Tag: ವಲಸೆ

  • ಭಾರತೀಯ ಪೌರತ್ವಕ್ಕಾಗಿ ರಾಯಚೂರಿನ ಬಾಂಗ್ಲಾ ವಲಸಿಗರ ಹೋರಾಟ

    ಭಾರತೀಯ ಪೌರತ್ವಕ್ಕಾಗಿ ರಾಯಚೂರಿನ ಬಾಂಗ್ಲಾ ವಲಸಿಗರ ಹೋರಾಟ

    -ಭಾರತದಲ್ಲೇ 34 ವರ್ಷ ಕಳೆದರೂ ಸಿಗದ ಪೌರತ್ವ
    -ಪೌರತ್ವ ಮಸೂದೆ ಜಾರಿಯಾದ್ರೂ ಅನುಷ್ಠಾನ ವಿಳಂಬ

    ರಾಯಚೂರು: ಕಳೆದ 34 ವರ್ಷಗಳಿಂದ ಭಾರತದಲ್ಲೇ ವಾಸವಾಗಿದ್ದರೂ ಪೌರತ್ವ ಸಿಗದೇ ರಾಯಚೂರಿನ 5 ಪುಟ್ಟ ಗ್ರಾಮಗಳ ಜನ ನಿತ್ಯ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಎಷ್ಟೇ ಬುದ್ಧಿವಂತರಾಗಿದ್ರೂ ಉನ್ನತ ವ್ಯಾಸಂಗಕ್ಕೆ ಜಾತಿ ಸಮಸ್ಯೆಯಾಗಿದೆ. ಭೂಮಿ ಇದ್ದರೂ ಅದರ ಮೇಲೆ ಯಾವುದೇ ಅಧಿಕಾರವಿಲ್ಲದೆ ರೈತರು ಒದ್ದಾಡುತ್ತಿದ್ದಾರೆ. ಬಾಂಗ್ಲಾದೇಶದಿಂದ ವಲಸೆ ಬಂದ ಜನರು ಇನ್ನೂ ಭಾರತೀಯರಾಗಿಲ್ಲ.

    ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಭಜನೆಯಾದ ವೇಳೆ 1969-70ರಲ್ಲಿ ಸುಮಾರು ಜನ ಹಿಂದೂಗಳು ರಾಯಚೂರಿನ ಸಿಂಧನೂರು ತಾಲೂಕಿಗೆ ಬಂದು ನೆಲೆಸಿದ್ರು. ಸರ್ಕಾರ ಇವರಿಗೆಲ್ಲಾ ಪುನರ್ವಸತಿ ಕಲ್ಪಿಸಿತು. ಪುನಃ 1983 ರಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿ ಮತ್ತಷ್ಟು ಜನ ಮನೆ ಮಠ ತೊರೆದು ಬಾಂಗ್ಲಾದೇಶದಿಂದ ಭಾರತ ಸರ್ಕಾರ ಗುರುತಿಸಿದಂತೆ ಸಿಂಧನೂರು ತಾಲೂಕಿಗೆ ಬಂದು ನೆಲೆಸಿದರು. ಹೀಗೆ ಬಂದ ಸುಮಾರು ಐದು ಸಾವಿರ ಜನರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ.

    ಸಿಂಧನೂರು ತಾಲೂಕಿನ ಐದು ಪುನರ್ವಸತಿ ಕ್ಯಾಂಪ್‍ಗಳಲ್ಲಿ ವಾಸಿಸುತ್ತಿರುವ, ಈ ಮೊದಲು ಬಂದವರನ್ನೂ ಸೇರಿ ಒಟ್ಟು 25 ಸಾವಿರ ಜನರಿಗೆ ಜಾತಿ ಪ್ರಮಾಣ ಪತ್ರವಿಲ್ಲ. ಸರ್ಕಾರವೇ ನೀಡಿದ ಐದು ಎಕರೆ ಜಮೀನಿಗೆ ಇದುವರೆಗೆ ಪಟ್ಟಾ ನೀಡಿಲ್ಲ. 34 ವರ್ಷಗಳು ಕಳೆದರೂ ಭಾರತದ ಪೌರತ್ವವಿಲ್ಲದೆ ಇನ್ನೂ ವಲಸಿಗರಾಗಿ ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ ಅಂತ ಆರ್‍ಎಚ್ ಕ್ಯಾಂಪ್-2 ನಿವಾಸಿ ಪಂಕಜ್ ಸರ್ಕಾರ್ ಅಳಲನ್ನ ತೋಡಿಕೊಂಡಿದ್ದಾರೆ.

    ಜಾತಿ ಪ್ರಮಾಣ ಪತ್ರವಿಲ್ಲದೆ ಶೈಕ್ಷಣಿಕ, ಉದ್ಯೋಗ ಮಿಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಮತದಾನ ಗುರುತಿನ ಚೀಟಿ, ಆಧಾರ್, ರೇಷನ್ ಕಾರ್ಡ್ ಇದ್ದರೂ ಜಾತಿ ಪ್ರಮಾಣ ಪತ್ರವಿಲ್ಲ. ಜಮೀನಿಗೆ ಕೇವಲ ಸಾಗುವಳಿ ಚೀಟಿ ಇರುವುದರಿಂದ ಬ್ಯಾಂಕ್ ಸಾಲ, ಸೌಲಭ್ಯಗಳನ್ನ ಪಡೆಯಲು ಆಗುತ್ತಿಲ್ಲ. ಈಗಾಗಲೇ ಪೌರತ್ವ ನೀಡುವ ಕುರಿತು ಮಸೂದೆ ಮಂಡನೆಯಾಗಿದೆ. ಆದ್ರೆ ಕಾಯಿದೆ ಜಾರಿಗೆ ರೂಪುರೇಷೆಗಳನ್ನ ಸಿದ್ದಪಡಿಸುವುದು ಬಾಕಿಯಿದ್ದು ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಅಂತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

    ಒಟ್ಟನಲ್ಲಿ ದೇಶಬಿಟ್ಟು ದೇಶಕ್ಕೆ ಬಂದ ಜನ ಇಲ್ಲಿ ನೆಲೆ ಕಂಡುಕೊಂಡಿದ್ದಾರಾದ್ರೂ ಕೆಲ ಭಾರತೀಯ ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸೌಲಭ್ಯಗಳಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿದ್ದರೂ ಇನ್ನೂ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಈಗಲಾದ್ರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತ ಗಮನಹರಿಸಬೇಕಿದೆ.

  • ರಾಯಚೂರಿನಲ್ಲಿ ವಯೋವೃದ್ಧರ ಗ್ರಾಮಗಳ ನಿರ್ಮಾಣ : ಖಾತ್ರಿಯಿಲ್ಲದ ಉದ್ಯೋಗದಿಂದ ಯುವಕರು ನಗರಪಾಲು

    ರಾಯಚೂರಿನಲ್ಲಿ ವಯೋವೃದ್ಧರ ಗ್ರಾಮಗಳ ನಿರ್ಮಾಣ : ಖಾತ್ರಿಯಿಲ್ಲದ ಉದ್ಯೋಗದಿಂದ ಯುವಕರು ನಗರಪಾಲು

    -ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ವೈಫಲ್ಯ
    -ಕೆಲಸವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೊರಟ ಜನ

    ವಿಜಯ್ ಜಾಗಟಗಲ್

    ರಾಯಚೂರು: ಹೆಗಲ ಮೇಲೊಂದು ಕೈಯಲ್ಲೊಂದು ಮೂಟೆ ಹಿಡಿದು ಬೆಂಗಳೂರು, ಪುಣೆ, ಮುಂಬೈ ಬಸ್‍ಗಾಗಿ ಜನ ಕಾಯುತ್ತಿದ್ದಾರೆ. ಈಗ ಬಸ್ ಹತ್ತಿದವರು ಕೈಯಲ್ಲೊಂದಿಷ್ಟು ಕಾಸು ಸಂಪಾದಿಸಿಕೊಂಡು ಎರಡೋ, ಮೂರೋ ತಿಂಗಳ ಬಳಿಕವಷ್ಟೇ ತಮ್ಮ ಗ್ರಾಮಗಳಿಗೆ ಮರುಳುತ್ತಾರೆ. ಅಲ್ಲಿಯವರೆಗೆ ಇಡೀ ಗ್ರಾಮವನ್ನ ಕಾಯುವವರು ವಯೋವೃದ್ಧರು ಹಾಗೂ ಬಾಗಿಲಿಗೆ ಹಾಕಿದ ಬೀಗಗಳು ಮಾತ್ರ. ಇವರು ಮರಳಿ ಬರುವವರೆಗೆ ಮನೆಗಳಲ್ಲಿ ಯಾವ ಶುಭಕಾರ್ಯಗಳೂ ಇಲ್ಲ. ಯಾಕಂದ್ರೆ ಇವರ ಬಳಿ ಮೂರು ಹೊತ್ತು ಸರಿಯಾಗಿ ಊಟಮಾಡಲು ಸಹ ಹಣವಿಲ್ಲ. ಇದು ರಾಯಚೂರಿನ ಗ್ರಾಮೀಣ ಭಾಗದ ಕೃಷಿ ಕೂಲಿಕಾರ್ಮಿಕರು ಹಾಗೂ ಸಣ್ಣ ಮತ್ತು ಅತೀಸಣ್ಣ ರೈತರ ಪ್ರತಿ ವರ್ಷದ ಪರಿಸ್ಥಿತಿ.

    ಕಳೆದ ನಾಲ್ಕೈದು ವರ್ಷಗಳಿಂದ ಬೆಂಬಿಡದೆ ಭೂತದಂತೆ ಕಾಡುತ್ತಿರುವ ಬರಗಾಲ ರೈತರನ್ನ ಇನ್ನಷ್ಟು ಬಡತನಕ್ಕೆ ತಳ್ಳುತ್ತಿದ್ದು ದೊಡ್ಡ ಸಾಲಗಾರರನ್ನಾಗಿ ಮಾಡುತ್ತಿದೆ. ಹೀಗಾಗಿ ಜನ ಬೇಸಿಗೆ ಆರಂಭದಲ್ಲೆ ನಗರ ಪ್ರದೇಶಗಳಲ್ಲಿನ ಕೂಲಿ ಕೆಲಸಗಳ ಕಡೆ ಆಕರ್ಷಿತರಾಗುತ್ತಿದ್ದಾರೆ. ಆದ್ರೆ ಗುಳೆ ತಪ್ಪಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ಶುರುವಾದ ಕಾಮ್ ಮಾಂಗೋ ಅಭಿಯಾನ ಸಹ ಗ್ರಾಮೀಣ ಜನರ ಕೈಹಿಡಿದಿಲ್ಲ. ಬರಗಾಲದಲ್ಲಿ ಕೆಲಸವಿಲ್ಲದೆ ಗುಳೆ ಹೊರಡುವ ಜನರಿಗೆ ಕೆಲಸ ನೀಡಲು ಅರ್ಜಿ ಕೇಳಿದ ಅಭಿಯಾನ ಸೋತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಕೊರತೆಯಿಂದ ಹಳ್ಳ ಹಿಡಿದಿದೆ.

    ರಾಯಚೂರು ತಾಲೂಕಿನ ಯಾಪಲದಿನ್ನಿ, ಆತ್ಕೂರು, ಉಡುಮಗಲ್-ಖಾನಪುರ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಅಡಿ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ. ಇನ್ನು ಅರ್ಜಿ ಸ್ವೀಕಾರವಾದ ಕಡೆಗಳಲ್ಲಿ ಕಾಮಗಾರಿ ಮಾಡಿದರೆ ಹಣ ಬಿಡುಗಡೆ ಮಾಡುತ್ತಿಲ್ಲ. ಬೇಸಿಗೆಯಲ್ಲಿ ಉದ್ಯೋಗ ಪಡೆದವರು ಶೇಕಡಾ 75 ರಷ್ಟು ಕಾಮಗಾರಿ ಪೂರ್ಣಗೊಳಿಸಿದರೂ ಸಂಪೂರ್ಣ ಹಣ ನೀಡಬೇಕು ಅನ್ನೋ ನಿಯಮವನ್ನೇ ಗಾಳಿಗೆ ತೂರಲಾಗಿದೆ. ಹೀಗಾಗಿ ಜನ ಸರ್ಕಾರದ ಯೋಜನೆಯನ್ನ ನಂಬದೇ ಗುಳೆ ಹೊರಟಿದ್ದಾರೆ. ರಾಯಚೂರು ತಾಲೂಕಿನ ಮರ್ಚಡ, ಗಾಜರಾಳ, ನಾನದೊಡ್ಡಿ ಗ್ರಾಮಗಳಿಂದ ಪ್ರತಿನಿತ್ಯ 20ಕ್ಕೂ ಹೆಚ್ಚು ಜನ ನಗರ ಪ್ರದೇಶಗಳ ಬಸ್ ಹತ್ತುತ್ತಿದ್ದಾರೆ.

    ಪ್ರಮುಖವಾಗಿ ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ರಾಯಚೂರು ತಾಲೂಕುಗಳಿಂದ ಹೆಚ್ಚೆಚ್ಚು ಜನ ಬರಕ್ಕೆ ಹೆದರಿ ಚಿಕ್ಕಮಕ್ಕಳನ್ನ ಕಟ್ಟಿಕೊಂಡು ಗುಳೆ ಹೋಗುತ್ತಿದ್ದಾರೆ. 2016-17ರ ಸಾಲಿನಲ್ಲಿ ಯೋಜನೆಗೆ 99 ಕೋಟಿ 68 ಲಕ್ಷ ರೂ. ಖರ್ಚು ಮಾಡಲಾಗಿದೆ ಅಂತ ಸರ್ಕಾರಿ ದಾಖಲೆಗಳು ಹೇಳುತ್ತವೆ. ಆದ್ರೆ ಕೂಲಿ ಹಣ ಸಿಗದೆ ಫಲಾನುಭವಿಗಳು ಕಂಗಾಲಾಗಿದ್ದಾರೆ. ಯೋಜನೆಯಡಿ ಜಿಲ್ಲೆಯ ಐದು ತಾಲೂಕುಗಳಲ್ಲಿ 7431 ಕುಟುಂಬಗಳು 100 ಮಾನವ ದಿನಗಳನ್ನ ಪೂರೈಸಿದ್ದರೆ, 82 ಕುಟುಂಬಗಳು 150 ದಿನಗಳ ಕೂಲಿ ಕೆಲಸವನ್ನ ಪೂರೈಸಿವೆ. ಕೃಷಿ ಹೊಂಡ, ಒಡ್ಡು ನಿರ್ಮಾಣ, ತೋಟಗಾರಿಕೆ ಸಸಿ ನೆಡುವುದು ಸೇರಿ 8633 ಕಾಮಗಾರಿಗಳು ಪೂರ್ಣಗೊಂಡಿದ್ದು, 447 ಕಾಮಗಾರಿಗಳು ಪ್ರಗತಿಯಲ್ಲಿವೆ.

    ಗುಳೆ ಹೋಗುವವರಲ್ಲಿ ಎರಡು ವಿಧ: ವೃತ್ತಿಪರ ಕೂಲಿ ಕೆಲಸಗಾರರು ಹಾಗೂ ವೃತ್ತಿಪರರಲ್ಲದ ಕೆಲಸಗಾರರು ಇದ್ದಾರೆ. ನರೇಗಾ ಅಡಿ ಪ್ರತಿದಿನ 233 ರೂಪಾಯಿ ಕೂಲಿ ನೀಡಲಾಗುತ್ತೆ. ಆದ್ರೆ ವೃತ್ತಿಪರ ಕೂಲಿಕಾರರು ನಗರ ಪ್ರದೇಶಗಳಲ್ಲಿ 500 ರಿಂದ 600 ರೂಪಾಯಿ ದುಡಿಯುತ್ತಾರೆ. ಹೀಗಾಗಿ ವೃತ್ತಿಪರ ಕೂಲಿಕಾರರ ಗುಳೆ ತಡೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಂತ ರಾಯಚೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ. ಇನ್ನು ವೃತ್ತಿಪರರಲ್ಲದ ಕೂಲಿಕಾರರಿಗಾಗಿ ಯೋಜನೆಯಡಿ ಕೆಲಸ ನೀಡುತ್ತಿದ್ದೇವೆ. ಈಗಾಗಲೇ 58 ಲಕ್ಷ ಮಾನವ ದಿನಗಳ ಸೃಜನೆ ಮಾಡಿದ್ದೇವೆ ಅಂತ ತಿಳಿಸಿದ್ದಾರೆ.

    ಕೇವಲ ಉದ್ಯೋಗ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆ, ಬೆಳೆ ಹಾನಿ, ಸಾಲ ತೀರಿಸಲಾಗದೆ ಜನ ಗುಳೆ ಹೋಗುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರ ಪರಿಹಾರವನ್ನ ಸಮರ್ಪಕವಾಗಿ ವಿತರಿಸದೇ ಪರಸ್ಪರ ಆರೋಪಗಳಲ್ಲಿ ತೊಡಗಿದ್ದು, ಸರ್ಕಾರದ ಮೇಲಿನ ವಿಶ್ವಾಸವನ್ನ ಜನ ಕಳೆದುಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಇನ್ನೂ ಭೀಕರ ಬರಗಾಲದ ಮುನ್ಸೂಚನೆಯಿರುವುದರಿಂದ ರೈತರು ಮಾರ್ಚ್ ಆರಂಭದಲ್ಲೇ ಗುಳೆ ಹೋಗುತ್ತಿದ್ದಾರೆ.

     

  • ಗಣಿ ನಾಡಿನಲ್ಲಿ 625 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಶುರುವಾಗಿದೆ ಹಾಹಾಕಾರ !

    ಗಣಿ ನಾಡಿನಲ್ಲಿ 625 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಶುರುವಾಗಿದೆ ಹಾಹಾಕಾರ !

    -ಮಾಡೋಕೆ ಕೆಲಸವಿಲ್ಲದೆ ಗುಳೆ ಹೊರಟಿದೆ ಕೂಲಿ ಕಾರ್ಮಿಕ ವರ್ಗ
    -ಮೇವಿಲ್ಲದೆ ಕಂಗಾಲಾಗಿವೆ ಜಾನುವಾರುಗಳು

    ವಿರೇಶ್ ದಾನಿ

    ಬಳ್ಳಾರಿ: ಗಣಿ ಜಿಲ್ಲೆ ಈಗ ಅಕ್ಷರಶಃ `ಬರ’ ಪೀಡಿತ ಜಿಲ್ಲೆಯಾಗಿ ಮಾರ್ಪಡಾಗಿದೆ. ಹಿಂದೆಂದೂ ಕಾಣದ ಭೀಕರ ಕ್ಷಾಮ ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಎದುರಾಗಿದೆ. ಒಂದೆಡೆ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶಗಳಲ್ಲಿ ನೀರು, ಮೇವು, ಉದ್ಯೋಗಕ್ಕಾಗಿ ಪರದಾಟ ಕಂಡು ಬರುತ್ತಿದ್ದರೆ ಇನ್ನೊಂದೆಡೆ ಬೇಸಿಗೆಯಲ್ಲಿ ಬಿರು ಬಿಸಿಲಿನ ತಾಪದ ಜೊತೆಗೆ ದಾಹವೂ ಹೆಚ್ಚಾಗಿದೆ. ಇನ್ನು ಸತತ 3 ವರ್ಷಗಳ ಬರದಿಂದಾಗಿ ರೈತರ ಬದುಕು ಅಕ್ಷರಶಃ ಅತಂತ್ರವಾಗಿದೆ. ಸಾಕಷ್ಟು ಸಂಖ್ಯೆಯ ಕೃಷಿ ಕಾರ್ಮಿಕರು ಹಾಗೂ ರೈತ ಸಮೂಹ ಈಗ ನಗರ ಪ್ರದೇಶದತ್ತ ಕೆಲಸ ಅರಸಿ ಗುಳೆ ಹೊರಟಿದ್ದಾರೆ.

    ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಶ್ರಿತ ತಾಲೂಕುಗಳಾದ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಹೂವಿನಹಡಗಲಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಹೊಸಪೇಟೆ, ಸಿರುಗುಪ್ಪ, ಬಳ್ಳಾರಿ ತಾಲೂಕುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯ ಎಲ್ಲ ಕೆರೆ-ಕಟ್ಟೆಗಳು ನೀರಿಲ್ಲದೆ ಸಂಪೂರ್ಣವಾಗಿ ಖಾಲಿಯಾಗಿವೆ. ಇನ್ನು ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಕೇವಲ 4 ಟಿಎಂಸಿ ಮಾತ್ರ ಡೆಡ್ ಸ್ಟೋರೇಜ್ ನೀರು ಸಂಗ್ರಹವಿರುವುದರಿಂದ ಜಿಲ್ಲೆಯಲ್ಲಿ ಈ ಬಾರಿ ಕುಡಿಯುವ ನೀರಿನ ಅಭಾವ ತ್ರೀವಗೊಂಡಿದೆ.

    ಸಂಡೂರು ತಾಲೂಕಿನಲ್ಲಿ 30ಕ್ಕೂ ಅಧಿಕ ಕೆರೆಗಳಿದ್ದು, ಚೋರುನೂರು, ಬೊಮ್ಮಘಟ್ಟ ಸೇರಿ ಬೆರಳೆಣಿಕೆ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರಿದೆ. ಉಳಿದಂತೆ ಬಹುತೇಕ ಕೆರೆಗಳು ಬತ್ತಿಹೋಗಿವೆ. ಸಿರಗುಪ್ಪ ತಾಲೂಕಿನ 31 ಕೆರೆಗಳಲ್ಲಿ ಸಿರಿಗೇರಿ, ಕರೂರು, ರಾರಾವಿ, ಹಳೇಕೋಟೆ ಗ್ರಾಮದ ಕೆರೆಗಳು ಹೊರತುಪಡಿಸಿ ಇನ್ನುಳಿದವುಗಳಲ್ಲಿ ಕೊಂಚ ನೀರು ಸಂಗ್ರಹವಿದೆ.

    ಶೇ.35 ರಷ್ಟು ಮಳೆ ಅಭಾವ: ಜಿಲ್ಲೆಯಲ್ಲಿ ಕಳೆದ ಮುಂಗಾರು ಹಾಗೂ ಹಿಂಗಾರು ಮಳೆ ಪ್ರಮಾಣವು ವಾಡಿಕೆಗಿಂತಲೂ ಶೇ.35 ರಷ್ಟು ಕಡಿಮೆ ದಾಖಲಾಗಿದೆ. ಮುಂಗಾರು ಹಂಗಾಮಿನಲ್ಲಿ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕೃಷಿ ಬೆಳೆ ಹಾನಿಯಾಗಿ ಸುಮಾರು 139.98 ಕೋಟಿ ರೂ. ನಷ್ಟವಾಗಿದೆ. 7947 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆ ಹಾನಿಯಿಂದಾಗಿ 709.91 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಮುಂಗಾರು ಬೆಳೆ ಹಾನಿ ಪರಿಹಾರ ನೀಡಲು ಜಿಲ್ಲೆಯ 1.53 ಲಕ್ಷ ರೈತರನ್ನು ಗುರುತಿಸಲಾಗಿದೆ. ಇನ್ನು ಹಿಂಗಾರು ಹಂಗಾಮಿನ ಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಕೃಷಿಯಲ್ಲಿ 1.41 ಲಕ್ಷ ಹೆಕ್ಟೇರ್ ಗುರಿಯಲ್ಲಿ 29657 ಹೆಕ್ಟೇರ್ ಹಾಗೂ ತೋಟಗಾರಿಕೆಯಲ್ಲಿ 3602 ಹೆಕ್ಟೇರ್ ಪೈಕಿ 932 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತುಂಗಭದ್ರ ಜಲಾಶಯವನ್ನು ಅವಲಂಬಿಸಿರುವ ಜಿಲ್ಲೆಯ ರೈತರು ಭತ್ತ, ಕಬ್ಬು ನಾಟಿ ಮಾಡುವುದೇ ಹೆಚ್ಚು. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ ಬೆಳೆಗೂ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇನ್ನು 2ನೇ ಬೆಳೆಯ ಮಾತಂತೂ ಇಲ್ಲವಾಗಿದೆ.

    ಖಾರವಾದ ಮಿರ್ಚಿ: 2ನೇ ಬೆಳೆ ಬಿತ್ತನೆಗೆ ನೀರಿನ ಅಭಾವದ ಹಿನ್ನೆಲೆಯಲ್ಲಿ ಸಿರುಗುಪ್ಪ ಮತ್ತು ಬಳ್ಳಾರಿ ತಾಲೂಕಿನ ಬಹುತೇಕ ರೈತರು ಈ ಬಾರಿ ಮೆಣಸಿನಕಾಯಿ ಬೆಳೆಯನ್ನು ಹೆಚ್ಚಾಗಿ ಬೆಳೆದರು. ಉತ್ತಮ ಇಳುವರಿಯೂ ಬಂತು. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದಾಗಿ ರೈತರ ಪಾಲಿಗೆ ಮಿರ್ಚಿಯಂತೂ ಬಲು ಖಾರವಾಗಿಯೇ ಪರಿಣಮಿಸಿದೆ. ಹೀಗಾಗಿ ಮೆಣಸಿನಕಾಯಿ ಬೆಳೆ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಅಕ್ಷರಶಃ ಖಾರವಾಗಿ ಬಿಟ್ಟಿದೆ.

    625 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ: ಜಿಲ್ಲೆಯಾದ್ಯಂತ ಈ ವರ್ಷ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, 625 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಪೈಕಿ ಬಳ್ಳಾರಿ ತಾಲೂಕಿನ 59, ಹೂವಿನಹಡಗಲಿಯ 65, ಹ.ಬೊ.ಹಳ್ಳಿಯ 99, ಹೊಸಪೇಟೆಯ 66, ಕೂಡ್ಲಿಗಿಯ 145, ಸಂಡೂರಿನ 93 ಹಾಗೂ ಸಿರುಗುಪ್ಪ ತಾಲೂಕಿನ 98 ಗ್ರಾಮಗಳು ಸೇರಿವೆ. ಖಾಸಗಿ ಮಾಲೀಕರಿಂದ 73 ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಜಿಲ್ಲಾಡಳಿತ ನೀರು ಪೂರೈಸುತ್ತಿದ್ದು ಪ್ರತಿಯೊಂದಕ್ಕೆ ಮಾಸಿಕ 7-9 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಆದ್ರೂ ಜಿಲ್ಲೆಯಲ್ಲಿ ಜನರಿಗೆ ಸರಿಯಾಗಿ ಕುಡಿಯೋಕೆ ನೀರು ಸಿಗದೆ ಹಾಹಾಕಾರ ತೀವ್ರಗೊಂಡಿದೆ.

    ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹವು ತಳ ಮುಟ್ಟಿರುವುದರಿಂದ ಕಾಲುವೆಗಳಿಗೆ ನಿಗದಿತ ಅವಧಿಗಿಂತ ಮುಂಚಿತವಾಗಿ ನೀರಿನ ಹರಿವು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸುಮಾರು 400-500 ಅಡಿಯಷ್ಟು ಆಳವಾಗಿ ಬೋರವೆಲ್ ಕೊರೆದರೂ ನೀರು ಸಿಗದಂತಾಗಿದೆ. ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಂತೂ ಸಾವಿರ ಅಡಿಯಷ್ಟು ಆಳವಾಗಿ ಬೊರವೆಲ್ ಕೊರೆದರೂ ನೀರು ಸಿಗದಿರುವುದು ಜನರನ್ನು ಆತಂಕಕ್ಕೆ ಈಡು ಮಾಡಿದೆ.

    10-15 ದಿನಕ್ಕೊಮ್ಮೆ ನೀರು ಬಂದ್ರೆ ಪುಣ್ಯ: ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ ಪರಿಣಾಮ ಬಳ್ಳಾರಿ ಮಹಾನಗರದ ಜನರಿಗೆ ಸರಿಯಾಗಿ ನೀರು ಸಿಗದಂತಾಗಿದೆ. ಡ್ಯಾಂನಲ್ಲಿ ನೀರು ಕಡಿಮೆಯಾಗಿರುವುದರಿಂದ ಬಿಸಿಲಿನ ಬಿಸಿಯೊಂದಿಗೆ ನೀರಿನ ದಾಹ ಇದೀಗ ಬಳ್ಳಾರಿ ನಗರದ ಸಾರ್ವಜನಿಕರಿಗೆ ಮುಟ್ಟಿದೆ. ನಗರದ ಎಲ್ಲ 35 ವಾರ್ಡ್‍ಗಳಲ್ಲೂ 10-12 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಅದೂ ಕೆಲ ನಿಮಿಷಗಳಿಗೆ ಮಾತ್ರ ನೀರು ಪೊರೈಕೆಯಾಗುತ್ತಿರುವುದರಿಂದ ಜನರು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಗಿದೆ.

    ಜಲಾಶಯದ ಪಕ್ಕದಲ್ಲೇ ಇರುವ ಹೊಸಪೇಟೆ ನಗರದಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. 2-3 ದಿನಕ್ಕೊಮ್ಮೆ ಸರದಿ ಪ್ರಕಾರ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದಂತೆ ಜಿಲ್ಲೆಯ ಸಿರಗುಪ್ಪ, ಕಂಪ್ಲಿ, ಕುರುಗೋಡು, ಕೂಡ್ಲಿಗಿ, ಹಡಗಲಿ, ಸಂಡೂರು, ಕುರೇಕುಪ್ಪ, ಕಮಲಾಪುರ, ಹ.ಬೊ.ಹಳ್ಳಿ, ತೆಕ್ಕಲಕೋಟೆ, ಕೊಟ್ಟೂರು, ಕುಡತಿನಿ, ಮರಿಯಮ್ಮನಹಳ್ಳಿ ಸೇರಿದಂತೆ ಬಹುತೇಕ ನಗರ ಪ್ರದೇಶಗಳಲ್ಲಿನ ಸ್ಥಿತಿ ಭಿನ್ನವಾಗಿಲ್ಲ.

    ಸಂಡೂರು ತಾಲೂಕಿನ ಬಂಡ್ರಿ, ಸಿ.ಕೆ.ಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊಳವೆ ಬಾವಿಗಳಿದ್ದರೂ ನೀರಿಲ್ಲ. ನೀರಿದ್ದರೆ ಪೈಪ್ ಲೈನ್ ಜೋಡಣೆಯಾಗಿಲ್ಲ. ಎರಡೂ ಇದ್ದರೂ ವಿದ್ಯುತ್ ಸಂಪರ್ಕವಿಲ್ಲದ ಸ್ಥಿತಿ. ತೋರಣಗಲ್, ವಿಠಲಾಪುರ ಸೇರಿ ತಾಲೂಕಿನ ಬಹುತೇಕ ಗ್ರಾಮಸ್ಥರಿಗೆ ಫ್ಲೋರೈಡ್‍ಯುಕ್ತ ನೀರೇ ಗತಿ. ಕೂಡ್ಲಿಗಿ ತಾಲೂಕಿನ ಕಾನಾಮಡುಗು, ಹೊಸಹಳ್ಳಿ, ಹುಡೇಂ, ಕಡೇಕೊಳ್ಳ, ನಿಂಬಳಗೆರೆ, ರಾಂಪುರ, ದೂಪದಹಳ್ಳಿ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ, ಹಿರೆ ಮಲ್ಲನಕೆರೆ, ಸೋಗಿ, ಹಕ್ಕಂಡಿ, ಹೊಳಗುಂದಿ, ಬಸರಹಳ್ಳಿ ತಾಂಡ, ಕಾಲ್ವಿ ತಾಂಡ, ಎಂ.ಕಲ್ಲಹಳ್ಳಿ, ಕೆಂಚಮ್ಮನಹಳ್ಳಿ, ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ.

    ಕಳೆದ ಜುಲೈ ತಿಂಗಳಿಂದಲೇ ಟ್ಯಾಂಕರ್ ನೀರು: ಸಂಡೂರು ತಾಲೂಕಿನ ಅಂತಾಪುರ, ಕೊಡಾಲು, ಕೊರಚರಹಟ್ಟಿ, ಚಿಕ್ಕಂತಾಪುರಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಕಳೆದ ಜುಲೈ ತಿಂಗಳಿಂದಲೇ ಈ ಗ್ರಾಮದ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ಖಾಸಗಿ ಬೋರ್‍ವೆಲ್‍ಗಳಿಂದ ನೀರು ಖರೀದಿಸಲಾಗಿತ್ತಾದರೂ ಬೋರ್‍ಗಳಲ್ಲೂ ನೀರು ಕಡಿಮೆಯಾಗಿದ್ದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

    ಅಂತರ್ಜಲ ಮಟ್ಟ ಕುಸಿತ: ಮಳೆ ಅಭಾವದಿಂದಾಗಿ ಅಂತರ್ಜಲ ಮಟ್ಟವು ನೂರಾರು ಅಡಿ ಆಳಕ್ಕೆ ಕುಸಿದಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಕೂಡ್ಲಿಗಿ ತಾಲೂಕುಗಳಲ್ಲಿ 500 ರಿಂದ 700 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಭುಜಂಗನಗರದಲ್ಲಿ ಕಳೆದ ಮೇ ತಿಂಗಳಿಂದ ಬಳಕೆ ಮಾಡಿರುವ ಕೆಲವು ಖಾಸಗಿ ಬೋರ್‍ವೆಲ್‍ನವರಿಗೆ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಖಾಸಗಿ ಬೋರ್‍ವೆಲ್‍ನವರು ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ. ಜಿಲ್ಲೆಯ ಸುಮಾರು 212 ಗ್ರಾಮಗಳ ಜನರು ಫ್ಲೋರೈಡ್‍ಯುಕ್ತ ನೀರನ್ನೇ ಸೇವಿಸುವ ಅನಿವಾರ್ಯತೆ ಎದುರಾಗಿದೆ.

    ಮೇವಿಗೂ ಬರ: ಅಚ್ಚರಿ ಎಂದರೆ ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಮೇವಿನ ಸಮಸ್ಯೆ ಎದುರಾಗಿದೆ. ಮೇವಿಲ್ಲದೇ ಜಾನುವಾರು ಕಸಾಯಿಖಾನೆ ಸೇರುತ್ತಿವೆ. ಸಮಸ್ಯಾತ್ಮಕ ಪ್ರದೇಶದಲ್ಲಿ ಮೇವಿನ ಬ್ಯಾಂಕ್ ಇಲ್ಲವೇ ಗೋಶಾಲೆ ಸ್ಥಾಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ಪಶು ಸಂಗೋಪನಾ ಇಲಾಖೆ ಮಾಹಿತಿಗಳ ಪ್ರಕಾರ ಮೇವಿನ ಸಮಸ್ಯೆ ಎಲ್ಲಿಯೂ ಇಲ್ಲ. ಜಿಲ್ಲೆಯಲ್ಲಿ 4.84 ಲಕ್ಷ ಜಾನುವಾರುಗಳಿದ್ದು, 7.09 ಲಕ್ಷ ಟನ್ ಮೇವು ಸಂಗ್ರಹವಿದೆ. ಲಭ್ಯವಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ 16,956 ಟನ್ ಮೇವಿನ ಅವಶ್ಯಕತೆ ಇದೆ. ಪ್ರಸ್ತುತ 42 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಆದರೆ ಮುಂದಿನ ದಿನಗಳಲ್ಲಿ 131 ಗ್ರಾಮಗಳಲ್ಲಿ ಮೇವಿನ ಕೊರತೆ ಎದುರಾಗಬಹುದಾಗಿದ್ದು, 13,103 ಟನ್ ಮೇವಿನ ಅಗತ್ಯವಿದೆ ಎಂದು ಪಶು ಸಂಗೋಪನಾ ಇಲಾಖೆ ಅಂದಾಜಿಸಿದೆ.

    20.92 ಲಕ್ಷ ಮಾನವ ದಿನಗಳ ಸೃಷ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರ್ಷ 2.23 ಲಕ್ಷ ಜಾಬ್ ಕಾರ್ಡ್ ವಿತರಿಸಲಾಗಿದ್ದು, 20.92 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಅರಣ್ಯ, ತೋಟಗಾರಿಕೆ, ರೇಷ್ಮೆ, ಕೃಷಿ ಮತ್ತು ಜಲಾನಯನ, ಪಶುಸಂಗೋಪನೆ, ಮೀನುಗಾರಿಕೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ, ನೆಲ್ಕುದ್ರಿ, ತಂಬ್ರಹಳ್ಳಿ, ಕೋಗಳಿ, ಅಲಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಮಾನವ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ಜನರು ಗುಳೆ ಹೋಗುವುದು ಮಾತ್ರ ನಿಂತಿಲ್ಲ.

    125 ಕೋಟಿ ಬರ ಪರಿಹಾರ ಪ್ರಸ್ತಾವನೆ: ಕೇಂದ್ರ ಬರ ಅಧ್ಯಯನ ತಂಡವೂ ಈಚೆಗೆ ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದೆ. ತಂಡದ ಎದುರಿಗೆ ರೈತರು ತಮ್ಮ ಗೋಳನ್ನೂ ತೋಡಿಕೊಂಡಿದ್ದಾರೆ. ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ. ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೆತ್ತಿಕೊಳ್ಳಲು 125 ಕೋಟಿ ರೂ. ಅನುದಾನ ಬೇಡಿಕೆಯನ್ನು ಜಿಲ್ಲಾಡಳಿತ ಕೇಂದ್ರ ತಂಡಕ್ಕೆ ಸಲ್ಲಿಸಿದೆ.

    ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹಿಂಗಾರು ಬೆಳೆ ಹಾನಿಗೆ 813.88 ಲಕ್ಷ ರೂ., ದೊಡ್ಡ ರೈತರ ಬೆಳೆಗೆ 201.38 ಲಕ್ಷ ರೂ.ಗಳನ್ನು ಇನ್‍ಪುಟ್ ಸಬ್ಸಿಡಿಗಾಗಿ, ಮೇವು ದಾಸ್ತಾನಿಗೆ 382 ಲಕ್ಷ ರೂ., ಗೋಶಾಲೆ ನಿರ್ವಹಣೆಗೆ 800 ಲಕ್ಷ ರೂ., ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ 2150 ಲಕ್ಷ ರೂ., ನಗರ ನೀರು ಸರಬರಾಜುಗೆ 1975 ಲಕ್ಷ ರೂ., ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಪುನಶ್ಚೇತನಕ್ಕಾಗಿ 6,200 ಲಕ್ಷ ರೂ. ಹೀಗೆ ಒಟ್ಟು 12,522.31 ಲಕ್ಷ ರೂ. ಅನುದಾನವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಈ ಮನವಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎಂಬುದು ಕಾದು ನೋಡಬೇಕಿದೆ.