Tag: ವಚನಾನಂದ ಸ್ವಾಮೀಜಿ

  • ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ, ಸಮೀಕ್ಷೆ ಮುಂದೂಡಬೇಕು: ವಚನಾನಂದ ಸ್ವಾಮೀಜಿ

    ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ, ಸಮೀಕ್ಷೆ ಮುಂದೂಡಬೇಕು: ವಚನಾನಂದ ಸ್ವಾಮೀಜಿ

    – ಸಮೀಕ್ಷೆ ಮೇಲೆ ಕರ್ನಾಟಕದ ಏಳು ಕೋಟಿ ಜನರ ಭವಿಷ್ಯ

    ಹುಬ್ಬಳ್ಳಿ: ಜಾತಿ ಗಣತಿಯಲ್ಲಿ (Caste Census) ಸಾಕಷ್ಟು ದೋಷಗಳಿವೆ. ಸಮೀಕ್ಷೆ ಮುಂದೂಡಬೇಕು ಅನ್ನೋದು ನಮ್ಮ ನಿಲುವು ಎಂದು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachananda Swamiji) ಹೇಳಿದ್ದಾರೆ.

    ಇದೇ 22ರಿಂದ ರಾಜ್ಯದಲ್ಲಿ ಜಾತಿ ಗಣತಿ ಹಿನ್ನೆಲೆ ಮನೆಮನೆಗೆ ತೆರಳಿ ವಚನಾನಂದ ಸ್ವಾಮೀಜಿ ಜಾಗೃತಿ ಮೂಡಿಸುತ್ತಿದ್ದಾರೆ. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಅಂಟಿಸಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಷ್ಟೊಂದು ಅರ್ಜೆಂಟ್‌ನಲ್ಲಿ ಯಾಕೆ ಸಮೀಕ್ಷೆ ಮಾಡುತ್ತಿದ್ದೀರಿ. ಈ ಹಿಂದೆ ನಡೆಸಿದ್ದ ಕಾಂತರಾಜ ಆಯೋಗ ವರದಿ ವೈಜ್ಞಾನಿಕವಾಗಿರಲಿಲ್ಲ. ಇದೇ ಕಾರಣಕ್ಕೆ ಇದೀಗ ಮತ್ತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲು ಮುಂದಾಗಿದ್ದೀರಿ. ಇದೀಗ ಇದರಲ್ಲಿ ಕೂಡಾ ಹರಿಬರಿ ಯಾಕೆ? ಈ ಸಮೀಕ್ಷೆ ಮೇಲೆ ಕರ್ನಾಟಕದ ಏಳು ಕೋಟಿ ಜನರ ಭವಿಷ್ಯ ಇದೆ. ಹೀಗಾಗಿ ಸರಿಯಾಗಿ ಸಮಾಧಾನವಾಗಿ ಈ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿದ್ದಾರೆಂದು ತೋರಿಸಲು ಸಿದ್ದರಾಮಯ್ಯ ನಾಟಕ – ಯತ್ನಾಳ್

    ಪಂಚಮಸಾಲಿ ಸಮುದಾಯದಲ್ಲಿ ಯಾವುದೇ ಗೊಂದಲವಿಲ್ಲ. ಗಣತಿಯಲ್ಲಿ ಏನು ಬರೆಸಬೇಕು ಎಂಬ ಗೊಂದಲವಿಲ್ಲ. ನಾವು ಧರ್ಮದ ಕಾಲಂನಲ್ಲಿ ಹಿಂದೂ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಅಂತ ಬರೆಸಲು ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜಾತಿಗಣತಿ ವೇಳೆ ಉಪಜಾತಿಗಳ ಮೊದಲು ಒಕ್ಕಲಿಗ ಎಂದು ಬರೆಸಬೇಕು: ಸಭೆಯಲ್ಲಿ ಒಕ್ಕೊರಲ ಕೂಗು

  • ಭಾರತದಲ್ಲಿ ಇರುವ ಮುಸ್ಲಿಮರೂ ಹಿಂದೂಗಳೇ: ವಚನಾನಂದ ಸ್ವಾಮೀಜಿ

    ಭಾರತದಲ್ಲಿ ಇರುವ ಮುಸ್ಲಿಮರೂ ಹಿಂದೂಗಳೇ: ವಚನಾನಂದ ಸ್ವಾಮೀಜಿ

    – ಬೇರೆ ಧರ್ಮಗಳು ಬರುವ ಮುನ್ನ ಆಗುವ ಮುನ್ನ ಇದ್ದದ್ದೇ ಹಿಂದೂ ಧರ್ಮ

    ಹಾವೇರಿ: ಹಿಂದೂ ಅಂದ್ರೆ ಸತ್ಯಸನಾತನ ಧರ್ಮವಾಗಿದೆ. ಬೇರೆ ಧರ್ಮಗಳು ಉತ್ಪತ್ತಿ ಆಗುವ ಮುನ್ನ ಇದ್ದದ್ದೇ ಹಿಂದೂ ಧರ್ಮ. ಈ ದೇಶದಲ್ಲಿ ಇರುವ ಮುಸ್ಲಿಮರೂ ಹಿಂದೂಗಳೇ. ಅಖಂಡ ಭಾರತ ಇದು ಎಂದು ಹರಿಹರಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachananda Swamiji) ಅಭಿಪ್ರಾಯಪಟ್ಟರು.

    ಹಾವೇರಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮ ಹಿಂದೂವಿನ ಭಾಗವಾಗಿದೆ. ಆರ್ಯರು ಹಿಂದೂ ಭಾಗವಾಗಿದ್ದು, ಹಿಂದೂಗಳಿಗೆ ಯಾವುದೇ ಬಾರ್ಡರ್ ಇಲ್ಲ. ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲ ಹಿಂದೂ ಧರ್ಮವಾಗಿದೆ. ಶ್ರೀಲಂಕಾ ಅಫ್ಘಾನಿಸ್ತಾನದಲ್ಲಿ ಇರುವವರೆಲ್ಲ ಹಿಂದೂಗಳೇ. ಇನ್ನು ಧರ್ಮ ಆಚರಣೆ ಮನೇಲಿ ಇರಬೇಕು‌. ದೇಶ ಸಮುದಾಯ ಅಂತಾ ಬಂದಾಗ ನಾವೆಲ್ಲಾ ಹಿಂದೂಗಳಾಗಿದ್ದೇವೆ. ಬೇರೆ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಪ್ರಸ್ತಾವನೆ ಮಾಡಲ್ಲ ಎಂದು ಕೆಲ ಸ್ವಾಮೀಜಿಗಳಿಗೆ ವಚನಾನಂದ ಸ್ವಾಮೀಜಿ ತಿರುಗೇಟು ನೀಡಿದರು. ಇದನ್ನೂ ಓದಿ: ಜನಪ್ರತಿನಿಧಿಯಾಗಿ ಜನರ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದೇನೆ, ತಪ್ಪೇನು ಅಲ್ಲ: ಕೃಷ್ಣಬೈರೇಗೌಡ ಸಮರ್ಥನೆ

