Tag: ವಾಯುದಾಳಿ

  • ಮಿಲಿಟರಿ ಹೊರಠಾಣೆ ಮೇಲೆ ಟಿಟಿಪಿ ದಾಳಿ – 25 ಪಾಕ್‌ ಸೈನಿಕರು ಸಾವು

    ಮಿಲಿಟರಿ ಹೊರಠಾಣೆ ಮೇಲೆ ಟಿಟಿಪಿ ದಾಳಿ – 25 ಪಾಕ್‌ ಸೈನಿಕರು ಸಾವು

    ಕಾಬೂಲ್/ಇಸ್ಲಾಮಾಬಾದ್: ದಕ್ಷಿಣ ವಜಿರಿಸ್ತಾನದಲ್ಲಿರುವ ಪಾಕಿಸ್ತಾನಿ ಮಿಲಿಟರಿ ಹೊರಠಾಣೆ ಮೇಲೆ ನಡೆದ ಭೀಕರ ದಾಳಿಯಲ್ಲಿ 25 ಪಾಕ್‌ ಸೈನಿಕರು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಹೇಳಿಕೊಂಡಿದೆ.

    ಸೋಮವಾರ ತಡರಾತ್ರಿ ತನ್ನ ಸೇನೆಯು ಮಿಲಿಟರಿ ಹೊರಠಾಣೆ ಮೇಲೆ ಭೀಕರ ದಾಳಿ ನಡೆಸಿದೆ. ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಡ್ರೋನ್‌ಗಳನ್ನು (Pakistani Army Drone) ನಾಶಪಡಿಸಿದ್ದಾಗಿ ಟಿಟಿಪಿ ಉಗ್ರರ ಗುಂಪು ಹೇಳಿಕೊಂಡಿದೆ. ದಾಳಿಯ ನಂತರ ಮಿಲಿಟರಿ ಠಾಣೆಯನ್ನ ಟಿಟಿಪಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

    ಅಫ್ಘಾನಿಸ್ತಾನದ ಗಡಿಯಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಟಿಟಿಪಿ ಆಗಾಗ್ಗೆ ಪಾಕಿಸ್ತಾನಿ ಭದ್ರತಾಪಡೆಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಾ ಬರುತ್ತಿದೆ. ಪಹಲ್ಗಾಮ್‌ ದಾಳಿ ಬಳಿಕ ಒಂದೆಡೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾಗಲೂ ಟಿಟಿಪಿ ಪಾಕ್‌ನ ಸೇನಾ ಠಾಣೆಯ ಮೇಲೆ ದಾಳಿ ನಡೆಸಿ ಹತ್ತಾರು ಮಂದಿ ಸೈನಿಕರನ್ನ ಕೊಂದಿತ್ತು. ಆದ್ರೆ ಇದು ಇತ್ತೀಚಿನ ತಿಂಗಳಲ್ಲಿ ನಡೆಸಿದ ಭೀಕರ ದಾಳಿಯಲ್ಲಿ ಒಂದಾಗಿದೆ ಎಂದು ಹೇಳಲಾಗ್ತಿದೆ. ಪಾಕಿಸ್ತಾನ ಸೇನೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

  • ಪಾಕ್‌ನಲ್ಲಿರುವ ಆಫ್ಘನ್ನರಿಗೆ ದೇಶ ತೊರೆಯುವಂತೆ ರಕ್ಷಣಾ ಸಚಿವ ಖವಾಜಾ ವಾರ್ನಿಂಗ್‌

    ಪಾಕ್‌ನಲ್ಲಿರುವ ಆಫ್ಘನ್ನರಿಗೆ ದೇಶ ತೊರೆಯುವಂತೆ ರಕ್ಷಣಾ ಸಚಿವ ಖವಾಜಾ ವಾರ್ನಿಂಗ್‌

    – ಭಾರತದ ನೆರವಿನಿಂದ ನಮ್ಮ ವಿರುದ್ಧವೇ ತಾಲಿಬಾನ್‌ ಪಿತೂರಿ ಮಾಡ್ತಿದೆ ಎಂದು ಆರೋಪ

    ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷ ಮತ್ತೆ ಮುಂದುವರಿದಿದೆ. ಕದನ ವಿರಾಮ ಉಲ್ಲಂಘಿಸಿ ಪಾಕ್‌ ವಾಯುದಾಳಿ (Pakistan AirStrike) ನಡೆಸಿದ ಬಳಿಕ ಅಫ್ಘಾನಿಸ್ತಾನ ಪ್ರತಿದಾಳಿಗೆ ಮುಂದಾಗಿದೆ. ತಡರಾತ್ರಿ ಪಾಕ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಘಾನ್‌ನ 10 ಮಂದಿ ಮೃತಪಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ಪಾಕ್‌ನಲ್ಲಿರುವ ಆಫ್ಘನ್ನರು ದೇಶ ತೊರೆಯುವಂತೆ ಎಚ್ಚರಿಕೆ ನೀಡಿದ್ದಾರೆ.

    ಅಫ್ಘಾನಿಸ್ತಾನ (Afghanistan) ಸರ್ಕಾರ ನೆರೆಹೊರೆಯವರೊಂದಿಗೆ ಇದ್ದ ಹಳೆಯ ಸಂಬಂಧಗಳನ್ನ ಕಳೆದುಕೊಂಡಿದೆ. ಇಲ್ಲಿನ ದೇಶದ ಸಂಪನ್ಮೂಲಗಳು 2.50 ಕೋಟಿ ಪಾಕಿಸ್ತಾನಿಯರಿಗೆ ಸೇರಿದ್ದೇ ಹೊರತು, ಆಫ್ಘನ್ನರಿಗೆ ಅಲ್ಲ. ಹಾಗಾಗಿ ಕೂಡಲೇ ಆಫ್ಘನ್ನರು ಪಾಕ್‌ ತೊರೆದು ತಾಯ್ನಾಡಿಗೆ ಮರಳಬೇಕು. ಈಗ ಅಲ್ಲಿ ತಮ್ಮದೇ ಸರ್ಕಾರವನ್ನ ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಉಲ್ಲಂಘಿಸಿ ಪಾಕ್ ಏರ್‌ಸ್ಟ್ರೈಕ್‌ – ಮೂವರು ಅಫ್ಘಾನ್‌ ಕ್ರಿಕೆಟಿಗರು ಸಾವು; ರಶೀದ್‌ ಖಾನ್‌ ಖಂಡನೆ

    ಪಾಕಿಸ್ತಾನ ಹಲವು ವರ್ಷಗಳಿಂದ ತಾಳ್ಮೆ ವಹಿಸುತ್ತಲೇ ಬಂದಿದೆ. ಗಡಿಯಾಚೆಗಿನ ಭಯೋತ್ಪಾದನಾ ಘಟನೆಗಳ ಕುರಿತು 836 ಪ್ರತಿಭಟನಾ ಟಿಪ್ಪಣಿಗಳನ್ನ ಕಳಿಸಿದೆ. ಆದ್ರೆ ಅಫ್ಘಾನ್‌ನಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಇನ್ಮುಂದೆ ನಮ್ಮ ಮನವಿಗಳು ಶಾಂತಿಯುತವಾಗಿರಲ್ಲ. ಪಾಕಿಸ್ತಾನದ ಯಾವುದೇ ನಿಯೋಗಗಳೂ ಕಾಬೂಲ್‌ಗೆ ಹೋಗಲ್ಲ. ಭಯೋತ್ಪಾದನೆಯ ಮೂಲ ಎಲ್ಲಿದ್ದರೂ, ಅದು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಉಗ್ರಕೃತ್ಯಗಳಿಗೆ ಬೆಂಬಲ ನೀಡುವ ಪಾಕ್‌ ಹೇಳಿಕೊಂಡಿದೆ.

    ಭಾರತದ ಪ್ರಾಕ್ಸಿ ತಾಲಿಬಾನ್‌
    ತಾಲಿಬಾನ್ ಸರ್ಕಾರವು ʻಭಾರತದ ಪ್ರಾಕ್ಸಿʼಯಾಗಿ ಕೆಲಸ ಮಾಡುತ್ತಿದೆ. ಭಾರತದ ನೆರವಿನಲ್ಲಿ ಪಾಕಿಸ್ತಾನದ ವಿರುದ್ಧ ಕಾಬೂಲ್‌ ಆಡಳಿತಾಧಿಕಾರಿಗಳು ಪಿತೂರಿ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ನಮ್ಮ ರಕ್ಷಣೆಯಲ್ಲಿದ್ದರು, ನಮ್ಮ ನೆಲದಲ್ಲಿ ಅಡಗಿಕೊಂಡಿದ್ದರು ಈಗ ಭಾರತದ ನೆರವಿನಲ್ಲಿ ನಮ್ಮ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ

    ಅಫ್ಘಾನ್ ಯುವ ಕ್ರಿಕೆಟಿಗರ ದುರ್ಮರಣ
    ಕ್ರಿಕೆಟ್ ಟೂರ್ನಿಗಾಗಿ ಈ ಪ್ರದೇಶಕ್ಕೆ ಬಂದಿದ್ದ ಮೂವರು ಯುವ ಕ್ರಿಕೆಟ್ ಆಟಗಾರರು ಸಾವನ್ನಪ್ಪಿದ್ದಾರೆ. ಕಬೀರ್, ಸಿಬ್ಘತ್ ಉಲ್ಲಾ ಮತ್ತು ಹರೂನ್ ಸಾವನ್ನಪ್ಪಿದವರು ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಅಫ್ಘಾನ್ ಕ್ರಿಕೇಟ್ ಮಂಡಳಿ, ಈ ದಾಳಿಯನ್ನು ಪಾಕಿಸ್ತಾನ ಆಡಳಿತದ ಹೇಡಿತನದ ಕೃತ್ಯ ಎಂದು ಬಣ್ಣಿಸಿದೆ.

