Tag: ವಲಸೆ ಕಾರ್ಮಿಕರು

  • ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಬಾಲಿವುಡ್ ನಟ ಸೋನು ಸೂದ್ ಬಸ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

    ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಸಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಸೋಮವಾರ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಷ್ಣುವರ್ಧನ ಸಿನಿಮಾದ ನಟ ಸೋನು ಸೂದ್, “ಪ್ರತಿಯೊಬ್ಬರು ತಮ್ಮ ಕುಟುಂಬ, ಆತ್ಮೀಯರೊಂದಿಗೆ ಇರಲು ಇಷ್ಟಪಡುತ್ತಾರೆ. ಆದ್ದರಿಂದ ವಲಸಿಗರು ಮನೆಗೆ ತಲುಪಲು ಸಹಾಯ ಮಾಡಲು ಮಹಾರಾಷ್ಟ್ರ-ಕರ್ನಾಟಕ ರಾಜ್ಯ ಸರ್ಕಾರಗಳಿಂದ ಅನುಮತಿ ಕೋರಿದ್ದೆ. ಅದರಂತೆ ವಲಸೆ ಕಾರ್ಮಿಕರನ್ನು ಕಳಿಸಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

    “ಮಹಾರಾಷ್ಟ್ರದ ಸರ್ಕಾರಿ ಅಧಿಕಾರಿಗಳು ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲು ಅಗತ್ಯ ದಾಖಲೆಗಳನ್ನು ಒದಗಿಸಿದರು. ವಲಸೆ ಕಾರ್ಮಿಕರು ಪುಟ್ಟ ಮಕ್ಕಳು, ವೃದ್ಧ ಪೋಷಕರನ್ನು ಕರೆದುಕೊಂಡು ರಸ್ತೆ ಮಾರ್ಗವಾಗಿ ಹೋಗುವುದನ್ನು ಕಂಡು ನನಗೆ ನೋವಾಗಿತ್ತು. ಹೀಗಾಗಿ ಅವರ ಸಹಾಯಕ್ಕೆ ನಿಂತೆ. ಇತರ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಮುಟ್ಟಿಸುವ ನನ್ನ ಕೆಲಸವನ್ನು ಮುಂದುವರಿಸುತ್ತೇನೆ” ಎಂದು ಸೋನು ಸೂದ್ ಹೇಳಿದ್ದಾರೆ.

    46 ವರ್ಷದ ನಟ ಪಂಜಾಬ್‍ನಾದ್ಯಂತ 1,500ಕ್ಕೂ ಹೆಚ್ಚು ಪಿಪಿಇ ಕಿಟ್‍ಗಳನ್ನು ವೈದ್ಯರಿಗೆ ನೀಡಿದ್ದರು. ಅಷ್ಟೇ ಅಲ್ಲದೆ ವೈದ್ಯಕೀಯ ಸಿಬ್ಬಂದಿಯ ವಸತಿಗಾಗಿ ಅವರ ಮುಂಬೈ ಹೋಟೆಲ್ ಅನ್ನು ನೀಡಿದ್ದಾರೆ.

  • ಕಲಬುರಗಿಗೆ ಹೊಸ ಟೆನ್ಶನ್ – ಮುಂಬೈನಿಂದ 1,200ಕ್ಕೂ ಹೆಚ್ಚು ಕಾರ್ಮಿಕರು ರಿಟರ್ನ್

    ಕಲಬುರಗಿಗೆ ಹೊಸ ಟೆನ್ಶನ್ – ಮುಂಬೈನಿಂದ 1,200ಕ್ಕೂ ಹೆಚ್ಚು ಕಾರ್ಮಿಕರು ರಿಟರ್ನ್

    ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ಹೆಚ್ಚಾದ ಹಿನ್ನೆಲೆಯಲ್ಲಿ ಜನ ಚಿಂತೆಗೀಡಾಗಿದ್ದಾರೆ. ಹೀಗಿರುವಾಗಲೇ ಮುಂಬೈನಿಂದ ಸಾವಿರಾರು ಕೂಲಿ ಕಾರ್ಮಿಕರು ವಿಶೇಷ ರೈಲು ಮೂಲಕ ಕಲಬುರಗಿಗೆ ತಡರಾತ್ರಿ ಆಗಮಿಸಿದ್ದಾರೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

    ಕೊರೊನಾ ಹಾಟ್‍ಸ್ಪಾಟ್ ಕಲಬುರಗಿಗೆ ಹೊಸ ಟೆನ್ಶನ್ ಶುರುವಾಗಿದೆ. ಮುಂಬೈನಿಂದ ಸಾವಿರಾರು ವಲಸೆ ಕಾರ್ಮಿಕರು ಶ್ರಮಿಕ್ ಸ್ಪೆಷಲ್ ರೈಲಿನ ಮೂಲಕ ಕಲಬುರಗಿಗೆ ತಡರಾತ್ರಿ 2 ಗಂಟೆಗೆ ಬಂದಿಳಿದಿದ್ದಾರೆ. ಮುಂಬೈನಿಂದ ಬಂದಿಳಿದ ವಲಸಿಗ ಕಾರ್ಮಿಕರನ್ನು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಸೇರಿದಂತೆ ಹಲವು ಬಿಜೆಪಿ ನಾಯಕರು ಬರಮಾಡಿಕೊಂಡರು.

    ಕುಟುಂಬ ಸಮೇತ ತವರಿಗೆ ಹಿಂತಿರುಗಿದ 1,200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ರೈಲು ನಿಲ್ದಾಣದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ನಂತರ ಸುವಿಧಾ ಆಪ್ ಮೂಲಕ ಎಲ್ಲರ ಮಾಹಿತಿಯನ್ನು ಸಂಗ್ರಹಿಸಿದ ಜಿಲ್ಲಾಡಳಿತ ಎಲ್ಲರನ್ನು ಅವರವರ ಊರುಗಳಿಗೆ ಬಸ್‍ಗಳಲ್ಲಿ ಕಳಿಸಿಕೊಟ್ಟಿತು. ಕಲಬುರಗಿ ರೈಲ್ವೇ ನಿಲ್ದಾಣದಿಂದ ವಲಸೆ ಕಾರ್ಮಿಕರನ್ನು ಹೊತ್ತ ಬಸ್‍ಗಳು ಚಿತ್ತಾಪುರ, ಚಂಚೋಳಿ, ಆಳಂದ, ಸೇಡಂ ತಾಲೂಕಿನ ಅವರವರ ಊರುಗಳಿಗೆ ಹೋಗಿದ್ದಾರೆ.

    ವಲಸೆ ಕಾರ್ಮಿಕರನ್ನು ಅವರವರ ಊರುಗಳ ಶಾಲಾ, ಕಾಲೇಜು ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆತಂಕದ ವಿಚಾರ ಅಂದರೆ ಕಲಬುರಗಿ ಜಿಲ್ಲೆಗೆ ವಾಪಸ್ಸಾದ ವಲಸಿಗ ಕಾರ್ಮಿಕರಲ್ಲಿ ಹಲವರು ಮುಂಬೈ ಸೋಂಕು ಪೀಡಿತ ಧಾರಾವಿ ಸ್ಲಂ ಪ್ರದೇಶದಲ್ಲಿ ಇಷ್ಟು ದಿನ ವಾಸವಿದ್ದರು. ಇದೀಗ ಅವರೆಲ್ಲ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದು, ಇದರಲ್ಲಿ ಯಾರಿಗಾದರೂ ಸೋಂಕು ತಗುಲಿದರೆ ಏನು ಗತಿ ಎಂಬ ಭಯ ಕಲಬುರಗಿ ಜನತೆಯನ್ನು ಕಾಡುತ್ತಿದೆ.

    ಹೀಗಾಗಿ ಈ ವಲಸಿಗ ಕಾರ್ಮಿಕರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಡಬೇಕಾಗಿದೆ. ಶಾಲಾ, ಕಾಲೇಜು ಕಟ್ಟಡಗಳಲ್ಲಿ ಸದ್ಯ ಕ್ವಾರಂಟೇನ್‍ನಲ್ಲಿರುವ ವಲಸೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಬೇಕಿದೆ.

  • ಕಾಲ್ನಡಿಗೆಯಲ್ಲಿ ಮಧ್ಯಪ್ರದೇಶ, ಬಿಹಾರಕ್ಕೆ ಹೊರಟಿದ್ದ ಕಾರ್ಮಿಕರಿಗೆ ಆಶ್ರಯ

    ಕಾಲ್ನಡಿಗೆಯಲ್ಲಿ ಮಧ್ಯಪ್ರದೇಶ, ಬಿಹಾರಕ್ಕೆ ಹೊರಟಿದ್ದ ಕಾರ್ಮಿಕರಿಗೆ ಆಶ್ರಯ

    -ವಿದ್ಯಾರ್ಥಿ ನಿಲಯದಲ್ಲಿ 70 ವಲಸಿಗರಿಗೆ ಆಶ್ರಯ

    ಧಾರವಾಡ/ಹುಬ್ಬಳ್ಳಿ: ಕಾಲ್ನಡಿಗೆ ಮೂಲಕ ಮಧ್ಯಪ್ರದೇಶ ಹಾಗೂ ಬಿಹಾರಕ್ಕೆ ಹೊರಟಿದ್ದ 70 ಜನ ವಲಸೆ ಕಾರ್ಮಿಕರಿಗೆ ಇಂದು ಹುಬ್ಬಳ್ಳಿ ತಾಲೂಕಿನ ತಿರುಮಲಕೊಪ್ಪದ ಬಳಿಯ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ.

    ಕಾರ್ಮಿಕರು ಕಾಲ್ನಡಿಗೆ ಮೂಲಕ ತಮ್ಮ ರಾಜ್ಯಗಳಿಗೆ ಹೊರಟಿರುವ ವಿಷಯ ತಿಳಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಎಲ್ಲರಿಗೂ ಆಶ್ರಯ ಕಲ್ಪಿಸುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಡಿವೈಎಸ್ ಪಿ ರವಿ ನಾಯಕ್ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್. ಆರ್. ಪುರುಷೋತ್ತಮ ಅವರು ಇಂದು ಬೆಳಗ್ಗೆ ವಲಸೆ ಕಾರ್ಮಿಕನರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಕಲೆ ಹಾಕಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ವಾಹನಗಳ ಸಿಗದ ಹಿನ್ನೆಲೆಯಲ್ಲಿ 70 ಜನರು ಕಾಲ್ನಡಿಗೆಯಲ್ಲಿ ಹಾವೇರಿಯಿಂದ ಪ್ರಯಾಣ ಬೆಳೆಸಿದ್ದರು. ಬಿಹಾರದ 60 ಜನ ಮತ್ತು ಮಧ್ಯಪ್ರದೇಶದ 10 ಜನರನ್ನು ವಿದ್ಯಾರ್ಥಿನಿಲಯಕ್ಕೆ ಕರೆತಂದು ಆಶ್ರಯ ಒದಗಿಸಲಾಗಿದೆ. ಅಧಿಕಾರಿಗಳು ಎಲ್ಲ ವಲಸಿಗರನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿ, ವಿಶೇಷ ರೈಲು ಸಂಚಾರ ಪ್ರಾರಂಭವಾಗುತ್ತಿದ್ದಂತೆ ಕಳಿಸೋದಾಗಿ ಭರವಸೆ ನೀಡಿದ್ದಾರೆ. ರೈಲು ಪ್ರಯಾಣದ ಟಿಕೆಟ್ ಕೊಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

  • ನಮ್ಮನ್ನು ಊರಿಗೆ ಕಳುಹಿಸಿಕೊಡಿ- ಪೊಲೀಸರ ಮೇಲೆ ಕಲ್ಲು ತೂರಿದ ವಲಸೆ ಕಾರ್ಮಿಕರು

    ನಮ್ಮನ್ನು ಊರಿಗೆ ಕಳುಹಿಸಿಕೊಡಿ- ಪೊಲೀಸರ ಮೇಲೆ ಕಲ್ಲು ತೂರಿದ ವಲಸೆ ಕಾರ್ಮಿಕರು

    – ಹಾಟ್‍ಸ್ಪಾಟ್ ಆಗಿದ್ದ ಕಾಸರಗೋಡಿನಲ್ಲಿಲ್ಲ ಒಂದೇ ಒಂದು ಪ್ರಕರಣ

    ತಿರುವನಂತಪುರಂ: ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಸುಮಾರು 700 ವಲಸೆ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಅಕ್ಕಲಂ ಬಳಿಯ ಒರುವತಿಲ್ಕೋಟದಲ್ಲಿ ಭಾನುವಾರ ತಡರಾತ್ರಿ ಸುಮಾರು 700 ವಲಸೆ ಕಾರ್ಮಿಕರು ಸೇರಿಕೊಂಡು ನಮ್ಮನ್ನು ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿ ಎಂದು ಪ್ರತಿಭಟಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರು ಬಂದು ಪ್ರತಿಭಟನೆ ನಿಲ್ಲಿಸುವಂತೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

    ಈ ಎಲ್ಲ ಕಾರ್ಮಿಕರು ದೇಶದ ವಿವಿಧೆಡೆಯಿಂದ ಬಂದು ಕೇರಳದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಇವರು ಲಾಕ್‍ಡೌನ್ ಆದ ಮೇಲೆ ಎಲ್ಲ ಕೆಲಸಗಳು ನಿಂತು ಹೋಗಿದೆ. ನಮ್ಮ ಬಳಿ ಊಟ ತಿನ್ನಲು ದುಡ್ಡು ಇಲ್ಲ, ಮಾಡಲು ಕೆಲಸವಿಲ್ಲ ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಒತ್ತಾಯ ಮಾಡಿದ್ದಾರೆ. ಮಾರ್ಚ್ 24ರಂದು ದೇಶ ಲಾಕ್‍ಡೌನ್ ಆದ ಬಳಿಕ ಇವರು ತಿನ್ನಲು ಊಟವಿಲ್ಲದೇ ಪರದಾಡುವ ಸ್ಥಿತಿ ತಲುಪಿದ್ದಾರೆ.

    ಈ ಕಾರಣದಿಂದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆ ಪೊಲೀಸರು ಸ್ಥಳಕ್ಕೆ ಜಮಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ನಿಮ್ಮನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕೆ ಕಾರ್ಮಿಕರು ಅಲ್ಲಿಂದ ತೆರೆಳಿದ್ದಾರೆ.

    ಕೇರಳದಲ್ಲಿ ಹಿಡಿತಕ್ಕೆ ಬಂದ ಕೊರೊನಾ:
    ದೇಶದಲ್ಲಿ ಮೊದಲು ಕೊರೊನಾ ಕಾಣಿಸಿಕೊಂಡಿದ್ದ ಕೇರಳದಲ್ಲಿ ಈಗ ಹಿಡಿತಕ್ಕೆ ಬಂದಿದೆ. ಕೇರಳದಲ್ಲಿ ಕೊರೊನಾ ಹಾಟ್‍ಸ್ಟಾಟ್ ಆಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಈಗ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಈ ನಡುವೆ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಾಜ ಅವರ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದರ ಜೊತೆಗೆ ಕೆಕೆ ಶೈಲಾಜ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.

  • ಟ್ರಕ್ ಪಲ್ಟಿಯಾಗಿ ಐವರು ಕಾರ್ಮಿಕರು ದುರ್ಮರಣ – 15 ಮಂದಿ ಗಂಭೀರ

    ಟ್ರಕ್ ಪಲ್ಟಿಯಾಗಿ ಐವರು ಕಾರ್ಮಿಕರು ದುರ್ಮರಣ – 15 ಮಂದಿ ಗಂಭೀರ

    – ಮಾವಿನಹಣ್ಣು ಸಾಗಿಸೋ ಟ್ರಕ್‍ನಲ್ಲಿ 20 ಮಂದಿ ಪ್ರಯಾಣ

    ಭೋಪಾಲ್: ಟ್ರಕ್‍ವೊಂದು ಪಲ್ಟಿಯಾದ ಪರಿಣಾಮ ಸ್ಥಳದಲ್ಲಿಯೇ ಐವರು ವಲಸೆ ಕಾರ್ಮಿಕರು ಮೃತಪಟ್ಟಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಶನಿವಾರ ರಾತ್ರಿ ಭೋಪಾಲ್‍ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹಳ್ಳಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. 20 ವಲಸೆ ಕಾರ್ಮಿಕರು ಹೈದರಾಬಾದ್‍ನಿಂದ ಮಧ್ಯ ಪ್ರದೇಶ ಝಾನ್ಸಿ ನಗರ ಮತ್ತು ಉತ್ತರ ಪ್ರದೇಶದ ಪಟ್ಟಣಕ್ಕೆ ಮಾವಿನಹಣ್ಣು ಸಾಗಿಸುವ ಟ್ರಕ್‍ನಲ್ಲಿ ಪ್ರಯಾಣಿಸುತ್ತಿದ್ದರು.

    ಟ್ರಕ್ ಮಧ್ಯಪ್ರದೇಶದ ನರಸಿಂಗ್‍ಪುರದ ಗ್ರಾಮಕ್ಕೆ ಬರುತ್ತಿದ್ದಂತೆ ಪಲ್ಟಿಯಾಗಿದೆ. ಪರಿಣಾಮ ಐವರು ವಲಸೆ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಒಬ್ಬ ಕಾರ್ಮಿಕನಿಗೆ ಕೊರೊನಾ ಲಕ್ಷಣ ಕಂಡು ಬಂದಿದ್ದರಿಂದ ಎಲ್ಲರನ್ನು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು. ಇದುವರೆಗೂ ದೇಶಾದ್ಯಂತ 60,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 1,900ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

  • ವಲಸೆ ಕಾರ್ಮಿಕರನ್ನು ಸ್ವೀಕರಿಸಲು ತಮಿಳುನಾಡು ನಕಾರ- ಊಟ, ತಿಂಡಿ ಇಲ್ಲದೆ ಪರದಾಟ

    ವಲಸೆ ಕಾರ್ಮಿಕರನ್ನು ಸ್ವೀಕರಿಸಲು ತಮಿಳುನಾಡು ನಕಾರ- ಊಟ, ತಿಂಡಿ ಇಲ್ಲದೆ ಪರದಾಟ

    ಚಾಮರಾಜನಗರ: ಲಾಕ್ ಡೌನ್ ನಿಂದಾಗಿ ಊಟ, ತಿಂಡಿ ಇಲ್ಲದೆ ಚಾಮರಾಜನಗರದಲ್ಲಿ ವಲಸೆ ಕಾರ್ಮಿಕರು ಪರದಾಡುತ್ತಿದ್ದಾರೆ.

    ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಚೆಕ್ ಪೋಸ್ಟ್ ಆದ ಚಾಮರಾಜನಗರ ತಾಲೂಕಿನ ಬಾಗಳಿ ಚೆಕ್ ಪೋಸ್ಟ್ ಬಳಿ ತಮಿಳುನಾಡಿನ ರಾಮೇಶ್ವರ ಮೂಲದ ಕಾರ್ಮಿಕರು ಅನ್ನ, ನೀರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ.

    ಉಡುಪಿಯಿಂದ ಬಂದಿರುವ ಸುಮಾರು 100 ಕಾರ್ಮಿಕರು ಕಳೆದ ರಾತ್ರಿಯಿಂದ ಚೆಕ್ ಪೋಸ್ಟ್ ನಲ್ಲಿಯೇ ಉಳಿದಿದ್ದಾರೆ. ನಾಲ್ಕು ಕೆಎಸ್‍ಆರ್‍ಟಿಸಿಬಸ್ ನಲ್ಲಿ ಬಂದಿರುವ ಇವರನ್ನು ತಮಿಳುನಾಡು ಸರ್ಕಾರ ಸ್ವೀಕರಿಸಲು ಸಿದ್ಧವಿಲ್ಲದಿರುವುದರಿಂದ ಪಡಬಾರದ ಕಷ್ಟ ಪಡುತ್ತಿದ್ದಾರೆ.

    ಇತ್ತ ಚಾಮರಾಜನಗರ ಜಿಲ್ಲಾಧಿಕಾರಿಗಳು ಕೂಡ ಮೈಸೂರಿನಿಂದ ಬಂದ ಕಾರ್ಮಿಕರನ್ನು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿರುವುದರಿಂದ ಕಾರ್ಮಿಕರು ವೇದನೆ ಅನುಭವಿಸುತ್ತಿದ್ದಾರೆ.

  • ಊರಿಗೆ ತೆರಳ್ತಿದ್ದ ರೈಲಿನಲ್ಲಿ ಊಟಕ್ಕಾಗಿ ಕಿತ್ತಾಡ್ಕೊಂಡ ಕಾರ್ಮಿಕರು

    ಊರಿಗೆ ತೆರಳ್ತಿದ್ದ ರೈಲಿನಲ್ಲಿ ಊಟಕ್ಕಾಗಿ ಕಿತ್ತಾಡ್ಕೊಂಡ ಕಾರ್ಮಿಕರು

    -ರೈಲಿನಲ್ಲಿ ತಳ್ಳಾಟ, ನೂಕಾಟ, ಗಲಾಟೆ
    -ಕೊರೊನಾ ಆತಂಕದಿಂದ ರೈಲಿನೊಳಗೆ ಹೋಗದ ಪೊಲೀಸರು

    ಮುಂಬೈ: ಆಹಾರಕ್ಕಾಗಿ ಕಾರ್ಮಿಕರು ಕಿತ್ತಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಿಂದ ಬಿಹಾರಕ್ಕೆ ಹೊರಟಿದ್ದ ರೈಲಿನಲ್ಲಿ ನಡೆದಿದೆ. ಶ್ರಮಿಕ ರೈಲ್ವೇ ಮೂಲಕ ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ.

    ಮಹಾರಾಷ್ಟ್ರದಿಂದ ಬಿಹಾರದತ್ತ ಹೊರಟಿದ್ದ ರೈಲು ಮಧ್ಯಾಹ್ನ ಸಾತನಾ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ರೈಲಿನಲ್ಲಿ ಕಾರ್ಮಿಕರು ಆಹಾರಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ರು ಒದ್ದು, ಅವಾಚ್ಯ ಪದ ಬಳಸಿ ನಿಂದಿಸಿಕೊಂಡಿದ್ದಾರೆ. ನಿಲ್ದಾಣದಲ್ಲಿ ಆರ್‍ಪಿಎಪ್ ಸಿಬ್ಬಂದಿ ಹೇಳಿದ್ರೂ ಜಗಳ ಮಾಡಿಕೊಂಡಿದ್ದಾರೆ.

    https://twitter.com/Anurag_Dwary/status/1258019510868561922

    ಕೊರೊನಾ ಆತಂಕದಿಂದ ಪೊಲೀಸರು ರೈಲಿನೊಳಗೆ ಹೋಗಲು ಧೈರ್ಯ ಮಾಡಿಲ್ಲ. ಕಿಟಕಿಯಿಂದಲೇ ಹೇಳಿದ್ರೂ ಕಾರ್ಮಿಕರು ಕ್ಯಾರೆ ಎಂದಿಲ್ಲ. ಹೊಡೆದಾಡಿಕೊಂಡ ಕಾರ್ಮಿಕರು ಕೊನೆಗೆ ತಾವೇ ಸುಸ್ತಾಗಿ ಕೂತಿದ್ದಾರೆ. ಕೆಲ ಸಮಯದ ಬಳಿಕ ರೈಲು ಬಿಹಾರದತ್ತ ಪ್ರಯಾಣ ಬೆಳೆಸಿದ್ದು, ಕಾರ್ಮಿಕರ ಹೊಡೆದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • ಸ್ವ-ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಬಿಹಾರಿಗಳಿಂದ ಗಲಾಟೆ- ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಲ್ಲೇಟು

