Tag: ಲೋನ್

  • ಪೊಲೀಸ್ ಐಡಿ ಕದ್ದು 53,570 ರೂ. ಲೋನ್ ಪಡೆದ..!

    ಪೊಲೀಸ್ ಐಡಿ ಕದ್ದು 53,570 ರೂ. ಲೋನ್ ಪಡೆದ..!

    ಬೆಂಗಳೂರು: ಪೊಲೀಸ್ ಪೇದೆಯೊಬ್ಬರ ಐಡಿ ಕಾರ್ಡ್ ಕದ್ದು ಲೋನ್ ಪಡೆದಿರೋ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‍ನಲ್ಲಿ ಬೆಳಕಿಗೆ ಬಂದಿದೆ.

    ಇಲ್ಲಿನ ಪೊಲೀಸ್ ಠಾಣೆಯ ಪೇದೆ ಸೋಮಶೇಖರ್ ಅವರ ಐಡಿ ಕಾರ್ಡ್ ಕದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಜಾಜ್ ಫೈನಾನ್ಸ್ ಕಂಪನಿಯಿಂದ 53,570 ರೂ ಮೊತ್ತದ ಲೋನ್ ಪಡೆಯಲಾಗಿದೆ. ಮಾರ್ಚ್‍ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದಿದ್ದು, ಕಳೆದ ಶುಕ್ರವಾರ ಪೊಲೀಸ್ ಪೇದೆಗೆ ಫೈನಾನ್ಸ್ ಕಂಪನಿಯಿಂದ ಲೋನ್ ಹಣ ಪಾವತಿ ಮಾಡುವಂತೆ ಕರೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಫೈನಾನ್ಸ್ ಕಂಪನಿ ಲೋನ್ ನೀಡುವುದಕ್ಕೆ ಮುಂಚೆ ದಾಖಲಾತಿಗಳ ಪರಿಶೀಲನೆ ನಡೆಸದೆ ಲೋನ್ ಮಂಜೂರಾತಿ ಮಾಡಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಬಳಸಿ ಲೋನ್ ಪಡೆಯಲಾಗಿದೆ. ಹೀಗಾಗಿ ಸೋಮಶೇಖರ್ ಅವರು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

    ಫೈನಾನ್ಸ್ ಕಂಪನಿ ಹಾಗೂ ಲೋನ್ ಪಡೆದ ವ್ಯಕ್ತಿ ವಿರುದ್ಧ ವೈಟ್ ಫಿಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋನ್‍ಗಾಗಿ ಬೆಡ್‍ರೂಂಗೆ ಕರೆದ ಮ್ಯಾನೇಜರ್‌ಗೆ ಬಿತ್ತು ಗೂಸಾ!

    ಲೋನ್‍ಗಾಗಿ ಬೆಡ್‍ರೂಂಗೆ ಕರೆದ ಮ್ಯಾನೇಜರ್‌ಗೆ ಬಿತ್ತು ಗೂಸಾ!

    ದಾವಣಗೆರೆ: ಲೋನ್ ನೀಡುವುದಾಗಿ ಹೇಳಿ ಮಂಚಕ್ಕೆ ಕರೆದ ಮ್ಯಾನೇಜರ್‌ಗೆ ಮಹಿಳೆಯೊಬ್ಬರು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದಿದೆ.

    ಡಿಎಚ್‍ಎಫ್‍ಎಲ್ ಬ್ಯಾಂಕಿನ ಮ್ಯಾನೇಜರ್ ದೇವಯ್ಯ ಮಹಿಳೆಯನ್ನು ಮಂಚಕ್ಕೆ ಕರೆದು ಒದೆ ತಿಂದ ಆಸಾಮಿಯಾಗಿದ್ದಾನೆ. ಸುಮ (ಹೆಸರು ಬದಲಾಯಿಸಲಾಗಿದೆ) ಎಂಬವರು 2 ಲಕ್ಷ ರೂಪಾಯಿ ಬ್ಯಾಂಕ್ ಲೋನ್ ನೀಡುವಂತೆ ಮ್ಯಾನೇಜರ್ ದೇವಯ್ಯ ಬಳಿ ಮನವಿ ಮಾಡಿಕೊಂಡಿದ್ದರು. ಲೋನ್ ವಿಚಾರ ಮಾತನಾಡುವುದಾಗಿ ದೇವಯ್ಯ ಮಹಿಳೆಯನ್ನು ಮನೆಗೆ ಕರೆದಿದ್ದನು.

    ಲೋನ್ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಮ್ಯಾನೇಜರ್ ಮನೆಗೆ ತೆರಳಿದ್ದ ಸುಮಾಗೆ ಶಾಕ್ ಕಾದಿತ್ತು. ಮನೆಗೆ ಹೋಗುತ್ತಿದ್ದಂತೆ ದೇವಯ್ಯ ಮನೆಯ ಬಾಗಿಲನ್ನು ಹಾಕಿ,  ಬೆಡ್‍ರೂಂಗೆ ಬಾ ಎಂದು ಕರೆದಿದ್ದಾನೆ. ಬಟ್ಟೆ ಬಿಚ್ಚಿ ಸಹಕರಿಸುವಂತೆ ಮಹಿಳೆ ಬಳಿ ಕೇಳಿಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಸುಮಾ ಕೈಗೆ ಸಿಕ್ಕ ದೊಣ್ಣೆಯಿಂದ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

    ಮ್ಯಾನೇಜರ್ ನನ್ನು ಮನೆಯಿಂದ ಹೊರಕ್ಕೆ ಎಳೆದು ತಂದು ಚಪ್ಪಲಿಯಿಂದ ಹೊಡೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಂಕ್ ಮ್ಯಾನೇಜರ್ ನನ್ನು ವಶಕ್ಕೆ ಪಡೆದು, ಮಹಿಳಾ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಟಿ ಸಿಂಧು ಮೆನನ್ ಕುಟುಂಬದ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲು

    ನಟಿ ಸಿಂಧು ಮೆನನ್ ಕುಟುಂಬದ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲು

    ಬೆಂಗಳೂರು: ನಟಿ ಸಿಂಧು ಮೆನನ್ ಕುಟುಂಬದ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.

    ಕಚೇರಿಗೆ ಕಟ್ಟಡ ಬೋಗ್ಯಕ್ಕೆ ಪಡೆದು ವಂಚನೆ ಎಸಗಿರೋ ಅರೋಪದಡಿ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ಹಾಗೂ ಸುಧಾ ರಾಜಶೇಖರ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಸಿಂಧು ಮೆನನ್ ಸಹೋದರ ಮನೋಜ್ ಕಟ್ಟಡದ ದಾಖಲೆಗಳನ್ನು ನಕಲು ಮಾಡಿ ಬ್ಯಾಂಕಿನಲ್ಲಿ ಲೋನ್ ಮಾಡಿಸಿದ್ದ. ಕಚೇರಿ ಪ್ರಾರಂಭಿಸಲು ಕಮರ್ಷಿಯಲ್ ಜಾಗ ಬೇಕು ಎಂದು ಗಣೇಶ್ ರಾವ್‍ರನ್ನು ಸಂಪರ್ಕಿಸಿದ್ದ. ನಂತರ ಮನೋಜ್ ಕಟ್ಟಡ ಮಾಲೀಕ ಗಣೇಶ್ ರಾವ್ ರಿಂದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಕಟ್ಟಡದ ದಾಖಲೆಗಳನ್ನ ಪಡೆದಿದ್ದ.

    ಮೂರು ತಿಂಗಳ ಬಳಿಕ ಕಚೇರಿ ಬೇಡ ಎಂದು ಬೀಗ ವಾಪಸ್ ನೀಡಿದ್ದು, ಬ್ಯಾಂಕ್ ಲೋನ್ ಆಗಿಲ್ಲ. ನಿಮ್ಮ ಮಳಿಗೆ ಬೇಡ ಎಂದು ಮನೋಜ್ ಹೇಳಿದ್ದ. ಅಗ್ರೀಮೆಂಟ್ ದಾಖಲೆಗಳನ್ನು ಕೇಳಿದಾಗ ತಂದು ಕೊಡುತ್ತೇನೆ ಎಂದು ಮನೋಜ್ ಕೈ ಎತ್ತಿದ್ದ. ಗಣೇಶ್ ರಾವ್ ಮನೆ ದಾಖಲೆಗಳನ್ನು ಅಡವಿಟ್ಟು ವಿಜಯಾ ಬ್ಯಾಂಕಿನಲ್ಲಿ ಲೋನ್ ಗೆ ಅರ್ಜಿ ಹಾಕಿದ್ದ.

    ಬಾಡಿಗೆ ಕಟ್ಟಡವನ್ನ ಸ್ವಂತದ್ದು ಎಂದು ಮನೋಜ್ ಉಲ್ಲೇಖಿಸಿದ್ದನು. ಅಷ್ಟೇ ಅಲ್ಲದೇ ಲೋನ್ ಗೆ ಶ್ಯೂರಿಟಿ ಗಣೇಶ್ ರಾವ್ ಎಂದು ಫಾರಂ 16 ರಲ್ಲಿ ಉಲ್ಲೇಖವಾಗಿತ್ತು. ಸಿಂಧು ಮೆನನ್ ಸಹೋದರನ ವಂಚನೆ ವಿರುದ್ಧ ಗಣೇಶ್ ರಾವ್ ದೂರು ನೀಡಿದ್ದಾರೆ.

    ಸದ್ಯ ಯಶವಂತಪುರ ಪೊಲೀಸರು ದೂರು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ವಂಚನೆ ಆರೋಪ ನಟಿ ಸಿಂಧು ಮೆನನ್ ವಿರುದ್ಧ ಎಫ್‍ಐಆರ್- ಸಹೋದರ ಅರೆಸ್ಟ್

    https://www.youtube.com/watch?v=nFHjkXJz3Eg

    https://www.youtube.com/watch?v=DeqJXXm9-g8

    https://www.youtube.com/watch?v=HTJdVMMIOxU

  • ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಿದ ಮಹಿಳೆಗೆ 2 ಕಿ.ಮೀ ಮೆರವಣಿಗೆ ಮಾಡಿದ ಜನರು

    ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಿದ ಮಹಿಳೆಗೆ 2 ಕಿ.ಮೀ ಮೆರವಣಿಗೆ ಮಾಡಿದ ಜನರು

    ತುಮಕೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವೆ ಉಮಾಶ್ರೀ ಹೆಸರು ಹೇಳಿಕೊಂಡು ಮಹಿಳೆಯೊಬ್ಬಳು ನೂರಾರು ಜನರಿಗೆ ವಂಚಿಸಿದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

    ಶಿರಾ ಗೇಟ್ ನ ನಿವಾಸಿ ಪುಷ್ಪಾ ಜನರಿಗೆ ಪಂಗನಾಮ ಹಾಕಿದ ವಂಚಕಿ. ಈಕೆ ಸರ್ಕಾರದ ವತಿಯಿಂದ ಎಸ್.ಬಿ.ಐ ನಲ್ಲಿ ಎರಡು ಲಕ್ಷದವರೆಗೂ ಲೋನ್ ಕೊಡಿಸುತ್ತೀನಿ ಎಂದು ಹೇಳಿ ದೊಡ್ಡಸಾರಂಗಿಪಾಳ್ಯ ಸೇರಿದಂತೆ ಹಲವು ಗ್ರಾಮಗಳ ನೂರಾರು ಜನರಿಂದ ಮುಂಗಡವಾಗಿ ಮನಸೋ ಇಚ್ಛೆ ಹಣ ವಸೂಲಿ ಮಾಡಿ ಮೋಸ ಮಾಡಿದ್ದಾಳೆ.

    ಸ್ವಯಂ ಉದ್ಯೋಗ ಮಾಡಲು ಸರ್ಕಾರವೇ ಲೋನ್ ನೀಡುತ್ತೆ. ಅದಕ್ಕೆ ಮುಂಗಡವಾಗಿ ಹಣ ಕಟ್ಟಬೇಕು ಎಂದು ಹೇಳಿ ಕೆಲವರಿಂದ ನಾಲ್ಕು ಸಾವಿರ, ಇನ್ನೂ ಕೆಲವರಿಂದ ಐದು ಸಾವಿರ ಹೀಗೆ ಮನಬಂದಂತೆ ಲಕ್ಷಾಂತರ ರೂ. ಹಣ ಪೀಕಿದ್ದಾಳೆ. ಸುಳ್ಳು ದಾಖಲೆ ಪತ್ರ ತೋರಿಸಿ ವಂಚಿಸಿದ್ದಾಳೆ.

    ಒಂದು ವರ್ಷ ಆದರೂ ಲೋನ್ ಸಿಗದಿದ್ದಾಗ ರೊಚ್ಚಿಗೆದ್ದ ಜನರು ಶಿರಾ ಗೇಟ್ ನಲ್ಲಿ ಇರುವ ಪುಷ್ಪಾಳ ಮನೆಗೆ ಹೋಗಿ ತರಾಟೆ ತೆಗೆದುಕೊಂಡಿದ್ದಾರೆ. ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಪುಷ್ಪಾ ಒಪ್ಪದಿದ್ದಾಗ ನಗರ ಠಾಣೆವರೆಗೆ ಸುಮಾರು 2 ಕಿ.ಮಿ.ನಷ್ಟು ದೂರ ಮೆರವಣಿಗೆ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ಮೆರವಣಿಗೆ ಉದ್ದಕ್ಕೂ ಧರ್ಮದೇಟು ನೀಡುತ್ತಾ ಬಂದಿದ್ದಾರೆ.

    ಪುಷ್ಪಾಳ ವಂಚನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

  • ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಲೋನ್ ರಿಕವರಿ ಏಜೆಂಟ್‍ಗಳು

    ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಲೋನ್ ರಿಕವರಿ ಏಜೆಂಟ್‍ಗಳು

    ಲಕ್ನೋ: ಲೋನ್ ರಿಕವರಿ ಏಜೆಂಟ್‍ಗಳು ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 100 ಕಿ.ಮೀ ದೂರವಿರುವ ಸೀತಾಪುರದಲ್ಲಿ ನಡೆದಿದೆ.

    ಗ್ಯಾನ ಚಂದ್ರ(45) ಮೃತ ರೈತ. ಪೊಲೀಸರ ಪ್ರಕಾರ, ಗ್ಯಾನ ಚಂದ್ರ ಅವರು ಖಾಸಗಿ ಸಂಸ್ಥೆ ಎಲ್&ಟಿ ಫೈನಾನ್ಸ್‍ನಿಂದ ಕೆಲವು ವರ್ಷಗಳ ಹಿಂದೆ 5 ಲಕ್ಷ ರೂ. ಸಾಲ ಪಡೆದಿದ್ದರು. ಲೋನ್ ಪೂರ್ಣಗೊಳಿಸಲು 1.25 ಲಕ್ಷ ರೂ. ಪಾವತಿಸಬೇಕಿತ್ತು. ಚಂದ್ರ ಅವರು ಎರಡು ವಾರಗಳ ಹಿಂದೆ ಸಂಸ್ಥೆಗೆ 35 ಸಾವಿರ ರೂ. ಹಣವನ್ನ ಪಾವತಿಸಿದ್ದರು. ಲೋನ್ ಹಣ ಪಾವತಿಯಲ್ಲಿ ಕೆಲವು ವಾರ ವಿಳಂಬವಾದ ಕಾರಣ ಎರಡು ದಿನಗಳ ಹಿಂದೆ ಐವರು ರಿಕವರಿ ಏಜೆಂಟ್‍ಗಳು ಮನೆಯ ಬಳಿ ಬಂದು ಟ್ರ್ಯಾಕ್ಟರ್ ಹಿಂದಿರುಗಿಸುವಂತೆ ಚಂದ್ರ ಅವರಿಗೆ ಕೇಳಿದ್ದಾರೆ.

    ರೈತ ಹಾಗೂ ಏಜೆಂಟ್‍ಗಳ ನಡುವೆ ವಾಗ್ವಾದ ನಡೆದಿದದ್ದು, ಈ ವೇಳೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ರಿಕವರಿ ಏಜೆಂಟ್‍ಗಳು ಮುಂದಾಗಿದ್ದಾರೆ. ಅವರಲ್ಲಿ ಒಬ್ಬರು ಚಂದ್ರ ಅವರನ್ನ ಟ್ರ್ಯಾಕ್ಟರ್ ಮುಂದೆ ತಳ್ಳಿದ್ದಾರೆ. ಹೀಗಾಗಿ ಕುಟುಂಬಸ್ಥರ ಕಣ್ಣ ಮುಂದೆಯೇ ಚಂದ್ರ ಟ್ರ್ಯಾಕ್ಟರ್ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ.

    ಸಾಂದರ್ಭಿಕ ಚಿತ್ರ

    ನಾವು ಜನವರಿ 10ರಂದು 35 ಸಾವಿರ ರೂ. ಪಾವತಿಸಿದ್ದೆವು. ನಮ್ಮ ಅಣ್ಣ ಉಳಿದ ಹಣವನ್ನ ಬೇಗ ಪಾವತಿಸುತ್ತೇನೆಂದು ಹೇಳಿದ್ರು. ಆದ್ರೆ ಅವರು ಅದನ್ನು ಕೇಳಿಸಿಕೊಳ್ಳದೇ ಟ್ರ್ಯಾಕ್ಟರ್ ಕೀ ಕಸಿದುಕೊಂಡರು. ಅವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವಾಗ ಅವರಲ್ಲಿ ಒಬ್ಬ ವ್ಯಕ್ತಿ ನನ್ನ ಅಣ್ಣನನ್ನು ತಳ್ಳಿದ್ರು. ನಂತರ ಅವರು ಟ್ರ್ಯಾಕ್ಟರ್ ಕೆಳಗೆ ಬಿದ್ದು, ನಮ್ಮ ಕಣ್ಣ ಮುಂದೆಯೇ ಸಾವನ್ನಪ್ಪಿದ್ರು ಎಂದು ಚಂದ್ರ ಅವರ ಸಹೋದರ ಓಂ ಪ್ರಕಾಶ್ ಹೇಳಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ಹೇಳಿದ್ದಾರೆ.

    ಚಂದ್ರ ಅವರು 2.5 ಎಕರೆ ಜಮೀನು ಹೊಂದಿದ್ದರು. ಆದ್ರೆ ಐವರು ಪುತ್ರಿಯರು ಸೇರಿದಂತೆ 7 ಜನರ ಕುಟುಂಬವನ್ನು ಸಾಕಲು ಅದು ಸಾಕಾಗುತ್ತಿರಲಿಲ್ಲ. ಒಬ್ಬ ಮಗಳಿಗೆ ಶ್ರವಣ ಹಾಗೂ ಮಾತಾಡುವ ತೊಂದರೆಯೂ ಇತ್ತು. ಹಣ ಸಂಪಾದಿಸಲು ಚಂದ್ರ ಬೇರೆ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

  • ಎಂಬಿಎ ವ್ಯಾಸಂಗಕ್ಕೆ ಲೋನ್ ನೀಡಿ ಸಹಾಯ ಮಾಡಿದ್ದ ಪ್ರಧಾನಿಗೆ ಮಂಡ್ಯದ ಯುವತಿ ವಿಶ್ ನೊಂದಿಗೆ ಅಭಿನಂದನೆ

    ಎಂಬಿಎ ವ್ಯಾಸಂಗಕ್ಕೆ ಲೋನ್ ನೀಡಿ ಸಹಾಯ ಮಾಡಿದ್ದ ಪ್ರಧಾನಿಗೆ ಮಂಡ್ಯದ ಯುವತಿ ವಿಶ್ ನೊಂದಿಗೆ ಅಭಿನಂದನೆ

    ಮಂಡ್ಯ: ಪ್ರಧಾನಿ ಕುರ್ಚಿಯಲ್ಲಿ ಕೂತಿರೋ ಮೋದಿಗೆ ಯಾರಾದ್ರೂ ಸಮಸ್ಯೆ ಹೇಳಿ ಪತ್ರ ಬರೆದ್ರೆ ಅದಕ್ಕೆ ತಕ್ಷಣ ಸ್ಪಂದಿಸ್ತಾರೆ. ಹೀಗೆ ಮಂಡ್ಯದ ಯುವತಿ ಸಾರಾ ಎಂಬಾಕೆಯ ಮನಸ್ಸುನ್ನು ಮೋದಿ ಗೆದ್ದಿದ್ದಾರೆ.

    ಸಾರಾ ತನ್ನ ಎಂಬಿಎ ವ್ಯಾಸಂಗಕ್ಕೆ ಲೋನ್ ಕೊಡೋಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ನಿರಾಕರಿಸಿದಾಗ ಆಕೆ ಸಹಾಯ ಯಾಚಿಸಿ ಮೋದಿಗೆ ಪತ್ರ ಬರೆದಿದ್ದರು. ಹತ್ತೇ ದಿನದಲ್ಲಿ ಪ್ರಧಾನಿ ಕಚೇರಿಯಿಂದ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸಹಾಯ ಮಾಡುವಂತೆ ಪತ್ರ ಬಂದಿತ್ತು. ಆದ್ರೂ ಸೆಂಟ್ರಲ್ ಬ್ಯಾಂಕ್‍ನವರು ಸಾಲ ಕೊಟ್ಟಿರಲಿಲ್ಲ. ಕೊನೆಗೆ ಮೋದಿ ಪತ್ರ ಗಮನಿಸಿದ ವಿಜಯ್ ಬ್ಯಾಂಕ್‍ನವರು ಸಾರಾಗೆ ಲೋನ್ ಕೊಟ್ರು.

    ಸದ್ಯ ಸಾರಾ ಎಂಬಿಎ ಪದವಿ ಓದುತ್ತಿದ್ದು, ಇಂದು ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ, ಪ್ರಧಾನಿಯವರು ಸಹಾಯ ಮಾಡಿರುವುದು ನನಗೊಬ್ಬಳಿಗೆ ಅಲ್ಲ. ಇಂತಹ ಅನೇಕ ಉದಾಹರಣೆಗಳಿವೆ. 125 ಕೋಟಿ ಜನ ಇರೋ ಈ ದೇಶದಲ್ಲಿ ಪ್ರತಿಯೊಬ್ಬರ ಪತ್ರಕ್ಕೆ ಪ್ರತಿಕ್ರಿಯಿಸುತ್ತಾರೆ ಅಂದ್ರೆ ನಿಜಕ್ಕೂ ಅವರೊಬ್ಬರು ಗ್ರೇಟ್ ಲೀಡರ್. ಇದೇ ರೀತಿ ನಾಲ್ಕು ಮಂದಿ ಲೀಡರ್ ಆದ್ರೆ ಭಾರತ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತ ಹೇಳಿದ್ರು.

    ಹುಟ್ಟುಹಬ್ಬ ಆಚರಣೆ: ಇನ್ನು ಪ್ರಧಾನಿಯವರ ಹುಟ್ಟು ಹಬ್ಬದ ಪ್ರಯುಕತ ಮಂಡ್ಯ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸ್ವಚ್ಚಗೊಳಿಸುವ ಮೂಲಕ ಮಂಡ್ಯ ಬಿಜೆಪಿ ಕಾರ್ಯಕರ್ತರು ವಿಶೇಷವಾಗಿ ಪ್ರಧಾನಿ ಮೋದಿಯವರ ಹುಟ್ಟು ಹಬ್ಬ ಆಚರಿಸಿದ್ರು.

    ಬೆಳ್ಳಂಬೆಳಗ್ಗಯೇ ಬಸ್ ನಿಲ್ದಾಣಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಮೋದಿಯವರಿಗೆ ಜೈಕಾರ ಕೂಗಿ ಹುಟ್ಟು ಹಬ್ಬದ ಶುಭ ಕೋರಿದ್ರು. ನಂತ್ರ ಶೌಚಾಲಯಕ್ಕೆ ತೆರಳಿ ಸ್ವಚ್ಚಗೊಳಿಸಿದ್ರು. ಶೌಚಾಲಯ ಸ್ವಚ್ಚಗೊಳಿಸಿದ ನಂತ್ರ ಪ್ರಯಾಣಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದ್ರು.

  • ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

    ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

    ಮುಂಬೈ: ಕಾರಿನ ಲೋನ್ ಹಣ ತೀರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಮಾಲೀಕನ 4 ವರ್ಷದ ಮಗಳನ್ನೇ ಅಪಹರಣ ಮಾಡಿ ಕೊಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.

    4 ವರ್ಷದ ತನಿಷ್ಕಾ ಕೊಲೆಯಾದ ಬಾಲಕಿ. ತನಿಷ್ಕಾ ಶವ ಅಕೋಲಾದಲ್ಲಿ ಪತ್ತೆಯಾಗಿದ್ದು, ಆರೋಪಿಗಳಾದ ಶುಭಂ ಜಮ್ನಿಕ್ ಹಾಗೂ ಆತನ ಸ್ನೇಹಿತ ಪ್ರತೀಕ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಬಾಲಕಿ ತನಿಷ್ಕಾ ಕಿರಾಣಿ ಅಂಗಡಿ ಮಾಲೀಕರಾದ ಅಮೋಲ್ ಅರುಡೆ ಎಂಬವರ ಮಗಳು. ಇವರು ಕೆಲವು ಮನೆಗಳನ್ನ ಬಾಡಿಗೆಗೂ ಕೊಟ್ಟಿದ್ರು. ಆರೋಪಿ ಶುಭಂ ಕಾರ್‍ವೊಂದನ್ನ ಖರೀದಿಸಿದ್ದು ಅದರ ಲೋನ್ ಹಣ ತೀರಿಸಲಾಗಿರಲಿಲ್ಲ. ಹೀಗಾಗಿ 5 ಲಕ್ಷ ರೂ. ಹಣ ಹೊಂದಿಸಲು ತನ್ನ ಸ್ನೇಹಿತನ ಜೊತೆಗೂಡಿ ಈ ಕಿಡ್ನ್ಯಾಪ್ ಪ್ಲಾನ್ ರೂಪಿಸಿದ್ದ. ಜೂನ್ 28ರಂದು ತನ್ನ ಮಾಲೀಕನ ಮಗಳಾದ ತನಿಷ್ಕಾಳನ್ನ ದಿಗಿ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ್ದ.

    ನನ್ನ ಮಗಳು ಬುದ್ಧಿವಂತೆ. ಆಕೆ ಅಪರಿಚಿತರು ಕರೆದರೆ ಹೋಗುವಂತವಳಲ್ಲ. ಆದ್ದರಿಂದ ಆಕೆ ಕಾಣೆಯಾದಾಗ ಇದು ಅಪರಿಚಿತರ ಕೃತ್ಯವಲ್ಲ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಕೂಡಲೇ ಪೊಲೀಸ್ ಠಾಣೆಗೆ ಹೋದೆ. ಆದ್ರೆ ಅಕೆಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಆರೋಪಿಗಳು ಈಗಾಗಲೇ ಬಂಧಿತರಾಗಿದ್ದಾರೆ. ಆದ್ರೆ ಇದು ಶುಭಂನ ಕೆಲಸ ಎಂದು ತಿಳಿದು ನನಗೆ ಶಾಕ್ ಆಯಿತು. ತನಿಷ್ಕಾ ಕಾಣೆಯಾದಾಗ ಆಕೆಯನ್ನು ಪತ್ತೆಹಚ್ಚಲು ಅವನೂ ಕೂಡ ನಮ್ಮೊಂದಿಗಿದ್ದ. ಆದರೆ ಈಗ ಅವನೇ ನನ್ನ ಮಗಳ ಕೊಲೆಗಾರನಾಗಿದ್ದಾನೆ. ನಾನು ಅಸಹಾಯಕನಾಗಿದ್ದೇನೆ. ಅವನನ್ನ ಎಷ್ಟೆಲ್ಲಾ ಚೆನ್ನಾಗಿ ನೋಡಿಕೊಂಡೆವು. ಆದ್ರೆ ಅವನು ನಮಗೆ ಈ ರೀತಿ ಮಾಡಿದ್ದಾನೆ ಎಂದು ತನಿಷ್ಕಾ ತಂದೆ ದುಃಖಿತರಾಗಿದ್ದಾರೆ.

    ದಿಗಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್ ಮಾನೆ ಈ ಬಗ್ಗೆ ಹೇಳಿಕೆ ನೀಡಿದ್ದು, ನಾವು ಎಲ್ಲಾ ಕಡೆ ಹುಡುಕಾಡಿದ ನಂತರ ಹಾಗೂ ಬಾಲಕಿಯ ತಂದೆ ಅಂದುಕೊಂಡಂತೆ ಇದು ಅಪರಿಚಿತರ ಕೃತ್ಯವಲ್ಲ ಎಂಬ ಭರವಸೆ ಇದ್ದಿದ್ದರಿಂದ ನಮಗೆ ಶುಭಂ ಮೇಲೆ ಅನುಮಾನ ಮೂಡಿತು. ನಾಲ್ಕು ದಿನಗಳ ಕಾಲ ಆತ ನಮ್ಮ ದಿಕ್ಕು ತಪ್ಪಿಸಿದ್ದ. ಆದ್ರೆ ನಂತರ ಒಂದೊಂದೇ ವಿಚಾರ ಬಾಯ್ಬಿಟ್ಟ. ಆತ ಕಾರ್‍ವೊಂದನ್ನ ಖರೀದಿಸಿದ್ದು, ಲೋನ್ ಹಣ ತೀರಿಸಿರಲಿಲ್ಲ. ಹೀಗಾಗಿ ತನ್ನ ಸ್ನೇಹಿತನ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿ 5 ಲಕ್ಷ ರೂ.ಗಾಗಿ ಬೇಡಿಕೆ ಇಡಬೇಕು ಎಂದುಕೊಂಡಿದ್ದ. ಆದ್ರೆ ತನಿಷ್ಕಾಳನ್ನ ಕಿಡ್ನ್ಯಾಪ್ ಮಾಡಿದ ನಂತರ ಆಕೆ ಗಲಾಟೆ ಮಡಿದ್ದಳು. ಹೀಗಾಗಿ ಇವರು ಪ್ಲಾಸ್ಟಿಕ್ ಬ್ಯಾಗ್‍ವೊಂದನ್ನ ಆಕೆಯ ಮುಖದ ಮೇಲೆ ಹಾಕಿ ಆಕೆಯ ಬಾಯಿ ಮುಚ್ಚಿಸಿದ್ದರು. ನಂತರ ಮುರ್ತಿಜಾಪುರಕ್ಕೆ ಕೊಂಡೊಯ್ದು ಒಂದು ಗೋಣಿಚೀಲದಲ್ಲಿ ಬಾಲಕಿಯನ್ನ ಹಾಕಿ ಬೆಂಕಿ ಹಚ್ಚಿದ್ದರು. ನಂತರ ಅರೆಬೆಂದ ದೇಹವನ್ನ ಅಲ್ಲೇ ಒಂದು ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿ ಮುಚ್ಚಿದ್ದರು ಎಂದು ತಿಳಿಸಿದ್ದಾರೆ.