Tag: ವಾರಿಸ್ ಪಠಾಣ್

  • ದೆಹಲಿ ದಂಗೆಗೆ ಸೋನಿಯಾ, ರಾಹುಲ್ ಪ್ರಚೋದನೆ – ಎಫ್‍ಐಆರ್ ದಾಖಲಿಸಲು ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

    ದೆಹಲಿ ದಂಗೆಗೆ ಸೋನಿಯಾ, ರಾಹುಲ್ ಪ್ರಚೋದನೆ – ಎಫ್‍ಐಆರ್ ದಾಖಲಿಸಲು ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

    ನವದೆಹಲಿ: ದ್ವೇಷದ ಭಾಷಣ ಮಾಡಿ ದೆಹಲಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನೀಷ್ ಸಿಸೋಡಿಯಾ ವಿರುದ್ಧ ಎಫ್‍ಐಆರ್ ದಾಖಲಿಸುವ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಬಳಿ ಪ್ರತಿಕ್ರಿಯೆ ನೀಡಿದೆ.

    ದೆಹಲಿ ಗಲಭೆಗೆ ರಾಜಕೀಯ ನಾಯಕರ ಪ್ರಚೋದನಾಕಾರಿ ಹೇಳಿಕೆಯೇ ಕಾರಣ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ, ಆಪ್ ಶಾಸಕ ಅಮಾನತುಲ್ಲಾ ಖಾನ್, ಎಐಎಂಐಎಂ ನಾಯಕರಾದ ಅಕ್ಬರುದ್ದೀನ್ ಓವೈಸಿ, ವಾರಿಸ್ ಪಠಾಣ್, ವಕೀಲ ಮೊಹಮ್ಮದ್ ಪ್ರಾಚ ವಿರುದ್ಧ ಎಫ್‍ಐಆರ್ ದಾಖಲಿಸಲು ಆದೇಶ ನೀಡಬೇಕೆಂದು ‘ಲಾಯರ್ಸ್ ವಾಯ್ಸ್’ ಸಂಘಟನೆ ಅರ್ಜಿ ಸಲ್ಲಿಸಿತ್ತು.

    ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಸಿ ಹರಿ ಶಂಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಎಫ್‍ಐಆರ್ ದಾಖಲಿಸುವ ಸಂಬಂಧ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.

    ದ್ವೇಷದ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ನೋಟಿಸ್ ಜಾರಿ ಮಾಡಿದ ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 13ಕ್ಕೆ ಮುಂದೂಡಿದೆ.

    ಅಜಿ ವಿಚಾರಣೆಯ ಸಂದರ್ಭದಲ್ಲಿ ಲಾಯರ್ಸ್ ವಾಯ್ಸ್ ಸಂಘಟನೆಯ ಪರ ವಕೀಲರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರೇ ನಾಯಕರ ಹೇಳಿಕೆಗಳನ್ನು ನ್ಯಾಯಾಧೀಶರ ಮುಂದೆ ಓದಿದರು. ಈ ಹೇಳಿಕೆಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದರಿಂದ ದೆಹಲಿ ದಂಗೆ ನಡೆದಿದೆ. ಈ ಕೋಮು ಗಲಬೆ ಏಳಲು ಇವರ ಹೇಳಿಕೆಯೇ ಮುಖ್ಯ ಕಾರಣ ಎಂದು ಕೋರ್ಟ್ ಗಮನಕ್ಕೆ ತಂದರು.