Tag: ವಾಯುಸೇನೆ

  • ವಾಯುಸೇನೆಯಲ್ಲಿದ್ದ ಮಗನ ಸಾವನ್ನು ಮರೆಯಲು ಸ್ಲಂ ಮಕ್ಕಳಿಗೆ ಶಿಕ್ಷಣ ಕೊಡ್ತಿರುವ ದಂಪತಿ

    ವಾಯುಸೇನೆಯಲ್ಲಿದ್ದ ಮಗನ ಸಾವನ್ನು ಮರೆಯಲು ಸ್ಲಂ ಮಕ್ಕಳಿಗೆ ಶಿಕ್ಷಣ ಕೊಡ್ತಿರುವ ದಂಪತಿ

    ಇಟಾನಗರ: ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಗನನ್ನು ವಿಮಾನ ಅಪಘಾತದಲ್ಲಿ ಕಳೆದುಕೊಂಡ ದಂಪತಿ ಈಗ ಸ್ಲಂ ಮಕ್ಕಳ ಏಳಿಗೆಗಾಗಿ ಶ್ರಮಿಸುವ ಜೊತೆ ಆ ಮಕ್ಕಳಲ್ಲಿ ಮಗನನ್ನು ಕಾಣುತ್ತಿದ್ದಾರೆ.

    ಘಾಜಿಯಾಬಾದ್ ನಿವಾಸಿಗಳಾದ ನಿವೃತ್ತ ಗ್ರೂಪ್ ಕ್ಯಾಪ್ಟನ್ ಶರದ್ ತೆವಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸವಿತಾ ತೆವಾರಿ ದಂಪತಿ ಸ್ಲಂ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಮಗ ಶಿಶಿರ್ ತೆವಾರಿ ಅವರು ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿದ್ದರು. ದುರಾದೃಷ್ಟವಶಾತ್ 2017ರ ಅ. 6ರಂದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಎಂಐ-17 ವಿ5(Mi-17 V5) ವಿಮಾನ ಅಪಘಾತದಲ್ಲಿ ಶಿಶಿರ್ ಹುತಾತ್ಮರಾಗಿದ್ದರು.

    ಮಗನ ಅಗಲಿಕೆಯ ನೋವು ಮರೆಯಲು ತೆವಾರಿ ದಂಪತಿ ಶಿಕ್ಷಣದಿಂದ ವಂಚಿತರಾಗಿರುವ ಸ್ಲಂ ಮಕ್ಕಳಿಗೆ ಶಿಕ್ಷಣ ಕೊಟ್ಟು, ಸಾಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡಬೇಕು ಎಂದು ಪಣತೊಟ್ಟರು. 2018ರ ಆಗಸ್ಟ್ 15 ರಂದು ದಂಪತಿ ದೆಹಲಿಯ ಯಮುನಾ ಖಾದರ್ ಸ್ಲಂನ 100 ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಆರಂಭಿಸಿದರು. ಇದೇ ಉದ್ದೇಶದಿಂದ ಶಹೀದ್ ಸ್ಕ್ವಾಡ್ರನ್ ಲೀಡರ್ ಶಿಶಿರ್ ತೆವಾರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ್ನು ಶುರುಮಾಡಿದರು. ಬಡ ಮಕ್ಕಳು ಕೂಡ ಶಿಕ್ಷಣ ಪಡೆದು ತಮ್ಮ ಮಗನಂತೆ ಮುಂದೆ ದೇಶ ಸೇವೆ ಮಾಡುವ ವ್ಯಕ್ತಿಗಳಾಗಿ ಹೊರಹೊಮ್ಮಲಿ ಎಂದು ಆಶಿಸಿದರು. ಸದ್ಯ ದಂಪತಿ 350 ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

    ತೆವಾರಿ ದಂಪತಿಗೆ ಸ್ಲಂ ಮಕ್ಕಳ ಶಿಕ್ಷಣದ ಬಗ್ಗೆ ಇರುವ ಕಾಳಜಿ ನೋಡಿದ ಸ್ಲಂ ಕಮಿಟಿ ಈ ಪ್ರದೇಶದಲ್ಲಿ ಶಾಲೆ ತೆರೆಯಲು ಅವರಿಗೆ ಅವಕಾಶ ನೀಡಿತ್ತು. ಅಷ್ಟೇ ಅಲ್ಲದೆ ತೆವಾರಿ ದಂಪತಿ ಕಾರ್ಯ ನೋಡಿ ಅವರ ಸಂಬಂಧಿಕರು, ಸ್ನೇಹಿತರು ಕೂಡ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಸ್ಲಂ ಮಕ್ಕಳಿಗಾಗಿ ತೆರೆದ ಶಾಲೆಯಲ್ಲಿ ವಾರಕ್ಕೆ 5 ದಿನಗಳು ಮಾತ್ರ ಪಾಠ ನಡೆಯುತ್ತದೆ. ಪ್ರಸ್ತುತವಾಗಿ 1ನೇ ತರಗತಿಯಿಂದ 12ನೇ ತರಗತಿವರೆಗೆ 350 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಬಡ ಮಕ್ಕಳಿಗೆ ಪಾಠ ಹೇಳಿಕೊಡಲು, ಹೋಂವರ್ಕ್ ಮಾಡಿಸಲು 25 ಮಂದಿ ಸ್ವಯಂ ಸೇವಕರು ದಂಪತಿಗೆ ಸಹಾಯ ಮಾಡುತ್ತಿದ್ದಾರೆ. ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳನ್ನೂ ಸಹ ಶಾಲೆಯಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ ಎಂದು ಶರದ್ ಅವರು ತಿಳಿಸಿದರು.

    ಸ್ಲಂ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ಸಿಗುವುದು ತೀರಾ ಕಡಿಮೆ. ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ, ಬಡ ಪೋಷಕರು ಜೀವನ ನಡೆಸಲು ಮಕ್ಕಳನ್ನು ಕೂಡ ಕೆಲಸಕ್ಕೆ ಕಳಿಸುತ್ತಾರೆ. ಅಲ್ಲದೆ ಸ್ಲಂ ಪ್ರದೇಶಗಳಲ್ಲಿ ಅನಾರೋಗ್ಯವು ಹೆಚ್ಚಾಗಿರುತ್ತದೆ. ಹೊತ್ತಿನ ಊಟಕ್ಕೆ ಕಷ್ಟಪಡುವ ಮಂದಿ ಆರೋಗ್ಯದ ಕಡೆ ಸರಿಯಾಗಿ ಗಮನ ಕೊಡುವುದಿಲ್ಲ. ಆದ್ದರಿಂದ ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆವು. ನಮ್ಮಲ್ಲಿರುವ ಜ್ಞಾನ ಮತ್ತು ಸಂಪತ್ತನ್ನು ಈ ಮಕ್ಕಳಿಗೆ ಧಾರೆ ಎರೆಯಲು ಶ್ರಮಿಸುತ್ತಿದ್ದೇವೆ ಎಂದು ಶರದ್ ಅವರು ಹೇಳಿದರು.

    ಪ್ರೌಢ ಶಿಕ್ಷಣದ ಬಳಿಕ ಓದಲು ಇಚ್ಛಿಸದ ಹೆಣ್ಣುಮಕ್ಕಳಿಗೆ ಈ ಶಾಲೆಯಲ್ಲಿ ಬಟ್ಟೆ ಹೊಲಿಯುವ ತರಬೇತಿಯನ್ನು ನೀಡಲಾಗುತ್ತಿದೆ. ಸ್ಲಂ ಪ್ರದೇಶಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಆದ್ದರಿಂದ ಆಗಾಗ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇಲ್ಲಿ ಮಾಡಲಾಗುತ್ತದೆ. ಈ ಮೂಲಕ ಇಲ್ಲಿನ ಮಕ್ಕಳು ಮಾತ್ರವಲ್ಲ ಜನರಲ್ಲಿ ಕೂಡ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

    ಕಳೆದ 1 ವರ್ಷ ನಾವು ಸ್ವಚ್ಛತೆ, ನೈರ್ಮಲ್ಯ ಹೀಗೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದೇವೆ. ಶಾಲೆ ಆರಂಭಿಸಿದ ಕೆಲವು ತಿಂಗಳ ಬಳಿಕ ದಂಪತಿ ತಮ್ಮ ಟ್ರಸ್ಟ್‍ನ ಚಟುವಟಿಕೆಗಳನ್ನು ವಿಸ್ತರಿಸಿಸದೆವು. ಮೊದಲು ಕೇವಲ ಮೆಟ್ರೋ ಶೆಡ್‍ನ ಕೆಳಗೆ 50ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಆ ಬಳಿಕ ಬೇರೆ ಸ್ಲಂ ಪ್ರದೇಶಗಳಲ್ಲಿನ ಮಕ್ಕಳಿಗೂ ಶಿಕ್ಷಣ ಕೊಡಬೇಕೆಂದು ತೀರ್ಮಾನಿಸಿದೆವು. ಇಲ್ಲಿ ಶಿಕ್ಷಣ ಕಲಿತ ಮಕ್ಕಳು ತಮ್ಮ ಮಗನಂತೆ ದೇಶಕ್ಕಾಗಿ ಕೊಡುಗೆ ನೀಡಬೇಕು. ಲಾಯರ್, ಎಂಜಿನಿಯರ್, ಪೈಲಟ್, ಜರ್ನಲಿಸ್ಟ್, ಯೋಧನಾಗಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂಬ ಆಶಯವನ್ನು ಸವಿತಾ ಹೊಂದಿದ್ದಾರೆ.

    ನಮ್ಮ ಮಗ ಶಿಶಿರ್‍ನ ಶೌರ್ಯ ಮತ್ತು ತತ್ವವೇ ನಮಗೆ ಪ್ರೇರಣೆ. ನಮ್ಮ ಮಗನಿಗೆ ಗೌರವ ಸಲ್ಲಿಸಲು ಈ ಮಾರ್ಗವನ್ನು ನಾವು ಆಯ್ದುಕೊಂಡೆವು. ನಮ್ಮ ಮಗ ನಮ್ಮ ಕೆಲಸ ನೋಡಿ ಹೆಮ್ಮೆ ಪಡುತ್ತಾನೆ ಎಂದು ನಾನು ನಂಬಿದ್ದೇನೆ ಎಂದು ಸವಿತಾ ಅವರು ಖುಷಿಯನ್ನು ಹಂಚಿಕೊಂಡರು.

  • ಮತ್ತೊಂದು ಮಿಗ್ ವಿಮಾನ ಪತನ – ಇಬ್ಬರು ಪೈಲಟ್ ಪ್ರಾಣಾಪಾಯದಿಂದ ಪಾರು

    ಮತ್ತೊಂದು ಮಿಗ್ ವಿಮಾನ ಪತನ – ಇಬ್ಬರು ಪೈಲಟ್ ಪ್ರಾಣಾಪಾಯದಿಂದ ಪಾರು

    ಗ್ವಾಲಿಯಾರ್: ಭಾರತೀಯ ವಾಯು ಸೇನೆಯ ತರಬೇತಿ ನಿರತ ಮಿಗ್ 21 ವಿಮಾನ ಮಧ್ಯಪ್ರದೇಶದ ಗ್ವಾಲಿಯಾರ್‌ನಲ್ಲಿ ಪತನಗೊಂಡಿದೆ.

    ಪತನಗೊಳ್ಳುತ್ತಿದ್ದಂತೆ ಗ್ರೂಪ್ ಕ್ಯಾಪ್ಟನ್ ಮತ್ತು ಸ್ಕ್ವಾಡ್ರನ್‌ ಲೀಡರ್ ವಿಮಾನದಿಂದ ಹೊರಕ್ಕೆ ಜಿಗಿದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆ ವಿಮಾನ ಖಾಲಿ ಜಾಗದಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ. ಈ ವರ್ಷದ ಮಾರ್ಚ್ 31 ರಂದು ರಾಜಸ್ಥಾನದ ಬಾರ್ಮರ್ ವಾಯುನೆಲೆಯಲ್ಲಿ ಮಿಗ್ ವಿಮಾನ ಪತನಗೊಂಡಿತ್ತು.

    ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟು  874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಇದನ್ನೂ ಓದಿ: 44 ವರ್ಷ ಹಳೆಯ ಕಾರನ್ನು ಯಾರೂ ಬಳಸಲಾರರು – ಮಿಗ್ ಬಳಕೆ ಕುರಿತು ಧನೋವಾ ಮಾತು

    ಸದ್ಯ ಭಾರತದಲ್ಲಿ ಈಗ 100ಕ್ಕೂ ಅಧಿಕ ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಹಾರಾಟದ ಸಮಯದಲ್ಲಿ ಎಂಜಿನ್ ವೈಫಲ್ಯಗೊಂಡು ಪತನದ ಸೂಚನೆ ಸಿಕ್ಕಿದ ಕೂಡಲೇ ಹಲವು ಪೈಲಟ್ ಗಳು ಎಜೆಕ್ಟ್ ಆಗದೇ ವಿಮಾನವನ್ನು ಜನವಸತಿ ಇಲ್ಲದ ಕಡೆಗೆ ತಿರುಗಿಸಿ ಪ್ರಾಣಬಿಟ್ಟಿದ್ದಾರೆ.

    ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸಿದ್ದರು. 2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

  • ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನ ಅವಶೇಷಗಳು ಪತ್ತೆ

    ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನ ಅವಶೇಷಗಳು ಪತ್ತೆ

    ನವದೆಹಲಿ: ಕಳೆದ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿರುವ ಮಾಹಿತಿ ವಾಯುಸೇನೆಯಿಂದ ತಿಳಿದು ಬಂದಿದೆ.

    ಏರ್ ಫೋರ್ಸ್ ನ ಮಿಗ್-17 ಹೆಲಿಕಾಪ್ಟರ್ ಗಳು ವಿಮಾನದ ಪತ್ತೆಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ವಿಮಾನದ ಅವಶೇಷ ಅರುಣಾಚಲ ಪ್ರದೇಶದ ಉತ್ತರ ಲಿಪೋ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಕುರಿತು ವಾಯುಸೇನೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಹುಡುಕಾಟವನ್ನು ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದೆ.

    ಎಎನ್-32 ವಿಮಾನ ಜೂನ್ 03 ರಂದು ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆನಚುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಈ ವೇಳೆ ವಿಮಾನದಲ್ಲಿ ಎಂಟು ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಕರು ವಿಮಾನದಲ್ಲಿದ್ದರು.

    ವಿಮಾನ ನಾಪತ್ತೆಯಾದ ಬಳಿಕ ಭಾರತ ಭೂಸೇನೆ, ವಾಯುಸೇನೆ, ಸಿ-130ಜೆ ಹಾಗೂ ಮಿಗ್ 17 ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿ ಕಾರ್ಯಾಚರಣೆ ನಡೆಸಿತ್ತು. ಸದ್ಯ ವಾಯುಸೇನೆ ವಿಮಾನದಲ್ಲಿದ್ದ ಪ್ರಯಾಣಿಕರ ಬಗ್ಗೆ ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ. ನಾಪತ್ತೆಯಾಗಿರುವ ಬಗ್ಗೆ ಅವರ ಕುಟುಂಬ ಸದಸ್ಯರು ಮಾಹಿತಿ ಪಡೆಯಲು ಕಾದುಕುಳಿತ್ತಿದ್ದಾರೆ. ಶನಿವಾರವಷ್ಟೇ ವಾಯುಸೇನೆ ನಾಪತ್ತೆಯಾದ ವಿಮಾನ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

  • ವಿಮಾನ ನಾಪತ್ತೆಯಾಗಿ 7 ದಿನ-ಸುಳಿವು ನೀಡಿದವರಿಗೆ ಬಹುಮಾನ

    ವಿಮಾನ ನಾಪತ್ತೆಯಾಗಿ 7 ದಿನ-ಸುಳಿವು ನೀಡಿದವರಿಗೆ ಬಹುಮಾನ

    ನವದೆಹಲಿ: ಕಳೆದ ಏಳು ದಿನದಿಂದ ನಾಪತ್ತೆಯಾಗಿರುವ ವಾಯುಸೇನೆಯ ಎಎನ್-32 ವಿಮಾನ ಇದುವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ವಿಮಾನದ ಸುಳಿವು ನೀಡಿ ದವರಿಗೆ 5 ಲಕ್ಷ ರೂ. ಹಣವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಏರ್ ಮಾರ್ಷಲ್ ಆರ್.ಡಿ. ಮಾಥೂರ್ ಘೋಷಣೆ ಮಾಡಿದ್ದಾರೆ.

    ಎಎನ್-32 ಜೂನ್ 3ರಂದು ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆನಚುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ನೆರೆಯ ಚೀನಾ ಗಡಿ ಸಮೀಪವೇ ವಿಮಾನ ಸಂಪರ್ಕ ಕಳೆದುಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಪರ್ಕ ಕಳೆದುಕೊಂಡಿರುವ ವಿಮಾನದಲ್ಲಿ ಎಂಟು ಜನ ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು.

    ವಿಮಾನದ ಸುಳಿವು ನೀಡಿದ ವ್ಯಕ್ತಿ ಅಥವಾ ತಂಡಕ್ಕೆ 5 ಲಕ್ಷ ರೂ. ಬಹುಮಾನ ಸಿಗಲಿದೆ. ಸುಳಿವು ಸಿಕ್ಕಲ್ಲಿ 0378-3222164, 9436499477, 9402077267, 9402132477 ಈ ನಂಬರ್ ಗಳಿಗೆ ಸಂಪರ್ಕಿಸಬೇಕು. ವಾತಾವರಣದ ಏರುಪೇರು ನಡುವೆಯೂ ಭೂ ಸೇನೆ, ವಾಯು ಸೇನೆ, ಸಿ-130ಜೆ, ಹೆಲಿಕಾಪ್ಟರ್ ಸಹಾಯದೊಂದಿಗೆ ಕಾಣೆಯಾಗಿರುವ ವಿಮಾನಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಸಿಯಾಂಗ್ ಜಿಲ್ಲೆಯ ಸುಮಾರು 2500 ಕಿ.ಮೀ. ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ವಾಯುಸೇನೆಯ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ತಿಳಿಸಿದ್ದಾರೆ.

    ಭೂ ಮಾರ್ಗದಲ್ಲಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ವಿಮಾನ ಪತನ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇದುವರೆಗೂ ಸಿಬ್ಬಂದಿಗೆ ವಿಮಾನದ ಅವಶೇಷಗಳು ಲಭ್ಯವಾಗಿಲ್ಲ. ಹೀಗಾಗಿ ವಿಮಾನ ಹುಡುಕಾಟದ ಕಾರ್ಯ ಮುಂದುವರಿದಿದೆ. ಉಪಗ್ರಹಗಳ ಮೂಲಕ ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ.

    ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. ನಾಪತ್ತೆಯಾದ ವಿಮಾನದ ದಾರಿ ಬಹಳ ಕಠಿಣವಾಗಿದ್ದು, ಬೆಟ್ಟ ಗುಡ್ಡ ಮತ್ತು ಭಾರೀ ಅರಣ್ಯವಿದೆ. ಮೆಚುಕಾ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವುದು ಬಹಳ ಕಷ್ಟ ಎಂದು ವರದಿಯಾಗಿದೆ.

    2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

  • ನಾಪತ್ತೆಯಾಗಿರುವ ಮಗನನ್ನು ಪತ್ತೆ ಹಚ್ಚಲು ಹೊರಟ ತಂದೆ

    ನಾಪತ್ತೆಯಾಗಿರುವ ಮಗನನ್ನು ಪತ್ತೆ ಹಚ್ಚಲು ಹೊರಟ ತಂದೆ

    ನವದೆಹಲಿ: ನಾಪತ್ತೆಯಾಗಿರುವ ವಾಯುಸೇನೆ ವಿಮಾನದಲ್ಲಿದ್ದ ಫ್ಲೈಟ್ ಲೆಫ್ಟಿನೆಂಟ್ ಶೀಘ್ರವೇ ಮನೆಗೆ ಮರಳುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ಕುಟುಂಬದ ಸದಸ್ಯರು ಈಗ ದಿನದೂಡುತ್ತಿದ್ದಾರೆ.

    13 ಜನರನ್ನು ಹೊತ್ತ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಸೋಮವಾರ ಮಧ್ಯಾಹ್ನ ಕಾಣೆಯಾಗಿತ್ತು. ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಪಂಜಾಬ್‍ನ ಪಟಿಯಾಲ ಜಿಲ್ಲೆಯ ಮೋಹಿತ್ ಗಾರ್ಗ್ ಅವರು ಭಾರತೀಯ ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

    ಮೋಹಿತ್ ಅವರ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಮಗ ಕಾಣೆಯಾಗಿರುವ ವಿಚಾರವನ್ನು ಕುಟುಂಬದ ಸದಸ್ಯರು ತಾಯಿಗೆ ಇಲ್ಲಿಯವರೆಗೆ ತಿಳಿಸಿಲ್ಲ. ಮೋಹಿತ್ ಅವರು ಐದು ವರ್ಷದಿಂದ ಅಸ್ಸಾಂ ರಾಜ್ಯದ ಜೋರ್ಹತ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

    ಕಳೆದ ವರ್ಷ ಅಸ್ತ ಗಾರ್ಗ್ ಅವರನ್ನು ಮೋಹಿತ್ ಮದುವೆಯಾಗಿದ್ದರು. ಕೊನೆಯದಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಮನೆಗೆ ಬಂದಿದ್ದ ಮೋಹಿತ್ ನಂತರ ಬಂದಿರಲಿಲ್ಲ.

    ಈಗ ಮಗನನ್ನು ಹುಡುಕಲು ತಂದೆ ಸುರೇಂದ್ರಪಾಲ್ ಗಾರ್ಗ್ ಜೋರ್ಹತ್‍ಗೆ ಹೋಗಿದ್ದಾರೆ. ನನಗೆ ನನ್ನ ಮಗ ವಾಪಸ್ ಬೇಕು. ಮೋಹಿತ್ ಸಿಗುವ ತನಕ ಹುಡುಕುತ್ತೇನೆ. ನಾನು ಇದನ್ನು ಬಿಟ್ಟರೆ ಈಗ ಬೇರೆ ಏನೂ ಹೇಳುವುದಿಲ್ಲ. ನನ್ನ ಮಗನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ನನಗೆ ನನ್ನ ಮಗ ವಾಪಸ್ ಬೇಕು ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮೋಹಿತ್ ಅವರ ಹಿರಿಯ ಸಹೋದರ ಆಶ್ವಿನ್, ಈ ರೀತಿಯ ಘಟನೆ ಮುಂದೆ ನಡೆಯಬಾರದು. ನಮ್ಮ ಸೇನೆಗೆ ನೀಡುವ ಉಪಕರಣಗಳು ಆಧುನಿಕವಾಗಿರಬೇಕು ಮತ್ತು ಸಮಯಕ್ಕೆ ತಕ್ಕಂತೆ ನವೀಕರಣವಾಗಿರಬೇಕು. ಈ ದೇಶವನ್ನು ರಕ್ಷಿಸುವ ಸೈನಿಕರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

    ಮೂರು ದಿನ ಕಳೆದರೂ ಯಾವುದೇ ಮಾಹಿತಿ ಸಿಗದ ಕಾರಣ ಅವರ ಚಿಕ್ಕಪ್ಪ ರಿಷಿಪಾಲ್ ಗಾರ್ಗ್ ಅವರು ಮೋಹಿತ್ ಪತ್ನಿ ಅಸ್ತ ಗಾರ್ಗ್ ಅವರನ್ನು ಕರೆದುಕೊಂಡು ಜೋರ್ಹತ್ ಹೋಗಿದ್ದಾರೆ. ಏನಾದರೂ ಪವಾಡ ನಡೆದು ತಮ್ಮ ಮಗ ಮನೆಗೆ ವಾಪಸ್ ಬರಲಿ ಎಂದು ಕುಟುಂಬದ ಸದಸ್ಯರು ಈಗ ದೇವರನ್ನು ಬೇಡಿಕೊಳ್ಳುತ್ತಿದ್ದಾರೆ.

    ಭಾರತೀಯ ವಾಯು ಪಡೆಯ ಸರಕು ಸಾಗಾಟ ವಿಮಾನದಲ್ಲಿ 8 ಮಂದಿ ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಸೋಮವಾರ ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ 35 ನಿಮಿಷಗಳ ಕಾಲ ಸಂಪರ್ಕದಲ್ಲಿತ್ತು. ಆದರೆ ಮಧ್ಯಾಹ್ನ 1 ಗಂಟೆಯ ವೇಳೆ ಸಂಪರ್ಕ ಕಳೆದುಕೊಂಡಿದೆ. ಮೂರು ದಿನಗಳಿಂದಲೂ ವಿಮಾನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

  • 13 ಮಂದಿಯಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ

    13 ಮಂದಿಯಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ

    ನವದೆಹಲಿ: ಭಾರತೀಯ ವಾಯುಸೇನೆಯ ಎಎನ್-32 ವಿಮಾನ ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಕೆಲ ಗಂಟೆಗಳಿಂದ ನಾಪತ್ತೆಯಾಗಿದೆ.

    ಭಾರತೀಯ ವಾಯು ಪಡೆಯ ಸರಕು ಸಾಗಾಟ ವಿಮಾನದಲ್ಲಿ 8 ಮಂದಿ ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ 35 ನಿಮಿಷಗಳ ಕಾಲ ಸಂಪರ್ಕದಲ್ಲಿತ್ತು. ಆದರೆ ಮಧ್ಯಾಹ್ನ 1ಗಂಟೆಯ ವೇಳೆ ಸಂಪರ್ಕ ಕಳೆದುಕೊಂಡಿದೆ ಎಂದು ವಾಯು ಸೇನೆಯ ಅಧಿಕಾರಿ ತಿಳಿಸಿದ್ದಾರೆ.

    ವಿಮಾನ ಪತ್ತೆಗಾಗಿ ಸುಖೋಯಿ-30 ಏರ್ ಕ್ರಾಫ್ಟ್ ಮತ್ತು ಸಿ-130 ಸ್ಪೆಷಲ್ ಆಪರೇಷನ್ ವಿಮಾನವನ್ನು ಬಳಕೆ ಮಾಡಲಾಗುತ್ತಿದೆ.

    ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. ನಾಪತ್ತೆಯಾದ ವಿಮಾನದ ದಾರಿ ಬಹಳ ಕಠಿಣವಾಗಿದ್ದು, ಬೆಟ್ಟ ಗುಡ್ಡ ಮತ್ತು ಭಾರೀ ಅರಣ್ಯವಿದೆ. ಮೆಚುಕಾ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವುದು ಬಹಳ ಕಷ್ಟ ಎಂದು ವರದಿಯಾಗಿದೆ.

    2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

    ಈ ಬಗ್ಗೆ ಭಾರತೀಯ ನೌಕಾ ಪಡೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಪಿ ಖೋಂಗ್ಸೈ ಮಾತನಾಡಿ, ಕಾಣೆಯಾದ ವಿಮಾನವನ್ನು ಪತ್ತೆಹಚ್ಚಲು ಪ್ರತಿ ಪ್ರಯತ್ನವನ್ನೂ ಮಾಡಲಾಗಿದೆ. ಭಾರತೀಯ ಸೇನೆಯ ಯೋಧರು ಮತ್ತು ಇಂಡೋ-ಟಿಬೇಟಿಯನ್ ಗಡಿಯಲ್ಲಿ ಪೊಲೀಸ್ ಇಲಾಖೆ ಹೆಲಿಕಾಪ್ಟಾರ್ ಸಹಾಯದಿಂದ ಹುಡುಕಾಟ ನಡೆಸುತ್ತಿರುವುದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

    ಸದ್ಯ ಕಾಣೆಯಾಗಿರುವ ಏರ್‌ಕ್ರಾಫ್ಟ್‌ ಬಗ್ಗೆ ಸಿಕ್ಕ ಮಾಹಿತಿ ಪ್ರಕಾರ, ಏರ್‌ಕ್ರಾಫ್ಟ್‌ ಕಾಣೆಯಾಗಿರುವ ಪ್ರದೇಶ ಹೆಚ್ಚು ಪರ್ವತಗಳು ಮತ್ತು ದಟ್ಟ ಅರಣ್ಯದಿಂದ ಕೂಡಿದೆ. ಹೀಗಾಗಿ ಈ ಪ್ರದೇಶದಲ್ಲಿ ಲ್ಯಾಂಡ್ ಆಗಿ ಮತ್ತೆ ಏರ್‌ಕ್ರಾಫ್ಟ್‌ ಟೇಕಾಫ್ ಆಗುವುದು ತುಂಬಾ ಕಷ್ಟ. ಇಲ್ಲಿನ ಹವಾಮಾನದಿಂದ ಏರ್‌ಕ್ರಾಫ್ಟ್‌ ಗಳು ಹಾರಾಟ ನಡೆಸಲು ಸರಿಯಾದ ವಾತಾವರಣ ಸಿಗುವುದಿಲ್ಲ.

  • ವಾಯುಸೇನೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು?

    ವಾಯುಸೇನೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು?

    ನವದೆಹಲಿ: ಭಾರತೀಯ ವಾಯುಪಡೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ (ಎಎಚ್-64 ಇ) ಶುಕ್ರವಾರ ಸೇರ್ಪಡೆಗೊಂಡಿದೆ. ಪರಿಣಾಮ ಸೇನೆಯ ಬಲ ಮತ್ತಷ್ಟು ಹೆಚ್ಚಾಗಿದೆ.

