Tag: ಲೋಕೋಪಯೋಗಿ ಸಚಿವ

  • ಕೈ ಶಾಸಕರನ್ನು ದಿನೇಶ್ ಗುಂಡೂರಾವ್ ಹತೋಟಿಯಲ್ಲಿಡಲಿ, ನನಗೆ ಸಲಹೆ ಕೊಡಬೇಡಿ ಎಂದ ರೇವಣ್ಣ!

    ಕೈ ಶಾಸಕರನ್ನು ದಿನೇಶ್ ಗುಂಡೂರಾವ್ ಹತೋಟಿಯಲ್ಲಿಡಲಿ, ನನಗೆ ಸಲಹೆ ಕೊಡಬೇಡಿ ಎಂದ ರೇವಣ್ಣ!

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನನಗೆ ಸಲಹೆ ನೀಡುವುದು ಬೇಡ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಟಾಂಗ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರಿಂದ ಯಾವುದೇ ಎಚ್ಚರಿಕೆ ಪಡೆಯುವ ಅವಶ್ಯಕತೆ ನನಗೆ ಇಲ್ಲ. ದಿನೇಶ್ ಗುಂಡೂರಾವ್ ಅವರಿಗೆ ಮೊದಲು ಅವರ ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳೋಕೆ ಹೇಳಿ. ನನ್ನನ್ನು ನೋಡಿಕೊಳ್ಳುವ ಅವಶ್ಯಕತೆ ದಿನೇಶ್ ಗುಂಡೂರಾವ್ ಗೆ ಬೇಡ. ನನ್ನ ಅಧ್ಯಕ್ಷರು ಹೇಳಿದಂತೆ ನಾನು ಕೇಳುತ್ತೇನೆ ಎಂದು ತಿರುಗೇಟು ನೀಡಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು 5 ಬಾರಿ ಶಾಸಕನಾಗಿದ್ದೇನೆ. ನನಗೂ ರಾಜಕೀಯ ಗೊತ್ತು. ದಿನೇಶ್ ಗುಂಡೂರಾವ್ ನನಗೆ ಅಡ್ವೈಸ್ ಮಾಡೋದು ಬೇಡ. ಅವರ ಪಕ್ಷ ಅವರು ನೋಡಿಕೊಳ್ಳಲಿ. ನನಗೆ ಎಚ್ಚರಿಕೆ ಕೊಡೋಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ದಿನೇಶ್ ಗುಂಡೂರಾವ್ ಅವರಿಂದ ಏನೂ ಕೇಳುವ ಅಗತ್ಯ ಇಲ್ಲ ಎಂದರು. ನಾನು ಯಾವುದೇ ನಿಗಮ ಮಂಡಳಿ ಸ್ಥಾನದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನ್ನ ಇಲಾಖೆ ಜವಾಬ್ದಾರಿ ನಾನು ನಿರ್ವಹಣೆ ಮಾಡುತ್ತಿದ್ದೇನೆ. ನಿಗಮ-ಮಂಡಳಿ ನೇಮಕ ವಿಚಾರ ದೇವೇಗೌಡರು, ಕುಮಾರಸ್ವಾಮಿ ತೀರ್ಮಾನ ಮಾಡ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದರು. ಅಲ್ಲದೇ ಸಮ್ಮಿಶ್ರ ಸರ್ಕಾರದ ಯಾವುದೇ ವಿಷಯ ಇದ್ದರೂ ದೇವೇಗೌಡ, ಕುಮಾರಸ್ವಾಮಿ, ಎಚ್ ವಿಶ್ವನಾಥ್ ನೋಡಿಕೊಳ್ತಾರೆ. ನನಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ನಾನು ಅದನ್ನು ನಿಭಾಯಿಸುತ್ತೇನೆ ಎಂದರು.

    ಗುಂಡಿ ಮುಚ್ಚಿ: ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಗುಂಡಿಗಳನ್ನ ಮುಚ್ಚಲು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಈಗ ಮಳೆ ಕಡಿಮೆ ಇದೆ. ಗುಂಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದೇನೆ. ಶೀಘ್ರವೇ ಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ ಎಂದರು. ಇದಲ್ಲದೇ ಅಪಘಾತ ವಲಯ ಹುಡುಕಿ ರಿಪೇರಿ ಮಾಡುವಂತೆ ಸೂಚನೆ ನೀಡಲಾಗಿದೆ. ಶಾಲಾ ಸಂಪರ್ಕ ಸೇತುವೆ 8 ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲು ಕೈಗೆತ್ತಿಕೊಳ್ಳುತ್ತಿದ್ದೇವೆ. ಸಿಎಂ ಸೂಚನೆ ಮೇರೆಗೆ ಚಿಕ್ಕ ಸೇತುವೆ ನಿರ್ಮಾಣ ಮಾಡಲಿದ್ದೇವೆ. ಇದಕ್ಕಾಗಿ 120 ಕೋಟಿ ಹಣ ಸಿಎಂ ಕೊಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡುತ್ತೇವೆ ಎಂದರು.

    ನಿನ್ನೆ ದೇವೇಗೌಡರು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ನಮ್ಮ ಬಳಿ ನೋಟ್ ಪ್ರಿಂಟ್ ಮಾಡೋ ಯಂತ್ರ ಇಲ್ಲ. ಇತಿಮಿತಿಯ ಆರ್ಥಿಕತೆಯಲ್ಲಿ ಕೆಲಸ ಮಾಡ್ತಿದ್ದೇವೆ. ಹೀಗಿದ್ರೂ ಜನರ ಕಷ್ಟ ಸರಿಪಡಿಸಲು ಆಗ್ತಿಲ್ಲ ಎಂಬ ನೋವು ದೇವೇಗೌಡರದ್ದು. ಅಧಿಕಾರ ಇದ್ದರೂ ಜನರ ನೋವು ಸರಿ ಮಾಡಲು ಆಗ್ತಿಲ್ಲ ಎಂಬ ಭಾವನೆಯಲ್ಲಿ ದೇವೇಗೌಡರು ನೋವಿನಿಂದ ಮಾತಾಡಿದ್ದಾರೆ. ದೇವೇಗೌಡರು 60 ವರ್ಷದ ರಾಜಕಾರಣ ಮಾಡಿದವರು. ಜನರಿಗೆ ಏನೂ ಮಾಡೋಕಾಗುತ್ತಿಲ್ಲ ಎಂಬ ದುಃಖ ದೇವೇಗೌಡರಿಗಿದೆ. ದೇವೇಗೌಡರು ರಾತ್ರೋರಾತ್ರಿ ರಾಜೀನಾಮೆ ಬಿಸಾಕಿ ಬಂದವರು. ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ಜನರಿಗಾಗಿ ಕೆಲಸ ಮಾಡಿದವರು ಎಂದು ಅಪ್ಪನ ಪರ ಬ್ಯಾಟಿಂಗ್ ಮಾಡಿದರು.

    ಸಪ್ಲಿಮೆಂಟರಿ ಬಜೆಟ್ ನನಗಾಗಿ ಇಟ್ಟಿಲ್ಲ. ಗುತ್ತಿಗೆದಾರರ ಹಣ ಪಾವತಿ ಮಾಡಲು ಕೊಟ್ಟಿದ್ದಾರೆ. ಇದು ಕೇವಲ ನಮ್ಮ ಕಾಲದಲ್ಲಿ ಮಾತ್ರ ಆಗಿಲ್ಲ. ಪ್ರತಿ ಸರ್ಕಾರದಲ್ಲೂ ಆಗಿದೆ. ಹಿಂದಿನ ಯೋಜನೆಗೆ ಹಣ ಬಿಡುಗಡೆ ಮಾಡಲು 2 ಸಾವಿರ ಕೋಟಿ ನನ್ನ ಇಲಾಖೆಗೆ ಕೊಟ್ಟಿದ್ದಾರೆ. ನನ್ನ ಮನೆಗೆ ಆ ಹಣ ಎತ್ತಿಕೊಂಡು ಹೋಗಲ್ಲ. ಹಿಂದೆ ಸಾಲ ಮಾಡಿ ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಗುತ್ತಿಗೆದಾರರ ಹಣ ಬಾಕಿ ಇದೆ. ಬಾಕಿ ನೀಡಲು ಹಣ ಕೊಟ್ಟಿದ್ದಾರೆ. ಸುಮಾರು 3700 ಕೋಟಿ ರೂಪಾಯಿ ಗುತ್ತಿಗೆದಾರರ ಹಣ ಬಾಕಿ ಇದೆ. ಹೀಗಾಗಿ ನನ್ನ ಇಲಾಖೆಗೆ ಹೆಚ್ಚು ಹಣ ಕೊಟ್ಟಿದ್ದಾರೆ ಎಂದು ರೇವಣ್ಣ ಸ್ಪಷ್ಟನೆ ನೀಡಿದರು.

    ಸ್ಟೀಲ್ ಬ್ರಿಡ್ಜ್ ಬಗ್ಗೆ ನೋ ಕಮೆಂಟ್ಸ್!: ಸ್ಟೀಲ್ ಬ್ರಿಡ್ಜ್ ಯೋಜನೆ ನನ್ನ ಇಲಾಖೆಯ ಯೋಜನೆ ಅಲ್ಲ. ಕಾರ್ಪೋರೇಷನ್ ಲಿಮಿಟ್ಸ್ ಯೋಜನೆ. ಇದನ್ನ ಆ ಇಲಾಖೆಗೆ ಸಂಬಂಧಪಟ್ಟ ಮಂತ್ರಿಗೆ ಕೇಳಬೇಕು. ಈ ಬಗ್ಗೆ ಸಿಎಂ ಕುಳಿತು ನಿರ್ಧಾರ ಮಾಡ್ತಾರೆ. ಕುಮಾರಸ್ವಾಮಿ ಹಿಂದೆ ವಿರೋಧ ಮಾಡಿರಲಿಲ್ಲ. ಆತುರವಾಗಿ ಮಾಡ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಜನ ವಿರೋಧ ಮಾಡಿದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿ ಯೋಜನೆ ಮಾಡಬೇಕು. ಈ ಬಗ್ಗೆ ಸಿಎಂ, ಸಚಿವರು ಕುಳಿತು ನಿರ್ಧಾರ ಮಾಡಲಿ. ಅಕ್ರಮ ಎಂದಾದರೆ ಈ ಬಗ್ಗೆಯೂ ಚರ್ಚೆ ಮಾಡಲಿ ಎಂದರು.

    ಬಜೆಟ್ ಗೆ ಮುಹೂರ್ತ ನಾನು ಇಡಲ್ಲ!: ಬಜೆಟ್ ಗೆ ನಾನು ಮುಹೂರ್ತ ಇಡೋದಲ್ಲ ಎಂದು ಸಚಿವ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. ಬಜೆಟ್ ಗೆ ರೇವಣ್ಣ ಶಾಸ್ತ್ರ ನೋಡಿ ದಿನಾಂಕ ಫಿಕ್ಸ್ ಮಾಡಬೇಕು ಎಂಬ ಸಿಎಂ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ಕೊಟ್ಟ ಅವ್ರು, ರೇವಣ್ಣ ದಿನ ನಿಗದಿ ಮಾಡ್ತಾರೆ ಎಂದು ಸಿಎಂ ತಮಾಷೆಗೆ ಹೇಳಿದ್ದಾರೆ. ಬಜೆಟ್ ದಿನಾಂಕ ನಿಗದಿ ಮಾಡೋದು ಕ್ಯಾಬಿನೆಟ್. ಅಲ್ಲಿ ಚರ್ಚೆ ಮಾಡಿ ನಂತರ ರಾಜ್ಯಪಾಲರಿಗೆ ಕಳುಹಿಸುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ರೆ, ಟೋಪಿ ಹಾಕಿ ಹೋಗ್ತಾರೆ: ಎಚ್.ಡಿ.ರೇವಣ್ಣ

    ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ರೆ, ಟೋಪಿ ಹಾಕಿ ಹೋಗ್ತಾರೆ: ಎಚ್.ಡಿ.ರೇವಣ್ಣ

    ಶಿವಮೊಗ್ಗ: ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿ ನಾವು ಗೆಲ್ಲಿಸಿದರೆ, ಅವರು ನಮಗೆ ಟೋಪಿ ಹಾಕಿ ಹೋಗುತ್ತಾರೆ ಎನ್ನುವ ಮೂಲಕ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮರಸ್ವಾಮಿ ಅವರಿಗೆ ಟಿಕೆಟ್ ನೀಡಿದ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ರಾಮನಗರದಲ್ಲಿ ರಾಜು ಎಂಬವರನ್ನು ಸಿಎಂ ಕುಮಾರಸ್ವಾಮಿ ನಿಲ್ಲಿಸಿ ಗೆಲ್ಲಿಸಿದ್ದರು. ಆದರೆ ಆ ಪಾರ್ಟಿ ಕೊನೆಗೆ ನಮಗೆ ಟೋಪಿ ಹಾಕಿ ಹೋದರು. ನಮ್ಮ ಕುಟುಂಬ ಬಿಟ್ಟು ಪಕ್ಷದ ಬೇರೆ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿ ಸ್ವತಃ ನಾವೇ ಟೋಪಿ ಹಾಕಿಸಿಕೊಂಡಿದ್ದೇವೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾರವರನ್ನು ರಾಮನಗರ ಕ್ಷೇತ್ರದಿಂದ ಅಖಾಡಕ್ಕೆ ಇಳಿಸಿದ್ದಾರೆ. ಈಗಲೂ ಬೇರೆಯವರನ್ನು ನಿಲ್ಲಿಸಿ ಟೋಪಿ ಹಾಕಿಸ್ಕೋಬೇಕಾ ನೀವೇ ಹೇಳಿ ಎಂದು ಪ್ರಶ್ನಿಸಿದರು.

    ಇದೇ ವೇಳೆ ಭವಾನಿ ರೇವಣ್ಣರ ಬಗ್ಗೆ ಪ್ರಶ್ನಿಸಿದಾಗ, ಏನ್ರೀ ಭವಾನಿ ರೇವಣ್ಣ ಬಗ್ಗೆ ಕೇಳ್ತೀರಿ? ಭವಾನಿ ಈಗ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ. ಅವರನ್ನು ಎಂಎಲ್‍ಎ ಮಾಡಬೇಕು ಅಂದಿದ್ರೆ, ಯಾವತ್ತೋ ಚುನಾವಣೆಗೆ ನಿಲ್ಲಿಸುತ್ತಿದ್ದೆ. ಈ ಹಿಂದೆ ಬೇಲೂರು ಕ್ಷೇತ್ರದ ಕಾರ್ಯಕರ್ತರು ಸಹ ಒತ್ತಡ ಹಾಕಿದ್ದರು. ಅಲ್ಲದೇ ನಮ್ಮ ಕುಟುಂಬ ಹೊಡೆದಾಡುತ್ತಿದ್ದಾರೆ ಅಂತ ಯಾರಾದರು ಅಂದುಕೊಂಡಿದ್ದರೆ, ಅದು ಅವರ ಕನಸು ಅಷ್ಟೇ. ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಯ 17 ಮಂದಿ ಸಂಸದರು, ರಾಜ್ಯಕ್ಕೆ ಏನು ಮಾಡಿದ್ದಾರೆ? ಬರೀ ಅಪ್ಪ, ಮಕ್ಕಳು ಅಂತಾ ನಮ್ಮ ಬಗ್ಗೆಯೇ ಯಾವಾಗಲೂ ಮಾತನಾಡುತ್ತಾರೆ. ನಮ್ಮ ಬಗ್ಗೆ ಮಾತನಾಡದೇ ಇದ್ದರೆ ಅವರಿಗೆ ಊಟ ಸೇರಲ್ಲ. ಹೀಗಾದರೂ ನಮ್ಮನ್ನ ದಿನ ನೆನೆಯುತ್ತಾರಲ್ಲ, ಅವರಿಗೆ ನನ್ನ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ. ಜನ ನಮ್ಮನ್ನು ಮರೆಯದಂತೆ ಅವರೇ ನಮ್ಮ ಹೆಸರು ಹೇಳಿ ನೆನಪಿಸುತ್ತಾರೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿಯವ್ರಿಗೆ ದೈವಾನುಗ್ರಹ ಇಲ್ಲ, ಎಷ್ಟೇ ಪ್ರಯತ್ನ ಪಟ್ರೂ ಸರ್ಕಾರ ಅಸ್ಥಿರಗೊಳಿಸಲು ಆಗಲ್ಲ: ರೇವಣ್ಣ

