Tag: ವಸತಿ ನಿಲಯ

  • ವಿದ್ಯಾರ್ಥಿಗಳಿಗೆ ಬಟ್ಟೆ ತೊಳೆಯುವುದನ್ನು ಕಲಿಸಿಕೊಟ್ಟ ಜಿ.ಪಂ ಸಿಇಓ

    ವಿದ್ಯಾರ್ಥಿಗಳಿಗೆ ಬಟ್ಟೆ ತೊಳೆಯುವುದನ್ನು ಕಲಿಸಿಕೊಟ್ಟ ಜಿ.ಪಂ ಸಿಇಓ

    ಯಾದಗಿರಿ: ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬಟ್ಟೆ ತೊಳೆಯುವ ಪಾಠ ಹೇಳಿಕೊಟ್ಟು ಸದ್ಯ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಓ ಕವಿತಾ ಮನ್ನಿಕೇರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇಂದು ರಜೆಯಿದ್ದರೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ತಾಲೂಕಿನ ಲಿಂಗೇರಿ ಸ್ಟೇಷನ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಸಿಇಓ ಕವಿತಾ ಮನ್ನಿಕೇರಿ ಭೇಟಿ ನೀಡಿದ್ದರು. ಮೊದಲಿಗೆ ವಸತಿ ನಿಲಯದ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಶಾಲೆ ಆವರಣದಲ್ಲಿ ಚಿಕ್ಕ ಚಿಕ್ಕ ವಿದ್ಯಾರ್ಥಿಗಳು ಬಟ್ಟೆಗಳನ್ನು ತೊಳೆಯಲು ಹರಸಾಹಸ ಪಡುವುದನ್ನು ಕಂಡು ಅವರ ಬಳಿಗೆ ತೆರಳಿ, ಬಟ್ಟೆಗಳನ್ನು ಹೇಗೆ ತೊಳೆಯಬೇಕು ಅಂತ ಕಲಿಸಿಕೊಟ್ಟಿದ್ದಾರೆ.

    ಬರಿ ಬಾಯಿ ಮಾತಿನಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆ ಹೇಗೆ ತೊಳಿಯಬೇಕು ಅಂತ ಹೇಳದೇ, ಖುದ್ದಾಗಿ ತಾವೇ ವಿದ್ಯಾರ್ಥಿಯೋರ್ವನ ಬಟ್ಟೆ ತೊಳೆದು ಹೇಗೆ ಬಟ್ಟೆಯನ್ನು ತೊಳೆಯಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ವಿದ್ಯಾರ್ಥಿಗಳ ಜೊತೆ ಸಾಕಷ್ಟು ಕಾಲಕಳೆದ ಸಿಇಓ ಕವಿತಾ ಅವರು, ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಹೇಳಿಕೊಟ್ಟಿದ್ದಾರೆ. ಉನ್ನತ ಅಧಿಕಾರಿ ಎಂಬುದನ್ನು ಮರೆತು ಮಕ್ಕಳ ಜೊತೆ ತಾವು ಮಗುವಂತೆ ನಕ್ಕು ನಲಿದ ಕವಿತಾ ಅವರ ಸರಳತೆಗೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಾಸ್ಟೆಲ್‍ನಲ್ಲಿ ಇರಲು ಐಡಿ ಬೇಕಿಲ್ಲ, ಕಾರಣ ಬೇಕಿಲ್ಲ-ಕರ್ನಾಟಕ ವಿವಿ ಅಲ್ಲ, ಕ್ಲರ್ಕ್ ವಿವಿ..!

    ಹಾಸ್ಟೆಲ್‍ನಲ್ಲಿ ಇರಲು ಐಡಿ ಬೇಕಿಲ್ಲ, ಕಾರಣ ಬೇಕಿಲ್ಲ-ಕರ್ನಾಟಕ ವಿವಿ ಅಲ್ಲ, ಕ್ಲರ್ಕ್ ವಿವಿ..!