    ತ್ರಿಕೋನ ಟಿ20 ಸರಣಿಯಿಂದ ಹಿಂದೆ ಅಫ್ಘಾನ್
    ಘಟನೆ ಬೆನ್ನಲ್ಲೇ ಮುಂದಿನ ತಿಂಗಳು ನಡೆಯಲಿರುವ ಪಾಕಿಸ್ತಾನ ಒಳಗೊಂಡ ತ್ರಿಕೋನ ಟಿ20 ಸರಣಿಯಿಂದ ಹಿಂದೆ ಸರಿಯುತ್ತಿರುವುದಾಗಿಯೂ ಅಫ್ಘಾನ್ ಕ್ರಿಕೆಟ್ ಮಂಡಳಿ ಹೇಳಿದೆ. ನವೆಂಬರ್ 5 ರಿಂದ 29ರ ವರೆಗೆ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿದ್ದ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಬೇಕಾಗಿತ್ತು.

  • ತನ್ನ ದೇಶದಲ್ಲೇ ಪಾಕ್‌ ಏರ್‌ಸ್ಟ್ರೈಕ್‌ಗೆ 30 ಮಂದಿ ಬಲಿ – UNHRC ಸಭೆಯಲ್ಲಿ ಭಾರತ ತೀವ್ರ ಖಂಡನೆ

    ತನ್ನ ದೇಶದಲ್ಲೇ ಪಾಕ್‌ ಏರ್‌ಸ್ಟ್ರೈಕ್‌ಗೆ 30 ಮಂದಿ ಬಲಿ – UNHRC ಸಭೆಯಲ್ಲಿ ಭಾರತ ತೀವ್ರ ಖಂಡನೆ

    ಲಂಡನ್‌: ಇತ್ತೀಚೆಗೆ ಪಾಕಿಸ್ತಾನ (Pakistan) ತನ್ನ ದೇಶದ ಮೇಲೆಯೇ ನಡೆಸಿದ ವಾಯುದಾಳಿಯಲ್ಲಿ 30 ಮಂದಿ ನಾಗರಿಕರು ಬಲಿಯಾಗಿರುವ ಘಟನೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಸಭೆಯಲ್ಲಿ ಭಾರತ ತೀವ್ರವಾಗಿ ಖಂಡಿಸಿದೆ.

    ತನ್ನ ದೇಶದಲ್ಲೇ ವೈಮಾನಿಕ ದಾಳಿ ನಡೆಸಿದ ಪಾಕ್‌ ನಡೆಗೆ ಭಾರತ ಪ್ರತಿಕ್ರಿಯಿಸಿದೆ. ಜಾಗತಿಕವಾಗಿ ಅಸ್ಥಿರತೆ ಉಂಟುಮಾಡಲು ಭಯೋತ್ಪಾದನೆ ರಫ್ತು ಮಾಡುತ್ತದೆ. ಈಗ ನೋಡಿದ್ರೆ ತನ್ನ ಸ್ವಂತ ನಾಗರಿಕರ ಮೇಲೆಯೇ ಬಾಂಬ್‌ ದಾಳಿ ಮಾಡಿದೆ. ಭಯೋತ್ಪಾದನೆಯ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಗಳನ್ನ ದುರುಪಯೋಗಪಡಿಸಿಕೊಂಡಿದೆ. ಎಂದು UNHRCಯಲ್ಲಿನ ಭಾರತೀಯ ಪ್ರತಿನಿಧಿ ಕ್ಷಿತಿಜ್ ತ್ಯಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಒಳಗಡೆಯೇ ಏರ್‌ಸ್ಟ್ರೈಕ್‌ – 7 ಬಾಂಬ್‌ಗೆ 30 ಮಂದಿ ಬಲಿ

    30 killed as pakistan air force drops bombs during strikes in khyber pakhtunkhwa

    ಕಾರ್ಯಸೂಚಿ ಐಟಂ-4ರ ವೇಳೆ ಮಾತನಾಡುವಾಗ, ಸೋಮವಾರ ಬೆಳಗ್ಗಿನ ಜಾವ ಜೆಎಫ್ -17 ಪಾಕಿಸ್ತಾನಿ ಯುದ್ಧ ವಿಮಾನಗಳು ತನ್ನ ಮಾಟ್ರೆ ದಾರಾ ಗ್ರಾಮದ ಮೇಲೆ 8 SL-6 ಬಾಂಬ್‌ಗಳ ಮೂಲಕ ವಾಯುದಾಳಿ ನಡೆಸಿದೆ. ಆ ದಾಳಿಯಲ್ಲಿ ಮಹಿಳೆಯರು ಮಕ್ಕಳು ಸೇರಿ 30 ಮಂದಿ ಬಲಿಯಾಗಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದರು.

    ನಮ್ಮ ಪ್ರದೇಶವನ್ನು ಅಪೇಕ್ಷಿಸುವ ಬದಲು, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಖಾಲಿ ಮಾಡಬೇಕು ಎಂದರಲ್ಲದೇ ಭಯೋತ್ಪಾದನೆ ರಫ್ತು ಮಾಡುವುದರಿಂದ, ತಮ್ಮದೇ ಜನರ ಮೇಲೆ ಬಾಂಬ್ ದಾಳಿ ಮಾಡುವುದರಿಂದ, ವಿಶ್ವಸಂಸ್ಥೆ ಗುರುತಿಸಿದ ಉಗ್ರರಿಗೆ ಆಶ್ರಯ ನೀಡುವುದರಿಂದ ಸಮಯ ಸಿಕ್ಕರೆ ಜೀವ ಬೆಂಬಲದ ಮೇಲೆ ಆರ್ಥಿಕತೆ ಸುಧಾರಿಸುವತ್ತ ಗಮನಹರಿಸಬೇಕು. ಆದ್ರೆ ಪಾಕಿಸ್ತಾನಕ್ಕೆ ಸಮಯ ಸಿಕ್ಕರೆ ತನ್ನದೇ ದೇಶದ ನಾಗರಿಕೆ ಮೇಲೆ ದಾಳಿ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ತಾಳಿ ನಡೆಸಿದರು. ಇದನ್ನೂ ಓದಿ: ತೈವಾನ್‌ನಲ್ಲಿ ʻರಗಾಸಾʼ ಚಂಡಮಾರುತಕ್ಕೆ 14 ಬಲಿ, 124 ಮಂದಿ ಮಿಸ್ಸಿಂಗ್‌

    ಮುಂದುವರಿದು.. ಪುಲ್ವಾಮಾ, ಉರಿ, ಪಠಾಣ್‌ಕೋಟ್ ಮತ್ತು ಮುಂಬೈ ಸೇರಿದಂತೆ ಹಿಂದಿನ ದಾಳಿಗಳು ಹಾಗೂ ಪಹಲ್ಗಾಮ್‌ ದಾಳಿಯನ್ನು ಉಲ್ಲೇಖಿಸಿ ಪಾಕ್‌ ವಿರುದ್ಧ ಕಿಡಿ ಕಾರಿದರು.

  • ಇರಾನ್‌ನ ನ್ಯೂಕ್ಲಿಯರ್‌, ಮಿಲಿಟರಿ ಕೇಂದ್ರಗಳ ಮೇಲೆ ಇಸ್ರೇಲ್‌ ವಾಯುದಾಳಿ – ಪ್ಯಾರಾಮಿಲಿಟರಿ ಮುಖ್ಯಸ್ಥ, ಇಬ್ಬರು ವಿಜ್ಞಾನಿಗಳ ಹತ್ಯೆ

    ಇರಾನ್‌ನ ನ್ಯೂಕ್ಲಿಯರ್‌, ಮಿಲಿಟರಿ ಕೇಂದ್ರಗಳ ಮೇಲೆ ಇಸ್ರೇಲ್‌ ವಾಯುದಾಳಿ – ಪ್ಯಾರಾಮಿಲಿಟರಿ ಮುಖ್ಯಸ್ಥ, ಇಬ್ಬರು ವಿಜ್ಞಾನಿಗಳ ಹತ್ಯೆ

    ಟೆಹ್ರಾನ್: ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಕೇಂದ್ರ (Nuclear Plant) ಹಾಗೂ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್‌ನ ಡಜನ್‌ಗಟ್ಟಲೆ ಜೆಟ್‌ಗಳು ಭೀಕರ ದಾಳಿ ನಡೆಸಿವೆ. ಈ ದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹೊಸೈನ್ ಸಲಾಮಿ (Hossein Salami) ಹತ್ಯೆಗೀಡಾಗಿದ್ದಾರೆ. ಇದರಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.

    ಆಪರೇಷನ್‌ ರೈಸಿಂಗ್‌ ಲಯನ್‌ (Rising Lion) ಕಾರ್ಯಾಚರಣೆಯಲ್ಲಿ ಇರಾನ್‌ನ ಅಣ್ವಸ್ತ್ರ ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ (Israeli AirStrike) ನಡೆಸಿದ್ದು, ಟೆಹ್ರಾನ್‌ ಮೇಲಿನ ದಾಳಿಯನ್ನು ಇರಾನ್ ಖಚಿತಪಡಿಸಿದೆ. ದಾಳಿಯಲ್ಲಿ ಇರಾನ್‌ನ ಕ್ಷಿಪಣಿ ಕಾರ್ಖಾನೆಗಳು, ಯುರೇನಿಯಂ ಸಂಗ್ರಹಣಾ ಕೇಂದ್ರಕ್ಕೂ ಹಾನಿಯಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಏನಿದು Unlucky Day – 13ನೇ ತಾರೀಖು, ಶುಕ್ರವಾರ ಒಟ್ಟಿಗೆ ಬಂದರೆ ಏನಾಗುತ್ತೆ?

    ಇತ್ತ ಇಸ್ರೇಲ್‌ ಕೂಡ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುವುದನ್ನು ತಡೆಲು ಶುಕ್ರವಾರ ಇರಾನಿನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಇರಾನ್‌ 15 ಪರಮಾಣು ಬಾಂಬ್‌ಗಳನ್ನು ತಯಾರಿಸಲು ಸಾಕಷ್ಟು ಸಾಮಗ್ರಿಗಳನ್ನ ಸಂಗ್ರಹ ಮಾಡಿಕೊಂಡಿತ್ತು. ಇದನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸೇಡಿಗಾಗಿ ಠಾಗೂರ್ ಮನೆ ಮೇಲೆ ದಾಳಿ – 50ಕ್ಕೂ ಹೆಚ್ಚು ಜನರ ಮೇಲೆ ಕೇಸ್ 

    ಪ್ಯಾರಾಮಿಲಿಟರಿ ಮುಖ್ಯಸ್ಥ, ಪರಮಾಣು ವಿಜ್ಞಾನಿಗಳು ಸಾವು
    ಇನ್ನೂ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಇರಾನಿನ ಅರೆಸೇನಾ ಕ್ರಾಂತಿಕಾರಿ ಗಾರ್ಡ್ ಕಮಾಂಡರ್ ಹೊಸೇನ್ ಸಲಾಮಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳೂ ಹತರಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ

    ಭಾರತೀಯರಿಗೆ ಎಚ್ಚರಿಕೆ…
    ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಹಾಗೂ ಇರಾಕ್‌ನಲ್ಲಿ ಇರುವ ತನ್ನ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆಯನ್ನು ನೀಡಿದೆ. ಇರಾನ್ ಹಾಗೂ ಇರಾಕ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಈ ಸಂಬಂಧ ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು, ಭಾರತೀಯ ಪ್ರಜೆಗಳು ಜಾಗರೂಕರಾಗಿ ಇರಬೇಕು. ಅನಗತ್ಯವಾಗಿ ಹೊರಗಡೆ ಹೋಗಬಾರದು. ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರುವಂತೆಯೂ ತಿಳಿಸಿದೆ. ಇದನ್ನೂ ಓದಿ: ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

  • India Strikes | ಯುಸ್‌ ನಾಗರಿಕರು ಪಾಕ್‌ ತೊರೆಯುವಂತೆ ಅಮೆರಿಕ ರಾಯಭಾರ ಕಚೇರಿ ಸೂಚನೆ

    India Strikes | ಯುಸ್‌ ನಾಗರಿಕರು ಪಾಕ್‌ ತೊರೆಯುವಂತೆ ಅಮೆರಿಕ ರಾಯಭಾರ ಕಚೇರಿ ಸೂಚನೆ

    ಇಸ್ಲಾಮಾಬಾದ್/ಶ್ರೀನಗರ: ಭಾರತದ 15 ನಗರಗಳನ್ನು ಟಾರ್ಗೆಟ್‌ ಮಾಡಿದ್ದ ಪಾಕಿಸ್ತಾನ ತಕ್ಕ ಶಾಸ್ತಿ ಮಾಡಿಸಿಕೊಂಡಿದೆ. ಭಾರತದ ಕ್ಷಿಪಣಿಗಳ ದಾಳಿಗೆ ಲಾಹೋರ್‌ನ ರೆಡಾರ್‌ ಕೇಂದ್ರವೇ (Lahore Radar Systems) ಧ್ವಂಸವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು (US Embassy) ಪಾಕ್‌ನಲ್ಲಿರುವ ಯುಎಸ್‌ ಪ್ರಜೆಗಳು ಕೂಡಲೇ ದೇಶ ತೊರೆಯುವಂತೆ ಹೇಳಿದೆ.

    ಭಾರತೀಯ ನಗರಗಳನ್ನ (Indian Cities) ಟಾರ್ಗೆಟ್‌ ಮಾಡಿದ್ದ ಪಾಕ್‌ಗೆ ದಿಟ್ಟ ಉತ್ತರ ನೀಡಿದ ಭಾರತೀಯ ವಾಯುಸೇನೆ, ಲಾಹೋರ್‌ನಲ್ಲಿರುವ ರೆಡಾರ್‌ ಕೇಂದ್ರವನ್ನೇ ಧ್ವಂಸ ಮಾಡಿದೆ. ಶೇಖ್‌ಪುರ, ಸಿಯಾಲ್‌ ಕೋಟ್‌, ಗುಜರನ್‌ ವಾಲಾ ಮತ್ತು ನರೊವಾಲಾ ಮತ್ತ ಚಕ್ವಾಲ್‌ ಮೇಲೂ ಭಾರತದ ಕಾಮಕಾಜಿ ಡ್ರೋನ್‌ ದಾಳಿ ನಡೆಸಿದೆ. ಒಟ್ಟು 25 ಕ್ಷಿಪಣಿಗಳನ್ನು ಭಾರತ ಹಾರಿಸಿದೆ ಇದರಲ್ಲಿ 7 ಇಸ್ಲಾಮಾಬಾದ್‌ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿವೆ. ಇದನ್ನೂ ಓದಿ: ಪಾಕಿಸ್ತಾನದ HQ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಕೇಂದ್ರಗಳೇ ಉಡೀಸ್‌

    ಲಾಹೋರ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತ ಅಮೆರಿಕ ರಾಯಭಾರ ಕಚೇರಿ ತನ್ನೆಲ್ಲಾ ಸಿಬ್ಬಂದಿಗೆ ಆಶ್ರಯ ನೀಡುವಂತೆ ಕೇಳಿದೆ. ಅಲ್ಲದೇ ಸಂಘರ್ಷ ಪೀಡಿತ ಪ್ರದೇಶಗಳಲ್ಲಿರುವ ಅಮೆರಿಕದ ನಾಗರಿಕರು ಕೂಡಲೇ ದೇಶ ತೊರೆಯುವಂತೆ ಸೂಚನೆ ನೀಡಿದೆ. ಎಲ್ಲ ಯುಎಸ್‌ ನಾಗರಿಕರು ಸಾಧ್ಯವಾದ್ರೆ ಈ ಕೂಡಲೇ ಹೊರಡಿ ಅಥವಾ ಪಾಕ್‌ನ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದುಕೊಳ್ಳಿ ಎಂದು ಎಚ್ಚರಿಸಿದೆ. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼದಲ್ಲಿ 100 ಉಗ್ರರ ಹತ್ಯೆ – ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರದಿಂದ ಮಾಹಿತಿ

  • ಇಸ್ರೇಲ್‌ ಮೇಲೆ 150 ರಾಕೆಟ್‌ಗಳ ಸುರಿಮಳೆ – ಹಿಜ್ಬುಲ್ಲಾ ಭೀಕರ ದಾಳಿಗೆ ಹಲವೆಡೆ ಹಾನಿ!

    ಇಸ್ರೇಲ್‌ ಮೇಲೆ 150 ರಾಕೆಟ್‌ಗಳ ಸುರಿಮಳೆ – ಹಿಜ್ಬುಲ್ಲಾ ಭೀಕರ ದಾಳಿಗೆ ಹಲವೆಡೆ ಹಾನಿ!

    ಬೈರೂತ್‌: ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಇಸ್ರೇಲ್‌-ಹಿಜ್ಬುಲ್ಲಾ (Israel vs Hezbollah) ನಡುವೆ ಮತ್ತೆ ಯುದ್ಧದ ಕಿಡಿ ಹೊತ್ತಿಕೊಂಡಿದೆ. ಸೋಮವಾರ (ಇಂದು) ಹಿಜ್ಬುಲ್ಲಾ ಭಯೋತ್ಪಾದಕ ಗುಂಪು ಇಸ್ರೇಲ್‌ ಮೇಲೆ ಭೀಕರ ವಾಯು ದಾಳಿ ನಡೆಸಿದೆ. ಇಸ್ರೇಲ್‌ನ ಹೈಫಾ ನಗರವನ್ನ (Haifa City) ಗುರಿಯಾಗಿಸಿಕೊಂಡು 150 ರಾಕೆಟ್‌ಗಳಿಂದ ದಾಳಿ ನಡೆಸಿದೆ.

    ಹಿಜ್ಬುಲ್ಲಾ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ಅನೇಕ ನಾಗರಿಕರು ಗಾಯಗೊಂಡಿದ್ದಾರೆ. ಒಂದು ಮಗು ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಹಲವು ವಾಹನಗಳು, ಕಟ್ಟಡಗಳು ಹಾನಿಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಇದು ಇಸ್ರೇಲ್‌ ಮೇಲೆ ನಡೆದ ಅತಿದೊಡ್ಡ ರಾಕೆಟ್‌ ದಾಳಿಗಳಲ್ಲಿ ಒಂದೆಂದು ಹೇಳಲಾಗಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸಬೇಡಿ: ಪುಟಿನ್‌ಗೆ ಕರೆ ಮಾಡಿ ಮಾತಾಡಿದ ಟ್ರಂಪ್‌

    ಇಸ್ರೇಲ್‌ನ ರಕ್ಷಣಾ ವ್ಯವಸ್ಥೆ ʻಐರನ್ ಡೋಮ್ʼ ನಿಂದ ಹೆಜ್ಬೊಲ್ಲಾ ರಾಕೆಟ್‌ಗಳ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದ್ದು, ಹೆಚ್ಚಿನ ಹಾನಿ ಆಗುವುದನ್ನು ತಪ್ಪಿಸಲಾಗಿದೆ. ಆದ್ರೆ ಹೈಫಾ ನಗರದಲ್ಲಿನ ಜನನಿಬಿಡ ಪ್ರದೇಶಗಳಲ್ಲಿ ಹಾನಿಯುಂಟುಮಾಡಿವೆ.

    ಇರಾನ್ (Iran) ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ (Israel) ಪ್ರತೀಕಾರವಾಗಿ ಕಳೆದ ಅಕ್ಟೋಬರ್‌ 25ರಂದು 100ಕ್ಕೂ ಹೆಚ್ಚು ಯುದ್ಧ ವಿಮಾನಗಳ (Air Strike) ಮೂಲಕ ಇರಾನ್‌ನ 20ಕ್ಕೂ ಹೆಚ್ಚು ಮಿಲಿಟರಿ ಸ್ಥಳಗಳಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್‌ ನಡೆಸಿತ್ತು. ಆ ಬಳಿಕ ಪಾಶ್ಚಿಮಾತ್ಯ ದೇಶಗಳ ನಡುವೆ ಹೇಳಿಕೊಳ್ಳುವಂತಹ ದೊಡ್ಡಮಟ್ಟದಲ್ಲಿ ದಾಳಿಗಳು ನಡೆದಿರಲಿಲ್ಲ. ಇದೀಗ ಪೇಜರ್‌ ಸ್ಫೋಟದ ಹಿಂದೆ ಇಸ್ರೇಲ್‌ ಇರುವುದಾಗಿ‌ ಪ್ರಧಾನಿ ಒಪ್ಪಿಕೊಂಡ ಮರುದಿನ ದಾಳಿ ನಡೆಸಿದೆ.

    ಕಳೆದ ಒಂದು ದಿನದ ಹಿಂದೆಯಷ್ಟೇ ನಡೆದ ಪೇಜರ್‌ ಮತ್ತು ವಾಕಿಟಾಕಿ ಸ್ಫೋಟದ ಹಿಂದೆ ಟೆಲ್‌ ಅವೀವ್‌ (ಇಸ್ರೇಲ್‌ ರಾಜಧಾನಿ) ಇದೆ ಎಂದು ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದರು. ಇದರ ಬೆನ್ನಲ್ಲೇ ಹಿಜ್ಬುಲ್ಲಾ ಭಯೋತ್ಪಾದಕ ಗುಂಪು ದಾಳಿ ನಡೆಸಿದೆ. ಇದನ್ನೂ ಓದಿ: ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಬಂಧನ

    ಕಳೆದ ಸೆಪ್ಟೆಂಬರ್‌ನಲ್ಲಿ ಲೆಬನಾನ್‌ನಾದ್ಯಂತ ಸುಮಾರು ಸಾವಿರಾರು ಪೇಜರ್‌ಗಳು ಸ್ಫೋಟಗೊಂಡಿದ್ದವು, ಇದರ ಮರುದಿನ ವಾಕಿಟಾಕಿಗಳೂ ಸ್ಫೋಟಗೊಂಡಿದ್ದವು. ಈ ಘಟನೆಯನ್ನು ಸುಮಾರು 39 ಮಂದಿ ಮೃತಪಟ್ಟು 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

  • ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

    ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

    ಇಸ್ರೇಲ್‌ ಮೇಲಿನ ದಾಳಿಗೆ ಒಂದು ವರ್ಷ ಪೂರೈಸಿದೆ. ಗಾಜಾಪಟ್ಟಿಯಲ್ಲಿದ್ದ ಹಮಾಸ್‌ ಬಂಡುಕೋರರ ಗುಂಪು 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ನಡೆಸಿದ ಅಪ್ರಚೋದಿತ ದಾಳಿ ಇಂದು ಲಕ್ಷಾಂತರ ಜನರ ನೆಮ್ಮದಿ ಕಸಿದಿದೆ. ಸಾವಿರಾರು ಜನರ ಜೀವ ತೆಗೆದಿದೆ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್‌, ಹಮಾಸ್‌ ಹಾಗೂ ಹಿಜ್ಬುಲ್ಲಾ ನಡುವಿನ ಭೀಕರ ಯುದ್ಧದಲ್ಲಿ ಸುಮಾರು 50 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ.

    ಆ ದಿನ ಕೇವಲ 20 ನಿಮಿಷದ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ಪುಂಖಾನುಪುಂಖವಾಗಿ 5 ಸಾವಿರ ರಾಕೆಟ್‌ಗಳನ್ನು ಹಾರಿಸಿದ್ದರು. ಇಸ್ರೇಲ್‌ನ ಬಲಾಢ್ಯ ಕ್ಷಿಪಣಿ ವಿರೋಧಿ ವ್ಯವಸ್ಥೆ ಐರನ್‌ ಡೋಮ್‌ ಇಷ್ಟು ಅಗಾಧ ಪ್ರಮಾಣದ ರಾಕೆಟ್‌ ಮಳೆಗೆ ನಿಷ್ಪರಿಣಾಮಕಾರಿ ಎನ್ನಿಸಿಕೊಂಡಿತು. ಅಲ್ಲದೇ, ಹಮಾಸ್‌ 1,000ಕ್ಕೂ ಅಧಿಕ ಉಗ್ರರೊಂದಿಗೆ ದಕ್ಷಿಣ ಇಸ್ರೇಲ್‌ನ ಅನೇಕ ಪ್ರದೇಶಗಳಲ್ಲಿ ಭೂದಾಳಿ ನಡೆಸಿತು. ಬುಲ್ಡೋಜರ್‌ನಿಂದ ಇಸ್ರೇಲ್‌ನ ಗಡಿಯನ್ನು ಛಿದ್ರಗೊಳಿಸಿತು. ಇನ್ನೂ ಹಲವು ಉಗ್ರರು ಸಮುದ್ರ ಮಾರ್ಗದಲ್ಲಿ ಸ್ಪೀಡ್‌ ಬೋಟ್‌ಗಳ ಮೂಲಕ ಇಸ್ರೇಲನ್ನು ನುಸುಳಿದರು ಕೆಲವರು ಪ್ಯಾರಾಗ್ಲೈಡಿಂಗ್‌ ಮೂಲಕ ಇಸ್ರೇಲೊಳಗಿಳಿದು ರಂಪಾಟ ಎಬ್ಬಿಸಿದರು. ಈ ಏಕಕಾಲದ ಆಕ್ರಮಣ ನಿಲ್ಲಿಸಲು ಇಸ್ರೇಲ್‌ಗೆ ಆ ಕ್ಷಣಕ್ಕೆ ಸಾಧ್ಯವಾಗಲೇ ಇಲ್ಲ.

    ಪರಿಣಾಮ, ಇಸ್ರೇಲ್‌ ತನ್ನ 1200 ಪ್ರಜೆಗಳನ್ನು ಕಳೆದುಕೊಂಡಿತು. ಹಮಾಸ್‌ನ ಜೀಪುಗಳಲ್ಲಿ ಕೈಕಾಲು ಕಟ್ಟಿ ಕರೆದೊಯ್ದ 250 ಇಸ್ರೇಲಿಗರನ್ನು ಬಿಡಿಸಿಕೊಳ್ಳಲು ಇಸ್ರೇಲ್‌ ಅಂದು ಶುರುಮಾಡಿದ ಯುದ್ಧ ಇಂದಿಗೂ ಮುಗಿದಿಲ್ಲ. ಸದ್ಯಕ್ಕೆ ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಹಮಾಸ್‌ ಒಬ್ಬರಲ್ಲ ಅದರ ಹಿಂದೆ ಪ್ಯಾಲೆಸ್ತೀನ್‌, ಹಿಜ್ಬುಲ್ಲಾ, ಲೆಬನಾನ್‌, ಇರಾಕ್‌ ಹಾಗೂ ಸಿರಿಯಾದ ಉಗ್ರ ಸಂಘಟನೆಗಳು, ಹೌತಿ ಬಂಡುಕೋರರು… ಇಸ್ರೇಲನ್ನು ಕಟ್ಟಿಹಾಕಲು ಶತ್ರುಗಳೆಲ್ಲ ಒಗ್ಗೂಡುತ್ತಲೇ ಇದ್ದಾರೆ. ಇರಾನ್‌ನ ಸುಪ್ರೀಂ ಲೀಡರ್‌ ಕೂಡ ಇಸ್ರೇಲ್‌ ಸೋಲಿಸಲು ಇತ್ತೀಚೆಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಈಗ ಇಸ್ರೇಲ್‌ ದಿನದಿಂದ ದಿನಕ್ಕೆ ತನ್ನ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸುತ್ತಲೇ ಇದೆ. ಭಾನುವಾರ (ಅ.6) ಕೂಡ ಕೇವಲ ಒಂದು ಗಂಟೆ ಅವಧಿಯಲ್ಲಿ 120 ಹಿಜ್ಬುಲ್ಲಾ ಉಗ್ರ ನೆಲೆಗಳನ್ನು ಧ್ವಂಸಮಾಡಿದೆ.

    ಇರಾನ್‌ ಯುದ್ಧಕ್ಕೆ ಎಂಟ್ರಿಯಾಗಿದ್ದು ಹೇಗೆ?

    ಹಿಜ್ಬುಲ್ಲಾ ಸೇನೆಯ ಮುಖ್ಯಸ್ಥ ಹಸನ್‌ ನಸ್ರಲ್ಲಾನನ್ನೂ ಇಸ್ರೇಲ್‌ ಹತ್ಯೆಗೈದಾಗ ಪರೋಕ್ಷವಾಗಿ ಇವರನ್ನೆಲ್ಲ ಬೆಂಬಲಿಸುತ್ತಿದ್ದ ಇರಾನ್‌ ನೇರವಾಗಿ ಇಸ್ರೇಲ್‌ ವಿರುದ್ಧ ತೊಡೆ ತಟ್ಟಿತ್ತು. ಏಕಾಏಕಿ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿ, ಇಸ್ರೇಲನ್ನು ಗಾಬರಿಗೊಳಿಸಲೂ ಇರಾನ್‌ ಯತ್ನಿಸಿದ್ದು ಸ್ವತಃ ಇಸ್ರೇಲನ್ನು ಮತ್ತಷ್ಟು ಕೆರಳಿಸಿದೆ. ಆದ್ರೆ ಇಸ್ರೇಲ್‌ ಕ್ಷಿಪಣಿ ಹಾರಿಸುವುದಕ್ಕೆ 2 ಗಂಟೆ ಮುಂಚಿತವಾಗಿಯೇ ಅಮೆರಿಕ ದಾಳಿಯ ಸುಳಿವು ಕೊಟ್ಟಿತ್ತು ಎಂಬುದು ಗಮನಾರ್ಹ. ಹಾಗಾಗಿ ಈ ಯುದ್ಧದ ಬೆಂಕಿಗೆ ತುಪ್ಪ ಸವರುವಂತೆ ಅತ್ತ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ʻಇರಾನ್‌ನ ಅಣ್ವಸ್ತ್ರ ಕೇಂದ್ರದ ದಾಳಿ ಮಾಡಿ,ʼ ಎಂಬ ಸಲಹೆಯನ್ನು ಇಸ್ರೇಲ್‌ಗೆ ಕೊಟ್ಟಿರುವುದು ಯುದ್ಧದ ತೀವ್ರತೆಯನ್ನು ತೆರೆದಿಟ್ಟಿದೆ.

    ಸ್ನೇಹಿತರಾಗಿದ್ದವರೀಗ ಬದ್ಧ ವೈರಿಗಳು

    ಹೌದು. 1948ರ ಮೇ 14. ಪ್ಯಾಲೆಸ್ತೀನ್‌ನಿಂದ ಇಸ್ರೇಲ್‌ ಬೇರ್ಪಟ್ಟು ಹೊಸ ಯಹೂದಿ ದೇಶ ಉದಯವಾಯಿತು. ಆ ಸಮಯದಲ್ಲಿ ಇಸ್ರೇಲ್‌ ಎಂಬ ಶಿಶುವಿನ ಜತೆಗೆ ನಿಂತ ಏಕೈಕ ಇಸ್ಲಾಮಿಕ್‌ ರಾಷ್ಟ್ರ ಇರಾನ್‌. 1948ರಲ್ಲಿ ಅರಬ್‌ ರಾಷ್ಟ್ರಗಳು ಇಸ್ರೇಲ್‌ ವಿರುದ್ಧ ಯುದ್ಧ ಆರಂಭಿಸಿದರೂ, ಆ ಯುದ್ಧದಲ್ಲಿ ಇರಾನ್‌ ಭಾಗವಹಿಸಲಿಲ್ಲ. ಇಸ್ರೇಲ್‌ ಗೆದ್ದ ಬಳಿಕ ಇರಾನ್‌ ಅದರೊಂದಿಗೆ ಸಂಬಂಧ ಬೆಸೆಯಿತು. ಇರಾನ್‌ನಲ್ಲಿ ಮೊಹಮ್ಮದ್‌ ರಜಾ ಶಾ ಪಹ್ಲವಿ ಆಳ್ವಿಕೆಯಲ್ಲಿ ಈ ಎರಡೂ ರಾಷ್ಟ್ರಗಳು ಮಿತ್ರರು. ಆ ವೇಳೆ, ಪಶ್ಚಿಮ ಏಷ್ಯಾದಲ್ಲಿ ಇರಾನ್‌ ಅತಿದೊಡ್ಡ ಯಹೂದಿ ಸಮುದಾಯಕ್ಕೆ ನೆಲೆ ಕಲ್ಪಿಸಿದ್ದ ರಾಷ್ಟ್ರ. ಉಭಯ ದೇಶಗಳ ನಡುವೆ ಆಮದು ಮತ್ತು ರಫ್ತು ವ್ಯವಹಾರ ಜೋರಾಗಿತ್ತು. ಇಸ್ರೇಲ್‌ ತನ್ನಲ್ಲಿನ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಇರಾನ್‌ಗೆ ಕಳುಹಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಇರಾನ್‌ ಶೇ.40ರಷ್ಟು ತೈಲವನ್ನು ಇಸ್ರೇಲ್‌ಗೆ ನೀಡುತ್ತಿತ್ತು. ಇಷ್ಟೇ ಅಲ್ಲ, ಇರಾನ್‌ನ ಗುಪ್ತಚರ ಸಂಸ್ಥೆ SAVAK, ತರಬೇತಿ ಪಡೆದಿದ್ದೇ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ನ ಕೈಯಲ್ಲಿ ಅನ್ನೋದು ವಿಶೇಷ.

    ಆದ್ರೆ 1960ರ ದಶಕದಲ್ಲಿ, ಇರಾನ್‌ನಲ್ಲಿ ಇಸ್ಲಾಮಿಕ್‌ ರಾಷ್ಟ್ರದ ಬೇಡಿಕೆ ತೀವ್ರವಾಯಿತು. ಧಾರ್ಮಿಕ ನಾಯಕ ಅಯಾತೊಲ್ಲಾ ರುಹೊಲ್ಲಾ ಖಮೇನಿ ಇರಾನ್‌ ಅನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೋರಾಟ ತೀವ್ರಗೊಳಿಸಿದ. 1964ರಲ್ಲಿ ಈ ಧ್ವನಿಗೆ ಅಪಾರ ಜನಬೆಂಬಲ ವ್ಯಕ್ತವಾದಾಗ ರಜಾ ಶಾ ಪಹ್ಲವಿಗೆ ಇರಾನನ್ನು ತೊರೆಯುವಂತೆ ಖಮೇನಿ ಆದೇಶಿಸಿದ. ಕಡೆಗೂ 1969ರಲ್ಲಿ ಪಹ್ಲವಿಯನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಇದರೊಂದಿಗೆ ಇರಾನ್‌ನಲ್ಲಿ ಇಸ್ಲಾಮಿಕ್‌ ರಾಜ್ಯ ಸ್ಥಾಪನೆಯಾಯಿತು. ಷರಿಯಾ ಕಾನೂನೂ ಜಾರಿಗೆ ಬಂತು. ಇದರೊಂದಿಗೆ ಇರಾನ್‌ನ ಖಮೇನಿ ಸರ್ಕಾರವು ಯಹೂದಿ ರಾಜ್ಯವಾದ ಇಸ್ರೇಲ್‌ನೊಂದಿಗೆ ಎಲ್ಲನಂಟನ್ನೂ ಕಡಿದುಕೊಂಡಿತು. ಉಭಯ ದೇಶಗಳ ನಡುವಿನ ವಿಮಾನ ಮಾರ್ಗವನ್ನೇ ಸಂಪೂರ್ಣವಾಗಿ ಮುಚ್ಚಲಾಯಿತು.

    ಇಸ್ರೇಲ್‌-ಇರಾನ್‌ ಸೇನಾಬಲ ಮೈ ನಡುಗಿಸುತ್ತೆ

    ಇಸ್ರೇಲ್‌ ಶಕ್ತಿಶಾಲಿ ರಾಷ್ಟ್ರವೇ ಆದರೂ ಇರಾನ್‌ ಸಹ ಸರಿಸಮನಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹಾಗಾಗಿ ಮಿಲಿಟರಿ ಶಕ್ತಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಕಡಿಮೆಯೇನಿಲ್ಲ ಅಂತಲೇ ಹೇಳಬಹುದು. ಇತ್ತೀಚಿನ ಗ್ಲೋಬಲ್‌ ಫೈರ್‌ ವರದಿ ಪ್ರಕಾರ, ವಾಯು ಸೇನೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಇರಾನ್‌ 14ನೇ ಸ್ಥಾನದಲ್ಲಿದ್ದರೆ, ಇಸ್ರೇಲ್‌ 17ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

    ರಕ್ಷಣಾ ಬಲ ಹೇಗಿದೆ ನೋಡಿ?

    ಇರಾನ್‌ 1996 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1397 ಪ್ರಸ್ತುತ ಯುದ್ಧಕ್ಕೆ ಸಿದ್ಧವಾಗಿವೆ. ಇಸ್ರೇಲ್ 1,370 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1,096 ಯುದ್ಧಕ್ಕೆ ಸಿದ್ಧವಾಗಿವೆ. ಇರಾನ್ 65,765 ಮಿಲಿಟರಿ ವಾಹನಗಳನ್ನು ಹೊಂದಿದ್ದು, ಅದರಲ್ಲಿ 46 ಸಾವಿರಕ್ಕೂ ಹೆಚ್ಚು ಸಕ್ರಿಯವಾಗಿವೆ. ಇನ್ನೂ ಇಸ್ರೇಲ್ 43,407 ಮಿಲಿಟರಿ ವಾಹನಗಳನ್ನು ಹೊಂದಿದೆ, ಅದರಲ್ಲಿ 34,736 ಸಕ್ರಿಯವಾಗಿವೆ. ಸ್ವಯಂ ಚಾಲಿತ ಪಿರಂಗಿಗಳ ಬಗ್ಗೆ ನೋಡಿದ್ರೆ, ಇರಾನ್‌ 580 ಫಿರಂಗಿ ಹೊಂದಿದ್ದು, ಅದರಲ್ಲಿ 406 ಸಕ್ರಿಯ ಸೇವೆಯಲ್ಲಿವೆ. ಇಸ್ರೇಲ್ 650 ಸ್ವಯಂ ಚಾಲಿತ ಫಿರಂಗಿಗಳನ್ನು ಹೊಂದಿದ್ದು, ಅದರಲ್ಲಿ 540 ಯುದ್ಧಕ್ಕೆ ಸಿದ್ಧವಾಗಿದೆ. ಸ್ವಯಂಚಾಲಿತವಲ್ಲದ ಫಿರಂಗಿಗಳಲ್ಲಿ ಇರಾನ್ 2050, ಇಸ್ರೇಲ್ ಕೇವಲ 300 ಹೊಂದಿದೆ. ಇಲ್ಲದೇ ಮಲ್ಟಿ ರಾಕೆಟ್‌ ಲಾಂಚರ್‌ಗಳ ಪೈಕಿ ಇರಾನ್‌ ಬಳಿ 775 ಮಲ್ಟಿ ಲಾಂಚರ್‌ ಇದ್ದರೆ, ಇಸ್ರೇಲ್‌ ಬಳಿ ಕೇವಲ 150 ರಾಕೆಟ್‌ ಲಾಂಚರ್‌ಗಳಿವೆ.

    ಸೈನಿಕರ ಬಲದಲ್ಲಿ ಇರಾನ್‌ 11.80 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 3.50 ಲಕ್ಷ ಮೀಸಲು ಸೇನಾ ಪಡೆ, 2.20 ಲಕ್ಷ ಸೈನಿಕರ ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದೆ. ಇಸ್ರೇಲ್‌ 6.70 ಲಕ್ಷ ಸೈನಿಕರ ಬಲ ಹೊಂದಿದೆ. ಈ ಪೈಕಿ ಇಸ್ರೇಲ್ 4.65 ಲಕ್ಷ ಮೀಸಲು ಪಡೆ, 35 ಸಾವಿರ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ಹೊಂದಿದೆ. ಇದಲ್ಲದೇ ಇರಾನ್‌ ಬಳಿ 42 ಸಾವಿರ ಜೆಟ್‌ಮೆನ್‌ಗಳಿದ್ದರೆ, ಇಸ್ರೇಲ್‌ 89 ಸಾವಿರ ಜೆಟ್‌ಮೆನ್‌ ಬಲ ಹೊಂದಿದೆ. ಜೊತೆಗೆ ಇರಾನ್ ಒಟ್ಟು 18,500 ನೌಕಾ ಸಿಬ್ಬಂದಿ ಹೊಂದಿದ್ದರೆ, ಇಸ್ರೇಲ್ 19,500 ನೌಕಾದಳ ಸಿಬ್ಬಂದಿಯನ್ನು ಹೊಂದಿದೆ.

    ವಾಯುಪಡೆಯಲ್ಲಿ ಆನೆ ಬಲ

    ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಇಸ್ರೇಲ್‌ ಇರಾನ್‌ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಇರಾನ್‌ ಬಳಿ 551 ವಿಮಾನಗಳನ್ನು ಹೊಂದಿದ್ದು, ಅದರಲ್ಲಿ 358 ಸಕ್ರಿಯವಾಗಿವೆ. ಆದ್ರೆ ಇಸ್ರೇಲ್ 612 ಮೀಸಲು ಹೊಂದಿದ್ದು, 490 ವಿಮಾನ ಸಕ್ರಿಯವಾಗಿದೆ. ಇರಾನ್ 186 ಯುದ್ಧ ವಿಮಾನ ಹೊಂದಿದ್ದು, ಈ ಪೈಕಿ 121 ಮಂದಿ ಸದಾ ದಾಳಿಗೆ ಸಿದ್ಧರಾಗಿದ್ದಾರೆ. ಇಸ್ರೇಲ್ 241 ಯುದ್ಧವಿಮಾನಗಳನ್ನು ಹೊಂದಿದ್ದು, ಅದರಲ್ಲಿ 193 ದಾಳಿಗೆ ಸಿದ್ಧವಾಗಿವೆ.

    ಇಸ್ರೇಲ್‌ನ ಸೈಬರ್‌ ಅಸ್ತ್ರಗಳೇ ಇರಾನ್‌ಗೆ ಸವಾಲು

    * 2010ರ ಸುಮಾರಿಗೆ ಇರಾನ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದನ್ನು ಗಮನಿಸಿದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌, ಶತ್ರುರಾಷ್ಟ್ರದ ಒಂದೊಂದು ಹೆಜ್ಜೆಯನ್ನು ವಿಫಲಗೊಳಿಸತೊಡಗಿತು. ಮುಖ್ಯವಾಗಿ ಇಸ್ರೇಲ್‌ ನೀಡಿದ ಸೈಬರ್‌ ದಾಳಿಯ ಏಟುಗಳಿಗೆ ಇರಾನ್‌ ಹೈರಾಣಾಯಿತು.
    * 2010, ಜೂನ್‌: ಬುಶೆಹರ್‌ ಪರಮಾಣು ಸ್ಥಾವರ ಕಂಪ್ಯೂಟರ್‌ಗಳು ಸ್ಟಕ್ಸ್ನೆಟ್ ವೈರಸ್‌ನ ದಾಳಿಗೆ ಗುರಿಯಾದವು. ಇದು 14 ಸ್ಥಾವರಗಳ 30 ಸಾವಿರಕ್ಕೂ ಹೆಚ್ಚು ಕಂಪ್ಯೂಟರ್‌ಗಳ ಮೇಲೆ ಪರಿಣಾಮ ಬೀರಿತು. ಇದರ ಹಿಂದೆ ಮೊಸಾದ್‌ ಕೈವಾಡ ಇದೆಯೆನ್ನುವುದು ಇರಾನ್‌ ಆರೋಪ.
    * 2011, ಏಪ್ರಿಲ್‌: ಇರಾನ್‌ನ ಭದ್ರತಾ ಸಂಸ್ಥೆಯ ಮುಖ್ಯಸ್ಥ ಘೋಲಮ್ರೆಜಾ ಜಲಾಲಿ ಪ್ರಕಾರ, ಇಸ್ರೇಲ್‌ ಸೃಷ್ಟಿಸಿದ ‘ಸ್ಟಾರ್ಸ್‌’ ಹೆಸರಿನ ವೈರಸ್‌ ಇರಾನ್‌ನ ಸರ್ಕಾರಿ ದಾಖಲೆಗಳನ್ನೇ ನಕಲು ಮಾಡಿತು.
    * 2012, ಏಪ್ರಿಲ್‌: ವೈಪರ್‌ ಮಾಲ್ವೇರ್‌ ಇರಾನ್‌ನ ಪೆಟ್ರೋಲಿಯಂ ಸಚಿವಾಲಯ ಮತ್ತು ನ್ಯಾಷನಲ್‌ ಇರಾನಿಯನ್‌ ಆಯಿಲ್‌ ಕಂಪನಿಯ ಕಂಪ್ಯೂಟರ್‌ಗಳಲ್ಲಿದ್ದ ಡೇಟಾವನ್ನೆಲ್ಲ ಅಳಿಸಿಹಾಕಿತ್ತು. ಹೀಗೆ ಇನ್ನೂ ಅನೇಕ ಉದಾಹರಣೆಗಳಿವೆ.

    ಕದನ ವಿರಾಮಕ್ಕೂ ಕ್ಯಾರೆ ಎನ್ನದೇ ಯುದ್ಧದಲ್ಲಿ ಮುನ್ನುಗ್ಗುತ್ತಿರುವ ಇಸ್ರೇಲ್‌ ಒಂದು ಕಡೆಯಾದ್ರೆ, ಇಸ್ರೇಲ್‌ ಅನ್ನೂ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಅದರ ಶತ್ರು ರಾಷ್ಟ್ರಗಳು ಮತ್ತೊಂದು ಕಡೆ ಇದೆ. ಇದರ ತಾರ್ಕಿತ ಅಂತ್ಯ ಎಲ್ಲಿಗೆ ಒಯ್ಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  • 120ಕ್ಕೂ ಹೆಚ್ಚು ಉಗ್ರ ತಾಣಗಳು ಧ್ವಂಸ – ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ ಹತ್ಯೆ

    120ಕ್ಕೂ ಹೆಚ್ಚು ಉಗ್ರ ತಾಣಗಳು ಧ್ವಂಸ – ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ ಹತ್ಯೆ

    ಬೈರೂತ್: ಒಂದು ವರ್ಷ ಕಳೆದರೂ ಇಸ್ರೇಲ್‌-ಹಮಾಸ್‌-ಹಿಜ್ಬುಲ್ಲಾ (Israel Hezbollah War) ನಡುವೆ ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್‌ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್‌ ಸುಪ್ರೀಂ ಲೀಡರ್‌ ಇಸ್ರೇಲ್‌ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್‌ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

    ಅದರಂತೆ ಸೋಮವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಲಾಜಿಸ್ಟಿಕ್‌ ಘಟಕದ ಮುಖ್ಯಸ್ಥ ಸುಹೇಲ್‌ ಹುಸೇನ್‌ ಹುಸೇನಿ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ರಕ್ಷಣಾ ಪಡೆ ಮಂಗಳವಾರ (ಇಂದು) ಹೇಳಿಕೊಂಡಿದೆ. ಇದನ್ನೂ ಓದಿ: ಒಂದೇ ಗಂಟೆಯೊಳಗೆ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಇಸ್ರೇಲ್

    ಸೇನಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್‌, ಸೋಮವಾರ ಅಂದ್ರೆ ಅಕ್ಟೋಬರ್‌ 7ರಂದು ಯುದ್ಧದ ವರ್ಷಾಚರಣೆ ವೇಳೆ ಬೈರೂತ್‌ನಲ್ಲಿ ನಡೆಸಿದ ದಾಳಿಯಲ್ಲಿ ಹುಸೇನಿಯನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದೆ. ಆದ್ರೆ ಹಿಜ್ಬುಲ್ಲಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ತಾಂತ್ರಿಕ ದೋಷದಿಂದ ಯಡವಟ್ಟು; ಏಕಕಾಲಕ್ಕೆ ಕ್ವಾಂಟಾಸ್ ಫ್ಲೈಟ್‌ನ ಎಲ್ಲಾ ಟಿವಿ ಸ್ಕ್ರೀನ್‌ನಲ್ಲಿ ಸೆಕ್ಸ್‌ ವೀಡಿಯೋ ಪ್ರಸಾರ!

    ಸೋಮವಾರ (ಅ.7) ಇಸ್ರೇಲ್‌ ಒಂದು ಗಂಟೆ ಅವಧಿಯಲ್ಲಿ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ನೆಲೆಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿತ್ತು.

    ಇದಕ್ಕೂ ಮುನ್ನಾದಿನ ಗಾಜಾದಲ್ಲಿನ (Gaza) ಮಸೀದಿಯ (Mosque) ಮೇಲೆ ಇಸ್ರೇಲ್‌ (Israel) ವಾಯುಪಡೆ ನಡೆಸಿದ್ದ ವೈಮಾನಿಕ ದಾಳಿಯಿಂದ 26 ಮಂದಿ ಸಾವಿಗೀಡಾಗಿದ್ದರು. ಈ ಬೆನ್ನಲ್ಲೇ ಹಮಾಸ್‌ ಕೂಡ ಕೌಂಟರ್‌ ಅಟ್ಯಾಕ್‌ ಮಾಡಿತ್ತು. ಇಸ್ರೇಲ್‌ ವೈಮಾನಿಕ ದಾಳಿ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳನ್ನು (Rocket Fired) ಹಾರಿಸಿತ್ತು. ಇದನ್ನೂ ಓದಿ: ವಾಯುದಾಳಿಗೆ ಕೌಂಟರ್‌ ಅಟ್ಯಾಕ್‌ – ದಕ್ಷಿಣ ಇಸ್ರೇಲ್‌ ಕಡೆಗೆ ಹೊರಟ ಸ್ಫೋಟಕ ತುಂಬಿದ ರಾಕೆಟ್‌

  • ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ಕಮಾಂಡರ್‌ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ

    ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ಕಮಾಂಡರ್‌ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ

    ಟೆಲ್‌ ಅವೀವ್‌: ಗಾಜಾಪಟ್ಟಿಯ ಅತಿದೊಡ್ಡ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ (Israel) ಸೇನೆಯು ಬುಧವಾರ ಭೀಕರ ದಾಳಿ ನಡೆಸಿದೆ. ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ (Airstrikes) ಹಮಾಸ್‌ ಉಗ್ರರ ಟಾಪ್‌ ಕಮಾಂಡರ್‌ ಇಬ್ರಾಹಿಂ ಬ್ಯಾರಿ ಹತ್ಯೆಗೀಡಾಗಿದೆ. ಇಸ್ರೇಲ್‌ ಮೇಲೆ ನಡೆದ ಅಕ್ಟೋಬರ್ 7ರ ಹಮಾಸ್‌ ದಾಳಿಯಲ್ಲಿ ಈತ ಪ್ರಮುಖ ಮಾರ್ಗದರ್ಶಕನೂ ಆಗಿದ್ದ ಎನ್ನಲಾಗಿದೆ.

    ಅಲ್ಲದೇ ಇಸ್ರೇಲ್‌ ನಡೆಸಿದ ಈ ದಾಳಿಯಲ್ಲಿ ಅಲ್ ಜಜೀರಾ (Al Jazeera) ಕುಟುಂಬದ 19 ಮಂದಿ, ಸುಮಾರು 50 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಅಲ್ ಜಜೀರಾ ಎಕ್ಸ್‌ ಖಾತೆಯಲ್ಲಿ ಈ ದಾಳಿಯನ್ನ ಖಂಡಿಸಿದೆ. ಇದನ್ನೂ ಓದಿ: ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಪರೀಕ್ಷೆ ಮಾಡುವಂತೆ ಪ್ರಧಾನಿಗೆ ಪತ್ರ ಬರೀತಿನಿ: ಸಿಎಂ

    ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ಬಾಂಬ್ ದಾಳಿಯಲ್ಲಿ (Israel Attack) ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಬ್ಯಾರಿಯನ್ನು ತೊಡೆದುಹಾಕಲು ನಿರಾಶ್ರಿತರ ಶಿಬಿರವನ್ನು ಧ್ವಂಸ ಮಾಡಿರುವುದಾಗಿ ಇಸ್ರೇಲ್‌ನ ರಕ್ಷಣಾ ಪಡೆಗಳು ತಿಳಿಸಿವೆ. ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಸ್ವಯಂಸೇವಕರು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆ ದೇಹಗಳು ಮತ್ತು ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಕನಿಷ್ಠ 47 ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

    ಸ್ವಲ್ಪ ಸಮಯದ ಹಿಂದೆ ಐಡಿಎಫ್‌ ಯುದ್ಧವಿಮಾನಗಳು ಹಮಾಸ್ ಭಯೋತ್ಪಾದಕ ಸಂಘಟನೆಯ ಜಬಾಲಿಯಾ ಬ್ರಿಗೇಡ್‌ನ ಕಮಾಂಡರ್ ಇಬ್ರಾಹಿಂ ಬ್ಯಾರಿಯನ್ನು ಹತ್ಯೆ ಮಾಡಿತು. ಆತ ಅಕ್ಟೋಬರ್ 7ರಂದು ಮಾರಕ ಭಯೋತ್ಪಾದಕ ದಾಳಿಯನ್ನು ನಿರ್ದೇಶಿಸಿದವರಲ್ಲಿ ಒಬ್ಬನಾಗಿದ್ದ ಎಂದು ಇಸ್ರೇಲಿ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: Operation Leopard: ರಣತಂತ್ರ ರೂಪಿಸಿ ಕೊನೆಗೂ ಬೊಮ್ಮನಹಳ್ಳಿ ಚಿರತೆ ಸೆರೆ

    ಹಮಾಸ್ ಭಯೋತ್ಪಾದಕ ಗುಂಪಿನ ಮಿಲಿಟರಿ ವಿಭಾಗವಾಗಿರುವ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್, ಗಾಜಾವನ್ನು ಇಸ್ರೇಲಿ ಪಡೆಗಳು ಸ್ಮಶಾನವಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಹಮಾಸ್ ನಡೆಸುತ್ತಿರುವ ಗಜಾನ್ ಆರೋಗ್ಯ ಸಚಿವಾಲಯವು, ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸತ್ತು, 150 ಮಂದಿ ಗಾಯಗೊಂಡಿದ್ದಾರೆ ಎಂದಿದೆ. ಇದು ಇಸ್ರೇಲಿನ ಘೋರ ಹತ್ಯಾಕಾಂಡ. ಇನ್ನೂ ಹೆಚ್ಚಿನ ಮಂದಿ ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಹೇಳಲಾಗಿದೆ.

    ಈಗಾಗಲೇ ಇಸ್ರೇಲ್ ಗಾಜಾ ನಿವಾಸಿಗಳಿಗೆ ಪ್ರದೇಶವನ್ನು ತೊರೆಯುವಂತೆ ಎಚ್ಚರಿಕೆ ನೀಡಿದೆ. ಆದ್ರೆ ಕೆಲವು ಕುಟುಂಬಗಳು ಉಳಿದುಕೊಂಡಿವೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ತಲೆ ಎತ್ತಲಿದೆ ಶ್ರೀರಾಮನ ಮೂರ್ತಿ

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುದ್ಧ ಕೈದಿಯಾಗಿದ್ದ ಅನುಭವವನ್ನು ಹಂಚಿಕೊಂಡ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ

    ಯುದ್ಧ ಕೈದಿಯಾಗಿದ್ದ ಅನುಭವವನ್ನು ಹಂಚಿಕೊಂಡ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ

    ಮಡಿಕೇರಿ: 1965ರಲ್ಲಿ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿ ಬರುವಾಗ ತಾವಿದ್ದ ವಿಮಾನಕ್ಕೆ ಪಾಕ್ ಅಟ್ಯಾಕ್ ಮಾಡಿತ್ತು. ಈ ದಾಳಿಯಲ್ಲಿ ತಮ್ಮ ಜೆಟ್‍ಗೆ ಬೆಂಕಿ ಹೊತ್ತಿಕೊಂಡಾಗ ಪಾಕ್ ನೆಲಕ್ಕೆ ಜಿಗಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಯುದ್ಧ ಕೈದಿಯಾಗಿದ್ದರು. ಅಂದು ಅಲ್ಲಿನ ಪರಿಸ್ಥಿತಿ ಹೇಗಿತ್ತು? ಪಾಕ್ ಅವರನ್ನು ಹೇಗೆ ನಡೆಸಿಕೊಂಡಿತ್ತು ಅನ್ನೋದ್ರ ಬಗ್ಗೆ ಖುದ್ದು ಏರ್ ಮಾರ್ಷಲ್ ಕಾರ್ಯಪ್ಪನವರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ

    1965ರ ಇಂಡೋ-ಪಾಕ್ ಕದನ. ಆಗ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ನಾಲ್ಕು ತಿಂಗಳು ಸೆರೆವಾಸದಲ್ಲಿದ್ದವರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಕೂಡ ಒಬ್ಬರು. ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿರುವ ಅವರ ನಿವಾಸಕ್ಕೆ ಪಬ್ಲಿಕ್ ಟಿವಿ ಭೇಟಿ ನೀಡಿದಾಗ ಅಂದಿನ ಅನುಭವ ಹಂಚಿಕೊಂಡರು. ಯುದ್ಧ ಕೈದಿಗಳಿಗೆ ಭಯವೆಂಬುದೇ ತಿಳಿದಿರುವುದಿಲ್ಲ ಎಂಬುವುದು ನಿವೃತ್ತ ಏರ್ ಮಾರ್ಷಲ್ ಕಾರ್ಯಪ್ಪರ ಮೊದಲ ಮಾತು. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲಿ ಶತ್ರು ಶಿಬಿರಗಳ ಮೇಲೆ ದಾಳಿ ನಡೆಸಿ ವಾಪಸ್ಸಾಗುವಾಗ ಪಾಕ್‍ನ ಯುದ್ಧ ವಿಮಾನಗಳ ದಾಳಿಗೆ ಅವರು ಚಾಲನೆ ಮಾಡುತ್ತಿದ್ದ ಹಾಕರ್ ಹಂಟರ್ ಏರ್ ಕ್ರಾಫ್ಟ್ ಧರೆಗುರುಳಿತ್ತು.

    ಕಾರ್ಯಪ್ಪ ಹೇಳಿದ್ದು ಹೀಗೆ:
    ನನಗೆ ಇನ್ನೂ ಅಂದಿನ ದಿನಗಳು ಚೆನ್ನಾಗಿ ನೆನಪಿದೆ. 1965ರ ಸೆಪ್ಟೆಂಬರ್ 22 ನನಗೆ ಶತ್ರು ಶಿಬಿರಗಳ ಮೇಲೆ ದಾಳಿ ನಡೆಸುವ ಹೊಣೆ ವಹಿಸಲಾಗಿತ್ತು. ಅದರಂತೆ ಹಲ್ವಾರಾ ವಾಯುಕೇಂದ್ರದಿಂದ ನನ್ನ ಗುರಿಯತ್ತ ಹೊರಟೆ. ಕೆಲವೇ ಸಮಯದಲ್ಲಿ ನಿಯೋಜಿತ ಕಾರ್ಯ ಮುಗಿಸಿ ನಮ್ಮ ಏರ್ ಬೇಸ್‍ಗೆ ವಾಪಸ್ ಹೊರಟೆ. ಅಷ್ಟರಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ನನ್ನತ್ತ ನಿರಂತರ ದಾಳಿ ನಡೆಸಿದವು. ಅದರ ಪರಿಣಾಮ ನಾನು ಚಾಲನೆ ಮಾಡುತ್ತಿದ್ದ ವಿಮಾನ ಧರೆಗೆ ಉರುಳಿತು. 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಕೆಳಗಡೆಬಿದ್ದೆ. ನನ್ನ ಸೊಂಟ ಮತ್ತು ಕೈಗೆ ಹಾನಿಯಾಯಿತು. ಅಷ್ಟರಲ್ಲಿ ನನ್ನನ್ನು ಪಾಕಿಸ್ತಾನದ ಸೈನಿಕರು ಸುತ್ತುವರಿದರು. ನನ್ನ ಕೈ ಮತ್ತು ಸೊಂಟಕ್ಕೆ ಹಾನಿಯಾಗಿದ್ದರಿಂದ ಕೂಡಲೇ ಸ್ಟ್ರೆಚರ್ ಮೂಲಕ ಲಾಹೋರ್‍ನ ಸೇನಾ ಆಸ್ಪತ್ರೆಗೆ ಕರೆದೊಯ್ದರು. 3 ವಾರಗಳ ಚಿಕಿತ್ಸೆ ಬಳಿಕ ಯುದ್ಧ ಕೈದಿಗಳ ಶಿಬಿರಕ್ಕೆ ವರ್ಗಾಯಿಸಿದರು. ಪ್ರತಿದಿನ ಸಸ್ಯಾಹಾರ ನೀಡುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಪೂರಿ, ಚಹಾ, 11.30ಕ್ಕೆ ಚಪಾತಿ ಊಟ, ಸಂಜೆ 6 ಗಂಟೆಗೆ ರಾತ್ರಿಯ ಊಟ ವಿತರಣೆಯಾಗುತ್ತಿತ್ತು ಎಂದು ತಿಳಿಸಿದರು.

    ಅಂದು ಪಾಕಿಸ್ತಾನದ ಸೇನಾಧಿಕಾರಿ ಅಯೂಬ್ ಖಾನ್ ಎಂಬವರು ಕೆ.ಸಿ. ಕಾರ್ಯಪ್ಪನವರನ್ನು ಗುರುತಿಸಿ, ರೇಡಿಯೋದ ಮೂಲಕ ‘ಜೂನಿಯರ್ ಕಾರ್ಯಪ್ಪ’ನವರನ್ನು ಬಂಧಿಸಿರುವುದಾಗಿ ಸುದ್ದಿ ಬಿತ್ತರಿಸಿದರು. ವಾಸ್ತವವಾಗಿ ಕೆ.ಎಂ.ಕಾರ್ಯಪ್ಪನವರು ಆಗಿನ ಪಾಕಿಸ್ತಾನದ ಸೇನಾಧಿಕಾರಿ ಅಯೂಬ್ ಖಾನ್ ಜೊತೆ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆ.ಎಂ. ಕಾರ್ಯಪ್ಪನವರನ್ನು ಸಂಪರ್ಕಿಸಿದ ಅಯೂಬ್‍ಖಾನ್, ನಿಮ್ಮ ಮಗನನ್ನು ಸೆರೆ ಹಿಡಿದಿದ್ದೇನೆ. ಸುರಕ್ಷಿತವಾಗಿದ್ದಾರೆ. ಬೇಕಾದ್ರೆ ಬಿಡುಗಡೆ ಮಾಡುತ್ತೇವೆ ಎಂದು ಪರೋಕ್ಷವಾಗಿ ಹೇಳಿದ್ದರಂತೆ.

    ಅಂದು ನನ್ನ ತಂದೆ, ನನ್ನ ಮಗನೆಂದು ವಿಶೇಷ ಆದರಾತಿಥ್ಯಗಳನ್ನು ಕೊಡಬೇಕಿಲ್ಲ, ಎಲ್ಲರಂತೆ ನಡೆಸಿಕೊಳ್ಳಿ. ಕರೆ ಮಾಡಿ ತೋರಿದ ಕಾಳಜಿಗೆ ಧನ್ಯವಾದ ಎಂದಿದ್ದರು. ಜೊತೆಗೆ ಎಲ್ಲರನ್ನೂ ಬಿಡುವುದಾದರೆ ಬಿಡಿ. ನನ್ನ ಮಗನೊಬ್ಬನೇ ಅಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂದು ತಂದೆಯನ್ನು ನೆನೆಯುತ್ತಾರೆ.

    ಅಭಿನಂದನ್ ವರ್ಧಮಾನ್ ಅವರು ಸೆರೆ ಸಿಕ್ಕಿದ ಸಂದರ್ಭ ಸ್ವಲ್ಪ ಭಿನ್ನ. ಬಿಡುಗಡೆಯ ಪ್ರಕ್ರಿಯೆ ಬಹಳ ಭಿನ್ನವಾಗಿರುವುದಿಲ್ಲ. ಕೊನೆಗೆ ಎರಡು ಸರ್ಕಾರಗಳು ಮಾತುಕತೆ ನಡೆಸಿದವು. ಅದರಂತೆ ನಂದ ಕಾರ್ಯಪ್ಪನವರ ಬಿಡುಗಡೆಗೆ ವೇದಿಕೆ ಸಿದ್ಧವಾಯಿತು. ವಿಶೇಷ ವಿಮಾನದಲ್ಲಿ ಸೇನಾಧಿಕಾರಿ ಮೂಸಾ ಜತೆಗೆ ಇನ್ನೂ ಕೆಲವು ಅಧಿಕಾರಿಗಳು ಭಾರತಕ್ಕೆ ಬಂದಿಳಿದರು. ಬಳಿಕೆ ತಮಗೂ ವೈದ್ಯಕೀಯ ತಪಾಸಣೆ ಮಾಡಿದರು ನಂತರ ಒಂದು ತಿಂಗಳು ರಜೆ ನೀಡಿ ಕಳುಹಿಸಲಾಗಿತ್ತು ಎಂದು ತಮ್ಮ ಅನುಭವಗಳನ್ನು ವಿವರಿಸಿದರು.

    ಅಭಿನಂದನ್ ವರ್ಧಮಾನ್ ಅವರಿಗೂ ಸಣ್ಣಪುಟ್ಟ ವೈದ್ಯಕೀಯ ತಪಾಸಣೆಗಳು ಇರುತ್ತದೆ. ನಂತರ ಒಂದು ಅಷ್ಟು ದಿನ ರಜೆಯ ಮೇಲೆ ಕಳುಹಿಸಿ ನಂತರ ಅವರು ಮಾನಸಿಕ ಹಾಗೂ ದೈಹಿಕವಾಗಿ ರೆಡಿ ಇದ್ದಾರೆ ಅವರನ್ನು ಮತ್ತೆ ಕೆಲಸದಲ್ಲಿ ಮುಂದುವರೆಸಬಹುದು ಅಥಾವ ಇಲ್ಲದೇ ಇರಬಹುದು ಎಂದು ತಿಳಿಸಿದರು.

    https://youtu.be/MzgcKiat50M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv