Tag: ವಸ್ತುಸಂಗ್ರಹಾಲಯ

  • ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ: ವಿಶೇಷತೆ ಏನು? ಟಿಕೆಟ್‌ ದರ ಎಷ್ಟು?

    ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ: ವಿಶೇಷತೆ ಏನು? ಟಿಕೆಟ್‌ ದರ ಎಷ್ಟು?

    ನವದೆಹಲಿ: ಅಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ದೆಹಲಿಯಲ್ಲಿ ದೇಶದ ಎಲ್ಲ ಮಾಜಿ ಪ್ರಧಾನ ಮಂತ್ರಿಗಳಿಗೆ ಗೌರವ ಸಲ್ಲಿಸುವ ಪ್ರಯತ್ನ ಮಾಡಿದೆ. ಎಲ್ಲ ಪ್ರಧಾನಿಗಳ ಬಗೆಗಿನ ಮಾಹಿತಿಯುಳ್ಳ ಮ್ಯೂಸಿಯಂ ನಿರ್ಮಿಸಿದ್ದು ಇಂದು ಉದ್ಘಾಟನೆ ಮಾಡಲಾಗಿದೆ.

    ದೆಹಲಿಯ ತೀನ್ ಮೂರ್ತಿ ಎಸ್ಟೇಟ್ ನಲ್ಲಿ ನಿರ್ಮಾಣವಾಗಿರುವ ಪ್ರಧಾನ ಮಂತ್ರಿಗಳ ಮ್ಯೂಸಿಯಂ ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಪಕ್ಷ, ಸಿದ್ದಾಂತ, ಅಧಿಕಾರವಾಧಿಯನ್ನು ಲೆಕ್ಕಿಸದೇ ಭಾರತವನ್ನಾಳಿದ ಎಲ್ಲ ಪ್ರಧಾನಿಗಳ ಮಂತ್ರಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಟಿಕೆಟ್‌ ದರ ಎಷ್ಟು?
    ಮ್ಯೂಸಿಯಂನ ಪ್ರವೇಶದ ಮೊದಲ ಟಿಕೆಟ್‌ ಅನ್ನು ಪ್ರಧಾನಿ ಮೋದಿ ಖರೀದಿಸಿದರು. ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದರೆ 100 ರೂ. ನಿಗದಿ ಮಾಡಿದ್ದು, ಆಫ್‌ಲೈನ್‌ ಟಿಕೆಟ್‌ಗೆ 110 ರೂ. ದರವನ್ನು ನಿಗದಿ ಮಾಡಲಾಗಿದೆ. ವಿದೇಶಿ ಪ್ರಜೆಗಳಿಗೆ 750 ರೂ. ದರವನ್ನು ಇಡಲಾಗಿದೆ. 5-12 ರವರೆಗಿನ ಮಕ್ಕಳಿಗೆ ಶೇ.50 ಟಿಕೆಟ್‌ ದರ ಕಡಿತ ಮಾಡಲಾಗುತ್ತದೆ. 20ಕ್ಕಿಂತ ಹೆಚ್ಚಿನ ಗುಂಪಿನ ಸದಸ್ಯರು ಭೇಟಿ ನೀಡಿದರೆ ಶೇ.25ರಷ್ಟು ದರವನ್ನು ಕಡಿತ ಮಾಡಲಾಗುತ್ತದೆ.


    ವಿಶೇಷತೆ ಏನು?
    ದೆಹಲಿಯ ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ನಿರ್ಮಿಸಲಾಗಿರುವ ಈ ಮ್ಯೂಸಿಯಂ ಇದುವರೆಗಿನ ಎಲ್ಲಾ 14 ಭಾರತೀಯ ಪ್ರಧಾನ ಮಂತ್ರಿಗಳ ಜೀವನ ಮತ್ತು ಸಮಯವನ್ನು ಒಳಗೊಂಡಿದೆ ಮತ್ತು ಅವರ ಕೊಡುಗೆಗಳನ್ನು ಪ್ರದರ್ಶಿಸುತ್ತದೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ: ಮಾಜಿ ಸ್ಪೀಕರ್ ರಮೇಶ್ ಕುಮಾರ್

