Tag: ವಯನಾಡು ದುರಂತ

  • ವಯನಾಡು ದುರಂತ: ಸಹಾಯಹಸ್ತ ನೀಡಲು ಉದ್ಯಮಿಗಳಿಗೆ ಸಚಿವ ಎಂಬಿ ಪಾಟೀಲ್ ಮನವಿ

    ವಯನಾಡು ದುರಂತ: ಸಹಾಯಹಸ್ತ ನೀಡಲು ಉದ್ಯಮಿಗಳಿಗೆ ಸಚಿವ ಎಂಬಿ ಪಾಟೀಲ್ ಮನವಿ

    ಬೆಂಗಳೂರು: ಕಂಡುಕೇಳರಿಯದ ಭೂಕುಸಿತದಿಂದ ನಲುಗಿರುವ ಕೇರಳದ ವಯನಾಡ್ ಜನತೆಯ ನೆರವಿಗೆ ರಾಜ್ಯದ ಕೈಗಾರಿಕೋದ್ಯಮಿಗಳು ಧಾವಿಸಿ, ಸಹಾಯಹಸ್ತ ಚಾಚಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮನವಿ ಮಾಡಿದ್ದಾರೆ.

    ಈ ಬಗ್ಗೆ ಶನಿವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಸಂಬಂಧ ಯಾವುದೇ ಮಾಹಿತಿ/ಮಾರ್ಗದರ್ಶನ ಬೇಕಾದಲ್ಲಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರನ್ನು ದೂರವಾಣಿ ಸಂಖ್ಯೆ 080-22386796 ಅಥವಾ ಮಿಂಚಂಚೆ officeofdicommissioner@gmail.com ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

    ವಯನಾಡು ದುರಂತದಲ್ಲಿ 412 ಮಂದಿ ಜೀವ ಕಳೆದುಕೊಂಡಿದ್ದು, ಇನ್ನೂ 138 ಜನ ಕಣ್ಮರೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯಮಲೋಕವು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಹೇಳಿದ್ದಾರೆ.

    ಉದ್ಯಮಿಗಳು ಸಂತ್ರಸ್ತರ ಪುನರ್ವಸತಿ, ಅಗತ್ಯ ವಸ್ತುಗಳ ಪೂರೈಕೆ, ಮನೆಗಳ ಪುನರ್‌ನಿರ್ಮಾಣ, ಮೂಲಸೌಕರ್ಯ, ಜೀವನೋಪಾಯಕ್ಕೆ ನೆರವು, ವೈದ್ಯಕೀಯ ನೆರವು ಹೀಗೆ ಯಾವ ರೂಪದಲ್ಲಾದರೂ ಸಹಾಯ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.

    ನೆರೆಯ ರಾಜ್ಯವು ಈಗ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ಆ ರಾಜ್ಯಕ್ಕೆ ನೆರವು ನೀಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ವಿವರಿಸಿದ್ದಾರೆ.

  • ವಯನಾಡು ದುರಂತದಿಂದ ಎಚ್ಚೆತ್ತ ಸರ್ಕಾರ – ಅಕ್ರಮ ರೆಸಾರ್ಟ್, ಹೋಮ್‌ ಸ್ಟೇ, ಬಡಾವಣೆ ತೆರವಿಗೆ ಸೂಚನೆ

    ವಯನಾಡು ದುರಂತದಿಂದ ಎಚ್ಚೆತ್ತ ಸರ್ಕಾರ – ಅಕ್ರಮ ರೆಸಾರ್ಟ್, ಹೋಮ್‌ ಸ್ಟೇ, ಬಡಾವಣೆ ತೆರವಿಗೆ ಸೂಚನೆ

    ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ 2015ರ ನಂತರದ ಅರಣ್ಯ ಒತ್ತುವರಿ (Forest Encroachment) ತೆರವಿಗೆ ಮತ್ತು ಅನಧಿಕೃತ ಹೋಮ್‌ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮಕ್ಕೆ ಅರಣ್ಯ ಸಚಿವರ ಈಶ್ವರ್ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ.

    ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದಲ್ಲಿ 2015 ರಿಂದ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

    ಪಶ್ಚಿಮ ಘಟ್ಟದ ಎಲ್ಲ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಬೇಕು. ಒಂದು ತಿಂಗಳ ಒಳಗಡೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ. ಇದನ್ನೂ ಓದಿ: Electoral Bonds | ತನಿಖೆಗೆ ಎಸ್‌ಐಟಿ ರಚನೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ

    ರಾಜ್ಯದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 11 ಅಮೂಲ್ಯ ಜೀವಗಳು ಬಲಿಯಾಗಿದ್ದರೆ, ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ 250 ಮುಗ್ಧ ಜನರು ಮೃತಪಟ್ಟಿದ್ದು 200ಕ್ಕೂ ಹೆಚ್ಚು ಜನರು ಕಣ್ಮರೆಯಾಗಿರುವುದು ಅತ್ಯಂತ ನೋವಿನ ಸಂಗತಿ. ಈ ದುರಂತಗಳು ನಮಗೂ ಎಚ್ಚರಿಕೆಯ ಗಂಟೆಯಾಗಿದೆ.

    ಪಶ್ಚಿಮ ಘಟ್ಟದ ಉಳಿವು ಹಿಂದೆಂಗಿಂತಲೂ ಇಂದು ಹೆಚ್ಚಾಗಿದೆ. ಸ್ವಾಭಾವಿಕ, ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದೂ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

    ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವುದೂ ಇಂತಹ ದುರಂತಗಳಿಗೆ ಪೂರಕವಾಗಿದೆ ಎಂದು ಉಲ್ಲೇಖಿಸಿದ್ದು ಚಾರಣಕ್ಕೂ ಕಡಿವಾಣ ಬೀಳುವ ಸಾಧ್ಯತೆ ಇದೆ.