Tag: ವನ್ಯ ಜೀವಿಗಳು

  • ವನ್ಯಜೀವಿಗಳ ಅಂಗಾಂಗಳ ಅಕ್ರಮ ಸಾಗಾಟ ಆರೋಪಿಗಳ ಬಂಧನ

    ವನ್ಯಜೀವಿಗಳ ಅಂಗಾಂಗಳ ಅಕ್ರಮ ಸಾಗಾಟ ಆರೋಪಿಗಳ ಬಂಧನ

    ವಿಜಯಪುರ: ಅಕ್ರಮವಾಗಿ ವನ್ಯಜೀವಿಗಳ (Wild Animals) ಅಂಗಾಂಗಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಂದಗಿ (Sindagi) ತಾಲ್ಲೂಕಿನ ಬಾಗಲೂರ (Bagalur) ಬಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಮಹಾರಾಷ್ಟ್ರದ (Maharashtra) ಅಸವಲದಾರಾ ಗ್ರಾಮದ ಪವನ್ ಹಾಗೂ ಭೋಸಲೆ ಎಂದು ತಿಳಿದುಬಂದಿದೆ. ಆರೋಪಿಗಳಿಂದ ಕೃಷ್ಣಮೃಗದ ಕೊಂಬು, ತಲೆಬುರುಡೆ, ಚರ್ಮಗಳು ಹಾಗೂ ವಿವಿಧ ಜಾತಿಯ ವನ್ಯ ಪ್ರಾಣಿಗಳ ಅಂಗಾಂಗಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

    ಆರೋಪಿಗಳ ಬಳಿ ಏನೆಲ್ಲ ಇತ್ತು?
    807 ಉಡದ ಶಿಶ್ನಗಳು, 116 ಇಂದ್ರಜಾಲಗಳು, 2 ಕಾಡು ಬೆಕ್ಕಿನ ಪಾದಗಳು, 2 ಕಾಡು ಬೆಕ್ಕು ಉಗುರುಗಳು, 3 ಕರಡಿಯ ಉಗುರುಗಳು, 28 ನೀರು ಪಕ್ಷಿಗಳ ಕಾಲುಗಳು, 2 ಉಡದ ಕಾಲುಗಳು, 73 ಗೂಬೆಯ ಪುಕ್ಕಗಳು, 4 ಕರಡಿಯ ಹಲ್ಲುಗಳು, 32 ಮುಂಗಸಿಯ ಕಾಲುಗಳು, 7 ಮುಂಗುಸಿಯ ದವಡೆಗಳು, 16 ಮುಂಗುಸಿಯ ಚರ್ಮದಿಂದ ಮಾಡಿದ ಉಂಡೆಗಳು, 26 ಕಾಡು ಹಂದಿಯ ಹಲ್ಲುಗಳು, 3 ಅಪರಿಚಿತ ಕಾಡು ಪ್ರಾಣಿಯ ಉಗುರುಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸಂಬಂಧ ಸಿಂದಗಿ ಸಿಐಡಿ ಅರಣ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

  • ಬೆಂಗ್ಳೂರಿನ ಮೇಲ್ಸೇತುವೆ ಕೆಳಗೆ ಪ್ರತ್ಯಕ್ಷವಾದ ಕಾಡಾನೆ, ಹುಲಿರಾಯ

    ಬೆಂಗ್ಳೂರಿನ ಮೇಲ್ಸೇತುವೆ ಕೆಳಗೆ ಪ್ರತ್ಯಕ್ಷವಾದ ಕಾಡಾನೆ, ಹುಲಿರಾಯ

    ಬೆಂಗಳೂರು: ಹುಲಿರಾಯನ ಗಂಭೀರ ನೋಟ, ಮರಿ ಆನೆಯೊಂದಿಗೆ ದೃಢವಾಗಿ ನಿಂತಿರುವ ಬೃಹತ್ ತಾಯಿ ಆನೆ, ಪೊದೆಯಿಂದ ಹೊರಬರುತ್ತಿರುವ ಹುಲಿ ಇದೆಲ್ಲಾ ಬೆಂಗಳೂರಲ್ಲೇ ನೀವು ಕಾಣಬಹುದು.

    ಹೌದು. ಸಿಲಿಕಾನ್ ಸಿಟಿಯಲ್ಲಿ ರಾಜ್ಯ ವನ್ಯ ಸಂಪತ್ತಿನ ಅನಾವರಣವಾಗಿದೆ. ರಾಜ್ಯದ ಹೆಮ್ಮೆಯ ವನ್ಯಜೀವಿಗಳಾದ ಹುಲಿ, ಆನೆಯ ಬೃಹತ್ ಪ್ರತಿಕೃತಿಗಳನ್ನು ತಯಾರಿಸಿ, ನಗರದ ಮೇಲ್ಸೇತುವೆಯ ಅಡಿಭಾಗವನ್ನು ಸುಂದರವಾದ ವನ್ಯಜೀವಿ ತಾಣವಾಗಿ ಬದಲಾಯಿಸಲಾಗಿದೆ. ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಬರುವ ವೀರನಪಾಳ್ಯ ಸರ್ಕಲ್‍ನಲ್ಲಿ ಸುಮಾರು ಐದು ಸಾವಿರ ಕೆ.ಜಿ ಕಬ್ಬಿಣ ಬಳಸಿ ಈ ಪ್ರಾಣಿ ಪ್ರತಿಕೃತಿಗಳನ್ನು ಮಾಡಲಾಗಿದೆ.

    ವಾಹನ ಸವಾರರಿಗೆ ಚಲಿಸುವ ರೀತಿಯಲ್ಲಿ ಕಾಣುವಂತೆ, ಬಳಿಕ ಮಾಯವಾಗುವಂತೆ ಭಾಸವಾಗುವ ರೀತಿಯ ವಿಶಿಷ್ಟ ವಿನ್ಯಾಸದಲ್ಲಿ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಫ್ಲೈಓವರ್ ಮೇಲ್ಭಾಗವನ್ನು ಸಹ ಕಂದು ಬಿಳಿ ಬಣ್ಣದ ಡಿಸೈನ್ ಮಾಡಲಾಗಿದೆ. ವೈಲ್ಡ್ ಕರ್ನಾಟಕ ಸಿನಿಮಾದಿಂದ ಪ್ರೇರೇಪಿತರಾಗಿ, ಎಲ್ ಆಂಡ್ ಟಿ ಟೆಕ್ನಾಲಜಿ ಸಂಸ್ಥೆ, ಇಂಡಿಯಾ ರೈಸಿಂಗ್ ಟ್ರಸ್ಟ್, ಅಗ್ಲಿ ಇಂಡಿಯನ್ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಈ ವೃತ್ತವನ್ನು ಅಭಿವೃದ್ಧಿ ಮಾಡಲಾಗಿದೆ.

    ಎಲ್ಲಾ ಮೇಲ್ಸೇತುವೆಯಂತೆ ಧೂಳು, ಕಸದ ರಾಶಿಯಿಂದ ತುಂಬಿ ಹೋಗಿದ್ದ ಈ ರಸ್ತೆಯನ್ನು ಸ್ವಚ್ಛ ಮಾಡಿ, ಬಣ್ಣ ಮಾಡಲಾಗಿದೆ. ಪ್ಲಾಸ್ಟಿಕ್ ಮರುಬಳಕೆಯಿಂದ ಮಾಡಿದ ಕುರ್ಚಿಗಳು, ಕಾರ್ಬನ್ ಸ್ಟೋನ್‍ಗಳನ್ನು ಬಳಸಿ ಪ್ರಯಾಣಿಕರು, ಪಾದಾಚಾರಿಗಳು ಕುಳಿತು ಮಾತನಾಡಲು, ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ರಾಜ್ಯದ ವನ್ಯ ಸಂಪತ್ತಿನ ವಿವರಣೆಯನ್ನೂ ಅಲ್ಲಲ್ಲಿ ಬರೆಯಲಾಗಿದೆ. ಒಟ್ಟು 17 ತಿಂಗಳಲ್ಲಿ ಈ ಪ್ರಾಜೆಕ್ಟ್ ತಯಾರಿಸಲಾಗಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು.

