Tag: ವಾಗ್ವಾದ

  • ಫೇಸ್‍ಬುಕ್‍ನಲ್ಲಿ ವಾಗ್ವಾದ – ಯುವಕನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ

    ಫೇಸ್‍ಬುಕ್‍ನಲ್ಲಿ ವಾಗ್ವಾದ – ಯುವಕನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ

    -ಕೊಲೆಯ ದೃಶ್ಯ ಮೊಬೈಲ್‍ನಲ್ಲಿ ಸೆರೆ

    ಚಂಡೀಗಢ: ಫೇಸ್‍ಬುಕ್‍ನಲ್ಲಿ ವಾಗ್ವಾದ ನಡೆದು ಮಾಜಿ ಸೈನಿಕನೋರ್ವ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು 26 ವರ್ಷದ ಸುಖ್‍ಚೈನ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಜಸ್ಬೀರ್ ಸಿಂಗ್ ಯುವಕನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸುಖ್‍ಚೈನ್ ಸಿಂಗ್ ತಂದೆ ಪರಮ್‍ಜಿತ್ ಸಿಂಗ್ ಅವರು ತಾರ್ನ್ ತರಣ್ ಜಿಲ್ಲೆಯ ಕಿಲ್ಲಾ ಕವಿ ಸಂತೋಖ್ ಸಿಂಗ್ ಗ್ರಾಮದಲ್ಲಿ ಮೆಡಿಕಲ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

    ಈ ಅಂಗಡಿಯಲ್ಲಿ ಸುಖ್‍ಚೈನ್ ಕೂಡ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಅಂಗಡಿ ಹೆಸರಿನಲ್ಲಿ ಒಂದು ಫೇಸ್‍ಬುಕ್ ಪೇಜ್ ನಡೆಸುತ್ತಿದ್ದ. ಈ ಫೇಸ್‍ಬುಕ್ ಪೇಜ್‍ನಲ್ಲಿ ಆರೋಪಿ ಜಸ್ಬೀರ್ ಸಿಂಗ್ ನೀವು ಅಂಗಡಿಯಲ್ಲಿ ಡ್ರಗ್ಸ್ ಮಾತ್ರೆಗಳನ್ನು ಮಾರಾಟ ಮಾಡುತ್ತೀರಾ ಎಂದು ಕಮೆಂಟ್ ಮಾಡಿದ್ದ. ಜೊತೆಗೆ ಕುಟುಂಬದ ಬಗ್ಗೆಯೂ ಕೆಟ್ಟದಾಗ ಮಾತನಾಡಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.

    ಇದಾದ ನಂತರ ಸುಖ್‍ಚೈನ್ ಈ ರೀತಿ ಕಮೆಂಟ್ ಮಾಡಬೇಡ ಎಂದು ಜಸ್ಬೀರ್ ಸಿಂಗ್ ಹೇಳಿದ್ದಾನೆ. ಆದರೂ ಆತ ಮಾತನ್ನು ಕೇಳಿಲ್ಲ. ನಂತರ ಸುಖ್‍ಚೈನ್ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಾ, ಜಸ್ಬೀರ್ ಜೊತೆ ಜಗಳ ಮಾಡಲು ಹೋಗಿದ್ದಾನೆ. ಈ ವೇಳೆ ಮನೆಯ ಚಾವಣಿ ಮೇಲೆ ಬಂದೂಕು ಹಿಡಿದು ನಿಂತ ಆರೋಪಿ ಶೂಟ್ ಮಾಡುತ್ತೇನೆ ಎಂದು ಹೇಳಿದ್ದಾನೆ. ಆಗ ಗುಂಡಿಕ್ಕು ಎಂದು ಮುಂದೆ ಹೋದಾಗ, ಆರೋಪಿ ಶೂಟ್ ಮಾಡಿದ್ದಾನೆ.

    ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸುಖ್‍ಚೈನ್ ಮಾಡಿರುವ ಮೊಬೈಲ್ ವಿಡಿಯೋದಲ್ಲಿ ಜಸ್ಬೀರ್ ಗನ್ ಅನ್ನು ಲೋಡ್ ಮಾಡಿ ಶೂಟ್ ಮಾಡಿರುವುದು ಸೆರೆಯಾಗಿದೆ. ಜಸ್ಬೀರ್ ಶೂಟ್ ಮಾಡಿದ ನಂತರ ಸುಖ್‍ಚೈನ್‍ನನ್ನು ಆಸ್ಪತ್ರೆಗೆ ಕರೆತಂದಿದ್ದು, ಆತ ಅಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಘಟನೆಯ ನಂತರ ಆರೋಪಿ ಜಸ್ಬೀರ್ ಸಿಂಗ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಯಡಿಯೂರಪ್ಪ ನೆರೆ ಪ್ರವಾಸವನ್ನ ಕುಟ್ಟಿ ಕುಂದಾಪುರಕ್ಕೆ ಹೋಲಿಸಿದ ಭೋಜೇಗೌಡ

    ಯಡಿಯೂರಪ್ಪ ನೆರೆ ಪ್ರವಾಸವನ್ನ ಕುಟ್ಟಿ ಕುಂದಾಪುರಕ್ಕೆ ಹೋಲಿಸಿದ ಭೋಜೇಗೌಡ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆಹಾನಿ ವೇಳೆ ಏಕಾಂಗಿಯಾಗಿ ಪ್ರವಾಸ ಮಾಡಿದ್ದೆ ಇವತ್ತು ದೊಡ್ಡ ಚರ್ಚೆ ಆಯ್ತು. ಸಿಎಂ ಏಕಾಂಗಿಯಾಗಿ ಪ್ರವಾಸ ಮಾಡಿದ್ರು. ಆದ್ರೆ ಯಾವುದೇ ಉಪಯೋಗವಾಗಲಿಲ್ಲ. ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತಾಗಿದೆ ಅಂತ ಜೆಡಿಎಸ್ ಸದಸ್ಯ ಬೋಜೇಗೌಡ ಟೀಕಿಸಿದರು.

    ಇಷ್ಟಕ್ಕೆ ಸುಮ್ಮನಾಗದ ಭೋಜೇಗೌಡ, ನೆರೆಹಾನಿ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಂಪುಟದಲ್ಲಿದ್ದರೂ ಪರಿಹಾರ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಬಿಜೆಪಿ ನಾರಾಯಣಸ್ವಾಮಿ ಪರಿಷತ್ ಕಲಾಪದಲ್ಲಿ ಸಮರ್ಥಿಸಿಕೊಂಡರು. ಸಿಂಗಲ್ ಮ್ಯಾನ್ ಕ್ಯಾಬಿನೆಟ್ ಇದ್ದರೂ ಸಿಎಂ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ರು. ವಯಸ್ಸನ್ನೂ ಲೆಕ್ಕಿಸದೇ ಏಕಾಂಗಿಯಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದರು.

    ತಕ್ಷಣ ನಾರಾಯಣಸ್ವಾಮಿ ಮಾತಿಗೆ ಅಡ್ಡಿಪಡಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ಸಿಎಂ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ದರಲ್ಲಿ ಎರಡು ಮಾತಿಲ್ಲ ಆದರೆ ಅವರ ಕಥೆ ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತಾಗಿದೆ. ಮನೆಯಲ್ಲಿ ಅಪ್ಪ ಅಮ್ಮ ನಾಳೆ ಕುಟ್ಟಿಯನ್ನು ಕುಂದಾಪುರಕ್ಕೆ ಕಳಿಸಬೇಕು ಅಂತಾ ರಾತ್ರಿ ಮಾತಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡಿದ್ದ ಕುಟ್ಟಿ ಬೆಳಗ್ಗೆ ಎದ್ದ ಕೂಡಲೇ ಕುಂದಾಪುರಕ್ಕೆ ಹೋಗುತ್ತಾನೆ, ಸಂಜೆ ವಾಪಸ್ ಬರುತ್ತಾನೆ ಅಪ್ಪ ಅಮ್ಮ ಎಲ್ಲಿ ಹೋಗಿದ್ದೆ ಎಂದು ಕೇಳಿದರೆ ಕುಟ್ಟಿಯನ್ನು ಕುಂದಾಪುರಕ್ಕೆ ಕಳಿಸಬೇಕು ಅಂತಾ ಮಾತಾಡಿಕೊಳ್ತಾ ಇದ್ರಲ್ಲ ಅದನ್ನ ಕೇಳಿಸಿಕೊಂಡು ಕುಂದಾಪುರಕ್ಕೆ ಹೋಗಿಬಂದೆ ಎನ್ನುತ್ತಾನೆ, ಯಾಕೆ ಹೋಗಬೇಕಿತ್ತು, ಏನು ಮಾತನಾಡಬೇಕಿತ್ತು ಎನ್ನುವುದು ಗೊತ್ತಿಲ್ಲದೇ ಸುಮ್ಮನೆ ಹೋಗಿಬಂದಿದ್ದ ಅದೇ ರೀತಿ ಸಿಎಂ ನೆರೆ ಪ್ರವಾಸ ಮಾಡಿದ್ದಾರೆ .ಯಾಕೆ ಹೋದರು? ಏನು ಮಾಡಬೇಕಿತ್ತು? ಅದನ್ನು ಮಾತ್ರ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.

