Tag: ವಯಾಗ್ರ ಗಿಡಮೂಲಿಕೆ

  • ವಯಾಗ್ರ ಗಿಡಮೂಲಿಕೆಗಾಗಿ ಮುಗಿಬಿದ್ದ ಜನ- ಸಂಶೋಧನಾ ವರದಿಯಲ್ಲಿ ಆತಂಕಕಾರಿ ವಿಷಯ

    ವಯಾಗ್ರ ಗಿಡಮೂಲಿಕೆಗಾಗಿ ಮುಗಿಬಿದ್ದ ಜನ- ಸಂಶೋಧನಾ ವರದಿಯಲ್ಲಿ ಆತಂಕಕಾರಿ ವಿಷಯ

    ನೈನಿತಾಲ್: ಉತ್ತರಾಖಂಡ ಅರಣ್ಯ ಪ್ರದೇಶದಲ್ಲಿ ಲಭ್ಯವಾಗುವ ವಯಾಗ್ರ ಗಿಡಮೂಲಿಕೆಗೆ ಜನರು ಮುಗಿಬಿದ್ದಿದ್ದು, ಅರಣ್ಯ ಇಲಾಖೆಯ ಸಂಶೋಧನಾ ವರದಿಯಲ್ಲಿ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ.

    ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ ಹೊಂದಿರುವ ವಯಾಗ್ರ ಗಿಡಿಮೂಲಿಕೆಯನ್ನು ತೆಗೆಯಲು ಜನರು ಗುಂಪು ಗುಂಪುಗಳಾಗಿ ಹಿಮಾಲಯ ಪರ್ವತ ಪ್ರದೇಶದತ್ತ ಆಗಮಿಸುತ್ತಿದ್ದಾರೆ. ಹಣದ ಆಸೆಗಾಗಿ ಪರ್ವತ ಪ್ರದೇಶವನ್ನು ಅಗೆದು ಗಿಡಮೂಲಿಕೆಗಾಗಿ ಅರಣ್ಯ ನಾಶಕ್ಕೆ ಮುಂದಾಗುತ್ತಿದ್ದಾರೆ ಎಂದು ಸಂಶೋಧನಾ ವರದಿ ಆತಂಕ ವ್ಯಕ್ತಪಡಿಸಿದೆ.

    ಹಿಮಾಲಯದ ವಯಾಗ್ರ ಗಿಡಮೂಲಿಕೆಯನ್ನು ಅವೈಜ್ಞಾನಿಕ ರೀತಿಯಲ್ಲಿ ತೆಗೆಯಲಾಗುತ್ತಿದೆ. ಇದರಿಂದ ಹಿಮಾಲಯದ ಆಯುರ್ವೇದಿಕ ವನ್ಯಸಂಪತ್ತಿನ ಮೇಲೆ ನೇರ ಪರಿಣಾಮ ಬೀರಲಿದೆ. ಗಿಡಮೂಲಿಕೆಗಾಗಿ ಪರ್ವತ ಪ್ರದೇಶಗಳಲ್ಲಿ ಜನ ವಾಸಿಸಲು ಆರಂಭಿಸಿದ್ದು, ಕಟ್ಟಿಗೆಗಳ ದಹನದಿಂದ ಕಾರ್ಬನ್ ಪ್ರಮಾಣ ಹೆಚ್ಚಾಗುತ್ತಿದೆ. ಪರ್ವತ ಪ್ರದೇಶದ ಪಿತೋರ್‍ಗಢ ಜಿಲ್ಲೆಯ ಧಾರಚೂಲಾ ವ್ಯಾಪ್ತಿಯ 11 ಗ್ರಾಮ ಗಳಲ್ಲಿ ಮೇ ನಿಂದ ಜೂನ್ ನಲ್ಲಿ ಅಂದಾಜು 7.1 ಕೋಟಿ ರೂ.ವ್ಯವಹಾರ ನಡೆದಿದೆ.

    ಇಲ್ಲಿ ದೊರೆಯುವ ವಯಾಗ್ರ ಗಿಡಮೂಲಿಕೆ ವಿಶ್ವ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ ಅಂದಾಜು 7 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಗಿಡಮೂಲಿಕೆಗಾಗಿ ಹಿಮಾಲಯ ಪ್ರದೇಶಗಳಲ್ಲಿ ಜನರು ಟೆಂಟ್ ಹಾಕಿಕೊಂಡು ಉಳಿಯುತ್ತಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಸುಮಾರು 72 ಸಾವಿರ ಕೆ.ಜಿ. ಕಟ್ಟಿಗೆ ದಹಿಸಿದ್ದರಿಂದ ಇಂಗಾಲದ ಪ್ರಮಾಣ ಹೆಚ್ಚಳವಾಗಿದೆ. ಅವೈಜ್ಞಾನಿಕವಾಗಿ ಮಣ್ಣು ಅಗೆದು ಗಿಡಮೂಲಿಕೆ ತೆಗೆಯುತ್ತಿದ್ದ, ಮುಂದಿನ ದಿನಗಳಲ್ಲಿ ಈ ತರಹದ ಮೂಲಿಕೆ ಫೋಟೋಗಳಲ್ಲಿ ಮಾತ್ರ ನೋಡುವಂತೆ ಆಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸಂಶೋಧನಾ ವರದಿಯಲ್ಲಿ ತಿಳಿಸಿದೆ.

    ಗ್ರಾಮಗಳ ನಡುವೆ ಕಿತ್ತಾಟ:
    ಈ ಹಿಂದೆ ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದರು. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದರು. ಪಿತೋರ್‍ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು ಮುನ್ಸಿಯರಿ ಜನರು ಸಂಗ್ರಹಿಸುತ್ತಾರೆ. ಕೀಡಾ ಜಾಡಿ ಅಥವಾ ಹಿಮಾಲಯದ ವಯಾಗ್ರಾ ಸಸ್ಯ ಕಾಮೋತ್ತೇಜಕ ಮಾತ್ರೆಗಳ ರೀತಿಯಲ್ಲಿ ಕೆಲಸ ಮಾಡುತ್ತದೆ.

    ಬುಯಿ ಮತ್ತು ಪಾಟೋ ಗ್ರಾಮಗಳ ಜನರು ರಾಲಂ ಹುಲ್ಲುಗಾವಲು ಪ್ರದೇಶ ತಮಗೇ ಸೇರಿದ್ದು ಎಂದು ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ವಯಾಗ್ರವನ್ನು ಯಾರೂ ಮುಟ್ಟದಂತೆ ಕಾವಲು ಕಾಯುತ್ತಿದ್ದರು. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪರಸ್ಪರ ಒಮ್ಮತದಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಜಿಲ್ಲಾಡಳಿತವು ಎರಡೂ ಗ್ರಾಮದ ಜನರಿಗೆ ಸೂಚನೆ ನೀಡಿತ್ತು. ಸ್ವತಃ ಜಿಲ್ಲಾಧಿಕಾರಿಗಳು ಎರಡೂ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಕಿತ್ತಾಟ ನಿಲ್ಲಿಸುವಂತೆ ಮನವಿ ಮಾಡಿದ್ದರು.