    ಇತ್ತೀಚೆಗೆ ಅಮೆರಿಕ ಮೂಲಕ ಬೋಯಿಂಗ್ ಕಂಪನಿಯ ಚಿನೂಕ್ ಹೆಲಿಕಾಪ್ಟರ್ ಗಳು ಕೂಡ ವಾಯಪಡೆಗೆ ಸೇರ್ಪಡೆಯಾಗಿತ್ತು. ಸದ್ಯ ಅಪಾಚೆ ಗಾರ್ಡಿಯನ್ ಆಗಮನದಿಂದ ಭಾರತ ವಾಯುಪಡೆಗೆ ಹೆಚ್ಚಿನ ಬಲ ಲಭಿಸಿದೆ. ಬೋಯಿಂಗ್ ನಿರ್ಮಾಣ ಕೇಂದ್ರದಲ್ಲಿ ಅಮೆರಿಕದ ಅಧಿಕಾರಿಗಳಿಂದ ಭಾರತ ವಾಯುಸೇನೆಯ ಅಧಿಕಾರಿಗಳು ಹೆಲಿಕಾಪ್ಟರ್ ಹಸ್ತಾಂತರ ಮಾಡಿದ್ದಾರೆ.

    ಏರ್ ಮಾರ್ಷಲ್ ಎ.ಎಸ್.ಬುಟೋಲಾ ಅವರು ಮೊದಲ ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಪಡೆಯ ಪರವಾಗಿ ಪಡೆದುಕೊಂಡರು. ಅಮೆರಿಕಾದ ಅರಿಜೋನಾದಲ್ಲಿ ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ ಅನ್ನು ನಿರ್ಮಿಸಲಾಗುತ್ತಿದೆ.

    2015ರಲ್ಲಿ ಭಾರತ ಸರ್ಕಾರ 13,952 ಕೋಟಿ ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್ ಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2017ರಲ್ಲಿ ರಕ್ಷಣಾ ಇಲಾಖೆ 6 ಅಪಾಚೆ ಹೆಲಿಕಾಪ್ಟರ್ ಗಳನ್ನು ಶಸ್ತ್ರಾಸ್ತ್ರ ಸಮೇತ ಖರೀದಿ ಮಾಡಲು 4,168 ಕೋಟಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. 2020ರ ಮಾರ್ಚ್ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್ ಗಳು ಸೇರ್ಪಡೆ ಆಗಲಿದೆ.

    ವಿಶೇಷತೆ ಏನು?
    ಪ್ರತಿಕೂಲ ಹವಾಮಾನದಲ್ಲಿಯೂ ಕೂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸಾಮಥ್ರ್ಯವನ್ನು ಎಎಚ್-64 ಇ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೆಲಿಕಾಪ್ಟರ್ ಗಳು ಸೇನೆಯಲ್ಲಿ ಭೂ ದಾಳಿಗಳನ್ನು ಎದುರಿಸುವ, ಭೂ ಸೇನೆಯ ಜೊತೆ ಹೊಂದಿಕೊಂಡು ಕೆಲಸ ಮಾಡುವ ವಿಶೇಷ ಸಾಮಾರ್ಥ್ಯ ಹೊಂದಿವೆ.

    ಆಧುನಿಕ ಕ್ಯಾಮೆರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರಗಳ ಗುರುತು ಪತ್ತೆ, ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚೆ ಶೀಘ್ರವಾಗಿ ರವಾನಿಸುತ್ತವೆ. ಅಲ್ಲದೇ ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ತಾಂತ್ರಿಕತೆ ಹೊಂದಿವೆ. ಅಲ್ಲದೇ ಸ್ಟಿಂಗರ್ ಏರ್ ಟು ಏರ್ ಕ್ಷಿಪಣಿಗಳು, ಹೆಲ್‍ಫೈರ್ ಲಾಂಗ್‍ಬೋ ಏರ್ ಟು ಗ್ರೌಂಡ್ ಕ್ಷಿಪಣಿಗಳು, ಗನ್‍ಗಳು ಮತ್ತು ರಾಕೆಟ್‍ಗಳನ್ನು ಹೊಂದಿವೆ. ವಿಶೇಷವಾಗಿ ಪರ್ವತ ಪ್ರದೇಶದಲ್ಲಿ ಕಾರ್ಯನಿರ್ವಹಸಿಲು ಸಹಕಾರಿಯಾಗಿವೆ.

    ಅಮೆರಿಕ ಸೇನೆ ಈಗಾಗಲೇ ಈ ಹೆಲಿಕಾಪ್ಟರ್ ಗಳನ್ನು ತಮ್ಮ ಸೇನೆಗೆ ಸೇರ್ಪಡೆ ಮಾಡಿಕೊಂಡಿದ್ದು, ಭಾರತ ಫೈಲಟ್‍ಗಳಿಗೂ ಅಮೆರಿಕದ ಸೇನಾ ನೆಲಯಲ್ಲಿ ತರಬೇತಿ ಲಭಿಸಲಿದೆ. ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯದ ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಯನ್ನ ಪಡಡೆದುಕೊಂಡಿದೆ.

  • ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

    ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

    ನವದೆಹಲಿ: ಪಾಕಿಸ್ತಾನದಿಂದ ಹಾರಿ ಬಂದ ಜಾರ್ಜಿಯದ ಸರಕು ಸಾಗಾಣೆ ವಿಮಾನವನ್ನು ಭಾರತೀಯ ವಾಯುಸೇನೆ ಬಲವಂತವಾಗಿ ಇಳಿಸಿದ ಘಟನೆ ಜೈಪುರದಲ್ಲಿ ನಡೆದಿದೆ.

    ಜಾರ್ಜಿಯಾದ ಆಂಟೋನೋವ್ ಎಎನ್-12 ಹೆಸರಿನ ಬೃಹತ್ ಸರಕು ವಿಮಾನವು ಟಿಬಿಲಿಸಿಯಿಂದ ಕರಾಚಿ ಮಾರ್ಗವಾಗಿ ದೆಹಲಿಯಲ್ಲಿ ಇಳಿಯಬೇಕಿತ್ತು. ಆದರೆ ಏರ್ ಟ್ರಾಫಿಕ್ ಸರ್ವಿಸಸ್(ಎಟಿಎಸ್) ನೀಡಿದ್ದ ಅಧಿಕೃತ ಮಾರ್ಗವನ್ನು ಬದಲಾಯಿಸಿ ಶುಕ್ರವಾರ ಮಧ್ಯಾಹ್ನ 3:30 ವೇಳೆಗೆ ಗುಜರಾತಿನ ಕಛ್ ವಾಯು ನೆಲೆಯನ್ನು ವಿಮಾನ ಪ್ರವೇಶಿಸಿತ್ತು.

