದ್ರಾ ಶ್ರೀರಾಮುಲು

    ಬಳ್ಳಾರಿ ಬದಲು ಚಿತ್ರದುರ್ಗ ಉಸ್ತುವಾರಿ – ಮಲತಾಯಿ ಧೋರಣೆ ತೋರಿದ್ರಾ ಶ್ರೀರಾಮುಲು

    ಚಿತ್ರದುರ್ಗ: ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ದುಂಬಾಲು ಬಿದ್ದಿದ್ದ ಆರೋಗ್ಯ ಸಚಿವ ಶ್ರೀರಾಮುಲು, ಇದೀಗ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಿಕ್ಕಿರೋದಕ್ಕೆ ಮಲತಾಯಿ ಧೋರಣೆ ತೋರುತಿದ್ದಾರಾ ಎಂಬ ಅನುಮಾನ ಚಿತ್ರದುರ್ಗದ ಜನರಲ್ಲಿ ಕಾಡುತ್ತಿದೆ.

    ಯಾಕೆಂದರೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಚಿವ ಶ್ರೀರಾಮುಲು ಅವರ ವಾಸ್ತವ್ಯಕ್ಕಾಗಿ ಭರ್ಜರಿ ಸಿದ್ಧತೆ ಮಾಡಲಾಗಿತ್ತು. ವಿಐಪಿ ವಾರ್ಡಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಮಾದರಿಯಲ್ಲಿ ಎಸಿ, ಟಿವಿ ಹಾಗೂ ಇತರೆ ಐಶಾರಾಮಿ ಪೀಠೋಪಕರಣಗಳಿಂದ ಮದುವಣಗಿತ್ತಿಯಂತೆ ಅಲಂಕರಿಸಿ ಸಿದ್ಧಪಡಿಸಲಾಗಿತ್ತು. ಆದರೆ ಅಚ್ಚರಿಯ ವಿಸಿಟ್ ಕೊಡ್ತಿನಿ ಎಂದು ನೆಪ ಹೇಳಿರುವ ಸಚಿವವರು ಗುರುವಾರ ರಾತ್ರಿ ಚಿತ್ರದುರ್ಗದ ಜಿಲ್ಲಾಸ್ಪತ್ರೆ ವಾಸ್ತವ್ಯವನ್ನು ರದ್ದುಗೊಳಿಸಿ ಮಲತಾಯಿ ಧೋರಣೆ ತೋರುತ್ತಿದ್ದಾರೆಂಬ ಮಾತಿಗೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಇದನ್ನೂ ಓದಿ:ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್

    ಅಲ್ಲಿನ ನೀರಿನ ಸಮಸ್ಯೆ, ವೈದ್ಯರ ಕೊರತೆ ಮತ್ತು ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಅಹವಾಲು ಸಲ್ಲಿಸಬೇಕೆಂದು ಕಾತರದಿಂದ ಕಾಯ್ದಿದ್ದ ದುರ್ಗದ ಜನರಿಗೆ ಇದರಿಂದಾಗಿ ಬಾರಿ ನಿರಾಸೆಯಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ವಿಸ್ತ್ರತ ವರದಿ ಬಿತ್ತರಿಸಿ ಸಚಿವರ ಗಮನ ಸೆಳೆದಿತ್ತು. ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದ ಜನರಿಗೆ ಸಚಿವರ ವಾಸ್ತವ್ಯ ರದ್ದಾಗಿರುವುದು ಭಾರೀ ಬೇಸರ ಮೂಡಿಸಿದೆ.

    ಹೀಗಾಗಿ ಶೀಘ್ರದಲ್ಲೇ ಈ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ರಾಮುಲು ವಾಸ್ತವ್ಯ ಹೂಡುವ ಮೂಲಕ ಇಲ್ಲಿನ ಸಮಸ್ಯೆಗಳಿಗೆ ಬ್ರೇಕ್ ಹಾಕುತ್ತಾರಾ ಅಥವಾ ಮಲತಾಯಿ ಧೋರಣೆ ಮುಂದುವರಿಸುತ್ತಾರಾ ಎಂದು ಕಾದು ನೋಡಬೇಕಿದೆ.

  • ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್

    ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್

    – ಕೊನೇ ಕ್ಷಣದಲ್ಲಿ ರಾಮುಲು ವಾಸ್ತವ್ಯ ರದ್ದು

    ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಗುರುವಾರ ರಾತ್ರಿ ವಾಸ್ತವ್ಯ ಹೂಡುತ್ತಾರೆ ಎಂದು ಆರೋಗ್ಯ ಇಲಾಖೆ ಬಾರಿ ದುಂದುವೆಚ್ಚ ಮಾಡಿದೆ. ಆದರೆ ಸಚಿವರ ವಾಸ್ತವ್ಯ ದಿಢೀರ್ ರದ್ದಾಗಿದ್ದು, ಕೇವಲ ಒಂದು ರಾತ್ರಿ ವಾಸ್ತವ್ಯಕ್ಕೆ ಇಷ್ಟೊಂದು ದುಂದುವೆಚ್ಚ ಅಗತ್ಯವಿತ್ತಾ ಎಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗಿದೆ.

    ಚಿತ್ರದುರ್ಗ ಜಿಲ್ಲಾಸ್ಪತ್ರೆ ಸುಮಾರು 6,000 ಬೆಡ್‍ಗಳ ವ್ಯವಸ್ಥೆ ಹೊಂದಿದೆ. ಆದರೆ ವೈದ್ಯರು, ಸಿಬ್ಬಂದಿ ಕೊರತೆ ಜೊತೆಗೆ ಮೂಲಭೂತ ಸೌಲಭ್ಯಗಳು ಇಲ್ಲಿಲ್ಲ. ಹೀಗಾಗಿ, ಆರೋಗ್ಯ ಸಚಿವ ಶ್ರೀರಾಮುಲು ನಿನ್ನೆ ರಾತ್ರಿ ವಾಸ್ತವ್ಯ ಹೂಡುವುದಾಗಿ ಹೇಳಿದ್ದರು. ಇದಕ್ಕಾಗಿ ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿತ್ತು. ಸಾಮಾನ್ಯ ದಿನಗಳಲ್ಲಿ ಗಬ್ಬು ನಾರುತ್ತಿದ್ದ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿ, ಹೈಟೆಕ್ ಟಚ್ ನೀಡಲಾಗಿತ್ತು.

    ಈವರೆಗೆ ಬಾಗಿಲು ತೆರೆಯದ ವಿಐಪಿ ವಾರ್ಡ್ ಗುರುವಾರ ದಿಢೀರ್ ಓಪನ್ ಆಗಿತ್ತು. ತುರ್ತು ಚಿಕಿತ್ಸಾ ವಾರ್ಡ್ ಹಾಗೂ ಜನರಲ್ ವಾರ್ಡ್ ನಲ್ಲಿ ವಾಸ್ತವ್ಯಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಹೊಸ ಎಸಿ, ಟಿವಿ, ಫ್ಯಾನ್ ಹಾಗೂ ಬೆಡ್, ಕಾಟ್‍ಗಳನ್ನು ತರಿಸಿ ಭರ್ಜರಿಯಾಗಿ ಸಿದ್ಧಗೊಳಿಸಲಾಗಿತ್ತು. ಆದರೆ ಆರೋಗ್ಯ ಸಚಿವರು ಅನ್ಯ ಕಾರ್ಯನಿಮಿತ್ತ ವಾಸ್ತವ್ಯವನ್ನು ದಿಢೀರ್ ರದ್ದುಗೊಳಿಸಿದ್ದಾರೆ.

    ಕೇವಲ ಒಂದು ರಾತ್ರಿ ಬಂದು ಹೋಗುವ ಸಚಿವರ ಸ್ವಾಗತಕ್ಕಾಗಿ ಇಷ್ಟೆಲ್ಲ ಆಡಂಬರದ ಸಿದ್ಧತೆ ಮಾಡಬೇಕಿತ್ತಾ? ಅದರ ಬದಲಿಗೆ ನಿತ್ಯವೂ ಇದೇ ರೀತಿ ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಟ್ಟಿದ್ದರೆ ಆಗುತ್ತಿರಲಿಲ್ಲವೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

    ಈ ಆಕ್ರೋಶದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿರೋ ಸಚಿವ ಶ್ರೀರಾಮುಲು ಇವತ್ತು ಚಿತ್ರದುರ್ಗದ ಜಿಲ್ಲಾಪಂಚಾಯತ್‍ನಲ್ಲಿ ನಡೆಯಲಿರುವ ಕೆಡಿಪಿ ಸಭೆಗೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ.

  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಶ್ರೀರಾಮುಲು

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಶ್ರೀರಾಮುಲು

    – ಸಿಬ್ಬಂದಿಗೆ ಸಂಬಳ ಹೆಚ್ಚಳದ ಭರವಸೆ
    – ಸಚಿವರ ಕೆಲಸಕ್ಕೆ ಶ್ಲಾಘನೆ

    ಚಾಮರಾಜನಗರ: ಮಂಗಳವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆಯಲ್ಲೇ ಸ್ನಾನ ಮುಗಿಸಿ, ಶಿವಪೂಜೆ ನೆರವೇರಿಸಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ ಇರುವ ಸಮಸ್ಯೆ, ಕುಂದುಕೊರತೆಗಳನ್ನು ಅರಿಯಲು ಸ್ವತಃ ಆರೋಗ್ಯ ಸಚಿವರೇ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ರೋಗಿಗಳ ಸಮಸ್ಯೆಗಳನ್ನು ಹತ್ತಿರದಿಂದ ತಿಳಿಯಲು ಶ್ರೀರಾಮುಲು ಆಸ್ಪತ್ರೆಯಲ್ಲಿ ತಂಗಿದ್ದಾರೆ. ಬೆಳಗ್ಗೆ ಎದ್ದು ಆಸ್ಪತ್ರೆಯ ಶೌಚಾಲಯದಲ್ಲೇ ಸ್ನಾನ ಮುಗಿಸಿ, ತಾವು ಉಳಿದಿದ್ದ ಕೊಠಡಿಯಲ್ಲೇ ಸಚಿವರು ಶಿವಪೂಜೆ ಮಾಡಿದರು.

    ಪೂಜೆಯ ಬಳಿಕ ಆಸ್ಪತ್ರೆ ಆವರಣದಲ್ಲಿ ಶ್ರೀರಾಮುಲು ಅವರು ಸಿಬ್ಬಂದಿ ಜೊತೆ ಕುಂದುಕೊರತೆ ಸಭೆ ನಡೆಸಿದ್ದು, ಶುಶ್ರೂಷಕರ ಡಿ ದರ್ಜೆ ನೌಕರರ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ಸೇವಾಭದ್ರತೆ, ಸಂಬಳದ ಕೊರತೆ ಬಗ್ಗೆ ಸಚಿವರಲ್ಲಿ ಶುಶ್ರೂಷಕಿಯರು ಮನವಿ ಮಾಡಿದರು.

    ಆಸ್ಪತ್ರೆಯ ಸಮಸ್ಯೆ, ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿದ ಸಚಿವರು, ಕೇಂದ್ರ ಸರ್ಕಾರದ ನೂತನ ಯೋಜನೆ ಬಗ್ಗೆ ತಿಳಿಸಿ ಸಂಬಳ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದರು. ಶ್ರೀರಾಮುಲು ಅವರ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ವತಃ ಸಚಿವರೇ ಹೀಗೆ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹಾರ ನೀಡುವುದು ಒಂದೊಳ್ಳೆ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.

  • ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ ಶ್ರೀರಾಮುಲು

    ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ ಶ್ರೀರಾಮುಲು

    – ಲೋಪವೆಸಗುವ ವೈದ್ಯರಿಗೆ ಖಡಕ್ ವಾರ್ನಿಂಗ್

    ಬಳ್ಳಾರಿ: ಸಮಸ್ಯೆ ಬಗೆಹರಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಇಂದು ಬಳ್ಳಾರಿಯಲ್ಲಿ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದೇನೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಸ್ತವ್ಯ ಮಾಡುವ ಮೂಲಕ ಶೀಘ್ರದಲ್ಲೇ ಈ ಬಗ್ಗೆ ಚರ್ಚೆ ಮಾಡಿ ಈ ‘ಆಸ್ಪತ್ರೆ ವಾಸ್ತವ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಹೇಳಿದರು.

    ಅಲ್ಲದೇ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಗಡುವು ನೀಡಿರುವ ಆರೋಗ್ಯ ಸಚಿವರು, ಹದಿನೈದು ದಿನಗಳ ಕಾಲಮಿತಿಯಲ್ಲಿ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು, ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಕಲಬುರಗಿ ಡಯಾಲಿಸಿಸ್ ಘಟಕದಲ್ಲಿ ಮಗು ಸಾವಿನಪ್ಪಿದ ಪ್ರಕರಣದ ಬಗ್ಗೆ ಈಗಾಗಲೇ ನಾನು ವರದಿ ಕೇಳಿರುವೆ. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಅವರ ಕರ್ತವ್ಯ ಲೋಪ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳುವೆ ಎಂದರು.

    ಆಸ್ಪತ್ರೆಯ ಸೇವೆಗಳನ್ನು ನೀಡುವ ವಿಚಾರದಲ್ಲಿ ತಾಂತ್ರಿಕ ತೊಂದರೆ ನೆಪ ಹೇಳಬಾರದು, ಸೇವೆ ಒದಗಿಸುವಲ್ಲಿ ಏನೇ ಲೋಪ ಇದ್ದರೂ ಅದನ್ನು ಸರಿಪಡಿಸುವ ಜವಾಬ್ದಾರಿ ಸಂಬಂಧಿಸಿರುವ ಸಿಬ್ಬಂದಿಗಳ ಮೇಲಿದೆ. ಯಾವುದೇ ಕಾರಣಕ್ಕೂ ನೆಪಗಳನ್ನು ಕೇಳುವುದಿಲ್ಲ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.

    ಇದೇ ವೇಳೆ ಹಂಪಿ ಉತ್ಸವದ ಬಗ್ಗೆ ಮಾತನಾಡಿ, ಸಿಎಂ ಜೊತೆ ಚರ್ಚೆ ಮಾಡಿ ಶೀಘ್ರದಲ್ಲೇ ಅಧಿಕಾರಿಗಳು ಶಾಸಕರ ಸಭೆ ಕರೆಯುತ್ತೇನೆ. ದಿನಾಂಕ ನಿಗದಿ ಮಾಡಲಾಗುವುದು, ಮೈಸೂರು ದಸರಾದಂತೆ ಹಂಪಿ ಉತ್ಸವಕ್ಕೂ ನಿರ್ದಿಷ್ಟ ದಿನಾಂಕ ನಿಗದಿಪಡಿಸುವೆ ಎಂದು ಶ್ರೀರಾಮುಲು ತಿಳಿಸಿದರು.

  • ವಿಶ್ರಾಂತಿಗಾಗಿ ಕಾಡಿನ ಮಧ್ಯೆ ಇರೋ ಕಾಫಿ ಎಸ್ಟೇಟ್ ಸೇರಿದ ಎಚ್‍ಡಿಕೆ

    ವಿಶ್ರಾಂತಿಗಾಗಿ ಕಾಡಿನ ಮಧ್ಯೆ ಇರೋ ಕಾಫಿ ಎಸ್ಟೇಟ್ ಸೇರಿದ ಎಚ್‍ಡಿಕೆ

    ಚಿಕ್ಕಮಗಳೂರು: ರಾಜಕೀಯ ಜಂಜಾಟದಿಂದ ಬೇಸತ್ತು, ವಿಶ್ರಾಂತಿಗಾಗಿ ಜೆಡಿಎಸ್ ನಾಯಕರೊಂದಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಕಾಡಿನ ಮಧ್ಯದಲ್ಲಿ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಉದ್ಯಮಿ ವಿ.ಜಿ ಸಿದ್ದಾರ್ಥ್ ಅವರ ಅಂತ್ಯಕ್ರಿಯೆಗೆ ಚಿಕ್ಕಮಗಳೂರಿಗೆ ಹೆಚ್‍ಡಿಕೆ ಆಗಮಿಸಿದ್ದರು. ಅಂದಿನಿಂದ ಚಿಕ್ಕಮಗಳೂರಿನಲ್ಲೇ ಮಾಜಿ ಸಿಎಂ ಇದ್ದಾರೆ. ಆತ್ಮೀಯ ಸ್ನೇಹಿತ ರಂಗನಾಥ್ ಅವರ ಮನೆಯಲ್ಲಿ ಹೆಚ್‍ಡಿಕೆ ವಾಸ್ತವ್ಯ ಹೂಡಿದ್ದಾರೆ.

    ಕೊಪ್ಪದ ಗುಡ್ಡೆತೋಟದಲ್ಲಿ ರಂಗನಾಥ್ ಅವರ ಮನೆಯಿದ್ದು ಅಲ್ಲಿಯೇ ಹೆಚ್‍ಡಿಕೆ ಅವರು ತಂಗಿದ್ದಾರೆ. ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಕೂಡ ಸಾಥ್ ನೀಡಿದ್ದಾರೆ.

    ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ರಾಜಕೀಯ ಜಂಜಾಟದಿಂದ ಜೆಡಿಎಸ್ ನಾಯಕರು ರೋಸಿಹೋಗಿದ್ದರು. ಹೀಗಾಗಿ ಕಾಡಿನ ಮಧ್ಯೆ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

  • ಹೈಟೆಕ್ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ದಿಢೀರ್ ಗ್ರಾಮ ವಾಸ್ತವ್ಯ- ಚಾಪೆ ಮೇಲೆ ಮಲಗಿ ಹೈಟೆಕ್ ನಡುವೆ ಸರಳತೆ

    ಹೈಟೆಕ್ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ದಿಢೀರ್ ಗ್ರಾಮ ವಾಸ್ತವ್ಯ- ಚಾಪೆ ಮೇಲೆ ಮಲಗಿ ಹೈಟೆಕ್ ನಡುವೆ ಸರಳತೆ

    ತುಮಕೂರು: ಹೈಟೆಕ್ ರಾಜಕಾರಣಿ ಎಂದೇ ಆರೋಪ ಹೊತ್ತಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಇದೀಗ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ.

    ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿನ ಗ್ರಾಮ ವಾಸ್ತವ್ಯಕ್ಕೆ ಹೈಟೆಕ್ ಮನೆಯೊಂದನ್ನ ಆಯ್ಕೆ ಮಾಡಿ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ. ಮಂಗಳವಾರ ರಾತ್ರಿ ಪರಮೇಶ್ವರ್ ಅವರು ಕ್ಷೇತ್ರಕ್ಕೆ ದಿಢೀರ್ ಭೇಟಿ ನೀಡಿ ಎರಡನೇ ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

    ಕೊರಟಗೆರೆ ತಾಲೂಕಿನ ದೊಗ್ಗನಹಳ್ಳಿಯ ನಾಗರಾಜು ಎನ್ನುವ ರೈತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಬಾರಿ ಪರಮೇಶ್ವರ್ ದಲಿತರೊಬ್ಬರ ಚಿಕ್ಕ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಆದರೆ ಈ ಬಾರಿಯ ವಾಸ್ತವ್ಯಕ್ಕೆ ಗ್ರಾಮದ ಹೈಟೆಕ್ ಮನೆಯನ್ನೇ ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