    ಸ್ವ-ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಬಿಹಾರಿಗಳಿಂದ ಗಲಾಟೆ- ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಲ್ಲೇಟು

    ಬೆಂಗಳೂರು: ಲಾಕ್‍ಡೌನ್ ಕಾರಣದಿಂದ ನಗರದಲ್ಲೇ ಉಳಿದಿರುವ ಬಿಹಾರ ರಾಜ್ಯದ ಜನರನ್ನು ಸ್ವ-ಸ್ಥಳಕ್ಕೆ ತಲುಪಿಸಲು ಸರ್ಕಾರ ಪ್ರಯತ್ನಿಸಿದೆ. ಆದರೆ ತಮ್ಮೂರಿಗೆ ತೆರಳಲು ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಗರಂ ಆಗಿರುವ ಕಾರ್ಮಿಕರು ಪೊಲೀಸ ವಿರುದ್ಧ ಕಲ್ಲುತೂರಾಟ ನಡೆಸಿದ್ದಾರೆ.

    ನಗರದ ವಿವಿಧ ಪ್ರದೇಶಗಳಿಂದ ಇಂದು ಬೆಳಗ್ಗೆ ತಮ್ಮ ಊರಿಗೆ ತೆರಳಲು ಹಲವು ಬಿಹಾರ ರಾಜ್ಯದ ಜನರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಆಗಮಿಸಿದ್ದರು. ಆದರೆ ಬಿಹಾರಕ್ಕೆ ತೆರಳಲು ಸರಿಯಾದ ರೈಲ್ವೆ ವ್ಯವಸ್ಥೆ ಸಿಗದ ಕಾರಣ ಇತ್ತಿಂದ ಅತ್ತ, ಅತ್ತಿಂದ ಇತ್ತ ಅಲೆಯುತ್ತಿದ್ದರು. ಪರಿಣಾಮ ಎಲ್ಲರನ್ನೂ ಬಸ್‍ಗಳಲ್ಲಿ ತುಂಬಿ ಬಿಇಎಸಿ ಮೈದಾನಕ್ಕೆ ಕರೆತಂದು ಬಿಡಲಾಗಿತ್ತು.

    ತಮ್ಮ ಊರಿಗೆ ತೆರಳುವ ಧಾವಂತದಲ್ಲಿದ್ದ ಜನರಿಗೆ ಅದು ಸಾಧ್ಯವಾಗದೆ ಇದ್ದ ಪರಿಣಾಮ ಗಲಾಟೆ ಆರಂಭಿಸಿದ್ದರು. ಅಲ್ಲದೇ ರಸ್ತೆಯಲ್ಲೇ ಮಲಗಿದ್ದರು. ಈ ವೇಳೆಗೆ ಅಸಮಾಧಾನಿತರನ್ನು ಸಮಾಧಾನ ಪಡಿಸಲು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಈ ಹಂತದಲ್ಲಿ ಬಿಹಾರಿಗಳು ಪೊಲೀಸರ ವಿರುದ್ಧ ಗರಂ ಆಗಿದ್ದು, ಪೊಲೀಸರ ವಿರುದ್ಧವೇ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಪೀಣ್ಯ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗೆ ಕಲ್ಲೇಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಇನ್ಸ್ ಪೆಕ್ಟರ್ ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆ ನಡೆಯುತ್ತಿದಂತೆ ಮತ್ತೆ ಬಿಹಾರಿ, ಉತ್ತರ ಪ್ರದೇಶದ ಕಾರ್ಮಿಕರನ್ನು ಮತ್ತೆ ನಗರಕ್ಕೆ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ. ಅರ್ಧದಷ್ಟು ಜನ ನಗರಕ್ಕೆ ಶಿಫ್ಟ್ ಆಗಲು ಒಪ್ಪಿದ್ದಾರೆ. ನಗರದ ಯಾವ ಯಾವ ಏರಿಯಾಗಳಿಂದ ನೆಲಮಂಗಲಕ್ಕೆ ಬಂದಿದ್ದಾರೋ ಮತ್ತೆ ಅವರನ್ನು ಅಲ್ಲಿಗೆ ಬಿಟ್ಟು ಮತ್ತೆರಡು ದಿನ ತಮ್ಮ ತಮ್ಮ ರೂಂಗಳಲ್ಲಿಯೇ ಇರುವಂತೆ ಮನವಿ ಮಾಡಲಾಗಿದೆ. ಸದ್ಯ ಬಿಎಂಟಿಸಿ ಬಸ್‍ಗಳ ಮೂಲಕ ಅವರನ್ನು ನಗರದ ಏರಿಯಾಗಳಿಗೆ ರವಾನೆ ಮಾಡುವ ಸಿದ್ಧತೆ ನಡೆದಿದೆ. ಇತ್ತ ನಗರದಲ್ಲಿ ಉಳಿದುಕೊಳ್ಳಲು ನೆಲೆಯಿಲ್ಲದ ಮತ್ತಷ್ಟು ಮಂದಿ ಮಾತ್ರ ಬಿಇಎಸಿ ಮೈದಾನದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

    ಅಲ್ಲದೇ ಘಟನೆ ಕುರಿತು ಮಾಹಿತಿ ಪಡೆದ ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಆರ್.ಅಶೋಕ್ ಅವರು ಕಾರ್ಮಿಕರಿಗೆ ನಾವು ವ್ಯವಸ್ಥೆ ಮಾಡಿ ಅವರ ಸ್ವ-ಸ್ಥಳಕ್ಕೆ ಕಳುಹಿಸಲು ಸಿದ್ಧರಿದ್ದೇವೆ. ಆದರೆ ಅಲ್ಲಿನ ಮುಖ್ಯಮಂತ್ರಿ ಇವರನ್ನು ಸ್ವೀಕರಿಸಲು ಸಿದ್ಧರಿಲ್ಲ. ಅವರು ಸಮ್ಮತಿ ಸೂಚಿಸಿದ ತಕ್ಷಣ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ. ಸದ್ಯ ಎಲ್ಲರಿಗೂ ಎರಡೆರಡು ಬಾರಿ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರನ್ನೂ ರೈಲಿನ ಮುಖಾಂತರ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ನಮಸ್ತೆ ಟ್ರಂಪ್‍ಗೆ 100 ಕೋಟಿ ಖರ್ಚು ಮಾಡ್ತಾರೆ, ಆದ್ರೆ ಕಾರ್ಮಿಕರಿಗೆ ಟಿಕೆಟ್ ಹಣ ಕೇಳ್ತಾರೆ: ಪ್ರಿಯಾಂಕಾ ಗಾಂಧಿ

    ನಮಸ್ತೆ ಟ್ರಂಪ್‍ಗೆ 100 ಕೋಟಿ ಖರ್ಚು ಮಾಡ್ತಾರೆ, ಆದ್ರೆ ಕಾರ್ಮಿಕರಿಗೆ ಟಿಕೆಟ್ ಹಣ ಕೇಳ್ತಾರೆ: ಪ್ರಿಯಾಂಕಾ ಗಾಂಧಿ

    ನವದೆಹಲಿ: ವಲಸೆ ಕಾರ್ಮಿಕರಿಂದ ರೈಲು ಪ್ರಯಾಣದ ಟಿಕೆಟ್‍ಗೆ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸೋನಿಯಾ ಗಾಂಧಿ ಅವರ ಮಾಧ್ಯಮ ಹೇಳಿಕೆಗೆ ಟ್ಯಾಗ್ ಮಾಡಿ ಸರಣಿ ಟ್ವಿಟ್ ಮಾಡಿರುವ ಪ್ರಿಯಾಂಕಾ, ವಿದೇಶಗಳಿಂದ ನೂರಾರು ಎನ್‌ಆರ್‌ಐಗಳನ್ನು ಉಚಿತವಾಗಿ ಕರೆತರಲಾಗುತ್ತೆ. ಹಾಗೆಯೇ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಖಜಾನೆಯಿಂದ ನೂರು ಕೋಟಿ ಖರ್ಚು ಮಾಡುವ ಸರ್ಕಾರ, ವಲಸೆ ಕಾರ್ಮಿಕರಿಂದ ರೈಲು ಪ್ರಯಾಣದ ಹಣ ವಸೂಲಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

    ಉದ್ಯೋಗವಿಲ್ಲದೇ ಕಾರ್ಮಿಕರು ತತ್ತರಿಸಿದ್ದಾರೆ. ದೇಶ ಕಟ್ಟುವ ಕಾರ್ಮಿಕರಿಂದ ಹಣ ಕೀಳುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದಿದ್ದಾರೆ. ಪಿಎಂ ಕೇರ್ಸ್‍ಗೆ 150 ಕೋಟಿ ದೇಣಿಗೆ ನೀಡಿರುವ ರೈಲ್ವೆ ಇಲಾಖೆ ಕಾರ್ಮಿಕರಿಗೆ ಉಚಿತ ಪ್ರಮಾಣ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಘಟಕಗಳಿಂದ ಹಣ ಪಾವತಿಗೆ ಮುಂದಾಗಿರುವುದನ್ನು ಪ್ರಿಯಾಂಕಾ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಉಚಿತ ಬಸ್ ಸಂಚಾರಕ್ಕಾಗಿ 1 ಕೋಟಿ ದೇಣಿಗೆ ಕೊಟ್ಟ ಕೆಪಿಸಿಸಿ

    ಈ ಹಿಂದೆ ದೇಶದ ವಿವಿಧ ರಾಜ್ಯಗಳಿಂದ ತಮ್ಮ ಊರುಗಳಿಗೆ ಹೋಗುತ್ತಿರುವ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸುವುದು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು.

    ಈ ಬಗ್ಗೆ ಸೋನಿಯಾ ಗಾಂಧಿ ಅವರು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆದೇಶ ಹೊರಡಿಸಿದ್ದು, ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ವಾಪಸ್ ಹೋಗಲು ರೈಲ್ವೆ ಪ್ರಯಾಣದ ವೆಚ್ಚವನ್ನು ಭರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.

    ಈ ಸಮಯದಲ್ಲಿ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದೆ. ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಪ್ರಜೆಗಳನ್ನು ಭಾರತಕ್ಕೆ ಕರೆತರಲು ಸರ್ಕಾರ ಆಸಕ್ತಿ ತೋರುತ್ತದೆ. ಆದರೆ ನಮ್ಮ ದೇಶದಲ್ಲಿರುವ ಬಡ, ನಿರ್ಗತಿಕ ವಲಸೆ ಕಾರ್ಮಿಕರ ಬಗ್ಗೆ ಯಾಕೆ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದರು.

    ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ರೈಲಿನಲ್ಲಿ ಉಚಿತವಾಗಿ ಅವರ ಊರುಗಳಿಗೆ ಕಳುಹಿಸಿ ಎಂದು ಕಾಂಗ್ರೆಸ್ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮತ್ತು ರೈಲ್ವೆ ಸಚಿವಾಲಯಗಳಿಗೆ ಮನವಿ ಮಾಡಿದೆ. ಆದರೂ ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದರು.

  • ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

    ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

    ನವದೆಹಲಿ: ಲಾಕ್‍ಡೌನ್‍ನಿಂದ ನಗರಗಳಿಗೆ ಕೆಲಸ ಅರಸಿ ವಲಸೆ ಬಂದಿದ್ದ ಕಾರ್ಮಿಕರು ತಮ್ಮೂರಿಗೆ ವಾಪಸ್ ಹೋಗಲು ಕಷ್ಟಪಡುತ್ತಿದ್ದಾರೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಿಂದ ತಮ್ಮ ಊರುಗಳಿಗೆ ಹೋಗುತ್ತಿರುವ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸುವುದು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

    ಈ ಬಗ್ಗೆ ಸೋನಿಯಾ ಗಾಂಧಿ ಅವರು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆದೇಶ ಹೊರಡಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ವಾಪಸ್ ಹೋಗಲು ರೈಲ್ವೆ ಪ್ರಯಾಣದ ವೆಚ್ಚವನ್ನು ಭರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಉಚಿತ ಬಸ್ ಸಂಚಾರಕ್ಕಾಗಿ 1 ಕೋಟಿ ದೇಣಿಗೆ ಕೊಟ್ಟ ಕೆಪಿಸಿಸಿ

    ದೇಶದ ಬಡವರು ಕಷ್ಟದಲ್ಲಿರುವಾಗ ಅವರಿಗೆ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಕೊಡುಗೆಯಿದು. ಈ ಸಮಯದಲ್ಲಿ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದೆ. ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಪ್ರಜೆಗಳನ್ನು ಭಾರತಕ್ಕೆ ಕರೆತರಲು ಸರ್ಕಾರ ಆಸಕ್ತಿ ತೋರುತ್ತದೆ. ಆದರೆ ನಮ್ಮ ದೇಶದಲ್ಲಿರುವ ಬಡ, ನಿರ್ಗತಿಕ ವಲಸೆ ಕಾರ್ಮಿಕರ ಬಗ್ಗೆ ಯಾಕೆ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

    ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ರೈಲಿನಲ್ಲಿ ಉಚಿತವಾಗಿ ಅವರ ಊರುಗಳಿಗೆ ಕಳುಹಿಸಿ ಎಂದು ಕಾಂಗ್ರೆಸ್ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮತ್ತು ರೈಲ್ವೆ ಸಚಿವಾಲಯಗಳಿಗೆ ಮನವಿ ಮಾಡಿದೆ. ಆದರೂ ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.