    70 ಕಿ.ಮೀ ದೂರದಲ್ಲಿ ಭಾರತದ ವಾಯುಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಕೂಡಲೇ ಭಾರತದ ವಾಯುಪಡೆ ಕೂಡಲೇ ಜಾಗೃತಗೊಂಡಿತ್ತು. ನಿಯಂತ್ರಣ ಕೊಠಡಿಗಳಿಂದ ರೇಡಿಯೊ ಕರೆಗಳನ್ನು ಮಾಡಿದರೂ ವಿಮಾನದ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡದೇ ಮುನ್ನುಗ್ಗಿಸುತ್ತಿದ್ದ.

    ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಉತ್ತರ ಭಾರತದ್ಯಾಂತ ಅಲರ್ಟ್ ಘೋಷಿಸಲಾಯಿತು. ಕೂಡಲೇ ರಾಜಸ್ಥಾನ ಜೋಧ್‍ಪುರ ಮತ್ತು ಉತ್ತರ ಪ್ರದೇಶದಲ್ಲಿರುವ ರಾಯ್‍ಬರೇಲಿ ವಾಯು ನೆಲೆಯಿಂದ ಎರಡು ಸುಖೋಯ್ ಯುದ್ಧ ವಿಮಾನಗಳನ್ನು ಕಳುಹಿಸಿ 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಕಾರ್ಗೋ ವಿಮಾನವನ್ನು ಬಲವಂತವಾಗಿ ಸಂಜೆ 4:30ಕ್ಕೆ ಜೈಪುರದಲ್ಲಿ ಇಳಿಸಲಾಯಿತು.

    ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಇಬ್ಬರು ಪೈಲಟ್, ಆರು ಸಿಬ್ಬಂದಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು, ಗುಪ್ತಚರ ದಳದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ವಿಮಾನ ವಾಯು ಮಾರ್ಗವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಲವಂತವಾಗಿ ಇಳಿಸಿಲಾಗಿತ್ತು. ಇದು ಗಂಭೀರವಾದ ಉಲ್ಲಂಘನೆ ಅಲ್ಲ. ವಿಚಾರಣೆ ಬಳಿಕ  ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ವಿಮಾನ ಜೈಪುರದಲ್ಲಿ ಲ್ಯಾಂಡ್ ಆಗದೇ ಇದ್ದರೆ ಯುದ್ಧ ವಿಮಾನಗಳು ಸರಕು ವಿಮಾನವನ್ನು ಹೊಡೆದು ಉರುಳಿಸಲು ಮುಂದಾಗಿತ್ತು.

  • ಪ್ರಚಂಡ ಫೋನಿಗೆ ಐವರು ಬಲಿ, ತರಗೆಲೆಯಂತಾದ ಮರಗಳು – ವಿಡಿಯೋ ನೋಡಿ

    ಪ್ರಚಂಡ ಫೋನಿಗೆ ಐವರು ಬಲಿ, ತರಗೆಲೆಯಂತಾದ ಮರಗಳು – ವಿಡಿಯೋ ನೋಡಿ

    – 15 ಜಿಲ್ಲೆಗಳ 12 ಲಕ್ಷ ಮಂದಿ ಸ್ಥಳಾಂತರ
    – 10 ಸಾವಿರ ಗ್ರಾಮದ ಮೇಲೆ ಪರಿಣಾಮ

    ಭುವನೇಶ್ವರ: ನಿರೀಕ್ಷೆಯಂತೆ ಫೋನಿ ಚಂಡ ಮಾರುತ ಇಂದು ಬೆಳಗ್ಗೆ 9 ಗಂಟೆಯ ವೇಳೆ ಪುರಿ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಗಂಟೆಗೆ 170ರಿಂದ 180 ಕಿಲೋ ಮೀಟರ್, ಗರಿಷ್ಠ 200 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುತ್ತಿದೆ. ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಣೆಯಾಗಿದ್ದು, 5 ಮಂದಿ ಮೊದಲ ದಿನವೇ ಬಲಿಯಾಗಿದ್ದಾರೆ.

    ಪ್ರಚಂಡ ಬಿರುಗಾಳಿಗೆ ತರಗೆಲೆಯಂತಾದ ಮರಗಳು, ಕರೆಂಟ್ ಕಂಬಗಳು ಪುರಿ ರಸ್ತೆಗೆ ಉರುಳಿ ಬಿದ್ದಿವೆ. ಇನ್ನೂ ಸಣ್ಣ ಪುಟ್ಟ ವಸ್ತುಗಳೆಲ್ಲಾ ಆಗಸದಲ್ಲಿ ಹಾರುತ್ತಿವೆ. ಸುಮಾರು 10 ಸಾವಿರ ಗ್ರಾಮಗಳಲ್ಲಿ ಫೋನಿ ಎಫೆಕ್ಟ್ ಆಗುತ್ತಿದೆ. ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು ಏಳುತ್ತಿದೆ.

    ಮುನ್ನೆಚ್ಚರಿಕಾ ಕ್ರಮವಾಗಿ ಸಮುದ್ರ ತೀರದಲ್ಲಿರುವ 15 ಜಿಲ್ಲೆಗಳ ಸುಮಾರು 12 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೇ ಒಬ್ಬೊಬ್ಬರ ಕೈಯನ್ನು ಹಿಡಿದುಕೊಂಡು ತಮ್ಮ ಮನೆಗೆ ಸೇರಿಕೊಳ್ಳುತ್ತಿದ್ದಾರೆ.

