Tag: ವಕ್ತಾರೆ

  • ಕಾಂಗ್ರೆಸ್‍ಗೆ ಪ್ರಿಯಾಂಕಾ ಚತುರ್ವೇದಿ ಗುಡ್‍ಬೈ

    ಕಾಂಗ್ರೆಸ್‍ಗೆ ಪ್ರಿಯಾಂಕಾ ಚತುರ್ವೇದಿ ಗುಡ್‍ಬೈ

    ನವದೆಹಲಿ: ಟ್ವೀಟ್ ಮೂಲಕ ಕಾಂಗ್ರೆಸ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಈಗ ಪಕ್ಷವನ್ನೇ ತೊರೆದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ಮೂರು ದಿನಗಳಿಂದ ಹೋರಾಟ ನಡೆಸಿದ ನನಗೆ ಬೆಂಬಲ ನೀಡಿದವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ರಾಜೀನಾಮೆ ನಿರ್ಧಾರವನ್ನು ನೀವು ಬೆಂಬಲಿಸುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಬೆಂಬಲಿಗರಿಗೆ ತಿಳಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್‍ನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಭಾರವಾದ ಮನಸ್ಸಿನಿಂದ ರಾಜೀನಾಮೆ ಪತ್ರವನ್ನು ಬರೆಯುತ್ತಿರುವೆ. ಕಾಂಗ್ರೆಸ್ ಸಿದ್ಧಾಂತಗಳಿಂದಾಗಿ ವರ್ಷಗಳ ಹಿಂದೆ ಮುಂಬೈನ ಯೂತ್ ಕಾಂಗ್ರೆಸ್‍ಗೆ ಸೇರಿಕೊಂಡಿದ್ದೆ. ಈ ಹತ್ತು ವರ್ಷಗಳಲ್ಲಿ ಪಕ್ಷವು ನನಗೆ ವಿವಿಧ ಅವಕಾಶ, ಸ್ಥಾನಮಾನ, ಜವಾಬ್ದಾರಿ ನೀಡಿ ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆಸಿದೆ. ನನಗೆ ನೀಡಿದ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿದ್ದೇನೆ. ಇದೂವರೆಗೂ ನನಗೆ ಬಂದ ಬೆದರಿಕೆ, ನಿಂದನೆ ಬಗ್ಗೆ ಹೇಳಿಕೊಂಡಿರಲಿಲ್ಲ. ನನ್ನ ಪರಿವಾರ ಹಾಗೂ ಮಕ್ಕಳು ಪಕ್ಷಕ್ಕಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ.

    ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ಪಕ್ಷದ ಕೆಲವು ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಪ್ರಿಯಾಂಕಾ ಚತುರ್ವೇದಿ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಕುರಿತು ಟ್ವೀಟ್ ಮಾಡಿದ್ದ ಅವರು, “ಪಕ್ಷಕ್ಕೆ ಬೆವರು ಹಾಗೂ ರಕ್ತ ಹರಿಸಿದವರಿಗಿಂತಲೂ ಕಾಂಗ್ರೆಸ್‍ನಲ್ಲಿ ಕೊಳಕು ಗೂಂಡಾಗಳು ಮನ್ನಣೆ ಪಡೆದುಕೊಳ್ಳುತ್ತಿರುವುದು ತೀವ್ರ ದುಃಖಕರ ಸಂಗತಿ” ಎಂದಿದ್ದರು.

    ಆಗಿದ್ದೇನು?:
    ಉತ್ತರ ಪ್ರದೇಶದಲ್ಲಿ ಪಕ್ಷದ ಕೆಲವು ಮುಖಂಡರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪ್ರಿಯಾಂಕಾ ಚತುರ್ವೇದಿ ಹೈಕಮಾಂಡ್‍ಗೆ ದೂರು ನೀಡಿದ್ದರು. ಇದನ್ನು ಆಲಿಸಿ ಹೈಕಮಾಂಡ್ ಅನುಚಿತವಾಗಿ ವರ್ತಿಸಿದ್ದರ ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಆದರೆ ಕೆಲವು ದಿನಗಳ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಧ್ಯಪ್ರವೇಶದಿಂದಾಗಿ ಮತ್ತೆ ಆ ಮುಖಂಡರನ್ನು ಪಕ್ಷಕ್ಕೆ ಸೇರಿಸಲಾಗಿತ್ತು. ಇದರಿಂದಾಗಿ ಪ್ರಿಯಾಂಕಾ ಚತುರ್ವೇದಿ ಅವರು ನಾಯಕರ ವಿರುದ್ಧವೇ ಗುಡುಗಿದ್ದರು.

    ಟಿಕೆಟ್ ಕೈ ತಪ್ಪಿತ್ತು:
    ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಚತುರ್ವೇದಿ ಚುನಾವಣಾ ಕಣಕ್ಕೆ ಇಳಿಯಲು ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದ ನಟಿ ಉರ್ಮಿಳಾ ಮಂತೋಡ್ಕರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಈ ವಿಚಾರವಾಗಿಯೂ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.