Tag: ವರ್ಷ

  • ಪರೀಕ್ಷೆಗೆ ತೆರಳೋ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಅಗ್ನಿ ಅವಘಡ- ವಿದ್ಯಾರ್ಥಿನಿ ಸಾವು

    ಪರೀಕ್ಷೆಗೆ ತೆರಳೋ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಅಗ್ನಿ ಅವಘಡ- ವಿದ್ಯಾರ್ಥಿನಿ ಸಾವು

    ತಿರುವನಂತಪುರಂ: ವಿದ್ಯಾರ್ಥಿನಿಯೊಬ್ಬಳು ಪರೀಕ್ಷೇಗೆ ತೆರಳುವ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಆಗ್ನಿ ಅವಘಡಕ್ಕೆ ತುತ್ತಾಗಿರುವ ಘಟನೆ ಕೇರಳದ ಕೊಡುವಾಯೂರ್ ನಲ್ಲಿ ನಡೆದಿದೆ.

    ಮೃತ ದುರ್ದೈವಿ ವಿದ್ಯಾರ್ಥಿನಿಯನ್ನು ವರ್ಷ(17) ಎಂದು ಗುರುತಿಸಲಾಗಿದೆ. ಬೆಂಕಿ ಹೊತ್ತಿಕೊಂಡು ಸೆ.2ರಿಂದ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ವರ್ಷ ಸೋಮವಾರ ಎರ್ನಾಕುಲಂನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

    ಕೇರಳ ಜಿಲ್ಲೆಯ ಪಾಲಕ್ಕಾಡ್ ಜಿಲ್ಲೆಯ ಕೊಡುವಾಯೂರ್ ಗ್ರಾಮದ ಕಣ್ಣನ್ ಹಾಗೂ ರತಿ ಎಂಬವರ ಪುತ್ರಿಯಾಗಿರುವ ವರ್ಷ, ಪಲ್ಲಸ್ಸನದ ವಿಐಎಂ ಸೆಕೆಂಡರಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಎಂದಿನಂತೆ ಪರೀಕ್ಷೆಗೆ ತೆರಳುವ ಮುನ್ನ ಈಕೆ ಮೊಟ್ಟೆ ಬೇಯಿಸಲು ತೆರಳಿದ್ದಾಳೆ. ಬೆಂಕಿ ಹೊತ್ತಿಸಲೆಂದು ಒಲೆಗೆ ಸೀಮೆ ಎಣ್ಣೆಯನ್ನ ಎರಚಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಈಕೆಯ ಮೈಮೇಲೆ ತಗುಲಿದೆ. ಇದನ್ನೂ ಓದಿ: ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ

    ಮೈಮೇಲೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ನೋವಿನಿಂದ ವರ್ಷ  ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಕೇಳಿಸಿಕೊಂಡ ಆಕೆತ ತಂದೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದಾಗಲೇ ವರ್ಷ ದೇಹ ಶೇ.65ರಷ್ಟು ಸುಟ್ಟು ಹೋಗಿತ್ತು. ಹೀಗಾಗಿ ಅಲ್ಲಿನ ವೈದ್ಯರು ತ್ರಿಶೂರ್ ನಲ್ಲಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ವರ್ಷ ಹೆಚ್ಚಿನ ಚಿಕಿತ್ಸೆಗಾಗಿ ತ್ರಿಶೂರ್ ಮೆಡಿಕಲ್ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಬೆಡ್ ಖಾಲಿಯಿಲ್ಲದ ಪರಿಣಾಮ ಅಲ್ಲಿಂದ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲಿಟ್ಟುಕೊಂಡ