    -ವಿವಿಗೆ ಸೇರಬೇಕಿದ್ದ ಲೇಡಿಸ್ ಹಾಸ್ಟೆಲ್ ದುಡ್ಡು ಮೇಡಂ ಪರ್ಸ್ ಗೆ..!

    ಧಾರವಾಡ: ವಿದ್ಯಾಕಾಶಿ ಧಾರವಾಡಕ್ಕೆ ಪ್ರತಿ ದಿನ ಸಾವಿರಾರು ವಿದ್ಯಾರ್ಥಿಗಳು ಬಂದು ಹೋಗ್ತಾರೆ. ಅವರು ಬಂದಾಗ ಅವರಿಗೆ ಉಳಿದುಕೊಳ್ಳಲು ವಸತಿ ನಿಲಯವೊಂದು ನಿರ್ಮಾಣ ಮಾಡಲಾಗಿದೆ. ಅದುವೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ. ಇದು ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಸತಿ ನಿಲಯವಾಗಿದ್ದರೂ, ಇದನ್ನು ಕರ್ನಾಟಕ ವಿವಿ ಸುಪರ್ದಿಗೆ ನೀಡಲಾಗಿದೆ. ಕರ್ನಾಟಕ ವಿವಿಯ ಸಿಬ್ಬಂದಿಯೇ ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಾರೆ.

    ವಸತಿ ನಿಲಯದಲ್ಲಿ ಕೆಲಸ ಮಾಡುವ ಕ್ಲರ್ಕ್ ಮೇಡಂ ಶಿಲ್ಪಾ ಏರೆಸಿಮೇ ಇಲ್ಲಿ ಬರುವ ವೃತ್ತಿ ನಿರತ ಹಾಗೂ ವಿದ್ಯಾರ್ಥಿನಿಯರ ಬಾಡಿಗೆ ಹಣವನ್ನ ಬ್ಯಾಂಕಿಗೆ ಕಟ್ಟಬೇಕು. ಆದರೆ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಇವರು ಸಿಕ್ಕಿ ಬಿದ್ದಿದ್ದಾರೆ. ಈ ವಸತಿ ನಿಲಯದಲ್ಲಿ ಬಂದು ತಂಗುವ ಅತಿಥಿಗಳಿಗೆ ಪ್ರತಿ ದಿನಕ್ಕೆ 60 ರೂಪಾಯಿ ಬಾಡಿಗೆ ಇದೆ. ಇಲ್ಲಿ ಬಂದು ತಂಗುವವರು ಬ್ಯಾಂಕಿಗೆ ಹೋಗಿ ಹಣ ಕಟ್ಟಿ ಬರಬೇಕು. ಆದರೆ ಈ ಕ್ಲರ್ಕ್ ಅಮ್ಮಾ ಅದನ್ನು ಬ್ಯಾಂಕಿಗೆ ಕಟ್ಟದೇ ತನ್ನ ಜೇಬಿಗೆ ಇಳಿಸುತ್ತಿರುವುದು ಕಂಡು ಬಂದಿದೆ.

    ಬಂದವರು ಯಾರು, ಅವರ ಗುರುತಿನ ಚೀಟಿ ಕೂಡಾ ಇಲ್ಲದೇ ಅವರಿಗೆ ಇಲ್ಲಿ ದಾಖಲಾತಿ ನೀಡಲಾಗುತ್ತಿದೆ. ಇಲ್ಲಿ ಒಬ್ಬ ಗೆಸ್ಟ್ ತಂಗಿದರೆ ಅವರಿಗೆ ಪ್ರತಿ ತಿಂಗಳಿಗೆ 1,800 ಬಾಡಿಗೆ ಇರುತ್ತದೆ. ಪ್ರತಿ ತಿಂಗಳು ಇಲ್ಲಿ 150 ಕ್ಕೂ ಹೆಚ್ಚು ಅತಿಥಿಗಳು ಬಂದು ಇರುತ್ತಾರೆ. ಆದರೆ ಅದರಲ್ಲಿ ಅರ್ಧ ಹಣ ಇದೇ ಕ್ಲರ್ಕ್ ಲಪಟಾಯಿಸುತ್ತಿದ್ದು, ಇದರಿಂದ ಸರ್ಕಾರಕ್ಕೆ ಸೇರಬೇಕಾಗಿದ್ದ ಹಣದಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ಹಣ ಗುಳುಂ ಮಾಡಲಾಗುತ್ತಿದೆ.

    ನೆಟ್-ಸೆಟ್ ಪರೀಕ್ಷೆಗಳಿದ್ದಾಗ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಾರೆ. ಒಂದು ದಿನ ಬಂದು ಹೋಗುವ ಗೆಸ್ಟ್ ಗಳ ಲೆಕ್ಕವೇ ಇಲ್ಲಿ ಇಲ್ಲದಂತಾಗಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡುವ ವೇಳೆ ಕ್ಲರ್ಕ್, 4 ದಿನ ವಸತಿ ನಿಲಯದಲ್ಲಿ ಬಂದು ಇರುವ ಆ ವಿದ್ಯಾರ್ಥಿನಿಯ ಹಣ ಪಡೆದು, ಬ್ಯಾಂಕಿಗೆ ಕೂಡಾ ಕಟ್ಟಿಲ್ಲ. ಪ್ರತಿ ದಿನಕ್ಕೆ 60 ರಂತೆ ನಾಲ್ಕು ದಿನದ 240 ಹಣ ಕಟ್ಟಿರುವ ವಿದ್ಯಾರ್ಥಿನಿ ಜೊತೆ ಮಾತನಾಡಿರುವ ಕ್ಲರ್ಕ್ ಮೇಡಮ್, ವಿದ್ಯಾರ್ಥಿನಿ ಕೊಟ್ಟ ಹಣವನ್ನ ಬ್ಯಾಂಕ್ ಚಲನ್ ನಲ್ಲಿ ಸುತ್ತಿ ಇಟ್ಟುಕೊಂಡಿದ್ದಾಳೆ. ಇನ್ನು ಆ ವಿದ್ಯಾರ್ಥಿನಿ ಅಲ್ಲಿ ಬಂದು ಇದ್ದಳೋ, ಅಥವಾ ಇಲ್ಲವೋ ಎಂದು ಕೂಡಾ ಮೇಡಮ್‍ಗೆ ಗೊತ್ತೇ ಇಲ್ಲ. ಸರ್ಕಾರಿ ಸಂಬಳ ಪಡೆಯುವ ಶಿಲ್ಪಾ ಮೇಡಮ್ ಗೆ ಗಿಂಬಳ ಕೂಡಾ ಬೇಕೇ ಬೇಕು.

    ಒಟ್ಟಿನಲ್ಲಿ ಸರ್ಕಾರಕ್ಕೆ ಕಟ್ಟುವ ಹಣ ಎಲ್ಲಾ ಮೇಡಮ್ ಅವರ ಪರ್ಸ್‍ನಲ್ಲಿ ಇಳಿಯುತ್ತಿದ್ದು, ಪ್ರತಿ ವರ್ಷ ಇವರು ಮಾಡಿದ ಈ ಕೆಲಸದಿಂದ ಸರ್ಕಾರಕ್ಕೆ 2 ಲಕ್ಷ ನಷ್ಟ ಆಗುತ್ತಿದೆ. ಇದರ ಹಿಂದೆ ಇನ್ನು ಎಷ್ಟು ಜನರು ಕೂಡಿ ಇದನ್ನು ಮಾಡುತ್ತಿದ್ದಾರೆ. ಅನ್ನೋದನ್ನು ಕರ್ನಾಟಕ ವಿವಿ ಆಡಳಿತ ಮಂಡಳಿಯೇ ತನಿಖೆ ನಡೆಸಬೇಕಿದೆ.

    ಕ್ಲರ್ಕ್ ಹಾಗೂ ವಿದ್ಯಾರ್ಥಿನಿ ನಡುವೆ ನಡೆದ ಮಾತುಕತೆ:
    ವಿದ್ಯಾರ್ಥಿನಿ: ಮೇಡಮ್ ಹಾಸ್ಟೇಲ್ ಅಡ್ಮಿಷನ್ ಆಗಬೇಕಿತ್ತು.
    ಕ್ಲರ್ಕ್ ಶಿಲ್ಪಾ: ಇಲ್ಲ ಕೊಡಲ್ಲ, ಯಾರು ನೀವು?

    ವಿದ್ಯಾರ್ಥಿನಿ: ನಾನು ಬಿಕಾಂ ಮುಗಿಸಿದ್ದೇನೆ, ಈಗ ಎಂಕಾಂ ಮಾಡೋಕೇ ಬಂದಿದ್ದೆನೆ, ಸ್ವಲ್ಪ ತೊಂದರೆ ಇರುವ ಕಾರಣ 10 ದಿನ ಇಲ್ಲೇ ಇರಬೇಕಾಗಿದೆ.
    ಕ್ಲರ್ಕ್ ಶಿಲ್ಪಾ: ಟೆನ್ ಡೇಸ್ ಅಷ್ಟೇನಾ? ಇದೇ ಯುನಿವರ್ಸಿಟಿ ಸ್ಟುಡೆಂಟಾ! ಮತ್ತೇ ಯುನಿಫಾರ್ಮ್‍ನಲ್ಲಿ ಬಂದಿರಲ್ಲ?

    ವಿದ್ಯಾರ್ಥಿನಿ: ಮೊದಲು ನಾನು ಬೇರೆ ಕಾಲೇಜಿನಲ್ಲಿ ಓದ್ತಿದ್ದೆ, ಆ ಕಾಲೇಜಿನ ಡ್ರೆಸ್ ಇದು ಮೇಡಮ್.
    ಕ್ಲರ್ಕ್ ಶಿಲ್ಪಾ: 10 ಡೇಸ್ ಇರ್ತಿರಾ ಅಂದ ಮೇಲೆ ಹಾಲ್‍ನಲ್ಲಿ ಇರ್ತಿರಾ?

    ವಿದ್ಯಾರ್ಥಿನಿ: ನಡೆಯುತ್ತೆ ಮೇಡಮ್.
    ಕ್ಲರ್ಕ್ ಶಿಲ್ಪಾ: ನಡೀತದಾ, ಓಕೆ ಹಾಗಿದ್ರೆ ಒಂದು ಆಧಾರ್ ಕಾರ್ಡ್ ಜೆರಾಕ್ಸ್ ಕೊಡಿ.

    ವಿದ್ಯಾರ್ಥಿನಿ: ನಾಳೆ ತಂದು ಕೊಡುತ್ತೇನೆ ಮೇಡಂ, ಸದ್ಯಕ್ಕೆ ಅಮೌಂಟ್ ಕೊಟ್ಟು ಹೋಗ್ತೇನೆ.
    ಕ್ಲರ್ಕ್ ಶಿಲ್ಪಾ: ಸರಿ ಕೊಟ್ಟು ಹೋಗಿ, ಒಂದು ಆಧಾರ ಜೆರಾಕ್ಸ್ ಇಲ್ವಾ, ನಿಮ್ಮ ಹೆಸರೆನು?

    ವಿದ್ಯಾರ್ಥಿನಿ: ಸೌಮ್ಯ ಪತ್ರಿಮಠ
    ಕ್ಲರ್ಕ್ ಶಿಲ್ಪಾ: 10 ಡೇಸ್ ಅಷ್ಟೇ ಇರಬೇಕು. ಮತ್ತೆ ವರ್ಷಗಟ್ಟಲೆ ಇರೋ ಹಾಗಿಲ್ಲ.

