Tag: ವಾಟ್ಸಪ್ ಸಂದೇಶ

  • ಉಚಿತ ಫೋನ್, ರೀಚಾರ್ಜ್: ಸರ್ಕಾರದ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್ – ಗ್ರಾಹಕರೇ ಎಚ್ಚರ

    ಉಚಿತ ಫೋನ್, ರೀಚಾರ್ಜ್: ಸರ್ಕಾರದ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್ – ಗ್ರಾಹಕರೇ ಎಚ್ಚರ

    ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ ಯಾವಾಗಿನಿಂದ ಹೆಚ್ಚಳವಾಯಿತೋ ವಂಚಕರು ಅಮಾಯಕರನ್ನು ಗುರಿಯಾಗಿಸಿಕೊಂಡು, ಅವರು ಕಷ್ಟಪಟ್ಟು ದುಡಿದ ಹಣವನ್ನು ದೋಚಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಲೇ ಇದ್ದಾರೆ. ಇಂತಹ ವಂಚನೆಗೆ ಪ್ರಮುಖ ಬ್ಯಾಂಕ್‌ಗಳ ಗ್ರಾಹಕರೇ ಒಳಗಾಗಿದ್ದಾರೆ. ಕಳೆದೆರಡು ತಿಂಗಳಿಂದ ಇಂತಹ ವಂಚನೆಗಳು ಹೆಚ್ಚಾಗಿ ವರದಿಯಾಗಿದೆ.

    ಇದೀಗ ಭಾರತ ಸರ್ಕಾರ ಭಾರತೀಯ ಬಳಕೆದಾರರಿಗೆ ಉಚಿತ ಫೋನ್ ಹಾಗೂ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ಹೊಸ ಮೋಸದ ಸಂದೇಶಗಳನ್ನು ವಾಟ್ಸಪ್‌ನಲ್ಲಿ (Whatsapp Message) ಕಳುಹಿಸಲಾಗುತ್ತಿದೆ.

    ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಎಲ್ಲಾ ಭಾರತೀಯ ಬಳಕೆದಾರರಿಗೆ 239 ರೂ. ಮೌಲ್ಯದ ಉಚಿತ ಫೋನ್ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ವಾಟ್ಸಪ್ ಸಂದೇಶವನ್ನು ಕಳುಹಿಸಲಾಗುತ್ತಿದೆ. ಈ ರೀಚಾರ್ಜ್ 28 ದಿನಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ರೀಚಾರ್ಜ್ ಅನ್ನು ಪಡೆಯಬಹುದು ಎಂದು ನಕಲಿ ಸಂದೇಶದಲ್ಲಿ (Fake Message) ತಿಳಿಸಲಾಗುತ್ತಿದೆ.

    ಆದರೆ ಈ ಸಂದೇಶಗಳು ಸಂಪೂರ್ಣ ನಕಲಿಯಾಗಿದ್ದು, ಅಂತಹ ಯಾವುದೇ ಯೋಜನೆಯನ್ನು ಸರ್ಕಾರ ಘೋಷಿಸಿಲ್ಲ ಎಂದು ಪಿಬಿಐ (ಪತ್ರಿಕಾ ಮಾಹಿತಿ ಬ್ಯೂರೋ) ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಎಲಾನ್ ಮಸ್ಕ್

    ವಂಚನೆಗಳಿಂದ ದೂರ ಉಳಿಯುವುದು ಹೇಗೆ?
    ವಾಟ್ಸಪ್ ಮೂಲಕ ಬರುವ ಇಂತಹ ವಂಚನೆಗಳಿಗೆ ಬೀಳುವುದು ಸುಲಭ. ಮುಖ್ಯವಾಗಿ ಜನರು ತಮ್ಮ ಕುಟುಂಬ ಅಥವಾ ಸ್ನೇಹಿತರಿಂದ ಬರುವ ಇಂತಹ ನಕಲಿ ಸಂದೇಶಗಳನ್ನು ತಕ್ಷಣವೇ ನಂಬಿಬಿಡುತ್ತಾರೆ. ಆದರೆ ಇವು ನಕಲಿ ಹೌದೋ ಅಲ್ಲವೋ ಎಂಬುದನ್ನು ಕಂಡು ಹಿಡಿಯಲು ನೀವು ಕೆಲವು ಹಂತಗಳನ್ನು ಅನುಸರಿಸಿ.

    ಮೊದಲನೆಯದಾಗಿ ಸಂದೇಶದ ಭಾಷೆಗೆ ಗಮನ ಕೊಡಿ. ಅಂತಹ ಸಂದೇಶಗಳ ಭಾಷೆ ಸಾಮಾನ್ಯವಾಗಿ ಪರಿಪೂರ್ಣವಾಗಿರುವುದಿಲ್ಲ. ಅವುಗಳಲ್ಲಿ ಹೆಚ್ಚಾಗಿ ವ್ಯಾಕರಣ ದೋಷಗಳು ಇರುತ್ತವೆ. ಅಧಿಕೃತ ಸಂದೇಶಗಳು ಸಾಮಾನ್ಯವಾಗಿ ಭಾಷೆ ಮತ್ತು ವಾಕ್ಯ ರಚನೆಯ ವಿಷಯದಲ್ಲಿ ಸ್ಪಷ್ಟವಾಗಿರುತ್ತದೆ. ಸಂದೇಶವನ್ನು ನಂಬಲರ್ಹವಲ್ಲದ ಮೂಲದಿಂದ ಬರೆಯಲಾಗಿದೆ ಎಂಬುದಕ್ಕೆ ಇದು ಅತ್ಯಂತ ಸ್ಪಷ್ಟವಾದ ಸಂಕೇತವಾಗಿರುತ್ತದೆ.

    whatsapp

    ಲಿಂಕ್ ಅನ್ನು ಕ್ಲಿಕ್ ಮಾಡಲು ಕೇಳುವ ಯಾವುದೇ ಸಂದೇಶವನ್ನು ನೀವು ಎಚ್ಚರಿಕೆಯಿಂದ ನೋಡಬೇಕು. ಲಿಂಕ್ ಸ್ವತಃ ಅಧಿಕೃತವಲ್ಲದ ಮೂಲದಿಂದ ಬಂದಿದ್ದರೆ ಅದರ ಮೇಲೆ ಕ್ಲಿಕ್ ಮಾಡುವುದನ್ನು ನೀವು ತಡೆಯಲೇ ಬೇಕು. ಅದೇ ರೀತಿ ನೀವು ಇತರರಿಗೂ ಮಾಡಲು ಹೇಳಿ. ಕೆಲವು ಬಾರಿ ಸರಳವಾಗಿ ನೀವು ಗೂಗಲ್ ಸರ್ಚ್ ಮಾಡಿದರೆ ಸಾಕು. ಈ ಸಂದೇಶ ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ

  • ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ವಾಷಿಂಗ್ಟನ್: ಹಲವು ದಿನಗಳಿಂದ ಟ್ವಿಟ್ಟರ್ ಬಳಕೆದಾರರು ಎಡಿಟ್ ಬಟನ್ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಟ್ವಿಟ್ಟರ್ ಈ ಎಡಿಟ್ ಬಟನ್ ಅನ್ನು ತರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ವಾಟ್ಸಪ್ ಟ್ವಿಟ್ಟರ್‌ಗೂ ಮೊದಲೇ ಬಳಕೆದಾರರಿಗೆ ಎಡಿಟ್ ಆಪ್ಶನ್ ನೀಡುವ ಸಾಧ್ಯತೆ ಇದೆ.

    ಹೌದು, ವಾಟ್ಸಪ್ ತನ್ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನ್ ಅನ್ನು ಪರೀಕ್ಷಿಸುತ್ತಿದೆ. ಇದರ ಪ್ರಕಾರ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ.

    whatsapp

    ಈ ಹಿಂದೆ ಬಳಕೆದಾರರು ತಪ್ಪಾಗಿ ಸಂದೇಶವನ್ನು ಯಾರಿಗಾದರೂ ಕಳುಹಿಸಿದಾಗ, ಅದನ್ನು ಎಡಿಟ್ ಮಾಡಲು ಅವಕಾಶ ಇರಲಿಲ್ಲ. ಬದಲಿಗೆ ಆ ಸಂದೇಶವನ್ನು ಡಿಲೀಟ್ ಫಾರ್ ಎವ್ರಿವನ್ ಮೂಲಕ ಅಳಿಸಿ, ಹೊಸದಾಗಿ ಸಂದೇಶ ಕಳುಹಿಸಲಾಗುತ್ತಿತ್ತು. ಆದರೆ ಇದೀಗ ಹೊಸ ಫೀಚರ್ ಮೂಲಕ ತಪ್ಪಾಗಿ ಕಳುಹಿಸಿದ ಸಂದೇಶವನ್ನು ಅಳಿಸದೇ ಅಲ್ಲಿಂದಲ್ಲಿಗೇ ಸರಿಪಡಿಸಲು ಸಾಧ್ಯವಾಗಲಿದೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ವಾಟ್ಸಪ್ ಈ ಎಡಿಟ್ ಬಟನ್ ತರುವ ಬಗ್ಗೆ 5 ವರ್ಷಗಳ ಹಿಂದೆಯೇ ಯೋಜಿಸಿತ್ತು ಎಂದು ವರದಿಯಾಗಿದೆ. ಇತ್ತೀಚೆಗೆ ಟ್ವಿಟ್ಟರ್ ಎಡಿಟ್ ಬಟನ್ ತರುವ ಬಗ್ಗೆ ಪ್ರಸ್ತಾಪಿಸಿದ ಬಳಿಕ ವಾಟ್ಸಪ್ ಕೂಡಾ ಮತ್ತೆ ಈ ಎಡಿಟ್ ಬಟನ್ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.

    ಸದ್ಯ ವಾಟ್ಸಪ್ ಅಭಿವೃದ್ಧಿಪಡಿಸುತ್ತಿರುವ ಫೀಚರ್‌ನ ಸ್ಕ್ರೀನ್‌ಶಾಟ್ ಅನ್ನು ವೆಬಿಟೈನ್‌ಫೋ ಹಂಚಿಕೊಂಡಿದೆ. ಬಳಕೆದಾರರು ಕಳುಹಿಸಿದ ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆಯೂ ಗೋಚರಿಸಲಿದೆ. ಎಡಿಟ್ ಬಟನ್ ಆಯ್ಕೆ ಮಾಡಿದ ಬಳಿಕ ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ, ಅದನ್ನು ಸರಿಪಡಿಸಬಹುದು.

    ಆದರೆ ಸಂದೇಶವನ್ನು ಎಡಿಟ್ ಮಾಡಿದ ಬಳಿಕ ಹಿಂದೆ ಕಳುಹಿಸಿದ ಸಂದೇಶದ ಬಗ್ಗೆ ಯಾವುದೇ ಎಡಿಟ್ ಹಿಸ್ಟರಿ ಇತಿಹಾಸವನ್ನು ತೋರಿಸುವುದಿಲ್ಲ. ಇದು ಅಭಿವೃದ್ಧಿ ಹಂತದಲ್ಲಿರುವುದರಿಂದ ವಾಟ್ಸಪ್ ಈ ಬಗ್ಗೆ ಬಿಡುಗಡೆಗೂ ಮೊದಲು ಫೀಚರ್‌ನಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಘಟಕ ತೆರೆಯುತ್ತೇನೆ, ಆದ್ರೆ ನನ್ನ ಷರತ್ತು ಮೊದಲು ಪೂರ್ಣಗೊಳ್ಳಬೇಕು: ಮಸ್ಕ್

    ಈ ಫೀಚರ್ ಸದ್ಯ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ವಾಟ್ಸಪ್ ಐಒಎಸ್ ಬೀಟಾ ಬಳಕೆದಾರರಿಗೂ ಫೀಚರ್ ಅನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗುತ್ತಿದೆ. ಕೊನೆಯದಾಗಿ ಈ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಾಗ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದು ಕಾದು ನೋಡಬೇಕಿದೆ.