    ಇದೊಂದೆ ಅಲ್ಲ ನಗರದ 36 ಮೇಲ್ಸೆತುವೆಗಳ ಅಡಿಭಾಗವನ್ನು ಈ ರೀತಿಯಲ್ಲಿ ಅಭಿವೃದ್ಧಿ ಮಾಡಲು ಪಾಲಿಕೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಚಿಂತನೆ ನಡೆಸಿವೆ. ಸದ್ಯ ಅದ್ಧೂರಿಯಾಗಿ ಕಂಗೊಳಿಸ್ತಿರೋ ವೀರನಪಾಳ್ಯ ವೃತ್ತ ಪ್ರಯಾಣಿಕರನ್ನು ತಿರುಗಿ ನೋಡುವಂತೆ ಕಣ್ಮನ ಸೆಳೆಯುತ್ತಿದೆ.

  • ವನ್ಯ ಜೀವಿಗಳ ಪಾಲಿಗೆ ಸೆರೆಮನೆಯಾದ ಆಡುಮಲ್ಲೇಶ್ವರ ಕಿರುಮೃಗಾಲಯ

    ವನ್ಯ ಜೀವಿಗಳ ಪಾಲಿಗೆ ಸೆರೆಮನೆಯಾದ ಆಡುಮಲ್ಲೇಶ್ವರ ಕಿರುಮೃಗಾಲಯ

    ಚಿತ್ರದುರ್ಗ: ಮೃಗಾಲಯ ಅಂದ್ರೆ ಅಲ್ಲಿ ಕಾಡು ಪ್ರಾಣಿಗಳು ಸ್ವತಂತ್ರವಾಗಿ ಇತರೆ ಪ್ರಾಣಿಗಳ ಭಯವಿಲ್ಲದೇ ಅವುಗಳದ್ದೇ ಕಾರಿಡಾರ್‍ನಲ್ಲಿ ಸ್ವತಂತ್ರವಾಗಿ ಓಡಾಡುತ್ತ, ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯ ಮಾತ್ರ ಪ್ರಾಣಿಗಳ ಪಾಲಿಗೆ ಜೈಲು ಎನಿಸಿದೆ.

    ಚಿತ್ರದುರ್ಗ ನಗರದಿಂದ 5 ಕಿಲೋಮೀಟರ್ ದೂರದ ಕಾಡಿನಲ್ಲಿರುವ ಈ ಮೃಗಾಲಯದಲ್ಲಿ ಕರಡಿ, ಚಿರತೆ, ಹೆಬ್ಬಾವು, ಜಿಂಕೆಗಳು, ನವಿಲು ಸೇರಿದಂತೆ ಅನೇಕ ವನ್ಯಜೀವಿಗಳಿವೆ. ಆದರೆ ಪ್ರಾಣಿಗಳು ಸುಮಾರು ವರ್ಷಗಳಿಂದಲೂ ಕಿಷ್ಕೆಂದೆಯಂತಹ ಕೊಠಡಿಗಳಲ್ಲಿ ಸೆರೆಮನೆ ವಾಸವನ್ನು ಅನುಭವಿಸುತ್ತಿವೆ. ಹೀಗಾಗಿ ಸರ್ಕಾರ ಈ ವನ್ಯ ಜೀವಿಗಳು ಸ್ವತಂತ್ರವಾಗಿರಲಿ ಅಂತ ವಿಶಾಲವಾದ ಮನೆಗಳನ್ನು ಕಟ್ಟಿಸಿದ್ದರೂ ಕರಡಿ ಸೇರಿದಂತೆ ಇತರೆ ಕೆಲವು ಪ್ರಾಣಿಗಳಿಗೆ ಸೆರೆಮನೆಯ ಬಿಡುಗಡೆ ಭಾಗ್ಯವೇ ದೊರೆತಿಲ್ಲ. ಇದರಿಂದಾಗಿ ಪ್ರವಾಸಿಗರು ಈ ಪ್ರಾಣಿಗಳ ಯಾತನೆ ಕಂಡು ಕೂಡಲೇ ಪ್ರಾಣಿಗಳನ್ನು ವಿಶಾಲವಾದ ಮನೆಗಳಿಗೆ ಶಿಫ್ಟ್ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿಗೆ ಏನು ಸಮಸ್ಯೆ ಅಂತ ಹಿಡಿಶಾಪ ಹಾಕುತ್ತಿದ್ದಾರೆ.

    ಕಿಷ್ಕಿಂದೆಯಂತೆ ಸಣ್ಣ ಸಣ್ಣ ಮನೆಗಳಲ್ಲಿ ವಾಸಿಸುವ ಪ್ರಾಣಿಗಳ ಯಾತನೆ ಕಂಡು ಪ್ರವಾಸಿಗರು, ಪ್ರಾಣಿ ಪ್ರೀಯರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದರು. ಹೀಗಾಗಿ ಎಚ್ಚೆತ್ತ ಸರ್ಕಾರ ಪ್ರಾಣಿಗಳ ಸಂರಕ್ಷೆಣೆಗಾಗಿ ಅಗತ್ಯ ಕ್ರಮ ಕೈಗೊಂಡು ಒಂದು ಕೋಟಿ ರೂ.ಗೂ ಅಧಿಕ ಅನುದಾನವನ್ನು ಮೃಗಾಲಯದ ಅಭಿವೃದ್ಧಿಗೆ ಬಿಡುಗಡೆಮಾಡಿತ್ತು. ತರಾತುರಿಯಲ್ಲಿ ಕಾಮಗಾರಿ ಮುಗಿಸಿದ ಅಧಿಕಾರಿಗಳು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರಿಂದ ಉದ್ಘಾಟನೆ ಕೂಡ ಮಾಡಿಸಿದ್ದಾರೆ. ಆದರೆ ಉದ್ಘಾಟನೆಯಾಗಿ ಮೂರು ತಿಂಗಳುಗಳು ಕಳೆದರೂ ಸಹ ಕಿರುಮೃಗಾಲಯದಲ್ಲಿರುವ ವನ್ಯಜೀವಿಗಳಿಗೆ ಮಾತ್ರ ಸೆರೆಮನೆವಾಸದಿಂದ ಇನ್ನು ಮುಕ್ತಿ ಸಿಕ್ಕಿಲ್ಲ.

    ಪ್ರಾಣಿಗಳು ಬೋನ್‍ಗಳಲ್ಲಿ ಕರ್ಕಶ ಶಬ್ದ ಮೂಲಕ ತಮ್ಮ ಯಾತನೆಯನ್ನು ವ್ಯಕ್ತಪಡಿಸುತ್ತವೆ. ಸಣ್ಣ ಸಣ್ಣ ಕಿಂಡಿಯಲ್ಲಿ ವೀಕ್ಷಿಸಿದಾಗ ಪ್ರಾಣಿಗಳ ನೋವು ಕಾಣಿಸುತ್ತದೆ. ಕಾಳಜಿವಹಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರಾಣಿ ಪ್ರೀಯರು ದೂರಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗ ಜಿಲ್ಲಾ ಸಹಾಯಕ ಅರಣ್ಯಾಧಿಕಾರಿ ರಾಘವೇಂದ್ರ ಅವರು, ಅಕ್ಟೋಬರ್ ತಿಂಗಳಲ್ಲೇ ಪ್ರವಾಸಿಗರ ವೀಕ್ಷಣೆಗಾಗಿ ಕಿರು ಮೃಗಾಲಯ ಸಿದ್ಧವಾಗಿದೆ. ಆದರೆ ಮೃಗಾಲಯದ ಅಭಿವೃದ್ಧಿ ಕಾಮಗಾರಿ ನಿರಂತರವಾಗಿರುತ್ತವೆ. ಅಲ್ಲದೆ ಕಾಮಗಾರಿಗೆ ಗಡವು ನಿಗದಿ ಪಡಿಸಿಲ್ಲ. ಕರಡಿ ಸೇರಿದಂತೆ ಇತರೆ ಕೆಲವು ಪ್ರಾಣಿಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಲ್ಲ. ಹೀಗಾಗಿ ಅವುಗಳ ಭದ್ರತೆ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಇನ್ನೂ ಶಿಫ್ಟ್ ಮಾಡಿಲ್ಲ ಎಂದು ತಿಳಿಸಿದ್ದಾರೆ.