    ಮನೆಯಲ್ಲಿ ಗ್ರಾನೈಟ್, ಹೈಟೆಕ್ ಟಿವಿ, ಮಂಚ, ಐಷಾರಾಮಿ ಕೋಣೆಗಳು ಹಾಗೂ ಎಲ್ಲಾ ಸೌಕರ್ಯವೂ ಇದ್ದು, ಪರಮೇಶ್ವರ್ ಗೆ ಸಕಲ ಸೌಕರ್ಯ ಒದಗಿಸಿದ್ದಾರೆ. ಇದರ ಮಧ್ಯೆ ಕೋಣೆಯೊಂದರಲ್ಲಿ ಚಾಪೆ ಮೇಲೆಯೇ ಮಲಗಿದ ಪರಮೇಶ್ವರ್ ಹೈಟೆಕ್ ನಡುವೆಯೇ ಸರಳತೆ ಪ್ರದರ್ಶಿಸಿದ್ದಾರೆ.

  • ಕರ್ನಾಟಕದತ್ತ ಅಮಿತ್ ಶಾ ಚಿತ್ತ- ಬೆಂಗ್ಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ ರಾಷ್ಟ್ರಾಧ್ಯಕ್ಷ

    ಕರ್ನಾಟಕದತ್ತ ಅಮಿತ್ ಶಾ ಚಿತ್ತ- ಬೆಂಗ್ಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ ರಾಷ್ಟ್ರಾಧ್ಯಕ್ಷ

    ಬೆಂಗಳೂರು: ಈಗಾಗಲೇ ಗುಜರಾತ್ ಚುನಾವಣೆ ಮುಗಿದಿದ್ದು, ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದತ್ತ ಮುಖ ಮಾಡಿದ್ದಾರೆ. ಗುಜರಾತ್ ಫಲಿತಾಂಶದ ಬೆನ್ನಲ್ಲೇ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

    ಸಂಕ್ರಾಂತಿ ವೇಳೆಗೆ ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಾದರಹಳ್ಳಿ ಸಮೀಪ ಏರ್ ಪೋರ್ಟ್ ರಸ್ತೆಯಲ್ಲಿರುವ ಬಹು ದೊಡ್ಡ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದಾರೆ.

    ಬಿಜೆಪಿ ಕಚೇರಿ ಹಾಗೂ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲೆಂದು ಸಾದರಹಳ್ಳಿಯಲ್ಲಿ ವಿಲ್ಲಾ ಬಾಡಿಗೆಗೆ ಪಡೆದಿದ್ದಾರೆ. ಈ ವಿಲ್ಲಾದಲ್ಲೇ ಎಲೆಕ್ಷನ್ ಕಾರ್ಯತಂತ್ರ ನಡೆಯುತ್ತದೆ. ವಾರ್ ರೂಂ, ಅಮಿತ್ ಶಾ ಅವರ ಸ್ಟ್ರ್ಯಾಟಜಿ ರೂಂ ಕೂಡ ವಿಲ್ಲಾದಲ್ಲೇ ಇದ್ದು, ವಾರ್ ರೂಂನ 10 ತಂಡವೂ ಬೆಂಗಳೂರಿಗೆ ಶಿಫ್ಟ್ ಆಗಲಿದೆ.

    ಅಮಿತ್ ಶಾ ಅವರು ವಾರದಲ್ಲಿ ಎರಡು ಬಾರಿ ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ. ಈ ವೇಳೆ ಮಂಗಳೂರು, ಮೈಸೂರು, ಹುಬ್ಬಳಿ, ಬೆಳಗಾವಿಗೂ ಕೂಡ ಅವರು ಹೋಗಲಿದ್ದಾರೆ. ಒಟ್ಟಿನಲ್ಲಿ ಹೊಸ ವರ್ಷದಿಂದ ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಅಸಲಿ ಆಟ ಶುರುವಾಗುತ್ತದೆ.