Tag: ವಾಜಪೇಯಿ ಬಾಲ್ಯ

  • ವಾಜಪೇಯಿಯ ಕವಿ ಸಮಯ: ಕೇಳಿ ಆ ಮಧುರ ಕಂಠದಲಿ ಕವಿತೆ- ವಿಡಿಯೋ ನೋಡಿ

    ವಾಜಪೇಯಿಯ ಕವಿ ಸಮಯ: ಕೇಳಿ ಆ ಮಧುರ ಕಂಠದಲಿ ಕವಿತೆ- ವಿಡಿಯೋ ನೋಡಿ

    ಹಾರ್ ನಹೀಂ ಮಾನೂಂಗಾ, ರಾರ್ ನಯೀ ಥಾನುಂಗಾ ಅಂದವರು ವಾಜಪೇಯಿ. ಗೀತ್ ನಹೀ ಗಾತಾ ಹೂಂ ಅಂದವ್ರೂ ಅವರೇ, ಗೀತ್ ನಯಾ ಗಾತಾ ಹೂಂ ಅಂತಾ ಹೇಳಿದವರು ಅದೇ ಅಟಲ್‍ಜೀ. ಭಾಷಣಕ್ಕೆ ನಿಂತ್ರೆ ಸ್ಪಟಿಕದಂತೆ ಸಿಡಿಯುವ ಅವರ ಸಾಲುಗಳನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ..? ರಾಜಕೀಯದಲ್ಲಿ ಅಟಲ್‍ಜೀ ಸರ್ವೋತ್ತಮ ನಾಯಕನಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಲು ಅವರೊಳಗಿದ್ದ ಒಬ್ಬ ಸಂವೇದನಾಶೀಲ ಕವಿ ಕೂಡಾ ಕಾರಣ. ಅವರು ನಮ್ಮಿಂದ ದೂರವಾದರೂ ಅವರ ಕವಿತೆಗಳು, ಪ್ರತಿಭಟನೆಯ ಸಾಲುಗಳು ಸದಾ ಅಟಲ್‍ಜೀ ಅವರನ್ನ ನಮ್ಮ ಹತ್ತಿರದಲ್ಲೇ ಇರಿಸುತ್ತವೆ. ಕವಿಯಾಗಿ ವಾಜಪೇಯಿ ನಮ್ಮೊಂದಿಗೆ ಹೇಗಿದ್ರು ಅನ್ನೋದನ್ನು ಹೇಳುತ್ತಾ ಅವರಿಗೆ ನಮ್ಮದೊಂದು ನುಡಿ ನಮನ ಇದು.

    ಇತ್‍ನಾ ಕಾಫೀ ಹೈ, ಅಂತಿಮ್ ದಸ್ತಕ್ ಪರ್
    ಖುದ್ ದರ್ವಾಜಾ ಖೋಲೇ…
    ಅಪ್ನೇ ಹೀ ಮನ್ ಸೇ ಕುಛ್ ಬೋಲೇ…

    (ಇಷ್ಟು ಮಾತ್ರವೇ ನನ್ನ ಇಚ್ಛೆ.. ಕೊನೆಯ ಕ್ಷಣಕ್ಕೆ ಬಾಗಿಲು ಬಡಿದ ದನಿ ಕೇಳಿದಾಗ, ನಾನೇ ಹೋಗಿ ಬಾಗಿಲು ತೆರೆಯುವೆ.. ನನ್ನ ಮನದೊಂದಿಗೇ ಒಂದಿಷ್ಟು ಮಾತನಾಡುವೆ.)

    ದೇಶದ ಪ್ರಧಾನಮಂತ್ರಿ ಹುದ್ದೆವರೆಗೆ ಏರಿದ್ರೂ, ಅಟಲ್ ಜೀ ಕೊನೆಗೂ ಕೇಳಿಕೊಂಡಿದ್ದು ಇಷ್ಟೇ. ಈ ಕವಿತೆಯನ್ನ ಕೇಳ್ತಿದ್ರೆ ಕವಿ ಮತ್ತು ಓದುಗನ ನಡುವಿನ ಅಂತರವೇ ಕರಗಿ ಹೋಗುತ್ತೆ. ವಾಜಪೇಯಿ ಅಂದ್ರೆನೇ ಹಾಗೆ, ಅವರೊಬ್ಬ ಗಾಢ ಮನಸ್ಸಿನ ಅತಿ ಸೂಕ್ಷ್ಮ ಸಂವೇದನಾಶೀಲ ಕವಿ. ಸ್ಪಟಿಕದಂತೆ ಪುಟಿಯುವ ಅವರ ಸಾಲುಗಳು ಯಾರನ್ನು ಪ್ರಭಾವಗೊಳಿಸಿಲ್ಲ ಹೇಳಿ. ಈ ವ್ಯವಸ್ಥೆ, ರಾಜಕೀಯವನ್ನ ನೋಡಿ ಹೀಗೆ ಹಾಡಿದ್ರು ಅಟಲ್ ಜೀ. ಹಾಗಂತ ಅಟಲ್‍ಜೀ ಅತ್ಯಂತ ಪ್ರತಿಭಟನಾತ್ಮಕ, ನಮ್ಮನ್ನ ಡಿಪ್ರೆಷನ್‍ಗೆ ಒಯ್ಯುವ ಕವಿ ಅಂದುಕೊಳ್ಳಬೇಡಿ. ಅವರು ಎಷ್ಟೊಂದು ಆಶಾವಾದಿ ಆಗಿದ್ರು ಅಂದ್ರೆ ನಮ್ಮನ್ನು ಹತಾಶೆಯಿಂದ ಭರವಸೆಯಡೆಗೆ ಕರೆದೊಯ್ತಿದ್ರು.

    ಹೊಸ ಗೀತೆ ಹಾಡುತ್ತೇನೆ ಅಂತಾನೇ ಅದನ್ನ ಮಾಡಿ ತೋರಿಸಿದವರು ಅಟಲ್‍ಜೀ. ಬಹುಷಃ ಬರೆದಂತೆ ಬದುಕಿದ ಅತಿ ವಿರಳ ಕವಿಗಳ ಸಾಲಿನಲ್ಲಿ ವಾಜಪೇಯಿ ಕೂಡಾ ಒಬ್ಬರು.. ತಮ್ಮ ಕವಿತೆಗಳಲ್ಲೇ ರಾಷ್ಟ್ರಪ್ರೇಮವನ್ನ ಮೆರೆಯುತ್ತಿದ್ರು. ಕೊನೆವರೆಗೂ ಕಟ್ಟಾ ಹಿಂದೂ, ರಾಷ್ಟ್ರಪ್ರೇಮಿ ಆಗಿಯೇ ಇದ್ರು. ಗಗನ್ ಮೇ ಲೆಹರ್‍ತಾ ಹೈ ಭಗವಾನ್ ಹಮಾರಾ ಅಂತ ನಮ್ಮ ಸಂಸ್ಕೃತಿಯನ್ನ ಹೆಮ್ಮೆಯಿಂದ ಹೇಳಿಕೊಂಡವರು ಅಟಲ್‍ಜೀ. ಅಷ್ಟೇ ನಮ್ಮ ಜನರ ಸ್ವಾರ್ಥವನ್ನ ಕಟುವಾಗಿ ಟೀಕಿಸಿದ್ರು.

    ಭಾರತ್ ಜಮೀನ್ ಕಾ ತುಕ್ಡಾ ನಹೀಂ,
    ಜೀತಾ ಜಾಗ್ ತಾ ರಾಷ್ಟ್ರ್ ಪುರುಷ್ ಹೇ
    ಯೇ ವಂದನ್ ಕೀ ಭೂಮಿ ಹೇ
    ಅಭಿನಂದನ್ ಕಿ ಭೂಮಿ ಹೇ
    ಯೇ ತರ್ಪಣ್ ಕೀ ಭೂಮಿ ಹೇ
    ಯೇ ಅರ್ಪಣ್ ಕೀ ಭೂಮಿ
    ಇಸ್ ಕಾ ಕಂಕರ್ ಕಂಕರ್ ಶಂಕರ್ ಹೇ
    ಇಸ್ ಕಾ ಬಿಂದು ಬಿಂದು ಗಂಗಾ ಜಲ್ ಹೇ
    ಹಮ್ ಜೀಯೇಂಗೇತೋ ಇಸ್ ಕೇ ಲಿಯೇ,
    ಹಮ್ ಮರೇಂಗೇ ತೋ ಇಸ್ ಕೇ ಲಿಯೇ..

    (ಭಾರತ ಕೇವಲ ಒಂದು ಜಮೀನಿನ ತುಂಡಲ್ಲ, ಅದು ಗೆಲ್ಲುತ್ತಾ, ಎಚ್ಚರದಿಂದಿರುವ ಜಾಗೃತ ರಾಷ್ಟ್ರ ಪುರುಷ. ಅದು ವಂದಿಸುವ ಭೂಮಿ, ಅಭಿನಂದಿಸುವ ಭೂಮಿ. ಅದು ತರ್ಪಣದ ಭೂಮಿ, ಅರ್ಪಣೆಯ ಭೂಮಿ. ಇದರ ಕಣ ಕಣದಲ್ಲಿಯೂ ಶಂಕರನಿದ್ದಾನೆ.. ಇದರ ಹನಿ ಹನಿಯಲ್ಲೂ ಗಂಗಾಜಲವಿದೆ. ನಾವು ಬದುಕುವುದಾದರೆ ಭಾರತಕ್ಕಾಗಿ, ನಾವು ಸಾಯುವುದಾದರೆ ಭಾರತಕ್ಕಾಗಿ.)

    ಪಾಂಚ್ ಹಜಾರ್ ಸಾಲ್ ಕೀ ಸಂಸ್ಕೃತಿ:
    ಗರ್ವ ಕರೇಂ ಯಾ ರೋಯೇ?
    ಸ್ವಾರ್ಥ್ ಕೀ ದೌಡ್ ಮೇ, ಕಹೀಂ ಆಜಾದಿ ಫಿರ್ ನಾ ಖೋಯೇಂ.

    (ಐದು ಸಾವಿರ ವರ್ಷಗಳ ಸಂಸ್ಕೃತಿ. ಇದರ ಮೇಲೆ ಗರ್ವ ಮಾಡಲೋ, ಇಲ್ಲಾ ಕಣ್ಣೀರು ಹಾಕಲೋ.. ಸ್ವಾರ್ಥದ ಈ ಓಟದಲ್ಲಿ ಭಾರತ ಮತ್ತೊಮ್ಮೆ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳಲಿಕ್ಕಿಲ್ಲವೇ.?)

    ಹಲವು ರಾಜಕೀಯ ಏಳು ಬೀಳುಗಳನ್ನ ಕಂಡ ವಾಜಪೇಯಿ, ಪಾಕಿಸ್ತಾನ ಭಾರತವನ್ನು ಕೆಣಕಿದಾಗ ತಮ್ಮ ಪ್ರತಿಭಟನಾತ್ಮಕ ಸಾಲುಗಳ ಮೂಲಕವೇ ಬುದ್ಧಿ ಹೇಳಿದವರು.. ಏಕ್ ನಹೀ ದೋ ನಹೀ ಕರೋ ಬೀಸೋ ಸಮ್‍ಜೋತೆ.. ಪರ್ ಸ್ವತಂತ್ರ ಭಾರತ್ ಕಾ ಮಸ್ತಕ್ ಕಭೀ ನಹೀ ಚುಕೆಗಾ ಅಂತ ಅಮೆರಿಕಾಕ್ಕೆ ಎಚ್ಚರಿಕೆ ನೀಡಿದ್ರು. ಆಜಾದಿ ಅನ್ಮೊಲ್ ನಹೀ ಇಸ್ ಕಾ ಮೋಲ್ ಲಗಾವ್ ಅಂತ ಪಾಕಿಸ್ತಾನಕ್ಕೆ ಪಾಠ ಹೇಳಿದ್ರು.

    ಈ ಎಲ್ಲ ಸಾಲುಗಳು ವಾಜಪೇಯಿ ಅವರನ್ನ ಮತ್ತೆ ಮತ್ತೆ ನೆನಪಿಸುತ್ತವೆ. ವಾದ ಪ್ರತಿವಾದಕ್ಕೆ ಅವರ ಅರ್ಥಪೂರ್ಣ ಕವಿತೆಗಳು ಎಂಥವರನ್ನು ಎದ್ದು ನಿಲ್ಲುವಂತೆ ಮಾಡುತ್ತೆ.. ಹಾಗೆ ಅವರೊಬ್ಬ ಸಂವೇದನಾಶೀಲ ಕವಿ ಆಗಿದ್ರು.. ಅವರ ಊಂಛಾಯೀ ಅನ್ನೋ ಕವಿತೆಯಲ್ಲಿ ಒಂದು ಕಡೆ ಅವರ ಸರಳತೆಯನ್ನ ಪ್ರದರ್ಶಿದ್ದು ಹೀಗೆ..

    ಮೇರೆ ಪ್ರಭು, ಮುಝೆ ಇತ್ ನೀ ಊಂಛಾಯೀ ಕಭಿ ಮತ್ ದೇನಾ,
    ಗೈರೋಂ ಕೊ ಗಲೇ ಲಾ ಲಗಾ ಸಕೊಂ,
    ಇತ್ ನೀ ರುಖಾಯೇ ಕಭಿ ಮತ್ ದೇನಾ.

    (ಓ ಪ್ರಭು, ನನ್ನನ್ನ ಇಷ್ಟೊಂದು ಎತ್ತರದವನಾಗಿ ಎಂದೂ ಮಾಡಬೇಡ, ನನ್ನ ಜನರನ್ನ ಅಪ್ಪಿಕೊಳ್ಳಲು ಆಗದಷ್ಟು ಒಣ ಮನಸ್ಸಿನವನಾಗಿ, ಎಂದೂ ಮಾಡಬೇಡ)

    ಹಲವು ಬಾರಿ ವಾಜಪೇಯಿ ಕವಿಯಾಗಿ ಹಲವು ಸಾಲುಗಳನ್ನ ಹೇಳಿದ್ದಾರೆ, ಬರೆದಿದ್ದಾರೆ. ಬಿಜೆಪಿ ಒಡೆದು ಹೋದಾಗ ಕದಮ್ ಮಿಲಾಕರ್ ಚಲ್‍ನಾ ಹೋಗಾ ಅಂತ ಹಾಡಿದವರು ವಾಜಪೇಯಿ. ಸಿಕ್ಕ ಸಮಯದಲ್ಲಿ ಮಾನವೀಯತೆ, ಮೌಲ್ಯಗಳು ಸಂವೇದನಾಶೀಲತೆಯನ್ನ ಮೆರೆದವರು ಎಲ್ಲರ ಪ್ರೀತಿಯ ಅಟಲ್‍ಜೀ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿಯವರ ಬಾಲ್ಯದ ಅಚ್ಚರಿಯ ಮಾಹಿತಿಯಿದು!

    ವಾಜಪೇಯಿಯವರ ಬಾಲ್ಯದ ಅಚ್ಚರಿಯ ಮಾಹಿತಿಯಿದು!

    ಭಾರತದ ದೇಶದ ಮಹಾನ್ ರಾಜಕೀಯ ನಾಯಕರಾದ ಅಟಲ್‍ಜೀ ಅವರ ಜನನವಾದದ್ದು ಮಧ್ಯಪ್ರದೇಶದ ಗ್ವಾಲಿಯರ್ ನ ಶಿಂಧೆಯ ದಂಡು ಪ್ರದೇಶದಲ್ಲಿ. ಸುಸಂಸ್ಕೃತ ಮನೆತನದಲ್ಲಿ ಜನಿಸಿದರು. ಅವರು ಜನಿಸಿದ್ದು 1924ರ ಡಿಸೆಂಬರ್ 25 ರಂದು.

    ಅಟಲ್ ಅವರ ತಂದೆ ಕೃಷ್ಣಬಿಹಾರಿ ವಾಜಪೇಯಿ, ತಾಯಿ ಕೃಷ್ಣಾದೇವಿ. ತಂದೆ-ತಾಯಿ ಚಿಂತನೆ ಮಾಡಿ ಮಗುವಿಗೆ `ಅಟಲ್ ಬಿಹಾರಿ’ ಎಂದು ನಾಮಕರಣ ಮಾಡಿದರು. ಅಟಲ್ ಎಂದರೆ `ಗಟ್ಟಿ’ (ಕಾರ್ಯಸಾಧಕ) ಎಂದರ್ಥ. ಬಿಹಾರಿ ಎಂದರೆ `ವಿಚಾರ ಮಾಡುವವ’ ಎಂದರ್ಥ. ನಿಜವಾಗಿಯೂ ಒಬ್ಬ ಮಹಾನ್ ಗಟ್ಟಿ ವಿಚಾರಶೀಲ ವ್ಯಕ್ತಿಯಾಗಿದ್ದರು ಅಟಲ್ ಬಿಹಾರಿ.

    ಶಿಶುವಿನ ಚಂಚಲತೆ, ಹೊಳೆಯುವ ಕಣ್ಣುಗಳು, ದಷ್ಟ-ಪುಷ್ಟ ಶರೀರ, ಲವಲವಿಕೆಯ ಮುಖ ಸದಾ ಮುಗಳ್ನಗು ಮತ್ತು ಎಲ್ಲರೊಂದಿಗೂ ಬೆರೆಯುವ ಗುಣ ಅವರಲ್ಲಿತ್ತು. ಮಗುವನ್ನು ಒಮ್ಮೆ ನೋಡಿದರೆ ಸಾಕು ಯಾರಿಗಾದರೂ ಎತ್ತಿ ಮುದ್ದಾಡಬೇಕೆಂಬ ಆಸೆಯಾಗುತ್ತಿತ್ತು. ಹಾಗಿದ್ದರು ಅಟಲ್‍ರವರು.

    ಚಿಕ್ಕಂದಿನಿಂದಲೇ ಅಕ್ಷರದ ಜ್ಞಾನ ಬೆಳೆಸಿಕೊಳ್ಳುವ ಹಾಗೆ ಮನೆಯವರು ಪ್ರಯತ್ನಿಸುತ್ತಿದ್ದರು. ಹಾಗೇ ಬೇಗನೆ ಎಬ್ಬಿಸಿ ತಣ್ಣೀರು ಸ್ನಾನ ಮಾಡಿಸಿ ಜಪ-ತಪ, ಮಂತ್ರ ಪಠಣ, ರಾಮಾಯಣ, ಮಹಾಭಾರತ, ಗೀತೆ ಮತ್ತು ಶ್ರೀ ಮದ್ಭಾಗವತದ ಅಧ್ಯಯನದಲ್ಲಿ ತೊಡಗಿಸುತ್ತಿದ್ದರು ಮತ್ತು ಇತರೆ ಭಾಷೆಯ ಗ್ರಂಥಗಳನ್ನು ಅಭ್ಯಸಿಸಲು ಹೇಳುತ್ತಿದ್ದರು.

    ಬಾಲಕ ಅಟಲ್‍ರನ್ನು ನಂತರದ ದಿನಗಳಲ್ಲಿ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಮಾಡಿದ ಪಾಠ ತಿಳಿಯದೆ ಇದ್ದಾಗ ತನ್ನ ತಂದೆ ಸ್ವಂತ ಅಧ್ಯಾಪಕರಿರುವುದರಿಂದ ಅವರನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ಅಟಲ್‍ಜೀ ಹಾತೊರೆಯುತ್ತಿದ್ದರು. ಶಾಲೆಗೆ ಚಕ್ಕರ್ ಹೊಡೆಯದೆ ಓದು ಮತ್ತು ಮನೆಪಾಠಗಳಲ್ಲಿ ನಿರತರಾಗಿದ್ದರು.

    ಅಟಲ್‍ರವರು ಗ್ವಾಲಿಯರ್ ನಲ್ಲಿದ್ದ ಗೋರಖಿ ವಿದ್ಯಾಲಯದ ಮಿಡಲ್ ಪರೀಕ್ಷೆ ಪಾಸು ಮಾಡಿದರು. ಅಭ್ಯಾಸದಲ್ಲಿ ಅವರು ಯಾವತ್ತು ಹಿಂದೆ ಬೀಳದವರು. ಎಲ್ಲಾ ವಿದ್ಯಾರ್ಥಿಗಳಿಗಿಂತ ಪತ್ರಿಭಾವಂತ ವಿದ್ಯಾರ್ಥಿಯಾಗಿದ್ದರು. ಹೈಸ್ಕೂಲಿನಲ್ಲಿ ನಡೆಯುವ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಜಾಣತನದ ಮಾತು ಹಾಗೂ ನಡವಳಿಕೆಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಯಾವುದೇ ಪರೀಕ್ಷೆ ಇರಲಿ ಅದರಲ್ಲಿ ಕ್ಲಾಸಿಗೆ ಪ್ರಥಮ ರ‍್ಯಾಂಕ್ ಬರುತ್ತಿದ್ದರು. ಶಾಲಾ ಪಠ್ಯಪುಸ್ತಕಗಳಿಗಿಂತ ಆಧ್ಯಾತ್ಮಿಕ, ಪೌರಾಣಿಕ, ಭಾಗವತ, ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳ ಓದಿನಲ್ಲೇ ಅವರಿಗೆ ಹೆಚ್ಚು ಆಸಕ್ತಿ. ಕತೆ, ಕಾದಂಬರಿ ಹಾಗೂ ವಿಚಾರ ಸಾಹಿತ್ಯ ಅವರಿಗೆ ಅಚ್ಚುಮೆಚ್ಚು, ಕಬಡ್ಡಿ ಎಂದರೆ ಅತಿ ಇಷ್ಟವಾದ ಆಟ. ಅವರೊಬ್ಬ ಉತ್ತಮ ಕಬ್ಬಡಿ ಪಟುವೂ ಹೌದು.

    ತಂದೆಯ ಕವಿತೆಗಳನ್ನು ಕೇಳಿ ಕೇಳಿ ತಾನು ಪ್ರಾಸಬದ್ಧವಾಗಿ ಹೇಳತೊಡಗಿದ, ಮಾತಿನ ಗಾದೆ, ಹೋಲಿಕೆ, ತಿಳಿಹಾಸ್ಯ, ವ್ಯಂಗ್ಯಗಳನ್ನು ಹೇಗೆ ಪ್ರಯೋಗಿಸಬೇಕೆಂಬುದನ್ನು ತಂದೆಯಿಂದ ಕಲಿತರು. ಹಾಗೇ ನಮ್ಮ ದೇಶದ ಹಬ್ಬ ಹರಿದಿನ ಸಾಂಸ್ಕೃತಿಕ ಪರಂಪರೆಯನ್ನು ಗಟ್ಟಿಯಾಗಿ ಮೈಗೂಡಿಕೊಂಡು ಬೆಳೆದರು.

    ಅಟಲ್ ಜೀ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದಾಗ ಮನೆಯಲ್ಲಿ ಶುದ್ಧ ಭಾರತೀಯ ವಾತಾವರಣ, ಸುಸಂಸ್ಕೃತ, ಆಧ್ಯಾತ್ಮಕದ ಪರಿಸರ, ಆರ್ಯ ಸಮಾಜದ ನಾಯಕರು ಮತ್ತು ಕಾರ್ಯಕರ್ತರು ತಂದೆಯನ್ನು ಕಾಣಲು ಸದಾ ಬರುತ್ತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ ಆಗಮಿಸುತ್ತಿದ್ದರು. ವಂಶಾನುಕ್ರಮ ಮತ್ತು ಮನೆಯ ವಾತಾವರಣದ ಉಜ್ವಲ ರಾಷ್ಟ್ರಭಕ್ತಿ ಅವರಿಗೆ ದೊರೆತ ಪರಿಸರ ಅವರ ವ್ಯಕ್ತಿತ್ವದ ಮೇಲೆ ಸಾಕಷ್ಟು ಪರಿಣಾಮವನ್ನುಂಟು ಮಾಡಿತು. ಇದುವೇ ಮುಂದೆ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿತು.

    ಅಟಲ್ ಹೈಸ್ಕೂಲ್ ದಿನಗಳಿಂದಲೂ ಉತ್ತಮ ಭಾಷಣಕಾರರಾಗಿದ್ದರು. ಭಾಷಣಕಾರನ ಸತ್ವ, ಕತೆಗಾರಿಕೆ ಮತ್ತು ಗುಣಗಳು ಅಟಲ್‍ಗೆ ಅವರ ತಂದೆ ಮತ್ತು ತಾತನಿಂದ ಬಳುವಳಿಯಾಗಿ ಹರಿದು ಬಂದಿದೆ ಎನ್ನಬಹುದು. ಏಕೆಂದರೆ ಅವರಿಬ್ಬರೂ ಕೂಡ ಉತ್ತಮ ವಾಗ್ಮಿಗಳಾಗಿದ್ದರು.

    ಕಾವ್ಯಮಯವಾದ ಭಾಷೆ, ಪ್ರಾಸಬದ್ಧ ಮಾತು, ಚುರುಕು ಮತ್ತು ಚಾಟಿಯೇಟಿನಂತಹ ನುಡಿ ಅವರ ಮಾತುಗಾರಿಕೆಯಾಗಿತ್ತು. ಶಾಲಾ ದಿನಗಳಲ್ಲಿ ತಮ್ಮ ಸಹಪಾಠಿಗಳೊಂದಿಗೆ ಉತ್ತಮ ಸ್ಪರ್ಧೆಯನ್ನು ಮಾಡುತ್ತ ಬೆಳೆದ ಇವರಿಗೆ ಮನೆಯ ಕೌಟುಂಬಿಕ ವಾತಾವರಣ ವ್ಯಕ್ತಿತ್ವ ನಿರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    https://www.youtube.com/watch?v=gopOVPqsjmU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv