Tag: ವಾಯುಸೇನೆ

  • ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಕೊಳ್ಳೇಗಾಲದ ಯುವತಿ

    ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಕೊಳ್ಳೇಗಾಲದ ಯುವತಿ

    ಚಾಮರಾಜನಗರ: ಕೊಳ್ಳೇಗಾಲ ಮೂಲದ ಆಶ್ರಿತಾ ವಿ ಒಲೆಟಿ ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನಿಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಆಶ್ರಿತಾ ವಿ ಒಲೆಟಿ ಅವರು ಇಡೀ ಪ್ರಪಂಚದಲ್ಲಿರುವ ಏಳು ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಪ್ರತಿಷ್ಠಿತ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‍ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ ಕೇವಲ 275 ಪದವೀದರರು ಮಾತ್ರ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದು, ಆಶ್ರಿತಾ ಒಲೆಟಿ ಅತ್ಯಂತ ಕಠಿಣ ತರಬೇತಿಗಳನ್ನು ಒಳಗೊಂಡಿರುವ ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಭಾರತೀಯ ವಾಯುದಳದ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಕ್ವಾಡ್ರಲ್ ಲೀಡರ್ ಆಗಿದ್ದಾರೆ.

    ಫ್ಲೈಟ್ ಟೆಸ್ಟ್ ಇಂಜಿನಿಯರ್‌ಗಳು ಹೊಸ ವಿಮಾನಗಳ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲಿದ್ದು, ವಿಮಾನಗಳ ಸೇವೆಗೆ ಮುಕ್ತ ಮಾಡಲು ಇವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಪದವಿ ಪ್ರಧಾನ ಸಮಾರಂಭ ಮುಗಿದಿದ್ದು, ವಾಯುಸೇನೆ ಅಧಿಕೃತವಾಗಿ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್‌ ಆಗಿದ್ದು,ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ನವೆಂಬರಿನಲ್ಲಿ 4 ಯುದ್ಧ ವಿಮಾನ ಸೇರ್ಪಡೆ – ವಾಯುಸೇನೆಯಲ್ಲಿ ಹೆಚ್ಚಲಿದೆ ರಫೇಲ್ ಬಲ

    ನವೆಂಬರಿನಲ್ಲಿ 4 ಯುದ್ಧ ವಿಮಾನ ಸೇರ್ಪಡೆ – ವಾಯುಸೇನೆಯಲ್ಲಿ ಹೆಚ್ಚಲಿದೆ ರಫೇಲ್ ಬಲ

    ನವದೆಹಲಿ: ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹೊತ್ತಲ್ಲಿ ಭಾರತೀಯ ವಾಯು ಸೇನೆಗೆ ಮತ್ತಷ್ಟು ಬಲ ಬರುವ ಲಕ್ಷಣಗಳು ಗೋಚರಿಸುತ್ತಿದೆ.

    ನವೆಂಬರ್ ಮೊದಲ ವಾರದಲ್ಲಿ ಎರಡನೇ ಹಂತದಲ್ಲಿ ಭಾರತಕ್ಕೆ 3-4 ರಫೇಲ್ ಯುದ್ಧ ವಿಮಾನಗಳು ಬರುವ ಸಾಧ್ಯತೆಗಳಿದೆ. ಮೊದಲ ಹಂತದಲ್ಲಿ ಐದು ವಿಮಾನಗಳು ಭಾರತೀಯ ವಾಯು ಸೇನೆ ಸೇರಿದ್ದು, ಎರಡನೇ ಹಂತದಲ್ಲಿ 3-4 ವಿಮಾನಗಳು ಹರಿಯಾಣದ ಅಂಬಾಲ ವಾಯು ನೆಲೆಗೆ ಬಂದಿಳಿಯಲಿದೆ.

    ಎರಡನೇ ಹಂತದಲ್ಲಿ ನಾಲ್ಕು ರಫೇಲ್ ಯುದ್ಧ ವಿಮಾನಗಳನ್ನು ಸೇರ್ಪಡೆ ಹಿನ್ನೆಲೆ ಭಾರತದ ಅಧಿಕಾರಿಗಳ ತಂಡ ಫ್ರಾನ್ಸ್ ಗೆ ತೆರಳಿದೆ. ಅಲ್ಲಿ ಸೇಂಟ್-ಡಿಜಿಯರ್ ವಾಯುನೆಲೆಯ ತರಬೇತಿ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಯುದ್ಧ ವಿಮಾನಗಳ ತಯಾರಿ ಪರಿಶೀಲನೆ ಮಾಡಲಿದೆ.

    ಕಳೆದ ಜುಲೈ 28ರಂದು ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಮೊದಲ ಹಂತದಲ್ಲಿ ಬಂದಿಳಿದ್ದವು ತರಬೇತಿ ಬಳಿಕ ಸೆಪ್ಟೆಂಬರ್ 10ರಂದು ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿತ್ತು. 2023ರ ವೇಳೆಗೆ ಒಪ್ಪಂದದಂತೆ ಎಲ್ಲಾ 36 ರಫೇಲ್ ವಿಮಾನಗಳು ಭಾರತದಲ್ಲಿರಲಿವೆ.

  • ಬೆಂಗಳೂರಿನ ಪೀಣ್ಯದ ಕಂಪನಿಗೆ ಸಿಕ್ತು 590 ಕೋಟಿ ರೂ. ರಕ್ಷಣಾ ಯೋಜನೆ

    ಬೆಂಗಳೂರಿನ ಪೀಣ್ಯದ ಕಂಪನಿಗೆ ಸಿಕ್ತು 590 ಕೋಟಿ ರೂ. ರಕ್ಷಣಾ ಯೋಜನೆ

    ಬೆಂಗಳೂರು: 590 ಕೋಟಿ ರೂ. ಮೊತ್ತದ ರಕ್ಷಣಾ ಯೋಜನೆಯನ್ನು ಬೆಂಗಳೂರು ಮೂಲದ ಪೀಣ್ಯದ ಕಂಪನಿ ಪಡೆದುಕೊಂಡಿದೆ.

    ಅಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಕಂಪನಿ ಕೆಲ ದಿನಗಳ ಹಿಂದೆ ಪಿಚೋರಾ ಕ್ಷಿಪಣಿ ಮತ್ತು ರೇಡಾರ್‌ ವ್ಯವಸ್ಥೆಯ ಉನ್ನತೀಕರಣ, ಡಿಜಟಲೀಕರಣ ಸಂಬಂಧ ರಕ್ಷಣಾ ಸಚಿವಾಲಯದ ಜೊತೆ ಸಹಿ ಹಾಕಿದೆ.

    30 ವರ್ಷದ ಹಿಂದಿನ ಪಿಚೋರಾ ಕ್ಷಿಪಣಿ ಮತ್ತು ರೇಡಾರ್‌ ವ್ಯವಸ್ಥೆ ಭಾರತೀಯ ವಾಯುಸೇನೆಯಲ್ಲಿದ್ದು ಈಗ ಇದು ಹಳೆಯದಾಗಿದೆ. ಭಾರತೀಯ ವಾಯುಸೇನೆ ಈ ವ್ಯವಸ್ಥೆಯನ್ನು ಉನ್ನತೀಕರಿಸಲು ಟೆಂಡರ್‌ ಕರೆದಿತ್ತು. ಇದನ್ನೂ ಓದಿ: ರಫೇಲ್‌ ಡೀಲ್‌ – ಆಫ್‌ಸೆಟ್‌ ನಿಯಮವನ್ನೇ ಕೈಬಿಟ್ಟ ಸರ್ಕಾರ

    ಅಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಕಂಪನಿಯ ಮುಖ್ಯಸ್ಥ ಮತ್ತು ನಿರ್ದೇಶಕ ನಿವೃತ್ತ ಕರ್ನಲ್‌ ಎಚ್‌ಎಸ್‌ ಶಂಕರ್‌ ಪ್ರತಿಕ್ರಿಯಿಸಿ, ಮುಂದಿನ 4 ವರ್ಷದಲ್ಲಿ ರಷ್ಯಾದ ಸಹಕಾರದೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

    ಇದು ರಾಷ್ಟ್ರೀಯ ಮಹತ್ವ ಪಡೆದ ಯೋಜನೆಯಾಗಿದೆ. ಶೀಘ್ರವೇ ಮುಂದೆ ಅಲ್ಫಾ ಡಿಸೈನ್‌ ಮತ್ತು ಇತರೇ ಭಾರತದ ಕಂಪನಿಗಳು ಈಗಲೂ ಬಳಕೆಯಲ್ಲಿರುವ ಹಲವು ವರ್ಷಗಳ ಹಿಂದಿನ ರೇಡಾರ್‌ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಉನ್ನತೀಕರಿಸಲಿವೆ. ಹೊಸ ವ್ಯವಸ್ಥೆಯನ್ನು ಖರೀದಿಸುವ ಬದಲು ಈಗ ಇರುವ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿದರೆ ಖರ್ಚು ಕಡಿಮೆ ಎಂದು ಕರ್ನಲ್‌ ಎಚ್‌ಎಸ್‌ ಶಂಕರ್‌ ತಿಳಿಸಿದರು.

    ಉನ್ನತೀಕರಣ ಮಾಡಬೇಕಾದರೆ ಹಲವು ಸಾಧನಗಳು ಸ್ವದೇಶದಲ್ಲೇ ತಯಾರಾಗಬೇಕು. ವಿಶೇಷವಾಗಿ ರೇಡಾರ್‌ ಟ್ರಾನ್ಸ್‌ಮಿಟರ್‌, ಥರ್ಮಲ್‌ ಇಮೇಜ್‌ ಬೇಸ್ಡ್‌ ಎಲೆಕ್ಟ್ರೋ ಆಪ್ಟಿಕಲ್‌ ಸಿಸ್ಟಂ, ಸಂವಹನ ಸಾಧನಗಳು, ಕಂಟ್ರೋಲ್‌ ಕ್ಯಾಬಿನ್‌, ಕೇಬಲ್‌ ಇತ್ಯಾದಿಗಳನ್ನು ತಯಾರಿಸಬೇಕಾಗುತ್ತದೆ.

    ಈ ಯೋಜನೆಯ ಅನ್ವಯ ಅಲ್ಫಾ ಡಿಸೈನ್‌ ಕಂಪನಿ 16 ಪಿಚೋರಾ ಕ್ಷಿಪಣಿ ವ್ಯವಸ್ಥೆಯನ್ನು ಉನ್ನತೀಕರಿಸಲಿದೆ. ಈ ಯೋಜನೆ ಯಶಸ್ವಿಯಾದ ಬಳಿಕ ಮತ್ತೆ 8 ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಉತ್ಸಾಹವನ್ನು ಕಂಪನಿ ತೋರಿಸಿದೆ.

    ಪಿಚೋರಾ ಕ್ಷಿಪಣಿಯನ್ನು 1961ರಲ್ಲಿ ರಷ್ಯಾ ಅಭಿವೃದ್ಧಿ ಪಡಿಸಿದ್ದು, ಈಗಲೂ ಹಲವು ದೇಶಗಳ ವಾಯುಸೇನೆಗಳು ಈ ಕ್ಷಿಪಣಿಯನ್ನು ಬಳಕೆ ಮಾಡುತ್ತಿವೆ. ಭಾರತ ಈಗ ಮೇಕ್‌ ಇನ್‌ ಇಂಡಿಯಾ ಯೋಜನೆಯ ಅಡಿಯಲ್ಲಿ ಸ್ವದೇಶಿ ಕಂಪನಿಗೆ ಕ್ಷಿಪಣಿಯನ್ನು ಮೇಲ್ದರ್ಜೆಗೆ ಏರಿಸಲು ಮುಂದಾಗುತ್ತಿದೆ.

  • ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

    ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

    ನವದೆಹಲಿ: ಇಂದು ಭಾರತಕ್ಕೆ 5 ರಫೇಲ್‌ ಯುದ್ಧ ವಿಮಾನಗಳು ಲ್ಯಾಂಡ್‌ ಆಗಲಿದೆ. ಈ ರಫೇಲ್‌ ವಿಮಾನಗಳು ಭಾರತಕ್ಕೆ ಬರುವಲ್ಲಿ ಜಮ್ಮು ಕಾಶ್ಮೀರ ಮೂಲದ ವಾಯುಸೇನೆಯ ಅಧಿಕಾರಿ ಹಿಲಾಲ್‌ ಅಹ್ಮದ್‌ ಪ್ರಮುಖ ಪಾತ್ರವಹಿಸಿದ್ದಾರೆ.

    ಕಳೆದ ಒಂದು ವರ್ಷದಿಂದ ಫ್ರಾನ್ಸ್‌ನಲ್ಲಿರುವ ಏರ್‌ ಕಮಾಂಡರ್‌ ಹಿಲಾಲ್‌ ಅಹ್ಮದ್‌ ಭಾರತದ ಬೇಡಿಕೆಗೆ ಅನುಗುಣವಾಗಿ ಡಸಾಲ್ಡ್‌ ಕಂಪನಿಯ ಜೊತೆ ಸಂವಹನ ನಡೆಸಿ ರಫೇಲ್‌ ವಿಮಾನವನ್ನು ರೂಪಿಸಿದ್ದಾರೆ.

    52 ವರ್ಷದ ಹಿಲಾಲ್‌ ಅನಂತ್‌ನಾಗ್‌ ಜಿಲ್ಲೆ ಭಕ್ಷಿಬಾದ್‌ ನಗರದಲ್ಲಿ ಜನಿಸಿದ್ದು, ಇವರ ತಂದೆ ದಿವಂಗತ ಮೊಹಮ್ಮದ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

    1988ರ ಡಿಸೆಂಬರ್‌ 17 ರಂದು ವಾಯುಸೇನೆಗೆ ಪೈಲಟ್‌ ಆಗಿ ಸೇರ್ಪಡೆಗೊಂಡ ಇವರು 1993ರಲ್ಲಿ ಫೈಲ್ಡ್‌ ಲೆಫ್ಟಿನೆಂಟ್‌ ಆಗಿ ನೇಮಕಗೊಂಡರು. 2004ರಲ್ಲಿ ವಿಂಗ್‌ ಕಮಾಂಡರ್‌, 2016ರಲ್ಲಿ ಗ್ರೂಪ್‌ ಕ್ಯಾಪ್ಟನ್‌, 2016ರಲ್ಲಿ ಏರ್‌ ಕಮಾಂಡರ್‌ ಹುದ್ದೆ ಸಿಕ್ಕಿತ್ತು.

    ಹಿಲಾಲ್ ಜಮ್ಮು ಜಿಲ್ಲೆಯ ನಾಗ್ರೋಟಾ ಪಟ್ಟಣದ ಸೈನಿಕ್ ಶಾಲೆಯಲ್ಲಿ ಓದಿದ್ದಾರೆ. ಡಿಫೆನ್ಸ್‌ ಸರ್ವಿಸಸ್‌ ಸ್ಟಾಫ್‌ ಕಾಲೇಜಿನಲ್ಲಿ ಪದವಿ ಪಡೆದ ಇವರು ಅಮೆರಿಕದಲ್ಲಿರುವ ಏರ್‌ ವಾರ್‌ ಕಾಲೇಜಿನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪದವಿ ತೇರ್ಗಡೆಯಾಗಿದ್ದರು. ವಾಯು ಸೇನಾ ಮೆಡಲ್‌ ಮತ್ತು ವಿಶಿಷ್ಟ ಸೇವಾ ಮೆಡಲ್‌ ಸಹ ಇವರಿಗೆ ಸಿಕ್ಕಿದೆ.

    ಮೀರಾಜ್‌ -2000, ಮಿಗ್‌ 21, ಕಿರಣ್‌ ವಿಮಾನವನ್ನು ಅಪಘಾತ ರಹಿತವಾಗಿ ಚಲಾಯಿಸಿದ ಅನುಭವ ಇವರಿಗೆ ಇದೆ. 3 ಸಾವಿರ ಕಿ.ಮೀ ಹಾರಾಟದ ಅನುಭವ ಹೊಂದಿದ್ದ ಕಾರಣ  ಹಿಲಾಲ್‌ ಅಹ್ಮದ್ ಅವರಿಗೆ ರಫೇಲ್‌ ಉಸ್ತುವಾರಿಯನ್ನು ನೀಡಲಾಗಿತ್ತು.

    ಮೊದಲ ಬ್ಯಾಚ್‌ನ 10 ಯುದ್ಧ ವಿಮಾನಗಳ ಪೈಕಿ 5 ಯುದ್ಧ ವಿಮಾನಗಳು ಇಂದು ಭಾರತಕ್ಕೆ ಬರುತ್ತಿದ್ದು ಹರ್ಯಾಣದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಈ ವಿಮಾನಗಳು ನಿಯೋಜನೆಗೊಳ್ಳಲಿವೆ.

    2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ವಿಮಾನಗಳನ್ನು(28 ಸಿಂಗಲ್‌ ಸೀಟರ್‌, 8 ಡಬಲ್‌ ಸೀಟರ್‌) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್‌ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‌ಲೈನ್‌ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್‌ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.

    ರಫೇಲ್ ವಿಶೇಷತೆ ಏನು?
    ರಫೇಲ್‌ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮೀ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

    ಭಾರತದ ಬೇಡಿಕೆ ಏನಿತ್ತು?
    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿತ್ತು.

  • ಫ್ರಾನ್ಸ್‌ನಿಂದ ಟೇಕಾಫ್‌, ಒಂದು ಕಡೆ ಸ್ಟಾಪ್‌ – ಬುಧವಾರ ಭಾರತದಲ್ಲಿ ಲ್ಯಾಂಡ್‌ ಆಗಲಿದೆ ರಫೇಲ್‌

    ಫ್ರಾನ್ಸ್‌ನಿಂದ ಟೇಕಾಫ್‌, ಒಂದು ಕಡೆ ಸ್ಟಾಪ್‌ – ಬುಧವಾರ ಭಾರತದಲ್ಲಿ ಲ್ಯಾಂಡ್‌ ಆಗಲಿದೆ ರಫೇಲ್‌

    ಪ್ಯಾರಿಸ್‌: ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್‌ ಫ್ರಾನ್ಸ್‌ನಿಂದ ಟೇಕಾಫ್‌ ಆಗಿದ್ದು ಜುಲೈ 29ರಂದು ಭಾರತದಲ್ಲಿ ಲ್ಯಾಂಡ್‌ ಆಗಲಿದೆ.

    ಮೊದಲ ಬ್ಯಾಚ್‌ನ 10 ಯುದ್ಧ ವಿಮಾನಗಳ ಪೈಕಿ 5 ಯುದ್ಧ ವಿಮಾನಗಳು ಭಾರತಕ್ಕೆ ಬರುತ್ತಿದ್ದು ಹರ್ಯಾಣದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಈ ವಿಮಾನಗಳು ನಿಯೋಜನೆಗೊಳ್ಳಲಿವೆ.

    ಪೈಲಟ್‌, ಎಂಜಿನಿಯರಿಂಗ್‌ ಸೇರಿದಂತೆ ಭಾರತೀಯ ವಾಯುಸೇನೆಯ ಒಟ್ಟು 12 ಮಂದಿ ಈಗಾಗಲೇ ರಫೇಲ್‌ ಓಡಿಸಲು ಸಂಪೂರ್ಣ ತರಬೇತಿಯನ್ನು ಪಡೆದಿದ್ದಾರೆ.

    ಫ್ರಾನ್ಸ್‌ ಮತ್ತು ಭಾರತದ ಮಧ್ಯೆ 7 ಸಾವಿರ ಕಿ.ಮೀ ಅಂತರವಿದೆ. ಹೀಗಾಗಿ ಯನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ)ನಲ್ಲಿರುವ ಫ್ರಾನ್ಸ್‌ ವಾಯುನೆಲೆಯಲ್ಲಿ ಈ ವಿಮಾನಗಳು ಇಂಧನ ತುಂಬಿಸಲು ಒಂದು ಬಾರಿ ನಿಲುಗಡೆಯಾಗಲಿವೆ.

    2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ವಿಮಾನಗಳನ್ನು(28 ಸಿಂಗಲ್‌ ಸೀಟರ್‌, 8 ಡಬಲ್‌ ಸೀಟರ್‌) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್‌ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‌ಲೈನ್‌ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ  ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್‌ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.

    ಕಳೆದ ವರ್ಷದ ಅಕ್ಟೋಬರ್‌ ನವರಾತ್ರಿ ಸಮಯದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಫ್ರಾನ್ಸ್‌ಗೆ ತೆರಳಿದ್ದರು. ಈ ವೇಳೆ ಭಾರತದ ರಫೇಲ್‌ ವಿಮಾನಗಳಿಗೆ ಆಯುಧ ಪೂಜೆ ಮಾಡಿದ್ದರು.

    ರಫೇಲ್ ವಿಶೇಷತೆ ಏನು?
    ರಫೇಲ್‌ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮೀ  ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಇದನ್ನೂ ಓದಿ: ಲಡಾಖ್ ಗಡಿಯಲ್ಲಿ ಫೈಟರ್‌ ಜೆಟ್‌ ರಫೇಲ್‌ ನಿಯೋಜಿಸಲು ಚಿಂತನೆ

    ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್ ವಿಮಾನವನ್ನು ನಿರ್ಮಿಸಿದ್ದು, ಭಾರತ ಅಲ್ಲದೇ ಈಜಿಪ್ಟ್, ಕತಾರ್ ದೇಶಗಳು ರಫೇಲ್ ಖರೀದಿ ಸಂಬಂಧ ಡಸಾಲ್ಟ್ ಜೊತೆ ಮಾತುಕತೆ ನಡೆಸಿವೆ.

    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು  ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿತ್ತು.

     

  • ಲೇಹ್‌ಗೆ ಏರ್‌ಚೀಫ್‌ ಮಾರ್ಷಲ್‌ ದಿಢೀರ್‌ ಭೇಟಿ – ಗಡಿಯಲ್ಲಿ ಯುದ್ಧವಿಮಾನ, ಹೆಲಿಕಾಪ್ಟರ್‌ಗಳ ಘರ್ಜನೆ

    ಲೇಹ್‌ಗೆ ಏರ್‌ಚೀಫ್‌ ಮಾರ್ಷಲ್‌ ದಿಢೀರ್‌ ಭೇಟಿ – ಗಡಿಯಲ್ಲಿ ಯುದ್ಧವಿಮಾನ, ಹೆಲಿಕಾಪ್ಟರ್‌ಗಳ ಘರ್ಜನೆ

    ಲೇಹ್‌: ಲಡಾಖ್‌ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ ವಾಯುಸೇನೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ ಲೇಹ್‌ ವಾಯುನೆಲೆಗೆ ದಿಢೀರ್‌ ಭೇಟಿ ನೀಡಿದ್ದಾರೆ.

    ಸೇನಾ ಮುಖ್ಯಸ್ಥರು ಯಾವುದೇ ನೆಲೆಗೆ ಭೇಟಿ ನೀಡುವುದಿದ್ದರೆ ಅದು ಪೂರ್ವ ನಿಗದಿಯಾಗಿರುತ್ತದೆ. ಆದರೆ ಭದೌರಿಯಾ ಬುಧವಾರ ಭೇಟಿ ನೀಡಿ ಸಹದ್ಯೋಗಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನ ಚೀಫ್‌ ಡಿಫೆನ್ಸ್‌ ಸ್ಟಾಫ್‌ ಜನರಲ್‌ ಬಿಪಿನ್‌ ರಾವತ್‌ ಮತ್ತು ಸೇನಾ ಮುಖ್ಯಸ್ಥ ಜನರಲ್‌ ಎಂಎಂ ನರವಾಣೆ ಜೊತೆ ಸಭೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ವಾಯುಸೇನೆಗೆ ಚಿನೂಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು ? ವಿಡಿಯೋ ನೋಡಿ

    ಬಾಲಾಕೋಟ್‌ ಏರ್‌ ಸ್ಟ್ರೈಕ್‌ ವೇಳೆ ಮುಖ್ಯ ಪಾತ್ರ ವಹಿಸಿದ್ದ ಮಿರಾಜ್‌ 2000 ಮತ್ತು ಸುಕೊಯೋ ಯುದ್ಧ ವಿಮಾನಗಳು ಲೇಹ್‌ನಲ್ಲಿ ಲ್ಯಾಂಡ್‌ ಆಗಿದೆ. ಇದರ ಜೊತೆ ದಾಳಿ ಹೆಲಿಕಾಪ್ಟರ್‌ಗಳಾದ ಅಪಾಚೆ ಮತ್ತು ಚಿನೂಕ್‌ ಸಹ ಲೇಹ್‌ ನೆಲೆಗೆ ಬಂದಿವೆ. ಇದನ್ನೂ ಓದಿ: ವಾಯುಸೇನೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು?

    ಶ್ರೀನಗರ, ಅಂಬಾಲ, ಅಂದಪೂರ್‌, ಹಲ್ವಾರ, ಬರೇಲಿ ವಾಯು ನೆಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಒಂದು ವೇಳೆ ಚೀನಾ ಏನಾದರೂ ದಾಳಿ ನಡೆಸಿದರೆ ತಕ್ಕ ತಿರುಗೇಟು ನೀಡಲು ಚೀನಾ ಗಡಿಯುದ್ದಕ್ಕೂ ಸೈನಿಕರ ಜಮಾವಣೆ ಹೆಚ್ಚಾಗಿದೆ. ಶ್ರೀನಗರ ಲೇಹ್‌ ಹೆದ್ದಾರಿಯಲ್ಲಿ ಕಳೆದ ಎರಡು ದಿನಗಳಿಂದ ಸೇನೆಯ ಓಡಾಟ ಹೆಚ್ಚಾಗಿದೆ.

  • ಮಧ್ಯಾಹ್ನ ಬೆಂಗ್ಳೂರಿನಲ್ಲಿ ಕೇಳಿಬಂದ ಶಬ್ಧ ಯುದ್ಧ ವಿಮಾನದ್ದು – ರಕ್ಷಣಾ ಇಲಾಖೆ

    ಮಧ್ಯಾಹ್ನ ಬೆಂಗ್ಳೂರಿನಲ್ಲಿ ಕೇಳಿಬಂದ ಶಬ್ಧ ಯುದ್ಧ ವಿಮಾನದ್ದು – ರಕ್ಷಣಾ ಇಲಾಖೆ

    ಬೆಂಗಳೂರು: ಮಧ್ಯಾಹ್ನ ಸಿಲಿಕಾನ್ ಸಿಟಿಯ ಹಲವು ಭಾಗದಲ್ಲಿ ಕೇಳಿ ಬಂದ ಶಬ್ಧ ಯುದ್ಧ ವಿಮಾನದ್ದು ಎನ್ನುವುದು ಈಗ ದೃಢಪಟ್ಟಿದೆ.

    ಈ ಸಂಬಂಧ ರಕ್ಷಣ ಇಲಾಖೆ ತಿಳಿಸಿದ್ದು, ಏರ್ ಕ್ರಾಫ್ಟ್ ಸಿಸ್ಟಂ ಆಂಡ್ ಟೆಸ್ಟಿಂಗ್ ಎಸ್ಟಾಬ್ಲಿಸ್ಟ್ ಮೆಂಟ್(ಎಎಸ್‍ಟಿಇ) ನ ವಿಮಾನ ಹಾರಾಡಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಸೂಪರ್ ಸೋನಿಕ್ ವಿಮಾನ ನಗರದಿಂದ ಹೊರಗಡೆ ಹಾರಾಟ ನಡೆಸಿತ್ತು ಎಂದು ತಿಳಿಸಿದೆ.

    ಪೈಲಟ್ ಗಳು ಮತ್ತು ಎಂಜಿನಿಯರುಗಳು ವಿಮಾನವನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ 36 ಸಾವಿರ ಮತ್ತು 40 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದಾಗ ಸೋನಿಕ್ ಬೂಮ್ ಕೇಳಿಸಿರಬಹುದು. ಸೋನಿಕ್ ಬೂಮ್ ನಡೆದ ಪ್ರದೇಶದಿಂದ ವ್ಯಕ್ತಿ 65 ರಿಂದ 85 ಕಿ.ಮೀ ದೂರದಲ್ಲಿದ್ದರೂ ಈ ಧ್ವನಿ ಕೇಳಿಸುತ್ತದೆ ಎಂದು ಟ್ವೀಟ್ ಸ್ಪಷ್ಟನೆ ನೀಡಿದೆ.

    ಮಧ್ಯಾಹ್ನ 1:25ರ ವೇಳೆಗೆ ಈ ಘಟನೆ ನಡೆದಿದ್ದರೂ ಇಷ್ಟು ತಡವಾಗಿ ಯಾಕೆ ಸ್ಪಷ್ಟನೆ ನೀಡಿದ್ದು ಎಂದು ಜನ ಈಗ ಪ್ರಶ್ನೆ ಮಾಡಿ ಕೇಳುತ್ತಿದ್ದಾರೆ.

    ಮಧ್ಯಾಹ್ನವೇ ಇದು ವಾಯುಸೇನೆಯ ವಿಮಾನದಿಂದ ಆಗಿರುವ ಶಬ್ಧ ಎನ್ನುವುದು ದೃಢಪಟ್ಟಿತ್ತು. ಆದರೆ ಅಧಿಕೃತವಾಗಿ ಎಲ್ಲಿಯೂ ಪ್ರಕಟವಾಗಿರಲಿಲ್ಲ. ಸಂಜೆಯ ವೇಳೆಗೆ ಭಾರತೀಯ ವಾಯುಸೇನೆ ಹೇಳಿಕೆ ಬಿಡುಗಡೆ ಮಾಡಿ, ಏರ್ ಕ್ರಾಫ್ಟ್ ಆಂಡ್ ಸಿಸ್ಟಂ ಟೆಸ್ಟಿಂಗ್ ಮತ್ತು ಎಚ್‍ಎಎಲ್ ವಿಮಾನಗಳು ಪರೀಕ್ಷಾರ್ಥ ಹಾರಾಟ ನಡೆಸಿರಬಹುದು ಎಂದು ತಿಳಿಸಿತ್ತು. ಆದರೆ ಹೇಳಿಕೆಯ ಶಬ್ಧದ ಮೂಲದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗ ಸ್ಪಷ್ಟನೆ ನೀಡುವ ಮೂಲಕ ಎದ್ದಿದ್ದ ಎಲ್ಲ ಗೊಂದಲಗಳಿಗೆ ರಕ್ಷಣಾ ಇಲಾಖೆ ತೆರೆ ಎಳೆದಿದೆ.

    ಮಧ್ಯಾಹ್ನ 1.20ರ ಸಮಯದಲ್ಲಿ ಬೆಂಗಳೂರಿನಲ್ಲಿ ಕೇಳಿಸಿಕೊಂಡದ್ದು ಸುಖೋಯ್ ವಿಮಾನದ ಸೋನಿಕ್ ಬೂಮ್. ಫೈಟರ್ ವಿಮಾನ 1,230 ಕಿ.ಮೀ ವೇಗ ತಲುಪಿ ಹೇಗೆ ಆಗಿತ್ತು ಎಂದು ವಿಂಗ್ ಕಮಾಂಡರ್ ಸುದರ್ಶನ್ ಅವರು ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದರು. ಜನಪ್ರಿಯ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ, ನೀವು ಕೇಳಿದ್ದು, ಸೂಪರ್ ಸೋನಿಕ್ ವಿಮಾನಗಳ ಪರೀಕ್ಷಾರ್ಥ ಹಾರಾಟದ ಸದ್ದು. ಗುಡುಗುಗಿಂತಲೂ ತೀವ್ರ ಎಂದು ಪೋಸ್ಟ್ ಹಾಕಿದ್ದರು.

    ನಡೆದಿದ್ದು ಏನು?
    ಮಧ್ಯಾಹ್ನ ಮಧ್ಯಾಹ್ನ 1.20ರ ಸುಮಾರಿಗೆ ಎದೆ ಝಲ್ ಎನ್ನಿಸುವ ದೊಡ್ಡ ಶಬ್ಧ ಕೇಳಿಬಂತು. ಇಂದಿರಾನಗರ, ಕಲ್ಯಾಣನಗರ, ಕೆಆರ್‍ಪುರ, ಟಿನ್‍ಫ್ಯಾಕ್ಟ್ರಿ, ರಾಮಮೂರ್ತಿನಗರ, ಮಾರತ್ತಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಬನಶಂಕರಿ, ವಸಂತಪುರಕ್ಕೆ ಶಬ್ಧ ಕೇಳಿಸಿತ್ತು

    ಏನಿದು ಸೋನಿಕ್ ಬೂಮ್?
    ಸಮುದ್ರ ಮಟ್ಟದಲ್ಲಿ ಶಬ್ದಗಳ ತರಂಗಗಳ ವೇಗ ಸುಮಾರು ಗಂಟೆಗೆ 1,235 ಕಿಮೀ ಇರುತ್ತದೆ. ಮೇಲೆ ಮೇಲೆ ಹಾರುತ್ತಾ ಏರಿದಾಗ ಈ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಈ ವೇಗವನ್ನು ಒಂದು ಮ್ಯಾಕ್ ಎನ್ನುತ್ತಾರೆ. ನಮ್ಮ ಫೈಟರ್ ವಿಮಾನಗಳು ಈ ವೇಗದ ಆಸುಪಾಸಿನಲ್ಲಿ ಹಾರಾಡುತ್ತಿರುವಾಗ ಗಾಳಿಯ ಹಲವಾರು ಪದರಗಳು ಒಂದರ ಮೇಲೆ ಒಂದರಂತೆ ಏರುತ್ತಾ ಹೋಗುತ್ತವೆ. ಈ ವಿಮಾನದ ವೇಗ ಒಂದು ಮ್ಯಾಕ್‍ಗಿಂತಾ ಹೆಚ್ಚಾದಾಗ ಈ ವಾಯು ಪದರಗಳನ್ನು ಸೀಳಿಕೊಂಡು ಮುನ್ನುಗ್ಗುತ್ತವೆ. ಆಗ ವಿಮಾನದ ಹಿಂದೆ ಉಂಟಾದ ನಿರ್ವಾತದಲ್ಲಿ ಅಪ್ಪಳಿಸಿದಾಗ ಉಂಟಾಗುವ ಶಬ್ಧವೇ ಸೂಪರ್ ಸೋನಿಕ್ ಬೂಮ್ ಎಂದು ವಿಂಗ್ ಕಮಾಂಡರ್ ಸುದರ್ಶನ್ ತಿಳಿಸಿದ್ದಾರೆ.

    ಸೂಪರ್ ಸೋನಿಕ್ ವೇಗವನ್ನು ಮ್ಯಾಕ್ ಸಂಖ್ಯೆಯಲ್ಲಿ ಹೇಳಲಾಗುತ್ತದೆ. ಮ್ಯಾಕ್ 1 ಎಂದರೆ ಧ್ವನಿಯ ವೇಗ, ಮ್ಯಾಕ್ 2 ಆ ವೇಗದ ಎರಡರಷ್ಟು. ವಿಮಾನದ ಎತ್ತರದಲ್ಲಿನ ಧ್ವನಿಯ ವೇಗದಿಂದ ವಿಮಾನದ ವೇಗವನ್ನು ವಿಭಜಿಸುವುದರಿಂದ ಮ್ಯಾಕ್ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಯುದ್ಧ ವಿಮಾನಗಳ ವಾಯುನೆಲೆಯಲ್ಲಿ ಸೂಪರ್ ಸೋನಿಕ್ ಬೂಮ್ ಸಾಮಾನ್ಯ. ಬಹಳಷ್ಟು ಸಲ ಕಿಟಕಿಯ ಗಾಜುಗಳು ಒಡೆದು ಹೋಗುತ್ತದೆ.

  • ಇಂದು ಮಧ್ಯಾಹ್ನ ಬೆಂಗ್ಳೂರಿನಲ್ಲಿ ಯಾವುದೇ ವಿಮಾನ ಹಾರಿಸಿಲ್ಲ: ವಾಯುಸೇನೆ

    ಇಂದು ಮಧ್ಯಾಹ್ನ ಬೆಂಗ್ಳೂರಿನಲ್ಲಿ ಯಾವುದೇ ವಿಮಾನ ಹಾರಿಸಿಲ್ಲ: ವಾಯುಸೇನೆ

    ಬೆಂಗಳೂರು: ಇಂದು ಮಧ್ಯಾಹ್ನ ಟ್ರೈನಿಂಗ್ ಕಮಾಂಡ್ ಯಾವುದೇ ವಿಮಾನವನ್ನು ಹಾರಿಸಿಲ್ಲ ಎಂದು ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದೆ. ಹೀಗಾಗಿ ನಿಗೂಢ ಶಬ್ಧದ ಮೂಲದ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ.

    ಮಧ್ಯಾಹ್ನ ಆಕಾಶದಲ್ಲಿ ಕೇಳಿ ಬಂದ ನಿಗೂಢ ಶಬ್ಧಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು, ಏರ್ ಕ್ರಾಫ್ಟ್ ಆಂಡ್ ಸಿಸ್ಟಂ ಟೆಸ್ಟಿಂಗ್ ಮತ್ತು ಎಚ್‍ಎಎಲ್ ವಿಮಾನಗಳು ಪರೀಕ್ಷಾರ್ಥ ಹಾರಾಟ ನಡೆಸಿರಬಹುದು. ಆದರೆ ಅದರಿಂದ ಈ ರೀತಿಯ ಶಬ್ಧ ಬರುವುದಿಲ್ಲ. ಅಲ್ಲದೆ ಈ ರೀತಿ ಶಬ್ಧ ಬರುವ ವಿಮಾನಗಳನ್ನ ನಗರದ ಹೊರಭಾಗದಲ್ಲಿ ಹಾರಿಸಲಾಗುತ್ತದೆ. ಒಂದು ವೇಳೆ ನಗರದಲ್ಲಿ ಹಾರಾಡಿದ್ದರೆ ಅದರ ಶಬ್ಧ ಗೊತ್ತಾಗುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ನಡೆದಿದ್ದು ಏನು?
    ಮಧ್ಯಾಹ್ನ ಮಧ್ಯಾಹ್ನ 1.20ರ ಸುಮಾರಿಗೆ ಎದೆ ಝಲ್ ಎನ್ನಿಸುವ ದೊಡ್ಡ ಶಬ್ಧ ಕೇಳಿಬಂತು. ಇಂದಿರಾನಗರ, ಕಲ್ಯಾಣನಗರ, ಕೆಆರ್‍ಪುರ, ಟಿನ್‍ಫ್ಯಾಕ್ಟ್ರಿ, ರಾಮಮೂರ್ತಿನಗರ, ಮಾರತ್ತಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಬನಶಂಕರಿ, ವಸಂತಪುರದ ಜನ ಈ ಶಬ್ಧ ಕೇಳಿ ಬೆಚ್ಚಿಬಿದ್ದಿದ್ರು.

    ಶುರುವಿನಲ್ಲಿ ಏನಾಯ್ತು ಅಂತ ಯಾರಿಗೂ ಅರ್ಥ ಆಗಲೇ ಇಲ್ಲ. ಕೆಲವರು ಭೂಕಂಪ ಆಗಿರಬಹುದು ಎಂದರೆ, ಇನ್ನೂ ಕೆಲವರು ಏನೋ ಸ್ಫೋಟ ಆಗಿರಬಹುದು ಅಂತಾ ತಮಗನಿಸಿದ್ದನ್ನು ಹೇಳುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಥರಹೇವಾರಿ ವದಂತಿ ಹಬ್ಬಿತು. ಈ ಬೆನ್ನಲ್ಲೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‍ಎನ್‍ಡಿಎಂಸಿ) ಎಲ್ಲೂ ಭೂಮಿ ಕಂಪಿಸಿಲ್ಲ ಎಂದು ಸ್ಪಷ್ಟಪಡಿಸಿತು. ಇದು ಆಂಫಾನ್ ಚಂಡಮಾರುತ ಪರಿಣಾಮದಿಂದ ಈ ಶಬ್ಧ ಎಂಬ ಅಭಿಪ್ರಾಯ ಕೇಳಿಬಂತು.

     

    ಈ ನಡುವೆ ಭಾರತೀಯ ವಾಯುಪಡೆಯ ಫೈಟರ್ ಜೆಟ್ ಸುಖೋಯ್ 30ನಿಂದ ಕೇಳಿಬಂದ ಸೋನಿಕ್ ಬೂಮ್ ಶಬ್ಧ ಇದಾಗಿದೆ ಎಂದು ವಿಂಗ್ ಕಮಾಂಡರ್ ಸುದರ್ಶನ್ ಅಭಿಪ್ರಾಯ ಹಂಚಿಕೊಂಡರು. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳಿದರೂ ಈ ಶಬ್ಧ ಬಂದಿದ್ದು ಹೇಗೆ ಎನ್ನುವುದು ಇನ್ನೂ ನಿಗೂಢವಾಗಿದೆ.

    ಏನಿದು ಸೋನಿಕ್ ಬೂಮ್?
    ಸಮುದ್ರ ಮಟ್ಟದಲ್ಲಿ ಶಬ್ದಗಳ ತರಂಗಗಳ ವೇಗ ಸುಮಾರು ಗಂಟೆಗೆ 1,235 ಕಿಮೀ ಇರುತ್ತದೆ. ಮೇಲೆ ಮೇಲೆ ಹಾರುತ್ತಾ ಏರಿದಾಗ ಈ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಈ ವೇಗವನ್ನು ಒಂದು ಮ್ಯಾಕ್ ಎನ್ನುತ್ತಾರೆ. ನಮ್ಮ ಫೈಟರ್ ವಿಮಾನಗಳು ಈ ವೇಗದ ಆಸುಪಾಸಿನಲ್ಲಿ ಹಾರಾಡುತ್ತಿರುವಾಗ ಗಾಳಿಯ ಹಲವಾರು ಪದರಗಳು ಒಂದರ ಮೇಲೆ ಒಂದರಂತೆ ಏರುತ್ತಾ ಹೋಗುತ್ತವೆ. ಈ ವಿಮಾನದ ವೇಗ ಒಂದು ಮ್ಯಾಕ್‍ಗಿಂತಾ ಹೆಚ್ಚಾದಾಗ ಈ ವಾಯು ಪದರಗಳನ್ನು ಸೀಳಿಕೊಂಡು ಮುನ್ನುಗ್ಗುತ್ತವೆ. ಆಗ ವಿಮಾನದ ಹಿಂದೆ ಉಂಟಾದ ನಿರ್ವಾತದಲ್ಲಿ ಅಪ್ಪಳಿಸಿದಾಗ ಉಂಟಾಗುವ ಶಬ್ಧವೇ ಸೂಪರ್ ಸೋನಿಕ್ ಬೂಮ್ ಎಂದು ವಿಂಗ್ ಕಮಾಂಡರ್ ಸುದರ್ಶನ್ ತಿಳಿಸಿದ್ದಾರೆ.

    ಸೂಪರ್ ಸೋನಿಕ್ ವೇಗವನ್ನು ಮ್ಯಾಕ್ ಸಂಖ್ಯೆಯಲ್ಲಿ ಹೇಳಲಾಗುತ್ತದೆ. ಮ್ಯಾಕ್ 1 ಎಂದರೆ ಧ್ವನಿಯ ವೇಗ, ಮ್ಯಾಕ್ 2 ಆ ವೇಗದ ಎರಡರಷ್ಟು. ವಿಮಾನದ ಎತ್ತರದಲ್ಲಿನ ಧ್ವನಿಯ ವೇಗದಿಂದ ವಿಮಾನದ ವೇಗವನ್ನು ವಿಭಜಿಸುವುದರಿಂದ ಮ್ಯಾಕ್ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಯುದ್ಧ ವಿಮಾನಗಳ ವಾಯುನೆಲೆಯಲ್ಲಿ ಸೂಪರ್ ಸೋನಿಕ್ ಬೂಮ್ ಸಾಮಾನ್ಯ. ಬಹಳಷ್ಟು ಸಲ ಕಿಟಕಿಯ ಗಾಜುಗಳು ಒಡೆದು ಹೋಗುತ್ತದೆ.

  • ವಿಕ್ಟೋರಿಯಾ ಆಸ್ಪತ್ರೆ ಮೇಲೆ ಹೂ ಮಳೆ – ಹೆಲ್ತ್ ವಾರಿಯರ್ಸ್‌ಗಳಿಗೆ ವಾಯುಸೇನೆಯಿಂದ ಸೆಲ್ಯೂಟ್

    ವಿಕ್ಟೋರಿಯಾ ಆಸ್ಪತ್ರೆ ಮೇಲೆ ಹೂ ಮಳೆ – ಹೆಲ್ತ್ ವಾರಿಯರ್ಸ್‌ಗಳಿಗೆ ವಾಯುಸೇನೆಯಿಂದ ಸೆಲ್ಯೂಟ್

    ಬೆಂಗಳೂರು: ನಮ್ಮನ್ನು ರಕ್ಷಿಸಲು ಕೊರೊನಾ ಹಿಮ್ಮೆಟ್ಟಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಹೆಲ್ತ್ ವಾರಿಯರ್ಸ್‌ಗೆ ಈಗಾಗಲೇ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸಿದ್ದಾರೆ. ಇದೀಗ ಇಡೀ ದೇಶದಲ್ಲಿ ಆಸ್ಪತ್ರೆಗಳ ಮೇಲೆ ಹೂಮಳೆ ಸುರಿಸುವ ಮೂಲಕ ಕೊರೊನಾ ವಾರಿಯರ್ಸ್‌ಗೆ ವಾಯು ಸೇನೆ ಗೌರವ ಸಲ್ಲಿಸಿದೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮೇಲೆ ಭಾರತೀಯ ಸೇನೆಯಿಂದ ಹೂ ಮಳೆ ಸುರಿಸಿ ಗೌರವ ಸಮರ್ಪಣೆ ಮಾಡಿದೆ. ವಾಯು ಪಡೆಯ ಸಿ 130 ಜೆ ಹರ್ಕ್ಯುಲೆಸ್ ಮತ್ತು ಎಮ್ ಐ 17 ಹೆಲಿಕಾಪ್ಟರ್ ವಿಕ್ಟೋರಿಯಾ ಆಸ್ಪತ್ರೆಯ ಹೆಲ್ತ್ ವಾರಿಯರ್ಸ್‌ಗೆ ಮೇಲೆ ಹೂ ಮಳೆ ಸುರಿದಿದೆ.

    ವಾಯು ಸೇನೆ ಬರುವ ಮೊದಲು ಡಾಕ್ಟರ್‌ಗಳು, ನರ್ಸ್‌ಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆ ಬಿಲ್ಡಿಂಗ್‍ನಿಂದ ಹೊರಭಾಗದಲ್ಲಿ ನಿಂತಿದ್ದರು. ಈ ವೇಳೆ ಹೂ ಮಳೆ ಸುರಿಯಲಾಗಿದೆ. ಇತ್ತ ವೈದ್ಯರು ಹಾಗೂ ದಾದಿಯರು ಕೂಡ ಚಪ್ಪಾಳೆ ತಟ್ಟಿ ವಾಯುಸೇನೆಯನ್ನು ಸ್ವಾಗತಿಸಿದ್ದು, ಆಸ್ಪತ್ರೆ ಹೂವಿನಿಂದ ತುಂಬಿದೆ.

    ಈ ವಿಶೇಷ ಗೌರವದಿಂದ ಕೊರೊನಾ ವಾರಿಯರ್ಸ್ ಮಂದಹಾಸ ಬೀರಿದ್ದಾರೆ. ಹೂ ಮಳೆ ಗೌರವ ಮುಗಿದ ಮೇಲೆ ಸಿಬ್ಬಂದಿ ಹಿಪ್ ಹಿಪ್ ಹುರೇ ಎಂದು ಘೋಷಣೆ ಕೂಗಿದ್ದಾರೆ. ಪುಷ್ಪ ಮಳೆಯಿಂದ ಆರೋಗ್ಯ ಸಿಬ್ಬಂದಿ ಖುಷಿಯಾಗಿದ್ದಾರೆ. ಇನ್ನೂ ಕಮಾಂಡ್ ಆಸ್ಪತ್ರೆ ಮೇಲೂ ಸುಮಾರು 8 ನಿಮಿಷಗಳ ಕಾಲ ವಾಯು ಸೇನೆ ಹೂ ಮಳೆ ಸುರಿಸಿದೆ.

    ಇಡೀ ದೇಶವನ್ನು ಫುಲ್ ಟೈಂ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಇಂದು ದೇಶದ ಎಲ್ಲ ಹೆಲ್ತ್ ವಾರಿಯರ್ಸ್ ಗೌರವ ಸಲ್ಲಿಸುತ್ತಿದೆ. ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಯುವ ಮೂಲಕ ವಾಯುಸೇನೆ ಗೌರವ ಸಲ್ಲಿಸುತ್ತಿದೆ. ಇನ್ನೂ ಎಲ್ಲ ನೌಕಾ ನೆಲೆಗಳಲ್ಲಿ ದೀಪ ಹಚ್ಚಿ ಮೌಂಟೇನ್ ಬ್ಯಾಂಡ್ ನುಡಿಸುವ ಮೂಲಕ ಗೌರವ ಸಲ್ಲಿಸಲು ಭಾರತೀಯ ಸೇನೆ ಸಿದ್ಧವಾಗಿದೆ.

  • ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಚಾಮರಾಜನಗರ: ರಾಜ್ಯದ ಅರಣ್ಯ ಪ್ರದೇಶಗಳಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸುವ ಕಾರ್ಯಾಚರಣೆಗೆ ಸಹಕರಿಸಲು ವಾಯುಸೇನೆ ಸಿದ್ಧವಾಗಿದೆ. ಈ ಕುರಿತು ವಾಯುಸೇನೆಯ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಏರ್ ಮಾರ್ಷಲ್ ಟಿ.ಡಿ. ಜೋಸೆಫ್ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಗೆ ಪತ್ರ ಬರೆದಿದ್ದಾರೆ.

    ದುರ್ಗಮ ಅರಣ್ಯ ಸೇರಿದಂತೆ ಕ್ಲಿಷ್ಟಕರ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದರೆ ಅಲ್ಲಿಗೆ ಅರಣ್ಯ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವುದು ಕಷ್ಟವಾಗಲಿದೆ. ಅಂತಹ ಸಂದರ್ಭದಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸಿಕೊಡುವಂತೆ ಹಾಗೂ ಸದಾ ಸನ್ನದ್ಧವಾಗಿ ಇರಿಸುವಂತೆ ಕ್ರಮ ಕೈಗೊಳ್ಳಲು ಮುಖ್ಯಕಾರ್ಯದರ್ಶಿಗಳಿಗೆ ಅರಣ್ಯ ಇಲಾಖೆ ವಿನಂತಿಸಿತ್ತು.

    ಈ ಹಿನ್ನೆಲೆಯಲ್ಲಿ ಬೆಂಕಿ ನಂದಿಸುವುದಕ್ಕೆ ಸಹಕಾರ ಕೋರಿ ಮುಖ್ಯಕಾರ್ಯದರ್ಶಿಗಳು ವಾಯುಸೇನೆಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ವಾಯುಸೇನೆ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸದಾ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

    ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರ ಹೊತ್ತಿ ಉರಿದಿತ್ತು. ನಾಲ್ಕು ಸಾವಿರ ಹೆಕ್ಟೆರ್‍ಕ್ಕೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ದೊಡ್ಡ ಪ್ರಾಣಿಗಳು ಬೆಂಕಿಯಿಂದ ಬಚಾವಾದರೂ ಅಪರೂಪದ ಸರಿಸೃಪಗಳು ಸುಟ್ಟು ಭಸ್ಮವಾಗಿದ್ದವು. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ನಡೆಸಿದ್ದರು. ಕೊನೆಗೆ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಬೆಂಕಿಗೆ ನಂದಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

    ಈ ಹಿನ್ನೆಲೆಯಲ್ಲಿ ಬಂಡೀಪುರದದಲ್ಲಿ ಈ ಬಾರಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಕಸ್ಮಿಕ ಬೆಂಕಿ ಬಿದ್ದರೂ ಹರಡದಂತೆ ಬೆಂಕಿ ರೇಖೆ ನಿರ್ಮಾಣ, ಬೆಂಕಿ ಬೀಳದಂತೆ ರಸ್ತೆಯ ಇಕ್ಕೆಲಗಳಲ್ಲಿ ವಾಟರ್ ಸ್ಪ್ರೇ ಮಾಡಿ ಹಸಿರು ಚಿಗುರುವಂತೆ ಮಾಡುವುದು, ಬೆಂಕಿ ಬಿದ್ದ ತಕ್ಷಣ ಅಧಿಕಾರಿಗಳ ಮೊಬೈಲ್‍ಗಳಿಗೆ ಎಚ್ಚರಿಕಾ ಸಂದೇಶ ರವಾನೆ, ಅರಣ್ಯ ಸಿಬ್ಬಂದಿಯ ನಿರಂತರ ಗಸ್ತು ಹೀಗೆ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.