Tag: ವರ್ತಕರು

  • ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    – ಹಣ್ಣು, ತರಕಾರಿ ವ್ಯಾಪಾರಿಗೆ 1 ಕೋಟಿ ರೂ. ಟ್ಯಾಕ್ಸ್‌, ನೋಟಿಸ್‌ ಕಂಡು ಹೌಹಾರಿದ ವ್ಯಕ್ತಿ

    ಬೆಂಗಳೂರು: ಬಡವರು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳೋಣ ಅಂತ ಕನಸು ಹೊಂದಿರುತ್ತಾರೆ. ಅದಕ್ಕಂತಲೇ ಬೇಕರಿ, ಕಾಂಡಿಮೆಂಟ್ಸ್, ಟೀ-ಕಾಫಿ, ತರಕಾರಿ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ಜಿಎಸ್‌ಟಿ (GST) ಗುನ್ನಾ ಕೊಟ್ಟಿದೆ.

    ಸಣ್ಣ-ಪುಟ್ಟ ಅಂಗಡಿಗಳು ಅಂದಮೇಲೆ ಅಲ್ಲಿ ಫೋನ್ ಪೇ, ಗೂಗಲ್ ಪೇ.. ಆನ್‌ಲೈನ್ ಪೇಮೆಂಟ್ ಮೋಡ್ ಇದ್ದೇ ಇರುತ್ತೆ, ವ್ಯಾಪಾರಿಗಳಿಗೂ ಆನ್‌ಲೈನ್ ಪೇಮೆಂಟ್ ಸ್ವೀಕರಿಸೋದು ಕಾಮನ್ ಆಗೋಗಿದೆ. ಆದ್ರೆ, ಅವ್ರು ಇದೆಂದೂ ಕಂಡಿರದ, ಕೇಳಿರದ ಶಾಕ್‌ಗೆ ಅಂಗಡಿ ಮಾಲೀಕರು (Traders) ಒಳಗಾಗಿದ್ದಾರೆ. ಆನ್ ಲೈನ್ ಪೇಮೆಂಟ್ ನೋಡಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 40 ರಿಂದ 60 ಲಕ್ಷ ರೂ. 1 ಕೋಟಿವರೆಗೂ ದಂಡ ವಿಧಿಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

    ವ್ಯಾಪಾರಸ್ಥರು ಗರಂ
    ಇನ್ನೂ ವಾಣಿಜ್ಯ ತೆರಿಗೆ ಇಲಾಖೆ ಕಳಿಸಿರೋ ನೋಟಿಸ್‌ಗೆ ವ್ಯಾಪಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. `ನಮ್ ಕಿಡ್ನಿ ಮಾರಿ.. ಅಂಗಡಿ ಅಡವಿಟ್ರು ಈ ದಂಡ ಕಟ್ಟೋಕೆ ಆಗಲ್ಲ’.. ಸಣ್ಣ-ಪುಟ್ಟ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ʻಪಬ್ಲಿಕ್ ಟಿವಿʼ ಬಳಿ ಅಳಲು ತೋಡಿಕೊಂಡಿದ್ದಾರೆ. ಅದರಂತೆ ರಾಜೇಂದ್ರ ಶೆಟ್ಟಿ, ಇವ್ರು ದೂರದ ಕುಂದಾಪುರದಿಂದ ಜೀವನ ಸಾಗಿಸಲು ಬೆಂಗಳೂರು ಸೇರಿ ಅನೇಕ ವರ್ಷಗಳೇ ಕಳೆದಿದೆ, ಕೆಂಗೇರಿಯಲ್ಲಿ ಕಾಂಡಿಮೆಂಟ್ಸ್ ಮಾಡಿಕೊಂಡು ಸಂಸಾರದ ಬಂಡಿದೂಡ್ತಿದ್ದಾರೆ. ಇವ್ರಿಗೆ 2021 ರಿಂದ ಇಲ್ಲಿವರೆಗೆ ಒಟ್ಟು 67 ಲಕ್ಷ ಟ್ಯಾಕ್ಸ್ ಬಾಕಿ ಇದೆ ಅಂತಾ ನೋಟಿಸ್ ನೀಡಿದ್ದಾರೆ. ಟ್ಯಾಕ್ಸ್ ಕಟ್ಟೋದಕ್ಕೆ ಹೇಗೆ ಆಗುತ್ತೆ ಬೇಕಾದ್ರೇ ನಮ್ಮನ್ನ ಸಾಯಿಸಿ ಅಂತ ಕಣ್ಣೀರಿಟ್ಟಿದ್ದಾರೆ.

    ಬನ್ನೇರುಘಟದಲ್ಲಿ ತರಕಾರಿ-ಹಣ್ಣಿನ ವ್ಯಾಪಾರಿ ವೀರಮಾದ ಮಾತನಾಡಿ, ಆನ್‌ಲೈನ್ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆ ವಾಣಿಜ್ಯ ತೆರಿಗೆ ಇಲಾಖೆಯವ್ರು ನೋಟಿಸ್ ನೀಡಿದ್ದು, ಬರೋಬ್ಬರಿ 1 ಕೋಟಿ 30 ಲಕ್ಷ ಹಣ ಕಟ್ಟುವಂತೆ ತಿಳಿಸಿದ್ದಾರೆ. ಇದರಿಂದ ಅಂಗಡಿ ಮಾಲೀಕ ಹೌಹಾರಿರಿದ್ದಾರೆ.

    ಬೇಕರಿ ವ್ಯಾಪಾರಿ ರಾಜೇಂದ್ರ ಪೂಜಾರಿ ಅನ್ನೋರು ಮಾತನಾಡಿ, ನಮಗೂ 33 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ನಾವು ಕಾಫಿ, ಟೀ-ಸಿಗರೇಟ್ ಮಾರಿಕೊಂಡಿರೋರು, ನಮ್ಮ ಅಂಗಡಿಯ ವ್ಯಾಲ್ಯೂನೇ 3 ಲಕ್ಷ ಆಗೋದಿಲ್ಲ. 33 ಲಕ್ಷ ಎಲ್ಲಿಂದ ತಂದು ಕೊಟ್ಟದಕ್ಕೆ ಆಗುತ್ತೆ? ನಾವು ಟ್ಯಾಕ್ಸ್ ಪೇ ಮಾಡೋದಕ್ಕೆ ಆಗೋಲ್ಲ, ದಯಾಮರಣ ಮಾಡಿಕೊಳ್ಳಬೇಕು ಅಷ್ಟೇ ಅಂತ ಗೋಳಾಡಿದ್ದಾರೆ.

    ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ
    ಇದೇ ವಿಚಾರವಾಗಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಿಂದ ಸ್ಪಷ್ಟೀಕರಣ ನೀಡಲಾಗಿದೆ. ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ, ವಾರ್ಷಿಕ 40 ಲಕ್ಷ ವಹಿವಾಟು ಮೀರಿದರೆ ಜಿಎಸ್‌ಟಿ ಫಿಕ್ಸ್ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೇಕರಿಗಳಲ್ಲಿ ಬ್ರೆಡ್ ಮೇಲೆ ಜಿಎಸ್‌ಟಿ ಇಲ್ಲ, ಬ್ರೆಡ್ ಹೊರತುಪಡಿಸಿ ಕುರುಕಲು ತಿಂಡಿಗಳಿಗೆ 5% ಜಿಎಸ್‌ಟಿ, ಯುಪಿಐ ಮೂಲಕ 40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿರುವ ವರ್ತಕರಿಗೆ ನೋಟಿಸ್ ನೀಡಿರೋ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

  • ಅಂತರ್ ರಾಜ್ಯ ವರ್ತಕರ ಹಾವಳಿ | ಸ್ಥಳೀಯ ವ್ಯಾಪಾರಿಗಳ ಆಕ್ರೋಶ – ಡಿ.16ಕ್ಕೆ ಬೀಳಗಿ ಬಂದ್‌ಗೆ ಕರೆ

    ಅಂತರ್ ರಾಜ್ಯ ವರ್ತಕರ ಹಾವಳಿ | ಸ್ಥಳೀಯ ವ್ಯಾಪಾರಿಗಳ ಆಕ್ರೋಶ – ಡಿ.16ಕ್ಕೆ ಬೀಳಗಿ ಬಂದ್‌ಗೆ ಕರೆ

    ಬಾಗಲಕೋಟೆ: ಅನ್ಯ ರಾಜ್ಯದ ವರ್ತಕರ  ಹಾವಳಿ ತಡೆಯಲು ಹಾಗೂ ಅವರಿಗೆ ನಿರ್ಬಂಧ ಹೇರಲು ಆಗ್ರಹಿಸಿ ಸ್ಥಳೀಯ ವ್ಯಾಪಾರಸ್ಥರು ಸೋಮವಾರ ಬಾಗಲಕೋಟೆ (Bagalkote) ಜಿಲ್ಲೆಯ ಬೀಳಗಿ (Bilagi) ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ.

    ಬೀಳಗಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ಥಳೀಯ ವ್ಯಾಪಾರಸ್ಥರು, ಬೀಳಗಿ ಪಟ್ಟಣದಲ್ಲಿ ಬೇರೆ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿ, ಎಲ್ಲ ರೀತಿಯ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳ ವ್ಯವಹಾರಕ್ಕೆ ಸಮಸ್ಯೆ ಆಗುತ್ತಿದೆ. ಬಂದ್ ಕರೆಗೆ ಸ್ಥಳೀಯ ವ್ಯಾಪಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

    ಮುಖಂಡ ಪ್ರವೀಣ್ ಗೌಡ ಪಾಟೀಲ್ ಮಾತನಾಡಿ, ಬೀಳಗಿ ಪಟ್ಟಣ ಹಿಂದುಳಿದ ತಾಲೂಕಾಗಿದ್ದು, ಪಟ್ಟಣದಲ್ಲಿ ಬಟ್ಟೆ, ಮೊಬೈಲ್ , ಹೋಟೆಲ್, ಕಿರಾಣಿ ಅಂಗಡಿ, ಹಾರ್ಡ್‌ವೇರ್‌, ಸ್ಟೀಲ್‌ ಸೇರಿದಂತೆ ಬಹುತೇಕ ಅಂಗಡಿಗಳನ್ನು ಅನ್ಯ ರಾಜ್ಯದವರೇ ಆಕ್ರಮಿಸಿದ್ದಾರೆ ಎಂದು ದೂರಿದರು.

    ರಾಜಸ್ಥಾನ (Rajasthan) ಮತ್ತು ಕೇರಳದ (Kerala) ವ್ಯಾಪಾರಿಗಳು ಇಲ್ಲಿಗೆ ಬಂದು ಅತೀ ಹೆಚ್ಚು ಬಾಡಿಗೆ ಮತ್ತು ಡೆಪಾಸಿಟ್ ನೀಡಿ ಮಳಿಗೆಗಳನ್ನು ಪಡೆಯುತ್ತಾರೆ. ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳಿಗೆ ಪೆಟ್ಟು ಬೀಳುತ್ತಿದೆ. ಅಷ್ಟೇ ಅಲ್ಲದೇ ಸ್ಥಳೀಯರು ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸೋಮವಾರ ಬೀಳಗಿ ಕ್ರಾಸ್ ನಿಂದ ಬಸವೇಶ್ವರ ವೃತ್ತದವರೆಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳ ವ್ಯಾಪಾರ ವಹಿವಾಟು ಬಂದ್ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

     

  • ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆ

    ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆ

    ಬೆಂಗಳೂರು: ನಗರದ ಅತಿಹೆಚ್ಚು ತೆರಿಗೆ ನೀಡೋ ಏರಿಯಾ ಎಲೆಕ್ಟ್ರಿಕಲ್, ಹಾರ್ಡ್‍ವೇರ್‌ಗೆ ಸಂಬಂಧಪಟ್ಟ ಪ್ರತಿಯೊಂದು ವಸ್ತುಗಳು ಸಿಗುವ ಎಸ್‍ಪಿ ರೋಡ್ (SP Road Bengaluru()  ಡಿಸೆಂಬರ್ 13ಕ್ಕೆ ಬಂದ್ (Bandh) ಆಗಲಿದೆ.

    ಬೆಂಗಳೂರಿನ (Bengaluru) ಇತಿಹಾಸದಲ್ಲೇ ಫಸ್ಟ್ ಟೈಮ್ ವಾಹನಗಳ ಬಿಡಿಭಾಗ ಖರೀದಿಗೆ ಇರುವ ಹಾಟ್‍ಸ್ಪಾಟ್ ನಗರದ ಎಸ್‍ಪಿ ರೋಡ್ ಬಂದ್ ಆಗಲಿದೆ. ಅದು ವ್ಯಾಪಾರ ಡಲ್, ವ್ಯಾಪಾರ ಆಗ್ತಿಲ್ಲ ಅಂತಲ್ಲ, ಬದಲಿಗೆ ಪ್ರತಿಭಟಿಸಲು. ಡಿಸೆಂಬರ್ 13ಕ್ಕೆ ಎಸ್‍ಪಿ ರೋಡ್ ಸಂಪೂರ್ಣ ಸ್ತಬ್ಧವಾಗಲಿದೆ. ಅಂದು ಹಾರ್ಡ್‍ವೇರ್‌, ಎಲೆಕ್ಟ್ರಿಕಲ್ ಸೇರಿ ಪ್ರತಿಯೊಂದು ಆರ್ಥಿಕ ಚಟುವಟಿಕೆಗಳನ್ನು ಬಂದ್ ಮಾಡಿ, ವಿಧಾನಸೌಧದತ್ತ (Vidhana Soudha) ಮೆರವಣಿಗೆ ಮಾಡಲಿದ್ದಾರೆ ಸಾವಿರಾರು ವರ್ತಕರು. ಜಲಮಂಡಳಿಯ ಚರಂಡಿ ನೀರು ಅಂಗಡಿಗಳ ಒಳಗೆ ನುಗ್ಗಿ ವ್ಯಾಪಾರಕ್ಕೆ ತೊಡಕಾಗಿದೆ. ಕಳೆದ ಮೂರು ವರ್ಷಗಳಿಂದ ಚರಂಡಿಯ ದುರ್ನಾತಕ್ಕೆ ಅಂಗಡಿಗಳಿಗೆ ಗ್ರಾಹಕರೇ ಬರ್ತಿಲ್ಲವಂತೆ. ಬಿಬಿಎಂಪಿ (BBMP) ಕಮಿಷನರ್ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲವಂತೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಎಸ್‍ಪಿರೋಡ್ ಬಂದ್ ಮಾಡಿ, ವಿಧಾನಸೌಧಕ್ಕೆ ವರ್ತಕರು ಮೆರವಣಿಗೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್‌ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ

    ಕೆ.ಆರ್ ಮಾರ್ಕೆಟ್‍ನಿಂದ (K.R Market) ಟೌನ್‍ಹಾಲ್ ಕಡೆ ಬರುವ ಎಸ್‍ಪಿ ರಸ್ತೆಯಲ್ಲಿ, ಜಲಮಂಡಳಿಯ ಒಳಚರಂಡಿ ಒಡೆದು ಹೋಗಿದೆ. ಇದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯ ವಾರ್ಡ್‍ನ ರಸ್ತೆ, ಚರಂಡಿಯ ಕಲುಷಿತ ನೀರು, ಅಂಗಡಿಗಳಿಗೆ ನುಗ್ಗುತ್ತೆ. ಇದ್ರಿಂದ ಗಬ್ಬುವಾಸನೆ ಬರ್ತಿದೆ. ಚರಂಡಿಯ ನೀರು, ಅಂಗಡಿ ಮಳಿಗೆ, ರಸ್ತೆಯ ತುಂಬೆಲ್ಲಾ ನಿಂತಿರೋದ್ರಿಂದ ವ್ಯಾಪಾರಸ್ಥರು ಅಂಗಡಿಗಳಿಗೆ ಬರೋಕೆ ಆಗ್ತಿಲ್ಲ. ಪ್ರತಿನಿತ್ಯ ಲಕ್ಷಾಂತರ ವ್ಯಾಪಾರ ವಹಿವಾಟು ಆಗ್ತಿದ್ದ ನಮಗೆ, ಇದೀಗಾ ವ್ಯಾಪಾರವಿಲ್ಲದೇ ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿದ್ದೇವೆ. ಕ್ಷೇತ್ರದ ಶಾಸಕರನ್ನು ಕೇಳಿದ್ರೆ ನಮಗೆ ನೀವು ವೋಟ್ ಹಾಕಿಲ್ಲ ಅಂತಾರೆ ಅಂತ ಆಕ್ರೋಶ ಹೊರಹಾಕ್ತಿದ್ದಾರೆ. ಇದನ್ನೂ ಓದಿ: ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ

    ಈ ರಸ್ತೆಯ ಪಕ್ಕದಲ್ಲೇ ಪಾರ್ಕ್ ಇದ್ದು ಅದ್ವಾನಗೊಂಡಿದೆ. ಫುಟ್‍ಪಾತ್ ಮೇಲೆನೇ ಜನ ಮೂತ್ರ ವಿಸರ್ಜನೆ ಮಾಡ್ತಾರೆ. ಪಾದಾಚಾರಿಗಳ ಉಪಯೋಗಕ್ಕೂ ಈ ಫುಟ್‍ಪಾತ್ ಬಳಕೆಯಾಗ್ತಿಲ್ಲ. ಅಂಗಡಿಗಳ ಮುಂದಿರುವ ಚರಂಡಿಗಳಲ್ಲಿ ಹಲವು ವರ್ಷಗಳಿಂದ ಹೂಳನ್ನು ತೆಗೆಯದೇ ಇರೋದ್ರಿಂದ ಅಲ್ಪ ಮಳೆಯಾದ್ರೂ ಮೋರಿ ಉಕ್ಕಿ ಹರಿಯುತ್ತೆ. ಈ ಬಗ್ಗೆ ಗಮನ ಹರಿಸಿ ಪರಿಹಾರ ಮಾಡಿಕೊಡಬೇಕೆಂದು ವರ್ತಕರು ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಲ್ ಮಾಡಿದ್ರೆ ಮನೆ ಬಾಗಿಲಿಗೆ ತಲುಪುತ್ತೆ ದಿನಸಿ, ತರಕಾರಿ – ತುಮಕೂರು ವರ್ತಕರಿಂದ ಹೊಸ ಆಫರ್

    ಕಾಲ್ ಮಾಡಿದ್ರೆ ಮನೆ ಬಾಗಿಲಿಗೆ ತಲುಪುತ್ತೆ ದಿನಸಿ, ತರಕಾರಿ – ತುಮಕೂರು ವರ್ತಕರಿಂದ ಹೊಸ ಆಫರ್

    ತುಮಕೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅತಿವೇಗವಾಗಿ ಹರಡುತ್ತಿದೆ. ಹೀಗಾಗಿ ತುಮಕೂರಿನಲ್ಲಿ ವರ್ತಕರು ಕೊರೊನಾ ವಿರುದ್ಧ ವಿಭಿನ್ನವಾಗಿ ಹೋರಾಟಕ್ಕಿಳಿದ್ದಿದ್ದಾರೆ. ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಜನಸಂದಣಿ ತಪ್ಪಿಸಲು ವ್ಯಾಪಾರಿಗಳು ಹೊಸ ಮಾರ್ಗ ಕಂಡು ಕೊಂಡಿದ್ದಾರೆ.

    ಬೀದಿ ವ್ಯಾಪಾರಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಕೊರೊನಾ ವಿರುದ್ಧ ಹೋರಾಟಕ್ಕೆ ಇಳಿದಿದ್ದು, ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿಗಳು ಸಣ್ಣ ಸೇವೆಯನ್ನ ಆರಂಭಿಸಿದ್ದಾರೆ. ಈಗ ಪಟ್ಟಣದ ನಿವಾಸಿಗಳು ಹೂ, ಹಣ್ಣು, ತರಕಾರಿಗೋಸ್ಕರ ಯಾವ ಮಾರ್ಕೆಟ್‍ಗೂ ಹೋಗುವಾಗಿಲ್ಲ. ಹೀಗಾಗಿ ನಮಗೆ ಒಂದೇ ಒಂದು ಕಾಲ್ ಮಾಡಿದರೆ ಸಾಕು ಅವರಿಗೇನು ಬೇಕೋ ಅದನ್ನೆಲ್ಲಾ ಅವರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ ಎಂದು ರಸ್ತೆ ಬದಿ ವ್ಯಾಪಾರಿ ರಮೇಶ್ ಹೇಳಿದ್ದಾರೆ.

    ಈ ಸೇವೆಯನ್ನ ತುರುವೇಕೆರೆ ಪಟ್ಟಣದಾದ್ಯಂತ ಮಾಡುತ್ತಿದ್ದು, ಸುಮಾರು 45 ರಿಂದ 50 ವ್ಯಾಪಾರಿಗಳು ತಮ್ಮ ತಮ್ಮ ನಂಬರ್‌ಗಳನ್ನ ಸಾರ್ವಜನಿಕರಿಗೆ ಕೊಟ್ಟಿದ್ದಾರೆ. ನಂತರ ಅವರು ಕರೆದಲ್ಲಿಗೆ, ಕೇಳಿದ್ದನ್ನ ತಲುಪಿಸುತ್ತಿದ್ದಾರೆ. ಇವರು ಶಿಪ್ಪಿಂಗ್ ಚಾರ್ಜ್ ಮಾಡಲ್ಲ. ಕೇವಲ ಆ ವಸ್ತುವಿನ ಬೆಲೆ ಎಷ್ಟಿದ್ಯೋ ಅದನ್ನ ಮಾತ್ರ ಪಡೆಯುತ್ತಾರೆ ಎಂದು ಗೃಹಿಣಿ ಶಾಂತಮ್ಮ ತಿಳಿಸಿದ್ದಾರೆ.

    ಈ ಸೇವೆಯನ್ನ ಪ್ರಾರಂಭ ಮಾಡಿ ಕೇವಲ ಒಂದು ದಿನ ಆಗಿದೆ. ಆಗಲೇ ಬೀದಿಬದಿ ವ್ಯಾಪಾರಿಗಳ ಕಾರ್ಯಕ್ಕೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಕೊರೊನಾ ನಿಯಂತ್ರಣ ಮಾಡಬಹುದು. ಅಲ್ಲದೇ ಜನರೂ ಕೂಡ ಇವರಿಗೆ ಸಹಕಾರ ನೀಡಬೇಕು ಎಂದು ಮಹಿಳೆಯರು ಹೇಳಿದ್ದಾರೆ.

  • ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ – ಕ್ವಿಂಟಾಲ್ ಗಟ್ಟಲೆ ಬೆಳೆ ತಿಪ್ಪೆಗೆ ಸುರಿದ ರೈತರು

    ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ – ಕ್ವಿಂಟಾಲ್ ಗಟ್ಟಲೆ ಬೆಳೆ ತಿಪ್ಪೆಗೆ ಸುರಿದ ರೈತರು

    ರಾಯಚೂರು: ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಟೊಮೆಟೋ ಬೆಳೆಗೆ ಸೂಕ್ತ ಬೆಲೆ ಸಿಗದೆ ರೋಸಿಹೋದ ರೈತರು ನಗರದ ಮಾರುಕಟ್ಟೆ ಬಳಿ ತಿಪ್ಪೆಗೆ ಸುರಿದು ಹೋಗಿರುವ ಘಟನೆ ನಡೆದಿದೆ. ಬೆಲೆ ಕುಸಿತ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತಂದ ಟೊಮೆಟೋಗಳನ್ನು ಬೀದಿಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಖರೀದಿ ನಡೆಯುತ್ತದೆ. ಕೆಜಿ ಟೊಮೆಟೋಗೆ 2ರೂ. ನಂತೆ ವರ್ತಕರು ದರ ನಿಗದಿ ಮಾಡಿದ್ದಾರೆ. ಆದರೆ ಕನಿಷ್ಠ 3 ರೂಪಾಯಿ ಕೊಡುವಂತೆ ಮನವಿ ಮಾಡಿದರೂ ವರ್ತಕರು ಮಣೆ ಹಾಕಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ಮಾರಾಟ ಮಾಡದೇ ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲ ರೈತರು ತಿಪ್ಪೆಗೆ ಸುರಿದರೆ ಇನ್ನೂ ಕೆಲ ರೈತರು ಅಕ್ಕಪಕ್ಕದ ಜನರಿಗೆ, ಕೂಲಿಕಾರ್ಮಿಕರಿಗೆ, ಹೋಟೆಲ್ ಮಾಲೀಕರಿಗೆ ಉಚಿತವಾಗಿ ಟೊಮೆಟೋ ಹಂಚಿದ್ದಾರೆ. ಬಳಿಕ ಸುಮಾರು ಮೂರ್ನಾಲ್ಕು ಕ್ವಿಂಟಲ್ ಉಳಿದಿದ್ದು ಮಾರುಕಟ್ಟೆ ಎದುರೇ ರಸ್ತೆಗೆ ಎಸೆದಿದ್ದಾರೆ. ಒಂದು ಎಕರೆ ಟೊಮೆಟೋ ಬೆಳೆಯಲು ರೈತರು ಕನಿಷ್ಠ 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ.

    ಹಗಲಿರುಳೆನ್ನದೆ ನೀರು ಕಟ್ಟಿದ್ದಾರೆ. ಮುದುರು, ಬೂದುರೋಗದ ಕಾಟವಿದ್ದು ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸಬೇಕಿದೆ. ಇಲ್ಲವಾದರೆ ಬೆಳೆಯೆ ಕೈಗೆಟುಕುವುದಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೇ ಇಲ್ಲವಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೋ 10 ರಿಂದ 15 ರೂಪಾಯಿ ಕೆ.ಜಿ ಇದೆ. ಮಾರ್ಚ್ ತಿಂಗಳವರೆಗೂ ಟೊಮೆಟೋ ಬೆಳೆಯ ಸ್ಥಳೀಯ ಸೀಜನ್ ಇದ್ದು ಸದ್ಯಕ್ಕೆ ಬೆಲೆ ಏರಿಕೆ ಸಾಧ್ಯತೆಗಳಿಲ್ಲ.

  • 1 ಲಕ್ಷ ರೂ. ಕೊಡಿ, 5 ಲಕ್ಷ ನಕಲಿ ನೋಟು ಕೊಡ್ತೀವಿ: ವಂಚಕರಿಬ್ಬರ ಬಂಧನ

    1 ಲಕ್ಷ ರೂ. ಕೊಡಿ, 5 ಲಕ್ಷ ನಕಲಿ ನೋಟು ಕೊಡ್ತೀವಿ: ವಂಚಕರಿಬ್ಬರ ಬಂಧನ

    – ಬಂಧಿತರಿಂದ 25 ಲಕ್ಷ ಮೌಲ್ಯದ ಒಟ್ಟು 6 ಬಂಡಲ್‍ಗಳು ವಶ

    ಬಳ್ಳಾರಿ: ಅಸಲಿ 1 ಲಕ್ಷ ರೂಪಾಯಿ ಕೊಟ್ಟರೆ, ನಕಲಿ 5 ಲಕ್ಷ ರೂಪಾಯಿ ಕೊಡುವುದಾಗಿ ವಂಚಿಸುತ್ತಿದ್ದ ಆರೋಪಿಗಳನ್ನು ಹಗರಿಬೊಮ್ಮನಹಳ್ಳಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾನ್ವಿಯ ರಾಜೇಂದ್ರ ಹಾಗೂ ಯಲಬುರ್ಗಾದ ಅಂದಾನಿಗೌಡ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಹಗರಿಬೊಮ್ಮನಹಳ್ಳಿಯ ಹಲವು ವರ್ತಕರಿಗೆ ಕರೆ ಮಾಡಿ ನೀವು 1 ಲಕ್ಷ ರೂಪಾಯಿ ಅಸಲಿ ನೋಟುಗಳನ್ನು ಕೊಡಿ, ನಾವು ನಿಮಗೆ 5 ಲಕ್ಷ ರೂಪಾಯಿ ನಕಲಿ ನೀಡುತ್ತೇವೆ ಎಂದು ವಂಚಿಸುತ್ತಿದ್ದರು. ಈ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸುವಲ್ಲಿ ಸಫಲರಾಗಿದ್ದಾರೆ.

    ಬಂಧಿತರಿಂದ 25 ಲಕ್ಷ ಮೌಲ್ಯದ ಒಟ್ಟು 6 ಬಂಡಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ಒಟ್ಟು 1.5 ಕೋಟಿ ರೂಪಾಯಿ ಆಗಿದ್ದು, ಇದಲ್ಲದೇ ಒಂದು ಬೈಕ್ ಸೇರಿದಂತೆ 3 ಮೊಬೈಲ್‍ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಖೋಟಾ ನೋಟು ಚಲಾವಣೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ವ್ಯಾಪಕ ವಿಚಾರಣೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv