Tag: ವಾಯುಸೇನೆ

  • ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ನವದೆಹಲಿ: ಭಾರತದ ವಾಯ ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಪಾಕಿಸ್ತಾನದ ಮೇಜರ್ ಜನರಲ್ ಆಸೀಪ್ ಗಫೂರ್ ಟ್ವೀಟ್ ಮಾಡುವ ಮೂಲಕ ಮೊಂಡುತನ ಪ್ರದರ್ಶನ ಮಾಡಿದ್ದಾರೆ.

    ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದಾರೆ.

    ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು. ಆದರೆ ಈ ಬಾರಿ ದಾಳಿಯನ್ನು ಒಪ್ಪಿಕೊಂಡಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿಸಿದೆ.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಬಳಸಿಕೊಳ್ಳಲಾಗಿದೆ. ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ ಎನ್ನಲಾಗುತ್ತಿದ್ದು, ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಪುಲ್ವಾಮಾ ದಾಳಿಯ 12 ನೇ ದಿನಕ್ಕೆ ಭಾರತೀಯ ಪ್ರತಿಕಾರ ತೀರಿಸಿರುವುದು ಸ್ಪಷ್ಟವಾಗಿದೆ.

    ಬಾಂಬ್ ದಾಳಿಯ ವೇಳೆ ಮಿರಾಜ್ ಗೆ ಸುಖೋಯ್ ಯುದ್ಧ ವಿಮಾನ ಕೂಡ ಬೆಂಗಾವಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿರಾಜ್-2000, ಏಕಕಾಲಕ್ಕೆ 1000 ಕೆ.ಜಿ ಲೇಸರ್ ಗೈಡೆಡೆ ಬಾಂಬ್ ಹಾಕಬಹುದಾದ ಸಾಮರ್ಥ್ಯ  ಹೊಂದಿದೆ. ಹೀಗಾಗಿ ಈ ವಿಮಾನಕ್ಕೆ ಭಾರತೀಯ ವಾಯು ಸೇನೆ `ವಜ್ರ’ ಎಂದು ಹೆಸರಿಟ್ಟಿದೆ. ಸದ್ಯ ದೇಶದ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    https://www.youtube.com/watch?v=Y3sC0vgwSyg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

    ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

    ಪೋಖ್ರಾನ್: ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಇತ್ತ ಪಾಕಿಸ್ತಾನ ಗಡಿಯಲ್ಲಿ ಭಾರತೀಯ ವಾಯಸೇನೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

    ಅಣ್ವಸ್ತ್ರ ಪರೀಕ್ಷಾರ್ಥ ಪ್ರಯೋಗ ನಡೆದಿದ್ದ ರಾಜಸ್ಥಾನ ರಾಜ್ಯದ ಪೋಖ್ರಾನ್ ಮರುಭೂಮಿಯಲ್ಲಿ ಯುದ್ಧ ವಿಮಾನಗಳು ಅಬ್ಬರಿಸಿವೆ. ನಿರ್ದೇಶಿತ ಕ್ಷಿಪಣಿ ಪ್ರಯೋಗ ಮೂಲಕ ಆರ್ಭಟಿಸಿದ್ದು, ಈ ಮೂಲಕ ವೈರಿ ಪಾಕಿಸ್ತಾನಕ್ಕೆ ಭಾರತ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

    ಪಾಕಿಸ್ತಾನದ ಗಡಿಯಲ್ಲೇ ನಡೆದ ಪ್ರದರ್ಶನದಲ್ಲಿ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಭಾಗವಹಿಸಿದ್ದವು. ಪ್ರಮುಖವಾಗಿ ತೇಜಸ್, ಹಾಂಕ್ ಎಂಕೆ-132, ನೆಲದಿಂದ ಆಕಾಶಕ್ಕೆ ಮತ್ತು ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಯನ್ನು ಪ್ರಯೋಗಿಸಲಾಯಿತು. ಈ ವೇಳೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಅಧಿಕಾರಿಗಳು ಹಾಗೂ ಐಎಎಫ್ ಗೌರವಾನ್ವಿತ ಸಮೂಹ ಕ್ಯಾಪ್ಟನ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ಭಾಗವಹಿಸಿದ್ದರು. ಈ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ಇತ್ತ ಪುಲ್ವಾಮಾ ದಾಳಿ ವಿಚಾರದಲ್ಲಿ ಇಡೀ ದೇಶ ಒಂದಾಗಿದೆ. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಧ್ವನಿ ಹೊರಡಿಸಿವೆ. ಇಂದು ದೆಹಲಿಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಭಯೋತ್ಪಾದಕ ದಾಳಿಯನ್ನು ಸರ್ವಾನುಮತದಿಂದ ಖಂಡಿಸಿವೆ. ಭಯೋತ್ಪಾದನೆ ದಮನಕ್ಕಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬೆಂಬಲ ಘೋಷಿಸಿವೆ. ಹುತಾತ್ಮರ ಕುಟುಂಬಗಳ ದು:ಖದಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ.

    ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ದುರ್ಘಟನೆಗೆ ಕಾರಣರಾದವರೂ ಯಾರೇ ಆಗಿರಲಿ, ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಪಕ್ಷಗಳೂ ಒಮ್ಮತ ತೀರ್ಮಾನಕ್ಕೆ ಬಂದಿವೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ಸರ್ಕಾರದ ಜೊತೆ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ಹಿತಾಸಕ್ತಿ, ಭದ್ರತೆ ವಿಚಾರದಲ್ಲಿ ಸರ್ಕಾರದ ಜೊತೆ ನಿಲ್ಲುತ್ತೇವೆ, ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತಿದ್ದ ಪ್ರಧಾನಿ ನರೇಂದ್ರ ಮೋದಿಗೆ ಲೋಕಸಭಾ ಚುನಾವಣೆಗೂ ಮುನ್ನ ಅತಿ ದೊಡ್ಡ ಗೆಲುವಿನ ರೂಪದಲ್ಲಿ ರಫೇಲ್ ತೀರ್ಪು ಪ್ರಕಟವಾಗಿದೆ. ಜೆಟ್ ಖರೀದಿ ಸಂಬಂಧ ಯಾವುದೇ ತನಿಖೆಗೆ ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಪ್ರಕಟಿಸಿದೆ.

    ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ. ಇದನ್ನೂ ಓದಿ: ರಫೇಲ್ ಡೀಲ್ : ಮೋದಿಗೆ ಬಿಗ್ ರಿಲೀಫ್, ಕೈಗೆ ಮುಖಭಂಗ

    ರಫೇಲ್ ಖರೀದಿ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಈ ಕಾರಣಕ್ಕೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಸುಪ್ರೀಂ ತೀರ್ಪಿನಲ್ಲಿ ಏನಿದೆ?
    – ರಫೇಲ್ ಖರೀದಿ ಒಪ್ಪಂದದಲ್ಲಿ ಸಂದೇಹ ಪಡುವ ಅಗತ್ಯವಿಲ್ಲ. ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಯಾವುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಗುಣಮಟ್ಟದ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಖರೀದಿ ಒಪ್ಪಂದ ಬೆಲೆಯ ಪರಾಮರ್ಶೆ ಮಾಡುವುದು ಕೋರ್ಟ್ ಕೆಲಸವಲ್ಲ.

    – ದೇಶಕ್ಕೆ ನಾಲ್ಕು ಮತ್ತು ಐದನೇಯ ತಲೆಮಾರಿನ ಫೈಟರ್ ಜೆಟ್ ಭಾರತೀಯ ವಾಯುಸೇನೆಗೆ ನಿಯೋಜಿಸುವ ಅಗತ್ಯವಿದೆ. ಖರೀದಿ, ಬೆಲೆ ನಿರ್ಣಯ, ದೇಶಿ ಪಾಲುದಾರ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುವುದಿಲ್ಲ. ಒಪ್ಪಂದದಲ್ಲಿ ಭಾಗಿಯಾದ ಎಲ್ಲರೂ ಖರೀದಿ ಹೇಗೆ ನಡೆಯಿತು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತುಲಾತ್ಮಕ ಬೆಲೆ ವಿವರವನ್ನು ನೀಡಿ ವಿಮಾನಗಳನ್ನು ಖರೀದಿಸಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    – ನಾವು ಕೇಳಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರಿಂದ ನಮ್ಮ ಸಂಶಯ ಪರಿಹಾರವಾಗಿದ್ದು ತೃಪ್ತಿಯಾಗಿದೆ. ರಕ್ಷಣೆಯಂತಹ ಸೂಕ್ಷ್ಮ ವಿಚಾರದಲ್ಲಿ ತನಿಖೆಗೆ ಆದೇಶ ನೀಡುವುದು ಸರಿಯಲ್ಲ. ದೇಶಿ ಪಾಲುದಾರನ ಆಯ್ಕೆ ಮಾಡುವುದು ಕಂಪನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ.

    – ರಫೇಲ್ ಖರೀದಿ ಒಪ್ಪಂದದಲ್ಲಿ ದೇಶಿಯ ಪಾಲುದಾರಿಕೆಯ ಆಯ್ಕೆ ವಿಚಾರದಲ್ಲಿ ವಾಣಿಜ್ಯ ಒಲವು ತೋರಿಸಲಾಗಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂಡೆ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಿಂದ ರಫೇಲ್ ಜೆಟ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಎದ್ದಿದ್ದು ಈ ವಿಚಾರವನ್ನು ನಾವು ನ್ಯಾಯಾಂಗದ ಪರಿಧಿ ವ್ಯಾಪ್ತಿಯಲ್ಲಿ ಪರಾಮರ್ಶೆ ಮಾಡುವುದಿಲ್ಲ.

    – 126 ಜೆಟ್ ಬದಲು 36 ಜೆಟ್ ಖರೀದಿ ಒಪ್ಪಂದ ಮಾಡಿಕೊಂಡಿರುವ ಭಾರತ ಸರ್ಕಾರದ ಈ ನಿರ್ಧಾರವನ್ನು ಬದಲಾಯಿಸಿ ಎಂದು ನಾವು ಹೇಳಲು ಸಾಧ್ಯವಿಲ್ಲ. 2016ರ ಸಪ್ಟೆಂಬರ್ ತಿಂಗಳಿನಲ್ಲಿ ಈ ಡೀಲ್ ನಡೆದಾಗ ಯಾರು ಪ್ರಶ್ನೆ ಕೇಳಿರಲಿಲ್ಲ.

    – 4 ಮತ್ತು 5ನೇ ತಲೆಮಾರಿನ ಯುದ್ಧ ವಿಮಾನಗಳನ್ನು ವಾಯುಸೇನೆಗೆ ಅಗತ್ಯವಾಗಿದ್ದು, ಈ ವಿಮಾನಗಳನ್ನು ಸೇರ್ಪಡೆಗೊಳಿಸುವಂತಹ ವಿಚಾರದಲ್ಲಿ ಜನರ ವೈಯಕ್ತಿಯ ಗ್ರಹಿಕೆಗಳಿಗಿಂತಲೂ ಸೇನೆಯ ಅಭಿಪ್ರಾಯಗಳನ್ನು ನ್ಯಾಯಾಂಗ ಹೆಚ್ಚು ಪರಾಮರ್ಶಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

    ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

    ನವದೆಹಲಿ: ರಷ್ಯಾ ಜೊತೆಗಿನ ಮಾತುಕತೆಯ ವೇಳೆ ಭಾರತ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿ ಸೇರಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ.

    ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಸಭೆ ನಡೆಸಿದರು. ಮಾತುಕತೆಯ ವೇಳೆ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ, ಬಾಹ್ಯಾಕಾಶ ಸಹಕಾರ ಸೇರಿದಂತೆ ಒಟ್ಟು 8 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

    ಭಾರತ 5.43 ಶತಕೋಟಿ ಡಾಲರ್(ಅಂದಾಜು 40 ಸಾವಿರ ಕೋಟಿ ರೂ.) ವೆಚ್ಚದಲ್ಲಿ 5 ಎಸ್-400 ಟ್ರಯಂಫ್ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಏನಿದು ವಿಶೇಷ ವಾಯು ರಕ್ಷಣಾ ವ್ಯವಸ್ಥೆ? ಹೇಗೆ ಕೆಲಸ ಮಾಡುತ್ತದೆ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ಎಸ್-400 ಏರ್ ಟ್ರಯಂಫ್?
    ಸುಲಭವಾಗಿ ಒಂದು ವಾಕ್ಯದಲ್ಲೇ ಹೇಳುವುದಾದರೆ ಆಕಾಶದಲ್ಲೇ ಶತ್ರುಗಳನ್ನು ನಿರ್ನಾಮ ಮಾಡುವ ಸಾಮರ್ಥ್ಯ ಇರುವ ವಿಶೇಷ ವಾಯು ರಕ್ಷಣಾ ವ್ಯವಸ್ಥೆ. ಶತ್ರು ರಾಷ್ಟ್ರಗಳು ಕ್ಷಿಪಣಿಗಳು ಉಡಾಯಿಸಿದರೆ ಅದನ್ನು ಹೊಡೆದು ಉರುಳಿಸುವುದು ಸುಲಭದ ಮಾತಲ್ಲ. ಆದರೆ ವೇಗವಾಗಿ ಬರುವ ಕ್ಷಿಪಣಿಯನ್ನು ಆಕಾಶದಲ್ಲಿ ಹೊಡೆದು ಉರುಳಿಸುವ ಸಾಮರ್ಥ್ಯ ಈ ಎಸ್-400 ಟ್ರಯಂಫ್ ಗೆ ಇದೆ. ರಷ್ಯಾ 2007ರಲ್ಲಿ ಮೊದಲ ಬಾರಿಗೆ ಈ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು.

    ಹೇಗೆ ಕೆಲಸ ಮಾಡುತ್ತೆ?
    ನೆಲದಲ್ಲೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಶತ್ರು ಪಡೆಗಳ ಯುದ್ಧ ವಿಮಾನ ಹಾಗೂ ಕ್ಷಿಪಣಿ ದಾಳಿಯನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ದೀರ್ಘ ದೂರ ಕ್ರಮಿಸಬಲ್ಲ ನೆಲದಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದ್ದು, 2007 ರಲ್ಲಿ ನಿರ್ಮಾಣಗೊಂಡಿದ್ದ ಎಸ್-300 ಶ್ರೇಣಿಯ ಹೊಸ ಆವೃತ್ತಿ ಇದಾಗಿದೆ.

    380 ಕಿ.ಮೀ ವ್ಯಾಪ್ತಿ ಒಳಗಡೆ ಬರುವ ಹಲವು ಕ್ಷಿಪಣಿ ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಗುರುತಿಸಿ ಹೊಡೆದುರುಳಿಸುವ ಸೆಲ್ಫ್ ಸಿಸ್ಟಂ ವ್ಯವಸ್ಥೆ, ಬಹುಬಳಕೆಯ ರೇಡಾರ್ ಮತ್ತು ಗುರಿ ನಿಗದಿ ಉಡಾವಣೆ ವ್ಯವಸ್ಥೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಇದು ಒಳಗೊಂಡಿದೆ. ಲಾರಿಯ ಹಿಂಭಾಗದಲ್ಲಿ ವಾಯು ರಕ್ಷಣಾ ವ್ಯವಸ್ಥೆ ಇರುವ ಕಾರಣ ಯಾವ ಪ್ರದೇಶಕ್ಕೂ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಅಷ್ಟೇ ಅಲ್ಲದೇ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ. ಶತ್ರುಗಳ ದಾಳಿಯ ದಿಕ್ಕು ತಪ್ಪಿಸಲು ಏಕಕಾಲದಲ್ಲಿ 4 ಭಾಗಗಳಲ್ಲಿ ಕ್ಷಿಪಣಿಗಳನ್ನು ಗಗನಕ್ಕೆ ಚಿಮ್ಮಿಸಿ ರಕ್ಷಣಾ ಕವಚ ನಿರ್ಮಿಸಬಹುದಾಗಿದೆ. ಅಲ್ಲದೇ ಶತ್ರುನೆಲೆಯಿಂದ ತೂರಿ ಬರುವ ಮಾನವ ರಹಿತ ವಿಮಾನ, ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

    ಭಾರತಕ್ಕೆ ಅಗತ್ಯ ಏಕೆ?
    ಪಾಕ್ ಬಳಿ ಇರುವ 20 ಫೈಟರ್ ಸ್ಕ್ವಾಡ್ ಡ್ರೋನ್ಸ್ ಹಾಗೂ ಚೀನಾ ಬಳಿ ಇರುವ ಎಫ್-16, ಜೆ-17 ಆವೃತ್ತಿಯ ಫೈಟರ್ ಡ್ರೋನ್ ಹಾಗೂ 800 4-ಜೆನ್ ಫೈಟರ್ ವಿಮಾನಗಳಿಗೆ ಎಸ್-400 ವಾಯು ರಕ್ಷಣಾ ವ್ಯವಸ್ಥೆ ದಿಟ್ಟ ಉತ್ತರ ನೀಡಲಿದೆ. ಭಾರತ ಈ ವ್ಯವಸ್ಥೆಯನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ಸಿದ್ಧತೆ ನಡೆಸಿದೆ. ಭಾರತಕ್ಕೆ ಈ ವ್ಯವಸ್ಥೆ ಬಂದರೆ ವಾಯು ಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ.

    ಯಾವೆಲ್ಲ ದೇಶಗಳಲ್ಲಿ ಈ ವ್ಯವಸ್ಥೆ ಇದೆ?
    ರಷ್ಯಾದಿಂದ ಈ ವ್ಯವಸ್ಥೆಯನ್ನು ಮೊದಲು ಚೀನಾ ಖರೀದಿ ಮಾಡಿದೆ. 2014ರಲ್ಲಿ ಚೀನಾ ಒಪ್ಪಂದ ಮಾಡಿಕೊಂಡಿದ್ದು ಈಗಾಗಲೇ ಎಸ್-400 ಕ್ಷಿಪಣಿ ವ್ಯವಸ್ಥೆ ಚೀನಾಗೆ ತಲುಪಿದೆ. ಎಷ್ಟು ಪ್ರಮಾಣದಲ್ಲಿ ರಷ್ಯಾ ವಿತರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ. ಕಳೆದ ವರ್ಷ ಟರ್ಕಿ ಜೊತೆ ಒಪ್ಪಂದ ನಡೆದಿದೆ. ಭಾರತ ಅಷ್ಟೇ ಅಲ್ಲದೇ ಕತಾರ್ ಎಸ್-400 ಖರೀದಿಸಲು ಆಸಕ್ತಿ ತೋರಿಸಿದೆ.

    ಒಪ್ಪಂದದ ಉದ್ದೇಶ ಏನು?
    ರಷ್ಯಾದೊಂದಿಗೆ ಚೀನಾ ಉತ್ತಮ ಬಾಂಧವ್ಯ ಹೊಂದಿದರೆ ಭವಿಷ್ಯದಲ್ಲಿ ಭಾರತಕ್ಕೆ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣ ಮೋದಿ ವ್ಲಾದಿಮಿರ್ ಪುಟಿನ್ ಜೊತೆ ಉತ್ತಮ ಸಂಪರ್ಕ ಬೆಳೆಸಿದ್ದರು. ಇದಕ್ಕಾಗಿ ಕಳೆದ ಮೇನಲ್ಲಿ ರಷ್ಯಾಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದರು. ಈ ವೇಳೆಯೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಖರೀದಿಸುವ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ವಿಶ್ವದ ಮಿಲಿಟರಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಭಾರತಕ್ಕೆ ಎಸ್-400 ಸಹಕಾರಿಯಾಗಲಿದೆ.

    ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ  ಆತಂಕ ಯಾಕೆ?
    ರಷ್ಯಾದೊಂದಿಗಿನ ಭಾರತದ ಉತ್ತಮ ಸಂಬಂಧ ಹೊಂದಿರುವುದು ಅಮೆರಿಕ ಹಾಗೂ ಚೀನಾ, ಪಾಕಿಸ್ತಾನದ ನಿದ್ದೆಗೆಡಿಸಿದೆ. ಈಗಾಗಲೇ ಅಮೆರಿಕವೂ ರಷ್ಯಾ ಯುದ್ಧ ಸಾಮಾಗ್ರಿ ಖರೀದಿ ಮೇಲೆ ನಿರ್ಬಂಧ ವಿಧಿಸಿದೆ. ಇದರ ನಡುವೆಯೂ ಭಾರತ ದಿಟ್ಟ ನಿರ್ಧಾರ ಮಾಡಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಭಾರತದ ನೆರೆ ದೇಶಗಳ ಪೈಕಿ ಚೀನಾ ಮತ್ತು ಪಾಕಿಸ್ತಾನದಿಂದಲೇ ಕಿರಿಕ್ ಜಾಸ್ತಿ. ಆಗಾಗ ಖಂಡಾಂತರ ಕ್ಷಿಪಣಿಗಳನ್ನು ಚೀನಾ, ಪಾಕಿಸ್ತಾನ ಪರೀಕ್ಷೆ ಮಾಡುತ್ತಲೇ ಇರುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಿ ಆಗಬಹುದಾದ ದಾಳಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಭಾರತಕ್ಕೆ ಸಿಗಲಿದೆ.

    ಅಮೆರಿಕ ಎಚ್ಚರಿಕೆ:
    ಅಮೆರಿಕ ಯಾವಾಗಲೂ ತನ್ನ ಆರ್ಥಿಕ ಪ್ರಭಾವ ಬಳಸಿ ಇತರ ರಾಷ್ಟ್ರಗಳ ಆಂತರಿಕ ವಿಚಾರಕ್ಕೆ ತಲೆ ಹಾಕುತ್ತಿರುತ್ತದೆ. ರಷ್ಯಾ, ಇರಾನ್, ದಕ್ಷಿಣ ಕೊರಿಯಾ ದೇಶಗಳಿಗೆ ಆರ್ಥಿಕ ವ್ಯವಹಾರ ನಡೆಸುವ ಕುರಿತು ದಿಗ್ಬಂಧನ ವಿಧಿಸಿರುವ ಅಮೆರಿಕ ವಿಶ್ವದ ಇತರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಇದನ್ನು ಮೀರಿ ಇತರ ದೇಶಗಳು ಈ ರಾಷ್ಟ್ರಗಳೊಂದಿಗೆ ಹೆಚ್ಚಿನ ಆರ್ಥಿಕ ಒಪ್ಪಂದ ಮಾಡಿಕೊಂಡರೆ ಆ ದೇಶಗಳ ಮೇಲೂ ದಿಗ್ಬಂಧನ ವಿಧಿಸುವ ಅವಕಾಶವನ್ನು `ಕಾಟ್ಸಾ’ ಒಪ್ಪಂದ ಮೂಲಕ ಅಮೆರಿಕ ಹೊಂದಿದೆ. ಭಾರತ ಅಮೆರಿಕದಿಂದ ಸಾಕಷ್ಟು ಪ್ರಮಣದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ನಿರ್ಬಂಧ ಹೇರಲಿಕ್ಕಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

    ಏನಿದು ಕಾಟ್ಸಾ?
    ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.

    ವಿಶ್ವಸಂಸ್ಥೆಯ ಕಾಯ್ದೆಯಲ್ಲ:
    ರಷ್ಯಾದಿಂದ ಟ್ರಯಂಫ್ ಖರೀದಿಗೆ ಅಮೆರಿಕದಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಟ್ಸಾ ಕಾಯ್ದೆ ಅಮೆರಿಕದ್ದು ಹೊರತು ವಿಶ್ವಸಂಸ್ಥೆಯದ್ದಲ್ಲ. ಇದು ಭಾರತ ಮತ್ತು ರಷ್ಯಾದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದರು.

     

  • ಲಂಬೋರ್ಗಿನಿ Vs ಮಿಗ್ ಫೈಟರ್ ಜೆಟ್- ವೈರಲ್ ರೇಸ್ ವಿಡಿಯೋ ನೋಡಿ

    ಲಂಬೋರ್ಗಿನಿ Vs ಮಿಗ್ ಫೈಟರ್ ಜೆಟ್- ವೈರಲ್ ರೇಸ್ ವಿಡಿಯೋ ನೋಡಿ

    ಪಣಜಿ: ಇಟಲಿಯ ಲಂಬೋರ್ಗಿನಿ ಹುರಕೇನ್ ಹಾಗೂ ಮಿಗ್ 29ಕೆ ಫೈಟರ್ ನಡುವೆ ಗೋವಾ ವಿಮಾನ ನಿಲ್ದಾಣದಲ್ಲಿ ರೇಸ್ ನಡೆದಿದೆ.

    ಲಂಬೋರ್ಗಿನಿ ವೇಗವಾಗಿ ಚಲಿಸಿದರೂ ಮಿಗ್ ವಿಮಾನವನ್ನು ಸೋಲಿಸಲು ಆಗಲಿಲ್ಲ. ಆರಂಭದಲ್ಲಿ ನಿಧಾನವಾಗಿ ಬಳಿಕ ವೇಗವನ್ನು ಹೆಚ್ಚಿಸಿಕೊಂಡ ವಿಮಾನ ಕೊನೆಗೆ ಲಂಬ ಕೋನದಲ್ಲಿ ಟೇಕಾಫ್ ಆಗಿದೆ. ಭಾರತೀಯ ನೌಕಾಪಡೆಯಿಂದ ಯುವ ಜನರನ್ನು ಭಾರತೀಯ ಸೇನೆ ಸೇರಲು ಪ್ರೇರೇಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ನೌಕಾ ಸೇನೆಯಲ್ಲಿ 735 ಪೈಲಟ್ ಗಳ ನೇಮಕಕ್ಕೆ ಅನುಮತಿ ಸಿಕ್ಕಿದ್ದು, 91 ಹುದ್ದೆ ಖಾಲಿಯಿದೆ. ಭಾರತೀಯ ಸೇನೆಯ 794 ಹುದ್ದೆ ಭರ್ತಿಗೆ ಅನುಮತಿ ಸಿಕ್ಕಿದ್ದರೂ 192 ಹುದ್ದೆಗಳು ಖಾಲಿಯಿದೆ.

    https://www.youtube.com/watch?v=mRr1v4XFZU0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಉತ್ತರಾಖಂಡ್ ರಕ್ಷಣಾ ಕಾರ್ಯಚರಣೆ ಸ್ಫೂರ್ತಿ -ಚಹಾ ಮಾರುವವನ ಪುತ್ರಿ ಭಾರತೀಯ ವಾಯುಸೇನೆಗೆ ಆಯ್ಕೆ!

    ಉತ್ತರಾಖಂಡ್ ರಕ್ಷಣಾ ಕಾರ್ಯಚರಣೆ ಸ್ಫೂರ್ತಿ -ಚಹಾ ಮಾರುವವನ ಪುತ್ರಿ ಭಾರತೀಯ ವಾಯುಸೇನೆಗೆ ಆಯ್ಕೆ!

    ಭೋಪಾಲ್: ಭಾರತೀಯ ವಾಯುಸೇನೆ ನಡೆಸುವ ಹಾರಾಟ ವಿಭಾಗಕ್ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ಮಿಮುಚ್ ಜಿಲ್ಲೆಯಿಂದ ಚಹಾ ಮಾರಾಟ ಮಾಡುವವನ ಪುತ್ರಿ ನೇಮಕಗೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಅಂಚಲ್ ಗಂಗ್ವಾಲ್(24) ಆಯ್ಕೆಗೊಂಡ ಯುವತಿ. ಮೂಲತಃ ಮಿಮುಚ್ ಜಿಲ್ಲೆಯವರಾದ ಅಂಚಲ್ ವಾಯುಸೇನೆ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶ ರಾಜ್ಯದಿಂದ ಆಯ್ಕೆಯಾದ ಒಬ್ಬಳೆ ಒಬ್ಬ ಯುವತಿ. ಇವರ ತಂದೆ ಸುರೇಶ್ ಗಂಗ್ವಾಲ್ ಮಿಮುಚ್‍ನ ಬಸ್ ನಿಲ್ದಾಣದ ಬಳಿ ಚಹಾ ಅಂಗಡಿ ನಡೆಸುತ್ತಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಂಚಲ್, ನಾನು 12ನೇ ತರಗತಿಯಲ್ಲಿ ಓದುತ್ತಿರುವಾಗ 2013ರ ಉತ್ತರಾಖಂಡ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಭಾರತೀಯ ರಕ್ಷಣಾ ಪಡೆಗಳು ನಡೆಸಿದ ರಕ್ಷಣಾ ಕಾರ್ಯಚರಣೆಯಿಂದ ಪ್ರೇರೇಪಣೆಗೊಂಡು ಅಂದೇ ಭಾರತೀಯ ಸೇನೆಗೆ ಸೇರಬೇಕೆಂದು ನಿರ್ಧಾರ ಮಾಡಿಕೊಂಡಿದ್ದೆ. ಆದರೆ ನನ್ನ ಕುಟುಂಬ ನನ್ನನ್ನು ಓದಿಸುವಷ್ಟು ಆರ್ಥಿಕ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ನಾನು ಭಾರತೀಯ ವಾಯುಸೇನೆಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡು ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.

    ಭಾರತೀಯ ವಾಯುಸೇನಾ ಪರೀಕ್ಷೆಯು ಅಷ್ಟು ಸುಲಭವಾಗಿರಲಿಲ್ಲ. ನಾನು ಹಲವು ವರ್ಷಗಳಿಂದ 5 ಭಾರೀ ಪರೀಕ್ಷೆ ಬರೆದಿದ್ದರೂ ಆಯ್ಕೆಗೊಂಡಿರಲಿಲ್ಲ. ಈ ವರ್ಷ ಬರೆದ ಪರೀಕ್ಷೆಯಲ್ಲಿ ಜೂನ್ 6ರ ಫಲಿತಾಂಶದಲ್ಲಿ ತೇರ್ಗಡೆಯಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ತಂದೆ, ನಾನು ಬಸ್ ನಿಲ್ದಾಣದ ಹತ್ತಿರ ಚಹಾ ವ್ಯಾಪಾರ ಮಾಡುತ್ತಿದ್ದು, ಎಲ್ಲರೂ ನಾಮದೇವ್ ಟೀ ಸ್ಟಾಲ್ ಎಂದೇ ಗುರುತಿಸುತ್ತಾರೆ. ಮಗಳ ಈ ಸಾಧನೆಗೆ ಬರುವ ಗ್ರಾಹಕರು ಅಭಿನಂದನೆ ಸಲ್ಲಿಸಿ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ಆರ್ಥಿಕ ಸಂಕಷ್ಟದ ನಡುವೆಯೂ ಮೂರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಮಗ ಎಂಜಿನಿಯರಿಂಗ್ ಮಾಡುತ್ತಿದ್ದು, ಮಗಳು 12 ನೇ ತರಗತಿ ಓದುತ್ತಿದ್ದಾಳೆ. ಇಬ್ಬರಿಗೂ ಕೋಚಿಂಗ್ ನೀಡಲು ಸಾಲ ಮಾಡಿ ಸೇರಿಸಿದ್ದೆ ಎಂದು ಈ ವೇಳೆ ಹೇಳಿಕೊಂಡರು.

    ದೇಶಾದ್ಯಂತ ಒಟ್ಟು 6 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು,  ಕೇವಲ 22 ಮಂದಿ ಆಯ್ಕೆಗೊಂಡಿದ್ದಾರೆ ಇದರಲ್ಲಿ ಅಂಚಲ್‍ ಕೂಡ ಒಬ್ಬರಾಗಿದ್ದಾರೆ. ವಾಯುಸೇನಾ ಪಡೆಯು ಅಂಚಲ್‍ಗೆ ಜೂನ್ 30ರೊಳಗಾಗಿ ಹೈದರಾಬಾದ್‍ನ ದುಂಡಿಗಲ್ ಬಳಿ ಇರುವ ಭಾರತೀಯ ವಾಯುಸೇನಾ ಅಕಾಡೆಮಿಗೆ ಸೇರುವಂತೆ ಸೂಚಿಸಿದೆ.

  • ಭಾರತೀಯ ವಾಯುಪಡೆಯ 85ನೇ ದಿನಾಚರಣೆ: ನೀವು ತಿಳಿಯಲೇಬೇಕಾದ ವಿಚಾರಗಳು ಇಲ್ಲಿವೆ

    ಭಾರತೀಯ ವಾಯುಪಡೆಯ 85ನೇ ದಿನಾಚರಣೆ: ನೀವು ತಿಳಿಯಲೇಬೇಕಾದ ವಿಚಾರಗಳು ಇಲ್ಲಿವೆ

    ನವದೆಹಲಿ: ದೇಶದ ರಕ್ಷಣೆಗೆ ಪ್ರತಿಕ್ಷಣ ಸಿದ್ಧವಾಗಿರುವ ರಕ್ಷಣಾ ವ್ಯವಸ್ಥೆಯಲ್ಲಿ ವಾಯು ಸೇನೆಯ ಪಾತ್ರ ಅತ್ಯಂತ ಮಹತ್ವದಾಗಿದೆ. ಭಾನುವಾರ ಭಾರತೀಯ ವಾಯುಪಡೆ ಸ್ಥಾಪನೆಯಾಗಿ 85 ವರ್ಷಗಳು ಕಳೆದಿರುವ ಸಂದರ್ಭದಲ್ಲಿ ವಾಯುಪಡೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಸಾಧಿಸಿರುವ ಮಹತ್ವ ಹಾಗೂ ಐತಿಹಾಸಿಕ ಹಿನ್ನೆಲೆ ತಿಳಿಸುವ ಪ್ರಮುಖ ಮಾಹಿತಿಗಳು ಇಲ್ಲಿದೆ.

