Tag: ವಜಾ

  • ಸುದೀಪ್ ವಿರುದ್ಧದ ಕೇಸ್ ವಜಾ

    ಸುದೀಪ್ ವಿರುದ್ಧದ ಕೇಸ್ ವಜಾ

    ಚಿಕ್ಕಮಗಳೂರು: ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ ಮೇಲಿನ ವಿವಾದ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.

    ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ಎಂಬವರು ನಟ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿ ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಿಂದೆ ವಾರಸ್ದಾರ ಧಾರಾವಾಹಿ ತಂಡ ನಮ್ಮ ಮನೆಯಲ್ಲಿ ಶೂಟಿಂಗ್ ನಡೆಸುವ ವೇಳೆಯಲ್ಲಿ ನನಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೀಪಕ್ ಮಯೂರ್ ಪಟೇಲ್ ಆರೋಪಿಸಿದ್ದರು.

    ಈ ಸಂಬಂಧ ಚಿಕ್ಕಮಗಳೂರು 2ನೇ ಹೆಚ್ಚುವರಿ ನ್ಯಾಯಾಲಯ ಸುದೀಪ್‍ಗೆ ವಾರೆಂಟ್ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ನಟ ಸುದೀಪ್ ಪರ ವಕೀಲ ಗೋಪಿನಾಥ್ ಹೈ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಸುದೀಪ್ ಅವರಿಗೆ ಖುಲಾಸೆ ನೀಡಿ ಪ್ರಕರಣವನ್ನು ವಜಾ ಮಾಡಿ ಆದೇಶ ನೀಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಸುದೀಪ್ ಪರ ವಕೀಲ ಗೋಪಿನಾಥ್, ಸುದೀಪ್ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಲಾಗಿತ್ತು. ಅಲ್ಲದೇ ದೀಪಕ್ ಮಯೂರ್ ಪಟೇಲ್, ಬೇರೆ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಆ ನಷ್ಟವನ್ನು ನಮ್ಮಿಂದ ಭರಿಸಲು ಪ್ರಯತ್ನಿಸಿದರು. ಆದರೆ ಅದು ಸಫಲವಾಗಿಲ್ಲ, ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ಗೋಪಿನಾಥ್, ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.

    ಘಟನೆ ವಿವರ:
    ಖಾಸಗಿ ವಾಹಿನಿಯಲ್ಲಿ ನಟ ಸುದೀಪ್ ನಿರ್ಮಾಣದ `ವಾರಸ್ದಾರ’ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಗಾಗಿ ಸುದೀಪ್ ಅವರು ಚಿಕ್ಕಮಗಳೂರಿನ ಕಾಫಿ ಎಸ್ಟೇಟನ್ನು ಬಾಡಿಗೆ ಪಡೆದುಕೊಂಡಿದ್ದರು. ಈ ಎಸ್ಟೇಟ್‍ನ ಮಾಲೀಕರೇ ದೀಪಕ್ ಪಟೇಲ್, ಇವರ ಮನೆ ಮತ್ತು ಜಮೀನನ್ನು ಧಾರಾವಾಹಿಗಾಗಿ ಬಳಕೆ ಮಾಡಿಕೊಂಡಿದ್ದಾರೆ. ಆದರೆ ಬಾಡಿಗೆ ನೀಡದೇ ಸುದೀಪ್ ವಂಚನೆ ಮಾಡಿದ್ದಾರೆ ಎಂದು ಮಾಲೀಕ ಆರೋಪಿಸಿದ್ದರು.

