Tag: ವಾಯು ಮಾರ್ಗ

  • ಬಾಲಕೋಟ್ ಏರ್‌ಸ್ಟ್ರೈಕ್ ಬಳಿಕ ಪಾಕ್ ಎಂದಿಗೂ ಎಲ್‍ಓಸಿ ದಾಟಿಲ್ಲ: ಏರ್‌ಚೀಫ್‌ ಮಾರ್ಷಲ್

    ಬಾಲಕೋಟ್ ಏರ್‌ಸ್ಟ್ರೈಕ್ ಬಳಿಕ ಪಾಕ್ ಎಂದಿಗೂ ಎಲ್‍ಓಸಿ ದಾಟಿಲ್ಲ: ಏರ್‌ಚೀಫ್‌ ಮಾರ್ಷಲ್

    ನವದೆಹಲಿ: ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಸಿದ ಬಳಿಕ ಪಾಕಿಸ್ತಾನ ಎಂದಿಗೂ ಭಾರತದ ಗಡಿ ನಿಯಂತ್ರಣಾ ರೇಖೆಯನ್ನು ದಾಟಿಲ್ಲ ಎಂದು ಐಎಎಫ್ ಮುಖ್ಯಸ್ಥ ಬಿರೇಂದ್ರ ಸಿಂಗ್ ಧನೋವಾ ತಿಳಿಸಿದ್ದಾರೆ.

    ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಮುಚ್ಚಿರುವುದು ನೆರೆಯ ದೇಶಗಳಿಗೆ ತೊಂದರೆಯಾಗಿದೆಯೇ ಹೊರೆತು ಭಾರತಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಪಾಕಿಸ್ತಾನ ಹಾಗೂ ಭಾರತ ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಆದರೆ ಪಾಕ್‍ನ ಈ ನಿರ್ಣಯ ದೇಶದ ಒಳಗಡೆ ಇರುವ ನಾಗರಿಕಾ ವಿಮಾನಯಾನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದರು.

    ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಐಎಎಫ್ ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿರುವ ಜೈಶ್ ಉಗ್ರರ ಅಡಗು ತಾಣದ ಮೇಲೆ ಏರ್‌ಸ್ಟ್ರೈಕ್ ಮಾಡಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕ್ ಗಡಿ ನಿಯಂತ್ರಣ ರೇಖೆ ದಾಟಿ ಬಂದಿತ್ತು. ಆದರೆ ಉತ್ತರ ಕೊಡುವಲ್ಲಿ ವಿಫಲವಾಯ್ತು. ಭಾರತ ತನ್ನ ಕಾರ್ಯಾಚರಣೆಯಲ್ಲಿ ವಿಫಲವಾಗಿಲ್ಲ. ಹೀಗಾಗಿ ಏರ್‌ಸ್ಟ್ರೈಕ್ ಬಳಿಕ ಪಾಕಿಸ್ತಾನ ಎಂದಿಗೂ ಗಡಿ ನಿಯಂತ್ರಣಾ ರೇಖೆ ದಾಟಿ ಬಂದಿಲ್ಲ ಎಂದು ಐಎಎಫ್ ಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಂಡರು.

    ಪಾಕ್ ನಮ್ಮ ವಾಯು ನೆಲೆಯ ಮೇಲೆ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಸೈನ್ಯದ ಕಾರ್ಯವೈಕರಿ. ನಾವು ಬಾಲಕೋಟ್‍ನಲ್ಲಿ ಏರ್‌ಸ್ಟ್ರೈಕ್ ಮಾಡಲು ಕಾರ್ಯಾಚರಣೆ ನಡೆಸಿದೆವು. ಅದನ್ನು ಸಾಧಿಸಿ ತೋರಿಸಿದೆವು. ಹಾಗೆಯೇ ಪಾಕಿಸ್ತಾನ ಕೂಡ ನಮ್ಮ ಸೈನ್ಯದ ಮೇಲೆ ದಾಳಿ ನಡೆಸಲು ಬಂದಿತ್ತು. ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಹೇಗೆ ಕಾರ್ಯಾಚರಣೆ ನಡೆಸಿದ್ದೇವೆ? ಎಷ್ಟು ಜೆಟ್ ಉಪಯೋಗಿಸಿದ್ದೇವೆ ಎನ್ನುವುದಕ್ಕಿಂತ ನೀವು ನಿಮ್ಮ ಸೈನ್ಯದ ಗುರಿಯನ್ನು ತಲುಪಿದ್ದೀರಾ ಎನ್ನುವುದೇ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ನಾವು ನಿರೀಕ್ಷಿತ ಸಾಧನೆ ಮಾಡಿದ್ದೇವೆ ಎಂದರು.

    ಈ ವೇಳೆ ಕಾರ್ಗಿಲ್ ಯುದ್ಧವಾಗಿ 20 ವರ್ಷ ಕಳೆದಿರುವ ಬಗ್ಗೆ ಮಾತನಾಡಿ, ಈವೆರೆಗೆ ಭಾರತ ನಡೆಸಿದ ಎಲ್ಲಾ ದಾಳಿಯಲ್ಲೂ ನಾವು ನಮ್ಮ ಸಂಕಲ್ಪ ಹಾಗೂ ಸಾಮರ್ಥ್ಯವನ್ನು ತೋರಿಸಿದ್ದೇವೆ ಎಂದು ತಿಳಿಸಿದರು.

    ಭಾರತ ವಾಯು ಮಾರ್ಗ ಮುಚ್ಚುವ ಬಗ್ಗೆ ಪ್ರಶ್ನಿಸಿದಾಗ, ನಾವು ಫೆ.27ರಂದು ಶ್ರೀನಗರದ ವಾಯು ಮಾರ್ಗವನ್ನು ಮುಚ್ಚಿದ್ದೆವು. ಅದು ಕೇವಲ 2ರಿಂದ 3 ಗಂಟೆಗಳ ಕಾಲ ಮಾತ್ರ ಅಷ್ಟೇ ಎಂದು ಹೇಳಿದರು.

    ಪಾಕಿಸ್ತಾನದ ಜೊತೆ ಇರುವ ಉದ್ವಿಗ್ನ ಸ್ಥಿತಿಯಿಂದ ಭಾರತದ ವಿಮಾನಯಾನಕ್ಕೆ ಯಾವುದೇ ತೊಂದರೆಯಾಗಿಲ್ಲ. ಯಾಕೆಂದರೆ ನಮ್ಮ ಆರ್ಥಿಕತೆ ಅವರಿಗಿಂತ ಬಹಳ ದೊಡ್ಡದು. ಪಾಕಿಸ್ತಾನ ಅವರ ವಾಯು ಮಾರ್ಗವನ್ನು ಮುಚ್ಚಿದ್ದಾರೆ ಎಂದರೆ ಅದು ಅವರ ಸಮಸ್ಯೆ. ಆದರೆ ನಮ್ಮ ಆರ್ಥಿಕತೆಯಲ್ಲಿ ವಾಯು ಸಂಚಾರವು ಮುಖ್ಯ ಭಾಗವಾಗಿದೆ. ಹೀಗಾಗಿ ವಾಯುಪಡೆ ಕೂಡ ಎಂದಿಗೂ ನಾಗರಿಕ ವಿಮಾನಗಳನ್ನು ತಡೆಯುವುದಿಲ್ಲ ಎಂದು ಉತ್ತರಿಸಿದರು.

  • ಭಾರತ, ಪಾಕಿಸ್ತಾನ ವಾಯು ಮಾರ್ಗಗಳು ಬಂದ್!

    ಭಾರತ, ಪಾಕಿಸ್ತಾನ ವಾಯು ಮಾರ್ಗಗಳು ಬಂದ್!

    ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಎರಡು ದೇಶಗಳ ವಾಯು ಮಾರ್ಗದಲ್ಲಿ ಹಾರಾಟ ನಡೆಸುವ ವಿಮಾನಗಳ ಸಂಚಾರ ಬಂದ್ ಆಗಿದೆ.

    ಶ್ರೀನಗರ, ಜಮ್ಮು, ಲೇಹ್, ಚಂಡೀಗಢ, ಅಮೃತಸರ, ಧರ್ಮಶಾಲಾ, ಡೆಹ್ರಡೂನ್‍ನಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ.

    ಮುಂದಿನ ಮೇ ತಿಂಗಳವರೆಗೆ ಬಂದ್ ಮಾಡಿದ್ದು, ಪರ್ಯಾಯ ಮಾರ್ಗ ಉಪಯೋಗಿಸುತ್ತಿದೆ. ಮೇ 27ರ ರಾತ್ರಿ 11.55ರವರೆಗೆ ಭಾರತ ತನ್ನ ವಾಯುಮಾರ್ಗ ಬಂದ್ ಮಾಡಿದೆ.

    ಪಾಕಿಸ್ತಾನ ಈಗ ಮುಲ್ತಾನ್, ಲಾಹೋರ್, ಫೈಸಲಾಬಾದ್, ಸಿಯಾಲಟ್ ಕೋಟ್ ನಲ್ಲಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ. ದಿಢೀರ್ ಎಂದು ನಿಲ್ದಾಣಗಳು ಬಂದ್ ಆಗಿದ್ದರಿಂದ ಮಾರ್ಗವನ್ನು ಬದಲಿಸಲಾಗಿದೆ. ಕೆಲ ವಿಮಾನಗಳು ಇಂಧನ ಕೊರತೆಯಿಂದಾಗಿ ಹಾರಾಟ ನಡೆಸಿಲ್ಲ. ಎರಡು ದೇಶಗಳ ವಾಯುಮಾರ್ಗ ಬಂದ್ ಆಗಿದ್ದರಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ಏರುಪೇರಾಗಿದೆ.

    ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಕರಾಚಿ ಮತ್ತು ಲಾಹೋರ್ ಎಂದು ಎರಡು ಭಾಗವಾಗಿ ವಿಂಗಡಿಸಿದೆ. ಸದ್ಯ ಲಾಹೋರ್ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಪಾಕಿಸ್ತಾನ ಫೆ.28 ರಾತ್ರಿ 11.59ರವರೆಗೆ ತನ್ನ ವಾಯುಮಾರ್ಗವನ್ನು ಬಂದ್ ಮಾಡಿದೆ.

    ಇಂದು ಬೆಳಗ್ಗೆ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಸೇನೆಯ ಜೆಟ್ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಭಾರತದ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ಬಳಿಕ ಪ್ರತಿದಾಳಿ ನಡೆಸಿದ್ದ ಪಾಕಿಸ್ತಾನದ ಎಫ್ -16 ವಿಮಾನ ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆಯನ್ನು ಪ್ರವೇಶಿಸಿತ್ತು. ಗಡಿಯನ್ನು ದಾಟಿ 3 ಕಿ.ಮೀ ಪ್ರವೇಶಿಸಿದ ವಿಮಾನವನ್ನು ಭಾರತ ಹೊಡೆದು ಉರುಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ತಾತ್ಕಲಿಕವಾಗಿ ಎಲ್ಲ ನಾಗರೀಕ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ ಎಂದು ಶ್ರೀನಗರದ ಏರ್ ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv