Tag: ವಾರಾಂತ್ಯ

  • UAEಯಲ್ಲಿ ನಾಲ್ಕೂವರೆ ದಿನ ಮಾತ್ರ ಕೆಲಸ – ಶನಿವಾರ, ಭಾನುವಾರ ವೀಕೆಂಡ್

    UAEಯಲ್ಲಿ ನಾಲ್ಕೂವರೆ ದಿನ ಮಾತ್ರ ಕೆಲಸ – ಶನಿವಾರ, ಭಾನುವಾರ ವೀಕೆಂಡ್

    ಅಬುಧಾಬಿ: ಎಲ್ಲಾ ಸರ್ಕಾರಿ ಘಟಕಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಇನ್ಮುಂದೆ ನಾಲ್ಕೂವರೆ ದಿನಗಳವರೆಗೂ ಕೆಲಸ ಮಾಡುವಂತೆ ಹೊಸ ವೇಳಾಪಟ್ಟಿಯನ್ನು ಜಾರಿಗೆ ತರಲು ಯುನೈಟೆಡ್ ಅರಬ್ ಎಮಿರೇಟ್ಸ್ ನಿರ್ಧರಿಸಿದೆ. ಶುಕ್ರವಾರ ಮಧ್ಯಾಹ್ನದ ಜೊತೆ ಶನಿವಾರ ಮತ್ತು ಭಾನುವಾರ ಹೊಸ ವಾರಾಂತ್ಯವೆಂದು ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತಂತೆ ಇಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಲಾಗಿದ್ದು, 2022ರ ಜನವರಿ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಇದು ಕೆಲಸದ ವಾರವನ್ನು ಪಾಶ್ಚಿಮಾತ್ಯ ವೇಳಾಪಟ್ಟಿಗಳಿಗೆ ಅನುಗುಣವಾಗಿ ಮಾಡುತ್ತದೆ. ಕೆಲಸದ ಜೀವನ ಸಮತೋಲನ ಮತ್ತು ಆರ್ಥಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಗುರಿಯನ್ನು ಈ ಬದಲಾವಣೆ ಹೊಂದಿದೆ. ಐದು ದಿನಗಳಿಂದ ಕಡಿಮೆ ವಾರದ ಕೆಲಸ ಮಾಡಲು ಅವಕಾಶ ನೀಡಿದ ವಿಶ್ವದ ಏಕೈಕ ರಾಷ್ಟ್ರ ಯುಎಇ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ:  ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

    ಆರ್ಥಿಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಜಾಗತಿಕ ಬೆಳವಣಿಗೆಗಳೊಂದಿಗೆ ವೇಗವನ್ನು ಹೆಚ್ಚಿಸುವ ದೃಷ್ಟಿಯಿಂದ ಯುಎಇಯು ಈ ಪರಿವರ್ತನೆಗೊಳಿಸಿದೆ ಎಂದು ಅಬುಧಾಬಿ ಸರ್ಕಾರಿ ಮಾಧ್ಯಮ ಕಚೇರಿ ಪ್ರಕಟಿಸಿದೆ. ಇದನ್ನೂ ಓದಿ:  ಯುಎಸ್, ಭಾರತದ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ CEO

    ಹೊಸ ವೇಳಾ ಪಟ್ಟಿಯ ಪ್ರಕಾರ ಸೋಮವಾರದಿಂದ ಗುರುವಾರದವರೆಗೆ ಎಂಟು ಗಂಟೆಗಳ ಪೂರ್ಣ ಕಾಲ ನೌಕರರು ಕೆಲಸ ಮಾಡಬೇಕಾಗಿರುತ್ತದೆ. ಆದರೆ ಶುಕ್ರವಾರ ಮಾತ್ರ ನಾಲ್ಕೂವರೆ ಗಂಟೆ ಕೆಲಸ ಮಾಡಬೇಕಾಗಿರುತ್ತದೆ. ಸರ್ಕಾರಿ ನೌಕರರು ಶುಕ್ರವಾರ ಕೂಡ ಕೆಲಸ ಮಾಡಲು ಬಯಸಿದ್ದಲ್ಲಿ ವರ್ಕ್ ಫ್ರಮ್ ಹೋಂ ಮೂಲಕ ಕೆಲಸ ಮಾಡಲು ಅನುಮತಿ ನೀಡಲಾಗಿದೆ.

    ಮುಸ್ಲಿಂ ರಾಷ್ಟ್ರಗಳಲ್ಲಿ, ಶುಕ್ರವಾರವನ್ನು ಸಾಮಾನ್ಯವಾಗಿ ವಾರದ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಯುಎಇಯಲ್ಲಿ ಶುಕ್ರವಾರದ ಮಧ್ಯಾಹ್ನ 1:15 ಕ್ಕೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅಲ್ಲದೇ ಕೆಲವು ನೆರೆಯ ದೇಶಗಳಲ್ಲಿ ಕೂಡ ಪ್ರಾರ್ಥನೆ ಮುಗಿಯುವವರೆಗೂ ಅಂಗಡಿಗಳನ್ನು ತೆರೆಯುವ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಈ ಹೊಸ ವ್ಯವಸ್ಥೆ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಮತ್ತು ಶಾಲೆಗಳಿಗೆ ಅನ್ವಯಿಸಲಾಗುತ್ತದೆಯೇ ಎಂಬುದರ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿಲ್ಲ.

    ಯುಎಇಯಲ್ಲಿ 2006 ರವರೆಗೆ ಗುರುವಾರ-ಶುಕ್ರವಾರ ವಾರಾಂತ್ಯ ಇತ್ತು. ನಂತರ ಖಾಸಗಿ ವಲಯವನ್ನು ಅನುಸರಿಸಿ ಶುಕ್ರವಾರ ಮತ್ತು ಶನಿವಾರಗಳಿಗೆ ಸ್ಥಳಾಂತರಗೊಂಡಿತು.

  • ನಂದಿಬೆಟ್ಟದಲ್ಲಿ ನಂದಿ ಸಂತೆ – ವೀಕೆಂಡಲ್ಲಿ ಇನ್ಮುಂದೆ ಸಿಗುತ್ತೆ ರುಚಿಕರ ಊಟ!

    ನಂದಿಬೆಟ್ಟದಲ್ಲಿ ನಂದಿ ಸಂತೆ – ವೀಕೆಂಡಲ್ಲಿ ಇನ್ಮುಂದೆ ಸಿಗುತ್ತೆ ರುಚಿಕರ ಊಟ!

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಷ್ಟು ದಿನ ಊಟ ಸಿಗದೆ ಪರದಾಡುತ್ತಿದ್ದ ಪ್ರವಾಸಿಗರು, ಇನ್ನೂ ಹೊಟ್ಟೆ ತುಂಬಾ ಊಟ ಮಾಡಿ ಜೊತೆಗೆ ಮನೆಗೆ ಹಪ್ಪಳ, ಸಂಡಿಗೆ, ಮಸಾಲೆ ಪದಾರ್ಥಗಳು ಸೇರಿದಂತೆ ಬಗೆ ಬಗೆಯ ರಾಗಿಯ ತಿಂಡಿ-ತಿನಿಸುಗಳು, ಹಣ್ಣು-ತರಕಾರಿಗಳನ್ನ ಸಹ ಕೊಂಡೊಯ್ಯಬಹುದಾಗಿದೆ.

    ಹೌದು, ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಹಾಗೂ ಜಿಲ್ಲೆಯಲ್ಲಿ ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡುವುದರ ಜೊತೆಗೆ ಜಿಲ್ಲೆಯ ಸಂಸ್ಕೃತಿ, ಕಲೆ, ವಿಶಿಷ್ಟತೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾಡಳಿತ ನಂದಿ ಸಂತೆ ಆರಂಭಿಸಲು ಮುಂದಾಗಿದೆ.

    ಏನಿದು ನಂದಿ ಸಂತೆ..?
    ಪ್ರತಿ ಶನಿವಾರ ಹಾಗೂ ಭಾನುವಾರದಂದು ನಂದಿಗಿರಿಧಾಮಕ್ಕೆ 8 ರಿಂದ 10 ಸಾವಿರ ಮಂದಿ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಬೆಟ್ಟದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಉತ್ತಮ ಊಟ ಸಿಗುವಂತೆ ಮಾಡಲು ಸವಿರುಚಿ ಕ್ಯಾಂಟೀನ್ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ. ಜೊತೆಗೆ ವಿವಿಧ ಸ್ವಸಹಾಯ-ಮಹಿಳಾ ಸಂಘಗಳಿಂದ ಉತ್ಪಾದಿಸಲಾಗಿರುವ ಮಸಾಲೆ ಪದಾರ್ಥಗಳು, ರಾಗಿಯ ತಿಂಡಿ ತಿನಿಸುಗಳು, ಚರ್ಮ ಕಲಾಂಕರಿ ಕಲೆಯ ವಸ್ತುಗಳು, ಸ್ಥಳೀಯರೇ ಉತ್ಪಾದಿಸಿರುವ ಜವಳಿ ಹಾಗೂ ಖಾದಿ ಬಟ್ಟೆಗಳು, ಸೇರಿದಂತೆ ಸಿರಿಧಾನ್ಯ, ಸಾವಯವ ಹಣ್ಣು-ತರಕಾರಿಗಳು, ತೋಟಗಾರಿಕಾ ಇಲಾಖೆ ವತಿಯಿಂದ ವಿವಿಧ ಸಸಿಗಳು, ಬಿತ್ತನೆ ಬೀಜಗಳು ಸೇರಿದಂತೆ ತರಹೇವಾರಿ ಪದಾರ್ಥಗಳ ಮಳಿಗೆಗಳನ್ನ ತೆರೆಯಲು ಜಿಲ್ಲಾಡಳಿತ ಉದ್ದೇಶಿಸಿದೆ. ಜೊತೆಗೆ ಜಿಲ್ಲೆಯಲ್ಲಿನ ವಿವಿಧ ಕಲಾತಂಡಗಳು ಪ್ರವಾಸಿಗರ ಮುಂದೆ ತಮ್ಮ ಪ್ರತಿಭೆಗಳನ್ನ ಸಹ ಅನಾವರಣ ಮಾಡಲು ವೇದಿಕೆ ಅಣಿಗೊಳಿಸಲಾಗುತ್ತಿದೆ.

    ನಂದಿ ಸಂತೆ ಯಾಕೆ?
    ಬೆಂಗಳೂರಿನ ಟ್ರಾಫಿಕ್ ಕಿರಿ ಕಿರಿ ಜಂಜಾಟದ ಬದುಕಿನಲ್ಲಿ ವಾರಾಂತ್ಯದಲ್ಲಿ ಕಾಲ ಕಳೆಯಲು ಬೆಂಗಳೂರಿಗರ ಹಾಟ್ ಫೇವರಿಟ್ ಸ್ಟಾಟ್ ವಿಶ್ವವಿಖ್ಯಾತ ನಂದಿಗಿರಿಧಾಮ. ಹೀಗಾಗಿ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ವಾರಾಂತ್ಯದಲ್ಲಿ ಲಗ್ಗೆಯಿಡುತ್ತಾರೆ. ಆದರೆ ಇಷ್ಟು ದಿನ ನಂದಿಗಿರಿಧಾಮ ಸುತ್ತಾಡಲು ಬರುತ್ತಿದ್ದ ಮಂದಿಗೆ ಊಟ ಮಾಡಲು ಸರಿಯಾದ ಹೋಟೆಲ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು.

    ಈಗಾಗಲೇ ನಂದಿಗಿರಿಧಾಮದಲ್ಲಿ ಹೋಟೆಲ್ ವ್ಯವಸ್ಥೆ ಇದ್ದರೂ ದುಬಾರಿ ದುಡ್ಡು ಕೊಟ್ಟು ಕಳಪೆ ಗುಣಮಟ್ಟದ ಊಟ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಹತ್ತು ಹಲವು ಸಮಸ್ಯೆಗಳ ಕುರಿತು ಪ್ರವಾಸಿಗರು ಜಿಲ್ಲಾಡಳಿತಕ್ಕೆ ಸಾಕಷ್ಟು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ವಾರಾಂತ್ಯದಲ್ಲಿ ನಂದಿ ಸಂತೆ ಆಯೋಜನೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಜಿಲ್ಲೆಯ ಹಲವೆಡೆ ಉತ್ಪಾದಿಸುವ ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಸೇರಿದಂತೆ ಜಿಲ್ಲೆಯ ಕಲೆ, ಪ್ರತಿಭೆ, ಸಂಸ್ಕೃತಿ ಪರಿಚಯಿಸಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಇದರಂತೆ ಮುಂದಿನ ವಾರಾಂತ್ಯದಿಂದ ನಂದಿಗಿರಿಧಾಮದಲ್ಲಿ ನಂದಿಸಂತೆ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv