Tag: ವಶ

  • ಚಿಕ್ಕಬಳ್ಳಾಪುರದಲ್ಲಿ ದಾಖಲೆಗಳಿಲ್ಲದ 8.50 ಲಕ್ಷ ನಗದು ವಶ

    ಚಿಕ್ಕಬಳ್ಳಾಪುರದಲ್ಲಿ ದಾಖಲೆಗಳಿಲ್ಲದ 8.50 ಲಕ್ಷ ನಗದು ವಶ

    ಚಿಕ್ಕಬಳ್ಳಾಪುರ: ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ, ರಾಜ್ಯದಲ್ಲಿ ಚುನಾವಣಾ ಪ್ರಚಾರ ಗರಿಗೆದರಿದ್ದು, ಇಂದು ದಾಖಲೆಗಳಿಲ್ಲದ 8.50 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

    ಇಂದು ಎರಡು ಕಡೆ ವಾಹನ ತಪಾಸಣೆ ಮಾಡುತ್ತಿದ್ದ ಚುನಾವಣಾಧಿಕಾರಿಗಳಿಗೆ, ಬಾಗೇಪಲ್ಲಿ ಟೋಲ್ ಗೇಟ್ ಬಳಿ 5 ಲಕ್ಷ ರೂ. ಮತ್ತು ನಂದಿ ಚೆಕ್ ಪೋಸ್ಟ್ ಬಳಿ 3.50 ಲಕ್ಷ ರೂ. ದಾಖಲೆಯಿಲ್ಲದ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಸೀರೆ ವಶ: ಇಂದು ಬೆಳಗ್ಗೆ ಮೈಸೂರಿನಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿದ್ದ 30 ಸಾವಿರ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

    ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಈ ಸೀರೆಗಳನ್ನು ಸಂಗ್ರಹಿಸಲಾಗಿತ್ತು. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್ ಗೆ ಮತ ನೀಡಿ ಎನ್ನುವ ಕರಪತ್ರಗಳಿವೆ.

    ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅನರ್ಹರ ಕುರಿತು ಫಲಿತಾಂಶ ಸುಪ್ರೀಂ ಕೋರ್ಟ್ ಫಲಿತಾಂಶಕ್ಕೂ ಮುನ್ನ ಬಿಜೆಪಿಯಿಂದ ಯೋಗೇಶ್ವರ್ ಸ್ಪರ್ಧಿಸಲು ಎಂದು ಹೇಳಲಾಗಿತ್ತು. ಹೀಗಾಗಿ ಯೋಗೇಶ್ವರ್ ಅವರೇ ಚುನಾವಣೆಗಾಗಿ ಈ ಎಲ್ಲ ಸಿದ್ಧತೆ ನಡೆಸಿದ್ದರಾ ಎಂಬ ಪ್ರಶ್ನೆ ಇದೀಗ ಮೂಡಿದೆ.

  • ವಾಹನ ತಪಾಸಣೆ ವೇಳೆ ಕಾರಿನಲ್ಲಿ 1.5 ಕೋಟಿ ಹಣ ಪತ್ತೆ

    ವಾಹನ ತಪಾಸಣೆ ವೇಳೆ ಕಾರಿನಲ್ಲಿ 1.5 ಕೋಟಿ ಹಣ ಪತ್ತೆ

    ಚಾಮರಾಜನಗರ: ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದವ ವಾಹನ ತಪಾಸಣೆ ವೇಳೆ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದು, ಕೋಟ್ಯಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವ ಘಟನೆ ಹಾಸನೂರು ಚೆಕ್ ಪೋಸ್ಟ್ ಬಳಿ ನಡೆದಿದೆ.

    ಚಾಮರಾಜನಗರದ ಬಾರ್ಡರ್ ತಮಿಳುನಾಡಿನ ಹಾಸನೂರು ಚೆಕ್ ಪೋಸ್ಟ್ ನಲ್ಲಿ ಹಾಸನೂರು ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಹಾರಾಷ್ಟ್ರದಿಂದ ತಮಿಳುನಾಡಿನ ಕಡೆ ಹೋಗುತ್ತಿದ್ದ ಕಾರೊಂದನ್ನು ತಪಾಸಣೆ ಮಾಡಿದ್ದಾರೆ. ಆ ಕಾರಿನಲ್ಲಿ ದಾಖಲೆ ಇಲ್ಲದ ಬರೋಬ್ಬರಿ 1.5 ಕೋಟಿ ರೂ. ಹಣ ಪತ್ತೆಯಾಗಿದೆ.

    ಮಹಾರಾಷ್ಟ್ರ ಮೂಲದ ಎಂಎಚ್-14- ಇಎಚ್9189 ವಾಹನದ ಮೂಲಕ ಹಣ ಸಾಗಣೆ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ತಕ್ಷಣ ಹಾಸನೂರು ಪೊಲೀಸರು ಕಾರು ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಈ ಕುರಿತು ಹಾಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಯನ್ನು ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೆ ಅಕ್ರಮ ಖೋಟಾ ನೋಟು ಸಾಗಾಟದ ಪ್ರಕರಣದಲ್ಲಿ 3.16 ಕೋಟಿ ಪತ್ತೆಯಾಗಿತ್ತು. ಇದೀಗ ಅಸಲಿ ನೋಟು ಸಾಗಾಟ ಪ್ರಕರಣ ಪತ್ತೆಯಾಗಿದೆ.

  • ವಯನಾಡಿನಿಂದ ಮೂರು ಟ್ರಕ್‍ಗಳಲ್ಲಿ ಸಾಗಿಸುತ್ತಿದ್ದ ಗೋವುಗಳು ಪೊಲೀಸರ ವಶಕ್ಕೆ

    ವಯನಾಡಿನಿಂದ ಮೂರು ಟ್ರಕ್‍ಗಳಲ್ಲಿ ಸಾಗಿಸುತ್ತಿದ್ದ ಗೋವುಗಳು ಪೊಲೀಸರ ವಶಕ್ಕೆ

    ಉಡುಪಿ: ಮೂರು ಟ್ರಕ್‍ಗಳಲ್ಲಿ ಕೇರಳದ ವಯನಾಡಿನಿಂದ ಗೋಶಾಲೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಉಡುಪಿ ಜಿಲ್ಲೆ ಕಾಪುವಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ದಾಖಲೆ ಯಾವುದೂ ಇಲ್ಲದೆ ಅಕ್ರಮ ಗೋವು ಸಾಗಾಟದ ಶಂಕೆಯಲ್ಲಿ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು ಕಾಪು ಠಾಣಾ ವ್ಯಾಪ್ತಿಯಲ್ಲಿ 3 ಟ್ರಕ್‍ನಲ್ಲಿದ್ದ ಜಾನುವಾರುಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಶಿರ್ವದಲ್ಲಿ ಹೊಸದಾಗಿ ಆರಂಭಿಸಿದ ಗೋ ಶಾಲೆಗೆ ಗೋವುಗಳನ್ನು ತರಲಾಗಿದೆ ಎಂದು ಗೋಶಾಲೆ ಮ್ಯಾನೇಜರ್ ಗಿರೀಶ ಅವರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಅಕ್ರಮ ಸಾಗಾಟದ ರೀತಿ ಕಂಡು ಬಂದಿದ್ದು ಆರ್‍.ಟಿ.ಓ ನಿಯಮ ಉಲ್ಲಂಘನೆ, ಅಕ್ರಮ ಸಾಗಾಟ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

    ಕೇರಳದಿಂದ ತಂದ ಜಾನುವಾರುಗಳನ್ನು ಗೋವು ಶಾಲೆಗೆ ರವಾನಿಸಲಾಗಿದೆ. ಸಾಗಾಟದ ಸಂದರ್ಭದಲ್ಲಿ ಒಂದು ಗೋವು ಸಾವನಪ್ಪಿರುವುದು ಕೂಡಾ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು.

  • ಏರ್‌ಪೋರ್ಟಿನಲ್ಲಿ 2.25 ಕೋಟಿ ಮೌಲ್ಯದ ವಜ್ರ ವಶ

    ಏರ್‌ಪೋರ್ಟಿನಲ್ಲಿ 2.25 ಕೋಟಿ ಮೌಲ್ಯದ ವಜ್ರ ವಶ

    ಚೆನ್ನೈ: ನಗರದ ಅಣ್ಣಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 2.25 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಆರೋಪಿಯನ್ನು ಮಲೇಷಿಯಾ ಮೂಲದ ಅಜ್ಮಲ್ ಖಾನ್ ಬಿನ್ ನಾಗೋರ್ ಮೇರಾ (48) ಎಂದು ಗುರುತಿಸಲಾಗಿದೆ. ಈತ ಬಾಟಿಕ್ ವಿಮಾನದಲ್ಲಿ ಕೌಲಾಲಂಪುರದಿಂದ ಆಗಮಿಸಿದ್ದನು. ಅಣ್ಣಾ ವಿಮಾನ ನಿಲ್ದಾಣದಿಂದ ಹೋಗುವಾಗ ಈತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.

    ಪರಿಶೀಲನೆ ವೇಳೆ ಆರೋಪಿ ತನ್ನ ಒಳ ಉಡುಪಿನಲ್ಲಿ ಎರಡು ಬಿಳಿ ಬಂಡಲ್ಸ್ ಗಳಿಂದ ವಜ್ರಗಳನ್ನು ಬಚ್ಚಿಟ್ಟುಕೊಂಡಿದ್ದನು. ಬಳಿಕ ಆತನ ಲಗೇಜ್ ಚೆಕ್ ಮಾಡಿದಾಗ ಮಲ್ಟಿ-ಫಂಕ್ಷನ್ ಕುಕ್ಕರ್ ಒಳಗೆ ಎಂಟು ಕಟ್ಟುಗಳು ಪತ್ತೆಯಾಗಿದ್ದು, ಅದರಲ್ಲಿ ಟೇಪ್‍ನಲ್ಲಿ ಸುತ್ತಿ ಕುಕ್ಕರ್ ಕೆಳಭಾಗದಲ್ಲಿ ಇಟ್ಟಿದ್ದನು. ಆ ಕಟ್ಟುಗಳಿಂದ ಅಮೂಲ್ಯವಾದ 55 ಬಿಳಿ ಮಿನಿ ಜಿಪ್‍ಲಾಕ್ ಕವರ್ ಪ್ಯಾಕ್‍ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಒಟ್ಟು ಸುಮಾರು 2,996 ಕ್ಯಾರೆಟ್ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆ ಮಾಡಿದಾಗ ವಿಮಾನ ನಿಲ್ದಾಣದ ಹೊರಗೆ ಅಪರಿಚಿತ ವ್ಯಕ್ತಿಗೆ ಇದನ್ನು ಹಸ್ತಾಂತರಿಸಬೇಕಾಗಿತ್ತು ಎಂದು ಹೇಳಿದ್ದಾನೆ. ನಂತರ ಅಧಿಕಾರಿಗಳು ಆತನ್ನು ವಿಮಾನ ನಿಲ್ದಾಣದ ಹೊರಗೆ ಕರೆದುಕೊಂಡು ಹೋಗಿ ಅಪರಿಚಿತ ವ್ಯಕ್ತಿಗಾಗಿ ಹುಡುಕಾಡಿದ್ದಾರೆ. ಆದರೆ ಆತ ಎಲ್ಲೂ ಪತ್ತೆಯಾಗಿಲ್ಲ.

    ಸದ್ಯಕ್ಕೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

  • ಇತಿಹಾಸದಲ್ಲಿ ಇಂದು ಕಪ್ಪು ದಿನ: ಡಿ.ಕೆ.ಸುರೇಶ್

    ಇತಿಹಾಸದಲ್ಲಿ ಇಂದು ಕಪ್ಪು ದಿನ: ಡಿ.ಕೆ.ಸುರೇಶ್

    -ಎಲ್ಲದಕ್ಕೂ ಬಿಜೆಪಿಯ ಅಧಿಕಾರ ದಾಹವೇ ಕಾರಣ

    ಬೆಂಗಳೂರು: ಬಿಜೆಪಿಯವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಡಿ.ಕೆ.ಶಿವಕುಮಾರ್ ಸೇರಿದಂತೆ ಮೂವರು ಶಾಸಕರನ್ನು ವಶಕ್ಕೆ ಪಡೆದಿರುವುದು ಬಹುಶಃ ಇತಿಹಾಸದಲ್ಲಿ ಇಂದು ಕಪ್ಪು ದಿನ  ಅಂತ ಭಾವಿಸಿದ್ದೇನೆ ಎಂದು ಸುರೇಶ್ ಬೇಸರದಲ್ಲಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಶಿವಕುಮಾರ್ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಭೇಟಿಯಾಗಲು ಹೋಗಿದ್ದರು. ಅವರು ಯಾರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿಲ್ಲ. ಕೆಲ ಶಾಸಕರು ಮಾತ್ರ ಜೊತೆಯಲ್ಲಿ ಹೋಗಿದ್ದರು. ಆದರೆ ಅನಾವಶ್ಯಕವಾಗಿ ಇಂದು ಮಹಾರಾಷ್ಟ್ರ ಬಿಜೆಪಿ ಸರ್ಕಾರ ಕರ್ನಾಟಕದ ಶಾಸಕರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದರೆ ಇದರ ಹಿಂದೆ ಸಂಪೂರ್ಣ ಬಿಜೆಪಿ ನಾಯಕರ ಕೈವಾಡವಿದೆ ಎಂದು ದೂರಿದರು.

    ನಾವು ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ವಿ. ಆದರೆ ಇದ್ದಕ್ಕಿದ್ದಂತೆ ರೂಮ್ ಕ್ಯಾನ್ಸಲ್ ಮಾಡಿದ್ದಾರೆ. ಇತ್ತ ನಮ್ಮ ಶಾಸಕರನ್ನು ಭೇಟಿ ಮಾಡಲು ಮಹಾರಾಷ್ಟ್ರ ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾಗಿ ಇದರ ಹಿಂದೆ ಬಿಜೆಪಿ ನಾಯಕರಿದ್ದಾರೆ. ಬಿಜೆಪಿ ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಡಿ.ಕೆ.ಶಿವಕುಮಾರ್ ಸೇರಿದಂತೆ ಮೂವರು ಶಾಸಕರನ್ನು ಬಂಧಿಸಿರುವುದು ಬಹುಶಃ ಇತಿಹಾಸದಲ್ಲಿ ಇಂದು ಕಪ್ಪು ದಿನ ಅಂತ ಭಾವಿಸಿದ್ದೇನೆ ಎಂದು ಸುರೇಶ್ ಬೇಸರದಲ್ಲಿ ಹೇಳಿದರು.

    ಡಿ.ಕೆ.ಶಿವಕುಮಾರ್ ಅವರನ್ನು ಯಾವುದಾದರೂ ಠಾಣೆಗೆ ಅಥವಾ ಜೈಲಿಗೆ ಕರೆದುಕೊಂಡು ಹೋಗಿರುತ್ತಾರೆ. ಏನ್ ಮಾಡೋಕೆ ಆಗುತ್ತೆ, ಎಲ್ಲವನ್ನು ಅನುಭವಿಸಬೇಕು. ಬಿಜೆಪಿ ಅವರು ಇನ್ನೂ ಏನೇನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಇದೆಲ್ಲದಕ್ಕೂ ಬಿಜೆಪಿ ನಾಯಕರ ಅಧಿಕಾರದ ದಾಹವೇ ಕಾರಣ ಎಂದು ಸುರೇಶ್ ಆರೋಪಿಸಿದರು.

    ನಾನು ಫೋನ್ ಮಾಡಿದಾಗ ಈ ರೀತಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು ಅಷ್ಟೇ. ಹೀಗಾಗಿ ಮಳೆ, ಗಾಳಿ, ಚಳಿ, ಬಿಸಿಲು ಏನೇ ಆದರೂ ಎಲ್ಲದಕ್ಕೂ ಸಿದ್ಧವಾಗಿದ್ದೇವೆ ಎಂದು ಕೋಪದಿಂದ ಸುರೇಶ್ ಹೇಳಿದರು.

    ಇದು ಪಕ್ಷದ ಅಸ್ಥಿತ್ವದ ಪ್ರಶ್ನೆ. ಮುಂಬೈನಲ್ಲಿರುವ ಅತೃಪ್ತ ಶಾಸಕರು ಕಾಂಗ್ರೆಸ್ ಪಕ್ಷವನ್ನು ಕಷ್ಟಪಟ್ಟು ಕಟ್ಟಿದ್ದಾರೆ. ಹೀಗಾಗಿ ಅಂತಹವರು ಈ ರೀತಿ ರಾಜೀನಾಮೆ ನೀಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಅವರು ಒತ್ತಡದಲ್ಲಿ ಮಾತನಾಡುತ್ತಿದ್ದಾರೆ. ಅವರು ಕೂಡ ನಾವು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‍ನವರು ಹೋಗಿ ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.

    ಒಂದು ಪಕ್ಷ ಎಂದರೆ ಅದು ಒಂದು ಕುಟುಂಬ ಇದ್ದಂತೆ. ನಮ್ಮ ಕುಟುಂಬದವರ ಜೊತೆ ಮಾತನಾಡಬೇಕು ಎಂದು ಶಿವಕುಮಾರ್ ಹೋಗಿದ್ದರು. ಅವರು ಶಿವಕುಮಾರ್ ಅವರಿಗೆ ಬೈಯುತ್ತಾರ, ಹೊಡೆಯುತ್ತಾರ ಹೊಡೆಯಲಿ ಅವರಿಗೆ ಆ ಹಕ್ಕಿದೆ. ಬೈರತಿ ಬಸವರಾಜ್, ಸೋಮಶೇಖರ್ ಸೇರಿದಂತೆ ಇತರೆ ಶಾಸಕರು ಸೇರಿದಂತೆ ಎಲ್ಲರಿಗೂ ಬೈಯುವ, ತೆಗಳುವ ಹಕ್ಕಿದೆ. ಒಂದು ಕುಟುಂಬ ಎಂದರೆ ಜಗಳ, ಕೋಪ ಇದ್ದೇ ಇರುತ್ತದೆ. ಏನೇ ತಪ್ಪಾಗಿದ್ದರೂ ಅದನ್ನು ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಲು ಮುಂಬೈಗೆ ಹೋಗಿದ್ದರು ಎಂದು ಸುರೇಶ್ ತಿಳಿಸಿದರು.

  • ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗಿಸ್ತಿದ್ದ ಲಾರಿಗಳು ವಶ

    ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗಿಸ್ತಿದ್ದ ಲಾರಿಗಳು ವಶ

    ಗದಗ: ಜಿಪಿಎಸ್ ಇಲ್ಲದೆ ಓವರ್ ಲೋಡ್ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳ ಅಧಿಕಾರಿಗಳು ವಶಪಡೆದಿರುವ ಘಟನೆ ಗದಗನಲ್ಲಿ ನಡೆದಿದೆ.

    ಮುಂಡರಗಿ ತುಂಗಭದ್ರಾ ನದಿಯಿಂದ ಗದಗ, ಹುಬ್ಬಳ್ಳಿ, ಧಾರವಾಡಕ್ಕೆ ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗುತ್ತಿರುವ ವಾಹನಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗದಗ್ ನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸಂತೋಷ ಹಾಗೂ ಶಹರ ಪೊಲೀಸ್ ಠಾಣೆ ಸಿಬ್ಬಂದಿ ನೇತೃತ್ವದಲ್ಲಿ ರಿಂಗ್ ರೋಡ್ ಬಳಿ ದಾಳಿ ಮಾಡಲಾಗಿದೆ.

    ಅಕ್ರಮ ಮರಳು ಸಾಗಾಟ ಆರೋಪದ ಮೇಲೆ ವಿಚಾರಣೆಗೆ ಬಂದ ವೇಳೆ ವಾಹನಗಳ ಚಾಲಕರು ಹಾಗೂ ಮಾಲೀಕರು ಅಧಿಕಾರಿಗಳಿಗೆ ಅವಾಜ್ ಹಾಕಿದ್ದರು. ನಾವು ಜಿಪಿಎಸ್ ಡಿಸ್ ಕನೆಕ್ಟ್ ಮಾಡಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು ಹಾಳಾದರೆ ನಾವೇನು ಮಾಡಲು ಸಾಧ್ಯ. ನೀವು ಯಾವ ಉದ್ದೇಶಕ್ಕೆ ನಮ್ಮ ವಾಹನಗಳನ್ನ ಹಿಡಿದ್ರಿ? ಪಾಸ್ ಟೈಮಿಂಗ್ ಇದ್ದರೂ ಹೇಗೆ ಹಿಡಿದ್ರಿ? ನಿತ್ಯ ಎಲ್ಲಾ ವಾಹನಗಳನ್ನ ಹೀಗೆ ಹಿಡಿಯಬೇಕು. ಇಲ್ಲವಾದರೆ ಠಾಣೆ ಹೊರಗೆ ಹೋರಾಟ ಮಾಡುತ್ತೇವೆ ಎಂದು ಅವಾಜ್ ಹಾಕಿದ್ದಾರೆ.

    ವಾಹನಗಳ ಚಾಲಕರು ಹಾಗೂ ಮಾಲೀಕರು ಅವಾಜ್ ಗೆ ಬಗ್ಗದ ಅಧಿಕಾರಿಗಳು 5 ಮರಳು ಲಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ದಾಖಲೆಯಿಲ್ಲದೆ ಸಾಗಿಸ್ತಿದ್ದ 1 ಕೋಟಿ ರೂ. ಹಣ ವಶ

    ದಾಖಲೆಯಿಲ್ಲದೆ ಸಾಗಿಸ್ತಿದ್ದ 1 ಕೋಟಿ ರೂ. ಹಣ ವಶ

    ಮಂಗಳೂರು: ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬ್ಯಾಗಿನಲ್ಲಿ ಹಣದ ಕಂತೆಯನ್ನು ಒಯ್ಯುತ್ತಿದ್ದ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ, 56 ವರ್ಷದ ಮಂಜುನಾಥ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಬಂದರು ಠಾಣೆ ಪೊಲೀಸರು ಇಂದು ಬೆಳಗ್ಗೆ ಮಂಗಳೂರಿನ ರಥಬೀದಿ ಪರಿಸರದಲ್ಲಿ ರೌಂಡ್ಸ್ ನಲ್ಲಿದ್ದ ವೇಳೆ ತಪಾಸಣೆ ನಡೆಸಿದಾಗ ನಗದು ಪತ್ತೆಯಾಗಿದೆ.

    ಜುವೆಲ್ಲರಿ ವಹಿವಾಟಿನಲ್ಲಿ ತೊಡಗಿಸಲು ಹಣ ತರುತ್ತಿದ್ದ ಎನ್ನಲಾಗಿದ್ದು, ಸೂಕ್ತ ದಾಖಲೆಗಳಿಲ್ಲದ ಕಾರಣ ಪೊಲೀಸರು ಜಪ್ತಿ ಮಾಡಿದ್ದಾರೆ. ಮಂಗಳೂರಿನ ಜುವೆಲ್ಲರಿಗಳಲ್ಲಿ ಹವಾಲಾ ಹಣದ ಹೂಡಿಕೆಯಿದ್ದು, ವರ್ಷದ ಹಿಂದೆ ಮೂರು ಕೋಟಿ ನಗದು ತರುತ್ತಿದ್ದಾಗ ವ್ಯಕ್ತಿಯೊಬ್ಬನನ್ನು ತಂಡವೊಂದು ಅಪಹರಿಸಿದ್ದರು.

    ಮುಂಬೈ ಮತ್ತು ಬೆಂಗಳೂರಿನಿಂದ ಹವಾಲಾ ಹಣ ತಂದು ಇಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮಂಜುನಾಥ್ ಹಣ ತರುತ್ತಿದ್ದ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 7.6 ಕೆಜಿ ಕಬ್ಬಿಣ ಬಳಸಿ ಚಿನ್ನ ಪ್ಯಾಕ್ ಮಾಡಿದ್ದ ಕಳ್ಳ ಅಂದರ್!

    7.6 ಕೆಜಿ ಕಬ್ಬಿಣ ಬಳಸಿ ಚಿನ್ನ ಪ್ಯಾಕ್ ಮಾಡಿದ್ದ ಕಳ್ಳ ಅಂದರ್!

    ಬೆಂಗಳೂರು: ಏರ್ ಇಂಟಲಿಜೆನ್ಸಿ ಯುನಿಟ್ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಬೃಹತ್ ಕಾರ್ಯಾಚರಣೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 3 ಕೆಜಿ 679 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಚಾಮರಾಜನಗರ ಮೂಲದ ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಾಟ ಮಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ.

    ಖತರ್ನಾಕ್ ವ್ಯಕ್ತಿ ‘ಬೆಂಚ್ ವೈಸ್’ ಎಂಬ ಕಬ್ಬಿಣದ ಸಾಧನದಲ್ಲಿ ಚಿನ್ನ ಅಡಗಿಸಿಟ್ಟಿದ್ದನು. ಚಿನ್ನದ ಸುತ್ತಲೂ 7.6 ಕೆ.ಜಿ ಕಬ್ಬಿಣ ಹಾಕಿ ಪ್ಯಾಕ್ ಮಾಡಿದ್ದನು. ವಿಮಾನ ನಿಲ್ದಾಣದಲ್ಲಿ ಅನುಮಾನದ ಮೇರೆಗೆ ಏರ್ ಇಂಟಲಿಜೆನ್ಸಿ ಯುನಿಟ್ ಅಧಿಕಾರಿಗಳು ಪ್ರಶ್ನಿಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ.

    ಸದ್ಯಕ್ಕೆ ಅಧಿಕಾರಿಗಳು ವ್ಯಕ್ತಿಯನ್ನು ಮತ್ತು 1 ಕೋಟಿ 19 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.

  • ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 31 ಕ್ವಿಂಟಾಲ್ ಅಕ್ಕಿ ವಶ – ಆರೋಪಿ ಪರಾರಿ

    ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 31 ಕ್ವಿಂಟಾಲ್ ಅಕ್ಕಿ ವಶ – ಆರೋಪಿ ಪರಾರಿ

    ಕಾರವಾರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಆಹಾರ ಇಲಾಖೆ ವಶಪಡಿಸಿಕೊಂಡಿದೆ.

    ಇಲ್ಲಿನ ಪರವರ್ಗ ಗ್ರಾಮದ ಗಣೇಶ ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಬೊಲೆರೊ ಪಿಕಪ್ ವಾಹನಕ್ಕೆ ತುಂಬುತ್ತಿದ್ದನು. ಈತನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ್ವಯ ಆಹಾರ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ವೇಳೆ ಚಾಲಕ ಪರಾರಿಯಾಗಿದ್ದು, ವಾಹನ ಸಮೇತ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

    ಮೊಹ್ಮದ್ ಯುಸೂಬ್ ಹಮ್ಮಿದ್ ಎಂಬವರ ಮನೆಯ ಶೆಡ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ಕಿಯನ್ನು ಪಿಕಪ್ ಗೆ ತುಂಬುತ್ತಿದ್ದ ವೇಳೆ ಅಲ್ಲಿನ ಸಾರ್ವಜನಿಕರು ತಹಸೀಲ್ದಾರ್ ಕಛೇರಿಗೆ ಕರೆ ಮಾಡಿ ದೂರು ನೀಡಿದ್ದರು.

    ತಹಸೀಲ್ದಾರ್ ಎನ್.ಬಿ ಪಾಟೀಲ್ ಅವರ ಆದೇಶದ ಮೇರೆಗೆ ಕಾರ್ಯಪ್ರವೃತ್ತರಾದ ಆಹಾರ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. 50 ಕೆಜಿಯ ತೂಕದ 60 ಚೀಲಗಳಲ್ಲಿದ್ದ ಒಟ್ಟು 31 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಅಕ್ಕಿಯನ್ನು ಬಂದರ್ ರಸ್ತೆಯಲ್ಲಿ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ದಾಸ್ತಾನು ಮಳಿಗೆಯಲ್ಲಿ ಶೇಖರಿಸಿಡಲಾಗಿದೆ.

    ಅಕ್ಕಿ ಸಾಗಾಟಕ್ಕೆ ಬಳಸಲಾದ ಬೊಲೆರೊ ಪಿಕಪ್ ವಾಹನವನ್ನು ವಶಕ್ಕೆ ಪಡೆದ ಅಧಿಕಾರಿಗಳು ನಗರ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆ ನಿರೀಕ್ಷಕ ಪ್ರವೀಣ, ಕಂದಾಯ ನಿರೀಕ್ಷಕ ಗಣಪತಿ ಮೇತ್ರಿ, ಮುಠ್ಠಳ್ಳಿ ಗ್ರಾಮ ಲೆಕ್ಕಾದಿಕಾರಿ ಸಲ್ಮಾನ್ ಖಾನ್ ಹಾಗೂ ಇತರ ಸಿಬ್ಬಂದಿಗಳು ಇದ್ದರು.

  • ಕಾರಿನಲ್ಲಿ 9 ಲಕ್ಷ ನಗದು ಪತ್ತೆ!

    ಕಾರಿನಲ್ಲಿ 9 ಲಕ್ಷ ನಗದು ಪತ್ತೆ!

    ಹಾವೇರಿ: ಲೋಕಸಬಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ದಾಖಲೆ ಇಲ್ಲದೇ ಹಣ ಅಧಿಕವಾಗಿ ಪತ್ತೆಯಾಗುತ್ತಿದ್ದು, ಈಗ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬಳಿ ಕಾರಿನಲ್ಲಿ 9 ಲಕ್ಷ ನಗದು ಹಣ  ಪತ್ತೆಯಾಗಿದೆ.

    ತಾಲೂಕಿನ ವರಹ ಗ್ರಾಮದ ಬಳಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ವಾಹನ ತಪಾಸಣೆ ವೇಳೆ ಹಣ ಸಿಕ್ಕಿದೆ. ಉಜ್ಜಯ್ಯ ಎಂಬವರ ಕಾರಿನಲ್ಲಿ ಧಾರವಾಡ ಜಿಲ್ಲೆಯ ತರ್ಲಘಟ್ಟದಿಂದ ಹಿರೇಕೆರೂರು ತಾಲೂಕಿನ ತಡಕನಹಳ್ಳಿ ಗ್ರಾಮದತ್ತ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ತಪಾಸಣೆ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾರೆ.

    ಫ್ಲೈಯಿಂಗ್ ಸ್ಕ್ವಾಡ್ ತಂಡ ಕಾರ್ಯಚರಣೆ ಮಾಡಿ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂಬತ್ತು ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಉಜ್ಜಯ್ಯ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.

    ಈ ಘಟನೆ ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.