    ರಣಭೀಕರ ಬಿರುಗಾಳಿಗೆ ಧಾರಾಕಾರ ಮಳೆಯಾಗುತ್ತಿದ್ದು, ಕಬ್ಬಿಣದ ವಸ್ತುಗಳು, ಮರಗಳು ಸುಲಭವಾಗಿ ತೇಲಿಕೊಂಡು ಹೋಗುತ್ತಿದೆ. 1999ರ ನಂತರ ಒಡಿಶಾದಲ್ಲಿ ಇಷ್ಟೊಂದು ಪ್ರಮಾಣದ ಗಾಳಿಯೊಂದಿಗೆ ಮಳೆಯಾಗುತ್ತಿದೆ ಎಂದು ಅಲ್ಲಿನ ಜನತೆ ಪ್ರತಿಕ್ರಿಯೆ ನೀಡಿದ್ದಾರೆ.

    ಒಡಿಶಾ-ಆಂಧ್ರ ಕರಾವಳಿ ತೀರದಲ್ಲಿ ಸಂಚರಿಸುವ 103 ರೈಲು ಸೇವೆಯನ್ನು ರದ್ದು ಮಾಡಲಾಗಿದೆ. ಜೊತೆಗೆ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ಎಲ್ಲ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ. ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಂದ ಜನರ ರಕ್ಷಣಾ ಕಾರ್ಯ ನಡೆಸುತ್ತಿದೆ.

  • ವಾಯುಸೇನೆಗೆ ಚಿನೂಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು ? ವಿಡಿಯೋ ನೋಡಿ

    ವಾಯುಸೇನೆಗೆ ಚಿನೂಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು ? ವಿಡಿಯೋ ನೋಡಿ

    ಚಂಡೀಗಢ: ಭಾರತೀಯ ವಾಯು ಸೇನೆಗೆ ಅಮೆರಿಕದ ಚಿನೂಕ್ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಿದೆ. ಚಂಡೀಗಢದ ವಾಯುನೆಲೆಯಲ್ಲಿ 4 ಹೆಲಿಕಾಪ್ಟರ್ ಗಳನ್ನು ವಾಯು ಸೇನೆಯ ಮುಖ್ಯಸ್ಥ ಧನೋವಾ ಅವರು ಸೇರ್ಪಡೆಗೊಳಿಸಿದ್ದಾರೆ.

    2015ರಲ್ಲಿ ಭಾರತ ಸರ್ಕಾರ ಅಮೆರಿಕ ಮೂಲದ ಬೋಯಿಂಗ್ ಕಂಪನಿಯ ಜೊತೆ 15 ಚಿನೂಕ್ ಹೆಲಿಕಾಪ್ಟರ್ ಖರೀದಿ ಸಂಬಂಧ 10 ಸಾವಿರ ಕೋಟಿ ರೂ. ವೆಚ್ಚದ ಒಪ್ಪಂದ ಮಾಡಿಕೊಂಡಿತ್ತು. 15ರ ಪೈಕಿ 4 ಹೆಲಿಕಾಪ್ಟರ್ ಗಳು ಈಗ ಭಾರತಕ್ಕೆ ಬಂದಿವೆ.

    ವಿಶೇಷತೆ ಏನು?
    ಬಹುಉಪಯೋಗಿ ಹೆಲಿಕಾಪ್ಟರ್ ಚಿನೂಕ್ ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ ನೆರವಾಗಲಿದ್ದು, ಪ್ರಮುಖವಾಗಿ ಪ್ರವಾಹ, ಅಗ್ನಿ ಅವಘಡ, ಸೇನಾ ವಸ್ತುಗಳ ಪೂರೈಕೆಯಂತಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

    ಸೇನಾ ಕ್ಯಾಂಪ್ ಗಳಿಗೆ ಸೈನಿಕರ ರವಾನೆ, ಫಿರಂಗಿಗಳ ರವಾನೆ, ಇತರೆ ಶಸ್ತ್ರಾಸ್ತ್ರಗಳ ಪೂರೈಕೆ, ಇಂಧನವನ್ನು ಸಾಗಿಸಬಲ್ಲದು. ಒಟ್ಟು 9.6 ಟನ್ ತೂಕದ ವಸ್ತುಗಳನ್ನು ಎತ್ತಿಕೊಂಡು ಹೋಗುವ ಸಾಮಥ್ರ್ಯ ಈ ಹೆಲಿಕಾಪ್ಟರ್ ಗೆ ಇದೆ. ಬೋಯಿಂಗ್ ಕಂಪನಿ ಇದೂವರೆಗೆ ಒಟ್ಟು 1,179 ಹೆಲಿಕಾಪ್ಟರ್ ಗಳನ್ನು ಉತ್ಪಾದಿಸಿದೆ.

    ಮೂವರು ಸಿಬ್ಬಂದಿ(ಇಬ್ಬರು ಪೈಲಟ್ ಮತ್ತು ಫ್ಲೈಟ್ ಎಂಜಿನಿಯರ್) ಈ ಹೆಲಿಕಾಪ್ಟರ್ ಅನ್ನು ನಿಯಂತ್ರಿಸಬಹುದು. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳ ಬಳಕೆಯಲ್ಲಿ ಚಿನೂಕ್ ಹೆಲಿಕಾಪ್ಟರ್ ಇದ್ದು ತನ್ನ ಸಾಮಥ್ರ್ಯವನ್ನು ತೋರಿಸಿದೆ. ಹೊಸದಾಗಿ ಬಂದಿರುವ ಚಿನೂಕ್ ಹೆಲಿಕಾಪ್ಟರ್ ಗಳು ರಷ್ಯಾ ನಿರ್ಮಿತ ಮಿ-1, ಮಿ-26, ಮಿ-35 ಹೆಲಿಕಾಪ್ಟರ್ ಗಳ ಜಾಗವನ್ನು ತುಂಬಲಿದೆ.

    ದಾಳಿ ನಡೆಸಬಲ್ಲ 22 ಅಪಾಚಿ ಹೆಲಿಕಾಪ್ಟರ್ ಖರೀದಿ ಸಂಬಂಧ ಭಾರತ ಬೋಯಿಂಗ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ಹೆಲಿಕಾಪ್ಟರ್ ಗಳು ಪಂಜಾಬಿನಲ್ಲಿರುವ ಪಠಾಣ್‍ಕೋಟ್ ವಾಯುನೆಲೆಗೆ ಬರಲಿವೆ.