    ಚಿಕಿತ್ಸೆಗೆ ಒಟ್ಟು 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಮುಂಗಡವಾಗಿ 2.5 ಲಕ್ಷ ಕಟ್ಟುವಂತೆ ಖಾಸಗಿ ಆಸ್ಪತ್ರೆಯವರು ವರ್ಷ ತಂದೆಗೆ ತಿಳಿಸಿದ್ದಾರೆ. ಬಡ ಆಟೋ ಡ್ರೈವರ್ ಆಗಿರುವ ವರ್ಷ ತಂದೆ ಕಣ್ಣನ್ ಅಷ್ಟೊಂದು ಹಣ ಕಟ್ಟಲಾಗದೆ ಎರ್ನಾಕುಲಂನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ವರ್ಷ ಮೃತಪಟ್ಟಿದ್ದಾಳೆ. ಮೃತಳ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಮೃತ ವರ್ಷ ತಂದೆ, ತಾಯಿ ಹಾಗೂ ಸಹೋದರರಾದ ಜಿಷ್ಣು ಹಾಗೂ ವಿಷ್ಣುವನ್ನು ಅಗಲಿದ್ದಾಳೆ. ಇದನ್ನೂ ಓದಿ: ಒಟ್ಟಾಗಿ ಹೋಗೋಣವೆಂದು ಹೆಚ್‍ಡಿಕೆಗೆ ಹೇಳಿದ್ದೇನೆ: ಮೈತ್ರಿ ಬಗ್ಗೆ ಸಿಎಂ ಸ್ಪಷ್ಟನೆ

  • ಶನಿಮಹಾರಾಜ 2019ರಲ್ಲಿ ಭೂಮಂಡಲ ಆಳುವ ರಾಜ- ಪ್ರಕಾಶ್ ಅಮ್ಮಣ್ಣಾಯ ಜ್ಯೋತಿಷ್ಯ

    ಶನಿಮಹಾರಾಜ 2019ರಲ್ಲಿ ಭೂಮಂಡಲ ಆಳುವ ರಾಜ- ಪ್ರಕಾಶ್ ಅಮ್ಮಣ್ಣಾಯ ಜ್ಯೋತಿಷ್ಯ

    ಹೊಸ ವರ್ಷದಲ್ಲಿ ಮಳೆ ಬೆಳೆಗೇನೂ ಕೊರತೆಯಿಲ್ಲ, ಆದ್ರೆ ಕಾಲ ಕಾಲಕ್ಕೆ ಅದು ಆಗುವುದಿಲ್ಲ. ವರ್ಷಾಂತ್ಯದ ಖಗ್ರಾಸ ಸೂರ್ಯಗ್ರಹಣಕ್ಕೆ ಬೆಳ್ಳಂಬೆಳಗ್ಗೆ ನಕ್ಷತ್ರ ಮತ್ತು ಗ್ರಹಗಳು ಗೋಚರಿಸಬಹುದು. ದೇಶಕ್ಕೆ ಮತ್ತೆ 5 ವರ್ಷ ನರೇಂದ್ರ ಮೋದಿಯೇ ಪ್ರಧಾನಿ. ರಾಜ್ಯ ರಾಜಕಾರಣದಲ್ಲಿ ಮೂರು ಮದ್ದಾನೆಗಳ ನಡುವೆ ಕಾಳಗ ಮುಂದುವರಿಯುತ್ತದೆ. ಯಾರಿಗೂ ಸಂಪೂರ್ಣ ಜಯವಿಲ್ಲ. ವಿಕಾರ ಸಂವತ್ಸರದಲ್ಲಿ ಜನತೆ ಶಾಂತಚಿತ್ತರಾಗಿದ್ದರೆ ಒಳ್ಳೇಯದು. ಇದು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಅವರ 2019ರ ಜ್ಯೋತಿಷ್ಯದ ಹೈಲೈಟ್ಸ್.

    ಕ್ಯಾಲೆಂಡರ್ ವರ್ಷದ ಬಗ್ಗೆ ಹೇಳಬೇಕೋ? ಪಂಚಾಂಗವನ್ನು ನೋಡಿ ಹೇಳಬೇಕೋ ಎಂಬ ಗೊಂದಲದಲ್ಲಿ ನಾನಿದ್ದೇನೆ. ಭೂಮಿಗೆ ಸೂರ್ಯ ಮತ್ತು ಚಂದ್ರನ ರಶ್ಮಿ ಮತ್ತು ಕಿರಣಗಳು ಬಹು ಮುಖ್ಯ. ಅವುಗಳು ಬೀಳುವ ಆಧಾರದ ಮೇಲೆ ಜ್ಯೋತಿಷ್ಯ ಹೇಳಬಹುದು ಎಂದು ಪ್ರಕಾಶ್ ಅಮ್ಮಣ್ಣಾಯ ಮಾತು ಶುರು ಮಾಡಿದರು. ಗ್ರಹಗಳು ಪಸರಿಸುವ ರಶ್ಮಿ ಬಹಳ ಮುಖ್ಯ ಎಂದು ಹೇಳಿದರು. ಸದ್ಯ ನಾವು ಪರಿಗಣನೆಗೆ ತೆಗೆದುಕೊಂಡಿರುವುದು ಗ್ರಿಗೇರಿಯನ್ ಮತ್ತು ಜ್ಯೂಲಿಯನ್ ಕ್ಯಾಲೆಂಡರ್. 2019ರ ಒಳಗೆ ಎರಡು ಭಾಗಗಳಿವೆ. ಪಂಚಾಂಗದ ಪ್ರಕಾರ ಹೇಮಲಂಬಿ ಸಂವತ್ಸರದ ಕೊನೆಯ ಭಾಗಗಳು ಮತ್ತು ವಿಕೃತಿ ಸಂವತ್ಸರದ ಪೂರ್ವಭಾಗ 2019ರಲ್ಲಿ ಬರುತ್ತದೆ.