    ಅಷ್ಟೇ ಅಲ್ಲದೇ ಧಾರಾವಾಹಿಗಾಗಿ ಸುದೀಪ್ ಬಗೆ ಬಗೆಯ ಗಿಡ ಕಡಿದು ಗೆಸ್ಟ್ ಹೌಸ್ ನಿರ್ಮಾಣ ಮಾಡಿದ್ದರು. ಆದರೆ ವಾರಸ್ದಾರ ತಂಡ ಅರ್ಧದಲ್ಲೇ ಶೂಟಿಂಗ್ ಪ್ಯಾಕಪ್ ಮಾಡಿ ಹೋಗಿದ್ದಾರೆ. ಧಾರಾವಾಹಿ ಶುರು ಮಾಡಿದಾಗ ಮೊದಲು 50 ಸಾವಿರ ಕೊಟ್ಟಿದ್ದರು. ನಂತರ 1 ಲಕ್ಷ 80 ರೂ. ಸಾವಿರ ಕೊಟ್ಟಿದ್ದಾರೆ. ಆದರೆ ಈಗ ಧಾರಾವಾಹಿ ನಿಂತು 7 ತಿಂಗಳಾಗಿದೆ. ಈಗ ಇದರಿಂದ ಚಿತ್ರ ತಂಡ ಸುಮಾರು 90 ಲಕ್ಷ ರೂ. ಮೌಲ್ಯದ ನಷ್ಟ ಮಾಡಿದೆ ಎಂದು ಆರೋಪಿಸಿದ್ದ ದೀಪಕ್ ಫಿಲ್ಮ್ ಚೇಂಬರಿಗೆ ದೂರು ಸಹ ನೀಡಿದ್ದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಅಂದು ಮಾತನಾಡಿದ ಮಾಲೀಕ ದೀಪಕ್, ಗೆಸ್ಟ್ ಹೌಸ್ ನಿರ್ಮಾಣಕ್ಕಾಗಿ ನನ್ನ ಕಾಫಿ ತೋಟವನ್ನು ನಾಶ ಮಾಡಿದ್ದಾರೆ. ನಾನು ಸಾಲ ಮಾಡಿ ಎಲ್ಲವನ್ನು ರೆಡಿ ಮಾಡಿಸಿದ್ದೇನೆ. ಈಗ ನಮಗೆ ಬರೋಬ್ಬರಿ 1 ಕೋಟಿ ರೂ. ಮೇಲೆ ಅಧಿಕವಾಗಿ ನಷ್ಟವಾಗಿದೆ. ನಾನು ಸುದೀಪ್ ಅಭಿಮಾನಿ ಅವರ ಮನವಿ ಮಾಡಿಕೊಂಡಿದ್ದಕ್ಕೆ ಜಾಗ ಬಿಟ್ಟುಕೊಟ್ಟಿದೆ. ಆದರೆ ಸರಿಯಾಗಿ ಟಿ.ಆರ್.ಪಿ ಬಂದಿಲ್ಲ ಎಂದು ಬಾಡಿಗೆಯನ್ನು ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

  • ಉಗ್ರರಿಗೆ ಆಶ್ರಯ ನೀಡಿದ್ದ ಡಿವೈಎಸ್‍ಪಿ ದೇವೇಂದ್ರ ಸಿಂಗ್ ಸೇವೆಯಿಂದಲೇ ವಜಾ

    ಉಗ್ರರಿಗೆ ಆಶ್ರಯ ನೀಡಿದ್ದ ಡಿವೈಎಸ್‍ಪಿ ದೇವೇಂದ್ರ ಸಿಂಗ್ ಸೇವೆಯಿಂದಲೇ ವಜಾ

    ನವದೆಹಲಿ: ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ ನೀಡಿದ್ದ ಜಮ್ಮು-ಕಾಶ್ಮೀರದ ಡಿವೈಎಸ್‍ಪಿ ದೇವಿಂದರ್ ಸಿಂಗ್ ಅವರನ್ನು ಸೇವೆಯಿಂದ ವಜಾಗೊಳ್ಳುವ ಸಾಧ್ಯತೆಯಿದೆ. ಆದರೆ ಅಧಿಕೃತ ಆದೇಶ ಹೊರ ಬೀಳುವುದು ಮಾತ್ರ ಬಾಕಿ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ದೇವೇಂದರ್ ಸಿಂಗ್ ಜಮ್ಮು-ಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್ ವಿ ಕಾಪ್ರ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದ ತಮ್ಮ ಮನೆಯಲ್ಲಿ ಮೂವರು ಉಗ್ರರಿಗೆ ಆಶ್ರಯ ನೀಡಿದ್ದರು. ಈ ಸಂಬಂಧ ಮಾಹಿತಿ ಸಿಗುತ್ತಿದ್ದ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಆದರೆ ಈಗ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

    ದೇವಿಂದರ್ ಸಿಂಗ್ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ್ಯಂಟಿ ಹೈಜಾಕಿಂಗ್ ಸ್ಕ್ವಾಡ್‍ನಲ್ಲಿ ಡಿಎಸ್‍ಪಿ ಕಾರ್ಯನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ 2019ರ ಆಗಸ್ಟ್ 15ರಂದು ಶೌರ್ಯ ಪ್ರಶಸ್ತಿ ಪಡೆದಿದ್ದರು. ಆದರೆ ಈಗ ಉಗ್ರರಿಗೆ ಆಶ್ರಯ ನೀಡಿ ಸಿಕ್ಕಿಬಿದ್ದಿದ್ದಾರೆ.

    ಏನಿದು ಪ್ರಕರಣ?
    ಜಮ್ಮು-ಕಾಶ್ಮೀರದ ಡಿವೈಎಸ್‍ಪಿ ದೇವಿಂದರ್ ಸಿಂಗ್ ಹಾಗೂ ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರರನ್ನು ಭಾನುವಾರ ಬಂಧಿಸಲಾಗಿತ್ತು. ಜಮ್ಮು-ಕಾಶ್ಮೀರದ ಪೊಲೀಸರು ಬಂಧಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಿದ್ದರು.

    ಆದರೆ ವಿಚಾರಣೆ ವೇಳೆ ದೇವೆಂದರ್ ಸಿಂಗ್, ಕಾರಿನಲ್ಲಿ ಉಗ್ರ ಸಂಘಟನೆಯ ಮುಷ್ತಾಕ್ ಮತ್ತು ರಫಿಯನ್ನು ಶರಣಾಗತಿಗೆಂದು ಪೊಲೀಸರಿಗೆ ಒಪ್ಪಿಸಲು ಕರೆದುಕೊಂಡು ಹೋಗುತ್ತಿದ್ದೆ ಎಂದು ಹೇಳಿದ್ದರು. ಆದರೆ ಅವರಿಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಮಾಡಿದಾಗ, ಶರಣಾಗತಿಯ ಯಾವುದೇ ವಿಚಾರ ನಮಗೆ ಗೊತ್ತಿಲ್ಲ ಎಂದು ಹೇಳಿದ್ದರು. ಇದು ಪೊಲೀಸರಲ್ಲಿ ಸಾಕಷ್ಟು ಅನುಮಾನಗಳಿಗೆ ಕಾಣವಾಗಿತ್ತು.

    ಪೊಲೀಸರಿಗೆ ಲಭ್ಯವಾದ ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ, ದೇವೇಂದ್ರ ಸಿಂಗ್ ಹಾಗೂ ಉಗ್ರರರ ಮಧ್ಯೆ 12 ಲಕ್ಷ ರೂ.ಗೆ ಒಪ್ಪಂದವಾಗಿತ್ತು. ಅದರ ಪ್ರಕಾರ ದೇವೇಂದ್ರ ಸಿಂಗ್ ಉಗ್ರರಿಗೆ ಮನೆಯಲ್ಲಿ ಆಶ್ರಯ ನೀಡಿ, ಬಳಿಕ ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದರು ಎಂದು ವರದಿಯಾಗಿದೆ.

  • ಅಯೋಧ್ಯೆ ಮೇಲ್ಮನವಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ

    ಅಯೋಧ್ಯೆ ಮೇಲ್ಮನವಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ

    ನವದೆಹಲಿ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 18 ಮೇಲ್ಮನವಿ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

    ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಸೇರಿದಂತೆ ಐವರು ನ್ಯಾಯಮೂರ್ತಿಗಳ ಪೀಠ ಇಂದು ಈ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿತು.

    ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ನಿರ್ಮೋಹಿ ಅಖರಾ ಸೇರಿದಂತೆ 40 ಮಂದಿ ನಾಗರಿಕ ಹಕ್ಕುಗಳ ಕಾರ್ಯಕರ್ತರಿಗೆ ಪ್ರಕರಣದ ಮೂಲ ಕಕ್ಷಿದಾರರು ಅಲ್ಲ ಎಂದು ಕೋರ್ಟ್ ಮೇಲ್ಮನವಿ ಸಲ್ಲಿಸಲು ಅವಕಾಶವನ್ನು ನಿರಾಕರಿಸಿತು. ಪ್ರಕರಣದ ಮೂಲ ಕಕ್ಷಿದಾರರು ಮಾತ್ರ ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

    ನ.9 ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ಪ್ರಶ್ನೆ ಮಾಡಿ ಒಟ್ಟು 18 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸುವಂತೆ ಹಾಗೂ ಮುಸ್ಲಿಮರಿಗೆ ಪ್ರತ್ಯೇಕವಾಗಿ 5 ಎಕರೆ ಜಾಗವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

    ಕೋರ್ಟ್ ಆದೇಶವನ್ನು ಸಲ್ಲಿಕೆಯಾಗಿದ್ದ ಆ ಅರ್ಜಿಗಳಲ್ಲಿ ಕೆಲವರು ರಾಮಮಂದಿತ ವಿವಾದಿತ ಸ್ಥಳದಲ್ಲೇ 5 ಎಕರೆ ಜಾಗವನ್ನು ಮುಸ್ಲಿಮರಿಗೆ ನೀಡಲು ಅರ್ಜಿ ಸಲ್ಲಿಕೆ ಮಾಡಿದ್ದರೆ, ಕೆಲ ಹಿಂದೂ ಪರ ಸಂಘಟನೆಗಳು ಮುಸ್ಲಿಮರಿಗೆ 5 ಎಕರೆ ಜಾಗ ನೀಡಿರುವುದನ್ನು ವಿರೋಧಿಸಿ ಅರ್ಜಿ ಸಲ್ಲಿಕೆ ಮಾಡಿತ್ತು. ಸದ್ಯ ಅರ್ಜಿಗಳು ವಜಾಗೊಂಡಿದ್ದು ರಾಮಮಂದಿರ ನಿರ್ಮಾಣಕ್ಕೆ ಇದ್ದ ಎಲ್ಲ ಅಡೆ ತಡೆಗಳು ನಿವಾರಣೆಯಾಗಿದೆ.

  • ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲಿಗೆಳೆದ ಕನ್ನಡಿಗನಿಗಿಲ್ಲ ನೌಕರಿ!

    ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲಿಗೆಳೆದ ಕನ್ನಡಿಗನಿಗಿಲ್ಲ ನೌಕರಿ!

    – ಬೆಂಗಳೂರಿನ ಕಪ್ಪಣ್ಣ ತವರಿಗೆ ಆಗಮನ
    – ಜನರಲ್ ಮೋಟಾರ್ಸ್ ಕಂಪನಿಯಿಂದ ವಜಾ

    ಫ್ರಾಂಕ್‍ಫರ್ಟ್: ಜರ್ಮನಿಯ ಪ್ರಖ್ಯಾತ ಆಟೋಮೊಬೈಲ್ ಕಂಪನಿ ಫೋಕ್ಸ್‌ವ್ಯಾಗನ್‌ ಡೀಸೆಲ್ ಕಾರುಗಳು ಹೆಚ್ಚು ಮಾಲಿನ್ಯ ಉಂಟು ಮಾಡುವ ವಿಷಯವನ್ನು ಬಚ್ಚಿಡಲು ಎಂಜಿನ್‍ಗೆ ರಹಸ್ಯ ಸಾಫ್ಟ್ ವೇರ್​ವೊಂದನ್ನು ಅಳವಡಿಸಿದ್ದ ವಿಚಾರವನ್ನು ಬಯಲಿಗೆಳೆದ ಕನ್ನಡಿಗ ಸದ್ಯ ಕೆಲಸ ಕಳೆದುಕೊಂಡಿದ್ದಾರೆ.

    ದುರಾದೃಷ್ಟವಶಾತ್ ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲು ಮಾಡಿದ್ದ ಬೆಂಗಳೂರಿನ ಕಪ್ಪಣ್ಣ(41) ಈಗ ನಿರುದ್ಯೋಗಿಯಾಗಿದ್ದಾರೆ. ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಕಂಪನಿ ತನ್ನ ಕೈಬಿಟ್ಟ ಬಳಿಕ ತವರಿನತ್ತ ಹೇಮಂತ್ ಕಪ್ಪಣ್ಣ ಮುಖ ಮಾಡಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.

    ಅಮೆರಿಕದ ಜನರಲ್ ಮೋಟರ್ಸ್ ಕಂಪನಿ ಕಳೆದ ಫೆಬ್ರವರಿಯಲ್ಲೇ ಹೇಮಂತ್ ಕಪ್ಪಣ್ಣ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಕಪ್ಪಣ್ಣ ಅವರನ್ನು ಕೆಲಸದಿಂದ ತೆಗೆದಿದ್ದಕ್ಕೂ ಫೋಕ್ಸ್‌ವ್ಯಾಗನ್‌ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜನರಲ್ ಮೋಟರ್ಸ್ ಹೇಳಿದೆ.

    ಕಪ್ಪಣ್ಣ ಅವರು 17 ವರ್ಷಗಳಿಂದ ಅಮೆರಿಕದಲ್ಲಿದ್ದು, 2014ರ ಡಿಸೆಂಬರ್ ನಲ್ಲಿ ತಮ್ಮ ಪಿಎಚ್‍ಡಿ ಮುಗಿದ ಬಳಿಕ ಜನರಲ್ ಮೋಟರ್ಸ್ ಕಂಪನಿಗೆ ಸೇರ್ಪಡೆಯಾಗಿದ್ದರು. ಜನರಲ್ ಮೋಟರ್ಸ್ ಕಂಪನಿ ಕಪ್ಪಣ್ಣ ಅವರನ್ನು ಸೇರಿದಂತೆ 4 ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದೆ. ಕೆಲಸ ಕಳೆದುಕೊಂಡ ಬಳಿಕ 60 ದಿನಗಳವರೆಗೆ ಹೇಮಂತ್ ವೀಸಾ ಅವಧಿ ಇತ್ತು. ಅಷ್ಟರೊಳಗೆ ಹೊಸ ಕೆಲಸ ಸಿಗದ ಕಾರಣ ಅವರು ಬೆಂಗಳೂರಿಗೆ ಮರಳಿದ್ದಾರೆ ಎಂದು ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕಪ್ಪಣ್ಣ ಅವರು ಸರ್ಕಾರ ನಿಯಮಗಳಿಗೆ ಬದ್ಧರಾಗಿರುತ್ತಾರೆ ಎಂಬ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿದೆಯಾ ಎಂಬ ಅನುಮಾನ ಹುಟ್ಟುಕೊಂಡಿದೆ. ಅಲ್ಲದೆ ಅಮೆರಿಕದಲ್ಲಿ ಅವರಿಗೆ ಕೆಲಸ ಸಿಗದ ಕಾರಣ ಮತ್ತು ವೀಸಾ ಅವಧಿ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಕಪ್ಪಣ್ಣ ಅವರು ಬೆಂಗಳೂರಿಗೆ ಮರಳಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.

    ಏನಿದು ಪ್ರಕರಣ?
    ಜರ್ಮನಿ ಮೂಲದ ಫೋಕ್ಸ್‌ವ್ಯಾಗನ್‌ ಕಂಪನಿ ವಿಶ್ವದ ಹಲವು ದೇಶಗಳಲ್ಲಿ ಮಾರುಕಟ್ಟೆ ಹೊಂದಿದೆ. ಅಮೆರಿಕದ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಆ ದೇಶಕ್ಕೂ ಕಾರುಗಳನ್ನು ಫೋಕ್ಸ್‌ವ್ಯಾಗನ್‌ ಪೂರೈಕೆ ಮಾಡುತ್ತಿತ್ತು. ಆದರೆ 2013ರಲ್ಲಿ ಹೇಮಂತ್ ಕಪ್ಪಣ್ಣ ಅವರ ತಂಡ ಸಂಶೋಧನೆ ನಡೆಸಿದಾಗ ಫೋಕ್ಸ್‌ವ್ಯಾಗನ್‌ ಕಂಪನಿಯ ಕಾರಿನ ಎಂಜಿನ್‍ಗಳಲ್ಲಿ ರಹಸ್ಯ ಸಾಫ್ಟ್ ವೇರ್​ವೊಂದು ಇರುವುದು ಪತ್ತೆಯಾಗಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಈ ಸಾಫ್ಟ್ ವೇರ್ ಕಾರಿನ ಮಾಲಿನ್ಯ ಪ್ರಮಾಣ ಕಡಿಮೆ ಇರುವಂತೆ ತೋರಿಸುತ್ತಿತ್ತು. ಅಲ್ಲದೆ ಅಮೆರಿಕ ಅನುಮತಿಸಿರುವ ಮಾಲಿನ್ಯ ಮಿತಿಗಿಂತ ಹೆಚ್ಚಿನ ಪ್ರಮಾಣವನ್ನು ಹೊಗೆಯನ್ನು ಉಗುಳುತ್ತಿರುವ ಅಂಶ ಬಯಲಾಗಿತ್ತು. ಈ ಹಗರಣ ಬೆಳಕಿಗೆ ಬಂದ ಬಳಿಕ ಫೋಕ್ಸ್‌ವ್ಯಾಗನ್‌ ಕಂಪನಿ 2.2 ಲಕ್ಷ ಕೋಟಿ ರು.ಗಳಷ್ಟು ದಂಡವನ್ನು ಅಮೇರಿಕಾಕ್ಕೆ ಪಾವತಿಸಿತ್ತು.

  • ಚುನಾವಣಾ ಕರ್ತವ್ಯ ಲೋಪ- ರೆವಿನ್ಯೂ ಇನ್ಸ್‌ಪೆಕ್ಟರ್ ಅಮಾನತು

    ಚುನಾವಣಾ ಕರ್ತವ್ಯ ಲೋಪ- ರೆವಿನ್ಯೂ ಇನ್ಸ್‌ಪೆಕ್ಟರ್ ಅಮಾನತು

    ಬೆಂಗಳೂರು: ಲೋಕಸಭಾ ಚುನಾವಣಾ ಕಾರ್ಯಕ್ಕೆ ಗೈರಾದ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ ಮಂಜುನಾಥ್ ರೆಡ್ಡಿ ಚುನಾವಣಾ ಕಾರ್ಯಗಳಿಗೆ ಗೈರಾಗುತ್ತಿದ್ದರು. ಆದರೆ ಹಾಜರಾತಿಯಲ್ಲಿ ಮಾತ್ರ ಹೆಸರು ನಮೂದಿಸಿ ಅಶ್ರದ್ಧೆ, ಅಸಡ್ಡೆ, ಅದಕ್ಷತೆ ತೋರಿದ್ದಾರೆ.

    ಚುನಾವಣಾ ಲೋಪ ಎಸಗಿದ ಸಂಬಂಧ ಅನೇಕ ಬಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ ಮಂಜುನಾಥ್ ರೆಡ್ಡಿ ಅವರು ತಮ್ಮ ಚಾಳಿಯನ್ನು ಮುಂದುವರಿಸಿದ್ದರು. ಹೀಗಾಗಿ ಅವರನ್ನು ಜಿಲ್ಲಾಧಿಕಾರಿ ವಿಜಯಶಂಕರ್ ಹಾಗೂ ಚುನಾವಣಾಧಿಕಾರಿ ಮದನ್ ಮೋಹನ್ ಅಮಾನತುಗೊಳಿಸಿದ್ದಾರೆ.

    ಚುನಾವಣೆಗೆ ಲೋಪ ಮಾಡಿದವರು ಯಾರೆ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ಜಾಮೀನು ಅರ್ಜಿ ತಿರಸ್ಕೃತ – ರೌಡಿ ನಲಪಾಡ್‍ಗೆ ಜೈಲೇ ಗತಿ

    ಜಾಮೀನು ಅರ್ಜಿ ತಿರಸ್ಕೃತ – ರೌಡಿ ನಲಪಾಡ್‍ಗೆ ಜೈಲೇ ಗತಿ

    ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 63ನೇ ನ್ಯಾಯಾಲಯದ ತಿರಸ್ಕರಿಸಿದೆ.

    ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಆಗಿರುವುದರಿಂದ ಆರೋಪಿ ನಲಪಾಡ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಿದ್ವತ್ ಪರ ವಕೀಲರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

    ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್, ಆರೋಪಿ ವಿರುದ್ಧ ಇದ್ದ ಬಲವಾದ ಸಾಕ್ಷಿಗಳು ಹಾಗೂ ನಲಪಾಡ್ ತಂದೆ ಶಾಸಕರಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ನ್ಯಾಯಾಲಯ ಅರ್ಜಿ ತಿರಸ್ಕರಿಸಿದೆ. ಈ ಹಿಂದೆ ಇದೇ ಕೋರ್ಟ್‍ನಲ್ಲಿ ಜಾಮೀನು ನಿರಾಕರಿಸಲಾಗಿತ್ತು. ಆರೋಪಿ ವಿರುದ್ಧ ವಿಡಿಯೋ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯೂ ಅರ್ಜಿ ತಿರಸ್ಕೃತಗೊಳ್ಳಲು ಕಾರಣ ಎಂದು ತಿಳಿಸಿದರು.

    ಸಮಾಜದಲ್ಲಿ ನಲಪಾಡ್ ಪ್ರಕರಣ ಸಾಕಷ್ಟು ಭಯವನ್ನು ಉಂಟು ಮಾಡಿದೆ. ಅಲ್ಲದೇ ಈ ಹಿಂದೆಯೂ ಸಹ ಇಂತಹ ಹಲವು ಪ್ರಕರಣಗಳು ನಡೆದಿದ್ದು ಪದೇ ಪದೇ ಮರುಕಳಿಸುತ್ತಿದೆ ಎಂಬ ವಾದವನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.

    ವಿದ್ವತ್- ಹಲ್ಲೆಗೊಳಗಾದ ಯುವಕ.

    ಏನಿದು ಪ್ರಕರಣ?
    ಘಟನೆ ನಡೆದ ನಗರದ ಫರ್ಜಿ ಕೆಫೆ ಯಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತ್ತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ಅನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಹೊಡೆದಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

    ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.