    ಬೋಜೇಗೌಡ ಮಾತಿಗೆ ಕೆರಳಿದ ಡಿಸಿಎಂ ಲಕ್ಷ್ಮಣ ಸವದಿ ಹಿಂದಿನ ಸಿಎಂ ಗಳು ಯಾವ ತರಹ ಗ್ರಾಮ ವಾಸ್ತವ್ಯ ಮಾಡಿದ್ರು ಏನ್ ಮಾಡಿದ್ರು ನಮಗೂ ಗೊತ್ತಿದೆ ಎಂದರು. ಹಿಂದೆ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗಲೂ ನೆರೆ ಬಂದಿತ್ತು. ಕುಮಾರಸ್ವಾಮಿ ಸಿಎಂ ಅವರನ್ನು ನಾನೇ ಪ್ರವಾಹ ಪೀಡಿತ ಸ್ಥಳಕ್ಕೆ ಕರೆದೊಯ್ದಿದ್ದೆ ನಾನೇ ಟ್ರ್ಯಾಕ್ಟರ್ ನಲ್ಲಿ ಕೂರಿಸಿದ್ದೆ, ಅವರು ಎಲ್ಲಿ ಊಟ ಮಾಡಿದ್ರು, ಎಲ್ಲಿ ಮಲಗಿದ್ರು, ಎಲ್ಲಿ ಏನ್ ಮಾಡಿದ್ರು ನನಗೂ ಗೊತ್ತಿದೆ ಎಂದರು.

    ಡಿಸಿಎಂ ಸವದಿ ಮಾತಿಗೆ ಕೆರಳಿ ಕೆಂಡವಾದ ಜೆಡಿಎಸ್ ಪರಿಷತ್ ಸದಸ್ಯರು, ಹೆಚ್ಡಿಕೆ ಎಲ್ಲಿ ಮಲಗಿದ್ರು ಅನ್ನೋದು ಒಳ್ಳೆ ಮಾತಲ್ಲ, ಏನ್ ಮಾಡಿದ್ರು ಹೇಳಿ ನೋಡೋಣ ಎಂದು ಪಟ್ಟುಹಿಡಿದರು. ಕುಮಾರಸ್ವಾಮಿ ಸಾಲಮನ್ನಾ ಮಾಡಿದರು ಎಂದರೆ ಸ್ಟಾರ್ ಹೋಟೆಲ್ ಬಿಟ್ಟು ಹೊರಗಡೆನೇ ಬಂದಿರಲಿಲ್ಲ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ಯಾವ ಸಿಎಂ ಏನು ಭರವಸೆ ನೀಡಿದ್ದರು ನಂತರ ಏನು ಮಾಡಿದರು ಎಂದು ಚರ್ಚೆಗೆ ಸಮಯ ನಿಗದಿ ಮಾಡಿ ಚರ್ಚೆ ಮಾಡೋಣ ಎನ್ನುವ ಮನವಿಯನ್ನು ಸಭಾಪತಿಗಳಿಗೆ ಸಲ್ಲಿಸುವ ಮೂಲಕ ಚರ್ಚೆಗೆ ತೆರೆ ಎಳೆಯಲಾಯಿತು.

  • ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ನಡ್ವೆ ವಾಗ್ವಾದ – ಸ್ಟೋಕ್ಸ್, ಬ್ರಾಡ್ ವಿಡಿಯೋ ವೈರಲ್

    ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ನಡ್ವೆ ವಾಗ್ವಾದ – ಸ್ಟೋಕ್ಸ್, ಬ್ರಾಡ್ ವಿಡಿಯೋ ವೈರಲ್

    ಸೆಂಚೂರಿಯನ್: ಇಂಗ್ಲೆಂಡ್ ತಂಡದ ಆಲ್‍ರೌಂಡರ್, ಉಪನಾಯಕ ಬೆನ್ ಸ್ಟೋಕ್ಸ್ ಬಿರುಸಿನಿಂದ ಮಾತನಾಡುವುದು ಸ್ವಲ್ಪ ಹೆಚ್ಚು. ಈ ಹಿಂದೆಯೂ ಕೂಡ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಕೂಡ ಕೇಳಿ ಬಂದ ಹಿನ್ನೆಲೆಯಲ್ಲಿ ತಂಡದಿಂದ ಕೆಲ ಸಮಯ ದೂರ ಉಳಿದಿದ್ದರು. ಮೈದಾನದಲ್ಲೂ ಎದುರಾಳಿ ಆಟಗಾರನನ್ನು ಸ್ಲೆಡ್ಜಿಂಗ್ ಮಾಡುವುದರಲ್ಲೂ ಸ್ಟೋಕ್ಸ್ ಮುಂದು. ಈಗ ಬ್ರಾಡ್ ಜೊತೆ ವಾಗ್ವಾದ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯಾವ ಕಾರಣದಿಂದ ಇಬ್ಬರು ಆಟಗಾರರು ವಾಗ್ವಾದಕ್ಕೆ ಮುಂದಾಗಿದ್ದಾರೆ ಎಂಬುವುದು ಮಾತ್ರ ಈವರೆಗೂ ಸ್ವಷ್ಟವಾಗಿಲ್ಲ. ಆದರೆ ತಂಡದ ಆಟಗಾರರ ನಡುವೆಯೇ ಇಬ್ಬರು ಆಟಗಾರರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಜೋ ರೂಟ್, ಜೋಸ್ ಬಟ್ಲರ್ ನಡುವೆ ಬಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 3ನೇ ದಿನದಾಟದ ಬ್ರೇಕ್ ವೇಳೆ ಘಟನೆ ನಡೆದಿದೆ. ಸ್ಟೋಕ್ಸ್‍ಗೆ ಬ್ರಾಡ್ ಏನೋ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೂ ಮುನ್ನ ಸ್ಟೋಕ್ಸ್ ಏನೋ ಅಂದ ಕಾರಣ ಬ್ರಾಡ್ ವಾಗ್ವಾದಕ್ಕಿಳಿದರು ಎನ್ನಲಾಗಿದೆ. ಈ ಘಟನೆಯೊಂದಿಗೆ ಇಂಗ್ಲೆಂಡ್ ತಂಡದ ಆಟಗಾರರ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    ಆಟಗಾರರು ಮೈದಾನದಲ್ಲೇ ವಾಗ್ವಾದಕ್ಕೆ ಇಳಿದಿರುವ ಕುರಿತು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ. ಅಲ್ಲದೇ ಯಾವುದೇ ಅತೃಪ್ತಿ ಇದ್ದರೆ ಆಟಗಾರರು ಕುಳಿತು ಬಗೆಹರಿಸಿಕೊಳ್ಳಬೇಕಿದೆ ಎಂಬ ಸಲಹೆಯನ್ನು ನೀಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಈ ಕುರಿತು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಕೆರೆ ಹೂಳೆತ್ತುವ ಬಗ್ಗೆ ದೇಶಪಾಂಡೆ, ನಿಂಬಣ್ಣನವರ ಮಧ್ಯೆ ವಾಗ್ವಾದ – ಜೋಶಿಯಿಂದ ಸಮಾಧಾನ

    ಕೆರೆ ಹೂಳೆತ್ತುವ ಬಗ್ಗೆ ದೇಶಪಾಂಡೆ, ನಿಂಬಣ್ಣನವರ ಮಧ್ಯೆ ವಾಗ್ವಾದ – ಜೋಶಿಯಿಂದ ಸಮಾಧಾನ

    ಧಾರವಾಡ: ಜಿಲ್ಲೆಯ ನೀರಸಾಗರ ಕೆರೆ ಹೂಳೆತ್ತುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ಬಿಜೆಪಿ ಶಾಸಕ ಸಿ.ಎಸ್ ನಿಂಬಣ್ಣವರ ಕಲಘಟಗಿ ಮಧ್ಯೆ ವಾಗ್ವಾದ ನಡೆದಿದೆ.

    ಈಗ ಬಿತ್ತನೆ ಆರಂಭವಾಗಿದೆ, ಈಗ ಯಾಕೆ ಹೂಳು ತೆಗೆಯುತ್ತಿರಾ, ಎರಡು ತಿಂಗಳ ಮುಂಚೆಯೇ ಯಾಕೆ ಇದೇ ಕೆಸವನ್ನು ಮಾಡಲಿಲ್ಲ. ಮಳೆ ಆರಂಭವಾಗುವ ಹೊತ್ತಿಗೆ ಹೂಳೆತ್ತೋಕೆ ಯಾಕೆ ಬಂದಿದ್ದೀರಿ ಎಂದು ಶಾಸಕ ನಿಂಬಣ್ಣವರ ಆರ್.ವಿ ದೇಶಪಾಂಡೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೆ ತೀರುಗೇಟು ನೀಡಿದ ದೇಶಪಾಂಡೆ ಅವರು, ಎಂಎಲ್‍ಎ ಅವರೇ ನೀವು ಹೇಳೋದು ಸರಿ ಇದೇ ಆದರೆ ಇದು ಸಿಎಸ್‍ಆರ್ ಕಾಮಗಾರಿ ಸರ್ಕಾರದಿಂದ ಮಾಡುತ್ತಿಲ್ಲ. ನೀವು ಕೇಳದೇ ನಾವು ಹೂಳು ತೆಗೆಯೋಕೆ ಬಂದಿದ್ದೇವೆ ನೀವು ಅದನ್ನು ತಿಳಿದುಕೊಂಡು, ಹೂಳು ತೆಗೆಯೋಕೆ ಬಂದಿದ್ದಕ್ಕೆ ನಮಗೆ ಅಭಿನಂದನೆ ಹೇಳಬೇಕು ಎಂದು ತೀರುಗೇಟು ನೀಡಿದರು. ವಾಗ್ವಾದ ತಾರಕಕ್ಕೆ ಏರಿದ ಪರಿಣಾಮ ಸ್ಥಳದಲ್ಲೇ ಇದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಬ್ಬರನ್ನೂ ಸಮಾಧಾನಪಡಿಸಿ ಕಾಮಗಾರಿ ಪೂಜೆಗೆ ಕರೆದುಕೊಂಡು ಹೋದರು.

    ಇದೇ ವೇಳೆ ಮಾತನಾಡಿದ ದೇಶಪಾಂಡೆ ಅವರು, ಈಗಾಗಲೇ ಮೋಡ ಬಿತ್ತನೆಯ ವಿಚಾರವಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಚಾರದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ನನ್ನ ಜೊತೆ ಮಾತನಾಡಿದ್ದಾರೆ. ಮೋಡ ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಒಂದು ಕೇಂದ್ರ ಮಾಡಿದ್ದೇವೆ. ಇಷ್ಟೊತ್ತಿಗೆ ರಾಜ್ಯದಲ್ಲಿ ಮಳೆಯಾಬೇಕಿತ್ತು, ಆದರೆ ಗುಜರಾತ್‍ನಲ್ಲಿ ಉಂಟಾದ ಚಂಡಮಾರುತದಿಂದ ಸಮಸ್ಯೆ ಆಗಿದೆ. ಆದಷ್ಟು ಬೇಗ ಮೋಡ ಬಿತ್ತನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]