    10,000 ಚದರ ಮೀಟರ್‌ನಲ್ಲಿ ನಿರ್ಮಾಣವಾಗಿರುವ ಮ್ಯೂಸಿಯಂ ಮಾಜಿ ಪ್ರಧಾನಿಗಳ ವಿಷಯಗಳನ್ನು ಒಳಗೊಂಡಿದೆ. ಇದರ ನಿರ್ಮಾಣಕ್ಕಾಗಿ 271 ಕೋಟಿ ರೂ. ಖರ್ಚು ಮಾಡಲಾಗಿದ್ದು, 2018 ರಲ್ಲಿ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು.

    ಹಿಂದಿನ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25 ರಂದು ಉತ್ತಮ ಆಡಳಿತ ದಿನ ಅಥವಾ ಜನವರಿ 26 ರಂದು ವಸ್ತುಸಂಗ್ರಹಾಲಯದ ಉದ್ಘಾಟನೆಗೆ ಎರಡು ದಿನಾಂಕಗಳನ್ನು ಸರ್ಕಾರವು ಮೊದಲು ಯೋಚಿಸಿತ್ತು.

    ಪಿಎಂಒ ಪ್ರಕಾರ, ವಸ್ತುಸಂಗ್ರಹಾಲಯವು ಬ್ಲಾಕ್ I ಎಂದು ಗೊತ್ತುಪಡಿಸಿದ ಹಿಂದಿನ ತೀನ್ ಮೂರ್ತಿ ಭವನವನ್ನು ಬ್ಲಾಕ್ II ಎಂದು ಗೊತ್ತುಪಡಿಸಿದ ಹೊಸದಾಗಿ ನಿರ್ಮಿಸಲಾದ ಕಟ್ಟಡವನ್ನು ಸಂಯೋಜಿಸುತ್ತದೆ. ಎರಡು ಬ್ಲಾಕ್‌ಗಳ ಒಟ್ಟು ವಿಸ್ತೀರ್ಣ 15,600 ಚದರ ಮೀಟರ್‌ಗಿಂತಲೂ ಹೆಚ್ಚಿದೆ.

    ವಸ್ತುಸಂಗ್ರಹಾಲಯದ ಲೋಗೋ ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುವ ಧರ್ಮ ಚಕ್ರವನ್ನು ಹಿಡಿದಿರುವ ಭಾರತದ ಜನರ ಕೈಗಳನ್ನು ಪ್ರತಿನಿಧಿಸುತ್ತದೆ. ಇದನ್ನೂ ಓದಿ: ರಷ್ಯಾದಿಂದ ಹೊರನಡೆದ ಇನ್ಫೋಸಿಸ್

    ಆರ್ಕೈವ್‌ಗಳ ಸೂಕ್ತ ಬಳಕೆ, ಕೆಲವು ವೈಯಕ್ತಿಕ ವಸ್ತುಗಳು, ಉಡುಗೊರೆಗಳು ಮತ್ತು ಸ್ಮರಣಿಕೆಗಳು, ಪ್ರಧಾನ ಮಂತ್ರಿಗಳ ಭಾಷಣಗಳು ಮತ್ತು ಸಿದ್ಧಾಂತಗಳ ಉಪಾಖ್ಯಾನ ಪ್ರಾತಿನಿಧ್ಯ ಮತ್ತು ಅವರ ಜೀವನದ ವಿವಿಧ ಅಂಶಗಳನ್ನು ಸೇರಿಸಲಾಗಿದೆ.

    ಹೊಲೊಗ್ರಾಮ್‌ಗಳು, ವರ್ಚುವಲ್ ರಿಯಾಲಿಟಿ, ಮಲ್ಟಿ-ಟಚ್, ಮಲ್ಟಿಮೀಡಿಯಾ, ಸಂವಾದಾತ್ಮಕ ಕಿಯೋಸ್ಕ್‌ಗಳು, ಕಂಪ್ಯೂಟರೀಕೃತ ಚಲನ ಶಿಲ್ಪಗಳು, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ತಂತ್ರಜ್ಞಾನ ಒಳಗೊಂಡಿದೆ.

  • ಪಕ್ಷಭೇದವಿಲ್ಲದೆ ಎಲ್ಲಾ ಮಾಜಿ ಪ್ರಧಾನಿಗಳಿಗಾಗಿ ನಿರ್ಮಾಣವಾಗಲಿದೆ ಮ್ಯೂಸಿಯಂ

    ಪಕ್ಷಭೇದವಿಲ್ಲದೆ ಎಲ್ಲಾ ಮಾಜಿ ಪ್ರಧಾನಿಗಳಿಗಾಗಿ ನಿರ್ಮಾಣವಾಗಲಿದೆ ಮ್ಯೂಸಿಯಂ

    ನವದೆಹಲಿ: ರಾಷ್ಟ್ರಕ್ಕೆ ಸೇವೆ ಸಲ್ಲಿಸಿರುವ ಎಲ್ಲಾ ಮಾಜಿ ಪ್ರಧಾನಿಗಳಿಗಾಗಿ ಮೀಸಲಾಗಿರುವ ಭವ್ಯ ವಸ್ತುಸಂಗ್ರಹಾಲಯ(ಗ್ರ್ಯಾಂಡ್ ಮ್ಯೂಸಿಯಂ) ಒಂದನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

    ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗ್ರ್ಯಾಂಡ್ ಮ್ಯೂಸಿಯಂ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಮಾಜಿ ಪ್ರಧಾನಿಯಾಗಿದ್ದ ಎಲ್ಲಾ ನಾಯಕರಿಗೆ ಸಂಬಂಧ ಪಟ್ಟ ವಿವಿಧ ವಸ್ತುಗಳು, ವಿಚಾರವನ್ನು ಅವರವರ ಕುಟುಂಬಸ್ಥರಲ್ಲಿ ಹಂಚಿಕೊಳ್ಳಲು ಕೇಳಿಕೊಂಡರು. ಈ ಮಾಹಿತಿ, ವಸ್ತುಗಳನ್ನು ಸಂಗ್ರಹಿಸಿ ಗ್ರ್ಯಾಂಡ್ ಮ್ಯೂಸಿಯಂನಲ್ಲಿ ಇರಿಸಲಾಗುತ್ತದೆ ಎಂದರು.

    ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಎಲ್ಲಾ ಮಾಜಿ ಪ್ರಧಾನಿಗಳಿಗೆ ಮ್ಯೂಸಿಯಂ ಇರುತ್ತದೆ. ಮಾಜಿ ಪ್ರಧಾನಿಗಳಾದ ಚರಣ್ ಸಿಂಗ್, ದೇವೇಗೌಡ, ಐಕೆ ಗುಜ್ರಾಲ್, ಮತ್ತು ಡಾ. ಮನಮೋಹನ್ ಸಿಂಗ್ ಅವರು ಸೇರಿದಂತೆ ಎಲ್ಲಾ ನಾಯಕರ ಜೀವನದ ಅಂಶಗಳನ್ನು ಹಂಚಿಕೊಳ್ಳುವಂತೆ ಮೋದಿ ಅವರ ಕುಟುಂಬಗಳಲ್ಲಿ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಮೋದಿ ಕಾಂಗ್ರೆಸ್ ಹೆಸರನ್ನು ಪ್ರಸ್ತಾಪಿಸದೇ, ನಮ್ಮ ದೇಶದಲ್ಲಿ ಒಂದು ಗುಂಪು ಇದೆ. ಈ ಗುಂಪು ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್ ಅವರ ಸಾಧನೆಯನ್ನು ತೋರಿಸಲೇ ಇಲ್ಲ. ಈ ಗುಂಪು ಮೊರಾರ್ಜಿ ದೇಸಾಯಿ ಅವರನ್ನು ಕಡೆಗಣಿಸಿತ್ತು. ಆದರೆ ತಮಗೆ ಬೇಕಾದ ಪ್ರಧಾನಿಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿತು ಎಂದು ಟಾಂಗ್ ನೀಡಿದರು.

    ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಕೊಡುಗೆಗಳನ್ನು ಶ್ಲಾಘಿಸಿ, ನಮ್ಮ ರೈತರಿಗಾಗಿ, ಬಡವರಿಗಾಗಿ ಮತ್ತು ಅಂಚಿನಲ್ಲಿರುವವರಿಗಾಗಿ ಸದಾ ಕೆಲಸ ಮಾಡಿದ್ದಾರೆ. ಆದರೆ ಚಂದ್ರಶೇಖರ್ ಅವರ ಐತಿಹಾಸಿಕ ಪಾದಯಾತ್ರೆಯನ್ನು ಗೌರವಿಸಲಾಗಿಲ್ಲ ಎಂದು ಕಿಡಿಕಾರಿದರು.

    ಈಗಿನ ಕಾಲದಲ್ಲಿ ಒಬ್ಬ ಸಣ್ಣ ನಾಯಕ 10-12 ಕಿ.ಮೀ ಪಾದಯಾತ್ರೆ ಮಾಡಿದರೂ ಕೂಡ ಟಿವಿಯಲ್ಲಿ ಅದನ್ನೇ ದೊಡ್ಡ ವಿಷಯವಾಗಿ ಪ್ರಸಾರ ಮಾಡುತ್ತಾರೆ. ಆದರೆ, ಚಂದ್ರಶೇಖರ್ ಜಿ ಅವರ ಐತಿಹಾಸಿಕ ಪಾದಯಾತ್ರೆಯನ್ನು ನಾವು ಏಕೆ ಗೌರವಿಸಲಿಲ್ಲ? ಅವರು ಬಡವರು ಮತ್ತು ನಮ್ಮ ರೈತರಿಗಾಗಿ ಪಾದಯಾತ್ರೆ ನಡೆಸಿದರು. ಅವರಂತಹ ಮಹಾನ್ ನಾಯಕನಿಗೆ ನಾವು ಮಾಡಿದ ದೊಡ್ಡ ಅನ್ಯಾಯಗಳಲ್ಲಿ ಇದು ಕೂಡ ಒಂದು ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

    ದೇಶಕ್ಕಾಗಿ ಸೇವೆ ಸಲ್ಲಿಸಿದ ಪ್ರತಿ ನಾಯಕರಿಗೆ ಗೌರವ ಸಲ್ಲಬೇಕು. ನಾಯಕರು ಮತ್ತು ಜನರ ಸಾಮೂಹಿಕ ಪ್ರಯತ್ನದಿಂದ ಭಾರತವನ್ನು ನಿರ್ಮಿಸಲಾಗಿದೆ ಎಂದು ಮೋದಿ ಅವರು ನಂಬಿಕೆ ಇಟ್ಟಕೊಂಡಿದ್ದಾರೆ. ಹೀಗಾಗಿ ಪ್ರತಿ ಪ್ರಧಾನಮಂತ್ರಿಯ ಪರಂಪರೆಯನ್ನು ಗೌರವಿಸಬೇಕು, ಸಂರಕ್ಷಿಸಬೇಕು ಮತ್ತು ಪ್ರದರ್ಶಿಸಬೇಕು. ಇದು ಹೊಸ ಭಾರತವಾಗಿದ್ದು, ರಾಷ್ಟ್ರವನ್ನು ಮುಂದೆ ನಡೆಸುವ ಎಲ್ಲರ ಕೊಡುಗೆಗಳನ್ನು ಗೌರವಿಸುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.