Tag: ವಶ

  • ಕೆಲಸ ಮಾಡ್ತಿದ್ದ ಕಂಪನಿಯ ಹಣವನ್ನೇ ದೋಚಿದ – 24 ಲಕ್ಷ ವಶ, ನಾಲ್ವರು ಅರೆಸ್ಟ್

    ಕೆಲಸ ಮಾಡ್ತಿದ್ದ ಕಂಪನಿಯ ಹಣವನ್ನೇ ದೋಚಿದ – 24 ಲಕ್ಷ ವಶ, ನಾಲ್ವರು ಅರೆಸ್ಟ್

    ಭುವನೇಶ್ವರ: ಒಡಿಶಾದ ರಾಯಗಡ ಪೊಲೀಸರು ದರೋಡೆ ಪ್ರಕರಣವನ್ನು ಭೇದಿಸಿದ್ದು, ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಬಂಧಿತರಿಂದ 24 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.

    ಬಂಧಿತ ಆರೋಪಿಗಳನ್ನು ಅನಿಲ್ ಕುಮಾರ್ ಗರಾಡಿಯಾ (32), ಆತನ ಸಹೋದರ ಬಿಬೆಕ್ ಗರಾಡಿಯಾ (22), ಸುಧಾಂಶು ಮಿಶಾಲ್ (20) ಮತ್ತು ಬಾಪಿ ಮಿಶಾಲ್ ಎಂದು ಗುರುತಿಸಲಾಗಿದೆ. ಹಣಕಾಸು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಅನಿಲ್ ತನ್ನ ಮೂವರು ಸಹಚರರೊಂದಿಗೆ ಸೇರಿ ಸುಮಾರು 24 ಲಕ್ಷ ರೂಪಾಯಿಯನ್ನು ದರೋಡೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಅನಿಲ್ ಹಣಕಾಸು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈತನೇ ತನ್ನ ಸಹೋದರ ಬಿಬೆಕ್ ಮತ್ತು ಇಬ್ಬರು ಗೆಳೆಯರಾದ ಬಾಪಿ ಮತ್ತು ಸುಧಾಂಶು ಜೊತೆ ಸೇರಿಕೊಂಡು ಹಣವನ್ನು ದರೋಡೆ ಮಾಡಿದ್ದನು. ಆದರೆ ದರೋಡೆಕೋರರು ಬಂದು ಹಣ ದೋಚಿ ಹೋದರು ಎಂದು ನಾಟಕವಾಡಿದ್ದನು. ಆಗಸ್ಟ್ 10 ರಂದು ದರೋಡೆಯ ಬಗ್ಗೆ ಮಾಹಿತಿ ಪಡೆದ ರಾಯಗಡ ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.

    ತನಿಖೆಯ ವೇಳೆ ಆರೋಪಿ ಅನಿಲ್ ದರೋಡೆ ಪ್ಲಾನ್ ಮಾಡಿದ್ದನು ಎಂಬುದು ತಿಳಿದು ಬಂದಿದೆ. ಕೊನೆಗೆ ಪೊಲೀಸ್ ತಂಡವು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 24 ಲಕ್ಷ ರೂಪಾಯಿಯನ್ನು ಮತ್ತು ಅಪರಾಧಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಅಪಾರ್ಟ್‌ಮೆಂಟ್ ಮೇಲೆ ಪೊಲೀಸರು ದಿಢೀರ್ ದಾಳಿ- ಮಹಿಳೆ ಮನೆಯಲ್ಲಿ 74 ಲಕ್ಷ ಪತ್ತೆ

    ಅಪಾರ್ಟ್‌ಮೆಂಟ್ ಮೇಲೆ ಪೊಲೀಸರು ದಿಢೀರ್ ದಾಳಿ- ಮಹಿಳೆ ಮನೆಯಲ್ಲಿ 74 ಲಕ್ಷ ಪತ್ತೆ

    – ಅಕ್ರಮವಾಗಿ ಡ್ರಗ್ಸ್ ಸಾಗಣೆ ಮಾಡ್ತಿರೋ ಶಂಕೆ

    ಡಿಸ್ಪುರ್: ಪೊಲೀಸರು ಮಹಿಳೆಯೊಬ್ಬಳ ಮನೆಯಲ್ಲಿ ಬರೋಬ್ಬರಿ 74 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಸೋಲಾಪರಾದಲ್ಲಿ ವಾಸಿಸುತ್ತಿದ್ದ ಸಂಗೀತಾ ಲೈಶನ್‍ಬಾಮ್, ಶಂಕಿತರಾದ ಸ್ಯಾಮ್ ಲೈಥಂಗ್‍ಬಾಮ್ ಮತ್ತು ಥಂಗ್‍ಕೋಸತ್ ಮೂವರನ್ನು ಬಂಧಿಸಲಾಗಿದೆ. ಮಹಿಳೆಯ ಮನೆಯಲ್ಲಿ 74,05,600 ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈಕೆ ಅಕ್ರಮವಾಗಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.

    ಅಕ್ರಮವಾಗಿ ಡ್ರಗ್ಸ್ ಸಾಗಾಣೆ ಮಾಡುವ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಲಾಚಿನಿ ಅಪಾರ್ಟ್‌ಮೆಂಟ್ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ಅಲ್ಲಿ ನಾಲ್ಕನೇ ಮಹಡಿಯಲ್ಲಿ ಸಂಗೀತಾ ಲೈಶಾಬ್‍ಬಾಮ್ ಮನೆಯ ಆವರಣದಲ್ಲಿ ಹುಡುಕಾಟ ನಡೆಸಲಾಯಿತು. ಆಗ 74 ಲಕ್ಷ ಹಣ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶೋಧದ ವೇಳೆ ಶಂಕಿತರಾದ ಸ್ಯಾಮ್ ಲೈಥಂಗ್‍ಬಾಮ್ ಮತ್ತು ಥಂಗ್‍ಕೋಸತ್‍ರನ್ನು ಸಹ ಬಂಧಿಸಲಾಗಿದೆ. ತನಿಖೆಯ ಸಮಯದಲ್ಲಿ ಸಂಗೀತಾ ಈ ಹಿಂದೆ ಅಕ್ರಮ ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

  • ವಿವಿಧ ಟೂರ್, ಟ್ರಾವೆಲ್ಸ್ ಕಂಪನಿಗಳ ಮೇಲೆ ಇಡಿ ದಾಳಿ- 3.57 ಕೋಟಿ ಹಣ ವಶ

    ವಿವಿಧ ಟೂರ್, ಟ್ರಾವೆಲ್ಸ್ ಕಂಪನಿಗಳ ಮೇಲೆ ಇಡಿ ದಾಳಿ- 3.57 ಕೋಟಿ ಹಣ ವಶ

    ನವದೆಹಲಿ: ದೆಹಲಿ ಮತ್ತು ಗಾಜಿಯಾಬಾದ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಟೂರ್ ಮತ್ತು ಟ್ರಾವೆಲ್ಸ್ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.

    ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (ಫೆಮಾ)ಯನ್ನು ಉಲ್ಲಂಘಿಸಿದರ ಆರೋಪದಡಿ ಎಂಟು ವಿವಿಧ ಟೂರ್ ಮತ್ತು ಟ್ರಾವೆಲ್ಸ್ ಕಂಪನಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.

    ಸಂಸ್ಥೆಗಳ ನಿರ್ದೇಶಕರ ನಿವಾಸಗಳು, ಕಚೇರಿಗಳು ಮತ್ತು ಸಂಸ್ಥೆಯ ಚಾರ್ಟರ್ಡ್ ಅಕೌಂಟೆಂಟ್‍ಗಳ ಮನೆಗಳು ಮತ್ತು ಕಚೇರಿಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿದೆ. ದಾಳಿಯಲ್ಲಿ 3.57 ಕೋಟಿ ಅಕ್ರಮ ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ದಾಳಿ ವೇಳೆ ಮನೆ ಮತ್ತು ಕಚೇರಿಯಲ್ಲಿ ಹಲವಾರು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.

    ಈ ಕಂಪನಿಗಳು ವಿದೇಶಿಯರಿಗೆ ಇ-ವೀಸಾ ಸೇವೆಗಳನ್ನು ನೀಡುವ ಹೆಸರಿನಲ್ಲಿ ಪೇಮೆಂಟ್ ಗೇಟ್‍ವೇ ಮೂಲಕ ಅನಧಿಕೃತವಾಗಿ ವಿದೇಶಿ ಹಣವನ್ನು ಸ್ವೀಕರಿಸುತ್ತಿದ್ದವು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಸದ್ಯಕ್ಕೆ ವಿವಿಧ ಟೂರ್ ಹಾಗೂ ಟ್ರಾವೆಲ್ಸ್ ಕಂಪನಿಗಳು ಸೇರಿದಂತೆ ವಿವಿಧ ಘಟಕಗಳ ವಿರುದ್ಧ ಫೆಮಾ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಇಡಿ ತಿಳಿಸಿದೆ.

    ಈ ಕಂಪನಿಗಳು ಹೆಚ್ಚಾಗಿ ಅಕ್ರಮ ವಹಿವಾಟಿನಲ್ಲಿ ಸಹ ಭಾಗಿಯಾಗಿವೆ. ಕೆಲ ಚಾರ್ಟರ್ಡ್ ಅಕೌಂಟೆಂಟ್‍ಗಳು ಈ ಕಂಪನಿಗಳು ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ದಾಳಿ ಜುಲೈ 9 ರಂದು ನಡೆದಿದ್ದು, ಸದ್ಯಕ್ಕೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಂಸ್ಥೆ ಹೇಳಿದೆ.

  • 1.03 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ- ಐವರು ಅರೆಸ್ಟ್

    1.03 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ- ಐವರು ಅರೆಸ್ಟ್

    – ಆಟೋದಲ್ಲಿ ಸಾಗಿಸ್ತಿದ್ದಾಗ ಸಿಕ್ಕಿಬಿದ್ರು

    ಹೈದರಾಬಾದ್: ಅಕ್ರಮವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿದ್ದ ವಿದೇಶಿ ಸಿಗರೇಟನ್ನು ಟಾಸ್ಕ್ ಫೋರ್ಸ್ ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಗಳ ಬಳಿಯಿಂದ ಸುಮಾರು 1.03 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಸಿದ್ದಿಯಂಬಾರ್ ಬಜಾರ್‌ನ ಸಮೀಪದಲ್ಲಿ ಆಟೋವೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಆಗ ಆಟೋದಲ್ಲಿ ವಿವಿಧ ಬ್ರಾಂಡ್‍ಗಳ ಅಕ್ರಮವಾಗಿ ಆಮದು ಮಾಡಿಕೊಂಡ ವಿದೇಶಿ ಸಿಗರೇಟ್‍ಗಳ 503 ಪೆಟ್ಟಿಗೆ ಪತ್ತೆಯಾಗಿವೆ. ತಕ್ಷಣ ಆಟೋ ಚಾಲಕನನ್ನು ಬಂಧಿಸಿ ಸಿಗರೇಟ್‍ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ಆಟೋ ಚಾಲಕನಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಗೋಶಮಹಲ್‍ನ ಸರ್ನಾ ಟ್ರಾನ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‍ಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಪುಲ್ ರಾಂಕಾ (42), ಜಗದೀಶ್ ಕುಮಾರ್ (19), ದೂಂಗಾರ್ಚಂದ್ ಶ್ರೀ ಶ್ರೀಮಲ್ (65), ಪವನ್ ಕುಮಾರ್ ಪೆರ್ತಾನಿ (42) ಮತ್ತು ಸರ್ನಾ ಟ್ರಾನ್ಸ್ ಪೋರ್ಟ್ ನ ಡೆಲಿವರಿ ಏಜೆಂಟ್ ಎಂ.ಎ.ಹನೀಫ್ ಎಂದು ಗುರುತಿಸಲಾಗಿದೆ.

    “ಆರೋಪಿಗಳು ದೆಹಲಿಯಿಂದ ಅಕ್ರಮವಾಗಿ ವಿದೇಶಿ ಸಿಗರೇಟುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಬಳಿಕ ಅದನ್ನು ಸ್ಥಳೀಯ ಪಾನ್ ಅಂಗಡಿಗಳು ಮತ್ತು ಕಿರಾನಾ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಈ ಮೂಲಕ ಅವರು ಸರ್ಕಾರಕ್ಕೆ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ತುಂಬಾ ನಷ್ಟವನ್ನುಂಟುಮಾಡುತ್ತಿದ್ದಾರೆ” ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.

    ಪರಾರಿಯಾಗಿದ್ದ ಸರ್ನಾ ಸಾರಿಗೆ ಮಾಲೀಕ ರವೀಂದರ್ ಸಿಂಗ್ ಸರ್ನಾನಿಂದ ವಿದೇಶಿ ಸಿಗರೇಟನ್ನು ಸಂಗ್ರಹಿಸುತ್ತಿರುವುದಾಗಿ ಆರೋಪಿ ವಿಪುಲ್ ಪೊಲೀಸರಿಗೆ ಹೇಳಿದ್ದಾನೆ. ಸದ್ಯಕ್ಕೆ ಬೇಗಂ ಬಜಾರ್ ಪೊಲೀಸರು ಐವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • 11 ಟೈರ್ ಟ್ಯೂಬ್‍ನಲ್ಲಿ ಸಾಗಿಸುತ್ತಿದ್ದ 330 ಲೀಟರ್ ಕಳ್ಳಭಟ್ಟಿ ವಶ

    11 ಟೈರ್ ಟ್ಯೂಬ್‍ನಲ್ಲಿ ಸಾಗಿಸುತ್ತಿದ್ದ 330 ಲೀಟರ್ ಕಳ್ಳಭಟ್ಟಿ ವಶ

    ಚಿಕ್ಕೋಡಿ/ಬೆಳಗಾವಿ: ಕೊರೊನಾದಿಂದ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಆಗಿದ್ದ ಕಾರಣ ಕಳ್ಳ ಭಟ್ಟಿ ದಂಧೆಗೆ ಕಡಿವಾಣ ಹಾಕಲು ಚಿಕ್ಕೋಡಿ ವಿಭಾಗದ ಅಬಕಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಚಿಕ್ಕೋಡಿ ವಿಭಾಗದ ಅಬಕಾರಿ ಪೊಲೀಸರು ಹುಕ್ಕೇರಿ ತಾಲೂಕಿನ ಶಹಬಂದರ ಗ್ರಾಮದಲ್ಲಿ ಕಳ್ಳ ಭಟ್ಟಿ ದಂಧೆಕೋರರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 330 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದುಕೊಡಿದ್ದಾರೆ.

    ಶಹಬಂದರ್ ಗ್ರಾಮದ ಬಳಿ ಕಳ್ಳಭಟ್ಟಿ ಸಾಗಿಸುತ್ತಿದ್ದ ಎರಡು ದ್ವಿ-ಚಕ್ರ ವಾಹನ ಹಾಗೂ ತಲಾ 30 ಲೀಟರ್ ಇರುವ 11 ಟೈರ್ ಟ್ಯೂಬ್‍ಗಳಲ್ಲಿ ಸಂಗ್ರಹಿಸಿ ಸರಬರಾಜು ಮಾಡುತ್ತಿದ್ದ ಕಳ್ಳ ಭಟ್ಟಿಯನ್ನ ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರಕರಣದಲ್ಲಿನ ಮೂರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಬಕಾರಿ ದಾಳಿಯಲ್ಲಿ ಚಿಕ್ಕೋಡಿ ಅಬಕಾರಿ ಇನ್ಸ್‌ಪೆಕ್ಟರ್ ಬಸವರಾಜ್ ಕರಮಣ್ಣವರ್, ಸಬ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್, ಸಿಬ್ಬಂದಿಯಾದ ಹಸನ್ ಸಾಬ್, ವಿಜಯ್ ಉಪ್ಪರ್, ರಾಜು ಅಂಬಾರಿ ಹಾಗೂ ಮಹಾಬಲ ಉಗಾರ್ ಭಾಗವಹಿಸಿದ್ದರು.

  • ಲಾಕ್‍ಡೌನ್ ಉಲ್ಲಂಘನೆ – 4 ಪ್ರಕರಣ ದಾಖಲು, 213 ವಾಹನಗಳು ಸೀಜ್

    ಲಾಕ್‍ಡೌನ್ ಉಲ್ಲಂಘನೆ – 4 ಪ್ರಕರಣ ದಾಖಲು, 213 ವಾಹನಗಳು ಸೀಜ್

    ಬೀದರ್: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತಡೆಯಲು 21 ದಿನಗಳ ಕಾಲ ಲಾಕ್‍ಡೌನ್ ಆಗಿದೆ. ಇದೀಗ ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದು ಓಡಾಡುತ್ತಿದ್ದವರ ಸುಮಾರು 213 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಹೋಮ್‍ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಆದೇಶ ಹೊರಡಿಸಲಾಗಿದೆ. ಆದರೆ ಕಲಂ 144 ಸಿಆರ್‌ಪಿಸಿ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ 4 ಪ್ರಕರಣಗಳು ದಾಖಲಾಗಿವೆ.

    ಕೊರೊನಾ ವೈರಸ್ ಹರಡದಂತೆ ತಡೆಯಲು ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು. ಅವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಸುಮ್ಮನೇ ಅನಾವಶ್ಯಕವಾಗಿ ಹೊರಗೆ ಬಂದು ಓಡಾಡಬಾರದು ಎಂದು ಪೊಲೀಸರು ಆದೇಶ ನೀಡಿದ್ದರು. ಹೀಗಾಗಿ ಅನಾವಶ್ಯಕವಾಗಿ ಓಡಾಡಿದವರ 213 ವಾಹನಗಳನ್ನು ಜಪ್ತಿ ಮಾಡಿ ಕಾನೂನು ಪ್ರಕ್ರಿಯೆ ಜರುಗಿಸಲಾಗಿದೆ.

    ಸಾರ್ವಜನಿಕರು ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ಎಲ್.ನಾಗೇಶ್ ತಿಳಿಸಿದ್ದಾರೆ.

  • ಕುಖ್ಯಾತ ಮನೆಗಳ್ಳರು ಅರೆಸ್ಟ್ – 14 ಲಕ್ಷ ಮೌಲ್ಯದ 360 ಗ್ರಾಂ ಚಿನ್ನಾಭರಣ ವಶ

    ಕುಖ್ಯಾತ ಮನೆಗಳ್ಳರು ಅರೆಸ್ಟ್ – 14 ಲಕ್ಷ ಮೌಲ್ಯದ 360 ಗ್ರಾಂ ಚಿನ್ನಾಭರಣ ವಶ

    ರಾಯಚೂರು: ಜಿಲ್ಲೆಯ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಮನೆಗಳ್ಳರಿಬ್ಬರನ್ನ ಕೊನೆಗೂ ಸಿಂಧನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಚಂಗು ಅಲಿಯಾಸ್ ಗೌಸ್ ಹಾಗೂ ರೆಹಮಾನ್ ಬಂಧಿತ ಆರೋಪಿಗಳು. ರಾಯಚೂರು, ಸಿಂಧನೂರು, ಮುದಗಲ್, ನೇತಾಜಿನಗರ ಹಾಗೂ ಬಳಗಾನೂರ ಪೊಲೀಸ್ ಠಾಣೆಗಳಲ್ಲಿ ಈ ಇಬ್ಬರ ವಿರುದ್ಧ ಒಟ್ಟು 8 ಕಳ್ಳತನ ಪ್ರಕರಣ ದಾಖಲಾಗಿದ್ದವು. ಸಿಂಧನೂರು ಮೂಲದ ಖದೀಮರು ಕೊನೆಗೆ ಸಿಂಧನೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.


    ಬಂಧಿತರಿಂದ 14 ಲಕ್ಷ 40 ಸಾವಿರ ರೂ. ಮೌಲ್ಯದ 360 ಗ್ರಾಂ. ಚಿನ್ನಾಭರಣ ಹಾಗೂ ಅರ್ಧ ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಕಾರ್ಯಕ್ಕೆ ರಾಯಚೂರು ಎಸ್‍ಪಿ. ಡಾ.ಸಿ.ಬಿ.ವೇದಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

    ರಾಯಚೂರು ನಗರ ಹಾಗೂ ಲಿಂಗಸುಗೂರಿನಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನ ರಚಿಸಲಾಗಿದೆ ಎಂದು ವೇದಮೂರ್ತಿ ಹೇಳಿದ್ದಾರೆ.

  • ಹೆಚ್ಚು ಬಾಡಿಗೆಗೆ ಒತ್ತಾಯಿಸಿದ 35 ಆಟೋಗಳು ಮೇಲೆ ಕೇಸ್

    ಹೆಚ್ಚು ಬಾಡಿಗೆಗೆ ಒತ್ತಾಯಿಸಿದ 35 ಆಟೋಗಳು ಮೇಲೆ ಕೇಸ್

    ಮೈಸೂರು: ಮೈಸೂರಿನಲ್ಲಿ ಹೆಚ್ಚು ಬಾಡಿಗೆಗೆ ಒತ್ತಾಯಿಸಿದ 35 ಆಟೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಎನ್.ಆರ್ ಸಂಚಾರ ಪೊಲೀಸರು ಮಾರುವೇಷದಲ್ಲಿ ಸಾರ್ವಜನಿಕರಂತೆ ಹೋಗಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಯಾಣಿಕರ ಹೇಳಿದ ಸ್ಥಳಕ್ಕೆ ಬಾರದ ಆಟೋಗಳ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿದೆ.

    ಎನ್‍ಆರ್ ಸಂಚಾರ ಠಾಣೆ ಇನ್ಸ್ ಪೆಕ್ಟರ್ ದಿವಾಕರ್ ನೇತೃತ್ವದಲ್ಲಿ ರೈಲು ನಿಲ್ದಾಣ, ಕೆ.ಆರ್ ಆಸ್ಪತ್ರೆ, ಮಿಲಾದ್ ಪಾರ್ಕ್ ಮತ್ತು ಆರ್.ಎಂ.ಸಿ ವೃತ್ತ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸಿ ಒಟ್ಟು 13 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

  • ಇಸ್ಪೀಟ್ ಅಡ್ಡೆ ಮೇಲೆ ದಾಳಿ – 19 ಬೈಕ್‍ಗಳು ವಶ

    ಇಸ್ಪೀಟ್ ಅಡ್ಡೆ ಮೇಲೆ ದಾಳಿ – 19 ಬೈಕ್‍ಗಳು ವಶ

    – ವಾಹನ ಸಮೇತ ಮರಳು ಜಪ್ತಿ

    ಕೊಪ್ಪಳ: ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ಮಾಡಿದ್ದು, ಬರೋಬ್ಬರಿ 19 ಬೈಕ್‍ಗಳನ್ನು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ನಗರದ ಹೊರವಯಲಯದ ಬೆಟ್ಟದ ಪ್ರದೇಶದಲ್ಲಿ ನಡೆದಿದೆ.

    ಇನ್ಸ್‌ಪೆಕ್ಟರ್ ಉದಯರವಿ ಅವರ ನೇತೃತ್ವದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗಂಗಾವತಿಯ ಹೊರವಲಯದಲ್ಲಿ ಈ ಜೂಜಾಟ ನಡೆಸಲಾಗುತ್ತಿತ್ತು ಎನ್ನಲಾಗಿದೆ.

    ಪೊಲೀಸರು ದಾಳಿ ಮಾಡುತ್ತಿದ್ದಂತಯೇ ಬಹುತೇಕ ಜೂಜುಕೋರರು ಓಡಿ ಹೋಗಿದ್ದು, ಮೂವರು ಮಾತ್ರ ಸಿಕ್ಕಿ ಬಿದ್ದಿದ್ದಾರೆ. ಸ್ಥಳದಲ್ಲಿ ಪತ್ತೆಯಾದ 19 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಕ್ರಮ ಮರಳು ಸಾಗಾಣಿಕೆ:
    ಗಂಗಾವತಿ ತಾಲೂಕಿನ ಹಿರೇಜಂತಕ್ಕಲ್ ಪ್ರದೇಶದ ವಿನೋಬನಗರದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಗ್ರಾಮೀಣ ಠಾಣೆಯ ಪೊಲೀಸರು ಎರಡು ಟ್ಯಾಕ್ಟರನ್ನು ವಶಕ್ಕೆ ಪಡೆದಿದ್ದಾರೆ.


    ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೆರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ಮಾಡಿದ ಸಂದರ್ಭದಲ್ಲಿ ಟ್ರಾಕ್ಟರ್ ಚಾಲಕರು ವಾಹನಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಮರಳು ಸಮೇತ ಟ್ರಾಕ್ಟರ್ ಗಳನ್ನು ಠಾಣೆಗೆ ತಂದ ಪೊಲೀಸರು, ದೂರು ದಾಖಲಿಸಿದ್ದಾರೆ. ಈ ಪೈಕಿ ಒಂದು ವಾಹನಕ್ಕೆ ಟ್ರಾಲಿಯ ನಂಬರ್ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

  • 58.95 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ

    58.95 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ

    – ಮಂಗ್ಳೂರು ಏರ್‌ಪೋರ್ಟಿನಲ್ಲಿ ಇಬ್ಬರ ಅರೆಸ್ಟ್

    ಮಂಗಳೂರು: ವಿದೇಶದಿಂದ ಆಗಮಿಸಿದ ಇಬ್ಬರು ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

    ಕೇರಳದ ಮಲ್ಲಾಪುರಂನ ನಿವಾಸಿ ಮಹಮ್ಮದ್ ಸ್ವಾಲಿಹ್ ಮತ್ತು ಮೊಹಮ್ಮದ್ ನಿಶಾದ್ ಬಂಧಿತ ಆರೋಪಿಗಳು. ಇಬ್ಬರು ಬೇರೆ ಬೇರೆ ವಿಮಾನದಲ್ಲಿ ಆಗಮಿಸಿದ್ದು, ಬರೋಬ್ಬರಿ 58.95 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

    ಸ್ವಾಲಿಹ್ ದುಬೈನಿಂದ ಸ್ಪೈಸ್ ಜೆಟ್‍ನಲ್ಲಿ ಆಗಮಿಸಿದ್ದನು. ನಿಶಾದ್ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದನು. ಇಬ್ಬರನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯಕ್ಕೆ ಆರೋಪಿಗಳನ್ನು ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇಬ್ಬರ ಬಳಿ ಸುಮಾರು 58.95 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.