Tag: ವಕೀಲ್ ಸಾಬ್

  • ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾಸ್ಟಾರ್ ಚಿರು ಫಿದಾ!

    ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾಸ್ಟಾರ್ ಚಿರು ಫಿದಾ!

    ಹೈದರಾಬಾದ್: ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಚಿತ್ರ ತೆರೆಕಂಡು ಟಿ-ಟೌನ್‍ನಲ್ಲಿ ಧೂಳ್ ಎಬ್ಬಿಸುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೌದು, ಸುಮಾರು ಮೂರೂವರೆ ವರ್ಷದ ಬಳಿಕ ನಟ ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಸಿನಿಮಾದ ಮೂಲಕ ಸ್ಕ್ರೀನ್ ಮೇಲೆ ಪ್ರೇಕ್ಷಕರ ಮುಂದೆ ಬಂದಿದ್ದು, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದ್ದಾರೆ. ಈ ಮಧ್ಯೆ ಸಿನಿಮಾದಲ್ಲಿ ಪವನ್ ಕಲ್ಯಾಣ್‍ಗೆ ಎದುರಾಳಿ ಲಾಯರ್ ಆಗಿ ಖಡಕ್ ಡೈಲಾಗ್ ಹೊಡೆಯುವ ಪ್ರಕಾಶ್ ರಾಜ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

    ಪ್ರಕಾಶ್ ರಾಜ್ ನಟನೆಗೆ ಅಭಿಮಾನಿಗಳಷ್ಟೇ ಅಲ್ಲದೇ ಚಿರಂಜೀವಿ ಕೂಡ ಮಾರುಹೋಗಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಾಶ್ ರಾಜ್‍ರಂತಹ ಕಲಾವಿದ ಇದ್ದರೆ, ಸಹಜವಾಗಿ ಸಹ ಕಲಾವಿದರು ಪರ್ಫಾಮೆನ್ಸ್ ಕೂಡ ಹೆಚ್ಚಾಗುತ್ತದೆ. ‘ವಕೀಲ್ ಸಾಬ್’ ಚಿತ್ರದಲ್ಲಿ ಅವರ ನಟನೆ ಅದ್ಭುತ, ಪವನ್ ಕಲ್ಯಾಣ್ ಮುಂದೆ ಉತ್ತಮವಾಗಿ ನಟಿಸಿದ್ದಾರೆ. ಶುಭಾಶಯಗಳು ಪ್ರಕಾಶ್, ಹೀಗೆ ಮುಂದುವರಿಸಿ ಎಂದು ಕ್ಯಾಪ್ಷನ್ ಹಾಕಿ ಟ್ವೀಟ್ ಮಾಡಿದ್ದಾರೆ.

    ಚಿರು ಟ್ವೀಟ್‍ಗೆ ರಿಯಾಕ್ಟ್ ಮಾಡಿರುವ ಪ್ರಕಾಶ್, ಎಂದಿಗೂ ಸ್ಫೂರ್ತಿದಾಯಕ, ಎಂದಿಗೂ ಪ್ರೋತ್ಸಾಹಿಸುವ ಅಣ್ಣಾ.. ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ‘ವಕೀಲ್ ಸಾಬ್’ ಸಿನಿಮಾದಲ್ಲಿ ವಕೀಲ ಪಾತ್ರನಾಗಿ ಪವನ್ ಕಲ್ಯಾಣ್ ಮಿಂಚಿದ್ದು, ನಿರ್ದೇಶಕ ವೇಣು ಶ್ರೀರಾಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ನಿವೇತಾ ಥಾಮಸ್, ಶ್ರುತಿ ಹಾಸನ್, ಅನನ್ಯಾ ಮತ್ತು ಅಂಜಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದೆ.

  • ಪವರ್ ಸ್ಟಾರ್ ಸಿನಿಮಾ ಟ್ರೈಲರ್ ರಿಲೀಸ್ – ನಟನನ್ನು ನೋಡಲು ಥಿಯೇಟರ್ ಗ್ಲಾಸ್ ಪುಡಿ ಮಾಡಿದ ಅಭಿಮಾನಿಗಳು

    ಪವರ್ ಸ್ಟಾರ್ ಸಿನಿಮಾ ಟ್ರೈಲರ್ ರಿಲೀಸ್ – ನಟನನ್ನು ನೋಡಲು ಥಿಯೇಟರ್ ಗ್ಲಾಸ್ ಪುಡಿ ಮಾಡಿದ ಅಭಿಮಾನಿಗಳು

    ಹೈದರಾಬಾದ್: ಟಾಲಿವುಡ್ ನಟ, ಕಮ್ ರಾಜಕಾರಣಿ ಪವರ್‍ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ವಕೀಲ್ ಸಾಬ್’ ಸಿನಿಮಾದ ಟ್ರೈಲರ್ ಸೋಮವಾರ ಬಿಡುಗಡೆಯಾಗಿದ್ದು ವಿಶಾಖಪಟ್ಟಣಂನನಲ್ಲಿ ಅಭಿಮಾನಿಗಳು ಥಿಯೇಟರ್ ಗ್ಲಾಸ್ ಪುಡಿ ಮಾಡಿದ್ದಾರೆ.

    ಮಾರ್ಚ್ 29ರಂದು ತೆಲುಗು ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಸಂಜೆ 4 ಗಂಟೆ ಸುಮಾರಿಗೆ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಥಿಯೇಟರ್ ಬಳಿ 2 ಗಂಟೆಗೆ ಆಗಮಿಸಿ ತಮ್ಮ ನೆಚ್ಚಿನ ನಟನ ಫೋಟೋಗೆ ತೆಂಗಿನ ಕಾಯಿ ಹೊಡೆದು ಪೂಜೆ ಮಾಡಿದ್ದಾರೆ.

    ವಿಶಾಖಪಟ್ಟಣಂನ ಸಂಗಮ್ ಶರತ್ ಥಿಯೇಟರ್‍ನಲ್ಲೂ ಚಿತ್ರ ಬಿಡುಗಡೆಯಾಗಿತ್ತು. ಈ ವೇಳೆ ಟ್ರೈಲರ್ ವೀಕ್ಷಿಸಲು ಅಪಾರ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ದರು. ಈ ವೇಳೆ ಟ್ರೈಲರ್ ವೀಕ್ಷಿಸುವ ಬರದಲ್ಲಿ ಅಭಿಮಾನಿಗಳು ಥಿಯೇಟರ್ ಗ್ಲಾಸ್ ಹೊಡೆದು ಹಾಕಿ ಒಳಗೆ ಹೋಗಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಹೋಳಿ ಹಬ್ಬದ ದಿನದಂದು ಟ್ರೈಲರ್ ಬಿಡುಗಡೆಗೊಳಿಸುವುದಾಗಿ ಸಿನಿಮಾದ ನಿರ್ಮಾಪಕರು ಘೋಷಿಸಿದ್ದರು. ಈ ದಿನವನ್ನು ಹಬ್ಬದಂತೆ ಆಚರಿಸಲು ಪವರ್ ಸ್ಟಾರ್ ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದರು.

    ಎರಡು ವರ್ಷದ ಬಳಿಕ ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಸಿನಿಮಾದ ಮೂಲಕ ಕಮ್‍ಬ್ಯಾಕ್ ಮಾಡುತ್ತಿದ್ದು, ಈ ಸಿನಿಮಾ ಬಾಲಿವುಡ್ ಪಿಂಕ್ ಚಿತ್ರದ ರಿಮೇಕ್ ಆಗಿದೆ. ಈ ಸಿನಿಮಾದ ಅಮಿತಾಬ್ ಬಚ್ಚನ್ ಅಭಿನಯಿಸಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್ ತೆಲುಗಿನಲ್ಲಿ ಮಿಂಚಿದ್ದಾರೆ.

  • ವಕೀಲ್‌ ಸಾಬ್‌ಗೆ ಜೊತೆಯಾಗಲಿದ್ದಾರೆ ಶೃತಿ ಹಾಸನ್

    ವಕೀಲ್‌ ಸಾಬ್‌ಗೆ ಜೊತೆಯಾಗಲಿದ್ದಾರೆ ಶೃತಿ ಹಾಸನ್

    ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯದ ನಡುವೆಯೇ ಸಿನಿಮಾಗಳತ್ತ ಮತ್ತೆ ಒಲವು ತೋರಿದ್ದು, ಹಿಂದಿಯ ಪಿಂಕ್ ಚಿತ್ರದ ರೀಮೇಕ್‍ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಟಾಲಿವುಡ್‍ಗೆ ಮತ್ತೆ ಕಂಬ್ಯಾಕ್ ಆಗಿದ್ದು, ವೇಣು ಶ್ರೀರಾಮ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರವೇನೋ ಸೆಟ್ಟೇರಿದೆ. ಆದರೆ ಪವನ್‍ಗೆ ಜೋಡಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆದಿತ್ತು. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ.

    ಕೊರೊನಾ ಭೀತಿಯಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಆದರೆ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಆರಂಭದಲ್ಲಿ ಲಾವಣ್ಯ ತ್ರಿಪಾಠಿ, ಇಲಿಯಾನಾ ಹಾಗೂ ಪೂಜಾ ಹೆಗಡೆ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೀಗ ಪವನ್ ಕಲ್ಯಾಣ್‍ಗೆ ನಿರ್ದೇಶಕ ವೇಣು ಶ್ರೀರಾಮ್ ಜೋಡಿಯನ್ನು ಹುಡುಕಿದ್ದು, ಶೃತಿ ಹಾಸನ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕಥೆಯನ್ನು ಕೇಳಿದ ನಂತರ ಶೃತಿ ಹಾಸನ್ ನಟಿಸುವುಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಚಿತ್ರದ ಶೂಟಿಂಗ್‍ಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಕೊರೊನಾ ಭೀತಿ ಇರುವುದರಿಂದ ಸದ್ಯಕ್ಕೆ ಶೂಟಿಂಗ್‍ಗೆ ಬ್ರೇಕ್ ನೀಡಲಾಗಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಶೂಟಿಂಗ್ ಶೆಡ್ಯೂಲ್ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

    ತಮಿಳಿನ ನೇರ್ಕೋಂಡಾ ಪಾರ್ವೈ ಸಿನಿಮಾವನ್ನು ಸ್ವಲ್ಪ ಬದಲಾಯಿಸಿ ಎಚ್.ವಿನೂತ್ ಹಿಂದಿಯಲ್ಲಿ ರೀಮೇಕ್ ಮಾಡಿದ್ದರು. ಇದೀಗ ಪಿಂಕ್ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೃತಿಯವರು ಕೆಲ ಸೀನ್ ಹಾಗೂ ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

    ಶೃತಿ ಹಾಗೂ ಪವನ್ ಕಲ್ಯಾಣ್ ಈ ಹಿಂದೆ ಗಬ್ಬರ್ ಸಿಂಗ್ ಹಾಗೂ ಕಾಟಮರಾಯುಡು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದು, ಇದೀಗ ಮೂರನೇ ಬಾರಿಗೆ ಈ ಜೋಡಿ ಒಂದಾಗುತ್ತಿದೆ. ಸಿನಿಮಾದಲ್ಲಿ ಮಹಿಳೆಯರ ಭದ್ರತೆ ಕುರಿತು ಚಿತ್ರಿಸಲಾಗಿದೆಯಂತೆ. ಹಿಂದಿಯ ರೀಮೇಕ್ ಆಗಿದ್ದರೂ ತೆಲುಗಿನಲ್ಲಿ ಯಾವ ರೀತಿ ಮೂಡಿ ಬರಲಿದೆ ಎಂಬುದು ಪ್ರೇಕ್ಷಕರ ಕುತೂಹಲವಾಗಿದೆ.