    2019ರಲ್ಲಿ ಶನಿ ಮಹಾರಾಜನ ಆಳ್ವಿಕೆ
    2019ರ ವಿಶೇಷತೆ ಎಂದರೆ ವರ್ಷಪೂರ್ತಿ ಶನಿ ರಾಜನಾಗಿ ಮೆರೆಯುತ್ತಾನೆ. ಸೂರ್ಯನ ಪ್ರಭಾವ ಬಹಳ ಕಡಿಮೆಯಾಗಿರುತ್ತದೆ. ಶನಿ ಧನು ರಾಶಿಯಲ್ಲಿ 16 ಡಿಗ್ರಿ ದಾಟಿರುವುದರಿಂದ ಬಹಳ ಪ್ರಬಲವಾಗಿ – ಬಲಿಷ್ಟನಾಗಿರುತ್ತಾನೆ. ಈ ವರ್ಷ ರೂಲಿಂಗ್ ಪ್ಲ್ಯಾನೆಟ್ ಶನಿಯೇ ಆಗಿರುವುದರಿಂದ ಪ್ರಕೃತಿ ವಿಕೋಪ, ಮಾನಸಿಕ ಕ್ಷೋಭೆ ಹೆಚ್ಚಾಗುವ ಸಾಧ್ಯತೆಯಿದೆ. ಭಾವನೆ ಕೆಣಕುವ- ಸತ್ಯ ಸುಳ್ಳುಗಳ ನಡುವೆ ತಿಕ್ಕಾಟ ನಡೆಯುತ್ತದೆ. ಇನ್ನೊಬ್ಬರ ಭಾವನೆ ನಂಬಿಕೆ ಕೆಣಕುವ ಮಾತನಾಡುವ ಕೆಲಸಕ್ಕೆ ಯಾರೂ ಹೋಗಬಾರದು. ಯಾವುದೇ ವಿಚಾರ ಉಲ್ಬಣವಾಗದಂತೆ ನೋಡಿಕೊಳ್ಳಬೇಕು ಎಂದು ಅಮ್ಮಣ್ಣಾಯ ಹೇಳಿದರು.

    ಹೊಸ ವರ್ಷದ ಡಿಸೆಂಬರ್ ತಿಂಗಳ ಕೊನೆಗೆ ಕಂಕಣ ಸೂರ್ಯಗ್ರಹಣ ನಡೆಯಲಿದೆ. 1748 ರಲ್ಲಿ ಇಂತಹ ಗ್ರಹಣ ಆಗಿತ್ತು. ಅಂತಹ ಅದ್ಭುತ ಗ್ರಹಣ ಇದಾದ್ರೆ, ಬೆಳಗ್ಗೆ ಆಗಸದಲ್ಲಿ ನಕ್ಷತ್ರಗಳು ಕಾಣುವ ಸಾಧ್ಯತೆಯಿದೆ. ಗ್ರಹಣದ ಆರು ತಿಂಗಳು ಹಿಂದೆ ಮತ್ತು ಗ್ರಹಣದ ಆರು ತಿಂಗಳ ನಂತರ ಇದರ ಪ್ರಭಾವ ಇರುತ್ತದೆ. ಭೂಮಿಗೆ ಮಾತ್ರ ಗ್ರಹಣದ ಎಫೆಕ್ಟ್ ಅಲ್ಲ. ಇಡೀ ಭೂಮಂಡಲಕ್ಕೆ ಇದರ ಎಫೆಕ್ಟ್ ಇದೆ.

