Tag: ವಲಸೆ ಕೂಲಿ ಕಾರ್ಮಿಕರು

  • 36 ಕಿ.ಮೀ ನಡೆದು ದಣಿವಾಗಿ ಮಲಗಿದ್ರು- ನಿದ್ದೆಯಲ್ಲೇ ಛಿದ್ರಛಿದ್ರವಾಯ್ತು 15 ಮಂದಿಯ ದೇಹ

    36 ಕಿ.ಮೀ ನಡೆದು ದಣಿವಾಗಿ ಮಲಗಿದ್ರು- ನಿದ್ದೆಯಲ್ಲೇ ಛಿದ್ರಛಿದ್ರವಾಯ್ತು 15 ಮಂದಿಯ ದೇಹ

    – ವಿಶ್ರಾಂತಿ ಪಡೆಯಲು ಕುಳಿತು ನಿದ್ದೆಗೆ ಜಾರಿದ್ದೆ ತಪ್ಪಾಯ್ತು
    – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

    ಮುಂಬೈ: ಇಂದು ಮುಂಜಾನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ರೈಲು ಅವಘಡ ಸಂಭವಿಸಿದೆ. 36 ಕಿಲೋ ಮೀಟರ್ ದೂರದಿಂದ ನಡೆದುಕೊಂಡು ಬಂದು ಸುಸ್ತಾಗಿ ರೈಲ್ವೆ ಹಳಿ ಮೇಲೆ ಮಲಗಿದ್ದ 15 ಮಂದಿ ಕೂಲಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ ಎಲ್ಲರೂ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

    ಇಂದು ಮುಂಜಾನೆ ಸುಮಾರು 5.30ಕ್ಕೆ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದ ಕೂಲಿ ಕಾರ್ಮಿಕರು ರೈಲ್ವೆ ಹಳಿಗಳಲ್ಲಿ ನಿದ್ರೆಗೆ ಜಾರಿದಾಗ ಈ ಘಟನೆ ನಡೆದಿದೆ. ರೈಲು ಅವಘಡದಿಂದ ಘಟನೆಯಲ್ಲಿ 14 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದರು. ಅವರನ್ನು ತಕ್ಷಣ ಘಾಟಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರೈಲಿನ ಅವಘಡದಿಂದ ಮೃತಪಟ್ಟಿರುವ ಕಾರ್ಮಿಕರು ಮಧ್ಯಪ್ರದೇಶದ ಉಮರಿಯಾ ಮತ್ತು ಶಹ್ದೋಲ್ ನಿವಾಸಿಗಳಾಗಿದ್ದು, ಇವರು ಮಹಾರಾಷ್ಟ್ರದ ಜಲ್ನಾದ ಎಸ್‌ಆರ್‌ಜಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ನಡೆದುಕೊಂಡು ಜಲ್ನಾದಿಂದ ಭೂಸಾವಲ್‍ಗೆ  ಹೋಗಲು ನಿರ್ಧರಿಸಿದ್ದರು.

    ಅದರಂತೆಯೇ 16 ಜನರ ಗುಂಪು ಗುರುವಾರ ಸಂಜೆ 7 ಗಂಟೆಗೆ ಜಲ್ನಾದಿಂದ ಹೊರಟು, ಕಾಲ್ನಡಿಗೆ ಮೂಲಕ ಬದ್ನಾಪುರದವರೆಗೆ ಬಂದಿದ್ದರು. ಸುಮಾರು 36 ಕಿಲೋ ಮೀಟರ್ ನಡೆದ ನಂತರ ಅವರು ದಣಿದಿದ್ದರು. ಹೀಗಾಗಿ ಸ್ವಲ್ಪ ವಿಶ್ರಾಂತಿ ಪಡೆಯಲು ಔರಂಗಾಬಾದ್-ಜಲ್ನಾ ರೈಲ್ವೆ ಟ್ರ್ಯಾಕ್ ಮೇಲೆ ಕುಳಿತುಕೊಂಡಿದ್ದರು. ಆದರೆ ತುಂಬಾ ಆಯಾಸವಾಗಿದ್ದರಿಂದ ತಕ್ಷಣ ನಿದ್ರೆಗೆ ಜಾರಿದರು. 14 ಜನರು ಮಾತ್ರ ಟ್ರ್ಯಾಕ್ ಮೇಲೆ ಕುಳಿತುಕೊಂಡಿದ್ದರು. ಟ್ರ್ಯಾಕ್ ಪಕ್ಕದಲ್ಲಿ ಇಬ್ಬರು ಮತ್ತು ಮೂವರು ಹಳಿಯಿಂದ ದೂರ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ನಿದ್ರೆಯಲ್ಲಿದ್ದಾಗಲೇ ಈ ದುರಂತ ನಡೆದಿದೆ.

    ಖಾಲಿ ಪೆಟ್ರೋಲಿಯಂ ಟ್ಯಾಂಕರ್ ರೈಲು ತೆಲಂಗಾಣದ ಚೆರ್ಲಪಲ್ಲಿಯಿಂದ ಮಹಾರಾಷ್ಟ್ರದ ಮನ್ಮಾದ್ ಬಳಿಯ ಪಾನಿವಾಡಿಗೆ ಹೋಗುತ್ತಿತ್ತು. ಆದರೆ ಬದ್ನಾಪುರ ನಿಲ್ದಾಣದಿಂದ ಮುಂದೆ ಹೋಗುತ್ತಿದ್ದಾಗ ಕೆಲವು ಜನರು ರೈಲ್ವೇ ಹಳಿಯ ಮೇಲೆ ಮಲಗಿರುವುದನ್ನು ನೋಡಿ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದನು. ಅಲ್ಲದೇ ಹಾರನ್ ಕೂಡ ಮಾಡಿದ್ದಾನೆ. ಅಷ್ಟರಲ್ಲಿ ರೈಲು ಅವರ ಮೇಲೆ ಹರಿದಿದೆ ಎಂದು ರೈಲ್ವೆ ಅಧಿಕಾರಿ ರಾಕೇಶ್ ತಿಳಿಸಿದರು.

    ರೈಲ್ವೆ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

  • ಹಳಿ ಮೇಲೆ ಮಲಗಿದ್ದ 14 ಮಂದಿ ಕೂಲಿ ಕಾರ್ಮಿಕರ ಮೇಲೆ ಹರಿದ ರೈಲು

    ಹಳಿ ಮೇಲೆ ಮಲಗಿದ್ದ 14 ಮಂದಿ ಕೂಲಿ ಕಾರ್ಮಿಕರ ಮೇಲೆ ಹರಿದ ರೈಲು

    – ಅಪ್ಪಚ್ಚಿಯಾದ ಮಕ್ಕಳು, ಮಹಿಳೆಯರ  ಮೃತ ದೇಹಗಳು

    ಮುಂಬೈ: ಹಳಿ ಮೇಲೆ ಮಲಗಿದ್ದ 14 ಮಂದಿ ಕೂಲಿ ಕಾರ್ಮಿಕರ ಮೇಲೆ ರೈಲು ಹರಿದ ದಾರುಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮಕ್ಕಳು, ಮಹಿಳೆಯರು ಸೇರಿದಂತೆ 15 ಜನ ವಲಸೆ ಕಾರ್ಮಿಕರು ಔರಂಗಾಬಾದ್-ಜಲ್ನಾ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು. ನಸುಕಿನ ಜಾವ 4 ಗಂಟೆಗೆ ಬಂದ ಗೂಡ್ಸ್ ರೈಲು ಕಾರ್ಮಿಕರ ಮೇಲೆ ಹರಿದಿದೆ. ಪರಿಣಾಮ ಮಕ್ಕಳು, ಕಾರ್ಮಿಕರ ದೇಹ ತುಂಡು ತುಂಡಾಗಿ ಟ್ರ್ಯಾಕ್ ಮೇಲೆ, ಕೆಳಗೆ ಬಿದ್ದಿವೆ.

    ಕರ್ಮದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪೊಲೀಸರು ಬೆಳಗ್ಗೆ 6 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.