    ವಿದ್ಯಾರ್ಥಿನಿ: ನಾನು ಪಿಜಿಯಲ್ಲಿ ಇದ್ದೆ ಮೇಡಮ್, ಸ್ವಲ್ಪ ಪ್ರಾಬ್ಲಂ ಆಗಿದೆ. ಅದಕ್ಕೆ ಇಲ್ಲಿ ಬಂದಿದ್ದೇನೆ.
    ಕ್ಲರ್ಕ್ ಶಿಲ್ಪಾ: ಹೌದಾ, ಹಾಲ್‍ನಲ್ಲಿರಬೇಕು ನೋಡಿ

    ವಿದ್ಯಾರ್ಥಿನಿ: ಮೇಡಂ ಹಾಲ್ ಎಲ್ಲಿದೆ?
    ಕ್ಲರ್ಕ್ ಶಿಲ್ಪಾ: ಮೇಲಿದೆ, ನೋಡ್ಕೊಂಡ್ ಬರ್ತಿರಾ,

    ವಿದ್ಯಾರ್ಥಿನಿ: ಅಮೌಂಟ್ ಎಷ್ಟು ಮೇಡಮ್, ನಾನು 10 ದಿನ ಇರುತ್ತೇನೆ. ಸದ್ಯ 5 ದಿನದ ಅಮೌಂಟ್ ತಗೊಳ್ಳಿ ಮೇಡಮ್,
    ಕ್ಲರ್ಕ್ ಶಿಲ್ಪಾ: ಹೌದಾ ಓಕೆ.. ನಿಮ್ ಆಧಾರ್ ಕಾರ್ಡ್ ಜೆರಾಕ್ಸ್ ಬೇಕಲ್ವ.. ನಾಳೆ ತಗೊಂಡ ಬರ್ತಿರಾ..?

    ವಿದ್ಯಾರ್ಥಿನಿ: ಸರಿ ಮೇಡಮ್
    ಕ್ಲರ್ಕ್ ಶಿಲ್ಪಾ: ಹೆಸರು ಹೇಳ್ರಿ ನಿಮ್ದು,

    ವಿದ್ಯಾರ್ಥಿನಿ: ಸೌಮ್ಯ ಪತ್ರಿಮಠ
    ಕ್ಲರ್ಕ್ ಶಿಲ್ಪಾ: ಯಾವ ಊರು ನಿಮ್ದು

    ವಿದ್ಯಾರ್ಥಿನಿ: ದೇಗುನ ಹಳ್ಳಿ
    ಕ್ಲರ್ಕ್ ಶಿಲ್ಪಾ: ಎಲ್ಲಿದೆ ಅದು

    ವಿದ್ಯಾರ್ಥಿನಿ: ಕಿತ್ತೂರ ತಾಲೂಕು ಮೇಡಮ್
    ಕ್ಲರ್ಕ್ ಶಿಲ್ಪಾ: ಇಲ್ಲೊಂದು ಸಹಿ ಮಾಡಿ, ನಾಳೆ ಬರಬೇಕು ಮತ್ತೆ.. ಬಂದು ಆಧಾರ್ ಕಾರ್ಡ್ ಜೆರಾಕ್ಸ್ ಕೊಡಬೇಕು. ನಿಮ್ ಜೊತೆ ಬಂದವರು ಎಲ್ಲಿರುತ್ತಾರೆ?

    ವಿದ್ಯಾರ್ಥಿನಿ: ಅವರು ಲೋಕಲ್ ಮೇಡಮ್..
    ಕ್ಲರ್ಕ್ ಶಿಲ್ಪಾ: ಲೋಕಲ್ಲ.. ನಾಳೆ ಬರಬೇಕು.. ಆಧಾರ್ ಕಾರ್ಡ್ ಜೆರಾಕ್ಸ್ ತನ್ನಿ. ಒಂದು ವೇಳೆ ನಾನು ನಾಳೆ ಇಲ್ಲದೇ ಇದ್ದರೂ ಡೋರ್ ಕೆಳಗೆ ಹಾಕಿ.. ಚೇಂಜ್ ಕೊಡಿ ಚೇಂಜ್ ಬೇಕು. ಇದು ಅಂಗಡಿ ಅಲ್ಲ, ಚಲನ್ ತುಂಬಿಸೋದು ಅಷ್ಟೇ ಕೆಲಸ ಇಲ್ಲಿ. ಯಾವುರು ನಿಮ್ದು..?

    ವಿದ್ಯಾರ್ಥಿನಿ: ದೇಗುನಹಳ್ಳಿ
    ಕ್ಲರ್ಕ್ ಶಿಲ್ಪಾ: ಎಲ್ಲದು?

    ವಿದ್ಯಾರ್ಥಿನಿ: ಕಿತ್ತೂರ್
    ಕ್ಲರ್ಕ್ ಶಿಲ್ಪಾ: ಬೆಳಗಾವಿಯಾ

    ಪಕ್ಕದ ಗೆಳತಿ ಬಳಿ ಚೆಂಜ್ ತೆಗೆದುಕೊಂಡ ವಿದ್ಯಾರ್ಥಿನಿ ಮೇಡಮ್ ಬಳಿ ಕೊಡುತ್ತಾಳೆ.

    ವಿದ್ಯಾರ್ಥಿನಿ: ಬಿಸಿಎಂ ಹಾಸ್ಟೆಲ್‍ಗೆ ಅರ್ಜಿ ಹಾಕಿದ್ದೇನೆ
    ಕ್ಲರ್ಕ್ ಶಿಲ್ಪಾ: ಬಿಸಿಎಂಗೆ ಹಾಕಿದ್ದಿರಾ?

    ವಿದ್ಯಾರ್ಥಿನಿ: ಮೇಡಮ್ ಸದ್ಯಕ್ಕೆ 250 ರೂ ಇವೆ.. ಅಷ್ಟೇ ಚಲನ್ ನಲ್ಲಿ ತುಂಬಿದ್ರೆ ನಡೆಯುತ್ತಾ!
    ಕ್ಲರ್ಕ್ ಶಿಲ್ಪಾ: ನಾನು ನಿನ್ ಚಲನ್ ಬರೆದಿಲ್ಲಾ, ನಾನು ಆಧಾರ್ ಕಾರ್ಡ್ ಕೊಟ್ಟ ಮೇಲೆ ಚಲನ್ ಬರೆಯುವೆ.. ಇದು ಹಾಗೆ ದುಡ್ ಜೊತೆ ಚಲನ್ ಇಟ್ಕೊತೆನೆ, ನಾಳೆ ಕೊಡ್ರಿ..

    ವಿದ್ಯಾರ್ಥಿನಿ ಗೆಳತಿ: ಇವತ್ತು ಇಷ್ಟು ದುಡ್ಡು ಇಟ್ಕೊಂಡ್ ಬಿಡಿ ಮೇಡಮ್
    ಕ್ಲರ್ಕ್ ಶಿಲ್ಪಾ: ಇವತ್ತು ಇಷ್ಟೇ ತಗೊತೀನಿ, ನಾಳೆ ಉಳಿದ ದುಡ್ಡು ಕೊಡಿ, ನಿಮ್ ಚಲನ್ ಈಗಲೇ ತುಂಬಲ್ಲ, ನಾಳೆ ನೀವು ಬಂದು ಆಧಾರ್ ಕಾರ್ಡ್ ಕೊಟ್ಟ ಮೇಲೆ ತುಂಬ್ತನೆ..

