Tag: ವಸತಿ

  • 2 ತಿಂಗಳ ಅಡ್ವಾನ್ಸ್ ಅಷ್ಟೇ ಪಾವತಿಸಿ – ಮಾದರಿ ಬಾಡಿಗೆ ಕಾಯ್ದೆಯಲ್ಲಿ ಏನಿದೆ?

    2 ತಿಂಗಳ ಅಡ್ವಾನ್ಸ್ ಅಷ್ಟೇ ಪಾವತಿಸಿ – ಮಾದರಿ ಬಾಡಿಗೆ ಕಾಯ್ದೆಯಲ್ಲಿ ಏನಿದೆ?

    ನವದೆಹಲಿ: ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೆ ಸಹಾಯವಾಗುವ ಹೊಸ ಕಾಯ್ದೆಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಮಾದರಿ ಬಾಡಿಗೆ ಕಾಯ್ದೆ’ಗೆ ಅನುಮೋದನೆ ನೀಡಿದೆ.

    ಪ್ರಸ್ತುತ ಈಗ ಬಾಡಿಗೆದಾರರಿಂದ 10 ತಿಂಗಳ ಮುಂಗಡ ಬಾಡಿಗೆಯನ್ನು ಪಡೆಯಲಾಗುತ್ತದೆ. ಆದರೆ ಹೊಸ ಕಾಯ್ದೆಯಲ್ಲಿ ಕೇವಲ 2 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯಲು ಮಾತ್ರ ಷರತ್ತನ್ನು ವಿಧಿಸಲಾಗಿದೆ. ಇದನ್ನೂ ಓದಿ: ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

    ಹೊಸ ಕಾಯ್ದೆಯನ್ನು ನೇರವಾಗಿ ಕೇಂದ್ರ ಸರ್ಕಾರ ಜಾರಿ ಮಾಡುವುದಿಲ್ಲ. ಶೀಘ್ರವೇ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿ ಕೊಡಲಿದೆ. ರಾಜ್ಯಗಳಲ್ಲಿ ಪ್ರತ್ಯೇಕ ಕಾಯ್ದೆಗಳು ಇರುವ ಕಾರಣ ಹಾಲಿ ಬಾಡಿಗೆ ಕಾಯ್ದೆಗಳಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಮನೆಗಳನ್ನು ಬಾಡಿಗೆ ನೀಡುವ ವ್ಯವಸ್ಥೆಗೆ ಉದ್ಯಮ ಸ್ವರೂಪ ನೀಡಿ, ಈ ಉದ್ಯಮದಲ್ಲಿ ಪಾಲ್ಗೊಳ್ಳುವಂತೆ ಖಾಸಗಿ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಇದರಿಂದ ವಸತಿ ಕ್ಷೇತ್ರ ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಭೂ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆಯ ಕರಡನ್ನು ಸರ್ಕಾರ  2019 ರಲ್ಲಿ ಬಿಡುಗಡೆ ಮಾಡಿತ್ತು.

    ಕಾಯ್ದೆಯಲ್ಲಿ ಏನಿದೆ?
    ಮಾಲೀಕರು ಮತ್ತು ಬಾಡಿಗೆದಾರರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಬಾಡಿಗೆ ಪ್ರಾಧಿಕಾರ ರಚನೆ ಮಾಡಬೇಕು. ಮಾಲೀಕರು ಭದ್ರತಾ ಠೇವಣಿಯಾಗಿ ಬಾಡಿಗೆದಾರರಿಂದ ಕೇವಲ 2 ತಿಂಗಳ ಬಾಡಿಗೆಯನ್ನು ಮಾತ್ರ ಪಡೆಯಬೇಕು.

     

    ವಾಣಿಜ್ಯ ಕಟ್ಟಡಗಳಿಗೆ ಭದ್ರತಾ ಠೇವಣಿಯಾಗಿ 6 ತಿಂಗಳ ಹಣವನ್ನು ಮಾತ್ರ ಪಡೆಯಬೇಕು. ಬಾಡಿಗೆ ವಿಚಾರದಲ್ಲಿ ಸಮಸ್ಯೆಯಾದಲ್ಲಿ ಜಿಲ್ಲಾ ಬಾಡಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.

    ಒಪ್ಪಂದ ಮುಗಿದ ಬಳಿಕವೂ ಮನೆಯನ್ನು ಖಾಲಿ ಮಾಡದೇ ಇದ್ದಲ್ಲಿ ಮಾಲೀಕ ಮುಂದಿನ 2 ತಿಂಗಳ ಅವಧಿಗೆ ಬಾಡಿಗೆಯನ್ನು ದ್ವಿಗುಣ ಮಾಡಬಹುದು. 2 ತಿಂಗಳ ಬಳಿಕವೂ ಮನೆ ಖಾಲಿ ಮಾಡದೇ ಇದ್ದರೆ ಬಾಡಿಗೆಯನ್ನು 4 ಪಟ್ಟು ಹೆಚ್ಚಿಸಬಹುದು.

    ಮಾಲೀಕ ಪೂರ್ವ ಸೂಚನೆ ನೀಡದೇ ಬಾಡಿಗೆದಾರನ ಮನೆಯನ್ನು ಪ್ರವೇಶಿಸುವಂತಿಲ್ಲ. 24 ಗಂಟೆಗಳ ಮೊದಲು ನೋಟಿಸ್ ನೀಡಿದರೆ ಮಾತ್ರ ಮಾಲೀಕ ಮನೆಯನ್ನು ಪ್ರವೇಶಿಸುವ ಹಕ್ಕನ್ನು ಹೊಂದಿರುತ್ತಾನೆ. ಕಟ್ಟಡಕ್ಕೆ ಹಾನಿಯಾಗಿದ್ದರೆ ರಿಪೇರಿಗೆ ಬಾಡಿಗೆದಾರನೇ ಹಣವನ್ನು ನೀಡಬೇಕು.

    ವಿವಾದದ ಸಂದರ್ಭದಲ್ಲಿ ಮಾಲೀಕರು ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸುವಂತಿಲ್ಲ. ಒಪ್ಪಂದದ ಅವಧಿ ಇರುವವರೆಗೆ ಬಾಡಿಗೆ ದರವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲು ಸಾಧ್ಯವಿಲ್ಲ. ಬಾಡಿಗೆ ಪರಿಷ್ಕರಿಸುವ 3 ತಿಂಗಳ ಮೊದಲು ಮಾಲೀಕ ನೋಟಿಸ್ ನೀಡಬೇಕಾಗುತ್ತದೆ.

    ಹೊಸ ಕಾಯ್ದೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.

  • ದುರಂತ ಸಂಭವಿಸಿ 10 ದಿನಗಳಾದರು ಸಂತ್ರಸ್ತರ ಕೇಂದ್ರದಲ್ಲೇ ಇರುವ ಸಾವಿರಾರು ನಿವಾಸಿಗಳು

    ದುರಂತ ಸಂಭವಿಸಿ 10 ದಿನಗಳಾದರು ಸಂತ್ರಸ್ತರ ಕೇಂದ್ರದಲ್ಲೇ ಇರುವ ಸಾವಿರಾರು ನಿವಾಸಿಗಳು

    ಮಂಗಳೂರು: ಕೊಡಗಿನ ಜೋಡುಪಾಲ, ಮದೆನಾಡಿನಲ್ಲಿ ದುರಂತ ಎದುರಾಗಿ ಹತ್ತು ದಿನ ಕಳೆದಿವೆ. ಆದರೂ ಅಲ್ಲಿನ ಮೂರು ಗ್ರಾಮಗಳ ಸಾವಿರಾರು ನಿವಾಸಿಗಳು ಇನ್ನು ಕಲ್ಲುಗುಂಡಿ, ಸಂಪಾಜೆಯಲ್ಲಿರುವ ಕೇಂದ್ರದಲ್ಲೇ ತಂಗಿದ್ದಾರೆ.

    ಈ ನಡುವೆ ತಮ್ಮ ತಮ್ಮ ಮನೆಗಳನ್ನು ನೋಡಿ ಹೋಗಲು ಬರುವ ಬಹುತೇಕ ನಿವಾಸಿಗಳು ಅಲ್ಲಿಂದ ಸಾಮಾಗ್ರಿಗಳನ್ನು ಹೊತ್ತು ಒಯ್ಯುತ್ತಿದ್ದಾರೆ. ಕೆಲವು ಮನೆಗಳಿಗೆ ಹಾನಿ ಆಗದಿದ್ದರೂ, ಇಲ್ಲಿ ಮತ್ತೆ ಮಳೆಯಾಗಿ ಭೂಕುಸಿತವಾದರೆ ಅಪಾಯ ಅನ್ನುವ ಭಾವನೆ ನಿವಾಸಿಗಳಲ್ಲಿದೆ. ಹೀಗಾಗಿ ಸರ್ಕಾರದಿಂದ ಸೂಕ್ತ ಜಾಗದಲ್ಲಿ ಪುನರ್ವಸತಿ ಮಾಡಿಕೊಟ್ಟರೆ ತಮ್ಮ ಮನೆಗಳನ್ನು ಬಿಟ್ಟು ಅಲ್ಲಿಗೆ ತೆರಳಲು ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ವಯಂಸೇವಕರ ಜೊತೆಗೆ ಮನೆಗೆ ತೆರಳಿ, ಅಗತ್ಯ ವಸ್ತುಗಳನ್ನು ಮೂಟೆ ಕಟ್ಟಿ ಸಂತ್ರಸ್ತರ ಕೇಂದ್ರಕ್ಕೆ ಹೊತ್ತು ತರುತ್ತಿದ್ದಾರೆ.

    ಇತ್ತೀಚೆಗೆ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರು ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿ ಜೋಡುಪಾಲ, ಮದೆನಾಡು, ಮಣ್ಣಂಗೇರಿ ಪ್ರದೇಶಗಳು ವಾಸಕ್ಕೆ ಯೋಗ್ಯವಲ್ಲ ಎಂದಿದ್ದರು. ಹೀಗಾಗಿ ದುರಂತದ ಭಯ ಸಂತ್ರಸ್ತರಲ್ಲಿ ಆವರಿಸಿದ್ದು, ಮತ್ತೆ ಬೆಟ್ಟಗಳ ಮಧ್ಯೆ ವಾಸ ಇರುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

    ಇನ್ನೊಂದೆಡೆ ಘಟ್ಟಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಿರುಕು ಬಿಟ್ಟು ನಿಂತಿರುವ ಕಾರಣ, ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಮಾನವ ವಾಸ ತಕ್ಕುದಾಗಿಲ್ಲವಾದರೆ, ಬಡವರಿಗೆ ಪ್ರತ್ಯೇಕ ವಸತಿ ನಿರ್ಮಿಸಿ, ಅಲ್ಲಿರುವ ಕಾಫಿ ಎಸ್ಟೇಟ್‍ಗಳನ್ನು ವಶಕ್ಕೆ ತೆಗೆದುಕೊಳ್ಳುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ಸೌಲಭ್ಯ ನೀಡಿ: ಕಳಸಾ ಜನರಿಂದ ಒತ್ತಾಯ

    ಕೊಡಗು ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ಸೌಲಭ್ಯ ನೀಡಿ: ಕಳಸಾ ಜನರಿಂದ ಒತ್ತಾಯ

    ಚಿಕ್ಕಮಗಳೂರು: ಕೊಡಗು ನಿರಾಶ್ರಿತ ನೂರಾರು ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖದಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಎಲ್ಲಾ ಸೌಕರ್ಯಗಳು ನೀಡುವಂತೆ ಕಳಸಾದ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಕೊಡಗಿನಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ನೆಲೆ ನಿಲ್ಲೋಕೆ ಒಂದು ಸೂರಿಲ್ಲದೆ ನಿರಾಶ್ರಿತರಾಗಿರೋ ನೂರಾರು ಕುಟುಂಬಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸರ್ಕಾರ ಏನೇ ಆಶ್ವಾಸನೆ, ಭರವಸೆ ನೀಡಿದರೂ ಅವರಿಗೆ ಎಲ್ಲಾ ಸೌಕರ್ಯ ಒದಗಿಸಲು ವರ್ಷಗಳೇ ಬೇಕು. ಪುನರ್ವಸತಿ ಕೆಲಸ ಆರಂಭಿಸಲು ಕನಿಷ್ಟ ಮಳೆಗಾಲವಂತೂ ಮುಗಿಯಲೇಬೇಕು. ಮಳೆಗಾಲ ಮುಗಿಯೋದು ಯಾವಾಗ, ಏನೋ ಅನ್ನೋ ಭಯ ಜನ ಹಾಗೂ ಸರ್ಕಾರ ಇಬ್ಬರಿಗೂ ಇದೆ.

    ಕುದುರೆಮುಖದಲ್ಲಿ ಐರನ್ ಅಂಡ್ ಓರ್ ಕಂಪನಿ ಲಿಮಿಟೆಡ್‍ಗೆ ಸೇರಿದ 1800 ಕ್ಕೂ ಅಧಿಕ ಮನೆಗಳಿದ್ದು, ರಸ್ತೆ ಸಂಚಾರ, ವಿದ್ಯುತ್ ಸೌಲಭ್ಯ, ನೀರಿನ ಸೌಲಭ್ಯ, ಮತ್ತು ಸಾಧಾರಣವಾಗಿ ವಿಕೋಪಕ್ಕೆ ಸಿಲುಕುವಂತಹ ಸ್ಥಳವಲ್ಲ ಅಷ್ಟೇ ಅಲ್ಲದೇ ಸದ್ಯಕ್ಕೆ ಅವೆಲ್ಲಾ ಪಾಳು ಬಿದ್ದಿವೆ. 15 ವರ್ಷದ ಹಿಂದೆಯೇ ಕೆಐಓಸಿಎಲ್ ಕಂಪನಿ ಸ್ಥಗಿತಗೊಂಡಿದೆ. ಹಾಗಾಗಿ ಆ ಮನೆಗಳನ್ನ ದುರಸ್ತಿ ಮಾಡಿ ಕೊಡಗಿನ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ನೀಡಬೇಕೆಂದು ಕಳಸಾದ ಜನರು  ಒತ್ತಾಯಿಸಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv