Tag: ವಾಸುಕಿ

  • Nagara Panchami : ವಾಸುಕಿಯನ್ನು ಹಿಡಿದು ಎಳೆದಾಡಿದ ದೇವತೆಗಳು, ರಾಕ್ಷಸರು!

    Nagara Panchami : ವಾಸುಕಿಯನ್ನು ಹಿಡಿದು ಎಳೆದಾಡಿದ ದೇವತೆಗಳು, ರಾಕ್ಷಸರು!

    ಪುರಾಣ ಕಥೆಗಳಲ್ಲಿ ದೇವತೆಗಳಿಗೆ ಅಮೃತ ಸಿಕ್ಕಿದ್ದನ್ನು ನೀವು ಓದಿರಬಹುದು. ಈ ಅಮೃತ ಸಿಗುವಲ್ಲಿ ವಾಸುಕಿಯ (Vasuki) ಪಾತ್ರವೂ ದೊಡ್ಡದು. ಶಿವನ ಅಷ್ಟಸರ್ಪಗಳಾದ ಅನಂತ (ಶೇಷ), ವಾಸುಕಿ, ತಕ್ಷಕ, ಕುಲಿಕ, ಕಾರ್ಕೋಟಕ, ಪದ್ಮ, ಮಹಾಪದ್ಮ, ಶಂಖಪಾಲ ಇವುಗಳಲ್ಲಿ ಒಬ್ಬ. ಕಶ್ಯಪನಿಂದ ಕದ್ರುವಿನಲ್ಲಿ ಜನಿಸಿದ ವಾಸುಕಿಯು ಶಿವನ ಕುತ್ತಿಗೆಯ ಸುತ್ತ ಸುತ್ತಿಕೊಂಡಿರುವುದರಿಂದ ಪ್ರಸಿದ್ಧನಾಗಿದ್ದಾನೆ. ಶಿವನು ಇವನನ್ನು ಆಶೀರ್ವದಿಸಿ ಆಭರಣವಾಗಿ ಧರಿಸಿದ್ದಾನೆ. ನಾಗರ ಪಂಚಮಿಯ (Nagara Panchami) ಹಬ್ಬದ ಹಿನ್ನೆಲೆಯಲ್ಲಿ ಸಮುದ್ರ ಮಂಥನದ (Samudra Manthan) ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ದುರ್ವಾಸ ಮುನಿ ಶಿಷ್ಯರೊಂದಿಗೆ ಶಿವನನ್ನು ಭೇಟಿಯಾಗಲು ಕೈಲಾಸದತ್ತ ಪ್ರಯಾಣ ಬೆಳೆಸುತ್ತಿದ್ದಾಗ ದಾರಿ ಮಧ್ಯೆ ದೇವೇಂದ್ರ ಸಿಗುತ್ತಾನೆ. ದೇವೇಂದ್ರ ದುರ್ವಾಸ ಮುನಿಗಳಿಗೆ ನಮಸ್ಕರಿಸಿ ಗೌರವದಿಂದ ಕಾಣುತ್ತಾನೆ. ದೇವೇಂದ್ರನ ಗುರು ಭಕ್ತಿಗೆ ಮೆಚ್ಚಿದ ದುರ್ವಾಸರು ಆತನಿಗೆ ವಿಶೇಷ ಹೂವಿನ ಹಾರವನ್ನು ಕೊಡುತ್ತಾರೆ. ಇಂದ್ರನು ಹೂವಿನ ಹಾರವನ್ನು ತನ್ನ ವಾಹನವಾದ ʼಐರಾವತʼದ ಸೊಂಡಿಲಿನ ಮೇಲಿಡುತ್ತಾನೆ.

    ಹೂವಿನ ಹಾರದ ಸುವಾಸನೆ ಐರಾವತಕ್ಕೆ ಕಿರಿಕಿರಿ ಉಂಟುಮಾಡುತ್ತದೆ. ಕೊನೆಗೆ ಸೊಂಡಿಲಿನಿಂದ ಹಾರವನ್ನು ನೆಲಕ್ಕೆ ಎಸೆಯುತ್ತದೆ. ಇದನ್ನು ನೋಡಿದ ದುರ್ವಾಸರು, ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು ಪ್ರಸಾದವಾಗಿ ನೀನು ನೋಡಬೇಕಿತ್ತು. ಆದರೆ ಅದನ್ನು ಆನೆಯ ಮೇಲೆ ಹಾಕಿದ್ದು ಸರಿಯಲ್ಲ. ಇದು ನೀನು ನನಗೆ ಮಾಡಿದ ಅವಮಾನ ಎಂದು ಹೇಳಿ ದೇವಲೋಕದಲ್ಲಿನ ಎಲ್ಲಾ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ವರಗಳು ನಾಶವಾಗಲಿ ಎಂದು ಶಾಪ ನೀಡುತ್ತಾರೆ. ದುರ್ವಾಸರ ಶಾಪದಿಂದ ಲಕ್ಷ್ಮಿ ಸ್ವರ್ಗ ಲೋಕವನ್ನು ತೊರೆಯುತ್ತಾಳೆ. ಇದನ್ನೂ ಓದಿ: Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ

    ದುರ್ವಾಸರ ಶಾಪದ ವಿಚಾರವನ್ನು ತಿಳಿದ ರಾಕ್ಷಸರು ದೇವಲೋಕದ ಮೇಲೆ ದಾಳಿ ಮಾಡುತ್ತಾರೆ. ದೇವರನ್ನು ಸೋಲಿಸಿ ಆಡಳಿತ ಮಾಡಲು ಆರಂಭಿಸುತ್ತಾರೆ. ದೇವಲೋಕವನ್ನು ಕಳೆದ ದು:ಖದಲ್ಲಿ ದೇವೇಂದ್ರ ಮತ್ತು ದೇವತೆಗಳು ಬ್ರಹ್ಮನ ಬಳಿ ಹೋಗಿ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾರೆ. ಇದಕ್ಕೆ ಬ್ರಹ್ಮ ಲಕ್ಷ್ಮಿಯನ್ನು ಕಳೆದುಕೊಂಡಿದ್ದರಿಂದ ವಿಷ್ಣುವಿನ ಬಳಿ ಹೋಗಿ ನೀವು ಪ್ರಾರ್ಥಿಸಿ. ಆತ ನಿಮಗೆ ಸಹಾಯ ಮಾಡುತ್ತಾನೆ ಎಂದು ಹೇಳುತ್ತಾನೆ.

    ವೈಕುಂಠಕ್ಕೆ ದೇವತೆಗಳು ಬಂದಾಗ ಎಲ್ಲಾ ವಿಚಾರಗಳನ್ನು ತಿಳಿದಿದ್ದ ವಿಷ್ಣು ಸದ್ಯ ಈಗ ಏನು ಮಾಡಲು ಸಾಧ್ಯವಿಲ್ಲ. ಮುಂದೆ ರಾಕ್ಷಸರ ಅಧಿಕಾರದ ಸಮಯ ಅಂತ್ಯವಾಗಲಿದೆ. ಸಮಯ ಅಂತ್ಯವಾಗುವ ಮೊದಲು ಅವರ ಜೊತೆ ಸ್ನೇಹ ಬೆಳೆಸಬೇಕು. ರಾಕ್ಷಸರಿಂದ ಮುಕ್ತಿ ಪಡೆಯಬೇಕೆಂದರೆ ಸಮುದ್ರ ಮಂಥನವಾಗಬೇಕು. ಸಮುದ್ರ ಮಂಥನ ನಿಮ್ಮ ಒಬ್ಬರಿಂದ ಸಾಧ್ಯವಿಲ್ಲ. ರಾಕ್ಷಸರ ಸಹಾಯವೂ ಬೇಕು. ಸಮುದ್ರ ಮಂಥನವಾದಾಗ ಅಮೃತ ಬರುತ್ತದೆ. ಈ ಅಮೃತವನ್ನು ನೀವು ಸೇವಿಸಿದರೆ ಮುಂದೆ ರಾಕ್ಷಸರಿಗೆ ಏನು ಮಾಡಲು ಸಾಧ್ಯವಿಲ್ಲ. ಈ ಅಮೃತವನ್ನು ಹಂಚುವ ಕೆಲಸ ನಾನು ಮಾಡುತ್ತೇನೆ ಎಂದು ಅಭಯ ನೀಡುತ್ತಾನೆ. ಇದನ್ನೂ ಓದಿ: ‘ನಾಗರಪಂಚಮಿ’ ವಿಶೇಷತೆ ಏನು?

    ದೇವತೆಗಳು ಸಮುದ್ರ ಮಥನದ ಬಗ್ಗೆ ರಾಕ್ಷಸರಲ್ಲಿ ತಿಳಿಸಿದಾಗ ಅವರು ಒಪ್ಪಿಗೆ ನೀಡುತ್ತಾರೆ. ಸಮದ್ರವನ್ನು ಕಡೆಯಲು ಮಂದಾರ ಪರ್ವತವನ್ನು ಕಡೆಗೋಲಾಗಿ ಬಳಸಲಾಯಿತು. ಮಹಾದೇವನ ಸರ್ಪವಾದ ವಾಸುಕಿಯು ಹಗ್ಗವಾಗಿ ನಾನು ಬರುತ್ತೇನೆ ಎಂದು ಹೇಳಿದ. ರಾಕ್ಷಸರು ಮಂದಾರ ಪರ್ವತವನ್ನು ಸುತ್ತಿದ ವಾಸುಕಿಯ ಹೆಡೆಯನ್ನು ಹಿಡಿದರೆ ದೇವತೆಗಳು ಬಾಲವನ್ನು ಹಿಡಿದು ಕಡೆಯಲು ಆರಂಭಿಸಿದರು.

    ದೇವತೆಗಳು, ರಾಕ್ಷಸರು ಕಡೆಯುವ ರಭಸಕ್ಕೆ ಮಂದಾರ ಪರ್ವತ ಕುಸಿಯಲು ಆರಂಭವಾದಾಗ ವಿಷ್ಣು ಕೂರ್ಮಾ (ಆಮೆ) ಅವತಾರವನ್ನು ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತುಕೊಂಡನು.

     

    ಸಮುದ್ರ ಮಂಥನ ಮಾಡುವಾಗ ಕೇವಲ ಅಮೃತ ಮಾತ್ರವಲ್ಲ, ವಿಷವು ಸಮುದ್ರದಿಂದ ಹೊರಬಂತು. ಈ ವಿಷವು ವಿಶ್ವವನ್ನೇ ನಾಶ ಮಾಡುವ ಶಕ್ತಿಯನ್ನು ಹೊಂದಿತ್ತು. ಕ್ಷೀರ ಸಮುದ್ರದಿಂದ ಹಾಲಾಹಲದ ಪರಿಣಾಮ ಗೋಚರಿಸುತ್ತಿದ್ದಂತೆ ದೇವತೆಗಳು ಶಿವನ ಬಳಿ ಹೋಗಿ ಪೃಥ್ವಿಯನ್ನು ರಕ್ಷಿಸು ಎಂದು ಮೊರೆಯಿಟ್ಟರು. ಶಿವನು ವಿಷವನ್ನು ಸೇವಿಸಿ, ತನ್ನ ಗಂಟಲಲ್ಲೇ ಹಿಡಿದಿಟ್ಟುಕೊಳ್ಳುತ್ತಾನೆ. ಜೀವಕೋಟಿಯ ಮೇಲಿನ ಅನುಕಂಪದಿಂದ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ ಪರಿಣಾಮ ಶಿವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಶಿವನನ್ನು ನೀಲಕಂಠನೆಂದು ಕರೆಯುತ್ತಾರೆ. ಕ್ಷೀರಸಾಗರದಿಂದ ಅಮೃತವು ಹೊರಬಂದಾಗ ವಿಷ್ಣು ಮೋಹಿನಿ ಅವತಾರವನ್ನು ಧರಿಸಿ ದೇವರುಗಳು ಅಮೃತವನ್ನು ಸೇವಿಸುವಂತೆ ಮಾಡುತ್ತಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೂಮಿಗಾಗಿ ಹುಡ್ಗಿ ವೇಷ ಹಾಕಿದ ಶೈನ್, ವಾಸುಕಿ, ಪ್ರತಾಪ್

    ಭೂಮಿಗಾಗಿ ಹುಡ್ಗಿ ವೇಷ ಹಾಕಿದ ಶೈನ್, ವಾಸುಕಿ, ಪ್ರತಾಪ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳು ಬಿಗ್‍ಬಾಸ್‍ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಭೂಮಿ ಶೆಟ್ಟಿಗಾಗಿ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಹುಡುಗಿಯರ ವೇಷ ಹಾಕಿಕೊಂಡು ಬಿಗ್‍ಮನೆಯಲ್ಲಿ ಓಡಾಡಿದ್ದಾರೆ.

    ಸ್ಪರ್ಧಿಗಳು ಈ ವಾರ ಮಾತ್ರ ಬಿಗ್‍ಬಾಸ್ ಮನೆಯಲ್ಲಿರುತ್ತಾರೆ. ಹೀಗಾಗಿ ಬಿಗ್ ಮನೆಯಲ್ಲಿ ನಿಮಗೆ ಈಡೇರಬೇಕಾದ ಯಾವುದಾದರೂ ಆಸೆ ಇದ್ದರೆ ತಿಳಿಸಿ ಎಂದು ಬಿಗ್‍ಬಾಸ್ ಹೇಳಿದ್ದರು. ಆಗ ಭೂಮಿ ಹುಡುಗರು ಹುಡುಗಿಯರ ರೀತಿ ಬಟ್ಟೆ ಧರಿಸಿಕೊಂಡು ಮನೆಯಲ್ಲಿ ಓಡಾಡಬೇಕು, ಹುಡುಗಿಯರು ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಓಡಾಡಬೇಕು ಎಂಬ ಆಸೆಯನ್ನು ಬಿಗ್‍ಬಾಸ್‍ಗೆ ತಿಳಿಸಿದ್ದರು.

    ಅದರಂತಯೇ ಬಿಗ್‍ಬಾಸ್ ಒಂದು ಗಂಟೆಯ ಕಾಲ ಪುರುಷರು ಮಹಿಳೆಯರ ರೀತಿ ಉಡುಪು ಧರಿಸಿಕೊಂಡು ಬಿಗ್‍ಬಾಸ್ ಮನೆಯಲ್ಲಿ ಓಡಾಡಬೇಕು ಎಂದು ತಿಳಿಸಿದ್ದರು. ಭೂಮಿಗಾಗಿ ಕುರಿ ಪ್ರತಾಪ್, ಶೈನ್ ಶೆಟ್ಟಿ ಮತ್ತು ವಾಸುಕಿ ಮೂವರು ಹುಡುಗಿಯ ರೀತಿ ಉಡುಪು ಧರಿಸಿಕೊಂಡು, ಧ್ವನಿ ಬದಲಾಯಿಸಿಕೊಂಡು ಮಾತನಾಡಿದ್ದಾರೆ. ಆಗ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು, ಮೀಸೆ ಬರೆದುಕೊಂಡು ಹುಡುಗಿಯರ ವೇಷದಲ್ಲಿದ್ದ ಮೂವರು ಹುಡುಗರನ್ನು ರೇಗಿಸುತ್ತಿದ್ದರು.

    ಸೋಫಾ ಮೇಲೆ ಕುಳಿತು ಮಾತನಾಡುತ್ತಿದ್ದಾಗ ವಾಸುಕಿ ಯಾರೋ ಒಬ್ಬರ ಚಟಕ್ಕೆ ನಾವು ಎಷ್ಟು ಜನ ಬಲಿಯಾಗಿದ್ದೀವಿ ನೋಡಿ ಎಂದು ಬೇಸರದಿಂದ ಹೇಳಿದ್ದಾರೆ. ಒಂದು ಗಂಟೆಯಾದ ತಕ್ಷಣ ಕುರಿ ಪ್ರತಾಪ್, ಶೈನ್, ವಾಸುಕಿ ಮೂವರು ಭೂಮಿಗೆ ತಮಾಷೆಯಿಂದ ಹೊಡೆದಿದ್ದಾರೆ. ಇದೊಂದು ಆಸೆನಾ, ನಮ್ಮ ಪರಿಸ್ಥಿತಿ ನೋಡು ಹೇಗಿದೆ, ನೀನು ಬೇಕಿದ್ದರೆ ಇಡೀ ದಿನ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು ಓಡಾಡಬೇಕಿತ್ತು ಎಂದು ಬೈದಿದ್ದಾರೆ.

  • ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ಸದಸ್ಯರು

    ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ಸದಸ್ಯರು

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ.

    ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್‍ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ಎಲ್ಲರೂ ಮನೆಯೊಳಗೆ ಹೋಗಿ ಕುಳಿತುಕೊಂಡು ಕೆಲಕಾಲ ಮಾತನಾಡಿದ್ದಾರೆ.

    ರಘು ದೀಕ್ಷಿತ್ ಮನೆಯಿಂದ ಹೋದ ಬಳಿಕ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಅಡುಗೆ ಮನೆಯಲ್ಲಿದ್ದರು. ಭೂಮಿ ಸೋಫಾ ಮೇಲೆ ಮಲಗಿದ್ದು, ಶೈನ್ ಭೂಮಿ ಪಕ್ಕದಲ್ಲಿ ಕುಳಿತಿದ್ದರು. ಆಗ ಭೂಮಿ, ನನಗೆ ಒಂಥರಾ ಆಗುತ್ತಿದೆ, ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಾಮಿಟ್ ಬರೋತರ ಆಗುತ್ತಿದೆ ಎಂದು ಹೇಳಿದ್ದಾರೆ.

    ಆಗ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಅಯ್ಯೋ ಇನ್ನೂ ಮೂರು ದಿನ ಇರುವುದಕ್ಕೂ ಆಗುವುದಿಲ್ಲವೆನೋ ಎಂದು ರೇಗಿಸುತ್ತಾ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ತಂದು ಕೂರಿಸಿದ್ದಾರೆ. ಅಷ್ಟೇ ಅಲ್ಲದೇ ಶೈನ್ ತಮಾಷೆಗೆ ಆಕೆಯ ಸೂಟ್‍ಕೇಸ್, ಬಟ್ಟೆ ತಂದು ಕೊಟ್ಟಿದ್ದಾರೆ.

    ಜೋಪಾನವಾಗಿ ಹೋಗು, ಹೊರಗಡೆ ಸಿಗೋಣ. ತುಂಬಾ ಚೆನ್ನಾಗಿ ಆಟವಾಡಿದ್ದೀಯಾ, ವಾರ ವಾರ ದಪ್ಪ ಆಗಿದ್ದೀಯಾ, ನಿನಗೆ ಹೊರಗಡೆ ಉಜ್ವಲವಾದ ಭವಿಷ್ಯವಿದೆ. ಹೋಗುವಾಗ ಬಿಗ್‍ಬಾಸ್ ಆಸ್ಪತ್ರೆಗೆ ತೋರಿಸುತ್ತಾರೆ ಎಂದು ಶೈನ್ ರೇಗಿಸಿದ್ದಾರೆ. ಕೊನೆಗೆ ತಿಂಡಿ ಜಾಸ್ತಿ ತಿಂದಿದ್ದಕ್ಕೆ ಈ ರೀತಿ ಆಗಿದೆ ಎಂದು ಭೂಮಿ ಒಪ್ಪಿಕೊಂಡಿದ್ದಾರೆ. ನಂತರ ಭೂಮಿಯನ್ನು ಬಿಗ್‍ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.