Tag: ವಶ

  • ಗ್ರಾಹಕರಂತೆ ವೇಷಹಾಕಿ ವನ್ಯಜೀವಿಗಳ ಬೇಟೆಗಾರರ ಬಂಧನ: 16.5 ಕೆ.ಜಿ. ಜಿಂಕೆಗಳ ಕೊಂಬು ವಶ

    ಗ್ರಾಹಕರಂತೆ ವೇಷಹಾಕಿ ವನ್ಯಜೀವಿಗಳ ಬೇಟೆಗಾರರ ಬಂಧನ: 16.5 ಕೆ.ಜಿ. ಜಿಂಕೆಗಳ ಕೊಂಬು ವಶ

    ಚಿಕ್ಕಮಗಳೂರು: ಸಿನಿಮೀಯ ರೀತಿಯಲ್ಲಿ ಗ್ರಾಹಕರಂತೆ ಹೋಗಿ, ಕಾಡು ಪ್ರಾಣಿಗಳನ್ನು ಬೇಟಿ ಆಡುತ್ತಿದ್ದ ಆರು ಜನರ ತಂಡವನ್ನು ತರೀಕೆರೆ ತಾಲೂಕಿನ ಲಕ್ಕವಳ್ಳಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

    ಭಾನುವಾರ ಮಾಹಿತಿ ದೊರೆತಿದ್ದು, ಶಿವಮೊಗ್ಗದ ಸತೀಶ್, ಗಾಜನೂರಿನ, ತರೀಕೆರೆ ತಾಲೂಕಿನ ಉಪ್ಪಾರ ಬಸವಣ ಹಳ್ಳಿಯ ಸಹೋದರರಾದ ರವಿ ಹಾಗೂ ಲಕ್ಷ್ಮಣ ಬಂಧಿತ ಆರೋಪಿಗಳಾಗಿದ್ದು, ಉಳಿದ ಇಬ್ಬರ ಬಗ್ಗೆ ಇನ್ನು ಮಾಹಿತಿ ದೊರೆತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.

    ಸುಮಾರು ದಿನಗಳಿಂದ ಆರೋಪಿಗಳು ಜಾಲದ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ ಬಂಧಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ಖಚಿತ ಮಾಹಿತಿ ದೊರೆಯಿತು. ಹೀಗಾಗಿ ಗ್ರಾಹಕರಂತೆ ಮಾರುವೇಷ ಹಾಕಿಕೊಂಡು ಅರಣ್ಯ ಇಲಾಖೆ ಪೊಲೀಸ್ ಸಿಬ್ಬಂದಿ ತಂಡ ದಾಳಿ ಮಾಡಿದ ಪರಿಣಾಮ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.

    ಬಂಧಿತ ಆರೋಪಿಗಳಿಂದ 4 ಕೆ.ಜಿ. ಆನೆದಂತ, 11 ಕೆ.ಜಿ. ಚಿಪ್ಪು ಹಂದಿಯ ಚಿಪ್ಪು, 16.5 ಕೆ.ಜಿ. ಜಿಂಕೆಗಳ ಕೊಂಬು ಹಾಗೂ 4.5 ಕೆ.ಜಿ. ಕಾಡು ಕೋಣಗಳ ಕೊಂಬುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹಿಂದೆ ದೊಡ್ಡ ಜಾಲವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಬಂಧಿತರು ಕಾಡು ಪ್ರಾಣಿಗಳ ದೇಹದ ಬೆಲೆಬಾಳುವ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡುತ್ತಿದ್ದರು. ಹೀಗಾಗಿ ಭದ್ರಾ ಹುಲಿ ಅಭಯಾರಣ್ಯ ಸೇರಿದಂತೆ ಮಲೆನಾಡು ಭಾಗದ ಕಾಡುಗಳಲ್ಲಿ ವನ್ಯಜೀವಿಗಳನ್ನ ಭೇಟಿಯಾಡುತ್ತಿದ್ದರು. ಅಲ್ಲದೇ ಅವರ ಬಳಿ ಇನ್ನು ಹೆಚ್ಚಿನ ಪ್ರಾಣಿಗಳ ಚರ್ಮ, ಕೊಂಬು, ಮೂಳೆ, ದಂತಗಳಿವೆ ಎನ್ನುವ ಸಂದೇಹ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

    ಆನೆ ದಂತಗಳನ್ನು ಏನು ಮಾಡುತ್ತಾರೆ?
    ಆನೆ ದಂತಗಳನ್ನು ಹಣ ಪಡೆದು ಮಾರಾಟ ಮಾಡುವುದುನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ದಾಳಿ ವೇಳೆ ಸಿಕ್ಕಿದ ಆನೆ ದಂತಗಳನ್ನು ರಕ್ಷಣಾ ಇಲಾಖೆಗೆ ನೀಡುತ್ತದೆ. ಕೆಲವು ದಂತಗಳನ್ನು ಸಂಶೋಧನೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತದೆ. ಯಾರಿಗೂ ಮಾರಾಟ ಮಾಡಲು ಅನುಮತಿ ಇಲ್ಲದ ಕಾರಣ ದಂತಗಳನ್ನು ಸುಡಲಾಗುತ್ತದೆ.

  • ಪೊಲೀಸ್ ಹಾಗೂ ಮಾಧ್ಯಮ ವರದಿಗಾರರ ವೇಷದಲ್ಲಿ ದರೋಡೆ ಮಾಡುತ್ತಿದ್ದ ಖದೀಮರು ಅಂದರ್

    ಪೊಲೀಸ್ ಹಾಗೂ ಮಾಧ್ಯಮ ವರದಿಗಾರರ ವೇಷದಲ್ಲಿ ದರೋಡೆ ಮಾಡುತ್ತಿದ್ದ ಖದೀಮರು ಅಂದರ್

    ಬೆಂಗಳೂರು: ಪೊಲೀಸ್ ಹಾಗೂ ಮಾಧ್ಯಮ ವರದಿಗಾರರ ವೇಷದಲ್ಲಿ ಹಗಲು ದರೋಡೆ ಮಾಡುತ್ತಿದ್ದ ಖದೀಮರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದ ಹೇಮಂತ್ ಕುಮಾರ್, ಮನೋಜ್, ಚೇತನ್, ಲೋಕೇಶ್ ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಪೊಲೀಸರು, ಈ ಯಶಸ್ವಿ ಕಾರ್ಯಚರಣೆ ನಡೆಸಿ ನಾಲ್ಕು ಜನ ದರೋಡೆಕೋರರನ್ನ ಬಂಧಿಸಿದ್ದಾರೆ.

    ಬಂಧಿತರಿಂದ ಸುಮಾರು 9.50 ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚಿನ್ನ, ಒಂದು ಸ್ಯಾಮಸಂಗ್ ಮೊಬೈಲ್, ಇಂಟಿಯೋಸ್ ಕಾರು, ಒಂದು ಟಿ.ವಿ.ಎಸ್ ಬೈಕ್ ಹಾಗೂ ಒಂದು ಬುಲೆಟ್ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಈ ಆರೋಪಿಗಳು ಪೊಲೀಸ್ ವೇಶದಲ್ಲಿ ಭಾವ ಚಿತ್ರಗಳನ್ನ ತೆಗೆಸಿಕೊಂಡು, ಜನರನ್ನ ಬೆದರಿಸಿ ಹಗಲು ದರೋಡೆ ನಡೆಸುತಿದ್ದರು ಎನ್ನಲಾಗಿದೆ.

    ನಕಲಿ ನಂಬರ್ ಪ್ಲೇಟ್: ಕದ್ದ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಗಳನ್ನು ಬಳಸಿ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಹಲವಾರು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ಆರೋಪಿಗಳ ಬಂಧನದಿಂದ ಇನ್ನು ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

  • ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

    ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

    ಕಾರವಾರ: ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಸಿನಿಮೀಯ ರೀತಿಯಲ್ಲಿ ವಶಪಡಿಸಿಕೊಂಡ ಘಟನೆ ಕುಮಟಾದ ಹಳಕಾರ್ ಹರಿಕಾಂತ್ರ ಕೇರಿ ಕ್ರಾಸ್‍ನಲ್ಲಿ ನಡೆದಿದೆ.

    ಆರೋಪಿಗಳು ತಪ್ಪಿಸಿಕೊಂಡಿದ್ದು, ಮಾರುತಿ ಇಗ್ನೀಸ್ ಕಾರನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡ ರಕ್ಷಿಸಿದೆ.

    ಶುಕ್ರವಾರ ಮುಂಜಾನೆ ರಿಜಿಸ್ಟರ್ ಆಗದ ಹೊಸ ಮಾರುತಿ ಇಗ್ನೀಸ್ ಕಾರಿನಲ್ಲಿ ಕಳ್ಳರು ಬಂದಿದ್ದರು. ಕುಮಟಾದ ಹರಕಾರ್ ನ ಹರಿಕಾಂತ್ರ ಕೇರಿಯಲ್ಲಿ ಹಸುಗಳನ್ನು ಕದ್ದು, ಕಾರಿನಲ್ಲಿ ಹಾಕಿಕೊಂಡು ಹೋಗುತ್ತಿದ್ದರು. ರಾತ್ರಿ ಪಾಳೆಯ ಗಸ್ತಿನಲ್ಲಿದ್ದ ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡವು ಇದನ್ನು ಗಮನಿಸಿ ಕಾರನ್ನು ಬೆನ್ನು ಹತ್ತಿದ್ದರು. ಆದರೆ ದಾರಿ ಮಧ್ಯದಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಅಲ್ಲಿಯೇ ಬಿಟ್ಟು ಕಳ್ಳರು ತಪ್ಪಿಸಿಕೊಂಡಿದ್ದಾರೆ.

    ಸದ್ಯ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದು, ಹಸುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಮಾನದ ಶೌಚಾಲಯದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆ

    ವಿಮಾನದ ಶೌಚಾಲಯದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆಯಾಗಿದೆ.

    ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ವಿಮಾನದಲ್ಲಿ 2 ಕೆ.ಜಿ 116 ಗ್ರಾಂ ತೂಕದ 66.67 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.

    ಎಸ್‍ಜಿ 479 ಸ್ಪೈಸ್ ಜೆಟ್ ವಿಮಾನದ ಶೌಚಾಲಯದಲ್ಲಿ ಚಿನ್ನ ಪತ್ತೆಯಾಗಿದ್ದು, ಈ ವಿಮಾನ ಮುಂಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದರು.

    ಆಗ 2 ಕೆಜಿ 116 ಗ್ರಾಂ ಚಿನ್ನದ ಬಿಲ್ಲೆ ಪತ್ತೆಯಾಗಿದೆ. ಸದ್ಯಕ್ಕೆ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಪೊಲೀಸರಿಂದ ವಶ!

    ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಪೊಲೀಸರಿಂದ ವಶ!

    ಧಾರವಾಡ: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಸಿಕ್ಕಿದೆ. ವಿಚಾರಣೆ ನಡೆಸಿದ ವೇಳೆ ಪತ್ತೆಯಾದ ಚಿನ್ನ ನಕಲಿ ಎನ್ನುವ ವಿಚಾರ ಪತ್ತೆಯಾಗಿದೆ.

    ಹೌದು. ಗುಜರಾತ್ ಮೂಲದ ವ್ಯಾಪಾರಿಯೊಬ್ಬ ಈ ಚಿನ್ನವನ್ನ ಅಹದಾಬಾದ್‍ದಿಂದ ಹುಬ್ಬಳ್ಳಿ ತೆಗೆದುಕೊಂಡು ಹೋಗುತ್ತಿದ್ದ. ಚುನಾವಣೆ ಇರುವ ಹಿನ್ನೆಲೆ ಧಾರವಾಡ ನರೇಂದ್ರ ಕ್ರಾಸ್ ಬಳಿ ಪೊಲೀಸರು ತಪಾಸಣೆ ಮಾಡಿದರು. ನಂತರ ಈ ಚಿನ್ನವನ್ನು ವಶಕ್ಕೆ ಪಡೆದಿದ್ದರು.

    ನಂತರ ಇದನ್ನು ತೂಕ ಮಾಡಿದಾಗ 4.5 ಕೆಜಿ ಇತ್ತು. ಇದನ್ನು ನೋಡಿದ ಚುನಾವಣಾಧಿಕಾರಿಗಳು ಚಿನ್ನವನ್ನು ಪರಿಶೀಲನೆ ಮಾಡಿದಾಗ ಅದು ನಕಲಿ ಚಿನ್ನ ಎಂದು ಗೊತ್ತಾಗಿದೆ. ಇನ್ನು ಈ ರೋಲ್ಡ್ ಗೋಲ್ಡ್ ನ್ನು ತೆಗೆದುಕೊಂಡು ಹೋಗುತ್ತಿದ್ದ ವ್ಯಾಪಾರಿಗೆ ಕೇಳಿದರೆ ಇದು 5 ಸಾವಿರದ ನಕಲಿ ಚಿನ್ನವಾಗಿದ್ದು, ಸ್ಯಾಂಪಲ್ ತೋರಿಸಲು ಹೊರಟಿದ್ದೆ ಎಂದು ಉತ್ತರಿಸಿದ್ದಾನೆ.

    ಸದ್ಯ ಪೊಲೀಸರು ಆ ವ್ಯಾಪಾರಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಚಿಕ್ಕಮಗಳೂರು: 15 ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ ಜಪ್ತಿ!

    ಚಿಕ್ಕಮಗಳೂರು: 15 ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ ಜಪ್ತಿ!

    ಚಿಕ್ಕಮಗಳೂರು: ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಸುಮಾರು 16 ಸಾವಿರ ಕ್ಕೂ ಹೆಚ್ಚು ಸೀರೆಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಮುಂದಿನ ತಿಂಗಳ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಬಿಜೆಪಿಯವರು ಭಾರೀ ಪ್ರಮಾಣದ ಸೀರೆಗಳನ್ನ ತರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಈ ಕುರಿತು ಚುನಾವಣೆ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿ ಕ್ರಮಕೈಗೊಳ್ಳಲು ಒತ್ತಾಯಿಸಿದ್ದರು.

    ದೂರು ಆಧರಿಸಿ ಚುನಾವಣೆ ಕರ್ತವ್ಯ ಅಧಿಕಾರಿ ಪ್ರಕಾಶ್ ಆಗಮಿಸಿ ಪರಿಶೀಲಿಸಿದ ಬಳಿಕ ತನಿಖಾ ತಂಡದ ತುಷಾರಾ ಮಣಿ, ಆದಾಯ ತೆರಿಗೆ ಸಹಾಯಕ ಅಧಿಕಾರಿ ಪೂರ್ಣಿಮ, ಠಾಣಾಧಿಕಾರಿ ರಕ್ಷಿತ್ ಗೋದಾಮು ಪರಿಶೀಲಿಸಿ ತಪಾಸಣೆ ನಡೆಸಿದ್ದಾರೆ. ಸುಮಾರು 15 ಲಕ್ಷ ರೂ. ಬೆಲೆಯ 16 ಸಾವಿರ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ನಗರದ ಹೃದಯ ಭಾಗದಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಸುಮಾರು 15 ಲಕ್ಷ ಬೆಲೆ ಬಾಳುವ 16 ಸಾವಿರ ಸೀರೆಗಳನ್ನು ಸರಕು ಸಾಗಣೆ ಸಂಸ್ಥೆ ಲಾರಿಯಲ್ಲಿ ತರಿಸಿದ್ದಾರೆ. ಪ್ರತಿ ಸೀರೆ ಬೆಲೆ 80 ರೂ. ಇದ್ದು, ಈ ಕುರಿತು ಮಾಲೀಕರು ದಾಖಲೆಯನ್ನು ಸಲ್ಲಿಸಿದ್ದಾರೆ. ಆದರೆ ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಕ್ರಮಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಜಪ್ತಿ ಮಾಡಲಾಗಿರುವ ಸೀರೆಗಳನ್ನು ಅಧಿಕಾರಿಗಳ ವಶದಲ್ಲೇ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಈ ಕಾರಣಕ್ಕಾಗಿ 4 ದಿನ ಜೈಲಿನಲ್ಲಿ ಬಂಧಿಯಾದ 8 ಕತ್ತೆಗಳು

    ಈ ಕಾರಣಕ್ಕಾಗಿ 4 ದಿನ ಜೈಲಿನಲ್ಲಿ ಬಂಧಿಯಾದ 8 ಕತ್ತೆಗಳು

    ಲಕ್ನೋ: ಉತ್ತರಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಪೊಲೀಸರು 8 ಕತ್ತೆಗಳನ್ನು 4 ದಿನಗಳ ಕಾಲ ವಶದಲ್ಲಿ ಇರಿಸಿಕೊಂಡಿದ್ದ ವಿಲಕ್ಷಣ ಘಟನೆ ನಡೆದಿದೆ. ಕತ್ತೆಗಳು ಜೈಲಿನ ಆವರಣದಲ್ಲಿ ಬೆಲೆ ಬಾಳುವ ಸಸಿಗಳನ್ನು ತಿಂದಿದ್ದರಿಂದ ಅವುಗಳನ್ನು ವಶಕ್ಕೆ ಪಡೆಯಲಾಗಿತ್ತು.

    ಈ ಹಿಂದೆ ಕತ್ತೆಗಳನ್ನು ಬೇಕಾಬಿಟ್ಟಿಯಾಗಿ ಬಿಡದಂತೆ ಅವುಗಳ ಮಾಲೀಕನಿಗೆ ತಿಳಿಸಲಾಗಿತ್ತು. ಆದರೂ ಕತ್ತೆಗಳನ್ನು ಬಿಟ್ಟಿದ್ದರಿಂದ ದುಬಾರಿ ಬೆಲೆಯ ಸಸಿಗಳನ್ನು ತಿಂದಿವೆ. ಹೀಗಾಗಿ 8 ಕತ್ತೆಗಳನ್ನು 4 ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಸೋಮವಾರ ರಾತ್ರಿ ಬಿಜೆಪಿ ನಾಯಕರೊಬ್ಬರು ಹೇಳಿದ ನಂತರ ಪೊಲೀಸರು ಕತ್ತೆಗಳನ್ನ ಬಿಟ್ಟು ಕಳಿಸಿದ್ದಾರೆ.

    ಈ ಹಿಂದೆಯೂ ಕತ್ತೆಗಳು ಜೈಲಿನ ಆವರಣ ಪ್ರವೇಶ ಮಾಡಿದ್ದರ ಬಗ್ಗೆ ಅವುಗಳ ಮಾಲೀಕನಿಗೆ ಎಚ್ಚರಿಕೆ ನೀಡಲಾಗಿತ್ತು. ಜೈಲಿನ ಆವರಣವನ್ನ ಸುಂದರಗೊಳಿಸಲು ಹಿರಿಯ ಅಧಿಕಾರಿಗಳು ಬೆಲೆ ಬಾಳುವ ಸಸಿಗಳನ್ನು ತರಸಿದ್ದರು. ಈ ಸಸಿಗಳನ್ನ ಜೈಲಿನ ಆವರಣದಲ್ಲಿ ನೆಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಆದ್ರೆ ಕತ್ತೆಗಳು ಸಸಿಗಳನ್ನು ತಿಂದು ಹಾಳು ಮಾಡಿವೆ ಎಂದು ಮುಖ್ಯ ಪೇದೆ ಆರ್.ಕೆ.ಶರ್ಮಾ ಹೇಳಿದ್ದಾರೆ.

    2 ಲಕ್ಷ ರೂ. ಮೌಲ್ಯದ ಸಸಿ: ಕತ್ತೆಗಳು ತಿಂದಿರುವ ಸಸಿಗಳ ಮೌಲ್ಯ 2 ಲಕ್ಷ ರೂ. ಎಂದು ಅಧಿಕಾರಿಗಳು ಹೇಳಿದ್ದಾರೆ. ಕತ್ತೆಗಳು ದುಬಾರಿ ಬೆಲೆಯ ಸಸಿಗಳನ್ನ ತಿಂದಿದ್ದಲ್ಲದೆ ನನ್ನ ಮನೆಗೂ ನುಗ್ಗಿದ್ದವು. ನಾವು ಮಾಲೀಕನನ್ನು ಪತ್ತೆ ಮಾಡಲು ಕತ್ತೆಗಳನ್ನ ವಶಕ್ಕೆ ತೆಗೆದುಕೊಂಡೆವು. ಕತ್ತೆಗಳ ಮಾಲೀಕ ಬಿಡಿಸಿಕೊಳ್ಳಲು ಬಂದಾಗ ಆತನಿಗೆ ಬುದ್ಧಿ ಹೇಳಿ ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳಲು ಹೇಳುವ ಸಲುವಾಗಿ ವಶಕ್ಕೆ ತೆಗೆದುಕೊಂಡೆವು ಎಂದು ಜೈಲಿನ ಹಿರಿಯ ಅಧಿಕಾರಿ ಎಸ್.ಆರ್.ಶರ್ಮಾ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕತ್ತೆಯ ಮಾಲೀಕ ಕಮಲೇಶ್, ಕತ್ತೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ನಂತರ ನಾನು ಠಾಣೆಗೆ ತೆರಳಿ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಯಾವ ಆಧಿಕಾರಿಗಳು ಕತ್ತೆಗಳನ್ನು ಬಿಡಲಿಲ್ಲ. ಕೊನೆಗೆ ನಾನು ಸ್ಥಳೀಯ ಬಿಜೆಪಿ ನಾಯಕರೊಬ್ಬರಿಂದ ಹೇಳಿಸಿದ ಮೇಲೆ 4 ದಿನಗಳ ಬಳಿಕ ಕತ್ತೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ
  • ಬೆಳಗಾವಿ: ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಕೊಲೆ!

    ಬೆಳಗಾವಿ: ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಕೊಲೆ!

    ಬೆಳಗಾವಿ: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ಕಾಮುಕ ಆರೋಪಿಯನ್ನು ಉದಪ್ಪ ಗಾಣಿಗೇರ(25) ಎಂಬುವುದಾಗಿ ಗುರುತಿಸಲಾಗಿದೆ.

    ಈತ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಮನೆ ಪಕ್ಕದ ತಿಪ್ಪೆಯಲ್ಲಿ ಹೂತು ಹಾಕಿದ್ದನು. ಇತ್ತ ಬಾಲಕಿ ಕಾಣದಿದ್ದಾಗ ಅಕ್ಕ ಪಕ್ಕದವರನ್ನು ಬಾಲಕಿಯ ಮನೆಯವರು ವಿಚಾರಿಸಿದಾಗ ಈ ಘಟನೆ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಸದ್ಯ ಪೊಲೀಸರು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.