    85ನೇ ವಾಯುಪಡೆಯ ದಿನಚಾರಣೆ ಪ್ರಯುಕ್ತ ವಿಶೇಷ ಏರ್‍ಶೋಗಳು ಮತ್ತು ಮಿಲಿಟರಿ ಪ್ಯಾರಡೆಸ್‍ಗಳನ್ನು ದೇಶಾದ್ಯಂತ ಇರುವ ಇಂಡಿಯಾನ್ ಏರ್‍ಫೋರ್ಸ್ (ಐಎಎಫ್) ನಿಲ್ದಾಣಗಳಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮ ಆಚರಣೆಯ ಮುಖ್ಯ ಸಮಾರಂಭವನ್ನು ಉತ್ತರ ಪ್ರದೇಶದ ಘಜಿಯಾಬಾದ್‍ನ ಭಾರತೀಯ ವಾಯುನೆಲೆಯಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ವಾಯುಪಡೆಯ ಸೈನಿಕರನ್ನು ಸ್ಮರಿಸಿ ಗೌರವ ನೀಡುವ ಕಾರ್ಯಕ್ರಮ ನಡೆಯುತ್ತವೆ.

    ಭಾರತೀಯ ವಾಯುಪಡೆ ದಿನಾಚರಣೆಯನ್ನು ಮೊಟ್ಟಮೊದಲು 1932ರಲ್ಲಿ ಅಕ್ಟೋಬರ್ 8 ರಂದು ಆರಂಭಿಸಲಾಯಿತು. 1933ರಲ್ಲಿ ಐಎಎಫ್‍ನ ಕೇವಲ 6 ಪರಿಣಿತ ಅಧಿಕಾರಿಗಳು ಹಾಗೂ 19 ಏರ್‍ಮೆನ್ ಸಿಬ್ಬಂದಿ ಸೇರಿದಂತೆ ನಾಲ್ಕು ವೆಸ್ಟ್ ಲ್ಯಾಂಡ್ ವಾಪಿಟ್ ಐಐಎ ವಿಮಾನಗಳನ್ನು ಮಾತ್ರಗಳನ್ನು ಹೊಂದಿತ್ತು. ಅಲ್ಲದೆ 1933 ಏಪ್ರಿಲ್ 1 ರಂದು ತನ್ನ ಮೊದಲ ಸ್ಕ್ವಾಡ್ರನ್ ವಿಮಾನವನ್ನು ಸಿದ್ಧಪಡಿಸಿತ್ತು.

    ಎರಡನೇ ವಿಶ್ವ ಯುದ್ಧದ ಆರಂಭದಲ್ಲಿ 16 ಅಧಿಕಾರಿಗಳು 662 ಸಿಬ್ಬಂದಿಯನ್ನು ಹೊಂದಿತ್ತು. ಯುದ್ಧ ಕೊನೆಗೊಂಡಾಗ ಐಎಎಫ್ ಸಾಮರ್ಥ್ಯ  28,500 ಕ್ಕೆ ಹೆಚ್ಚಳವಾಗಿತ್ತು. 1945ರ ಮಾರ್ಚ್‍ನಲ್ಲಿ ಐಎಎಫ್ ಸಾಧನೆಗಳನ್ನು ಪರಿಗಣಿಸಿ `ರಾಯಲ್’ ಎಂಬ ಬಿರುದನ್ನು ನೀಡಲಾಯಿತು.

    ರಾಯಲ್ ಇಂಡಿಯನ್ ಏರ್‍ಫೋರ್ಸ್(ಆರ್‍ಐಎಎಫ್) 1946ರಲ್ಲಿ ತನ್ನ ಮೊದಲ ಟ್ರಾನ್ಸ್ ಪೋರ್ಟ್ ವಿಭಾಗವನ್ನು ಪಡೆಯಿತು. 1950ರಲ್ಲಿ ಸರ್ಕಾರ ವಾಯು ಸೇನೆಯ ಹೆಸರಿನಲ್ಲಿದ್ದ ರಾಯಲ್ ಎಂಬ ಪದವನ್ನು ತೆಗೆದುಹಾಕಿತು. 1950 ನಂತರ ಐಎಎಫ್ ದೇಶದ ಪ್ರಮುಖ ನಾಲ್ಕು ಯುದ್ಧಗಳಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ

    ಇದರಲ್ಲಿ ಮೂರು ಯುದ್ಧಗಳು ಪಾಕಿಸ್ತಾನದ ವಿರುದ್ಧ ನಡೆದರೆ, ಒಂದು ಯುದ್ಧ ಚೀನಾ ವಿರುದ್ಧ ನಡೆದಿದೆ. ಯುದ್ಧಗಳನ್ನು ಹೊರತುಪಡಿಸಿ ಐಎಎಫ್ 1999ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ `ಆಪರೇಷನ್ ವಿಜಯ್’ ಕಾರ್ಯಚರಣೆಯನ್ನು ಕೈಗೊಂಡಿತ್ತು. 1984 ರಲ್ಲಿ ಕಾಶ್ಮೀರದ ಸಿಯಾಚಿನ್‍ನಲ್ಲಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಮೇಘದೂತ್ ಎಂಬ ಕಾರ್ಯಚರಣೆಯನ್ನು ಕೈಗೊಂಡಿತ್ತು. 1998ರಲ್ಲಿ ಮಾಲ್ಡೀವ್ಸ್‍ನಲ್ಲಿ ಉಂಟಾದ ಎಲ್‍ಟಿಟಿಇ ಪಡೆಗಳ ಸಂಘರ್ಷವನ್ನು ತಡೆಯಲು ಆಪರೇಷನ್ ಕ್ಯಾಕ್ಟಸ್, 1987 ರಲ್ಲಿ ಶ್ರೀಲಂಕಾದಲ್ಲಿ ಉಂಟಾದ ತಮಿಳ್ ಟೈಗರ್ ಉಗ್ರರನ್ನು ಸದೆಬಡೆಯಲು ಆಪರೇಷನ್ ಪೂಮಾಲೈ ಕಾರ್ಯಚರಣೆಯನ್ನು ಕೈಗೊಂಡಿತ್ತು.

    ಅಲ್ಲದೇ ದೇಶದಲ್ಲಿ ಉಂಟಾಗುವ ಪ್ರಕೃತಿ ವಿಕೋಪಗಳ ಸಮಯದಲ್ಲಿ, ಭಯೋತ್ಪಾದಕ ದಾಳಿ ಮತ್ತು ಗಲಭೆಗಳು ನಡೆದಾಗ ರಕ್ಷಣಾ ಕಾರ್ಯಚಾರಣೆಯನ್ನು ಕೈಗೊಳ್ಳುತ್ತದೆ. ವಿಶ್ವಸಂಸ್ಥೆಯು 1961-1962ರಲ್ಲಿ ವಾಯುಸೇನೆಯನ್ನು ಕಾಂಗೋ ಶಾಂತಿ ಪಾಲನಾ ಪಡೆಯನ್ನಾಗಿ ಕಳುಹಿಸಿತ್ತು.

     

  • ಎರಡು ಕಡೆಗಳ ದಾಳಿಯನ್ನು ಎದುರಿಸುವ ಶಕ್ತಿ ನಮಗಿದೆ: ವಾಯುಸೇನೆ ಮುಖ್ಯಸ್ಥ

    ಎರಡು ಕಡೆಗಳ ದಾಳಿಯನ್ನು ಎದುರಿಸುವ ಶಕ್ತಿ ನಮಗಿದೆ: ವಾಯುಸೇನೆ ಮುಖ್ಯಸ್ಥ

    ನವದೆಹಲಿ: ಭಾರತದ ವಾಯು ಸೇನೆಗೆ ದೇಶದ ಗಡಿ ಉದ್ದಕ್ಕೂ ಸಾಮರ್ಥವಾಗಿ ದಾಳಿಯನ್ನು ಎದುರಿಸುವ ಹಾಗೂ ನಿಶ್ಚಿತ ಪ್ರದೇಶಗಳ ಮೇಲೆ ದಾಳಿಯನ್ನು ಮಾಡುವ ಸಾಮಥ್ರ್ಯವನ್ನು ವಾಯು ಸೇನೆ ಹೊಂದಿದೆ ಎಂದು ಏರ್‍ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಹೇಳಿದ್ದಾರೆ.

    ಭಾರತ ಸರ್ಕಾರವು ಕೈಗೊಳ್ಳುವ ಯಾವುದೇ ಸರ್ಜಿಕಲ್ ದಾಳಿಯ ನಿರ್ಧಾರವನ್ನು ಸಾಮರ್ಥವಾಗಿ ನಿಭಾಯಿಸಲು ಸೇನೆ ಸಿದ್ಧವಿದ್ದು, ಚೀನಾ ದೇಶವನ್ನು ಮುಖಾಮುಖಿಯಾಗಿ ಎದುರಿಸಲು ಸಹ ಸಮರ್ಥರಾಗಿರುವುದಾಗಿ ತಿಳಿಸಿದರು.

    ಯಾವುದೇ ಕಾರ್ಯಾಚರಣೆ ನಡೆಸಲು ನಮ್ಮ ತಂಡಗಳು ಸಿದ್ಧವಾಗಿದ್ದು, ಈಗಾಗಲೇ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ 42 ಫೈಟರ್ ಸ್ಕ್ವಾಡ್ರನ್ 2032ರ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.

    ವಾಯುಪಡೆ ದಿನಾಚರಣೆಯ ಮುನ್ನಾ ದಿನವಾದ ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ವಿರುದ್ಧ ಚೀನಾ ಯುದ್ಧಕ್ಕೆ ಮುಂದಾದರೆ ಪಾಕಿಸ್ತಾನವು ತನ್ನ ಮಿತ್ರನಿಗೆ ಸಹಾಯ ಮಾಡಲು ಮುಂದಾಗುತ್ತದೆ. ಈ ಸಂದರ್ಭದಲ್ಲಿ ಭಾರತದ ಎರಡು ಕಡೆಯಿಂದಲೂ ದಾಳಿಯನ್ನು ಎದುರಿಸಲು ಸಿದ್ಧವಾಗಿರಬೇಕು ಎಂಬ ಭೂ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗೆ ಇಂದು ಉತ್ತರಿಸಿದರು.

    ಇದೇ ಸಂದರ್ಭದಲ್ಲಿ ಡೋಕ್ಲಾಂ ಗಡೀ ವಿಚಾರವಾಗಿಯು ಪ್ರಸ್ತಾಪಿಸಿದ ಅವರು ಚೀನಾ ದೇಶವು ಪೂರ್ಣ ಪ್ರಮಾಣದಲ್ಲಿ ತನ್ನ ಸೈನ್ಯವನ್ನು ವಿವಾದಿತ ಸ್ಥಳದಿಂದ ಹಿಂಪಡೆದಿಲ್ಲ. ಬೇಸಿಗೆ ಶಿಬಿರದ ಬಳಿಕ ಸೇನೆಯನ್ನು ಹಿಂಪಡೆಯುವ ವಿಶ್ವಾಸವಿದೆ ಎಂದು ತಿಳಿಸಿದರು.

  • ಯುದ್ಧ ಸಿದ್ಧತೆಯಲ್ಲಿ ಪಾಕ್ ? ಸಿಯಾಚಿನ್ ಪ್ರದೇಶದಲ್ಲಿ ಈಗ ಏನಾಗುತ್ತಿದೆ?

    ಯುದ್ಧ ಸಿದ್ಧತೆಯಲ್ಲಿ ಪಾಕ್ ? ಸಿಯಾಚಿನ್ ಪ್ರದೇಶದಲ್ಲಿ ಈಗ ಏನಾಗುತ್ತಿದೆ?

    ನವದೆಹಲಿ: ಭಾರತ ನಿನ್ನೆ ಕೊಟ್ಟ ಏಟಿಗೆ ಬೆಚ್ಚಿ ಬಿದ್ದಿರೋ ಪಾಕಿಸ್ತಾನ ಮತ್ತೊಮ್ಮೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಬಂಕರ್‍ಗಳ ನಾಶದಿಂದ ಕಂಗೆಟ್ಟಿರುವ ಪಾಕಿಸ್ತಾನ, ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸ್ತಿದೆಯಾ ಎನ್ನುವ ಪ್ರಶ್ನೆ ಈಗ ಬಲವಾಗುತ್ತಿದೆ.

    ಸಿಯಾಚಿನ್ ಪ್ರದೇಶದಲ್ಲಿ ಪಾಕ್ ಸೇನಾ ಚಟುವಟಿಕೆಗಳು ಚುರುಕಾಗಿವೆ. ಸಿಯಾಚಿನ್ ಗ್ಲೇಸಿಯರ್ ಬಳಿ ಪಾಕಿಸ್ತಾನದ ಜೆಟ್ ವಿಮಾನವೊಂದು ಹಾರಾಟ ನಡೆಸಿದೆ. ಅಲ್ಲದೇ ವಾಯುಪಡೆ ಸಮರಾಭ್ಯಾಸ ನಡೆಸುತ್ತಿದ್ದು ಎಲ್ಲಾ ಸೇನಾ ನೆಲೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

    ಸಿಯಾಚಿನ್ ಬಳಿಯ ಸ್ಕಾರ್ದುವಿನಲ್ಲಿರುವ ಖಾದ್ರಿ ವಾಯುನೆಲೆಗೆ ಭೇಟಿ ನೀಡಿದ್ದ ಪಾಕ್‍ನ ವಾಯುಪಡೆ ಮುಖ್ಯಸ್ಥ ಸೊಯೇಲ್ ಅಮಾನ್, ಮಿರಾಜ್ ಯುದ್ಧ ವಿಮಾನದ ಸಮರಭ್ಯಾಸವನ್ನೂ ವೀಕ್ಷಿಸಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಾನ್, ವಿರೋಧಿಗಳ ಯಾವುದೇ ಬೆದರಿಕೆಗಳಿಗೆ ದೇಶದ ಜನರು ವಿಚಲಿತರಾಗಬೇಕಿಲ್ಲ. ಎಲ್ಲ ಸವಾಲುಗಳನ್ನು ಸ್ವೀಕರಿಸಲು ನಮ್ಮ ಸೇನೆ ಸನ್ನದ್ಧವಾಗಿದೆ. ಅವರು ತಲೆಮಾರು ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡ್ತೇವೆ ಅಂತಾ ಧಿಮಾಕಿನ ಮಾತಾಡಿದ್ದಾರೆ.

    ಈ ಎಲ್ಲಾ ಬೆಳವಣಿಗೆಗಳಿಂದಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧದ ವಾತಾವರಣವೇ ಸೃಷ್ಟಿಯಾದಂತಾಗಿದೆ. ಆದರೆ ಪಾಕಿಸ್ತಾನದಿಂದ ಗಡಿ ಉಲ್ಲಂಘನೆ ಆಗಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.

    ಮುಂಬೈಗೆ ಉಗ್ರರು: ಈ ನಡುವೆ 20 ಲಷ್ಕರ್ ಉಗ್ರರು ಮುಂಬೈಗೆ ನುಗ್ಗಿದ್ದಾರೆ. ಯಾವುದೇ ಸಮಯದಲ್ಲೂ ದೆಹಲಿ ಹಾಗೂ ಮುಂಬೈನಲ್ಲಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಕೂಡಾ ಹೈ ಅಲರ್ಟ್ ಆಗಿದ್ದು, ಎಲ್ಲಾ ಕಡೆ ಬಿಗಿ ಬಂದೋ ಬಸ್ತ್ ಘೋಷಿಸಿದೆ. ಇನ್ನು ನಾಪತ್ತೆಯಾಗಿರೋ ಸುಖೋಯ್ ವಿಮಾನದ ಬಗ್ಗೆ ನಮಗೆ ಮಾಹಿತಿ ಇಲ್ಲ. ಜನರ ಶಾಂತಿ ಕದಡಬೇಡಿ ಅಂತಾ ಚೀನಾ ಭಾರತಕ್ಕೆ ಹೇಳಿದೆ.

    ಇದನ್ನೂ ಓದಿ: 54 ಮುಸ್ಲಿಂ ರಾಷ್ಟ್ರಗಳಿಂದ ಪಾಕ್ ಪ್ರಧಾನಿಗೆ ಅವಮಾನ!

    https://twitter.com/miqazi/status/867342209493991425

     

  • ಯಾವುದೇ ಸಮಯದಲ್ಲಿ ಯುದ್ಧ ನಡೆಯಬಹುದು, ಎಲ್ಲದಕ್ಕೂ ಸಿದ್ಧವಾಗಿರಿ: ಏರ್ ಚೀಫ್ ಮಾರ್ಷಲ್ ಪತ್ರ

    ಯಾವುದೇ ಸಮಯದಲ್ಲಿ ಯುದ್ಧ ನಡೆಯಬಹುದು, ಎಲ್ಲದಕ್ಕೂ ಸಿದ್ಧವಾಗಿರಿ: ಏರ್ ಚೀಫ್ ಮಾರ್ಷಲ್ ಪತ್ರ

    ನವದೆಹಲಿ: ಯಾವುದೇ ಕ್ಷಣದಲ್ಲಿ ಯುದ್ಧ ಎದುರಾಗುವ ಸಾಧ್ಯತೆ ಇದ್ದು ನೀವೆಲ್ಲರೂ ಸಿದ್ಧವಾಗಿರಿ ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ವಾಯುಪಡೆಯ ಪ್ರತಿಯೊಬ್ಬ ಅಧಿಕಾರಿಗೆ ವೈಯಕ್ತಿಕ ಪತ್ರ ಬರೆದಿದ್ದಾರೆ.

    ಈಗ ಇರುವ ಪರಿಸ್ಥಿತಿಯನ್ನು ಅವಲೋಕಿಸಿದರೆ, ನೆರೆ ರಾಷ್ಟ್ರಗಳ ಬಾಹ್ಯ ಬೆದರಿಕೆಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾಗಿ ಯಾವುದೇ ಸಮಯದಲ್ಲೂ ಕಾರ್ಯಾಚರಣೆ ನಡೆಸಲು ಸಿದ್ಧವಾಗಿರಿ ಎಂದು ಪತ್ರದಲ್ಲಿ ಬರೆದಿದ್ದಾರೆ.

    ವಾಯು ಸೇನೆಯ 12 ಸಾವಿರ ಅಧಿಕಾರಿಗಳಿಗೆ ಈ ಪತ್ರವನ್ನು ತಲುಪಿಸಲಾಗಿದೆ. ಈ ಪತ್ರದಲ್ಲಿ ನೆರೆ ರಾಷ್ಟ್ರಗಳಿಂದ ಭಾರತ ಎದುರಿಸುತ್ತಿರುವ ಯುದ್ಧ ಭಯವನ್ನು ಬಿಎಸ್ ಧನೋವಾ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ತರಬೇತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ವಾಯುಸೇನೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಈ ರೀತಿಯ ಪತ್ರ ಬರೆಯಲಾಗಿದೆ. ಈ ಮೊದಲು ಮೇ 1, 1950ರಲ್ಲಿ ಜನರಲ್ ಕಾರ್ಯಪ್ಪ ಮತ್ತು ಫೆಬ್ರವರಿ 1,1986ರಲ್ಲಿ ಜನರಲ್ ಸುಂದರ್ಜಿ ಎಲ್ಲ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

    ಈ ವಿಚಾರದ ಬಗ್ಗೆ ವಾಯುಸೇನೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆಂತರಿಕ ಸಂವಹನಕ್ಕಾಗಿ ಈ ಪತ್ರ ಬರೆಯಲಾಗಿದೆ ಎಂದು ಹೇಳಿ ಈ ಪತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.