Tag: ವಲಸೆ ಕಾರ್ಮಿಕರು

  • ಉದ್ಯೋಗ ಕೊಡಿಸಿ ಎಂದ ವಲಸೆ ಕಾರ್ಮಿಕರು, ನಿಮ್ಮ ತಂದೆಯನ್ನು ಕೇಳಿ ಎಂದ ಶಾಸಕ

    ಉದ್ಯೋಗ ಕೊಡಿಸಿ ಎಂದ ವಲಸೆ ಕಾರ್ಮಿಕರು, ನಿಮ್ಮ ತಂದೆಯನ್ನು ಕೇಳಿ ಎಂದ ಶಾಸಕ

    – ಉದ್ಯೋಗ ಸೃಷ್ಟಿಸಲು ನಿಮ್ಮಿಂದ ಸಾಧ್ಯವಾಗಿಲ್ಲವೇ ಕಾರ್ಮಿಕರ ಪ್ರಶ್ನೆ
    – ಈ ಪ್ರಶ್ನೆಯನ್ನು ನಿಮ್ಮ ತಂದೆಗೆ ಕೇಳಿ ಎಂದ ಶಾಸಕ

    ಪಾಟ್ನಾ: ಕಾರ್ಮಿಕರೊಬ್ಬರು ಬಿಹಾರದ ಜೆಡಿಯು ಶಾಸಕನನ್ನು ಉದ್ಯೋಗ ಕೊಡಿಸಿ ಎಂದು ಕೇಳಿದ್ದಕ್ಕೆ ನಿಮ್ಮ ತಂದೆಯನ್ನು ಕೇಳು ಎಂದು ಹಗುರವಾಗಿ ಮಾತನಾಡಿದ್ದಾರೆ.

    ಬಿಹಾರದ ಶೈಖ್‍ಪುರ ವಿಧಾನಸಭಾ ಕ್ಷೇತ್ರದ ಶಾಸಕ ರಂಧಿರ್ ಸೋನಿ ಈ ನಿರ್ಲಕ್ಷ್ಯದ ಉತ್ತರ ನೀಡಿದ್ದು, ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲು ಹಾಗೂ ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಕ್ಷೇತ್ರದ ಪ್ರವಾಸದಲ್ಲಿದ್ದ ಶಾಸಕರಿಗೆ ಕಾರ್ಮಿಕರು ಈ ಪ್ರಶ್ನೆ ಕೇಳಿದ್ದಾರೆ. ಉದ್ಯೋಗ ಒದಗಿಸಲು ಸರ್ಕಾರದಿಂದ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಅದೇ ಕೆಲಸವನ್ನು ನಿಮ್ಮ ತಂದೆ ಮಾಡಬಹುದಲ್ಲ ಎಂದು ಉತ್ತರಿಸಿದ್ದಾರೆ. ಅಲ್ಲದೆ ನಿನ್ನನ್ನು ಬೆಳೆಸಿದ ನಿಮ್ಮ ತಂದೆ ನಿಮಗೆ ಉದ್ಯೋಗ ನೀಡಿದ್ದಾರೆಯೇ ಎಂದು ಮರಳಿ ಪ್ರಶ್ನಿಸಿದ್ದಾರೆ.

    ಹಲವು ವರ್ಷಗಳಿಂದ ನೀವು ನಮ್ಮ ಕ್ಷೇತ್ರದ ಶಾಸಕರಾಗಿದ್ದೀರಿ, ಉದ್ಯೋಗ ಸೃಷ್ಟಿಸಲು ನಿಮ್ಮಿಂದ ಯಾಕೆ ಸಾಧ್ಯವಾಗಲಿಲ್ಲ ಎಂದು ಕಾರ್ಮಿಕರು ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಪಕ ಉತ್ತರ ನೀಡುವ ಬದಲು ಶಾಸಕ ಕೆಂಡಾಮಂಡಲರಾಗಿದ್ದಾರೆ. ಅಲ್ಲದೆ ಬಿಹಾರದಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜನ ಪ್ರಶ್ನೆ ಕೇಳುತ್ತಿದ್ದಾರೆ.

    ವಿವಿಧ ರಾಜ್ಯಗಳಿಂದ ಮರಳಿದ ವಲಸೆ ಕಾರ್ಮಿಕರು ತಮ್ಮ ಸ್ವಂತ ರಾಜ್ಯದಲ್ಲಿ ಉಳಿದುಕೊಂಡು ರಾಜ್ಯವನ್ನು ಅಭಿವೃದ್ಧಿಪಡಿಸಬೇಕು. ಹೀಗಾಗಿ ಇಲ್ಲಿಯೇ ಕೆಲಸ ಮಾಡಿ ಎಂದು ಒತ್ತಾಯಿಸಿದ ಬೆನ್ನಲ್ಲೇ ಶಾಸಕರ ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. 15 ವರ್ಷ ಆಡಳಿತ ನಡೆಸಿದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದ್ದು, ಇದೊಂದು ನಾಚಿಕೆಗೇಡಿನ ವಿಷಯ ಎಂದು ಹರಿಹಾಯ್ದಿದೆ. ಚರ್ಚೆಗೆ ಕಾರಣವಾಗುತ್ತಿದ್ದಂತೆ ಜೆಡಿಯು ಈ ಕುರಿತು ಪ್ರತಿಕ್ರಿಯಿಸಿದ್ದು, ಶಾಸಕರು ಅಸಂಬದ್ಧವಾಗಿ ಮಾತನಾಡಿದ್ದಾರೆ. ಪಕ್ಷ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಜೆಡಿಯು ವಕ್ತಾರ ಡಾ.ಅಜಯ್ ಅಲೋಕ್ ಹೇಳಿದ್ದಾರೆ.

  • ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ ನಾನೇ ಚೆಕ್ ಕೊಡ್ತೀನಿ, ಅವ್ರನ್ನ ಕಳಿಸಿಬಿಡಿ: ಡಿಕೆಶಿ

    ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ ನಾನೇ ಚೆಕ್ ಕೊಡ್ತೀನಿ, ಅವ್ರನ್ನ ಕಳಿಸಿಬಿಡಿ: ಡಿಕೆಶಿ

    ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಊರಿಗೆ ತೆರಳಲು ವಲಸೆ ಕಾರ್ಮಿಕರು ಸಾಲುಗಟ್ಟಿ ನಿಂತಿದ್ದನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಚೆಕ್ ಕೊಡ್ತೀನಿ ಅವರನ್ನ ಬಿಟ್ಟು ಬನ್ನಿ. ಸರ್ಕಾರದ ಕೈಯಲ್ಲಿ ಆಗಲ್ಲ ಅಂದ್ರೆ ನಾನೇ ಕಳಿಸಿಕೊಡ್ತೀನಿ. ಅವರಿಗೆ ಅಹಾರದ ಪೊಟ್ಟಣ ಕೊಟ್ಟಿಲ್ಲ. ಸರ್ಕಾರದ ಕೈಯಲ್ಲಿ ಆಗಲ್ಲ ಅಂದ್ರೆ ನಾನು ಮಾಡ್ತೀನಿ ಎಂದು ಸವಾಲೆಸೆದರು.

    ಯಡಿಯೂರಪ್ಪ ಅವರೇ ನೀವೇ ಕಣ್ಣು ತೆರೆದು ನೋಡಿ. ನಾನು ಏನಾದರೂ ಮಾತನಾಡಿದ್ರೆ ನಿಮ್ಮ ಸಚಿವರು ನನ್ನ ವಿರುದ್ಧ ಮಾತನಾಡ್ತಾರೆ. ನೀಮ್ಮ ಕೈಯಲ್ಲಿ ಆಗುತ್ತಾ ಇಲ್ವಾ ಹೇಳಿ. ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ ಸರ್ಕಾರಕ್ಕೆ ನಾನು ಚೆಕ್ ಕೊಡಲು ಸಿದ್ಧನಿದ್ದೇನೆ. ಅವರವರ ಊರುಗಳಿಗೆ ಕಳುಹಿಸಿ ಕೊಡುವ ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಸೇವಾಸಿಂಧುನಲ್ಲಿ ತವರು ರಾಜ್ಯಗಳಿಗೆ ಹೋಗಲು ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಹೀಗಾಗಿ ಒಂದೇ ದಿನ 6 ಸಾವಿರ ಮಂದಿಗೆ ಸಮ್ಮತಿಸಲಾಗಿದೆ. ಅರಮನೆ ಮೈದಾನದ ಬಳಿ ಸುಮಾರು 6 ಸಾವಿರ ಮಂದಿ ಜಮಾಯಿಸಿದ್ದಾರೆ. ಯಾವುದೇ ಸೋಷಿಯಲ್ ಡಿಸ್ಟೆನ್ಸ್ ಇಲ್ಲ, ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾರ್ಮಿಕರು ಜಮಾವಣೆಗೊಂಡಿದ್ದಾರೆ. ಇಂದು ಎರಡು ರೈಲುಗಳು ಒರಿಸ್ಸಾ ಮತ್ತು ಮಣಿಪುರಕ್ಕೆ ಹೊರಡಲಿವೆ.

    ಚಿಕ್ಕಬಾಣವಾರದಿಂದ ಮಧ್ಯಾಹ್ನದ ನಂತರ ಹೊರಡಲಿವೆ. 2,800 ಜನಕ್ಕಷ್ಟೇ ,ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆದರೆ ಮೇಖ್ರಿ ಸರ್ಕಲ್ ನಿಂದ ಕಾವೇರಿ ಥಿಯೇಟರ್ ವರೆಗೂ ಜನಸಾಗರವೇ ನೆರೆದಿದ್ದು, ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ಯಾಲೇಸ್ ಗ್ರೌಂಡ್ ಬಳಿ ಹೊರ ರಾಜ್ಯದ ನಿವಾಸಿಗಳ ದಂಡು ನೆರೆದಿದ್ದು, ಸುಮಾರು ಮೂರು ಕಿಲೋಮೀಟರ್ ನಷ್ಟು ಜನ ಕ್ಯೂ ನಿಂತಿದ್ದಾರೆ.

  • ನಾವು ವಾಪಸ್ ಹೋಗಲ್ಲ, ಭಾರತದಲ್ಲೇ ಇರುತ್ತೇವೆ- ಪಾಕ್ ವಲಸೆ ಕಾರ್ಮಿಕರು

    ನಾವು ವಾಪಸ್ ಹೋಗಲ್ಲ, ಭಾರತದಲ್ಲೇ ಇರುತ್ತೇವೆ- ಪಾಕ್ ವಲಸೆ ಕಾರ್ಮಿಕರು

    – ಮಕ್ಕಳ ಭವಿಷ್ಯಕ್ಕಾಗಿ ನಾವು ಇಲ್ಲೇ ಉಳಿಯುತ್ತೇವೆ

    ಗಾಂಧಿನಗರ: ನಾವು ವಾಪಸ್ ಪಾಕಿಸ್ತಾನಕ್ಕೆ ಹೋಗಲ್ಲ. ಭಾರತದಲ್ಲೇ ಉಳಿದುಕೊಳ್ಳುತ್ತೇವೆ ಎಂದು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಕಾರ್ಮಿಕರು ಹೇಳಿದ್ದಾರೆ.

    ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಜಾಸ್ತಿಯಾಗಿದೆ. ಆದರೂ ಕೊರೊನಾ ವಿರುದ್ಧ ಭಾರತ ದಿಟ್ಟತನದಿಂದ ಹೋರಾಟ ನಡೆಸುತ್ತಿದೆ. ಈ ನಡುವೆ ಲಾಕ್‍ಡೌನ್ ನಲ್ಲಿ ಪಾಕಿಸ್ತಾನದಿಂದ ಅಹಮದಾಬಾದ್‍ಗೆ ಬಂದಿದ್ದ ವಲಸೆ ಕಾರ್ಮಿಕರು ನಾವು ವಾಪಸ್ ಹೋಗಲ್ಲ. ಇಲ್ಲೇ ಉಳಿಯುತ್ತೇವೆ ಎಂದು ಪಟ್ಟು ಹಿಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪಾಕ್ ಕಾರ್ಮಿಕ ಅರ್ಜುನ್, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಬದುಕುವುದು ಬಹಳ ಕಷ್ಟ. ಭಾರತದ ಸರ್ಕಾರ ಮತ್ತು ಇಲ್ಲಿನ ಜನರು ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವುದನ್ನು ನೋಡಿದ್ದೇವೆ. ಜೊತೆಗೆ ನಮ್ಮ ಮುಂದಿನ ಜೀವನಕ್ಕೆ ಹಾಗೂ ನಮ್ಮ ಮಕ್ಕಳ ಭವಿಷ್ಯದ ಒಳಿತಿಗಾಗಿ ನಾವು ಪಾಕಿಸ್ತಾನಕ್ಕೆ ಹೋಗದೆ ಇಲ್ಲಿ ಉಳಿಯುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಲಾಕ್‍ಡೌನ್ ಜಾರಿಯಾಗುವ ಸ್ವಲ್ಪ ದಿನಗಳ ಹಿಂದೆ ಪಾಕಿಸ್ತಾನದಿಂದ ಅಹಮದಾಬಾದ್‍ಗೆ ಕಾರ್ಮಿಕರ ಗುಂಪೊಂದು ವಲಸೆ ಬಂದಿತ್ತು. ನಂತರ ಲಾಕ್‍ಡೌನ್ ಆದ ವೇಳೆ ಅವರನ್ನು ವಾಪಸ್ ಹೋಗಲು ಹೇಳಿದರೂ ಅವರು ಹೋಗುವುದಿಲ್ಲ ಎಂದು ಹೇಳಿದ್ದಾರೆ. ನಾವು ಲಾಕ್‍ಡೌನ್ ಆಗುವ ಸ್ವಲ್ಪ ದಿನದ ಹಿಂದೆ ಇಲ್ಲಿಗೆ ಬಂದಿದ್ದೇವೆ. ಇಲ್ಲಿನ ಜಿಲ್ಲಾಡಳಿತ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದೆ. ಹಾಗಾಗಿ ನಾವು ಇಲ್ಲೇ ಉಳಿಯುತ್ತೇವೆ ಎಂದು ಕಾರ್ಮಿಕ ಮಾಲಾ ಮರ್ಮಾರ್ ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಒಟ್ಟು ಕೊರೊನಾ 49,530 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪಂಜಾಬ್‍ನಲ್ಲಿ 17,382, ಸಿಂಧ್‍ನಲ್ಲಿ 19,924, ಖೈಬರ್-ಪಖ್ತುನ್ಖ್ವಾದಲ್ಲಿ 7,155, ಬಲೂಚಿಸ್ತಾನದಲ್ಲಿ 3,074, ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 602, ಇಸ್ಲಾಮಾಬಾದ್‍ನಲ್ಲಿ 1,235 ಪ್ರಕರಣಗಳು ದಾಖಲಾಗಿವೆ. ಕೊರೊನಾಗೆ ಸುಮಾರು 1,052 ಮಂದಿ ಬಲಿಯಾಗಿದ್ದಾರೆ. ಜೊತೆಗೆ 14,155 ಸೋಂಕಿತರು ಚೇತರಿಸಿಕೊಂಡಿದ್ದಾರೆ.

  • ಮುಂಬೈ ವಲಸಿಗರಿಗೆ ಸ್ವಂತ ಗೆಸ್ಟ್‌ಹೌಸ್‌ನಲ್ಲಿ ಆಶ್ರಯ ಕಲ್ಪಿಸಿದ ಸತೀಶ್ ಜಾರಕಿಹೊಳಿ

    ಮುಂಬೈ ವಲಸಿಗರಿಗೆ ಸ್ವಂತ ಗೆಸ್ಟ್‌ಹೌಸ್‌ನಲ್ಲಿ ಆಶ್ರಯ ಕಲ್ಪಿಸಿದ ಸತೀಶ್ ಜಾರಕಿಹೊಳಿ

    ಬೆಳಗಾವಿ/ಚಿಕ್ಕೋಡಿ: ಮುಂಬೈನಿಂದ ಬಂದ 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಗೆಸ್ಟ್ ಹೌಸ್‍ನಲ್ಲೇ ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

    ಮಹಾಮಾರಿ ಕೊರೊನಾದಿಂದ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಂದಂತಾಗಿದೆ. ಕೊರೊನಾ ಭೀತಿಯಿಂದ ದುಡಿಮೆ ಇಲ್ಲದೇ ತಮ್ಮ ಗ್ರಾಮಗಳಿಗೆ ವಾಪಸ್ ಆಗುತ್ತಿರುವ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ತಮ್ಮ ಗ್ರಾಮಗಳಿಗೆ ಬರುವ ಕಾರ್ಮಿಕರನ್ನು ಯಾವುದೋ ಸರ್ಕಾರಿ ಕಟ್ಟಡದಲ್ಲಿ ಇಟ್ಟು ಕ್ವಾರಂಟೈನ್ ಮಾಡುವ ಬದಲು ಸತೀಶ್ ಜಾರಕಿಹೊಳಿ ಅವರು ವಲಸೆ ಕಾರ್ಮಿಕರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಲದಾಳ ಗ್ರಾಮದಲ್ಲಿರುವ ತಮ್ಮ ಗೆಸ್ಟ್ ಹೌಸ್‍ನಲ್ಲಿ ಕ್ವಾರಂಟೈನ್ ಮಾಡಿಸಿ ಮಾದರಿಯಾಗಿದ್ದಾರೆ.

    ಗೆಸ್ಟ್ ಹೌಸ್‍ನಲ್ಲಿ ಇರುವ ಎಲ್ಲ ಕಾರ್ಮಿಕರು ಮುಂಬೈನಿಂದ ಬಂದವರಾಗಿದ್ದಾರೆ. ದಿನನಿತ್ಯ ಎಲ್ಲ ಕಾರ್ಮಿಕರಿಗೂ ತಮ್ಮ ಸ್ವಂತ ಹಣದಿಂದ 2 ಬಾರಿ ಊಟ, 2 ಬಾರಿ ಉಪಹಾರ ಸೇರಿದಂತೆ ಹಣ್ಣು ಹಂಪಲ ನೀಡುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಕ್ಷೇತ್ರದಲ್ಲಿ ವಿವಿಧ ಕಡೆ ಕ್ವಾರಂಟೈನ್ ಇರುವ 1 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಊಟ ಉಪಹಾರ ತಲುಪಿಸುತ್ತಿದ್ದಾರೆ. ಅಲ್ಲದೇ ಎಲ್ಲ ಕಾರ್ಮಿಕರಿಗೆ ಕಾಲ ಕಳೆಯಲು ಆಟಿಕೆ ಸಾಮಾನುಗಳನ್ನು ವಿತರಿಸಿದ್ದಾರೆ.

    ದೇಶದಲ್ಲಿ ಕೊರೊನಾ ಕೇಂದ್ರವೆಂದೇ ಬಿಂಬಿತವಾಗಿರುವ ಮುಂಬೈನಿಂದ ತಮ್ಮ ಊರುಗಳಿಗೆ ಆಗಮಿಸಿದ ಯಮಕನಮರಡಿ ಕ್ಷೇತ್ರದ ವಲಸೆ ಕಾರ್ಮಿಕರನ್ನು ಕೊರೊನಾ ಭಯದಿಂದ ಗ್ರಾಮಸ್ಥರು ಊರಿನೊಳಗೆ ಸೇರಿಸಿಕೊಳ್ಳಲಿಲ್ಲ. ಕ್ವಾರಂಟೈನ್‍ನಲ್ಲಿ ವ್ಯವಸ್ಥೆಯೂ ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತನ್ನ ಕ್ಷೇತ್ರದವರು ಎಂದು ಅರಿತ ಸತೀಶ್ ಜಾರಕಿಹೊಳಿ ಹೆಚ್ಚು ಯೋಚನೆ ಮಾಡದೆ, ಸುಮಾರು 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ತಮ್ಮ ಸಹಾಯಕ್ಕೆ ನಿಂತಿರುವ ಸತೀಶ್ ಜಾರಕಿಹೊಳಿ ಸೇವೆಗೆ ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆಯೂ ಸತೀಶ್ ಜಾರಕಿಹೊಳಿ ಕೊರೊನಾ ದಾಳಿಗೆ ಸಿಲುಕಿದ ರೈತರ, ಬಡವರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದ್ದರು. ರೈತರು ಬೆಳೆದ ತರಕಾರಿ ಮಾರಾಟಕ್ಕೆ ಸಾಧ್ಯವಾಗದೆ ಹೊಲದಲ್ಲಿಯೇ ಕೊಳೆತು ಹೋಗುವ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಸ್ವತಃ ಹೊಲಗದ್ದೆಗಳಿಗೆ ಇಳಿದು, ರೈತರ ತರಕಾರಿಗಳನ್ನು ಖರೀದಿಸಿ, ಬಡವರಿಗೆ, ಅಸಹಾಯಕರಿಗೆ ಉಚಿತವಾಗಿ ಹಂಚುವುದರ ಮೂಲಕ ಸಹಾಯ ಮಾಡಿದ್ದರು. ಈಗ ಮತ್ತೆ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

  • ಚಿಕ್ಕಬಳ್ಳಾಪುರಕ್ಕೆ ಮಹಾರಾಷ್ಟ್ರದಿಂದ 250 ಜನರ ಆಗಮನ

    ಚಿಕ್ಕಬಳ್ಳಾಪುರಕ್ಕೆ ಮಹಾರಾಷ್ಟ್ರದಿಂದ 250 ಜನರ ಆಗಮನ

    ಬೆಂಗಳೂರು: ಚಿಕ್ಕಬಳ್ಳಾಪುರಕ್ಕೆ ಮಹಾರಾಷ್ಟ್ರದಿಂದ 250 ಜನ ಆಗಮಿಸುತ್ತಿದ್ದು, ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

    ಈ ಕುರಿತು ಸಚಿವ ಸುಧಾಕರ್ ಸಹ ಆತಂಕ ವ್ಯಕ್ತಪಡಿಸಿ ರಾತ್ರಿ ಟ್ವೀಟ್ ಮಾಡಿದ್ದರು. ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರದಿಂದ ಸುಮಾರು 250 ಜನರನ್ನು 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿರುವುದು ದುರದೃಷ್ಟಕರ ಹಾಗು ದುಡುಕಿನ ನಿರ್ಧಾರ. ಹೊರರಾಜ್ಯದ ಪ್ರಯಾಣಿಕರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದೆಂಬ ಆತಂಕ ಹಾಗೂ ದುಗುಡದಿಂದ ನಿದ್ದೆ ಬರುತ್ತಿಲ್ಲ. ಎಲ್ಲಾ ಜಿಲ್ಲಾಡಳಿತಗಳು ಎಚ್ಚರವಹಿಸಬೇಕು.

    ಇಂದು ಬೆಳಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ಸಚಿವರು, ನಾನು ಈಗಾಗಲೇ ಮಖ್ಯ ಕಾರ್ಯದರ್ಶಿಯವರ ಜೊತೆ ಮಾತಾಡಿದ್ದೀನಿ. ಎರಡು ದಿನಗಳಿಂದ ನಮ್ಮ ಗಡಿಗೆ ಬಂದು ಕಾಯುತ್ತಿದ್ದರು. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬಿಡಬೇಕಾಯಿತು ಎಂದು ಸಮಜಾಯಷಿ ಕೊಟ್ಟರು. ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡುತ್ತೇವೆ ಹಾಗೂ ಎಲ್ಲರಿಗೂ ಪರೀಕ್ಷೆಯನ್ನು ಮಾಡುತ್ತೇವೆ. ಆಯಾ ಜಿಲ್ಲೆಯ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಬರೆದುಕೊಂಡಿದ್ದಾರೆ.

  • ಬೆಳಗ್ಗೆಯ ಬಸ್ಸಿಗೆ ರಾತ್ರಿಯೆಲ್ಲಾ ಕಾದ್ರು- ಕೊರೊನಾಗೆ ನಲುಗಿ ಊರಿನತ್ತ ಹೊರಟ ಜನ

    ಬೆಳಗ್ಗೆಯ ಬಸ್ಸಿಗೆ ರಾತ್ರಿಯೆಲ್ಲಾ ಕಾದ್ರು- ಕೊರೊನಾಗೆ ನಲುಗಿ ಊರಿನತ್ತ ಹೊರಟ ಜನ

    ಬೆಂಗಳೂರು: ಬೆಳಗ್ಗೆಯ ಬಸ್‍ಗೆ ಜನರು ರಾತ್ರಿ ಮಕ್ಕಳ ಜೊತೆ ಬಸ್ ನಿಲ್ದಾಣದಲ್ಲಿ ಕಳೆದಿದ್ದಾರೆ.

    ಸಂಜೆ ಆರು ಗಂಟೆಗೆ ಬಂದ ಬಹುತೇಕ ಜನಕ್ಕೆ ಬಸ್ ಸಿಕ್ಕಿರಲಿಲ್ಲ. ಇನ್ನು ವಾಪಸ್ ಮನೆಗೆ ಹೋಗಲು ಯಾವುದೇ ವಾಹನದ ವ್ಯವಸ್ಥೆ ಇಲ್ಲ. ಹಾಗಾಗಿ ಜನ ಬಸ್ ನಿಲ್ದಾಣದಲ್ಲಿಯೇ ರಾತ್ರಿ ಕಳೆದಿದ್ದಾರೆ. ಒಂದು ಬಸ್ ಗೆ ಕೇವಲ 30 ಜನರಿಗೆ ಮಾತ್ರ ಅವಕಾಶ ನೀಡಲಾಗ್ತಿದೆ. ಹಾಗಾಗಿ ಬಸ್ ಸಿಗದಿದ್ದರೆ ಹೇಗೆ ಅಂತ ಬಹುತೇಕರು ಪ್ರಯಾಣಿಕರು ನಿಲ್ದಾಣದಲ್ಲಿಯೇ ಇರುವಂತಾಯ್ತು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹಿಳೆ, ನಾವು ಶಿರಗುಪ್ಪಕ್ಕೆ ಹೋಗಬೇಕು. ರಾತ್ರಿ ಬಸ್ ಇರುತ್ತೆ ಅಂತ ಸಂಜೆ ಆರು ಗಂಟೆಗೆ ಮೆಜೆಸ್ಟಿಕ್ ಗೆ ಬಂದರೆ ಯಾವುದೇ ಬಸ್ ಸಿಗಲಿಲ್ಲ. ಮತ್ತೆ ಮನೆಗೆ ಹೋಗಲು ಆಗಲ್ಲ. ಅನಿವಾರ್ಯವಾಗಿ ಬಸ್ ನಿಲ್ದಾಣದಲ್ಲಿ ಇದ್ದೇವೆ ಅಂತಾ ಹೇಳಿದರು.

  • ವಲಸೆ ಕಾರ್ಮಿಕರ ಸ್ಥಳಾಂತರ – ಮುಂದುವರಿದ ‘ಕೈ-ಕಮಲ’ ತಿಕ್ಕಾಟ

    ವಲಸೆ ಕಾರ್ಮಿಕರ ಸ್ಥಳಾಂತರ – ಮುಂದುವರಿದ ‘ಕೈ-ಕಮಲ’ ತಿಕ್ಕಾಟ

    – ಸಾವಿರ ಬಸ್ಸುಗಳಿಗೆ ಅವಕಾಶ ನೀಡದ ಯುಪಿ ಸರ್ಕಾರ
    – ಕಾಂಗ್ರೆಸ್‍ನಿಂದ 4 ಕೋಟಿ 80 ಲಕ್ಷ ಖರ್ಚು

    ನವದೆಹಲಿ: ವಲಸೆ ಕಾರ್ಮಿಕರ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ತಿಕ್ಕಾಟ ಮುಂದುವರಿದಿದೆ. ವಲಸೆ ಕಾರ್ಮಿಕರ ಕರೆತರಲು ಕಾಂಗ್ರೆಸ್ ನಿಯೋಜಿಸಿರುವ 1,000 ಬಸ್ಸುಗಳಿಗೆ ಉತ್ತರ ಪ್ರದೇಶ ಸರ್ಕಾರ ಪರವಾನಿಗೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

    ಗಡಿ ಭಾಗದಲ್ಲಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಯುಪಿ ಸರ್ಕಾರ ಕೂಡಾ ಒಪ್ಪಿಗೆ ಸೂಚಿಸಿತ್ತು, ಆದರೆ ಇಂದು ಗಡಿ ಭಾಗದಲ್ಲಿ ಮಾತ್ರ ಉತ್ತರಪ್ರದೇಶ ಪೋಲಿಸರು ಬಸ್ಸುಗಳಿಗೆ ದಾಖಲೆಗಳಿಲ್ಲದ ಕಾರಣ ಗಡಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ.

    ಬಸ್ಸುಗಳಿಗೆ ಅನುಮತಿ ನೀಡಿ ಎಂದು ಗಡಿಭಾಗದಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ಎಳೆದೊಯ್ದು ಘಟನೆಯೂ ನಡೆಯಿತು. ಈ ಬಗ್ಗೆಯೂ ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಖಂಡಿಸಿದ್ದಾರೆ. ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ.

    ಉತ್ತರಪ್ರದೇಶ ಸರ್ಕಾರದ ಧೋರಣೆಗೆ ಎಐಸಿಸಿ ಕಾರ್ಯದರ್ಶಿ ರೋಹಿತ್ ಚೌದ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬಸ್‍ವೊಂದಕ್ಕೆ 16 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಗಡಿ ದಾಟಲಾಗದೇ 1,000 ಬಸ್ಸುಗಳು ನಿಂತಲ್ಲೇ ನಿಂತಿದ್ದು, ಕಾಂಗ್ರೆಸ್ ಈವರೆಗೂ 4 ಕೋಟಿ 80 ಲಕ್ಷ ಹಣ ಖರ್ಚು ಮಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

    ಕಾಂಗ್ರೆಸ್ ಜನರಿಗೆ ಆಹಾರ ಮತ್ತು ಬಸ್ಸುಗಳ ವ್ಯವಸ್ಥೆ ಮಾಡುತ್ತಿದೆ. ಇದನ್ನು ಎಲ್ಲಾ ಸರ್ಕಾರಗಳು ಸ್ವಾಗತಿಸಬೇಕು ಮತ್ತು ಗಡಿಯಲ್ಲಿ ಅನುಮತಿಸಬೇಕು, ಅದನ್ನು ಬಿಟ್ಟು ನಾಯಕರನ್ನು ಬಂಧಿಸುವ ಕೀಳು ಮಟ್ಟದ ರಾಜಕೀಯ ಮಾಡಬಾರದು ಎಂದು ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಯುಪಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

  • ಲಾರಿಯಲ್ಲಿ 74 ವಲಸೆ ಕಾರ್ಮಿಕರ ಸಾಗಾಟ

    ಲಾರಿಯಲ್ಲಿ 74 ವಲಸೆ ಕಾರ್ಮಿಕರ ಸಾಗಾಟ

    ಧಾರವಾಡ: ಅಕ್ರಮವಾಗಿ 74 ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಧಾರವಾಡದ ಗರಗ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಕೇರಳದ ಕಾಸರಗೋಡಿನಿಂದ 27 ಮತ್ತು ಮಂಗಳೂರಿನಿಂದ 47 ಕಾರ್ಮಿಕರನ್ನು ಹೊತ್ತ ಲಾರಿಗಳು ರಾಜಸ್ಥಾನಕ್ಕೆ ಹೊರಟಿದ್ದವು. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರ್.ಜೆ. 14 ಜಿಜೆ-2909 ಹಾಗೂ ಎಚ್‍ಆರ್- 46 ಸಿಎಸ್- 703 ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಎಲ್ಲ ವಲಸೆ ಕಾರ್ಮಿಕರಿಗೆ ಧಾರವಾಡ ಪಟ್ಟಣಶೆಟ್ಟಿ ಕಲ್ಯಾಣಮಂಟಪದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

    ಲಾರಿಯ ಚಾಲಕರಿಬ್ಬರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಎಲ್ಲ ಕಾರ್ಮಿಕರಿಗೆ ರಾಜಸ್ಥಾನಕ್ಕೆ ಹೋಗಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.

  • ತಲಾ 4 ಸಾವಿರ ಕೊಟ್ಟು ಲಾರಿಯಲ್ಲಿ ಊರಿಗೆ ಹೋಗ್ತಿರೋ ಕಾರ್ಮಿಕರು

    ತಲಾ 4 ಸಾವಿರ ಕೊಟ್ಟು ಲಾರಿಯಲ್ಲಿ ಊರಿಗೆ ಹೋಗ್ತಿರೋ ಕಾರ್ಮಿಕರು

    – 130 ಮಂದಿಯನ್ನು ತಡೆಹಿಡಿದ ಪೊಲೀಸರು

    ಹುಬ್ಬಳ್ಳಿ: ಬೆಂಗಳೂರಿನಿಂದ ಅನಧಿಕೃತವಾಗಿ ಖಾಸಗಿ ಕಂಟೇನರ್ ಲಾರಿ ಮೂಲಕ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ ಸುಮಾರು 130 ಪ್ರವಾಸಿ ಕಾರ್ಮಿಕರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆ ಬೆಂಡಿಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ.

    ಬೆಂಡಿಗೇರಿ ಇನ್‍ಸ್ಪೆಕ್ಟರ್ ಅರುಣ್ ಕುಮಾರ್ ನೇತೃತ್ವದಲ್ಲಿ ಗಬ್ಬೂರ್ ಬೈ ಪಾಸ್ ಎರಡು ಕಂಟೇನರ್ ಲಾರಿ ಮೂಲಕ ಆಗಮಿಸಿದ ವಲಸೆ ಕಾರ್ಮಿಕರನ್ನು ತಡೆದು ದಾಖಲೆ ಪರಿಶೀಲನೆ ನಡೆಸಲಾಗಿದೆ. ಎರಡು ಲಾರಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 130 ವಲಸೆ ಕಾರ್ಮಿಕರು ಹುಬ್ಬಳ್ಳಿಗೆ ಆಗಮಿಸಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸುವವರೆಗೆ ಕೂಡ ಯಾವುದೇ ಚೆಕ್‍ಪೋಸ್ಟ್ ನಲ್ಲಿ ತಪಾಸಣೆ ನಡೆಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

    ಯಾವುದೇ ಪಾಸ್ ಹಾಗೂ ಅನುಮತಿಯಿಲ್ಲದೇ ವಲಸೆ ಕಾರ್ಮಿಕರು ಖಾಸಗಿ ಕಂಟೇನರ್ ಲಾರಿಯನ್ನು ತಲಾ 4,000 ರೂಪಾಯಿ ನೀಡಿ ಬಾಡಿಗೆ ಮಾಡಿಕೊಂಡು ಉತ್ತರ ಪ್ರದೇಶಕ್ಕೆ ಹೊರಟಿದ್ದಾರೆ. ಈ ಮಾಹಿತಿ ಕಲೆಹಾಕಿದ ಪೊಲೀಸರು ಗಬ್ಬೂರ ಬಳಿ ತಡೆದು ತಪಾಸಣೆ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಡಳಿತ ಶ್ರಮಿಕ್ ಎಕ್ಸ್ ಪ್ರೆಸ್ ಮೂಲಕ ಉತ್ತರ ಪ್ರದೇಶಕ್ಕೆ ವಲಸೆ ಕಾರ್ಮಿಕರನ್ನು ಕಳಿಸಿಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.

  • ವಲಸೆ ಕಾರ್ಮಿಕರ ಬದುಕು ಬೀದಿಗೆ – ನೆಲೆಯಿಲ್ಲದೆ ಸುಡುವ ಬಿಸಿಲಿನಲ್ಲಿ ನಲುಗಿಹೋದ ಬಾಣಂತಿ, ಮಕ್ಕಳು

    ವಲಸೆ ಕಾರ್ಮಿಕರ ಬದುಕು ಬೀದಿಗೆ – ನೆಲೆಯಿಲ್ಲದೆ ಸುಡುವ ಬಿಸಿಲಿನಲ್ಲಿ ನಲುಗಿಹೋದ ಬಾಣಂತಿ, ಮಕ್ಕಳು

    ಯಾದಗಿರಿ: ಹೊರರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರ ಸ್ಥಿತಿ ಹೇಳತೀರದ್ದಾಗಿದೆ. ನೆಲೆಯಿಲ್ಲದೆ ಸುಡು ಬಿಸಿಲಿನಲ್ಲಿ ಬಾಣಂತಿ, ಮಕ್ಕಳು ಮತ್ತು ವೃದ್ಧರು ಸಾಯುತ್ತಿದ್ದಾರೆ. ತಿನ್ನಲು ಊಟವಿಲ್ಲದೆ ಕಳೆದ ನಾಲ್ಕು ದಿನದಿಂದ ಮಕ್ಕಳು ಬಿಸ್ಕತ್ತು ತಿಂದುಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ಮನಕಲಕುವಂತಿದೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮಹಾರಾಷ್ಟ್ರದಿಂದ ಯಾದಗಿರಿಗೆ ಮತ್ತೆ ವಾಪಸ್ ಬಂದ ವಲಸೆ ಕೂಲಿ ಕಾರ್ಮಿಕರನ್ನು ಕೇಳುವವರೆ ಇಲ್ಲವಾಗಿದೆ. ವಲಸೆ ಕೂಲಿ ಕಾರ್ಮಿಕರು ಪಡುತ್ತಿರುವ ಕಷ್ಟ ನೋಡಿದರೆ ನರಕದಲ್ಲೂ ಈ ರೀತಿಯ ಶಿಕ್ಷೆ ಇರಲ್ಲಾ ಅನ್ನಸುತ್ತೆ. ಕೂಲಿ ಕಾರ್ಮಿಕರು ಅನುಭವಿಸುತ್ತಿರುವ ಯಾತನೆಯ ಒಂದೊಂದು ದೃಶ್ಯಗಳು ಕರಳು ಹಿಂಡುತ್ತೆ.

    ಹೊರ ರಾಜ್ಯಗಳಿಂದ ಬಂದ ವಲಸೆ ಕೂಲಿ ಕಾರ್ಮಿರನ್ನು ಕ್ವಾರೆಂಟೈನ್ ಮಾಡದೆ ಇರುವ ಕಾರಣ ಸುಡು ಬಿಸಿನಲ್ಲಿಯೇ ಛತ್ರಿಯ ಕೆಳಗೆ, ಮರದ ಕೆಳಗೆ ಮತ್ತು ದೇವಸ್ಥಾನದಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ. ಸುರಪುರ ತಾಲೂಕಿನ ಏವೂರ ತಾಂಡದ ಹೊರ ವಲಯದಲ್ಲಿ ಕಳೆದ ನಾಲ್ಕೈದು ದಿನದಿಂದ ಇಂತಹ ಮನಕಲಕುವ ದೃಶ್ಯಗಳು ಕಂಡು ಬರುತ್ತಿವೆ. ಇದನ್ನು ನೋಡಿದರೆ ಸುರಪುರ ತಹಶೀಲ್ದಾರ್ ಅವರಿಗೆ ಮಾನವೀಯತೆಯೆ ಮರೆತು ಹೋಗಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.

    ಮಹಾರಾಷ್ಟದಿಂದ ಬಂದ ಕೂಲಿ ಕಾರ್ಮಿಕರಿಗೆ ಕ್ವಾರೆಂಟನ್ ಮಾಡಲು ಸುರಪುರ ತಹಶೀಲ್ದಾರ್ ನಿಂಗಣ್ಣ ಅವರು ಉದ್ಧಟತನ ತೋರುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಕಳೆದ ನಾಲ್ಕೈದು ದಿನದಿಂದ ಕಾರ್ಮಿಕರು ಜಮೀನಲ್ಲಿ ಛತ್ರಿಯ ಕೇಳಗೆ ಜೀವ ಸಾಗಿಸುವಂತಾಗಿದೆ. ಅತ್ತ ಊರ ಒಳಗೆ ಹೋಗಲು ಆಗದೇ, ಇತ್ತ ತಹಶೀಲ್ದಾರ್ ಅವರ ನಿರ್ಲಕ್ಷ್ಯದಿಂದ ಕ್ವಾರೆಂಟನ್ ಆಗದೇ ಕಾರ್ಮಿಕರ ಸಂಕಷ್ಟಕ್ಕೆ ಸಿಲುಕಿದ್ದಾರೆ.