    ವಿದ್ಯಾರ್ಥಿನಿ: ಮೇಡಮ್ ರೂಂ ಎಲ್ಲಿದೆ
    ಕ್ಲರ್ಕ್ ಶಿಲ್ಪಾ: ನೋಡಿ ಬನ್ನಿ ಮೇಲಿದೆ ಹಾಲ್, ಮೇಲೆ ಹತ್ತಿ ಹೋಗಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಸತಿ ನಿಲಯದ ಮೇಲ್ವಿಚಾರಕನಿಂದಲೇ ವಿದ್ಯಾರ್ಥಿನಿಯರಿಗೆ ಕಿರುಕುಳ

    ವಸತಿ ನಿಲಯದ ಮೇಲ್ವಿಚಾರಕನಿಂದಲೇ ವಿದ್ಯಾರ್ಥಿನಿಯರಿಗೆ ಕಿರುಕುಳ

    ಕೊಪ್ಪಳ: ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕಿದ್ದ ವಸತಿ ನಿಲಯದ ಮೇಲ್ವಿಚಾರಕನೇ ಕಿರುಕುಳ ನೀಡಿರುವ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

    ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮೇಲ್ವಿಚಾರಕ ಅರವಿಂದ ಹಡಪದ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿ ಬಂದಿದೆ. ಇದು ಬಾಲಕಿಯರ ವಸತಿ ನಿಲಯವಾಗಿದ್ದು, ವಿದ್ಯಾರ್ಥಿನಿಯರಿಗೆ ವಿನಾಃಕಾರಣ ಕಿರುಕುಳ ನೀಡುತ್ತಾನೆ ಎಂಬ ಆರೋಪಗಳು ಕೇಳಿ ಬಂದಿವೆ.

    ಪರೋಕ್ಷವಾಗಿ ಶಿಕ್ಷಕರ ಜೊತೆ ತಳುಕು ಹಾಕಿ ಮಾತಾಡುತ್ತಾರೆ. ಪರವಾನಗಿ ಇಲ್ಲದೇ ನಮ್ಮ ಕೋಣೆಗೆ ಅನಾವಶ್ಯಕವಾಗಿ ಬರುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ಬಗ್ಗೆ ಪಾಲಕರು ಅಧಿಕಾರಿಗಳಿಗೆ ಸಾಕಷ್ಟು ಮನವಿ ನೀಡಿದರೂ ಪ್ರಯೋಜನವಾಗಿಲ್ಲ.

    ಗುರುವಾರ ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗಳು ಶಾಲೆಗೆ ತೆರಳಿ ಈ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯುತ್ತಿದ್ದಂತೆಯೇ ಸಮಾಜ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದೆ. ಗುರುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ರೇಣುಕಾನಂದಸ್ವಾಮಿ ಮೇಲ್ವಿಚಾರಕ ಅರವಿಂದರನ್ನು ವರ್ಗಾವಣೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈ ಒಂದು ಭಯದಿಂದ ರಾತ್ರಿಯಾದ್ರೆ ಅವರವರ ಮನೆಗೆ ಹೋಗ್ತಾರೆ ಹಾಸ್ಟೆಲ್ ಮಕ್ಕಳು!

    ಈ ಒಂದು ಭಯದಿಂದ ರಾತ್ರಿಯಾದ್ರೆ ಅವರವರ ಮನೆಗೆ ಹೋಗ್ತಾರೆ ಹಾಸ್ಟೆಲ್ ಮಕ್ಕಳು!

    ಕಲಬುರಗಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ವಸತಿಗಾಗಿ ಸರ್ಕಾರ ಹಾಸ್ಟೆಲ್‍ಗಳನ್ನು ಸಹ ನಿರ್ಮಿಸಿದೆ. ಆದ್ರೆ ಕಲಬುರಗಿಯ ಬಿಸಿಎಂ ಹಾಸ್ಟೆಲ್‍ನಲ್ಲಿ ದೆವ್ವಗಳಿವೆ ಅಂತ ವಿದ್ಯಾರ್ಥಿಗಳು ರಾತ್ರಿಯಾದ್ರೆ ಸಾಕು ವಸತಿ ನಿಲಯದಲ್ಲಿ ಮಲಗುತ್ತಿಲ್ಲ.

    ಈ ಮಕ್ಕಳ ಮುಖದಲ್ಲಿ ಅದೇನೋ ಅವ್ಯಕ್ತ ಭಯ, ಆತಂಕ. ಇವರೆಲ್ಲ ಕಲಬುರಗಿ ತಾಲೂಕಿನ ಸೊಂತ ಗ್ರಾಮದ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳು. ಅಸಲಿಗೆ ಇವರ ಭಯವೇನೆಂದ್ರೆ ಈ ವಸತಿ ನಿಲಯದಲ್ಲಿ ರಾತ್ರಿಯಾದ್ರೆ ಸಾಕು ದೆವ್ವಗಳು ಬಂದು ನೆಲೆಸುತ್ತವಂತೆ. ಹಗಲಲ್ಲಿ ಜೊತೆಯಾಗಿ ಊಟ ಮಾಡಿ ರಾತ್ರಿ 7 ಗಂಟೆಯೊಳಗೆ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ವಾಸ್ತವ್ಯ ಮಾಡದೇ ಅವರವರ ಮನೆಗೆ ತೆರಳುತ್ತಾರೆ. ಇದು ಇಂದು ನಿನ್ನೆಯದಲ್ಲ ಕಳೆದ 10 ವರ್ಷಗಳಿಂದ ಇಂತಹ ಭಯ ವಿದ್ಯಾರ್ಥಿಗಳಲ್ಲಿದೆ.

    ಹೇಳಿಕೇಳಿ ಈ ವಸತಿ ಶಾಲೆಯನ್ನ ಸ್ಮಶಾನದ ಆವಣರದಲ್ಲೇ ನಿರ್ಮಾಣ ಮಾಡಿದ್ದಾರೆ. ನೀರವ ಎನಿಸುವ ವಾತಾವರಣದಲ್ಲಿ ಅಲ್ಲಲ್ಲಿ ಹಾಳುಬಿದ್ದ ಕಟ್ಟಡ, ಸಮಾಧಿ, ನಿರ್ಜನ ಪ್ರದೇಶ. ಒಂಥರಾ ಭಯ ಹುಟ್ಟಿಸುವಂತೆಯೇ ಇದೆ. ದೆವ್ವದ ಭೀತಿಯಿಂದ ಅಕ್ಕ-ಪಕ್ಕದ ಗ್ರಾಮದ ಜನ ತಮ್ಮ ಮಕ್ಕಳನ್ನು ವಸತಿ ನಿಲಯದಲ್ಲಿ ಬಿಡಲು ಹಿಂಜರಿಯುತ್ತಿದ್ದಾರೆ. ಈ ಕುರಿತು ವಸತಿ ನಿಲಯದ ಸಿಬ್ಬಂದಿಯನ್ನು ಕೇಳಿದ್ರೆ, ಮಕ್ಕಳ ಪೋಷಕರೇ ಹೆದರುತ್ತಾರೆ ಏನು ಮಾಡೋದು ಹೇಳಿ ಅಂತಾರೆ.

    ಸದ್ಯ ಈ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸೌಕರ್ಯಗಳನ್ನು ಬಿಸಿಎಂ ಇಲಾಖೆ ನೀಡಿದೆ. ಆದ್ರೆ ದೆವ್ವದ ಭಯದಿಂದ ಇಲ್ಲಿ ಯಾವ ವಿದ್ಯಾರ್ಥಿಗಳು ವಾಸ ಮಾಡ್ತಿಲ್ಲ ಅನ್ನೋದೇ ವಿಪರ್ಯಾಸ.