Tag: ವಾಟರ್ ಮ್ಯಾನ್

  • ಕೋರ್ಟ್ ಆದೇಶ ನೀಡಿದ್ರೂ ಕೆಲಸಕ್ಕೆ ನೇಮಿಸಿಲ್ಲ – ವಾಟರ್ ಮ್ಯಾನ್ ಆತ್ಮಹತ್ಯೆಗೆ ಯತ್ನ

    ಕೋರ್ಟ್ ಆದೇಶ ನೀಡಿದ್ರೂ ಕೆಲಸಕ್ಕೆ ನೇಮಿಸಿಲ್ಲ – ವಾಟರ್ ಮ್ಯಾನ್ ಆತ್ಮಹತ್ಯೆಗೆ ಯತ್ನ

    ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ನೇರಳೆ ಗ್ರಾಮ ಪಂಚಾಯ್ತಿಯ ಮುಂಭಾಗದಲ್ಲಿ ವಾಟರ್ ಮ್ಯಾನ್ ಒಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಹಂಪಾಪುರ ಗ್ರಾಮದ ಕುಮಾರಸ್ವಾಮಿ (26) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ನೇರಳೆ ಗ್ರಾಮ ಪಂಚಾಯ್ತಿ ಹಂಪಾಪುರ ಗ್ರಾಮದಲ್ಲಿ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿಯವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ವಜಾ ಅದೇಶ ಪ್ರಶ್ನಿಸಿ ಕುಮಾರಸ್ವಾಮಿ ಕೊರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್‌ಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆ

    ಕುಮಾರಸ್ವಾಮಿಯನ್ನು ಮತ್ತೆ ವಾಟರ್ ಮ್ಯಾನ್ ಕೆಲಸದಲ್ಲಿ ಮುಂದುವರಿಸುವಂತೆ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶವಿದ್ದರೂ ಮತ್ತೆ ಕೆಲಸಕ್ಕೆ ನೇಮಿಸಿಕೊಂಡಿಲ್ಲ ಎಂದು ವಿಷ ಕುಡಿದು ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್

    ಕೂಡಲೇ ವಿಷ ಕುಡಿದಿರುವ ಕುಮಾರಸ್ವಾಮಿಯನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಸದ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

  • ಜಾಕವೆಲ್ ದುರಸ್ಥಿಗೆ ತೆರಳಿದ್ದ ವಾಟರ್ ಮನ್ ಶವವಾಗಿ ಪತ್ತೆ

    ಜಾಕವೆಲ್ ದುರಸ್ಥಿಗೆ ತೆರಳಿದ್ದ ವಾಟರ್ ಮನ್ ಶವವಾಗಿ ಪತ್ತೆ

    ಚಿಕ್ಕೋಡಿ: ಹಿರಣ್ಯಕೇಶಿ ನದಿ ತೀರದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಜಾಕವೆಲ್ ದುರಸ್ಥಿಗೆ ತೆರಳಿ ಮಂಗಳವಾರ ನದಿಗೆ ಬಿದ್ದಿದ್ದ ವಾಟರ್ ಮನ್ ಶವ ಇಂದು ಪತ್ತೆಯಾಗಿದೆ.

    ನದಿಯಲ್ಲಿ ಸಿಲುಕಿದ್ದ ಶವವನ್ನು ಎನ್.ಡಿ.ಆರ್.ಎಫ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರಡಾಣ ಗ್ರಾಮದ ನದಿ ತೀರದ ಜಾಕವೆಲ್ ದುರಸ್ಥಿಗೆ ಮಂಗಳವಾರ ಬೆಳಿಗ್ಗೆ ತೆರಳಿದ್ದ ವಾಟರ್ ಮನ್ ಬಸವರಾಜ್ ಹರಿಜನ (32) ಸಾವನ್ನಪ್ಪಿದ್ದಾರೆ.

    ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕವೆಲ್‍ಗೆ, ಪಾಮಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಾಟರ್ ಮನ್ ಬಸವರಾಜ್ ದುರಸ್ಥಿಗೆ ಎಂದು ತೆರಳಿದ್ದರು. ಆದರೆ ಬಹಳ ಸಮಯವಾದರೂ ಬಾರದ ಕಾರಣ ಅವರು ನದಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿ ಹುಡಕಾಟ ನಡೆಸಲಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಹುಡುಕಾಟದ ಸಂದರ್ಭದಲ್ಲಿ ಮೊಸಳೆ ಕಂಡು ಬಂದ ಕಾರಣ ಮೊಸಳೆಗೆ ವಾಟರ್ ಮನ್ ಬಲಿಯಾಗಿದ್ದಾರೆ ಎನ್ನಲಾಗಿತ್ತು.

    ಮಂಗಳವಾರ ಶವ ಸಿಗದ ಕಾರಣ ಇಂದು ಎನ್.ಡಿ.ಆರ್.ಎಫ್ ತಂಡ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶವವನ್ನು ಹೊರ ತೆಗೆಯಲಾಗಿದೆ. ವಾಟರ್ ಮನ್ ನದಿ ನೀರಿನ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳೆಯರ ಮೇಲೆ ವಾಟರ್ ಮೆನ್ ಪೌರುಷ

    ಮಹಿಳೆಯರ ಮೇಲೆ ವಾಟರ್ ಮೆನ್ ಪೌರುಷ

    ತುಮಕೂರು: ನೀರಿನ ಟ್ಯಾಂಕ್ ಶುಚಿಗೊಳಿಸಿ ಎಂದಿದ್ದಕ್ಕೆ ವಾಟರ್ ಮೆನ್ ಒಬ್ಬ ಮಹಿಳೆಯರ ಮೇಲೆ ಪೌರುಷ ತೋರಿಸಿದ್ದಾನೆ. ಏಕಾಏಕಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಏಡೆಯೂರು ಗ್ರಾಮದ ತಟ್ಟೆಕೆರೆಯಲ್ಲಿ ಈ ಘಟನೆ ನಡೆದಿದೆ.

    ತಟ್ಟೆಕೆರೆಯಲ್ಲಿರುವ ವಾಟರ್ ಟ್ಯಾಂಕ್ ಕಲುಷಿತವಾಗಿದ್ದು ಅದನ್ನು ಶುಚಿಗೊಳಿಸಿ ನೀರು ಬಿಡಿ ಎಂದು ಏಡೆಯೂರು ಗ್ರಾಮ ಪಂಚಾಯ್ತಿ ವಾಟರ್ ಮೆನ್ ಹರೀಶ್ ಗೆ ಗ್ರಾಮಸ್ಥರು ತಾಕೀತು ಮಾಡಿದ್ದಾರೆ. ಈ ದ್ವೇಷವನ್ನೇ ಮನಸ್ಸಿನಲಿಟ್ಟುಕೊಂಡ ಹರೀಶ್, ಮಗದೊಂದು ದಿನ ಬಂದು ಮಹಿಳೆಯರ ಮೇಲೆ ಪರಾಕ್ರಮ ತೋರಿದ್ದಾನೆ. ಪರಿಣಾಮ ಘಟನೆಯಲ್ಲಿ ಕಲಾವತಿ ಮತ್ತು ಸವಿತಾ ಸೇರಿದಂತೆ ಹಲವು ಮಹಿಳೆಯರಿಗೆ ಗಾಯವಾಗಿದೆ. ಈ ಸಂಬಂಧ ಅಮೃತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹರೀಶ್ ವಾಟರ್ ಮೆನ್ ಆಗಿದ್ದರೂ ಗ್ರಾಮಸ್ಥರನ್ನ ಹೆದರಿಸಿ ದೌರ್ಜನ್ಯ ಮಾಡುತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಈ ಕೂಡಲೇ ಹರೀಶ್ ನನ್ನ ಗ್ರಾಮ ಪಂಚಾಯ್ತಿ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

  • 10ನೇ ತರಗತಿ ಪಾಸ್ ಆಗದ್ದಕ್ಕೆ ಕೆಲ್ಸದಿಂದ ವಜಾ: 18 ವರ್ಷಗಳಿಂದ ಕೆಲ್ಸ ಮಾಡ್ತಿದ್ದ ವಾಟರ್‍ಮ್ಯಾನ್ ಆತ್ಮಹತ್ಯೆ

    10ನೇ ತರಗತಿ ಪಾಸ್ ಆಗದ್ದಕ್ಕೆ ಕೆಲ್ಸದಿಂದ ವಜಾ: 18 ವರ್ಷಗಳಿಂದ ಕೆಲ್ಸ ಮಾಡ್ತಿದ್ದ ವಾಟರ್‍ಮ್ಯಾನ್ ಆತ್ಮಹತ್ಯೆ

    ಧಾರವಾಡ: ಗ್ರಾಮ ಪಂಚಾಯ್ತಿಯವರು ಕೆಲಸದಿಂದ ತೆಗೆದ್ರು ಎಂಬ ಕಾರಣಕ್ಕೆ ಹಂಗಾಮಿ ವಾಟರ್ ಮ್ಯಾನ್‍ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗೌಸಸಾಬ ಮಾರಡಗಿ (55) ಆತ್ಮಹತ್ಯೆ ಮಾಡಿಕೊಂಡ ವಾಟರ್‍ಮ್ಯಾನ್. ಮಾರಡಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗೋವನಕೊಪ್ಪದಲ್ಲಿ ಗೌಸಸಾಬ್ ಕಳೆದ 18 ವರ್ಷಗಳಿಂದ ವಾಟರ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳ ಹಿಂದೆ ಪಂಚಾಯ್ತಿಯವರು ಏಕಾಏಕಿ 10ನೇ ತರಗತಿ ಪಾಸ್ ಆಗಿದ್ದರೆ ಮಾತ್ರ ಕೆಲಸಕ್ಕೆ ಇಟ್ಟುಕೊಳ್ಳುವದಾಗಿ ಹೇಳಿ ಕೆಲಸದಿಂದ ತೆಗೆದು ಹಾಕಿದ್ದಾರೆ.

    ಇದರಿಂದ ಮನನೊಂದು ಮಾರಡಗಿ ಇಂದು ಬೆಳಗಿನ ಜಾವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ. ಇನ್ನೂ ಮಕ್ಕಳ ಮದುವೆ ಕೂಡಾ ಮಾಡಬೇಕಿದ್ದ ಗೌಸಸಾಬ, ಕೆಲಸ ಹೋಗಿದ್ದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡಿದ್ದರು. ಈ ಮಧ್ಯೆ ಕೆಲಸದಿಂದ ಹೊರಹಾಕಿದ ವಿಚಾರ ಅವರನ್ನು ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಸದ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಂಚಾಯ್ತಿಯವರ ಮೇಲೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.