    ರಾಜರಾರಣಿಗಳ ತಿಕ್ಕಾಟದ ವರ್ಷ
    ರಾಜಕಾರಣದೊಳಗೆ ಇದನ್ನು ಗ್ರಹಣವನ್ನು ಹೊಂದಾಣಿಕೆ ಮಾಡಿ ನೋಡಿದರೆ, ಪಕ್ಷಗಳು, ರಾಜಕಾರಣಗಳು, ಬೆಂಬಲಿಗರ ನಡುವೆ ವೈಷಮ್ಯ ಏರ್ಪಡುತ್ತದೆ. ಧರ್ಮ ಧರ್ಮಗಳ ನಡುವೆ ತಿಕ್ಕಾಟಗಳು ನಡೆಯಬಹುದು. ದೇಶ ದೇಶಗಳ ನಡುವೆ ಸಂಬಂಧ ಸರಿ ಇಲ್ಲದ ಸ್ಥಿತಿ ಉಂಟಾಗಬಹುದು. ಭೂಮಿಯ ಪೂರ್ವಭಾಗ ಜಪಾನ್ ಇಂಡೋನೇಶ್ಯಾ ಭೂಕಂಪವಾಗಬಹುದು. ಕೆನಡಾ ಟೆಕ್ಸಾಸ್‍ನಲ್ಲಿ ಅಗ್ನಿ ಪರ್ವತ ಸಿಡಿದೇಳಬಹುದು. ಭಾರತದಲ್ಲಿ ಇಂತಹ ಪರಿಣಾಮಗಳು ಆಗುವುದಿಲ್ಲ. ಮನುಷ್ಯನ ವಿಕೃತಿಗಳು ಜಾಸ್ತಿಯಾಗುವ ಸಾಧ್ಯತೆ ಇದೆ. ಚುನಾವಣೆ ಸಂದರ್ಭ ಏನೋ ಮಾಡಲು ಹೋದ್ರೆ ಇನ್ನೇನೋ ಆಗಬಹುದು. ವೈಯಕ್ತಿಕ ಲಾಭಕ್ಕೆ ಮುಗ್ಧರು ಒಳಗಾಗುವ ಸಾಧ್ಯತೆಯಿದೆ. ಕೊಳ್ಳೆಗಾಲದ ದೇವರ ಪ್ರಸಾದದಲ್ಲಿ ವಿಷ ಇಂತಹ ಘಟನೆಗಳೇ ಉದಾಹರಣೆ ಎಂದರು.

    ಮೋದಿ ಜಾತಕದಲ್ಲಿ ಬಲಿಷ್ಠ ಶನಿ ಪ್ರಭಾವ
    ಈ ವರ್ಷ ಶನಿಯೇ ರಾಜ ಸ್ಥಾನದಲ್ಲಿ ಇರುತ್ತಾನೆ. ಯಾವ ನಾಯಕನ ಜಾತಕದಲ್ಲಿ ಬಲಿಷ್ಠ ಶನಿ ಇರುತ್ತಾನೋ ಅವನೇ ದೇಶಕ್ಕೆ ನಾಯಕ. ಪ್ರಧಾನಿ ನರೇಂದ್ರ ಮೋದಿಯ ಜಾತಕದಲ್ಲಿ 29.5% ಶೇಕಡಾ ಶನಿ ಇದೆ. ಸಿಂಹ ರಾಶಿಯಲ್ಲಿ ಬಲಿಷ್ಟವಾದ ಶನಿ ಕುಳಿತಿದ್ದಾನೆ. ಮೋದಿ ತೆಗೆದುಕೊಳ್ಳುವ ನಿರ್ಧಾರಗಳು, ಯೋಜನೆಗಳು ಪ್ರತಿತಂತ್ರಗಳನ್ನು ಧೂಳೀಪಟ ಮಾಡುತ್ತದೆ ಎಂದು ಅಮ್ಮಣ್ಣಾಯ ಪಂಚಾಂಗ ನೋಡಿ ಹೇಳಿದರು.

    2019 ರೈತರಿಗೆ ಕೃಷಿಕರಿಗೆ ನೆಮ್ಮದಿ
    ಶನಿದೇವನಿಗೆ ಭೂಮಿ- ನದಿ- ಬೆಟ್ಟ ಗುಡ್ಡ ಅಂದ್ರೆ ಬಹಳ ಪ್ರಿಯವಾದದ್ದು. ದುಡಿದು ತಿನ್ನುವವರ ಪರವಾಗಿ ಶನಿದೇವ ಇರುತ್ತಾನೆ. ಸಸ್ಯ, ಜಲರಾಶಿಗಳ ಮೇಲೆ ಪ್ರಭಾವ ಬೀರುತ್ತಾನೆ. ಪ್ರಭಾವ ಹೆಚ್ಚಾದಾಗ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಮಳೆ ಬೆಳೆ ಕಾಲ ಕಾಲಕ್ಕೆ ಆಗದಿದ್ದರೂ ರೈತರಿಗೆ ಬೇಸಾಯಗಾರರಿಗೆ ನಷ್ಟವಂತೂ ಆಗುವುದಿಲ್ಲ ಎಂದು ಅವರು ಹೇಳಿದರು.

    ಕನ್ಯಾ- ವೃಷಭ ರಾಶಿಯವರು ಜಾಗೃತೆಯಿಂದಿರಿ
    ಕನ್ಯಾ ರಾಶಿ ಮತ್ತು ವೃಷಭ ರಾಶಿಯಲ್ಲಿ ಶನಿ ಪ್ರಭಾವ ಇದ್ದವರು ಜಾಗೃತೆ ವಹಿಸಬೇಕು. ವ್ಯವಹಾರದಲ್ಲಿ ಬಹಳ ಆಲೋಚನೆ ಮಾಡಿ. ತಜ್ಞರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ನಕಲಿ ಜ್ಯೋತಿಷ್ಯಿಗಳನ್ನು ಸಂಪರ್ಕ ಮಾಡಬೇಡಿ ಎಂದು ಸ್ಪಷ್ಟಪಡಿಸಿದರು. ತಾಳಿದವನು ಬಾಳಿಯಾನು ಎನ್ನುವುದು ಈ ಎರಡು ರಾಶಿಯವರಿಗೆ ಸರಿಯಾಗಿ ಹೊಂದುತ್ತದೆ ಎಂದು ಹೇಳಿದರು.

    ಯುಗಾದಿ ನಂತರ ವಿಕಾರಿ ಸಂವತ್ಸರ ಆರಂಭವಾಗುತ್ತದೆ. ಶಬ್ದ ಪ್ರಯೋಗವೇ ಸ್ವಲ್ಪ ಭಯ ಹುಟ್ಟಿಸುತ್ತದೆ. ಎಚ್ಚರಿಕೆಯಿಂದ ಇದ್ದರೆ, ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ. ಎಂದು ಅಮ್ಮಣ್ಣಾಯ ಭವಿಷ್ಯ ನುಡಿದರು.

    ರಾಜ್ಯ ರಾಜಕೀಯದಲ್ಲಿ 2019 ಅಲ್ಲೋಲ ಕಲ್ಲೋಲ ಅಂತ ಗೋಚರಿಸುತ್ತದೆ. ಯಾವುದೇ ಒಂದು ಪಕ್ಷ ಜನರ ಒಲವು ಪಡೆಯಲು ಇಲ್ಲಿನ ನಾಯಕರು ವಿಫಲವಾಗುತ್ತಾರೆ. ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯರು ರಾಜ್ಯ ರಾಜಕಾರಣದ ಗಜಸ್ಥಾನದ ರಾಜಕಾರಣಿಗಳು. ಎಲ್ಲರೂ ಶಕ್ತಿವಂತರೇ. ಆದ್ರೆ ಅವರು ಎಲ್ಲರಿಗೂ, ಎಲ್ಲಾ ಭಾಗಕ್ಕೂ ಹಿಡಿಸುವುದಿಲ್ಲ. ಇಡೀ ರಾಜ್ಯದ ಜನರು ಒಪ್ಪುವಂತಹ ಒಬ್ಬ ನಾಯಕನೂ ರಾಜ್ಯದಲ್ಲಿ ಇಲ್ಲ ಎಂದು ನೇರವಾಗಿ ಪ್ರಕಾಶ್ ಅಮ್ಮಣ್ಣಾಯ ಹೇಳುತ್ತಾರೆ.

    2019ರಲ್ಲಿ ರಾಜ್ಯದಲ್ಲಿ ಪ್ರಗತಿ ಶೂನ್ಯವಾದರೆ. ನಾಯಕರ ನಡುವೆ ಕಲಹ ಶುರುವಾದರೆ ಕೇಂದ್ರದ ನಾಯಕ ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ಸರ್ಕಾರ ಇದ್ದು ಇಲ್ಲದಂತೆ ಆದ್ರೆ ಮೇಲಿನ ರಾಜ ತುಂಡರಸರ ಮೇಲೆ ನಿಯಂತ್ರಣ ಸಾಧಿಸಬಹುದು. ಪ್ರಧಾನಿ ಮೋದಿ ಒಂದು ಧರ್ಮಕ್ಕೆ, ಜಾತಿಯ ಪರವಾಗಿ, ಹಿಂದೂ ಪರವಾಗಿ ಇಲ್ಲ. ದೇಶದ ಜನಕ್ಕೆ ಮೋದಿಯವರ ರಾಜಕಾರಣ, ಅವರ ಮುತ್ಸದ್ಧಿತನ- ಯೋಜನೆಗಳು- ಯೋಚನೆಗಳು ಇಷ್ಟವಾಗಿ ಮತ್ತೆ ಅವರು ಆರಿಸಲ್ಪಡುತ್ತಾರೆ ಎಂದರು.

    ರಾಹುಕ್ ಗಾಂಧಿಗೆ ಅಚ್ಛೇದಿನ್..!
    ರಾಹುಲ್ ಗಾಂಧಿಗೆ ಅಚ್ಛೇದಿನ್ ಇದೆ. ಅವರು ಈ ಹಿಂದೆ ಗಳಿಸಿದ ಮಾನಸಿಕ ಹಿಂಸೆಗಳು ಸೋಲು ದೂರಾಗುತ್ತದೆ. ಗೆಲುವುಗಳು – ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದ್ರೆ ರಾಹುಲ್ ಗಾಂಧಿ ಪ್ರಧಾನಿಯಾಗಲು ಸಾಧ್ಯವಿಲ್ಲ. ದೇಶಕ್ಕೊಬ್ಬನೇ ಪ್ರಧಾನಿಯಾಗಲು ಸಾಧ್ಯ ಅದು ನರೇಂದ್ರ ಮೋದಿ ಎಂದು ಅವರು ಹೇಳಿದರು. ಪ್ರಣಬ್ ಮುಖರ್ಜಿ ಪ್ರಧಾನಿ ಸ್ಪರ್ಧಿಯಾಗಿದ್ದರೆ, ಎನ್‍ಡಿಎಗೆ ಗೆ ಒಬ್ಬ ಪ್ರತಿಸ್ಪರ್ಧಿ ಇರುತ್ತಿದ್ದರು. ಕಾಂಗ್ರೆಸ್‍ಲ್ಲಿ ಸ್ಪರ್ಧಿಗಳಿಲ್ಲ. ತೃತೀಯ ರಂಗ ಕಾಂಗ್ರೆಸ್ ಜೊತೆ ವಿಲೀನವಾಗಿರುವುದರಿಂದ ಒಬ್ಬ ನಾಯಕ ಬಲಿಷ್ಟವಾಗಿ ಕಾಣಿಸುತ್ತಿಲ್ಲ ಎಂದು ರಾಜಕೀಯ ಲೆಕ್ಕಾಚಾರ ತೆರೆದಿಟ್ಟರು.

    ಚುನಾವಣೆ ಸಂದರ್ಭ ಎನ್‍ಡಿಎಗೆ ಸಹಾಯವಾಗುವಂತಹ ಕೆಲವು ತೀರ್ಮಾನಗಳು ದೇಶದಲ್ಲಿ ಆಗಬಹುದು. ರಾಷ್ಟ್ರೀಯತೆ ಅಥವಾ ಜನರ ಭಾವನೆಗೆ ಇದು ಬಹಳ ಪ್ರಭಾವ ಬೀರಬಹುದು. ದೇಶದ ಸರ್ವ ಜನರು ಸುಖಿಗಳಾಗಿರಲಿ ಎನ್ನುವುದೇ ನಮ್ಮ ಮನಸ್ಸಿನ ಭಾವನೆ ಎಂದು ಹೆಳಿ ಪ್ರಕಾಶ್ ಅಮ್ಮಣ್ಣಾಯ ತಮ್ಮ ಮಾತಿಗೆ ಅಲ್ಪ ವಿರಾಮ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv