Tag: ವಶ

  • ನೀರವ್ ಮೋದಿಯ ಹಾಂಗ್​ಕಾಂಗ್​ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ

    ನೀರವ್ ಮೋದಿಯ ಹಾಂಗ್​ಕಾಂಗ್​ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಮಾಡಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿಗೆ ಸೇರಿದ ಹಾಂಗ್​ಕಾಂಗ್​ನಲ್ಲಿರುವ ಸುಮಾರು 255 ಕೋಟಿ ರೂಪಾಯಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಇಡಿ ನೀರವ್ ಮೋದಿಯ ಆಸ್ತಿಯನ್ನು ವಶಪಡಿಸಿಕೊಂಡಿದ್ದು, ಗುರುವಾರವೂ ಸಹ ಹಾಂಗ್​ಕಾಂಗ್​ನಲ್ಲಿರುವ ಸುಮಾರು 255 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ಇಲ್ಲಿಯವರೆಗೂ ಇಡಿ ಅಂದಾಜು 4,744 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

    ದೇಶದಲ್ಲೇ ಸಂಚಲನ ಮೂಡಿಸಿದ್ದ ಪಿಎನ್‍ಬಿ ವಂಚನೆ ಬೆಳಕಿಗೆ ಬರುತ್ತಲೇ ವಜ್ರೋದ್ಯಮಿ ನೀರವ್ ಮೋದಿ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಇಡಿ ಇಂಟರ್ಪೋಲ್ ಮೂಲಕ ರೆಡ್‍ಕಾರ್ನರ್ ನೋಟಿಸ್ ಸಹ ಜಾರಿಗೊಳಿಸಿದೆ. ಅಕ್ಟೋಬರ್ ತಿಂಗಳೊಂದರಲ್ಲೇ ಭಾರತದ ಸೇರಿದಂತೆ 5 ದೇಶಗಳಲ್ಲಿ ಸುಮಾರು 637 ಕೋಟಿ ರುಪಾಯಿಯನ್ನು ಜಪ್ತಿಮಾಡಲಾಗಿದೆ.

    ಏನಿದು ಪ್ರಕರಣ?
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ.

    ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 18.5 ಕೆಜಿ ತೂಕದ ಚಿಪ್ಪು ಹಂದಿ ಪತ್ತೆ

    ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 18.5 ಕೆಜಿ ತೂಕದ ಚಿಪ್ಪು ಹಂದಿ ಪತ್ತೆ

    ಚಿಕ್ಕಮಗಳೂರು: ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ 18.5 ಕೆ.ಜಿ. ತೂಕದ ಎರಡು ಚಿಪ್ಪು ಹಂದಿ ಪತ್ತೆಯಾಗಿದೆ.

    ಸುಮಾರು ಎರಡರಿಂದ ಮೂರು ಲಕ್ಷ ಬೆಲೆಬಾಳುವ ಈ ಚಿಪ್ಪು ಹಂದಿಯನ್ನ ಬೇಟೆಯಾಡಿ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದ ಇಬ್ಬರಲ್ಲಿ ಓರ್ವ ಆರೋಪಿಯನ್ನ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ.

    ಹಲಸೂರು ಮೀಸಲು ಅರಣ್ಯದಲ್ಲಿ ಪ್ರದೀಪ್ ಹಾಗೂ ಪ್ರಕಾಶ್ ಇಬ್ಬರು ಯುವಕರು ಎರಡು ಚಿಪ್ಪು ಹಂದಿಯನ್ನ ಬೇಟೆಯಾಡಿದ್ದರು. ಬೇಟೆಯ ಬಳಿಕ ಹಂದಿಯನ್ನ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಎ.ಸಿ.ಎಫ್ ಲೋಹಿತ್ ಕುಮಾರ್, ಆರ್.ಎಫ್.ಓ ತನುಜಕುಮಾರ್ ಹಾಗೂ ಡಿ.ಆರ್.ಎಫ್.ಓ ಸುಂದ್ರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಪ್ರದೀಪ್ ಎಂಬಾತನನ್ನ ಬಂಧಿಸಿ ಎರಡು ಚಿಪ್ಪು ಹಂದಿಯನ್ನ ರಕ್ಷಿಸಿದ್ದಾರೆ.

    ಬಂಧಿತ ಆರೋಪಿಯಿಂದ 18.5 ಕೆ.ಜಿ.ತೂಕದ ಗಂಡು ಮತ್ತು ಹೆಣ್ಣು ಚಿಪ್ಪು ಹಂದಿ ಹಾಗೂ ಒಂದು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಮತ್ತೋರ್ವ ಆರೋಪಿ ಪ್ರಕಾಶ್ ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಪ್ರಕಾಶ್‍ಗಾಗಿ ಬಲೆ ಬೀಸಿದ್ದಾರೆ. ಈ ಚಿಪ್ಪು ಹಂದಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ದಾಳಿ – 470 ಲೀಟರ್ ಮದ್ಯ, ಕಾರ್ ವಶ

    ಪೊಲೀಸ್ ದಾಳಿ – 470 ಲೀಟರ್ ಮದ್ಯ, ಕಾರ್ ವಶ

    ಕಾರಾವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾ ಘಟ್ಟದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

    ಬಾಂಡಿಶಟ್ಟಾ ಮೂಲದ ಕಾರವಾರ ಬಂದರು ಇಲಾಖೆಯ ಕಾರ್ ಚಾಲಕನಾಗಿದ್ದ ವಿನಯ್ ಶಾಂತನಾಗೇಕರ್ ಬಂಧಿತ ಆರೋಪಿ. ಡಿಸಿಬಿ ಇನ್ಸ್ ಪೆಕ್ಟರ್ ಶರಣಗೌಡರವರು ಖಚಿತ ಮಾಹಿತಿ ಆಧಾರದಲ್ಲಿ ಅಕ್ರಮವಾಗಿ ಗೋವಾದಿಂದ ಹೊನ್ನಾವರಕ್ಕೆ ಸಾಗಿಸುತಿದ್ದಾಗ ದಾಳಿ ನಡೆಸಿದ್ದಾರೆ.

    ಈ ವೇಳೆ ಜಲ್ಲಾ ಡಿ.ಸಿ.ಬಿ ಪೊಲೀಸರು ಒಂದು ಲಕ್ಷ ಮೌಲ್ಯದ 470 ಲೀಟರ್ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಒಂದು ಲಕ್ಷ ಮೌಲ್ಯದ ಕಾರನ್ನು ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಮೇಲೆ ಈ ಹಿಂದೆ ಬಂದರು ಇಲಾಖೆಯ ವಾಹನವನ್ನು ಕಳವು ಮಾಡಿ ಮದ್ಯ ಸಾಗಿಸುತಿದ್ದ ದೂರು ಹಾಗೂ ಅಕ್ರಮ ಮದ್ಯ ಸಾಗಟದ ಪ್ರಕರಣಗಳು ದಾಖಲಾಗಿತ್ತು ಎಂದು ತಿಳಿದು ಬಂದಿದೆ.

    ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಯಾನ್ ಆಗಿದ್ದರು 500, ಸಾವಿರ ಮುಖಬೆಲೆಯ 3.36 ಕೋಟಿ ಹಣ ಪತ್ತೆ

    ಬ್ಯಾನ್ ಆಗಿದ್ದರು 500, ಸಾವಿರ ಮುಖಬೆಲೆಯ 3.36 ಕೋಟಿ ಹಣ ಪತ್ತೆ

    ಗಾಂಧಿನಗರ: 500 ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆಗಿ ಸುಮಾರು 2 ವರ್ಷಗಳು ಕಳೆದಿದೆ. ಆದರೂ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗುತ್ತಿವೆ. ಈಗ ಗುಜರಾತಿನಲ್ಲಿ ಹಳೆಯ ನೋಟಿನ ಬರೋಬ್ಬರಿ 3.36 ಕೋಟಿ ಹಣ ಪತ್ತೆಯಾಗಿದೆ.

    ಸೂರತ್ ನ ಕಟೋದರದಲ್ಲಿ 3.36 ಕೋಟಿ ರೂ. ಮೊತ್ತದ ಅಮಾನೀಕರಣಗೊಂಡಿರುವ ನೋಟುಗಳು ಪತ್ತೆಯಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಗಗನೀಶ್ ರಜ್‍ಪೂತ್, ಮೊಹಮ್ಮದ್ ಅಲಿ ಶೇಖ್ ಹಾಗೂ ಲತೀಫ್ ಶೇಖ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಕಟೋದರ ಪ್ರದೇಶದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕಾರೊಂದರಲ್ಲಿ 1 ಸಾವಿರ ಹಾಗೂ 500 ರೂ.ಗಳ ನಿಷೇಧಿತ ನೋಟುಗಳು ಸಿಕ್ಕಿದೆ. ಕಾರಿನಲ್ಲಿ ಪತ್ತೆಯಾದ ಹಣದಲ್ಲಿ ಹಳೆಯ 500 ರೂ. ಮುಖಬೆಲೆಯ 1.20 ಕೋಟಿ ರೂ. (24 ಸಾವಿರ ನೋಟುಗಳು) ಹಾಗೂ 1 ಸಾವಿರ ರೂ. ಮುಖಬೆಲೆಯ 2.16 ಕೋಟಿ ರೂ. (21,600 ನೋಟುಗಳು) ಪತ್ತೆಯಾಗಿದೆ. ಒಟ್ಟು 3.36 ಕೋಟಿ ಹಣ ಸಿಕ್ಕಿದ್ದು, ಸೂರತ್ ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದೇವೆ. ಸದ್ಯಕ್ಕೆ ಸಿಕ್ಕಿರುವ ಹಣದ ಸಂಪೂರ್ಣ ಮಾಹಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯರಿಬ್ಬರ ಬಂಧನ

    ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯರಿಬ್ಬರ ಬಂಧನ

    ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯರಿಬ್ಬರನ್ನ ಕಸ್ಟಮ್ಸ್ ಅಧಿಕಾರಿಗಳು ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

    ಮುಂಬೈ ಮೂಲದ ಷಹೀದಾ ಬಾನು ಮತ್ತು ಶಕೀನಾ ಶೇಖ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಸುಮಾರು 58 ಲಕ್ಷ ಮೌಲ್ಯದ ಒಂದು ಕೆ.ಜಿ 649 ಗ್ರಾಂ ಚಿನ್ನದ ಪುಡಿಯನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಈ ಇಬ್ಬರು ಆರೋಪಿಗಳು ಚಿನ್ನವನ್ನು ತಮ್ಮ ಒಳ ಉಡುಪಿನಲ್ಲಿ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದರು. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿ ಪರಿಶೀಲನೆ ಮಾಡುವಾಗ ಆರೋಪಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ. ಸದ್ಯಕ್ಕೆ ಅಧಿಕಾರಿಗಳು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

    ಆರೋಪಿಗಳನ್ನ ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯರಿಂದ ಚಿನ್ನದ ಸಾಗಾಟ ಮಾಡಿಸುತ್ತಿರುವುದರ ಹಿಂದೆ ಸ್ಮಗ್ಲಿಂಗ್ ಮಾಫಿಯಾದ ಕೈವಾಡ ಇರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

  • ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ

    ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ

    ಬೆಂಗಳೂರು: ಜೂನ್ ತಿಂಗಳಿನಲ್ಲಿ ಶೂಟೌಟ್ ಗೆ ಒಳಗಾಗಿದ್ದ ಆರೋಪಿಯಿಂದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಅಚ್ಯುತ್ ಕುಮಾರ್ ಅಲಿಯಾಸ್ ಗಣಿ ಪೊಲೀಸರಿಂದ ಶೂಟೌಟಿಗೆ ಒಳಗಾಗಿದ್ದ ಆರೋಪಿ. ಈತನ ಮೇಲೆ ರಾಜ್ಯದಾದ್ಯಂತ 105 ಸರಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈತ ಮೂಲತಃ ಧಾರವಾಡ ಜಿಲ್ಲೆಯ ಕೋಳಿವಾಡದವನು. ಆರೋಪಿ ಅಚ್ಯುತ್ ಕುಮಾರ್ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದನು.

    ಕಳೆದ ಕೆಲವು ವರ್ಷಗಳಿಂದ ಕುಂಬಳಗೂಡಿನಲ್ಲಿ ಒಂದು ಮನೆ ಮಾಡಿಕೊಂಡು ವಾಸಮಾಡುತ್ತಿದ್ದನು. ಬಳಿಕ ರಿಂಗ್ ರೋಡ್ ಬಳಿದ್ದ ಸುತ್ತಮುತ್ತಾ ಏರಿಯಾಗಳಲ್ಲಿ ಸರಗಳ್ಳತನ ಮಾಡುತ್ತಿದ್ದನು. ಕಳೆದ ಜೂನ್ 17 ರಂದು ಕೆಂಗೇರಿ ಬಳಿ ಅಚ್ಯುತ್ ಕುಮಾರ್ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ

    ಪೊಲೀಸರು ಬಳಿಕ ತನಿಖೆಯನ್ನು ಮುಂದುವರಿಸಿದ್ದು, ಈಗ ಈತ ಕಳ್ಳತನ ಮಾಡಿದ್ದ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನದ ಸರಗಳು ಪತ್ತೆಯಾಗಿವೆ. ಆರೋಪಿ ಅಚ್ಯುತ್ ಕಳವು ಮಾಡಿದ್ದ ಮಾಲ್ ಗಳನ್ನು ಗವಿ ಸಿದ್ದೇಶನ ಬಳಿ ಅಡ ಇಡುತ್ತಿದ್ದನು. ಇದರಿಂದ ಅಡ ಇಟ್ಟುಕೊಂಡ ತಪ್ಪಿಗೆ ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಚ್ಯುತ್ ನನ್ನ ಬಂಧಿಸಲು ಮೂರು ವಿಶೇಷ ತಂಡವನ್ನ ರಚನೆ ಮಾಡಲಾಗಿತ್ತು.

    ಜೂನ್ 17 ಏನಾಗಿತ್ತು?
    ಸರಗಳ್ಳ ಅಚ್ಯುತ್ ಕುಮಾರ್ ನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ನಸುಕಿನ ಜಾವ ಸುಮಾರು 2.30ಕ್ಕೆ ಕುಂಬಳಗೋಡಿಗೆ ಕರೆದೊಯ್ಯುಲಾಗುತ್ತಿತ್ತು. ಕೆಂಗೇರಿ ಸ್ಯಾಟ್ ಲೈಟ್ ಟೌನ್ ಬಳಿ ಬರುವ ವೇಳೆಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿ ತಪ್ಪಿಸಿಕೊಂಡಿದ್ದನು. ತಪ್ಪಿಸಿಕೊಂಡ ಆರೋಪಿಗಾಗಿ ಪೊಲೀಸ್ ತಂಡವನ್ನು ಆಯೋಜಿಸಲಾಗಿತ್ತು. ಕೋಡಿಪಾಳ್ಯ ನೈಸ್ ಮಾರ್ಗದಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಕೆಂಗೇರಿ ಮತ್ತು ಜ್ಞಾನಭಾರತಿ ಪೊಲೀಸರು ಬಂಧಿಸಲು ಹೋಗಿದ್ದರು. ಆಗ ಬಂಧಿಸಲು ಬಂದಿದ್ದ ಜ್ಞಾನಭಾರತಿ ಎ.ಎಸ್.ಐ ವೀರಭದ್ರಯ್ಯ ಹಾಗೂ ಹೆಡ್ ಕಾನ್ಸ್ ಟೇಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಆತ್ಮರಕ್ಷಣೆಗೆಂದು ಪೊಲೀಸರು ಆತನ ಮೇಲೆ ಗುಂಡಿನ ದಾಳಿ ಮಾಡಿದ್ದರು.

    ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150 ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಆರೋಪಿ ಒಬ್ಬಂಟಿಯಾಗಿ ಬೈಕಿನಿಂದ ಇಳಿಯದೇ ಸರ ಕಿತ್ತು ಪರಾರಿಯಾಗುತ್ತಿದ್ದನು. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ.ಚನ್ನಣ್ಣನವರ್ 1 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಕ್ರಮವಾಗಿ ಸಾಗಿಸುತ್ತಿದ್ದ 4.50 ಲಕ್ಷ ಮೌಲ್ಯದ ಗೋವಾ ಪೆನ್ನಿ ವಶ!

    ಅಕ್ರಮವಾಗಿ ಸಾಗಿಸುತ್ತಿದ್ದ 4.50 ಲಕ್ಷ ಮೌಲ್ಯದ ಗೋವಾ ಪೆನ್ನಿ ವಶ!

    ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ(ಫೆನ್ನಿ)ವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದಾಂಡೇಭಾಗ್ ಗ್ರಾಮದಲ್ಲಿ ವಶಕ್ಕೆ ಪಡೆದು ಓರ್ವನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

    ಗಜಾನನ ಕೃಷ್ಣ ಕದಂಬ ಬಂಧಿತ ಆರೋಪಿಯಾಗಿದ್ದಾನೆ. ಈತ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಓಮ್ನಿ ಸಹಿತ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

    ಬಂಧಿತನಿಂದ ಸುಮಾರು 4,50,000 ರೂಪಾಯಿ ಮೌಲ್ಯದ ಗೋವಾದ ಮದ್ಯ(ಪೆನ್ನಿ)ವನ್ನು ವಶಪಡಿಸಕೊಂಡಿದ್ದಾರೆ. ಕಾರವಾರದ ಅಬಕಾರಿ ನಿರೀಕ್ಷಕರಾದ ರೇವಣ ಸಿದ್ದಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ಘಟನೆ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಗರಸಭೆ ಸದಸ್ಯನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ವಶ

    ನಗರಸಭೆ ಸದಸ್ಯನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ವಶ

    ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ಅಕ್ರಮವಾಗಿ ಪಡಿತರವನ್ನು ಸಂಗ್ರಹಿಸಿಟ್ಟಿದ್ದ ನಗರಸಭಾ ಸದಸ್ಯ ಸೇರಿ ನಾಲ್ವರನ್ನು ಅಪರಾಧ ಪತ್ತೆ ದಳದ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಜನರಿಗೆ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಬೇಕಿದ್ದ ಪಡಿತರ ಅಕ್ಕಿ ಮತ್ತು ತೊಗರಿಬೇಳೆ ಮೂಟೆಗಳನ್ನು ನಗರಸಭೆ ಸದಸ್ಯ ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿಗಳು, ಅಕ್ರಮವಾಗಿ ಬನ್ನೂರಿನ ಮುಸ್ಲಿಂ ಬ್ಲಾಕ್ ನ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 150 ಮೂಟೆ ಅಕ್ಕಿ ಹಾಗೂ ಅಪಾರ ಪ್ರಮಾಣದ ತೊಗರಿಬೇಳೆ ಮೂಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಡಿತರ ದಾಸ್ತಾನನ್ನು ಅಕ್ರಮವಾಗಿ ಹೊಂದಿದ್ದ ಆರೋಪದ ಮೇಲೆ ಅಪರಾಧ ಪತ್ತೆ ದಳದ ಅಧಿಕಾರಿಗಳು ಬನ್ನೂರು ನಗರಸಭಾ ಸದಸ್ಯ ಸಯ್ಯದ್ ಸೇರಿದಂತೆ ಇತರೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಘಟನೆ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 70 ಸಾವಿರ ರೂ. ಮೌಲ್ಯದ ಗೋವಾ ಮದ್ಯ ವಶಕ್ಕೆ ಪಡೆದ ಅಬಕಾರಿ ಇಲಾಖೆ

    70 ಸಾವಿರ ರೂ. ಮೌಲ್ಯದ ಗೋವಾ ಮದ್ಯ ವಶಕ್ಕೆ ಪಡೆದ ಅಬಕಾರಿ ಇಲಾಖೆ

    ಕಾರವಾರ: ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮುಚ್ಚಿಟ್ಟಿದ್ದ 70 ಸಾವಿರ ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಡೆದಿದೆ.

    ಕಾರವಾರ ತಾಲೂಕಿನಲ್ಲಿ ಮಾಜಾಳಿ ಮೀನು ಮಾರುಕಟ್ಟೆಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮಾರಾಟಕ್ಕಾಗಿ ಮುಚ್ಚಿಟ್ಟಿದ್ದ ಬರೋಬ್ಬರಿ 70 ಸಾವಿರ ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

    ಶನಿವಾರ ಖಚಿತ ಮಾಹಿತಿ ಆಧಾರದ ಮೇರೆಗೆ ಜಿಲ್ಲಾ ಅಬಕಾರಿ ಅಧೀಕ್ಷಕ ಮಂಜುನಾಥ್ ನೇತ್ರತ್ವದ ತಂಡ ಮಾಜಾಳಿ ಮೀನು ಮಾರುಕಟ್ಟೆಗೆ ಹೋಗಿದ್ದು, ಅಲ್ಲಿ ದಾಳಿ ನಡೆಸಿದ್ದಾರೆ. ಆಗ 70 ಸಾವಿರ ಮೌಲ್ಯದ 273 ಲೀಟರ್ ಗೋವಾ ಪೆನ್ನಿ, ಬಿಯರ್ ಮತ್ತು ವಿಸ್ಕಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಿಷೇಧವಾಗಿದ್ದರೂ ಬರೋಬ್ಬರಿ 500, 1 ಸಾವಿರ ಮುಖಬೆಲೆಯ 3 ಕೋಟಿ ರೂ. ಪತ್ತೆ!

    ನಿಷೇಧವಾಗಿದ್ದರೂ ಬರೋಬ್ಬರಿ 500, 1 ಸಾವಿರ ಮುಖಬೆಲೆಯ 3 ಕೋಟಿ ರೂ. ಪತ್ತೆ!

    ಪುಣೆ: ನೋಟು ನಿಷೇಧವಾಗಿ ಸುಮಾರು ಒಂದೂವರೆ ವರ್ಷವಾದ್ರೂ 500 ಮತ್ತು 1,000 ರೂ. ಮುಖಬೆಲೆಯ ಬರೋಬ್ಬರಿ 3 ಕೋಟಿ ರೂ.ವನ್ನು ಶುಕ್ರವಾರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

    ಖಾದಕ್ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದು, ಶುಕ್ರವಾರ ರಾತ್ರಿ ಕಾಂಗ್ರೆಸ್ ಶಾಸಕ ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ. ಶಾಸಕ ಗಜೇಂದ್ರ ಅಹ್ಹಂಗ್, ಸಂಗನ್ಮರ್ ಮುನಿಸಿಪಲ್ ಕೌನ್ಸಿಲ್ ನ ಕಾರ್ಪೊರೇಟರ್ ಎಂದು ತಿಳಿದುಬಂದಿದೆ. ಇತರರನ್ನು ವಿಜಯ್ ಶಿಂಧೆ (38), ಆದಿತ್ಯ ಘಾನ್ (25) ಮತ್ತು ನವನಾಥ್ ಭಂಡಾಗೆಲ್ (28) ಇವರು ಮೂಲತಃ ಪುಣೆಯವರಾಗಿದ್ದು, ಮತ್ತೊಬ್ಬ ಸತಾರಾ ಜಿಲ್ಲೆಯ ಸುರಾಜ್ ಜಗ್ತಾಪ್ (40) ಎಂದು ಗುರುತಿಸಲಾಗಿದೆ.

    ಈ ಐದು ಬಂಧಿತ ಆರೋಪಿಗಳು ಶುಕ್ರವಾರ ರಾತ್ರಿ ರವಿವರ್ ಪೆಥ್ ಪ್ರದೇಶದಲ್ಲಿ ಹಳೆಯ ನೋಟುಗಳನ್ನು ವಿನಿಮಯ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೇವಲ 48 ಸಾವಿರ ರೂ.ವನ್ನು ಮಾತ್ರ ಹಳೆಯ ನೋಟಿನಿಂದ ನವೀಕರಣ ಮಾಡಲಾಗಿತ್ತು. ಇನ್ನುಳಿದ 2.99 ಕೋಟಿ ರೂ.ಗಳು ಹಳೆಯ 500 ಮತ್ತು 1,000 ರೂ. ನೋಟುಗಳಿದ್ದವು. ಸದ್ಯಕ್ಕೆ ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ತಿಳಿದಿದ್ದು, ಅವರು ಸ್ಥಳಕ್ಕೆ ಬಂದು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಶಪಡಿಸಿಕೊಂಡಿರುವ ಹಣವು ಯಾರದು ಎಂದು ತಿಳಿದುಕೊಳ್ಳಲು ತನಿಖೆಯನ್ನು ಮುಂದುವರೆಸಿದ್ದೇವೆ.