Tag: ವಶ

  • ದಾಖಲೆಯಿಲ್ಲದೇ ಸಾಗಿಸ್ತಿದ್ದ 56.96 ಲಕ್ಷ ರೂ. ವಶ

    ದಾಖಲೆಯಿಲ್ಲದೇ ಸಾಗಿಸ್ತಿದ್ದ 56.96 ಲಕ್ಷ ರೂ. ವಶ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಪಗಿ ನಾಕಾ ಬಳಿ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅಂದಾಜು 56 ಲಕ್ಷ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಿದ್ದಾಪುರ ತಾಲೂಕಿನ ಹೇರೂರಿನ ಅಬ್ದುಲ್ ಮುತಲಿಫ್ (31) ಹಾಗೂ ಅಬ್ದುಲ್ ಸೌದ್ (42) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

    ಅಬ್ದುಲ್ ಮುತಲಿಫ್ ಮತ್ತು ಅಬ್ದುಲ್ ಸೌದ್ ಇವರು ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಆದರೆ ಚಿಪಗಿ ನಾಕಾ ಬಳಿ ಖಚಿತ ಮಾಹಿತಿ ಮೇರೆಗೆ ಡಿವೈಎಸ್‍ಪಿ ಜಿ.ಟಿ.ನಾಯಕ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿದೆ. ಆಗ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಸುಮಾರು 56 ಲಕ್ಷ ರೂ. ನಗದು ಪತ್ತೆಯಾಗಿದೆ.

    ತಕ್ಷಣ ಪೊಲೀಸರು ಇಬ್ಬರನ್ನು ಬಂಧಿಸಿ, 55 ಲಕ್ಷದ 96 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಹಣ ಸಾಗಿಸಲು ಬಳಸಿದ್ದ ಕಾರನ್ನು ಸಹ ಜಪ್ತಿ ಮಾಡಲಾಗಿದೆ. ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪೊಲೀಸ್ ಸಿಬ್ಬಂದಿ ಪ್ರಶಾಂತ್, ಚಂದ್ರಪ್ಪ, ಕೃಷ್ಣ, ಅನ್ಸಾರಿ, ರಾಜೇಶ್ ನಾಯಕ್, ರಾಜೇಶ್ ಕೊರಗ, ಜೋಸೆಫ್, ಶ್ರೀಧರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

  • 5.64 ಲಕ್ಷ ಮೌಲ್ಯದ 18 ಬೈಕ್‍ಗಳ ವಶ

    5.64 ಲಕ್ಷ ಮೌಲ್ಯದ 18 ಬೈಕ್‍ಗಳ ವಶ

    ದಾವಣಗೆರೆ: ವಿವಿಧ ಪ್ರಕರಣಗಳಲ್ಲಿ ಸುಮಾರು 5.64 ಲಕ್ಷ ಮೌಲ್ಯ ಬೆಲೆ ಬಾಳುವ 18 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

    ಬಡಾವಣೆ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ. ವಿನಾಯಕ ಟಿ.ಬಿ ಹಾಗೂ ಸತೀಶ್ ಎ.ಬಂಧಿತ ಆರೋಪಿಗಳು. ಜನವರಿ 3 ರಂದು ಆರೋಪಿಗಳು ರಾಂ ಅಂಡ್ ಕೋ ವೃತ್ತದ ಬಳಿ ಕಳ್ಳತನ ಮಾಡಿದ್ದ ಬೈಕ್‍ನಲ್ಲಿ ಸಿಕ್ಕಿಬಿದ್ದಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ಕೆಲವು ತಿಂಗಳುಗಳಿಂದ ನಗರದ ಪಿಜೆ, ನಿಜಲಿಂಗಪ್ಪ ಬಡಾವಣೆ, ಎಂಸಿಸಿ ಬಿ ಬ್ಲಾಕ್, ಕುವೆಂಪು ನಗರ, ಕಾಯಿಪೇಟೆ, ಸಿದ್ದವೀರಪ್ಪ ಬಡಾವಣೆ, ಆಂಜನೇಯ, ರಂಗನಾಥ ಬಡಾವಣೆ ಮತ್ತು ಜಯನಗರ ಬಡಾವಣೆಗಳಲ್ಲಿ ಒಟ್ಟು 18 ಬೈಕ್‍ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಬಂಧಿತರಿಂದ ಎಲ್ಲಾ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಎಎಸ್‍ಪಿ ಎಂ.ರಾಜೀವ್, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್, ವೃತ್ತ ನಿರೀಕ್ಷಕ ತಿಮ್ಮಣ್ಣ ಮಾರ್ಗದರ್ಶನದಲ್ಲಿ ಬಡಾವಣೆ ಪಿಎಸ್‍ಐ ಚಿದಾನಂದಪ್ಪ, ಮಹಮದ್ ಜಕ್ರಿಯಾ, ಸಿಬ್ಬಂದಿಗಳಾದ ಸಿದ್ದೇಶ್, ಹರೀಶ್, ಸೈಯದ್ ಅಲಿ, ಪುರುಷೋತ್ತಮ್, ಅರುಣ್ ಕುಮಾರ್, ವಿಶಾಲಾಕ್ಷಿ, ಕುಬೇಂದ್ರಪ್ಪ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

  • ಇಸ್ಪೀಟ್ ಅಡ್ಡೆ ಮೇಲೆ ದಾಳಿ- 17 ಬೈಕ್, 88 ಸಾವಿರ ಹಣ ವಶ

    ಇಸ್ಪೀಟ್ ಅಡ್ಡೆ ಮೇಲೆ ದಾಳಿ- 17 ಬೈಕ್, 88 ಸಾವಿರ ಹಣ ವಶ

    ಯಾದಗಿರಿ: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದು, 17 ಬೈಕ್ ಮತ್ತು 88 ಸಾವಿರ ನಗದು ಹಣವನ್ನು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಗೋಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಗೋಗಿ ಪಿಎಸ್‍ಐ ಸೋಮಲಿಂಗ ಒಡೆಯರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇತ್ತೀಚೆಗೆ ಶಹಪುರ ತಾಲೂಕಿನ ಚಂದಾಪುರ ಗ್ರಾಮದ ಹೊರವಲಯದಲ್ಲಿ ಕಾನೂನು ಬಾಹಿರವಾಗಿ ಚಟುವಟಿಕೆಗಳು ಹೆಚ್ಚಾಗಿದ್ದವು. ಶಹಪುರ ತಾಲೂಕಿನ ಕೆಲ ಪ್ರಭಾವಿ ಮುಖಂಡರ ಮಕ್ಕಳು ಮತ್ತು ಸಂಬಂಧಿಕರು ಈ ಇಸ್ಪೀಟು ಅಡ್ಡೆಗಳನ್ನು ನಡೆಸುತ್ತಿದ್ದರು.

    ಈ ಬಗ್ಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದವು. ಹೀಗಾಗಿ ಪೊಲೀಸರು ಖಚಿತ ಮಾಹಿತಿ ಪಡೆದು ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 17 ಬೈಕ್ ಮತ್ತು 88,000 ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನೂ ದಾಳಿಯಲ್ಲಿ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

  • ಬೇಟೆಗೆ ಅಕ್ರಮ ಬಂದೂಕುಗಳ ಬಳಕೆ- ಇಬ್ಬರ ಬಂಧನ

    ಬೇಟೆಗೆ ಅಕ್ರಮ ಬಂದೂಕುಗಳ ಬಳಕೆ- ಇಬ್ಬರ ಬಂಧನ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ನಾಡ ಬಂದೂಕು ಹಿಡಿದುಕೊಂಡು ಓಡಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಮಸ್ಕಿ ತಾಲೂಕಿನ ದ್ಯಾಮಣ್ಣ ಮತ್ತು ಬಳ್ಳಾರಿಯ ಕಂಪ್ಲಿಯ ಈರಣ್ಣ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಗಬ್ಬೂರು ಠಾಣೆ ಪೊಲೀಸರು ಕೆಬಿಜೆಎನ್ ಎಲ್ ಕಾಲುವೆ ಬಳಿ ಆರೋಪಿಗಳನ್ನ ಬಂಧಿಸಿದ್ದಾರೆ. ಕಾಡು ಪ್ರಾಣಿಗಳನ್ನ ಬೇಟೆಯಾಡಲು ಬಂದೂಕುಗಳನ್ನ ಬಳಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಅಕ್ರಮ ನಾಡ ಬಂದೂಕುಗಳನ್ನ ತಾವೇ ತಯಾರಿಸಿಕೊಂಡು ಬಳಸುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ.

    ಆರೋಪಿಗಳಿಂದ ಎರಡು ನಾಡ ಬಂದೂಕು, ಮದ್ದಿನ ಪುಡಿ, ಚರಿ, ಬಂದೂಕಿಗೆ ಬಳಸುವ ನಳಿಕೆಯನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಾವುದೇ ಅಧಿಕೃತ ಪರವಾನಿಗೆಯನ್ನ ಹೊಂದಿರದೆ ಬಂದೂಕು ಬಳಸುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

  • ಸ್ಯಾಟಲೈಟ್ ಫೋನ್ ಹೊಂದಿದ್ದ ಮಹಿಳಾ ಪೈಲಟ್ ವಶ

    ಸ್ಯಾಟಲೈಟ್ ಫೋನ್ ಹೊಂದಿದ್ದ ಮಹಿಳಾ ಪೈಲಟ್ ವಶ

    ಬೆಂಗಳೂರು: ಸ್ಯಾಟಲೈಟ್ ಫೋನ್ ಹೊಂದಿದ್ದ ಅಮೆರಿಕಾ ಮೂಲದ ಮಹಿಳಾ ಪೈಲಟನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

    ಅಮೆರಿಕಾ ಮೂಲದ ಬೆಂಟರ್ ಚಾರಿಟಿ ನೊಯಲ್ ವಶಕ್ಕೆ ಪಡೆದ ಮಹಿಳಾ ಪೈಲಟ್. ಅಂದಹಾಗೆ ವಿಶೇಷ ವಿಮಾನದ ಚಾಲಕಿಯಾಗಿರುವ ಬೆಂಡರ್ ಚಾರಿಟಿ ನೊಯಲ್ ಬಳಿ ತಪಾಸಣೆ ವೇಳೆ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಹೀಗಾಗಿ ಅನುಮಾನಗೊಂಡ ಸಿಐಎಸ್‍ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಕೆಯನ್ನ ಕೆಐಎಎಲ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕೆಐಎಎಲ್‍ನ ಸಿಪಿಐ ಪ್ರಶಾಂತ್, ಮಹಿಳಾ ವಿಮಾನ ಚಾಲಕಿಯನ್ನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಭಾರತ ದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ನಿಷಿದ್ಧ ಹಾಗೂ ಕಾನೂನುಬಾಹಿರ, ಕೇವಲ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆಯ ಸ್ಯಾಟಲೈಟ್ ಫೋನ್ ಮಾತ್ರ ಸರ್ಕಾರಿ ಸದುದ್ದೇಶದ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ ಎನ್ನಲಾಗಿದೆ. ಆದರೆ ಈ ಮಹಿಳಾ ಪೈಲಟ್ ಇರುಡಿಯಮ್ ಅನ್ನೋ ಸ್ಯಾಟಲೈಟ್ ಫೋನ್ ಹೊಂದಿದ್ದಾಳೆ. ಹೀಗಾಗಿ ಅಮೆರಿಕಾದಲ್ಲಿ ಈ ಸ್ಯಾಟಲೈಟ್ ಫೋನ್ ಬಳಕೆಗೆ ಅವಕಾಶ ಇದೆಯಾ ಅಥವಾ ಕಾನೂನುಬಾಹಿರವಾಗಿ ಈಕೆ ಸ್ಯಾಟಲೈಟ್ ಫೋನ್ ಹೊಂದಿದ್ದಾಳಾ ಎಂಬುದನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ವಿಕಲಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿಗೆ ಸಖತ್ ಗೂಸ

    ವಿಕಲಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿಗೆ ಸಖತ್ ಗೂಸ

    ಶಿವಮೊಗ್ಗ: ವಿಕಲಚೇತನ ಯುವತಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

    ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ತೀರ್ಥಹಳ್ಳಿ ತಾಲೂಕಿನ ಶಿವರಾಜಪುರದ ಸತೀಶ್ (38) ಎಂದು ಗುರುತಿಸಲಾಗಿದೆ. ಮನೆಯವರೆಲ್ಲಾ ಕೆಲಸಕ್ಕೆಂದು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಸತೀಶ್ ವಿಕಲಚೇತನ ಯುವತಿಯನ್ನು ವೀಲ್ ಚೇರ್ ಗೆ ಕಟ್ಟಿ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಆರೋಪಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರಿಂದ ಯುವತಿ ಜೋರಾಗಿ ಕಿರುಚಾಟ ನಡೆಸಿದ್ದಾಳೆ. ಯುವತಿಯ ಕಿರುಚಾಟ ಕೇಳಿ ಮನೆಯತ್ತ ಧಾವಿಸಿ ಬಂದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಸಖತ್ ಗೂಸ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಸತೀಶ್ ತನ್ನ ಪತ್ನಿಯ ಸಹೋದರನ ಮನೆಗೆ ಬಂದಿದ್ದನು. ಈ ವೇಳೆ ಈ ದುಷ್ಕೃತ್ಯ ನಡೆಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.

    ಸದ್ಯ ಯುವತಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 4 ಲಕ್ಷ ಮೌಲ್ಯದ ಗಾಂಜಾ ಜಪ್ತಿ – ರೈತನ ಬಂಧನ

    4 ಲಕ್ಷ ಮೌಲ್ಯದ ಗಾಂಜಾ ಜಪ್ತಿ – ರೈತನ ಬಂಧನ

    ರಾಯಚೂರು: ಮಾದಕ ಪದಾರ್ಥ ಗಾಂಜಾ ಬೆಳೆ ಬೆಳೆಯುವುದು ನಿಷೇಧವಿದ್ದರೂ ರಾಯಚೂರಿನಲ್ಲಿ ಹಲವಾರು ರೈತರು ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ. ಇದೀಗ ಸಿರವಾರ ತಾಲೂಕಿನ ಕವಿತಾಳ ಪೊಲೀಸರ ಕಾರ್ಯಾಚರಣೆಯಲ್ಲಿ 4 ಲಕ್ಷ 15 ಸಾವಿರ ಮೌಲ್ಯದ ಗಾಂಜಾ ಬೆಳೆ ಜಪ್ತಿಯಾಗಿದೆ.

    ದೋತರಬಂಡಿ ಗ್ರಾಮದ ಪುಷ್ಪರಾಜ್ ಕಾನೂನು ಬಾಹಿರವಾಗಿ ತನ್ನ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆದು ಸಿಕ್ಕಿಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 415 ಕೆ.ಜಿ ಗಾಂಜಾ ಬೆಳೆಯನ್ನ ಜಪ್ತಿ ಮಾಡಿ ಪುಷ್ಪರಾಜನನ್ನ ಬಂಧಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಜಿಲ್ಲೆಯಲ್ಲಿ ಒಂದೊಂದೆ ಪ್ರಕರಣಗಳು ಬಯಲಿಗೆ ಬರುತ್ತಿದ್ದು, ನೂರಾರು ಎಕರೆಯಲ್ಲಿ ಗಾಂಜಾ ಬೆಳೆದಿರುವ ಶಂಕೆಯಿದೆ. ಕೆಲ ರೈತರು ತಮ್ಮ ಮನೆಗಳ ಹಿತ್ತಲಲ್ಲಿ ಬೆಳೆದಿದ್ದರೆ, ಕೆಲವರು ರಾಜಾರೋಷವಾಗಿ ಜಮೀನಿನಲ್ಲಿ ಬೆಳೆದಿದ್ದಾರೆ. ಕಳೆದ ಎರಡು ವಾರಗಳಲ್ಲಿ ಪೊಲೀಸರು ಮೂರು ಪ್ರಕರಣಗಳನ್ನ ದಾಖಲಿಸಿದ್ದಾರೆ. ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ತಿಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

  • ಮೂವರು ಅಂತರ್ ಜಿಲ್ಲಾ ಕಳ್ಳರ ಬಂಧನ- 11 ಬೈಕ್ ವಶ

    ಮೂವರು ಅಂತರ್ ಜಿಲ್ಲಾ ಕಳ್ಳರ ಬಂಧನ- 11 ಬೈಕ್ ವಶ

    ಚಾಮರಾಜನಗರ: ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಚಾಮರಾಜನಗರ ಪೂರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಮೂವರು ಆರೋಪಿಗಳಿಂದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಚಾಮರಾಜನಗರದ ಕುಮಾರ್, ಬೆಂಗಳೂರಿನ ಸತ್ಯ, ಮಣಿ ಬಂಧಿತ ಆರೋಪಿಗಳು. ಇಂದು ಬೆಳಗ್ಗೆ ಚಾಮರಾಜನಗರ ತಾಲೂಕಿನ ಚಿಕ್ಕ ಹೊಳೆ ಚೆಕ್ ಪೋಸ್ಟ್ ಬಳಿ ಅನುಮಾನಸ್ಪದವಾಗಿ ಇಬ್ಬರು ಬೈಕ್ ಸವಾರರು ಓಡಾಡುತ್ತಿದ್ದರು. ಅವರನ್ನು ಕರೆದು ವಿಚಾರಣೆ ನಡೆಸುವಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

    ಇವರು ಬೆಂಗಳೂರಿನಿಂದ ಕದ್ದ ಬೈಕ್‍ಗಳನ್ನು ಚಾಮರಾಜನಗರದಲ್ಲಿ, ಚಾಮರಾಜನಗರದಲ್ಲಿ ಕದ್ದ ಬೈಕ್‍ಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಸಂತೇಮರಹಳ್ಳಿ, ಚಾಮರಾಜನಗರ, ಬೆಂಗಳೂರು ಹಲವೆಡೆ ಪ್ರಕರಣ ದಾಖಲಾಗಿರುವ ಬೈಕ್‍ಗಳನ್ನು ಪೊಲೀಸರು ವಶ ಪಡೆದುಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಲಾಗಿದೆ.

    ಈ ಮೂವರ ಜೊತೆ ಹಲವರು ಕೈ ಜೋಡಿಸಿದ್ದಾರೆ. ಹೀಗಾಗಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಬೇಕಾಗಿದೆ ಎಂದು ಎಸ್‍ಪಿ ಆನಂದ್ ಕುಮಾರ್ ಮಾಹಿತಿ ನೀಡಿದ್ದಾರೆ.

  • 80 ಲಕ್ಷ ಮೌಲ್ಯದ ಚಂದನ ಮರದ ತುಂಡುಗಳು ವಶ

    80 ಲಕ್ಷ ಮೌಲ್ಯದ ಚಂದನ ಮರದ ತುಂಡುಗಳು ವಶ

    – ಸಿಸಿಬಿ ಪೊಲೀಸರ ಕಾರ್ಯಾಚರಣೆ

    ಮೈಸೂರು: ಅಕ್ರಮವಾಗಿ ಶೇಖರಿಸಿಟ್ಟಿದ್ದ ಚಂದನ ಮರದ ತುಂಡುಗಳನ್ನು ಮೈಸೂರು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬರೋಬ್ಬರಿ 80 ಲಕ್ಷ ಮೌಲ್ಯದ ಚಂದನದ ಮರ ಇದ್ದಾಗಿದ್ದು, 750 ಕೆಜಿ ತೂಕದ 80 ಮರದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ.

    ಲಷ್ಕರ್ ಮೊಹಲ್ಲಾದ ಫೈರೋಜ್ ಬಂಧಿತ ಆರೋಪಿ. ಸಿಸಿಬಿ, ಎಸಿಪಿ ಮರಿಯಪ್ಪ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಕಿರಣ್ ಕುಮಾರ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಮಂಡಿ ಮೊಹಲ್ಲಾದ ಪುಲಿಕೇಶಿ ರಸ್ತೆಯ ಮನೆಯಲ್ಲಿ ಆರೋಪಿ ಮರಗಳನ್ನು ಶೇಖರಿಸಿಟ್ಟಿದ್ದನು. ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹಡಗಿನ ಮೂಲಕ ಸಾಗಿಸಲು ಪ್ಲ್ಯಾನ್ ಮಾಡಿಕೊಂಡಿದ್ದನು.

    ರಾಜ್ಯ ಹೊರ ರಾಜ್ಯಗಳಿಂದ ಅಕ್ರಮವಾಗಿ ಇದನ್ನು ಖರೀದಿಸಿ ತನ್ನ ಮನೆಯಲ್ಲಿ ಶೇಖರಿಸಿಟ್ಟುಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಿ, ಮರದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • 3.80 ಲಕ್ಷ ಮೌಲ್ಯದ ಬೀಟೆ ನಾಟಾಗಳ ವಶ

    3.80 ಲಕ್ಷ ಮೌಲ್ಯದ ಬೀಟೆ ನಾಟಾಗಳ ವಶ

    ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ದೊಡ್ಡಕೊಳತ್ತೂರು ಗ್ರಾಮದಿಂದ ಗೂಡ್ಸ್ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.80 ಲಕ್ಷ ರೂ. ಮೌಲ್ಯದ ನಾಟಾಗಳನ್ನು ಅರಣ್ಯ ವಲಯಾಧಿಕಾರಿ ವಶಪಡಿಸಿಕೊಂಡಿದ್ದಾರೆ.

    ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಳತ್ತೂರು ಗ್ರಾಮದ ಕಾಫಿತೋಟದಿಂದ ಅರಕಲಗೂಡಿಗೆ ಮೂವರು ಆರೋಪಿಗಳು ಗೂಡ್ಸ್ ಪಿಕಪ್ ವಾಹನದಲ್ಲಿ ಅಕ್ರಮವಾಗಿ ನಾಟಾಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಅರಣ್ಯ ವಲಯಾಧಿಕಾರಿ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿ ವಾಹನವನ್ನು ಪರಿಶೀಲನೆ ಮಾಡಿದ್ದು, ವಾಹನ ಜೊತೆಗೆ 3.80 ಲಕ್ಷ ಮೌಲ್ಯದ 3 ಬೀಟೆ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ.

    ಗುಂಡೂರಾವ್ ಬಡಾವಣೆಯ ಎಚ್.ಎನ್.ಪುನೀತ್ ಹಾಗೂ ಜಾಬಿಕೋಡಿ ಗ್ರಾಮದ ಡಿ.ವಿ.ವಿನಯ್ ಬಂಧಿತ ಆರೋಪಿಗಳು. ಶಿರಂಗಾಲ ಗ್ರಾಮದ ಆರೋಪಿ ಸಾಬು ತಲೆಮರೆಸಿಕೊಂಡಿದ್ದಾನೆ. ವಿಜಯಕುಮಾರ್ ತೋಟದಿಂದ ವಾಹನದಲ್ಲಿ ಅರಕಲಗೂಡಿಗೆ ಸಾಗಿಸುವಾಗ ದೊರೆತ ಮಾಹಿತಿ ಅನ್ವಯ ಹೊಸೂರು ರಸ್ತೆಯ ಬಾಪೂಜಿ ವಿದ್ಯಾಸಂಸ್ಥೆಯ ಬಳಿ ಅಡ್ಡಗಟ್ಟಿ ವಶಪಡಿಸಿಕೊಳ್ಳಲಾಗಿದೆ.

    ಅರಣ್ಯ ವಲಯಾಧಿಕಾರಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.