    ಬಿಜೆಪಿಯವ್ರಿಗೆ ದೈವಾನುಗ್ರಹ ಇಲ್ಲ, ಎಷ್ಟೇ ಪ್ರಯತ್ನ ಪಟ್ರೂ ಸರ್ಕಾರ ಅಸ್ಥಿರಗೊಳಿಸಲು ಆಗಲ್ಲ: ರೇವಣ್ಣ

    ಹಾಸನ: ಬಿಜೆಪಿಯವರಿಗೆ ದೈವಾನುಗ್ರಹವಿಲ್ಲ ಹೀಗಾಗಿ ಅವರು ಎಷ್ಟೇ ಪ್ರಯತ್ನ ಪಟ್ಟರೂ ಸಹ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಆಗುವುದಿಲ್ಲವೆಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಬದಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಬಿಜೆಪಿಯವರಿಗೆ ದೈವಾನುಗ್ರಹ ಇಲ್ಲ. ಹೀಗಾಗಿ ಅವರು ಎಷ್ಟೇ ಪ್ರಯತ್ನಪಟ್ಟರೂ ಸರ್ಕಾರ ಈ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲವೆಂದು ಹೇಳಿದರು.

    ಮಳೆಯಿಂದ ಆಗಿರುವ ಹಾನಿಗೆ ಪರಿಹಾರದ ಹಣ ಬಿಡುಗಡೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಲು ರಾಜ್ಯ ಬಿಜೆಪಿ ನಾಯಕರಿಗೆ ತಾಕತ್ತಿಲ್ಲ. ಅದನ್ನು ಬಿಟ್ಟು ನಮಗೆ 300 ಕೋಟಿ ಕೊಡಿ ಸರ್ಕಾರ ಬೀಳಿಸ್ತೀವಿ ಅಂತ ಬೇಡಿಕೆ ಇಟ್ಟಿದ್ದಾರೆ. ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಉರುಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಲೇ ಇದ್ದಾರೆ. ಏನೇ ಮಾಡಿದರೂ ಜೆಡಿಎಸ್ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲವೆಂದು ಗುಡುಗಿದರು.

    ಭಾನುವಾರ ಹಾಸನದ ಹಾಲು ಒಕ್ಕೂಟಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಅಂದು ಐಸ್ ಕ್ರೀಂ ಘಟಕ ಹಾಗೂ ಒಡೆಯರ ಕಾಲದ ನಾಲೆ ಕಾಮಗಾರಿ ಹಾಗೂ ಮಹಿಳಾ ಕಾಲೇಜು ಉದ್ಘಾಟನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಾರೆ ಎಂದು ತಿಳಿಸಿದರು. 

    ಶನಿವಾರ ಹಾಸನದ ಹೊರವಲಯದ ಹೊಯ್ಸಳ ರೆಸಾರ್ಟ್ ನಲ್ಲಿ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಸನದಲ್ಲಿ ಶನಿವಾರ ಜೆಡಿಎಸ್ ಶಾಸಕರ ತುರ್ತು ಸಭೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಸನಕ್ಕೆ ಐಐಟಿ ಹೆಂಗೆ ತರಬೇಕು ಅಂತ ನಂಗೊತ್ತು: ರೇವಣ್ಣ

    ಹಾಸನಕ್ಕೆ ಐಐಟಿ ಹೆಂಗೆ ತರಬೇಕು ಅಂತ ನಂಗೊತ್ತು: ರೇವಣ್ಣ

    ಹಾಸನ: ಸ್ವಕ್ಷೇತ್ರಕ್ಕೆ ಬೆಳಗಾವಿಯಿಂದ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್) ಕಚೇರಿಯನ್ನು ಸ್ಥಳಾಂತರ ಮಾಡಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್‍ಡಿ ರೇವಣ್ಣ ಈಗ ಹಾಸನಕ್ಕೆ ಐಐಟಿ ಹೇಗೆ ತರಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

    ನಗರದ ಕಲಾಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2019ರ ವೇಳೆಗೆ ಜಿಲ್ಲೆಯಲ್ಲಿ ಐಐಟಿ ಕಾಲೇಜು ಆರಂಭವಾಗುವುದು ನಿಶ್ಚಿತ. ಐಐಟಿಯನ್ನು ಹಾಸನ ಜಿಲ್ಲೆಗೆ ಹೇಗೆ ತರಬೇಕೆಂದು ನನಗೆ ಗೊತ್ತಿದೆ. ಈಗಾಗಲೇ ಅದರ ಬಗ್ಗೆ ಪ್ರಯತ್ನವನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: `ಮೇಡಂ ಎಣ್ಣೆಕಾಟ ತಪ್ಪಿಸಿ’-ಡಿಸಿ ರೋಹಿಣಿ ಸಿಂಧೂರಿಗೆ ರೇವಣ್ಣ ಮನವಿ+

    ಹಾಸನ ಜಿಲ್ಲೆಯಲ್ಲಿ ಮತ್ತೊಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡುವ ಗುರಿಯನ್ನು ಹೊಂದಿದ್ದೇನೆ. ಈಗಾಗಲೇ ಹೊಳೆನರಸೀಪುರ ಕ್ಷೇತ್ರದಲ್ಲಿ ಒಟ್ಟು ಏಳು ಪದವಿ ಕಾಲೇಜುಗಳನ್ನು ಹೊಂದುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವೆಂದು ಹೆಸರುಗಳಿಸಿಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ:ರೇವಣ್ಣ ಸ್ವಕ್ಷೇತ್ರಕ್ಕೆ ಕೆಶಿಪ್ ಕಚೇರಿ ಸ್ಥಳಾಂತರ

    ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿನ ಶಿಕ್ಷಣದ ಮಟ್ಟ ಕುಸಿಯುತ್ತಿದೆ. ಇದರ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು. ಇದೇ ರೀತಿ ಮುಂದುವರಿದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೇ ಸರ್ಕಾರದಿಂದಲೇ ಇಂಗ್ಲೀಷ್ ಶಾಲೆಗಳನ್ನು ತೆರೆಯುವ ಉದ್ದೇಶ ಹೊಂದಿದ್ದೇವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂದು ಹಾಸನದ ಕಸಾಪ ಅಧ್ಯಕ್ಷ ಮಂಜೇಗೌಡರ ಸಮ್ಮುಖದಲ್ಲೇ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೂರೇ ತಿಂಗಳಲ್ಲಿ ಬಿಜೆಪಿಯನ್ನು ನಗರದಿಂದ ಕಳುಹಿಸಿಲ್ಲವೇ: ರೇವಣ್ಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೆಣಸಿನಕಾಯಿ ಬಜ್ಜಿ ತಿಂದು ರೇವಣ್ಣ ಕಣ್ಣೀರು! – ವಿಡಿಯೋ ನೋಡಿ

    ಮೆಣಸಿನಕಾಯಿ ಬಜ್ಜಿ ತಿಂದು ರೇವಣ್ಣ ಕಣ್ಣೀರು! – ವಿಡಿಯೋ ನೋಡಿ

    ಹಾಸನ: ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಭಾರೀ ಟೀಕೆಗೆ ಗುರಿಯಾಗಿದ್ದ ಲೋಕೋಪಯೋಗಿ ಸಚಿವ ಎಚ್‍.ಡಿ.ರೇವಣ್ಣ ಸೋಮವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮೆಣಸಿನಕಾಯಿ ಬಜ್ಜಿಯನ್ನು ತಿಂದು ಕಣ್ಣೀರು ಹಾಕಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ರೇವಣ್ಣ, ಹೋಟೆಲ್‍ ನವರು ನೀಡಿದ್ದ ಮೆಣಸಿನಕಾಯಿ ಬಜ್ಜಿಯನ್ನು ತಿಂದಿದ್ದಾರೆ. ತಿಂದ ಬಳಿಕ ಮೆಣಸಿನಕಾಯಿ ಖಾರದ ರಭಸಕ್ಕೆ ಕಣ್ಣೀರು ಗಳಗಳನೆ ಬರತೊಡಗಿದೆ. ಇದನ್ನು ಮರೆಮಾಚಲು ತಮ್ಮ ಬಳಿಯಿದ್ದ ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡಿದ್ದಾರೆ.

    ಅಲ್ಲದೇ ಹೋಟೆಲ್ ಸಿಬ್ಬಂದಿಗೆ “ಏನ್ರಪ್ಪ ಜೈಲಿನಲ್ಲಿ ಕೊಡುವ ರೀತಿ ಖಾರದ ಬಜ್ಜಿ ಕೊಡ್ತಿರಲ್ಲಪ್ಪ” ಎಂದು ತಮಾಷೆ ಮಾಡಿ, ನನಗೆ ಮೆಣಸಿನಕಾಯಿ ಬಜ್ಜಿ ಬೇಡ, ಬೇಕಾದರೇ ಆಲೂಗಡ್ಡೆ ಅಥವಾ ಹೀರೇಕಾಯಿ ಬಜ್ಜಿ ಇದ್ದರೇ ಕೊಡಿ ಎಂದು ಹೋಟೆಲ್ ಸಿಬ್ಬಂದಿ ಜೊತೆ ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ- ಸಚಿವ ರೇವಣ್ಣ

    ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ- ಸಚಿವ ರೇವಣ್ಣ

    ಬೆಂಗಳೂರು: ಹಸಿವಿನಿಂದ ಮಕ್ಕಳು ಹಾಗೂ ಮಹಿಳೆಯರು ಬಿಸ್ಕೆಟ್ ಕೇಳುತ್ತಿದ್ದರು. ಹೀಗಾಗಿ ದೂರದಲ್ಲಿ ಕುಳಿತವರಿಗೆ ಬಿಸ್ಕೆಟ್ ಎಸೆದಿರುವೆ. ಈ ಕುರಿತಾಗಿ ಜನತೆ ಕ್ಷಮೆ ಕೇಳಬೇಕು ಎಂದರೆ ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

    ರಾಮನಾಥಪುರದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಬಿಸ್ಕೆಟ್ ಎಸೆದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಾನು ದೇವರನ್ನು ನಂಬುವ ವ್ಯಕ್ತಿ. ಘಟನೆಯಾದ ಮಾರನೇ ದಿನ ಸುದ್ದಿ ಮಾಡಲಾಗಿದೆ. ನನ್ನಿಂದ ತಪ್ಪಾಗಿದೆ ಬಿಡಿ ಎಂದರು.

    25 ವರ್ಷಗಳಿಂದ ಆಯ್ಕೆಯಾಗಿರುವ ನಾಯಕರು ಹಾಗೂ ಕೇಂದ್ರ ಸಚಿವರು ಸಂತ್ರಸ್ತರ ನೆರವಿಗೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ನಾನು ನೆರವಿಗೆ ನಿಂತಿದ್ದೆ. ಈಗ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ರೇವಣ್ಣ ದೂರಿದರು.

    ನಾನು ಬೇಕು ಅಂತಾ ಮಾಡಲಿಲ್ಲ. ಆ ರೀತಿಯ ಮನೋಭಾವನೆಯೂ ನನ್ನಲ್ಲಿ ಇಲ್ಲ. ಹಿಂದೆ ಕುಳಿತಿದ್ದ ಮಹಿಳೆಯರು ಒಂದೇ ಸಮನೇ ಬೇಕು ಅಂತಾ ಕೂಗುತ್ತಿದ್ದರು. ಹೀಗಾಗಿ ಅಲ್ಲಿಗೆ ಹೋಗಿ ಕೊಡುವುದಕ್ಕೆ ಆಗಲಿಲ್ಲ, ನಿಂತಲ್ಲಿಯೇ ಕೊಡಬೇಕಾದ ಪರಿಸ್ಥಿತಿ ಬಂದಿತ್ತು. ಅದನ್ನು ಎಸೆದಿದ್ದಾರೆ ಅಂತಾ ಹೇಳಿದರೆ ಹೇಗೆ? ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಎಲ್ಲಾ ಮಾಧ್ಯಮದವರು ಅಂದು ಅಲ್ಲಿಯೇ ಇದ್ದರು. ಆದರೆ ಅಂದೇ ಸುದ್ದಿ ಮಾಡಲಿಲ್ಲ ಎಂದರು.

    ನಿರಾಶ್ರಿತ ಕೇಂದ್ರದಲ್ಲಿ ಇದ್ದವರು ಶ್ರೀಮಂತರಲ್ಲ, ಎಲ್ಲರೂ ಬಡವರು. ನಾನು ಪ್ರವಾಹ ಪೀಡಿತ ಭಾಗಗಳಿಗೆ ರಾತ್ರಿ, ಹಗಲು ಹೋಗಿದ್ದೇನೆ. ಏನು ಗ್ರಹಚಾರಾನೋ ಏನೋ, ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ವಿರುದ್ಧ ಅಭಿಯಾನವೇ ಶುರುವಾಗಿದೆ ಎಂದು ಹೇಳಿದ ಸಚಿವರು, ಕೊಡಗು ಹಾಗೂ ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸಚಿವರು ಬಂದ ಪರಿಸ್ಥಿತಿಯನ್ನು ನೋಡಲಿ. ನಾನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಲ್ಲ, ಆದರೂ ನೆರವಿಗೆ ನಿಂತೆ. ಈಗ ನನ್ನ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಚುನಾವಣೆ ವೇಳೆ ರಾಜಕೀಯ ಮಾಡೋಣ, ಇಂತಹ ಸಂದರ್ಭದಲ್ಲಿ ಬೇಡ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೇಟಿಗೆ ಬೀಗ ಹಾಕಿ ಸರ್ಕಾರಿ ನಿವಾಸದ ಗೃಹಪ್ರವೇಶ ನಡೆಸಿದ ರೇವಣ್ಣ!

    ಗೇಟಿಗೆ ಬೀಗ ಹಾಕಿ ಸರ್ಕಾರಿ ನಿವಾಸದ ಗೃಹಪ್ರವೇಶ ನಡೆಸಿದ ರೇವಣ್ಣ!

    ಬೆಂಗಳೂರು: ನಗರದ ