Tag: ವಾಲ್ಮೀಕಿ ನಿಗಮ ಭ್ರಷ್ಟಾಚಾರ ಪ್ರಕರಣ

  • Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

    Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam) ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ನಾಗೇಂದ್ರ ಅವರನ್ನ ಮತ್ತೆ 5 ದಿನ ಇಡಿ ಕಸ್ಟಡಿಗೆ (ED Custody) ನೀಡಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯ (Representative Court) ಆದೇಶಿಸಿದೆ.

    6 ದಿನಗಳ ಇ.ಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಗುರುವಾರ (ಜು.18) ವೈದ್ಯಕೀಯ ಪರೀಕ್ಷೆ (Medical Test) ಬಳಿಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಇಡಿ ಪರ ವಕೀಲ ಪ್ರಸನ್ನಕುಮಾರ್, ಇನ್ನೂ ವಿಚಾರಣೆ ಬಾಕಿ ಇರುವುದರಿಂದ 8 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದ್ರೆ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ 5 ದಿನಗಳ ಕಾಲ ಇ.ಡಿ ಕಸ್ಟಡಿಗೆ ಕೋರ್ಟ್ ಆದೇಶಿಸಿತು. 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ ಇ.ಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ `ಸುಪಾರಿ’ ಗಲಾಟೆ: ಬಿಜೆಪಿ ಶಾಸಕರ ಮಾತಿಗೆ ಕಾಂಗ್ರೆಸ್ ಕೆಂಡಾಮಂಡಲ!

    ಕೋರ್ಟ್‌ನಲ್ಲಿ ವಾದ-ಪ್ರತಿವಾದ ಹೇಗಿತ್ತು?
    ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಇದೇ ಜುಲೈ 12ರಂದು ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು. 6 ದಿನಗಳ ಕಸ್ಟಡಿ ಅಂತ್ಯಗೊಂಡ ಬೆನ್ನಲ್ಲೇ ನಾಗೇಂದ್ರ ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ಇ.ಡಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಇಡಿ ಪರ ವಕೀಲ ಪ್ರಸನ್ನಕುಮಾರ್ ವಾದಿಸಿ, 8 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ಇದಕ್ಕೆ ಆಕ್ಷೇಪಣೆ ಎತ್ತಿದ ಆರೋಪಿ ಪರ ವಕೀಲ ಶ್ಯಾಂ ಸುಂದರ್, ಈಗಾಗಲೇ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಇದೂವರೆಗೂ ಸಂಪೂರ್ಣ ರಿಮ್ಯಾಂಡ್ ಕಾಪಿ ಸಿಕ್ಕಿಲ್ಲ. ಈಗ ಹಾಜರುಪಡಿಸುತ್ತಿದ್ದಾರೆ. ಇಡಿ ಅಧಿಕಾರಿಗಳು ಪೊಲೀಸರ ಅಲ್ಲ. ಅವರು ದಾಖಲು ಮಾಡೋದು ಇಸಿಐಆರ್, ಎಫ್‌ಐಆರ್ ಅಲ್ಲ. ಅವರಿಗೆ ಬಂಧನ ಮಾಡುವ ಅಧಿಕಾರವೇ ಇಲ್ಲ. ಯಾವ ಅಧಿಕಾರದಲ್ಲಿ ಕಸ್ಟಡಿಗೆ ಕೇಳುತ್ತಾ ಇದ್ದಾರೆ? ಯಾವ ವಿಚಾರ ಇಟ್ಟುಕೊಂಡು ಕೇಳಲಾಗ್ತಿದೆ? ಎಂದು ವಾದಿಸಿದರು. ಇದನ್ನೂ ಓದಿ: NEET: ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು: ಸುಪ್ರೀಂ ಕೋರ್ಟ್

    ಇದಕ್ಕೆ ಪ್ರತಿವಾದ ಮಂಡಿಸಿದ ಪ್ರಸನ್ನಕುಮಾರ್, ಮತ್ತೆ ರಿಮ್ಯಾಂಡ್ ಕೇಳುತ್ತಾ ಇದ್ದಾರೆ. ನನಗೆ ಕಾಪಿ ಈಗ ಕೊಡ್ತಾ ಇದ್ದಾರೆ ಸರಿ ಅಲ್ಲ. ನೀವು ಹೊಸ ಅಡ್ವಕೇಟ್ ಅಲ್ಲ. ಕಾನೂನಿನ ಪ್ರಕಾರ ಮೊದಲೇ ರಿಮ್ಯಾಂಡ್ ಕಾಪಿ ಕೊಡಬೇಕು ಅಂತ ಇಲ್ಲ. ನಾವು ನ್ಯಾಯಾಲಯಕ್ಕೆ ಕೊಡಬೇಕು. ನ್ಯಾಯಾಲಯದ ಗಮನಕ್ಕೆ ತಂದ ಮೇಲೆಯೇ ಕಸ್ಟಡಿಗೆ ಪಡೆಯೋದು. ಡಿಫೆನ್ಸ್ ಅಡ್ವೊಕೇಟ್‌ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಇದೆಲ್ಲ ಅವರಿಗೆ ಗೊತ್ತಿದೆ ಎಂದು ಕುಟುಕಿದರು. ಇದನ್ನೂ ಓದಿ: ನಟ ದರ್ಶನ್ & ಗ್ಯಾಂಗ್‌ಗೆ ಆ.1ರ ವರೆಗೆ ಜೈಲೇ ಗತಿ – ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ

    ಅಲ್ಲದೇ ತನಿಖೆಗೆ ನಾಗೇಂದ್ರ ಸಹಕರಿಸುತ್ತಿಲ್ಲ. ಹೆಚ್ಚಿನ ವಿಚಾರಣೆ ಮುಂದುವರಿಸುವ ಅಗತ್ಯ ಇದೆ. ಪಿಎಂಎಲ್‌ಎ ಸೆಕ್ಷನ್ 65 ಅಡಿ ಆರೋಪಿ ಹೇಳಿಕೆ ದಾಖಲಿಸಲು ಅಧಿಕಾರ ಇದೆ ಎಂದರು. ಈ ವೇಳೆ ಶ್ಯಾಂ ಸುಂದರ್ ಅವರು, ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿ, ಇಡಿ ಅಧಿಕಾರಿಗಳು ಅಲ್ಲಿಯೇ ವಿಚಾರಣೆ ಮಾಡಬಹುದು. ಇಲ್ಲಿದ್ದರೇ ಅವರ ಮೇಲೆ ಒತ್ತಡ ಹೇರಲಾಗುತ್ತೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ, ಈಗಾಗಲೇ ಹೇಳಿಕೆ ದಾಖಲು ಮಾಡಿ ಆಗಿದೆ ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ಮತ್ತೆ 5 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು. ಇದನ್ನೂ ಓದಿ: ಮುಡಾ, ವಾಲ್ಮೀಕಿ ಹಗರಣ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – ಕಟ್ಟೆಯೊಡೆದ ಆಕ್ರೋಶ!

  • ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಕೇಸ್ – ಮಾಜಿ ಸಚಿವ ನಾಗೇಂದ್ರ ಬಂಧನ!

    ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಕೇಸ್ – ಮಾಜಿ ಸಚಿವ ನಾಗೇಂದ್ರ ಬಂಧನ!

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ (Valmiki Corporation Corruption Case) ಮಾಜಿ ಸಚಿವ ನಾಗೇಂದ್ರ (BN Nagendra) ಅವರನ್ನು ಶುಕ್ರವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ.

    ಹಗರಣ ಕೇಸ್‌ ಸಂಬಂಧ ಜಾರಿ ನಿರ್ದೇಶನಾಲಯದ (ED) ನಾಲ್ವರು ಅಧಿಕಾರಿಗಳ ತಂಡ ಶುಕ್ರವಾರ ವಿಚಾರಣೆಗೆ ನಾಗೇಂದ್ರ ಅವರ ಮನೆಗೆ ಆಗಮಿಸಿತ್ತು. ಬಳಿಕ ಮಾಜಿ ಸಚಿವರನ್ನ ವಶಕ್ಕೆ ಪಡೆದಿದ್ದ ಅಧಿಕಾರಿಗಳು ಸತತ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಶಾಂತಿನಗರ ಇಡಿ ಕಚೇರಿಗೆ ಕರೆತಂದಿದ್ದರು.

    ಮಹತ್ವದ ದಾಖಲೆಗಳ ಸಂಗ್ರಹ:
    ಬುಧವಾರವಷ್ಟೇ ಮಾಜಿ ಸಚಿವ ಬಿ.ಎನ್‌ ನಾಗೇಂದ್ರ, ದದ್ದಲ್ (BasanaGouda Daddal) ಅವರ ಆಪ್ತರು ಹಾಗೂ ಇತರ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನ ಕಲೆಹಾಕಿತ್ತು. 2ನೇ ದಿನವಾದ ಗುರುವಾರವೂ ದಾಳಿ ಮುಂದುವರಿದಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರು, ಬಳ್ಳಾರಿ, ರಾಯಚೂರು ಸೇರಿ ವಿವಿಧೆಡೆ ಶೋಧ ನಡೆಸಿದ್ದರು. ಬಳಿಕ ಮಾಜಿ ಮಂತ್ರಿ ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮತ್ತು ಅವರ ಆಪ್ತರನ್ನು ಅವರವರ ಮನೆಗಳಲ್ಲೇ ಅಗತ್ಯ ದಾಖಲೆಗಳನ್ನು ಮುಂದಿಟ್ಟುಕೊಂಡು ವಿಚಾರಣೆಗೆ ಒಳಪಡಿಸಿದ್ದರು.

    ಬಳ್ಳಾರಿಯಲ್ಲಿ ಇಡಿ ವಿಚಾರಣೆಗೆ ಅಸಹಾಕಾರ ತೋರಿದ್ದ ಹಿನ್ನೆಲೆಯಲ್ಲಿ ನಾಗೇಂದ್ರ ಪಿಎ ವಿಜಯ್ ಸೇರಿ ನಾಲ್ವರಿಗೆ ಇಡಿ ನೊಟೀಸ್ ಕೊಟ್ಟಿತ್ತು. ಬೆಂಗಳೂರಿಗೆ ಬಂದು ವಿಚಾರಣೆ ಎದುರಿಸಿ ಎಂದು ಸೂಚಿಸಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ನಾಗೇಂದ್ರ ಅವರನ್ನು ಇಡಿ ಬಂಧಿಸಿದೆ.

  • ಮಾಜಿ ಸಚಿವ ನಾಗೇಂದ್ರ ಆಪ್ತ ಬಂಧನ

    ಮಾಜಿ ಸಚಿವ ನಾಗೇಂದ್ರ ಆಪ್ತ ಬಂಧನ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ (Nagendra) ಅವರ ಆಪ್ತನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

    ನಾಗೇಂದ್ರ ಅವರ ಪಿಎ ಹರೀಶ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿ ಶಾಂತಿನಗರದ ಇಡಿ ಕಚೇರಿಗೆ ಕರೆತಂದಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್; ಕಾಂಗ್ರೆಸ್‌ ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ!

    ಅಕ್ರಮವಾಗಿ ಹಣ ಸಾಗಾಟದಲ್ಲಿ ಹರೀಶ್ ಪಾತ್ರ ವಹಿಸಿರುವುದು ಇಡಿ ತನಿಖೆಯಿಂದ ದೃಢಪಟ್ಟಿದೆ. ಸಚಿವರ ಪರವಾಗಿ ಪಿಎ ಡೀಲ್ ನಡೆಸಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆ ಅಧಿಕಾರಿಗಳು ಬಂಧಿಸಿದ್ದಾರೆ.

    ಮಾಜಿ ಸಚಿವ ನಾಗೇಂದ್ರ ಅವರ ನಿವಾಸದ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಇಡಿ ದಾಳಿ ನಡೆಸಿತ್ತು. ನಾಗೇಂದ್ರ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್; ಮಾಜಿ ಸಚಿವ ನಾಗೇಂದ್ರ, ದದ್ದಲ್ ಮನೆ ಮೇಲೆ ಇಡಿ ದಾಳಿ

  • ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

    ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

    – ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ ಸಿಬಿಐಗೆ ವಹಿಸಲು ಬಿಗಿ ಪಟ್ಟು

    ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ (Valmiki Corporation Corruption Scam) ಸಚಿವ ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಿರಿಯ ನಾಯಕರು ಒತ್ತಾಯಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಈ ಸಂಬಂಧ ವಿಜಯೇಂದ್ರ (BY Vijayendra) ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ವಿಜೇಂದ್ರ ಎಕ್ಸ್‌ ಖಾತೆಯಲ್ಲಿ ಏನಿದೆ?
    ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ದಿಕ್ಕು ತಪ್ಪಿಸಿ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ಎಸ್ಐಟಿ ರಚನೆ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಆರೋಪಿತರನ್ನು ರಕ್ಷಿಸಲು ಹೊರಟಿದೆ. ಎಸ್.ಐ.ಟಿ ರಚನೆ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಇದನ್ನು ಭಾರತೀಯ ಜನತಾ ಪಾರ್ಟಿಯು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.

    ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಅವರು ಸಾವಿಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಈಗಾಗಲೇ ಉಲ್ಲೇಖವಾಗಿರುವಂತೆ ಸ್ವತಃ ಸಚಿವ ಬಿ.ಎನ್‌ ನಾಗೇಂದ್ರ ಹೆಸರಿರುವುದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಈಗಾಗಲೇ ಸಂಪುಟದಿಂದ ಮುಖ್ಯಮಂತ್ರಿಗಳು ವಜಾಗೊಳಿಸಬೇಕಿತ್ತು ಆದರೆ ಈವರೆಗೂ ಆರೋಪ ಹೊತ್ತವರನ್ನು ಅವ್ಯವಹಾರದ ಜಾಲದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.

    ಪರಿಶಿಷ್ಟ ಪಂಗಡದ ಹಿತಾಸಕ್ತಿಗೆ ದ್ರೋಹ ಬಗೆದು ಹಣ ದುರುಪಯೋಗ ಮಾಡಿಕೊಂಡಿರುವುದರ ವಿರುದ್ಧ ಹಾಗೂ ಅಮೂಲ್ಯ ಜೀವವೊಂದು ಆತ್ಮಹತ್ಯೆಗೆ ಈಡಾಗಿರುವುದರ ಕುರಿತು ಈ ಸರ್ಕಾರ ಎಳ್ಳಷ್ಟೂ ತಲೆ ಕೆಡಿಸಿಕೊಳ್ಳದೆ, ಯೂನಿಯನ್ ಬ್ಯಾಂಕ್ ಮೇಲೆ ಗೂಬೆ ಕೂರಿಸಲು ಹೊರಟಿದೆ. ಸದ್ಯ ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿನ್ನೆಲೆಯಲ್ಲಿ ಗತ್ಯಂತರವಿಲ್ಲದೇ ಎಸ್ಐಟಿ ರಚಿಸಿ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದೆ.

    ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಂತರಾಜ್ಯ ವ್ಯಾಪ್ತಿಯಲ್ಲಿ ದುರುಪಯೋಗವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಸರ್ಕಾರದ ಬಹುದೊಡ್ಡ ಹಗರಣವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಹೊರತುಪಡಿಸಿ ಇನ್ಯಾವ ಬಗೆಯ ತನಿಖೆಯನ್ನು ರಾಜ್ಯ ಬಿಜೆಪಿ ಒಪ್ಪುವುದಿಲ್ಲ, ಸಿಬಿಐ ತನಿಖೆಯ ಬೇಡಿಕೆಗೆ ಸರ್ಕಾರ ಒಪ್ಪುವವರೆಗೂ, ಆರೋಪಿತ ಸಚಿವ ಬಿ.ನಾಗೇಂದ್ರ ಸ್ಥಾನ ತೆರವಾಗಿ ಅವರಿಗೆ ತಕ್ಕ ಶಿಕ್ಷೆಯಾಗುವವರೆಗೂ ತಾರ್ಕಿಕ ಅಂತ್ಯಕ್ಕೆ ನಾವು ಹೋರಾಟವನ್ನು ಕೊಂಡೊಯ್ಯಲಿದ್ದೇವೆ ಎಂದು ಎಚ್ಚರಿಸಿದ್ದಾರೆ.