Tag: ವಸುಂಧರಾ ರಾಜೇ

  • ಭಾರೀ ಕುತೂಹಲ ಹುಟ್ಟಿಸಿತು ವಸುಂಧರಾ ರಾಜೇ, ರಾಜಸ್ಥಾನ ಸಿಎಂ ಭೇಟಿ

    ಭಾರೀ ಕುತೂಹಲ ಹುಟ್ಟಿಸಿತು ವಸುಂಧರಾ ರಾಜೇ, ರಾಜಸ್ಥಾನ ಸಿಎಂ ಭೇಟಿ

    ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajanlal Sharma)  ಅವರು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ (Vasundhara Raje)  ಅವರನ್ನು ಭೇಟಿ ಮಾಡುವ ಮೂಲಕ ಭಾರೀ ಕುತೂಹಲ ಹುಟ್ಟಿಸಿದ್ದಾರೆ.

    ಭಜನ್‌ಲಾಲ್ ಶರ್ಮಾ ಅವರು ಸಿವಿಲ್ ಲೈನ್ಸ್‌ನಲ್ಲಿರುವ ರಾಜೇ ಅವರ ಅಧಿಕೃತ ನಿವಾಸದಲ್ಲಿ ಬೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯಾದ ಒಂದೂವರೆ ತಿಂಗಳ ನಂತರ ಸಿಎಂ ಭಜನ್‌ಲಾಲ್ ಶರ್ಮಾ ಮೊದಲ ಬಾರಿಗೆ ವಸುಂಧರಾ ರಾಜೇ ಅವರನ್ನು ಭೇಟಿಯಾಗಿದ್ದು, ಇದೀಗ ರಾಜಸ್ಥಾನದ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

    ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆದ ನಂತರ ಮುಖ್ಯಮಂತ್ರಿ ಹುದ್ದೆಗೆ ವಸುಂಧರಾ ರಾಜೇ ಅವರನ್ನು ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ. ಪಕ್ಷದ ಹೈಕಮಾಂಡ್ ಡಿಸೆಂಬರ್ 12 ರಂದು ಮೊದಲ ಬಾರಿಗೆ ಭಜನ್‌ ಲಾಲ್ ಶರ್ಮಾ ಅವರನ್ನು ಆಯ್ಕೆ ಮಾಡಿತು. ಇದಾದ ಬಳಿಕ ರಾಜೇ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಡಿಸೆಂಬರ್ 30 ರಂದು ನಡೆದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ‌ ಕೂಡ ಅವರು ಹಾಜರಾಗಿರಲಿಲ್ಲ. ಜನವರಿ 5 ರಂದು ಪಕ್ಷದ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶಾಸಕರಿಗೆ ಔತಣಕೂಟದಲ್ಲಿಯೂ ಅವರು ಭಾಗವಹಿಸಿರಲಿಲ್ಲ. ಇದನ್ನೂ ಓದಿ: ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ: ಮೋದಿ ಹೊಗಳಿದ ರೆಡ್ಡಿ

    ಭೇಟಿಯ ಹಿಂದಿನ ಗುಟ್ಟೇನು..?: ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ವಸುಂಧರಾ ರಾಜೇ ಅವರನ್ನು ರಾಜಸ್ಥಾನದ ಪ್ರಬಲ ನಾಯಕಿ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಕೆಣಕುವುದು ಪಕ್ಷಕ್ಕೆ ಇಷ್ಟವಿಲ್ಲ. ಹೀಗಾಗಿ ಹಾಲಿ ಸಿಎಂ ಭಜನಲಾಲ್ ಶರ್ಮಾ ಶುಕ್ರವಾರ ವಸುಂಧರಾ ರಾಜೇ ಅವರ ನಿವಾಸಕ್ಕೆ ಆಗಮಿಸಿ ಅವರನ್ನು ಭೇಟಿ ಮಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯವರು ಲೋಕಸಭೆ ಚುನಾವಣೆಗೆ ಮುನ್ನ ವಸುಂಧರಾ ರಾಜೆ ಅವರೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಲು ಈ ಮೂಲಕ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  • ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರ ನೇಮಿಸಿದ ಹೈಕಮಾಂಡ್

    ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರ ನೇಮಿಸಿದ ಹೈಕಮಾಂಡ್

    ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡದಲ್ಲಿ ಭರ್ಜರಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಗೆ ಮುಖ್ಯಮಂತ್ರಿ ಆಯ್ಕೆ Chief Minister Selection) ಕಗ್ಗಂಟಾಗಿ ಪರಿಣಮಿಸಿದೆ. ಡಿಸೆಂಬರ್‌ 3 ರಂದೇ ಫಲಿತಾಂಶ ಬಂದರೂ ಈವರೆಗೂ ಮುಖ್ಯಮಂತ್ರಿ ಆಯ್ಕೆಯಾಗಿಲ್ಲ. ಸಿಎಂ ಆಯ್ಕೆಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ಹೈಕಮಾಂಡ್ (BJP High Command) ಈಗ ವೀಕ್ಷಕರನ್ನು ನೇಮಿಸಿದೆ.

    ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ವೀಕ್ಷಕರ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ರಾಜ್ಯಸಭೆ ಸಂಸದ ಸರೋಜಾ ಪಾಂಡೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ನಿಯೋಜನೆಯಾಗಿದ್ದಾರೆ. ಮಧ್ಯಪ್ರದೇಶಕ್ಕೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ವೀಕ್ಷಕರ ಸಮಿತಿ ರಚಿಸಿದ್ದು ಓಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ ಲಕ್ಷ್ಮಣ್, ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾರನ್ನು ನಿಯೋಜಿಸಿದೆ. ಇದನ್ನೂ ಓದಿ: ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸ್ರಲ್ಲಿ ಕಮಿಷನ್‌ ಹಗರಣ – ಸದನದಲ್ಲಿ ಯತ್ನಾಳ್‌ ಬಾಂಬ್‌

    ಛತ್ತೀಸ್‌ಘಢಕ್ಕೆ ಮುಖ್ಯಮಂತ್ರಿ ಆಯ್ಕೆಗೆ ಕೇಂದ್ರ ಸಚಿವ ಅರ್ಜುನ್ ಮುಂಡಾ ನೇತೃತ್ವದಲ್ಲಿ ವೀಕ್ಷಕರ ನಿಯೋಜನೆ ಮಾಡಿದ್ದು ಸಮಿತಿಯಲ್ಲಿ ಕೇಂದ್ರ ಸಚಿವ ಸರ್ಬನಾಂದ ಸೋನೋವಾಲ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ನಿಯೋಜನೆ ಮಾಡಿದೆ. ವೀಕ್ಷಕರು ರಾಜ್ಯಗಳಿಗೆ ಭೇಟಿ ಮಾಡಿ ಶಾಸಕರ ಅಭಿಪ್ರಾಯ ಸಂಗ್ರಹಿಸಿಲಿದ್ದು ಶಾಸಕರ ಅಭಿಪ್ರಾಯದ ಮೇಲೆ ಹೈಕಮಾಂಡ್ ಸಿಎಂ ಆಯ್ಕೆ ಮಾಡಲಿದೆ.

    ಈ‌ ನಡುವೆ ಮುಖ್ಯಮಂತ್ರಿ ರೇಸ್‌ನಲ್ಲಿ ನಾಯಕರು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಲಾಭಿ ಆರಂಭಿಸಿದ್ದಾರೆ. ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ ಭೇಟಿ ಮಾತುಕತೆ ನಡೆಸಿದ್ದಾರೆ. ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಯೋಗಿ ಬಾಲಕನಾಥ್ ಭೇಟಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಕಾರು-ಬಸ್‌ ನಡುವೆ ಮುಖಾಮುಖಿ ಡಿಕ್ಕಿ – ಶಿರಸಿಯಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ

  • 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    ಜೈಪುರ: ರಾಜಸ್ಥಾನದ ಝಲ್ರಾಪಟನ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ವಸುಂಧರಾ ರಾಜೆ (Vasundhara Raje Scindia) ಅವರು, 53,193 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಕಾಂಗ್ರೆಸ್‌ ಅಭ್ಯರ್ಥಿ ರಾಮ್ ಲಾಲ್ ಚೌಹಾಣ್ ವಿರುದ್ಧ ವಸುಂಧರಾ 51,000ಕ್ಕೂ ಹೆಚ್ಚು ಮತಗಳ (Votes) ಅಂತರದಿಂದ ಗೆಲುವು ಸಾಧಿಸಿದ್ದಾರೆ. 25ನೇ ಸುತ್ತಿನ ನಂತರ ಒಟ್ಟು 1,38,831 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ಇದನ್ನೂ ಓದಿ: UPಗೆ ಯೋಗಿ ಆದಿತ್ಯನಾಥ್‌, ರಾಜಸ್ಥಾನಕ್ಕೆ ಬಾಲಕನಾಥ್‌ – ಸಿಎಂ ರೇಸ್‌ನಲ್ಲಿ ಮತ್ತೊಬ್ಬರು ಯೋಗಿ

    ತಮ್ಮ ಈ ಗೆಲುವಿನಿಂದ ಝಲ್ರಾಪಟನ್ ಕ್ಷೇತ್ರವೂ ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ. 2003ರಿಂದ ಝಲ್ರಾಪಟನ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ವಸುಂಧರಾ ಅವರು ಸತತ ಗೆಲುವಿನ ಓಟ ಮುಂದುವರಿಸಿದ್ದಾರೆ. ಈ ಬಾರಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾತುಗಳು ಬೆಂಬಲಿಗರಿಂದ ಕೇಳಿಬರುತ್ತಿದೆ.

    ಈ ಕುರಿತು ಮಾತನಾಡಿರುವ ವಸುಂಧರಾ ರಾಜೇ ಸಿಂಧಿಯಾ ಅವರು, ಇದು ಪ್ರಧಾನಿ ಮೋದಿ ಅವರ ಸಬ್ಕಾ ಸಾಥ್‌, ಸಬ್ಕಾ ವಿಶ್ವಾಸ್‌, ಸಬ್ಕಾ ಪ್ರಯಾಸ್‌ʼ ಮಂತ್ರ ತಂದ ಗೆಲುವು. ಇದು ಮೋದಿ ಗ್ಯಾರಂಟಿಯ (Modi Guarantee) ಗೆಲುವು, ಅಮಿತ್‌ ಶಾ (Amit Shah) ಕಾರ್ಯತಂತ್ರದ ಗೆಲುವು, ನಡ್ಡಾ ಜೀ ಅವರ ಸಮರ್ಥ ನಾಯಕತ್ವಕ್ಕೆ ಸಿಕ್ಕ ಗೆಲುವು, ಮುಖ್ಯವಾಗಿ ನಮ್ಮ ಪಕ್ಷದ ಕಾರ್ಯಕರ್ತರ ಗೆಲುವು ಎಂದು ಹೇಳಿದ್ದಾರೆ.

    ರಾಜಸ್ಥಾನವು ಒಟ್ಟು 199 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಬಹುಮತಕ್ಕೆ 100 ಸ್ಥಾನಗಳ ಅಗತ್ಯವಿದೆ. ಭಾನುವಾರ ಮಧ್ಯಾಹ್ನ 3 ಗಂಟೆ ನಂತರ ಫಲಿತಾಂಶದಲ್ಲಿ ಬಿಜೆಪಿ 115 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್‌ 69, ಇತರೆ 15 ಸ್ಥಾನಗಳಲ್ಲಿವೆ. ಇದನ್ನೂ ಓದಿ: ಕೆಸಿಆರ್‌, ಕೆಟಿಆರ್‌ಗೆ ತೆಲಂಗಾಣ ಜನರೇ ಉತ್ತರ ಕೊಟ್ಟಿದ್ದಾರೆ: ‘ಕೈ’ ಮುನ್ನಡೆಗೆ ಡಿಕೆಶಿ ಪ್ರತಿಕ್ರಿಯೆ

  • ಕನಿಕಾ ಪಾರ್ಟಿಯಲ್ಲಿ ವಸುಂಧರಾ, ದುಶ್ಯಂತ್ ಭಾಗಿ – ಸಂಸತ್ ಕಲಾಪಕ್ಕೂ ಹಾಜರ್

    ಕನಿಕಾ ಪಾರ್ಟಿಯಲ್ಲಿ ವಸುಂಧರಾ, ದುಶ್ಯಂತ್ ಭಾಗಿ – ಸಂಸತ್ ಕಲಾಪಕ್ಕೂ ಹಾಜರ್

    – ಕನಿಕಾ ಕಪೂರ್‌ಗೆ ಕೊರೊನಾ ಸೋಂಕು
    – ಸಂಸತ್ತಿನಲ್ಲಿ ಹಲವು ಸದಸ್ಯರನ್ನು ಸಂಪರ್ಕಿಸಿದ್ದ ದುಶ್ಯಂತ್

    ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್‍ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಸುಂಧರಾ ರಾಜೇ ಮತ್ತು ಪುತ್ರ ಸಂಸದ ದುಶ್ಯಂತ್ ಸಿಂಗ್ ಈಗ ಜನಸಂಪರ್ಕದಿಂದ ಪ್ರತ್ಯೇಕಗೊಂಡಿದ್ದಾರೆ.

    41 ವರ್ಷದ ಕನಿಕಾ ಕಪೂರ್ ಮಾರ್ಚ್ 9 ರಂದು ಲಂಡನ್‍ನಿಂದ ಮುಂಬೈಗೆ ಆಗಮಿಸಿದ್ದರು. ಬಳಿಕ ಲಕ್ನೋದಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ 200ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ವಸುಂಧರ ರಾಜೇ ಮತ್ತು ಅವರ ಪುತ್ರ ದುಶ್ಯಂತ್ ಮತ್ತು ಅವನ ಮಾವ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾದ ಬಳಿಕ ದುಶ್ಯಂತ್ ಸಿಂಗ್ ಸಂಸತ್ ಕಲಾಪಕ್ಕೆ ಹಾಜರಾಗಿದ್ದು ಹಲವು ಸದಸ್ಯರು ಇವರ ಸಂಪರ್ಕಕ್ಕೆ ಬಂದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ವಸುಂಧರಾ ರಾಜೇ ಅವರು, ಲಖನೌದಲ್ಲಿ ಒಂದು ಡಿನ್ನರ್ ಪಾರ್ಟಿಗೆ ನಾನು ನನ್ನ ಮಗ ದುಶ್ಯಂತ್ ಮತ್ತು ಅವನ ಮಾವ ರಾತ್ರಿ ಹೋಗಿದ್ದೆವು. ದುರದೃಷ್ಟವಶಾತ್ ಇಂದು ಕೊರೊನಾ ಇರುವುದು ದೃಢಪಟ್ಟಿರುವ ಗಾಯಕಿ ಕನಿಕಾ ಸಹ ಅಲ್ಲಿಗೆ ಅತಿಥಿಯಾಗಿ ಬಂದಿದ್ದರು. ವಿಷಯ ತಿಳಿದ ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ನಾನು ಮತ್ತು ನನ್ನ ಮಗ ಸ್ವತಃ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಅಂದು ಕನಿಕಾ ಕಪೂರ್ ಅತಿಥಿಯಾಗಿದ್ದ ಕಾರ್ಯಕ್ರಮಕ್ಕೆ ಲಕ್ನೋದ ಪ್ರಮುಖ ವ್ಯಕ್ತಿಗಳು, ಸಚಿವರು ಹಾಗೂ ಅಧಿಕಾರಿಗಳು ಬಂದಿದ್ದರು. ಮೂಲಗಳ ಪ್ರಕಾರ ಸುಮಾರು 200 ಜನರು ಕಾರ್ಯಕ್ರಮದಲ್ಲಿ ಸೇರಿದ್ದರು. ಮಾರ್ಚ್ 9ರಂದು ಕನಿಕಾ ಲಂಡನ್‍ನಿಂದ ಮುಂಬೈಗೆ ಬಂದಿದ್ದರು. ಇದಾದ ಎರಡು ದಿನಗಳ ನಂತರ ಲಕ್ನೋಗೆ ತೆರಳಿದ್ದರು. ಲಕ್ನೋದಲ್ಲಿ ಮಾರ್ಚ್ 15ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ವಸುಂಧರಾ ರಾಜೇ, ದುಶ್ಯಂತ್ ಸಿಂಗ್ ಸೇರಿದಂತೆ ಹಲವರು ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದರು.

    ಈ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ದುಶ್ಯಂತ್ ಸಿಂಗ್ ಉತ್ತರ ಪ್ರದೇಶ ಮತ್ತು ರಾಜಸ್ತಾನದ ಸಂಸದರ ನಿಯೋಗದ ಅಂಗವಾಗಿ ಬುಧವಾರ ರಾಷ್ಟ್ರಪತಿಯನ್ನು ಭೇಟಿಯಾಗಿದ್ದರು. ಶುಕ್ರವಾರ ಅವರನ್ನು ಭೇಟಿಯಾದ ಮಾಜಿ ಕೇಂದ್ರ ಸಚಿವ ಅನುಪ್ರಿಯಾ ಪಟೇಲ್, ಕಾಂಗ್ರೆಸ್ಸಿನ ಜಿತಿನ್ ಪ್ರಸಾದ್ ಮತ್ತು ದೀಪಿಂದರ್ ಹೂಡಾ ಅವರು ಅವರ ಮನೆಯಲ್ಲೇ ಐಸೋಲೇಟೆಡ್ ಆಗಿದ್ದಾರೆ.

    ಲಕ್ನೋ ಕಾರ್ಯಕ್ರಮ ಮುಗಿದ ನಂತರ ದುಶ್ಯಂತ್ ಸಿಂಗ್ ಅವರು ಸಂಸತ್ತಿಗೆ ಹೋಗಿದ್ದರು. ಈ ವಿಚಾರವಾಗಿ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಡೆರಿಕ್ ಓಬ್ರೀನ್, ಸ್ವತಃ ಪ್ರತ್ಯೇಕವಾಗಿ ಎಚ್ಚರಿಕೆಯ ನಡೆ ಅನುಸರಿಸುವಂತೆ ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ದೇಶದಲ್ಲಿ ಸಂಸತ್ತು ಕಾರ್ಯನಿರ್ವಹಿಸುತ್ತಿದೆ. ಸಂಸತ್ ಅಧಿವೇಶನವನ್ನು ಮುಂದೂಡಬೇಕು. ನಾನು ಒಂದು ದಿನ ದುಶ್ಯಂತ್ ಪಕ್ಕದಲ್ಲಿ ಎರಡೂವರೆ ಗಂಟೆ ಕುಳಿತಿದ್ದೆ. ಹಾಗಾಗಿ ನಾನು ಮನೆಯಲ್ಲಿ ಪ್ರತ್ಯೇಕವಾಗಿ ಇದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಲಕ್ನೋದಲ್ಲಿ ಕಾರ್ಯಕ್ರಮ ಮುಗಿದ ನಂತರ ದುಶ್ಯಂತ್ ಸಿಂಗ್ ಗುರುವಾರ ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ನಿಶಿಕಾಂತ್ ಮತ್ತು ಮನೋಜ್ ತಿವಾರಿ ಅವರೊಂದಿಗೆ ಕುಳಿತಿದ್ದರು. ಅವರು ಅಂದು ಯಾರನ್ನೆಲ್ಲ ಸಂಪರ್ಕಿಸಿದ್ದಾರೆ ಎನ್ನುವ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಜೊತೆಗೆ ಕನಿಕಾ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಇದ್ದ ಎಲ್ಲರೂ ಸ್ವಯಂ ಪ್ರೇರಿತವಾಗಿ ಪ್ರತ್ಯೇಕವಾಗಿ ವಾಸಿಸುವಂತೆ ಉತ್ತರ ಪ್ರದೇಶ ಆರೋಗ್ಯ ಇಲಾಖೆ ಸೂಚಿಸಿದೆ. ಸೋಂಕಿನ ಲಕ್ಷಣಗಳು ಕಂಡು ಬಂದರೆ ವರದಿ ಮಾಡುವಂತೆ ತಿಳಿಸಿದೆ.

    https://www.instagram.com/p/B98tXqnFqE2/

    ನಾನು ಲಂಡನ್‍ನಿಂದ ಬಂದಾಗ 10 ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ಕ್ಯಾನಿಂಗ್‍ಗೆ ಒಳಪಡಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ರೋಗದ ಗುಣ ಕಂಡು ಬಂದಿರಲಿಲ್ಲ. ಆದರೆ ನಾನು ಮನೆಗೆ ಬಂದ ನಂತರದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಜ್ವರ, ನೆಗಡಿಯ ಲಕ್ಷಣಗಳು ಕಾಣಿಸಿಕೊಂಡಿತು. ತಕ್ಷಣ ನಾನು ವೈದ್ಯರ ಬಳಿ ಬಂದು ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ನಿಮಗೂ ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಾಣಿಸಿಕೊಂಡರೆ, ಪ್ರತ್ಯೇಕವಾಗಿ ಉಳಿದು ಕೂಡಲೇ ಪರೀಕ್ಷೆಗೆ ಒಳಗಾಗಿ ಎಂದು ಕನಿಕಾ ಕಪೂರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

  • ಬಿಜೆಪಿ ತೊರೆದ ನಾಯಕರೇ ಕಾಂಗ್ರೆಸ್‍ಗೆ ಅಸ್ತ್ರವಾದ್ರು

    ಬಿಜೆಪಿ ತೊರೆದ ನಾಯಕರೇ ಕಾಂಗ್ರೆಸ್‍ಗೆ ಅಸ್ತ್ರವಾದ್ರು

    -ರಾಜಸ್ಥಾನ ಸಿಎಂ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಸ್ವಂತ್ ಸಿಂಗ್ ಪುತ್ರ

    ಜೈಪುರ್: ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರನ್ನು ಸೋಲಿಸಲು ಕಾಂಗ್ರೆಸ್ ಪ್ರಬಲ ಅಸ್ತ್ರ ಪ್ರಯೋಗ ಮಾಡಿದ್ದು, ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ.

    ನಾಮಪತ್ರ ಸಲ್ಲಿಕೆಗೆ ನವೆಂಬರ್ 19 ಕೊನೆಯ ದಿನವಾಗಿದ್ದು, ಇಂದು ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ ವಸುಂದರಾ ರಾಜೇ ಅವರಿಗೆ ಶಾಕ್ ಕೊಟ್ಟಿದೆ. ಮುಖ್ಯಮಂತ್ರಿ ವಸುಂದರಾ ರಾಜೇ ಸ್ಪರ್ಧಿಸಿರುವ ಜಲ್ವಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾನವೇಂದ್ರ ಅವರನ್ನು ಕಣಕ್ಕೆ ಇಳಿಸಲಾಗಿದೆ. ಈ ಮೂಲಕ ರಾಜಸ್ಥಾನದ ಬಿಜೆಪಿಯ ಇಬ್ಬರು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ನಾಯಕರು ಭಾರೀ ರಣತಂತ್ರ ರೂಪಿಸುತ್ತಿದ್ದಾರೆ.

    ರಜಪೂತರ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. 2003ರಿಂದಲೂ ವಸುಂಧರಾ ರಾಜೇ ಜಲ್ವಾರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಹೀಗಾಗಿ ಇಂದು ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಈ ರಣತಂತ್ರ ಹೂಡಿದೆ ಎನ್ನಲಾಗಿದೆ.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಕಾಂಗ್ರೆಸ್‍ಗೆ ಸೇರಿದ್ದು, ಕೈ ಪಾಳಯಕ್ಕೆ ಬಲ ಬಂದಂತಾಗಿದೆ. ಮಾನವೇಂದ್ರ ಸಿಂಗ್ ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ಬೆನ್ನಲ್ಲೇ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ಸಂಸದ ಹರೀಶ್ ಮೀನಾ ಅವರು ನವೆಂಬರ್ 14ರಂದು ಕಾಂಗ್ರೆಸ್ ಮನೆ ಪ್ರವೇಶ ಮಾಡಿದ್ದರು. ಈ ಭಾರೀ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲಿವೆ.

    ವಸುಂದರಾ ರಾಜೇ ಪ್ರತಿಕ್ರಿಯೆ:
    ನನ್ನ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಅವರನ್ನು ನನ್ನ ವಿರುದ್ಧ ಕಣಕ್ಕಿಳಿಸಿದ್ದಾರೆ ಎಂದು ರಾಜಸ್ಥಾನ ಸಿಎಂ ವಸುಂಧರಾ ರಾಜೇ ಕಿಡಿಕಾರಿದ್ದಾರೆ.

    ಜಲ್ವಾರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಕಾಂಗ್ರೆಸ್‍ನಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆಯಿದೆ. ಇದರಿಂದಾಗಿ ಇಲ್ಲಿಂದ ಹೋದವರಿಗೆ ಟಿಕೆಟ್ ನೀಡಿದ್ದಾರೆ. ನಾವು ಅವರನ್ನು ಇಲ್ಲಿಂದಲೂ ಹೊರ ಹಾಕುತ್ತೇವೆ ಎಂದು ಮಾನವೇಂದ್ರ ಸಿಂಗ್ ವಿರುದ್ಧ ಹರಿಹಾಯ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews