Tag: ವಲಸೆ ಕಾರ್ಮಿಕರು

  • ಮಹಾನಗರಗಳತ್ತ ಮತ್ತೆ ಮುಖ ಮಾಡಿದ ರಾಯಚೂರು ಕೂಲಿ ಕಾರ್ಮಿಕರು

    ಮಹಾನಗರಗಳತ್ತ ಮತ್ತೆ ಮುಖ ಮಾಡಿದ ರಾಯಚೂರು ಕೂಲಿ ಕಾರ್ಮಿಕರು

    ರಾಯಚೂರು: ಕಠಿಣ ಲಾಕ್‍ಡೌನ್ ಸಮಯದಲ್ಲಿ ಗುಳೆ ಹೋದ ಜನ ಮಹಾನಗರಗಳಿಂದ ತಮ್ಮ ಊರುಗಳಿಗೆ ಬರಲು ಇನ್ನಿಲ್ಲದಂತೆ ಪರದಾಡಿದರು. ಆದ್ರೆ ಕೊರೊನಾ ಅಟ್ಟಹಾಸ ಇನ್ನೂ ಕಡಿಮೆಯೇ ಆಗಿಲ್ಲ ಆಗಲೇ ರಾಯಚೂರಿನಿಂದ ಕೂಲಿಕಾರರು ಮತ್ತೆ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಜಿಲ್ಲೆಯಿಂದ ಪ್ರತಿನಿಂದ 10ಕ್ಕೂ ಹೆಚ್ಚು ಬಸ್ ಗಳಲ್ಲಿ 300ಕ್ಕೂ ಹೆಚ್ಚು ಜನ ಗುಳೆ ಹೋಗುತ್ತಿದ್ದಾರೆ.

    ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಳು ಆರಂಭವಾಗಿದ್ದು, ಪುನಃ ಕೆಲಸಕ್ಕೆ ಬರಲು ಗುತ್ತಿಗೆದಾರರು, ಮೇಸ್ತ್ರಿಗಳು ಕರೆಯುತ್ತಿದ್ದಾರೆ. ಸರ್ಕಾರದ ಉದ್ಯೋಗ ಖಾತ್ರಿಯಲ್ಲಿ ಭರವಸೆ ಕಳೆದುಕೊಂಡ ಜನ ಪುನಃ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ರಾಯಚೂರಿನ ದೇವದುರ್ಗ, ಲಿಂಗಸುಗೂರು ,ಮಾನ್ವಿ ರಾಯಚೂರು ತಾಲೂಕುಗಳಿಂದ ಸಾವಿರಾರು ಜನ ಬೆಂಗಳೂರಿಗೆ ವಾಪಸ್ ಹೋಗಿದ್ದಾರೆ.

    ಬೆಂಗಳೂರಿನಲ್ಲಿ ಪ್ರತಿದಿನ 600 ರೂಪಾಯಿಂದ 800 ರೂಪಾಯಿವರೆಗೆ ಕೂಲಿ ಸಿಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಉಳಿಯಲು ಜನ ಬಯಸುತ್ತಿಲ್ಲ. ಜಿಲ್ಲೆಯಲ್ಲಿ 400 ರೂಪಾಯಿವರೆಗೆ ಕೂಲಿ ಸಿಗುತ್ತದೆ. ಉದ್ಯೋಗ ಖಾತ್ರಿಯಲ್ಲಿ 250 ರೂ .ಸಿಗುತ್ತೆ ,ಅದೂ ಕೆಲಸ ಮಾಡಿ ಹದಿನೈದು ದಿನಗಳಾದ ಮೇಲೆ. ಹೀಗಾಗಿ ಜನ ಇಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಅಲ್ಲೂ ಸೋಂಕಿತರಿದ್ದಾರೆ. ಎಲ್ಲಿದ್ದರೂ ಒಂದೇ ಅಂತ ದುಡಿಯಲು ಗಂಟು ಮೂಟೆ ಸಹಿತ ಬೆಂಗಳೂರಿಗೆ ನಿತ್ಯ ನೂರಾರು ಜನ ಪ್ರಯಾಣ ಬೆಳೆಸಿದ್ದಾರೆ.

  • ವಲಸೆ ಕಾರ್ಮಿಕರನ್ನ ವಾಹನದಲ್ಲಿ ಹತ್ತಿಸಿಕೊಂಡು ಲೈಂಗಿಕ ಕಿರುಕುಳ

    ವಲಸೆ ಕಾರ್ಮಿಕರನ್ನ ವಾಹನದಲ್ಲಿ ಹತ್ತಿಸಿಕೊಂಡು ಲೈಂಗಿಕ ಕಿರುಕುಳ

    -ಸಾರ್ವಜನಿಕರಿಂದ ಚಾಲಕನಿಗೆ ಧರ್ಮದೇಟು

    ಕೋಲಾರ: ವಾಹನದ ಸೌಲಭ್ಯವಿಲ್ಲದೇ ನಡೆದುಕೊಂಡು ಬರುತ್ತಿದ್ದ ಮಹಿಳಾ ವಲಸೆ ಕಾರ್ಮಿಕರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಆಂಧ್ರ ಪ್ರದೇಶ ಮೂಲದ ಕಾರ್ಮಿಕ ಕುಟುಂಬ ಬೆಂಗಳೂರಿನಿಂದ ನಡೆದುಕೊಂಡು ತಮ್ಮ ಊರಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಶ್ರೀನಿವಾಸಪುರ ತಾಲೂಕಿನ ಚಾಲಕ ಗೌಸ್ ಕುಟುಂಬದವರಿಗೆ ಆಂಧ್ರದ ಗಡಿಯವರೆಗೂ ಡ್ರಾಪ್ ಕೊಡೋದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ. ತನ್ನ ಟಾಟಾ ಏಸ್ ಗಾಡಿಯಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದಾನೆ. ಮಹಿಳೆಯ ಪತಿಯನ್ನು ಪ್ಲಾನ್ ಮಾಡಿ ಹಿಂದೆ ಕೂರಿಸಿದ್ದಾನೆ.

    ಪಕ್ಕದಲ್ಲಿ ಕುಳಿತಿದ್ದ ತಾಯಿ-ಮಗಳಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ವಾಹನ ನಿಲ್ಲಿಸುವಂತೆ ಹೇಳಿ ಧರ್ಮದೇಟು ನೀಡಿದ್ದಾಳೆ. ಗಲಾಟೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಾರ್ವಜನಿಕರು ಸಹ ವಿಷಯ ತಿಳಿದು ಚಾಲಕನಿಗೆ ಥಳಿಸಿದ್ದಾರೆ.

  • ಟ್ರಕ್‍ಗೆ ವಲಸೆ ಕಾರ್ಮಿಕರಿದ್ದ ವಾಹನ ಡಿಕ್ಕಿ- 12 ಮಂದಿ ಸಾವು

    ಟ್ರಕ್‍ಗೆ ವಲಸೆ ಕಾರ್ಮಿಕರಿದ್ದ ವಾಹನ ಡಿಕ್ಕಿ- 12 ಮಂದಿ ಸಾವು

    – ವಾಹನ ಪೀಸ್ ಪೀಸ್, 21 ಜನರಿಗೆ ಗಂಭೀರ ಗಾಯ

    ಕಾಠ್ಮಂಡು: ವಲಸೆ ಕಾರ್ಮಿಕರಿದ್ದ ವಾಹನವು ರಸ್ತೆಬದಿ ನಿಂತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವನ್ನಪ್ಪಿದ ಘಟನೆ ನೇಪಾಳದ ಪೂರ್ವ-ಪಶ್ಚಿಮ ಹೆದ್ದಾರಿಯ ಬಂಕೆ ಜಿಲ್ಲೆಯಲ್ಲಿ ನಡೆದಿದೆ.

    ಬಂಕೆ ಜಿಲ್ಲೆಯ ತುರಿಯಾ ಅರಣ್ಯ ಪ್ರದೇಶದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 21 ಮಂದಿ ಗಾಯಗೊಂಡಿದ್ದಾರೆ. ನೇಪಾಳಿ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಿಂದ ನೇಪಾಳದ ಸಲ್ಯಾನ್ ಜಿಲ್ಲೆಗೆ ಹೋಗುವ ಮಾರ್ಗದಲ್ಲಿ ಕರೆದೊಯ್ಯುತ್ತಿದ್ದ ವಾಹನಕ್ಕೆ ಟ್ರಕ್‍ಗೆ ಡಿಕ್ಕಿ ಹೊಡೆದಿದೆ.

    “ವಲಸೆ ಕಾರ್ಮಿಕರು ಭಾರತದಿಂದ ನೇಪಾಳಕ್ಕೆ ಹಿಂತಿರುಗುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅಪಘಾತ ಸಂಭವಿಸಿದೆ. ಎಲ್ಲಾ ಮೃತದೇಹ ಮತ್ತು ಗಾಯಾಳುಗಳನ್ನು ನೇಪಾಳಗುಂಜ್ ನಗರದ ಭೇರಿ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಬಂಕೆ ಜಿಲ್ಲಾಧಿಕಾರಿ ರಂಬಹಾದೂರ್ ಕುರುಂಗ್ವಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ವಲಸೆ ಕಾರ್ಮಿಕರಿದ್ದ ವಾಹನವು ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಚಾಲಕ ನಿಯಂತ್ರಣ ತಪ್ಪಿದ ವಾಹನ ರಸ್ತೆಬದಿ ನಿಂತಿದ್ದ ಟ್ರಕ್‍ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಬಂಕೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹೃದಯೇಶ್ ಸಪ್ಕೋಟಾ ಮಾಹಿತಿ ನೀಡಿದ್ದಾರೆ.

    ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.

  • ಆಂಧ್ರದಿಂದ ವಲಸೆ- ಕ್ವಾರಂಟೈನ್ ಮಾಡಲು ಬಂದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನ

    ಆಂಧ್ರದಿಂದ ವಲಸೆ- ಕ್ವಾರಂಟೈನ್ ಮಾಡಲು ಬಂದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನ

    ಬಳ್ಳಾರಿ: ಕ್ವಾರಂಟೈನ್ ಮಾಡಲು ಬಂದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಿಡಿಗೇಡಿಗಳು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆಂಧ್ರ ಗಡಿ ಭಾಗದಿಂದ ವಲಸೆ ಬಂದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಆಶಾ ಕಾರ್ಯಕರ್ತೆಯರು ಮುಂದಾದಗ ಹಲ್ಲೆಗೆ ಯತ್ನಿಸಿದ್ದಾರೆ. ಉದ್ದೇಶ ಪೂರಕವಾಗಿ ಕ್ವಾರಂಟೈನ್ ಮಾಡುತಿದ್ದಾರೆ ಎಂದು ಆರೋಪಿಸಿ ಕೊರೊನಾ ವಾರಿಯರಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

    ಆಂಧ್ರ ಪ್ರದೇಶದ ಗುಂಟೂರು ಹಾಗೂ ಪ್ರಕಾಶಂ ಜಿಲ್ಲೆಯಿಂದ ಕಾರ್ಮಿಕರು ವಲಸೆ ಬಂದಿದ್ದರು. ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರ ಮಾಹಿತಿ ಪಡೆದು, ಕ್ವಾರಂಟೈನ್ ಮಾಡಲು ಕೊರೊನಾ ವಾರಿಯರ್ಸ್ ಮುಂದಾಗಿದ್ದಾರೆ. ಇಷ್ಟಕ್ಕೆ ನಾಡಂಗ ಗ್ರಾಮದ ಕಲೆ ಜನರು ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

  • ಜಾನುವಾರುಗಳಂತೆ ಲಾರಿಯಲ್ಲಿ ಕಾರ್ಮಿಕರ ಸಾಗಾಟ

    ಜಾನುವಾರುಗಳಂತೆ ಲಾರಿಯಲ್ಲಿ ಕಾರ್ಮಿಕರ ಸಾಗಾಟ

    ಧಾರವಾಡ/ಹುಬ್ಬಳ್ಳಿ: ಚಿತ್ರದುರ್ಗ ಜಿಲ್ಲೆಯಿಂದ ಲಾರಿಗಳ ಮೂಲಕ ಮಹಾರಾಷ್ಟ್ರಕ್ಕೆ ಹೊರಟಿದ್ದ ಕಾರ್ಮಿಕರನ್ನು ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಹಾಗೂ ಗ್ರಾಮೀಣ ತಹಶೀಲ್ದಾರ ಪ್ರಕಾಶ್ ನಾಶಿ ತಡೆದಿದ್ದಾರೆ.

    ಹುಬ್ಬಳ್ಳಿ ಸಮೀಪದ ವರೂರ- ಅಗಡಿ ಬಳಿ ಪೊಲೀಸರ ಕಣ್ಣು ತಪ್ಪಿಸಿ ಲಾರಿಯಲ್ಲಿ ನೂರಾರು ಜನರು ಮಹಾರಾಷ್ಟ್ರಕ್ಕೆ ಹೊರಟಿದ್ದರು. ಖಚಿತ ಮಾಹಿತಿ ಮೇಲೆ ಲಾರಿಯನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಎಲ್ಲರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಬೇರೆ ವಾಹನಗಳ ಮೂಲಕ ಕಳುಹಿಸಿಕೊಡುವ ಏರ್ಪಾಡುಗಳನ್ನು ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಮಾಡಿದ್ದಾರೆ.

    ಲಾಕ್‍ಡೌನ್ ಸಡಿಲಿಕೆಯಾದ ಮೇಲೆ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಅನ್ಯ ರಾಜ್ಯದಿಂದ ಆಗಮಿಸಿದವರಿಂದಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿವೆ. ಇಂದು ಸಹ 75 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ.

  • ಕಾರ್ಮಿಕರಿಗಾಗಿ 68 ಸಾವಿರ ರೂ. ವ್ಯಯಿಸಿ 10 ವಿಮಾನ ಟಿಕೆಟ್ ಖರೀದಿಸಿದ ರೈತ

    ಕಾರ್ಮಿಕರಿಗಾಗಿ 68 ಸಾವಿರ ರೂ. ವ್ಯಯಿಸಿ 10 ವಿಮಾನ ಟಿಕೆಟ್ ಖರೀದಿಸಿದ ರೈತ

    – ಕಾಲ್ನಡಿಗೆಯಲ್ಲಿ ಹೊರಟವರಿಗೆ ವಿಮಾನಯಾನ
    – ರೈತನ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು

    ನವದೆಹಲಿ: ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ 10 ಕಾರ್ಮಿಕರು ತಮ್ಮ ತವರಿಗೆ ತೆರಳುವ ಕನಸು ಕಾಣುತ್ತಿದ್ದರು. ರೈತ ಅವರ ಕನಸನ್ನು ಈಡೇರಿಸಿದ್ದು, 68 ಸಾವಿರ ರೂ.ಗಳ ವಿಮಾನ ಟಿಕೆಟ್ ಖರೀದಿಸಿ, ತಮ್ಮ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡಲು ಸಿದ್ಧತೆ ನಡೆಸಿದ್ದಾರೆ.

    ದೆಹಲಿಯ ರೈತರೊಬ್ಬರು ಈ ಮಹತ್ಕಾರ್ಯ ಮಾಡಿದ್ದು, ಬಿಹಾರ ಮೂಲದ ಕಾರ್ಮಿಕರನ್ನು ವಿಮಾನದ ಮೂಲಕ ಕಳುಹಿಸಿಕೊಡಲು ಈಗಾಗಲೇ ಟಿಕೆಟ್ ಖರೀದಿಸಿದ್ದು, ಗುರುವಾರ ಬೆಳಗ್ಗೆ 6ಕ್ಕೆ ವಿಮಾನ ಪಾಟ್ನಾಗೆ ಹೊರಡಲಿದೆ. ಕಾರ್ಮಿಕರು ಲಾಕ್‍ಡೌನ್ ಆದಾಗಿನಿಂದ ಅಂದರೆ ಏಪ್ರಿಲ್‍ನಿಂದಲೂ ತಮ್ಮ ಊರಿಗೆ ತೆರಳುವ ಕುರಿತು ಪ್ಲ್ಯಾನ್ ಮಾಡುತ್ತಿದ್ದರು. ಸಮಸ್ತಿಪುರದ ತಮ್ಮ ಹಳ್ಳಿಗೆ ಹೋಗಲು ಸೈಕಲ್, ನಡೆದು ಅಥವಾ ಬಸ್‍ಗಳಲ್ಲಿ ಕಷ್ಟಪಟ್ಟು ಸೀಟ್ ಹಿಡಿದಾದರೂ ಊರಿಗೆ ತೆರಳಲು ನಿರ್ಧರಿಸಿದ್ದರು. ಆದರೆ ಅವರಿಗೆ ವಿಮಾನದಲ್ಲಿ ಹೋಗುವ ಅದೃಷ್ಟ ಲಭಿಸಿದೆ.

    ನನ್ನ ಜೀವಿತಾವಧಿಯಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುತ್ತೇನೆಂದು ಯಾವತ್ತೂ ಊಹಿಸಿರಲಿಲ್ಲ. ನನ್ನ ಸಂತಸವನ್ನು ವ್ಯಕ್ತಪಡಿಸಲು ಪದಗಳೇ ಸಾಲುತ್ತಿಲ್ಲ. ಆದರೆ ನಾಳೆ ವಿಮಾನ ನಿಲ್ದಾಣ ತಲುಪಿದ ಬಳಿಕ ನಾನು ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ದೆಹಲಿಯ ಟಿಗಿಪುರ ಗ್ರಾಮದ ಮಶ್ರೂಮ್ ಕೃಷಿಕ ಪಪ್ಪನ್ ಸಿಂಗ್ ಅವರಿಗೆ ಕೃತಜ್ಞನಾಗಿದ್ದೇವೆ ಎಂದು ಗುರುವಾರ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧವಾಗಿರುವ ಕಾರ್ಮಿಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

    ಲಖಿಂದರ್ ಕಳೆದ 27 ವರ್ಷಗಳಿಂದ ಪಪ್ಪನ್ ಸಿಂಗ್ ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 25ರಂದು ಲಾಕ್‍ಡೌನ್ ಘೋಷಣೆಯಾದಾಗಿನಿಂದ ನಮ್ಮ ಯಜಮಾನ ರೈತ ನಮಗೆ ಊಟ, ಉಳಿದುಕೊಳ್ಳಲು ಸ್ಥಳ ನೀಡಿ ಸಹಾಯ ಮಾಡಿದ್ದಾರೆ ಎಂದು ಲಖಿಂದರ್ ಹೇಳಿದ್ದಾರೆ.

    ಈ ಕುರಿತು ರೈತ ಪಪ್ಪನ್ ಅವರು ಮಾಹಿತಿ ನೀಡಿ, 68 ಸಾವಿರ ರೂ. ಟಿಕೆಟ್ ಬುಕ್ ಮಾಡಿದ್ದೇನೆ. ಪ್ರತಿಯೊಬ್ಬರಿಗೂ 3 ಸಾವಿರ ರೂ.ಹಣ ನೀಡಿದ್ದೇನೆ. ಅವರು ಮನೆಗೆ ತೆರಳಲು ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಅಲ್ಲದೆ ತಮ್ಮದೇ ವಾಹನದಲ್ಲಿ ಅವರನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಏ.1ರಂದು ಅವರು ಬಿಹಾರದಲ್ಲಿನ ತಮ್ಮ ಮನೆಗಳಿಗೆ ತರಳಲು ಪ್ರಯತ್ನಿಸಿದರು, ಆದರೆ ಲಾಕ್‍ಡೌನ್ ನಿಂದಾಗಿ ಸಾಧ್ಯವಾಗಲಿಲ್ಲ. ಶ್ರಮಿಕ್ ರೈಲುಗಳು ಪ್ರಾರಂಭವಾದ ನಂತರ ನಾನೂ ಸಹ ಅವರನ್ನು ಮನೆಗೆ ಕಳುಹಿಸಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ, ಹೀಗಾಗಿ ವಿಮಾನದಲ್ಲಿ ಕಳುಹಿಸುತ್ತಿದ್ದೇನೆ ಎಂದು ವಿವರಿಸಿದರು.

    ನಡೆದುಕೊಂಡು ಹಾಗೂ ಕಷ್ಟದಿಂದ ಅವರ ಪ್ರಾಣವನ್ನೇ ಪಣಕ್ಕಿಟ್ಟು ಸಾವಿರಾರು ಕಿ.ಮೀ. ದೂರದ ಊರು ತಲುಪಿಸಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಈ ನಿರ್ಧಾರ ಮಾಡಿದೆ. ಈಗಾಗಲೇ ಅವರ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದೇನೆ. ಈ ಕುರಿತು ವರದಿ ಪಡೆದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ಬಂದಿದೆ. ನಾನು 1993ರಿಂದಲೂ ಮಶ್ರೂಮ್ ಬೆಳೆಯುತ್ತಿದ್ದೇನೆ ಎಂದು ರೈತ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

  • ‘ನಮ್ಮನ್ನ ಬಿಟ್ಟು ಬಿಡಿ, ನಮ್ಮೂರಿಗೆ ಹೋಗ್ತೀವಿ’

    ‘ನಮ್ಮನ್ನ ಬಿಟ್ಟು ಬಿಡಿ, ನಮ್ಮೂರಿಗೆ ಹೋಗ್ತೀವಿ’

    – ಅವಧಿ ಮುಗಿದರೂ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರ ಅಳಲು

    ಯಾದಗಿರಿ: ನಮ್ಮನ್ನ ಬಿಟ್ಟು ಬಿಡಿ, ನಾವು ನಮ್ಮೂರಿಗೆ ಹೋಗುತ್ತೇವೆ ಎಂದು ಅವಧಿ ಮುಗಿದರೂ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು ಯಾದಗಿರಿ ತಾಲೂಕಿನ ಲಿಂಗೇರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಬೇಸಿಗೆ ಬಿಸಿಲಲ್ಲಿ ಫ್ಯಾನ್, ಕರೆಂಟ್ ಇಲ್ಲದೇ ಹೇಗೆ ಇರಬೇಕು. ಇದರ ಜೊತೆಗೆ ಕಳಪೆ ಆಹಾರ ನೀಡುತ್ತಿದ್ದಿರಿ, ಇದರಿಂದ ಅನಾರೋಗ್ಯ ಪೀಡಿತರಾಗಿದ್ದೇವೆ. ನಾವು ಇಲ್ಲಿ ಇರಲ್ಲ, ನಮ್ಮನ್ನು ಬಿಟ್ಟು ಬಿಡಿ ಎಂದು ಕಾರ್ಮಿಕರು ಪ್ರತಿಭಟನೆ ಮೂಲಕ ಅಳಲು ತೋಡಿಕೊಂಡಿದ್ದಾರೆ.

    ಯಾದಗಿರಿ ತಾಲೂಕಿನ ಲಿಂಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಅವರ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಕೇಂದ್ರದಲ್ಲೇ ಇರಿಸಲಾಗಿದೆ. ಇದರಿಂದಾಗಿ ಕಾರ್ಮಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 21 ದಿನಗಳಿಂದ ನಮ್ಮನ್ನ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ನಮ್ಮನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದ್ದು, ರಿಪೋರ್ಟ್ ಕೂಡ ಬಂದಿದೆ. ಆದರೂ ಇಲ್ಲಿಯೇ ಇರಿಸಿದ್ದಾರೆ. ನಾವು ಮಾತ್ರ ಇಂದು ಮನೆಗೆ ಹೋಗುತ್ತೇನೆ. ನಮ್ಮ ವಿರುದ್ಧ ಯಾವುದೇ ಕ್ರಮ ಬೇಕಾದರೂ ಕೈಗೊಳ್ಳಿ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರೊಬ್ಬರು ಕಿಡಿಕಾರಿದ್ದಾರೆ.

  • ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ವಿರುದ್ಧ ಪ್ರಕರಣ ದಾಖಲು

    ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ವಿರುದ್ಧ ಪ್ರಕರಣ ದಾಖಲು

    ಬೆಳಗಾವಿ: ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ಠಾಣೆಯಲ್ಲಿ ಈ 19 ಜನರ ವಿರುದ್ಧ ಕೇಸ್ ದಾಖಲಾಗಿದೆ.

    ಲಾಕ್‍ಡೌನ್ ಮುನ್ನ ಕಬ್ಬು ಕಟಾವು ಮಾಡಲು ಕೊಲ್ಲಾಪುರಕ್ಕೆ ತೆರಳಿದ್ದು, ಆ ಬಳಿಕ ಲಾಕ್ ಡೌನ್ ನಿಂದಾಗಿ ಕೆಲಸ ಇಲ್ಲದೇ ಕೂಲಿಕಾರ್ಮಿಕರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿಯೇ ಮಹಾರಾಷ್ಟ್ರದ ಮೀರಜ್ ಗಡಿಯವರೆಗೆ ಆಗಮಿಸಿದ್ರು.

    ದಾಸಗಾಂವ – ಮಾಗಾಂವ – ಮೀರಜ್ ಮೂಲಕ ಕಳ್ಳದಾರಿಯಲ್ಲಿ ಗಡಿ ಪ್ರವೇಶಿಸಿ ಚೆಕ್‍ಪೋಸ್ಟ್ ಪಕ್ಕದ ಗದ್ದೆಗಳ ಮೂಲಕ ಬೆಳಗಾವಿ ಗಡಿ ಪ್ರವೇಶಿಸಿದ್ದರು. ಆ ನಂತರ ತಮ್ಮ ಪರಿಚಯಸ್ಥರಿಗೆ ಹೇಳಿ ಲಾರಿ ಬುಕ್ ಮಾಡಿದ್ದರು. ಹೀಗೆ ಗಡಿಯಿಂದ ಲಾರಿ ಮೂಲಕ ಮೂಡಲಗಿಗೆ ಆಗಮಿಸುತ್ತಿದ್ದಾಗ ಅವರನ್ನು ತಡೆಹಿಡಿಯಲಾಗಿದೆ.

    ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ತಡೆದ ಮೂಡಲಗಿ ಪೊಲೀಸರು ಬಳಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಎಲ್ಲರ ಆರೋಗ್ಯ ತಪಾಸಣೆಗೆ ಕಳುಹಿಸಿದ್ದಾರೆ. ಆರೋಗ್ಯ ತಪಾಸಣೆ ಮಾಡಿ ಒಟ್ಟು 33 ಜನರನ್ನು ಯಾದವಾಡ ಗ್ರಾಮದ ಹೊರವಲಯದ ಹಾಸ್ಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

  • ಗರ್ಲ್‍ಫ್ರೆಂಡ್ ಭೇಟಿಗೆ ಸಹಾಯ ಮಾಡಿ ಎಂದ ಭೂಪ- ತಕ್ಕ ಉತ್ತರ ನೀಡಿದ ನಟ ಸೋನು ಸೂದ್

    ಗರ್ಲ್‍ಫ್ರೆಂಡ್ ಭೇಟಿಗೆ ಸಹಾಯ ಮಾಡಿ ಎಂದ ಭೂಪ- ತಕ್ಕ ಉತ್ತರ ನೀಡಿದ ನಟ ಸೋನು ಸೂದ್

    ಮುಂಬೈ: ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಬಾಲಿವುಡ್ ನಟ ಸೋನು ಸೂದ್ ಮಾನವೀಯತೆ ಮೆರೆದಿದ್ದರು. ಈ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು ಸಹ. ಆದರೆ ವ್ಯಕ್ತಿಯೊಬ್ಬ ಇದನ್ನೇ ದುರುಪಯೋಗಪಡಿಸಿಕೊಂಡು ತನ್ನ ಗರ್ಲ್‍ಫ್ರೆಂಡ್ ಭೇಟಿ ಮಾಡಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಸೋನು ಸೂದ್ ತಕ್ಕ ಉತ್ತರ ನೀಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ವಲಸೆ ಕಾರ್ಮಿಕರು ಪರದಾಡುವಂತಾಗಿದ್ದು, ಸಹಾಯ ಬೇಡುತ್ತಿದ್ದಾರೆ. ನಟ ಸೋನು ಸೂದ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ಅರಿವಿಗೆ ಬಂದ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಅಭಿಮಾನಿಗಳ ಬಹುತೇಕ ಟ್ವೀಟ್‍ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಇತ್ತೀಚೆಗೆ ಸೋನು ಸೂದ್ ನೂರಾರು ವಲಸೆ ಕಾರ್ಮಿಕರಿಗಾಗಿ ಬಸ್ ವ್ಯವಸ್ಥೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದರಲ್ಲಿ ಕರ್ನಾಟಕದ ಕಾರ್ಮಿಕರೂ ಸೇರಿದಂತೆ ಬಹುತೇಕರು ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿದ್ದರು. ಇದನ್ನು ಕಂಡ ಸೋನು ಸೂದ್, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಜೊತೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಅಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದರು. ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದರು. ಈ ಮೂಲಕ ಮಾನವೀಯತೆ ಮೆರೆದಿದ್ದರು.

    ಇದೀಗ ವ್ಯಕ್ತಿಯೊಬ್ಬ ಇದೇ ಅವಕಾಶವನ್ನು ಬಳಸಿಕೊಂಡು ಸೋನು ಸೂದ್ ಅವರ ಬಳಿ ಅನಗತ್ಯ ಸಹಾಯ ಕೇಳಿದ್ದಾನೆ. ಇದಕ್ಕೆ ನಟ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಈ ಪ್ರಶ್ನೆ ಕೇಳಿದರೆ ನೀವೂ ನಗ್ತೀರಾ, ಹೌದು ಟ್ವಿಟ್ಟರ್‍ಲ್ಲಿ ವ್ಯಕ್ತಿಯೊಬ್ಬ ಈ ಪ್ರಶ್ನೆ ಕೇಳಿದ್ದು, ಭಯ್ಯಾ ಗರ್ಲ್‍ಫ್ರೆಂಡ್ ಭೇಟಿಯಾಗಲು ದಯವಿಟ್ಟು ನನಗೆ ಸಹಾಯ ಮಾಡಿ, ಬಿಹಾರಕ್ಕೆ ಮಾತ್ರ ಹೋಗಬೇಕಿದೆ ಎಂದು ಕೇಳಿದ್ದಾನೆ.

    ಇದಕ್ಕೆ ನಟ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ, ನಿಜವಾದ ಪ್ರೀತಿಯ ಕುರಿತು ಪಾಠ ಮಾಡಿದ್ದಾರೆ. ನಿಮ್ಮ ಗರ್ಲ್‍ಫ್ರೆಂಡ್ ಇಂದ ಕೆಲವು ದಿನವಾದರೂ ದೂರ ಇರಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ನಿಜವಾದ ಪ್ರೀತಿಯ ಪರೀಕ್ಷೆಯೂ ಆಗುತ್ತದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ. ಸಾಲು ಮುಗಿದ ಮೇಲೆ ನಗುವಿನ ಎಮೋಜಿಯನ್ನು ಹಾಕಿದ್ದಾರೆ.

    ಸೋನು ಸೂದ್ ಅವರ ಸಮಯ ಪ್ರಜ್ಞೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಊಹಿಸಲಾಗದ ಉತ್ತರಕ್ಕೆ ಫಿದಾ ಆಗಿದ್ದಾರೆ. ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಇತ್ತೀಚೆಗೆ ಇಂತಹದ್ದೇ ಮತ್ತೊಂದು ಘಟನೆ ನಡೆದಿತ್ತು. ಮದ್ಯದ ಅಂಗಡಿಗೆ ಹೋಗಲು ಸಹಾಯ ಮಾಡಿ ಎಂದು ಕೇಳಿದ್ದಕ್ಕೆ ನಟ ತಕ್ಕ ಉತ್ತರ ನೀಡಿದ್ದರು.

  • ಸರ್ವಾಧಿಕಾರಿ ಸಿಎಂ ಯೋಗಿ ಆದಿತ್ಯನಾಥ್ ವಜಾಗೊಳಿಸಿ- ಡಿಕೆಶಿ ಆಗ್ರಹ

    ಸರ್ವಾಧಿಕಾರಿ ಸಿಎಂ ಯೋಗಿ ಆದಿತ್ಯನಾಥ್ ವಜಾಗೊಳಿಸಿ- ಡಿಕೆಶಿ ಆಗ್ರಹ

    – ಕಾರ್ಮಿಕರೆಂದರೆ ಗುಲಾಮರೇ?
    – ಆದಿತ್ಯನಾಥ್‍ಗೆ ಕಿಂಚಿತ್ತೂ ಸಂವಿಧಾನದ ಪರಿಜ್ಞಾನವಿಲ್ಲ

    ಬೆಂಗಳೂರು: ಉತ್ತರ ಪ್ರದೇಶ ಕಾರ್ಮಿಕರು ಅನ್ಯ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವಂತಿಲ್ಲ ಎಂದು ನಿರ್ದೇಶಿಸುವ ಮೂಲಕ ಈ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ನಮ್ಮ ಸಂವಿಧಾನದ ಪರಿಚ್ಛೇದ 19(1)(ಡಿ) ಮತ್ತು (ಈ) ಪ್ರಕಾರ ದೇಶದ ಪ್ರತಿಯೊಬ್ಬ ನಾಗರೀಕ ಯಾವುದೇ ಜಾಗದಲ್ಲಿ ಹೋಗಿ, ಅಲ್ಲಿ ನೆಲೆಸಿ, ಅಲ್ಲಿ ಕೆಲಸ ಮಾಡುವ ಹಕ್ಕನ್ನು ನೀಡಲಾಗಿದೆ. ಆದರೆ ಹೊರ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ವಾಪಸ್ಸಾಗುತ್ತಿರುವ ಕಾರ್ಮಿಕರನ್ನು ಸ್ವಾಗತಿಸಿ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ವಿಫಲವಾಗಿರುವ ಯೋಗಿ ಆದಿತ್ಯನಾಥ್ ಈ ರೀತಿಯ ಉದ್ಧಟತನದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

    ಯೋಗಿ ಆದಿತ್ಯನಾಥ್ ಅವರಿಗೆ ಈ ದೇಶದ ಸಂವಿಧಾನದ ಬಗ್ಗೆ ಕಿಂಚಿತ್ತೂ ಪರಿಜ್ಞಾನವಿಲ್ಲ. ಇದ್ದಿದ್ದರೆ ಈ ರೀತಿ ಪ್ರಜಾದ್ರೋಹದ ಮಾತುಗಳನ್ನು ಆಡುತ್ತಿರಲಿಲ್ಲ. ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗಿ ಕೆಲಸ ಮಾಡುವ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಿ ಕೆಲಸ ಮಾಡಲು ಯಾರೂ ಪಾಸ್ ಪೋರ್ಟ್ ತೆಗೆದುಕೊಳ್ಳಬೇಕಿಲ್ಲ. ಯೋಗಿ ಆದಿತ್ಯನಾಥ ಅವರ ನಡೆ ಸರ್ವಾಧಿಕಾರಿ ಧೋರಣೆಯದ್ದಾಗಿದ್ದು, ಪ್ರಜಾತಂತ್ರ ವ್ಯವಸ್ಥೆಯ ಭದ್ರಬುನಾದಿಯನ್ನು ಅಲ್ಲಾಡಿಸುವಂಥದ್ದಾಗಿದೆ ಎಂದು ಕಿಡಿಕಾರಿದರು.

    ಉತ್ತರ ಪ್ರದೇಶ ಕಾರ್ಮಿಕರು ದೇಶದ ಎಲ್ಲೆಡೆ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ. ಅದೇ ರೀತಿ ನಮ್ಮ ಕನ್ನಡಿಗರು ಕೂಡ ಮುಂಬೈ, ದಿಲ್ಲಿ, ಹೈದರಾಬಾದ್, ಉತ್ತರ ಪ್ರದೇಶ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಅವರನ್ನು ಯೋಗಿ ಆದಿತ್ಯನಾಥ್ ಅವರಂತೆ ಕಟ್ಟಿಹಾಕಲು ಸಾಧ್ಯವೇ? ಹಾಗೆ ನಿರ್ಬಂಧ ಹೇರಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಆದಿತ್ಯನಾಥ ಅವರು ಕಾರ್ಮಿಕರನ್ನು ಗುಲಾಮರೆಂದು ಭಾವಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

    ಭಾರತ ಒಕ್ಕೂಟ ವ್ಯವಸ್ಥೆಯಾಗಿದ್ದು, ಅದು ಯಾರಪ್ಪನ ಆಸ್ತಿಯೂ ಅಲ್ಲ. ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ನಮ್ಮ ಸಂವಿಧಾನ ಒಂದಷ್ಟು ಹಕ್ಕುಗಳನ್ನು ನೀಡಿದೆ ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

    ದುರಾದೃಷ್ಟವಶಾತ್ ಕೇಂದ್ರದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಸರ್ವಾಧಿಕಾರಿ ಧೋರಣೆ ತೋರುತ್ತಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುತ್ತಿವೆ. ಇದಕ್ಕೆ ಸಣ್ಣ ಉದಾಹರಣೆ ಕಾರ್ಮಿಕರ ವಿಚಾರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ. ಇಂತಹ ಅಸಂವಿಧಾನಿಕ ನಿರ್ಧಾರಗಳನ್ನು ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳು ಖಂಡಿಸಿ, ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

    ಯೋಗಿ ಮಾಡಿದ್ದೇನು?
    ಉತ್ತರ ಪ್ರದೇಶ ಸರ್ಕಾರವು ವಲಸೆ ಕಾರ್ಮಿಕರಿಗಾಗಿಯೇ ಪ್ರತ್ಯೇಕವಾದ ವಲಸೆ ಆಯೋಗ ಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ಇತರ ರಾಜ್ಯಗಳಿಗೆ ಉತ್ತರ ಪ್ರದೇಶದಿಂದ ಕಾರ್ಮಿಕರು ಬೇಕಾಗಿದ್ದರೆ ಆಯೋಗದ ಅನುಮತಿಯನ್ನು ಪಡೆಯಬೇಕಾಗುತ್ತದೆ.

    ಈ ವಿಚಾರವಾಗಿ ಸೋಮವಾರ ಮಾತನಾಡಿದ್ದ ಯೋಗಿ ಆದಿತ್ಯನಾಥ್, ಕೊರೊನಾ ಲಾಕ್‍ಡೌನ್ ವೇಳೆ ಅನೇಕ ರಾಜ್ಯಗಳು ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿಲ್ಲ. ಅವರು ನಮ್ಮ ರಾಜ್ಯದ ಬಹು ದೊಡ್ಡ ಸಂಪನ್ಮೂಲ. ಉತ್ತರ ಪ್ರದೇಶದಲ್ಲೇ ಈಗ ಅವರಿಗೆ ಉದ್ಯೋಗ ಕಲ್ಪಿಸಲಾಗುವುದು. ಇದಕ್ಕಾಗಿಯೇ ಆಯೋಗ ರಚಿಸಲಾಗುವುದು. ವಲಸೆ ಕಾರ್ಮಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಶೋಷಣೆ ತಡೆಯುವ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಮೆ, ಸಾಮಾಜಿಕ ಭದ್ರತೆ, ಮರು ಉದ್ಯೋಗಕ್ಕೆ ನೆರವು, ನಿರುದ್ಯೋಗ ಭತ್ಯೆ ಮುಂತಾದ ವಿಷಯಗಳ ಬಗ್ಗೆ ಆಯೋಗ ಪರಾಮರ್ಶಿಸಿ ಯೋಜನೆಗಳನ್ನು ರೂಪಿಸಲಿದೆ ತಿಳಿಸಿದ್ದರು. ನಮ್ಮ ರಾಜ್ಯದಿಂದ ಕಾರ್ಮಿಕರನ್ನು ಉದ್ಯೋಗಕ್ಕೆ ಕರೆದುಕೊಂಡು ಹೋಗಿ ಅನ್ಯಾಯ ಮಾಡಲಾಗುತ್ತಿದೆ. ಸರಿಯಾಗಿ ಸಂಬಳ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಜನರ ಹಿತ ಕಾಪಾಡಲು ವಲಸೆ ಆಯೋಗ ಸ್ಥಾಪನೆ ಮಾಡುತ್ತಿದ್ದೇವೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

    https://www.facebook.com/DKShivakumar.official/videos/1326457644206581/