    ಹಿಂದೂ ಅಂದ್ರೆ ಶುದ್ದವಾದ ಜೀವನ ಪದ್ದತಿ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಕೆಲವರು ಕಲ್ಲು ನಾಗರಕ್ಕೆ ಹಾಲೆರೆಯಬೇಡಿ, ಅನಾಥ ಮಕ್ಕಳಿಗೆ ಹಾಲು ಕೊಡಿ ಅಂತಾರೆ. ಹಾಲು ಕೊಡೋ ತಾಯಿ ಹತ್ಯೆ ಮಾಡ್ತಾ ಇದಾರೆ. ಎಷ್ಟು ಜನ ಸ್ವಾಮಿಗಳು ಗೋಹತ್ಯೆ ವಿರೋಧಿಸಿದಿರಿ? ಅನಾಥ ಮಕ್ಕಳ ಮೇಲೆ ಕರುಣೆ ಇದ್ದರೆ ಹಾಲು ಕೊಡಿ ಎಂಬ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ವಚನಾನಂದ ಸ್ವಾಮೀಜಿ ಕಿಡಿಕಾರಿದರು.

    ಲಿಂಗಾಯತ ಇರಲಿ, ವೀರಶೈವ ಇರಲಿ ಒಂದಾಗಿ ಹೋಗಬೇಕು. ಕೆಲವರು ಜಾತಿ ಸರ್ಟಿಪಿಕೇಟ್‌ಗಳಲ್ಲಿ ಹಿಂದೂ ಭೌದ್ಧ ಅಂತಾ ಇದೆ. ಹಿಂದೂ ಜೈನ ಅಂತಾ ಇದೆ. ಅದೇ ಥರ ಹಿಂದೂ ಲಿಂಗಾಯತ, ವೀರಶೈವ ಹಾಗೂ ಲಿಂಗಾಯತರು ಒಂದಾಗಿ ಮೊದಲು. ಒಂದಾಗದೇ ಹೇಗೆ ಪ್ರತ್ಯೇಕ ಧರ್ಮ ಮಾಡಬೇಕು? ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಯಾಕೆ ಸಿಕ್ಕಿಲ್ಲ? ಕೆಲ ಸ್ವಾಮಿಗಳು ನಾವು ಹಿಂದೂಗಳಲ್ಲ ಅಂತಾ ಹೇಳ್ತಾರಲ್ಲ. ಹಾಗೆ ಹೇಳುವ ಸ್ವಾಮಿಗಳಿಗೆ ಅವರ ಸರ್ಟಿಫಿಕೇಟ್ ತೋರಿಸಿ ಅಂತಾ ಹೇಳಿ ಎಂದು ವಾಗ್ದಾಳಿ ಮಾಡಿದರು. ಬಸವಣ್ಣ ಬ್ರಾಹ್ಮಣರು, ನಾವು ಬ್ರಾಹ್ಮಣರಿಗೆ ಕೃತಜ್ಞರಾಗಿ ಇರಬೇಕು. ನಮ್ಮನ್ನು ಉದ್ದಾರ ಮಾಡೋಕೂ ಬ್ರಾಹ್ಮಣರೇ ಬರಬೇಕಾಯ್ತು. ಇಲ್ಲದಿದ್ದರೆ ಶೂದ್ರರಾಗಿ ಇರಬೇಕಿತ್ತು ಎಂದರು. ಇದನ್ನೂ ಓದಿ: ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ; ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣ

  • ರಾಜಹುಲಿ ಇಲಿ, ಹೆಗ್ಗಣಗಳೊಂದಿಗೆ ಬೇಟೆಯಾಡುವುದಿಲ್ಲ: ಯತ್ನಾಳ್‌ಗೆ ವಚನಾನಂದ ಸ್ವಾಮೀಜಿ ಟಾಂಗ್

    ರಾಜಹುಲಿ ಇಲಿ, ಹೆಗ್ಗಣಗಳೊಂದಿಗೆ ಬೇಟೆಯಾಡುವುದಿಲ್ಲ: ಯತ್ನಾಳ್‌ಗೆ ವಚನಾನಂದ ಸ್ವಾಮೀಜಿ ಟಾಂಗ್

    ದಾವಣಗೆರೆ: ರಾಜಹುಲಿ ರಾಜಹುಲಿಯೊಂದಿಗೆ ಬೇಟೆ ಆಡುತ್ತದೆ. ಹುಲಿ ಹುಲಿಯೊಂದಿಗೆ ಬೇಟೆ ಆಡುತ್ತದೆಯೇ ವಿನಃ ಇಲಿ ಹೆಗ್ಗಣಗಳೊಂದಿಗೆ ಬೇಟೆ ಆಡುವುದಿಲ್ಲ, ಅದರ ಬಗ್ಗೆ ಯೋಚನೆಯೂ ಮಾಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹರಿಹರ ಪಂಚಮಸಾಲಿ ಗುರುಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಟಾಂಗ್ ನೀಡಿದರು.

    ದಾವಣಗೆರೆ ಜಿಲ್ಲೆ ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಅವರು, ಎಲ್ಲಾ ಲಿಂಗಾಯತರು ಒಂದಾಗಬೇಕಿದೆ. ಬಸವಣ್ಣನವರ ವಿಚಾರಧಾರೆಗಳು ಪ್ರಸಾರ ಆಗಬೇಕೆಂದರೆ, ನಾವೆಲ್ಲಾ ಒಂದೇ ಕೊಡೆಯ ಅಡಿಯಲ್ಲಿ ಬರಬೇಕು. ಇದು ಸಾಧ್ಯವಾದರೆ ಮಾತ್ರ ಸಮಾಜ ಒಂದಾಗುತ್ತದೆ. ಇದಕ್ಕೆ ಎಲ್ಲಾ ಶ್ರೀಗಳು ಸ್ಪಂದಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ಇದನ್ನೂ ಓದಿ: ಸಮಾಜದಲ್ಲಿ ಬಿರುಕು ಮೂಡಿಸುತ್ತಿರುವ ಮುತಾಲಿಕ್‍ಗೆ MP ಅಥವಾ MLA ಸೀಟ್ ಫಿಕ್ಸ್ ಆದ್ರೆ ಸುಮ್ಮನಿರುತ್ತಾರೆ: ಮೊಹಮ್ಮದ್ ಖಾಲಿದ್

    ಈಗಾಗಲೇ ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಹೆಸರಿಡಬೇಕೆಂದು ರಾಜ್ಯ ಸರ್ಕಾರ ಸಂಪುಟದಲ್ಲಿ ನಿರ್ಧಾರ ಮಾಡಿದೆ. ಅದು ನಮಗೆ ಸ್ವಾಗತಾರ್ಹ. ಅದರೆ ಇದೀಗ ಯಡಿಯೂರಪ್ಪನವರು ವಿಮಾನ ನಿಲ್ದಾಣಕ್ಕೆ ನಮ್ಮ ಹೆಸರಿಡುವುದು ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಸರ್ಕಾರ ಕೆಳದಿಯ ರಾಣಿ ಚೆನ್ನಮ್ಮಳ ಹೆಸರಿಡುವಂತೆ ಮನವಿ ಮಾಡಿದರು. ಈ ಹಿಂದೆ ಬೆಂಗಳೂರಿನಲ್ಲಿ ಸಿಎಂ ಭೇಟಿಯಾಗಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮನವರ ಹೆಸರಿಡುವಂತೆ ಮನವಿಯನ್ನು ಸಲ್ಲಿಸಲಾಯಿತು ಎಂದರು. ಇದನ್ನೂ ಓದಿ: ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್ – ಆರ್.ಅಶೋಕ್

    ಯಡಿಯೂರಪ್ಪನವರು ಕೇವಲ ರಾಜಹುಲಿಯಲ್ಲ, ಅವರೊಂದು ಶಕ್ತಿ. ಜನರು ಅವರನ್ನು ವ್ಯಕ್ತಿಗತವಾಗಿ ರಾಜಾಹುಲಿ ಎಂದು ಹೇಳುವುದಿಲ್ಲ. ಅದೊಂದು ಶಕ್ತಿ ಅವರಲ್ಲಿದೆ. ಅವರು ಕೇವಲ ಒಂದು ಜನಾಂಗದ ರಾಜಕಾರಣಿಯಲ್ಲ, ಅವರು ಸರ್ವಜನಾಂಗವನ್ನು ತೆಗೆದುಕೊಂಡು ಹೋಗುವ ಬಲಾಡ್ಯ ಶಕ್ತಿ. ರಾಜ್ಯದಲ್ಲಿ ಜನಪ್ರಿಯ ರಾಜಕಾರಣಿಗಳಲ್ಲಿ ಮೊದಲು ಯಡಿಯೂರಪ್ಪ ಬಳಿಕ ಸಿದ್ದರಾಮಯ್ಯ ಬರುತ್ತಾರೆ. ಯಡಿಯೂರಪ್ಪ ಸಿಎಂ ಆಗಿ ರಾಜ್ಯದಲ್ಲಿ ಮಾಡಿದ ಕೆಲಸವನ್ನು ಜನರು ಮರೆಯುವಂತಿಲ್ಲ. ಮಠಕ್ಕೆ ಅನುದಾನ ಕೊಟ್ಟಿರುವುದು, ಅವರು ತೆಗೆದುಕೊಂಡ ಕೆಲವು ನಿರ್ಣಯಗಳು, ಅಂತಹ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ಎಂಟು ಎದೆ ಇರಬೇಕು. ಅದು ಯಡಿಯೂರಪ್ಪನವರಿಗೆ ಇದೆ ಎಂದು ಗುಣಗಾನ ಮಾಡಿದರು.

  • ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ

    ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ

    ಕೊಪ್ಪಳ: ನಮ್ಮ ದೇಶದ ಆಧಾರ್ ಕಾರ್ಡ್ ಇರುವವರೆಲ್ಲರೂ ಭಾರತೀಯರು. ಧರ್ಮ ಎನ್ನುವುದು ಅವರ ವ್ಯಕ್ತಿಗತ. ಭಾರತದಲ್ಲಿ ಇರುವವರೆಲ್ಲ ನಮ್ಮವರು ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

    ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ, ಆಧಾರ್ ಕಾರ್ಡ್ ಯಾರ ಬಳಿ ಇದೆ ಅವರಿಗೆ ನಮ್ಮ ಮಠಕ್ಕೆ ಅವಕಾಶ ಇದೆ. ಭಾರತೀಯರೆಲ್ಲರೂ ಒಂದೇ ಎಂದರು.

    ಶಾಸಕ ಬಸವರಾಜ್ ಯತ್ನಾಳ್ ನಿಮ್ಮ ಬಗ್ಗೆ ಹಗುರವಾಗಿ ಮಾತಾಡುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಗುರ ವ್ಯಕ್ತಿಗಳು ಹಗುರವಾಗಿ ಮಾತನಾಡುತ್ತಾರೆ. ಅಂತಹ ಹಗುರ ವ್ಯಕ್ತಿಗಳನ್ನು ಕೈ ಬಿಡಬೇಕು. ಪಂಚಮಸಾಲಿ ಸಮುದಾಯ ಯಾರ ಕೈಯಲ್ಲೂ ಇಲ್ಲ. ಅಲ್ಪರ ಬಗ್ಗೆ ನಾವು ವಿಚಾರ ಮಾಡುವುದಿಲ್ಲ. ನಾವು ಅವರ ಮಾತನ್ನು ಸೀರಿಯಸ್ ಆಗಿ ತಗೆದುಕೊಳ್ಳಲ್ಲ ಎಂದು ಯತ್ನಾಳ್‌ಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಧರೆಗೆ ಉರುಳಿದ ಮರ

    ಭಗವದ್ಗೀತೆ ಪಠ್ಯದಲ್ಲಿ ಸೇರಿಸಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿ, ಭಗವದ್ಗೀತೆಯನ್ನು ಎಲ್ಲರೂ ಓದಬೇಕು. ಅದನ್ನು ವಿರೋಧ ಮಾಡಿದವರು ಅದನ್ನು ಓದಿಲ್ಲ. ಹೀಗಾಗಿ ವಿರೋಧ ಮಾಡುವುದಕ್ಕಿಂತಲೂ ಮೊದಲು ಎಲ್ಲರೂ ಅದನ್ನು ಓದಬೇಕು. ಬದುಕಿಗೆ ಭಗವದ್ಗೀತೆ ಬಹಳ ಹತ್ತಿರ ಇದೆ. ಪಠ್ಯದಲ್ಲಿ ಸೇರಿಸುವುದಕ್ಕೆ ನಮ್ಮ ಬೆಂಬಲ ಇದೆ ಎಂದರು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ

    ಈ ಮೊದಲು ಮಾತನಾಡಿದ ಸ್ವಾಮೀಜಿ, ಏಪ್ರಿಲ್ 16 ರಂದು ಅಂಜನಾದ್ರಿ ಬೆಟ್ಟದಲ್ಲಿ ವಚನ ಮಹೋತ್ಸವ ನಡೆಯಲಿದೆ. ಯೋಗವನ್ನು ಪ್ರಚಾರ ಮಾಡುವುದಕ್ಕಾಗಿ ರಾಜ್ಯದ 75 ಐಕಾನಿಕ್ ಸ್ಥಳದಲ್ಲಿ ಯೋಗ ಮಹೋತ್ಸವ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

  • ರಾಷ್ಟ್ರಿಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮಾಜಿ ಹೆಸರಿಡಿ: ವಚನಾನಂದ ಸ್ವಾಮೀಜಿ

    ರಾಷ್ಟ್ರಿಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮಾಜಿ ಹೆಸರಿಡಿ: ವಚನಾನಂದ ಸ್ವಾಮೀಜಿ

    ಹುಬ್ಬಳ್ಳಿ: 500 ವರ್ಷಗಳ ಹಿಂದೆಯೇ ಬೆಳವಡಿ ಸಾಮ್ರಾಜ್ಯದಲ್ಲಿ 2 ಸಾವಿರ ಮಹಿಳೆಯರ ಸ್ತ್ರೀ ಸೈನ್ಯ ಕಟ್ಟಿದ್ದ ಬೆಳವಡಿ ಮಲ್ಲಮ್ಮಾಜಿ ಹೆಸರನ್ನು ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ಇಡಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

    ಸೋಮವಾರ ನಡೆದ ವೀರಮಾತೆ ಬೆಳವಡಿ ರಾಣಿ ಮಲ್ಲಮ್ಮಾಜಿ 374ನೇ ವಿಜಯೋತ್ಸವ ದಿನದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಬೆಳವಡಿ ಮಲ್ಲಮ್ಮನ ಭಾವಚಿತ್ರಕ್ಕೆ ಗೌರವಾರ್ಪಣೆಯನ್ನು ಸಲ್ಲಿಸಿ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಯಿತು.

    ಬೆಳವಡಿ ಮಲ್ಲಮ್ಮ ದೇಶದಲ್ಲಿ ಮೊದಲ ಮಹಿಳಾ ಸೈನ್ಯವನ್ನು ರಚಿಸಿ ಅದರ ಮುಂದಾಳತ್ವವನ್ನು ವಹಿಸಿದ್ದರು. ಹಲವಾರು ಯುದ್ಧಗಳಲ್ಲಿ ಈ ವೀರಾಗ್ರಣೀಯರ ಸೈನ್ಯವನ್ನು ಮುನ್ನಡೆಸಿದ ಕೀರ್ತಿ ಮಲ್ಲಮ್ಮಾಜಿ ಅವರದ್ದು. ಇಂತಹ ವೀರಾಗ್ರಣೀ ಮಹಿಳೆಯ ಹೆಸರನ್ನು ನಮ್ಮ ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ಇಡುವುದು ಸೂಕ್ತ. ಇದರಿಂದಾಗಿ ನಮ್ಮ ದೇಶದ ಇತಿಹಾಸದಲ್ಲಿ ರೋಚಕ ಅಧ್ಯಾಯಗಳನ್ನು ಬರೆದಂತಹ ಮಹಿಳೆಗೆ ಇನ್ನಷ್ಟು ಮಹತ್ವ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪಠ್ಯ ಪುಸ್ತಕದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಹೋರಾಟದ ಕತೆ ಅಳವಡಿಸಲು ಚಿಂತನೆ: ಬೊಮ್ಮಾಯಿ

    ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಲಾಗಿದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸುವುದಾಗಿ ವಚನಾನಂದ ಶ್ರೀಗಳು ತಿಳಿಸಿದರು.

    ಇದೇ ವೇಳೆ ಬೆಳವಡಿ ರಾಣಿ ಮಲ್ಲಮ್ಮಾಜಿಯ ಪ್ರಾಧಿಕಾರ ರಚಿಸಬೇಕು. ಮಲ್ಲಮ್ಮಾಜಿಯ ಕುರುಹುಗಳು ರಾಕ್ ಗಾರ್ಡನ್, ರಾಣಿ ಮಲ್ಲಮ್ಮಾಜಿಯ ಸ್ಮಾರಕ ಭವನ ನಿರ್ಮಾಣ ಹಾಗೂ ರಾಣಿ ಮಲ್ಲಮ್ಮಾಜಿ ಹೆಸರಿನಲ್ಲಿ ಒಂದು ಸೈನಿಕ ಶಾಲೆಯನ್ನು ರಚಿಸಬೇಕು ಎಂಬ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಬಂಕರ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒದ್ದು ಅಪಾರ್ಟ್ಮೆಂಟ್‌ಗೆ ಕಳುಹಿಸುತ್ತಿದ್ದಾರೆ: ವಿದ್ಯಾರ್ಥಿ

    ಕಾರ್ಯಕ್ರಮದಲ್ಲಿ ಸಚಿವ ಸಿಸಿ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಸೋಮನಗೌಡ ಪಾಟೀಲ್, ಚಂದ್ರಶೇಖರ ಪೂಜಾರ, ಮಲ್ಲಿಕಾರ್ಜುನ ಅಗಡಿ ಮುಂತಾದವರು ಉಪಸ್ಥಿತರಿದ್ದರು.

  • ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ

    ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ

    – ಹರಿಹರ ನಗರದ ಸರ್ವತೋಮುಖ ಅಭಿವೃದ್ದಿಯ ಗುರಿ

    ಬೆಂಗಳೂರು: ಹರಿಹರದ ಗತವೈಭವವನ್ನು ಮರಳಿ ಪಡೆಯುವ ಹಾಗೂ ದೇಶದಲ್ಲೇ ಹಿಂದೂಗಳ ಪ್ರಮುಖ ಯಾತ್ರಾಸ್ಥಳವನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು.

    ಇಂದು ಬೆಂಗಳೂರಿನ ಶ್ವಾಸಯೋಗ ಕೇಂದ್ರದಲ್ಲಿ ಫೆಬ್ರವರಿ 20 2022 ರಂದು ಸಿಎಂಗಳಿಂದ ನಡೆಯಲಿರುವ 108 ತುಂಗಾಭದ್ರಾ ಆರತಿ ಮಂಟಪಗಳ ‘ಶಿಲಾನ್ಯಾಸ ಕಾರ್ಯಕ್ರಮ’ದ ಮಾಹಿತಿ ಹಾಗೂ ಕಾನ್ಸೆಪ್ಟ್ ವೀಡಿಯೋವನ್ನು ಬಿಡುಗಡೆಗೊಳಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಅವರು, ಉತ್ತರಕ್ಕೆ ಗಂಗೆಯ ರೀತಿ ದಕ್ಷಿಣ ಭಾರತಕ್ಕೆ ತುಂಗಾ ನದಿ ಪವಿತ್ರ ಎನಿಸಿದೆ. ಗಂಗಾ ಸ್ನಾನ-ತುಂಗಾ ಪಾನ ಎನ್ನುವ ಉಕ್ತಿಯೂ ಇದೆ ಎಂದು ಮಾತನಾಡಿದರು.  ಇದನ್ನೂ ಓದಿ:  ನ್ಯಾಯಾಲಯ ಆದೇಶಕ್ಕೆ ಧಾರ್ಮಿಕ ಮುಖಂಡರಿಂದ ಬೆಂಬಲ: ರಾಯಚೂರಿನಲ್ಲಿ ಗಲಾಟೆ ಇಲ್ಲ

    ಗಂಗಾರತಿಯ ರೀತಿಯಲ್ಲಿಯೇ ತುಂಗಾರತಿಯನ್ನು ಏಕೆ ಆರಂಭಿಸಬಾರದು ಎನ್ನುವ ವಿಷಯ ನಮ್ಮ ಮನಸ್ಸಿಗೆ ಬಂದಿತ್ತು. ಈ ಯೋಚನೆ ಬರುತ್ತಿದ್ದಂತೆ, ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಬಳಿಯಿರುವ ತುಂಗಾ ತಟದಲ್ಲಿ ತುಂಗಾರತಿಯನ್ನು ಆರಂಭಿಸಲು ಯೋಚಿಸಿದೆವು. ಜೊತೆಗೆ ಗಂಗೆಯಂತೆ ತುಂಗಾ ನದಿಯನ್ನೂ ಶುಚಿಗೊಳಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಬಂದಾಗ ಭಕ್ತಗಣದೊಂದಿಗೆ ಸೇರಿ ತುಂಗಾ ನದಿಯನ್ನು ಶುಚಿಗೊಳಿಸುವ, ನಮಾಮಿ ತುಂಗೆ ಯೋಜನೆಗೆ ಚಾಲನೆ ನೀಡಿದೆವು ಎಂದು ವಿವರಿಸಿದರು.

    ಪ್ರತಿ ನಿತ್ಯ ಸೂರ್ಯಾಸ್ತವಾದ ನಂತರ ಗಂಗೋತ್ರಿ, ರುದ್ರಪ್ರಯಾಗ ದೇವಪ್ರಯಾಗ, ಋಷಿಕೇಶ, ಹರಿದ್ವಾರ ಸೇರಿದಂತೆ ನೂರಾರು ಪವಿತ್ರ ಗಂಗಾ ತಟಗಳಲ್ಲಿ ಗಂಗಾರತಿ ನಡೆಯುವ ರೀತಿಯಲ್ಲಿಯೇ ನಮ್ಮ ತುಂಗಾ ನದಿ ತಟದಲ್ಲೂ ತುಂಗಾರತಿ ಪ್ರಾರಂಭಿಸಬೇಕು. ಹೇಗೆ ಮನಮೋಹಕ ಗಂಗಾರತಿ ಲಕ್ಷಾಂತರ ಭಕ್ತರನ್ನು ಸೆಳೆಯಿತೋ ಹಾಗೆ, ತುಂಗಾರತಿ ಕೂಡ ನಾಡಿನ ಭಕ್ತರನನು ಸೆಳೆಯಬೇಕು ಎನ್ನುವುದು ನಮ್ಮ ಇಚ್ಛೆಯಾಗಿತ್ತು ಎಂದರು.

    ಈ ಹಿನ್ನೆಲೆಯಲ್ಲಿ ನಾವು ಮಾಡಿದ ಮನವಿಗೆ ಸೂಕ್ತವಾಗಿ ಕರ್ನಾಟಕ ಸರ್ಕಾರ ಸ್ಪಂದಿಸಿದೆ. ಅಲ್ಲದೇ, 30 ಕೋಟಿ ರೂಪಾಯಿಗಳ ಅನುದಾನವೂ ನೀಡಿದ್ದು, ಭಾನುವಾರ ಫೆಬ್ರವರಿ 20 2022 ರಂದು ಮುಖ್ಯಮಂತ್ರಿಗಳು ಈ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

    ಏನಿದು ‘ತುಂಗಾಭದ್ರಾ ಆರತಿ’ ಯೋಜನೆ?
    ಹರಿಹರದ ತುಂಗಭದ್ರಾ ನದಿ ತಟದಲ್ಲಿನ ರಾಘವೇಂದ್ರ ಶ್ರೀಗಳ ದೇವಸ್ಥಾನದಿಂದ ಹರಿಹರೇಶ್ವರ ದೇವಸ್ಥಾನದ ಮಧ್ಯದಲ್ಲಿ ತುಂಗಾ ಮಂಟಪಗಳನ್ನು ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಇದಕ್ಕೆ 30 ಕೋಟಿ ರೂ. ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. 108 ಮಂಟಪ ನಿರ್ಮಾಣ, ಗಂಗಾ ಆರತಿಯಂತೆ ಪ್ರತಿನಿತ್ಯ ತುಂಗಾಭದ್ರಾ ಆರತಿ, ಪೂಜೆ ನಡೆಸುವ ಯೋಜನೆ ಇದಾಗಿದೆ ಎಂದು ವಿವರಿಸಿದರು.

    ಉತ್ತರ ಮತ್ತು ದಕ್ಷಿಣ ಕರ್ನಾಟಕ ಒಂದುಗೂಡಿಸುವ ಮಹತ್ವದ ಯೋಜನೆ ಇದಾಗಿರಲಿದೆ. ಇದಕ್ಕೆ ಈಗಾಗಲೇ ಅನುದಾನ ಬಿಡುಗಡೆ ಆಗಿದ್ದು, ಯೋಜನೆಯ ನೀಲೀ ನಕ್ಷೆಯನ್ನು ಅಂತಿಮಗೊಳಿಸಲಾಗಿದೆ. ಅಲ್ಲದೆ, ಫೆಬ್ರವರಿ 20 ರಂದು ಮುಖ್ಯಮಂತ್ರಿಗಳು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

    ಗತವೈಭವ ಮರಳಿಸುವ ಗುರಿ!
    ತುಂಗಾಭದ್ರಾ ಆರತಿಯ ಅನುಷ್ಠಾನದಿಂದ ಹರಿಹರ ನಗರ ಹಾಗೂ ತುಂಗಾಭದ್ರಾ ನದಿ ಹರಿಯುವ ಎಲ್ಲ ಕಡೆಯೂ ಪ್ರವಾಸೋದ್ಯಮ, ಉದ್ಯೋಗಾವಕಾಶ ಹಾಗೂ ಗತವೈಭವವನ್ನು ಮರಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಹೇಗೆ ವಾರಣಾಸಿ ಕಾರಿಡಾರ್‍ನಲ್ಲಿ ಗಂಗಾನದಿ ಹರಿಯುವ ಎಲ್ಲ ಕಡೆಯೂ ಗಂಗಾ ಆರತಿ ನಡೆಯುವಂತೆ ತುಂಗಾಭದ್ರಾ ನದಿ ಹರಿಯುವ ಎಲ್ಲೆಡೆಯೂ ಆರತಿ ಕಾರ್ಯಕ್ರಮ ನಡೆಯಬೇಕು. ಈ ಮೂಲಕ ಜೀವ ನದಿಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಹಾಗೂ ಅದರ ಸುತ್ತಮುತ್ತಲಿನ ನಗರಗಳ ಸರ್ವತೋಮುಖ ಅಭಿವೃದ್ದಿಯಾಗುವುದು ನಮ್ಮ ಉದ್ದೇಶ ಮತ್ತು ಗುರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಪಂಜಾಬ್ ಚುನಾವಣೆಗೂ ಮುನ್ನಾ ದಿನ 12,430 ಹೊಸ ಸ್ಮಾರ್ಟ್ ತರಗತಿ ಉದ್ಘಾಟಿಸಿದ ಕೇಜ್ರಿವಾಲ್

    ತುಂಗಾಭದ್ರಾ ನದಿ ಹರಿಯುವ ಎಲ್ಲ ಸ್ಥಳಗಳಲ್ಲಿಯೂ ಕೂಡಾ ನಾವು ಪ್ರವಾಸೋದ್ಯಮ, ಉದ್ಯೋಗಾವಕಾಶ ಹೆಚ್ಚಿಸುವುದು ಮತ್ತು ದೇಶದ ಪ್ರಮುಖ ಹಿಂದೂಯಾತ್ರಾ ಸ್ಥಳಗಳಲ್ಲಿ ಒಂದಾಗಿ ಗುರುತಿಸುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಕಾರ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನಮ್ಮ ಅಭಿನಂದನೆಗಳನ್ನು ತಿಳಿಸಿದರು.

  • ಜಿಲ್ಲೆಗೊಂದು ಮಠ ಮಾಡಲಿ ಮೂರನೇ ಪಂಚಮಸಾಲಿ ಪೀಠಕ್ಕೆ ನಮ್ಮ ಬೆಂಬಲ: ವಚನಾನಂದ ಸ್ವಾಮೀಜಿ

    ಜಿಲ್ಲೆಗೊಂದು ಮಠ ಮಾಡಲಿ ಮೂರನೇ ಪಂಚಮಸಾಲಿ ಪೀಠಕ್ಕೆ ನಮ್ಮ ಬೆಂಬಲ: ವಚನಾನಂದ ಸ್ವಾಮೀಜಿ

    ದಾವಣಗೆರೆ: ಮೂರನೇ ಪೀಠದ ನಿರ್ಮಾಣಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿದ್ದರು. ನಾವು ಸಹಕಾರ ಕೊಡುತ್ತೇವೆ. ನಮ್ಮ ಸಮಾಜಕ್ಕೆ ಪ್ರತಿ ಜಿಲ್ಲೆಗೆ ಪೀಠಗಳ ಭಯವಿಲ್ಲ. ಪೀಠಗಳು ಹೆಚ್ಚಾದರೆ ನಮ್ಮ ಪೀಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಭೀತಿ ಇಲ್ಲ ಎಂದು ಪರೋಕ್ಷವಾಗಿ ಕೂಡಲಸಂಗಮ ಜಯಮೃತ್ಯುಂಜಯ ಶ್ರೀ ವಿರುದ್ಧ ಹರಿಹರ ಪಂಚಮಸಾಲಿ ಪೀಠದ ಶ್ವಾಸಗುರು ವಚನಾನಂದ ಸ್ವಾಮೀಜಿ ಕಿಡಿಕಾರಿದರು.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಅವರು, ಹರಿಹರದ ಪಂಚಮಸಾಲಿ ಪೀಠ 20 ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದೆ. ವೀರಶೈವ ಪಂಚಮಸಾಲಿ ಒಕ್ಕೂಟ ಈಗಾಗಲೇ ಇದೆ. ಪಂಚಮಸಾಲಿ ಸಮಾಜದವರು ಮತಾಂತರ ಆಗುತ್ತಿದ್ದಾರೆ. ಧಾರ್ಮಿಕವಾಗಿ ಸಂಘಟನೆಯಾಗಬೇಕು ಎಂದು ಸಂಘಟನೆ ಮಾಡಿಕೊಂಡಿದ್ದಾರೆ. ಮೂರನೇ ಪೀಠದ ಗೊಂದಲಗಳ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ:  ಸತ್ಯೇಂದ್ರ ಜೈನ್‍ರನ್ನು ಬಂಧಿಸಲು ಇಡಿ ಯೋಜನೆ ರೂಪಿಸುತ್ತಿದೆ: ಕೇಜ್ರಿವಾಲ್

    ಮೂರನೇ ಪೀಠದ ಒಕ್ಕೂಟದ ಅಧ್ಯಕ್ಷರು ಕೂಡ ನಮ್ಮ ಪೀಠಕ್ಕೆ ಬಂದಿದ್ದರು. ಅವರೆಲ್ಲರೂ ಹೇಳಿದ್ದು, ಪಂಚಮಸಾಲಿ ಸಮಾಜದ ಮೂಲ ಪೀಠ ಎಂದರೆ ಅದು ಹರಿಹರದ ಪಂಚಮಸಾಲಿ ಪೀಠ ಎಂದು. ಮೂರನೇ ಪೀಠದ ನಿರ್ಮಾಣಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿದ್ದರು. ನಾವು ಸಹಕಾರ ಕೊಡುತ್ತೇವೆ ಎಂದು ವಿವರಿಸಿದರು.

    ಪೀಠಗಳು ಹೆಚ್ಚಾದರೆ ನಮ್ಮ ಸಮಾಜ ಹೆಚ್ಚು ಸಂಘಟನೆಯಾಗುತ್ತದೆ. ಅಯಾ ಭಾಗದಲ್ಲಿ ನಮ್ಮ ಸ್ವಾಮಿಗಳು ಇದ್ದರೆ ಜನರು ಸಂಘಟಕರಾಗುತ್ತಾರೆ. ಅವರು ಕೇಳಿದ್ದಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ. ಅಲ್ಲದೆ ಮುರುಗೇಶ್ ನಿರಾಣಿ ಅವರನ್ನು ಪೀಠಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಶ್ರೀ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ಮುರುಗೇಶ್ ನಿರಾಣಿ ಅವರು ತಮ್ಮ ಸ್ವಾರ್ಥಕ್ಕಾಗಿ ಪೀಠಗಳನ್ನು ಬಳಸಿಲ್ಲ. ನಮ್ಮ ಸಮಾಜದ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಸುಖಾಸುಮ್ಮನೆ ನಿರಾಣಿ ಅವರ ಮೇಲೆ ಆರೋಪ ಸರಿಯಲ್ಲ ಎಂದು ನಿರಾಣಿ ಪರ ಬ್ಯಾಟಿಂಗ್ ಬೀಸಿದರು. ಇದನ್ನೂ ಓದಿ: ಖಾಸಗಿ ಬಸ್ ಮಾಲೀಕ ನಾಪತ್ತೆ- ಸೇತುವೆ ಬಳಿ ಕಾರು, ಫೋನ್ ಪತ್ತೆ

    ಪಾದಯಾತ್ರೆ ಹೋರಾಟ ಮಾಡಿದ್ದೀವಿ ಅಂತ ಪದೇ ಪದೇ ನಾವು ಹೇಳಿಲ್ಲ. ಸಮಾಜಕ್ಕೋಸ್ಕರ ಹೋರಾಟ ಮಾಡುವುದು ಅವರ ಕರ್ತವ್ಯ. ಆದರೆ ಅದನ್ನೇ ಹೇಳಿಕೊಳ್ಳುತ್ತಾ ಹೋಗುವುದಲ್ಲ. ನಾವು ಈಗಾಗಲೇ ಮೀಸಲಾತಿ ಬಗ್ಗೆ ನ್ಯಾಯಬದ್ಧವಾಗಿ ಹೋರಾಟ ಮಾಡುತ್ತಿದ್ದೇವೆ ಎಂದ ಆಕ್ರೋಶ ವ್ಯಕ್ತಪಡಿಸಿದರು.

  • ‘ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’- ಪ್ರಮಾದಕ್ಕೆ ಕ್ಷಮೆ ಕೇಳಿದ ವಚನಾನಂದಸ್ವಾಮೀಜಿ

    ‘ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’- ಪ್ರಮಾದಕ್ಕೆ ಕ್ಷಮೆ ಕೇಳಿದ ವಚನಾನಂದಸ್ವಾಮೀಜಿ

    ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ರಾಜ್ಯ ರಾಜಕೀದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಎಲ್ಲಾ ಸಮುದಾಯದ ಶಾಸಕರು ಅವರ ಶಕ್ತಿಯಾನುಸಾರ ಸಚಿವಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ನಿನ್ನೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನಡೆದ ಘಟನೆಗೆ ಭಕ್ತರಲ್ಲಿ ವಚನಾಂದ ಸ್ವಾಮೀಜಿಗಳು ಕ್ಷಮೆ ಕೋರಿದ್ದಾರೆ.

    ಸಂಪುಟ ವಿಸ್ತರಣೆ ಕಾರಣ ಆಯಾ ಸಮುದಾಯದ ಶಾಸಕರುಗಳಿಗೆ ಅವರ ಸಮುದಾಯದ ಪೀಠಾಧಿಪತಿಗಳು ಬೆಂಬಲ ನೀಡುತ್ತಿದ್ದಾರೆ. ಬುಧವಾರ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಆಯೋಜಿಸಿದ್ದ ಹರಜಾತ್ರೆ ಮಹೋತ್ಸವದಲ್ಲೂ ಸಚಿವ ಸಂಪುಟದಲ್ಲಿ ಸಮುದಾಯದ ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಗುರುಪೀಠದ ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಸಿಡಿಮಿಡಿಗೊಂಡ ಸಿಎಂ ಬಿಎಸ್‍ವೈ ಅವರು, ಸ್ವಾಮೀಜಿ ನೀವು ಸಲಹೆ ಕೊಡಿ, ಆದರೆ ಧಮ್ಕಿ ಹಾಕಬೇಡಿ ಎಂದಿದ್ದರು. ಆ ಬಳಿಕ ಶಾಸಕ ಮುರುಗೇಶ್ ನಿರಾಣಿಮೇಲೆ ಕೆಂಡಾಮಂಡಲವಾಗಿದ್ದರು.

    ನಿನ್ನೆ ನಡೆದ ಘಟನೆಯಿಂದ ಇಂದು ನಡೆದ ಜಾತ್ರೆಯಲ್ಲಿ ಸ್ವಲ್ಪ ಭಕ್ತರ ಆಗಮನ ಕೂಡ ಕ್ಷೀಣಿಸಿತ್ತು. ಇಂದು ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಕೂಡ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಪಂಚಮಸಾಲಿ ಗುರುಪೀಠದೊಂದಿಗೆ ತಾವು ಸದಾ ಇರುವುದಾಗಿ ಹೇಳಿ, ಎರಡು ಸಮುದಾಯಗಳು ಸಂಘಟಿತರಾಗಿ, ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ 51 ಸ್ಥಾನಗಳನ್ನು ಗೆಲ್ಲಬೇಕೆಂದರು ಕರೆ ನೀಡಿದರು.

    ಆ ಬಳಿಕ ಮಾತನಾಡಿದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರು, ನಿನ್ನೆ ಅಥವಾ ಇಂದಿನ ಕಾರ್ಯಕ್ರಮದಲ್ಲಿ ಏನಾದರು ನಮ್ಮಿಂದ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಭಕ್ತರಲ್ಲಿ ಮನವಿ ಮಾಡಿದರು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‍ವೈ ಎದುರು ಸಮುದಾಯದ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಸಮುದಾಯ ಕೈಬಿಡುತ್ತದೆ ಎಂದಿದ್ದ ಸ್ವಾಮೀಜಿಗಳು, ಇಂದು ಸ್ವಲ್ಪ ತಮ್ಮ ವರಸೆಯನ್ನು ಬದಲಿಸಿದ್ದರು.

  • ಪಂಚಮಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡ್ಬೇಕು: ವಚನಾನಂದ ಸ್ವಾಮೀಜಿ

    ಪಂಚಮಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡ್ಬೇಕು: ವಚನಾನಂದ ಸ್ವಾಮೀಜಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಈಗ ಲಿಂಗಾಯತ ಸಮುದಾಯದ ಸಂಕಟ ಹೆಚ್ಚಾಗಿದೆ. ಕಾಂಗ್ರೆಸ್, ಜೆಡಿಎಸ್‍ನಿಂದ ಬಂದು ಗೆದ್ದವರಿಗೆ ಇನ್ನೂ ಮಂತ್ರಿ ಸ್ಥಾನ ಕೊಡೋದಕ್ಕೆ ಆಗಿಲ್ಲ. ಹೈಕಮಾಂಡ್ ಭೇಟಿ ಮಾಡೋದಕ್ಕೆ ಟೈಮ್ ಕೂಡ ಸಿಕ್ಕಿಲ್ಲ. ಆದರೆ ಪಕ್ಷದೊಳಗಿನ ಲಿಂಗಾಯತ ಸಮುದಾಯದ ಆಪ್ತರೇ ಸಚಿವ ಸ್ಥಾನಕ್ಕೆ ಕ್ಯೂ ನಿಂತಿದ್ದಾರೆ. ಈ ನಡುವೆ ಪಂಚಮಸಾಲಿ ಸಮುದಾಯಕ್ಕೆ ಮೂರು ಸಚಿವ ಸ್ಥಾನಗಳನ್ನಾದ್ರೂ ಕೊಡಬೇಕು ಅಂತ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ 15 ಶಾಸಕರನ್ನ ಕೊಟ್ಟಿದೆ. ಬಿಜೆಪಿಯಲ್ಲಿ 15 ಶಾಸಕರು ಪಂಚಮಸಾಲಿ ಸಮುದಾಯದವರು ಇದ್ದಾರೆ. ಕನಿಷ್ಠ ಮೂವರು ಸಚಿವರನ್ನಾಗಿ ಮಾಡಬೇಕು. ಈಗಾಗಲೇ ಒಂದು ಸಚಿವ ಸ್ಥಾನ ಕೊಟ್ಟಿದ್ದಾರೆ. ಆದರೆ 5 ಶಾಸಕರಿಗೆ ಒಬ್ಬರಂತೆಯಾದ್ರೂ 3 ಸಚಿವ ಸ್ಥಾನ ಕೊಡಬೇಕು ಅಂತ ಆಗ್ರಹಿಸಿದರು.

    ಅಷ್ಟೇ ಅಲ್ಲ ಉಳಿದ ಎರಡು ಸಚಿವ ಸ್ಥಾನದಲ್ಲಿ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ಕೊಡ್ಲೇಬೇಕು. ನಮ್ಮ ಸಮುದಾಯದಿಂದ ಹೆಚ್ಚು ಶಾಸಕರು ಗೆದ್ದಿದ್ದಾರೆ ಎಂದು ಕೇಳ್ತಿದ್ದೀವಿ. ಇದರಲ್ಲಿ ಬೇರೆ ಸಮುದಾಯಕ್ಕೆ ಅನ್ಯಾಯ ಎಲ್ಲಿ ಬಂತು..? ಹೆಚ್ಚು ಸ್ಥಾನ ಗೆದ್ದವರಿಗೆ ಸಚಿವ ಸ್ಥಾನ ಕೊಡದಿರೋದು ಸಾಮಾಜಿಕ ನ್ಯಾಯನಾ..? ಅಂತ ಪ್ರಶ್ನೆ ಮಾಡಿದ್ರು. ನಾವು ಮುಖ್ಯಮಂತ್ರಿಗಳ ಮನೆಬಾಗಿಲಿಗೆ ಹೋಗಲ್ಲ, ಧರಣಿ ಮಾಡುವಷ್ಟು ಕೆಳಮಟ್ಟಕ್ಕೆ ಇಳಿಯಲ್ಲ. ಆದರೆ ಅವರೇ ನಮ್ಮ ಮಠಕ್ಕೆ ಬರುವಂತೆ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದ್ದು ವಿಶೇಷವಾಗಿತ್ತು.

    ಇನ್ನೊಂದೆಡೆ ಸುದ್ದಿಗೋಷ್ಟಿಯಲ್ಲಿದ್ದ ಶಾಸಕ ಮುರುಗೇಶ್ ನಿರಾಣಿ, ನಾನು ಸಚಿವನಾಗಬೇಕು ಎಂದು ಶಾಸಕನಾಗಿ ಆಯ್ಕೆಯಾಗಿಲ್ಲ. ನಮ್ಮ ಪಕ್ಷದ ಮುಖಂಡರು ಹಾಗೂ ಜನಾಂಗದ ಪ್ರಮುಖರು ಚರ್ಚಿಸಿ ಯಾವ ನಿರ್ಧಾರ ಕೈಗೊಂಡರೂ, ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.

  • ಬೆಳ್ಳಿ ಬೆಡಗು ಕಾರ್ಯಕ್ರಮ- ಪ್ರಧಾನಿಗೆ ವಚನಾನಂದ ಸ್ವಾಮೀಜಿ ಆಹ್ವಾನ

    ಬೆಳ್ಳಿ ಬೆಡಗು ಕಾರ್ಯಕ್ರಮ- ಪ್ರಧಾನಿಗೆ ವಚನಾನಂದ ಸ್ವಾಮೀಜಿ ಆಹ್ವಾನ

    ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿರುವ ವೀರ ಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜನವರಿ 13 ಮತ್ತು 14 ರಂದು ನಡೆಯುವ ಬೆಳ್ಳಿ ಬೆಡಗು ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು ಆಹ್ವಾನಿಸಿದ್ದಾರೆ.

    2020ರ ಜನವರಿ 13 ಮತ್ತು 14ರ ಮಕರ ಸಂಕ್ರಾತಿ ಹಬ್ಬದ ದಿನದಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಆವರಣದಲ್ಲಿ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ಅದ್ಧೂರಿ ಹರ ಜಾತ್ರೆ ಹಾಗೂ ಬೆಳ್ಳಿ ಬೆಡಗು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನಿಯವರೇ ನೆರವೇರಿಸಬೇಕು ಎಂದು ವಚನಾನಂದ ಮಹಾಸ್ವಾಮಿಗಳು ದೆಹಲಿಗೆ ತೆರಳಿ ಆಮಂತ್ರಣ ನೀಡಿದ್ದಾರೆ.

    ಪ್ರಧಾನಿಗಳು ತಮ್ಮ ಬಳಿ 15 ನಿಮಿಷಗಳ ಕಾಲ ಕಳೆದಿದ್ದು, ಮೋದಿಯವರಿಗೆ ವಿಭೂತಿ, ಇಷ್ಟಲಿಂಗ ಹಾಗೂ ಇನ್ನಿತರ ಯೋಗಾ ಪರಿಕರಗಳನ್ನು ನೀಡಿದ್ದೇವೆ. ಮೋದಿಯವರು ಖಂಡಿತವಾಗಿಯೂ ಕೂಡ ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ವಚನಾನಂದ ಸ್ವಾಮೀಜಿಗಳು ತಿಳಿಸಿದರು.

    ಈ ಸಂದರ್ಭದಲ್ಲಿ ದಿವಂಗತ ಅನಂತ್‍ಕುಮಾರ್ ಅವರನ್ನು ಮೋದಿಯವರು ನೆನಪಿಸಿಕೊಂಡು ಕರ್ನಾಟಕದಿಂದ ತಮ್ಮನ್ನು ಭೇಟಿಯಾಗಲು ಯಾರೇ ಬಂದರೂ ಅವರನ್ನು ಕರೆದುಕೊಂಡು ಬರುತ್ತಿದ್ದರು ಎಂದು ನೆನಪಿಸಿಕೊಂಡರು ಎಂದು ಸ್ವಾಮೀಜಿಗಳು ಹೇಳಿದರು.

    ಈ ಸಂದಂರ್ಭದಲ್ಲಿ ಕೇಂದ್ರ ಸಚಿವರಾದ  ಪ್ರಹ್ಲಾದ್ ಜೋಶಿ, ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕ ಮುರುಗೇಶ ನಿರಾಣಿ, ಶ್ರೀ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ ಹಾಗೂ ರಾಜ್ಯ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಿ. ನಾಗನಗೌಡರು ಉಪಸ್ಥಿತರಿದ್ದರು.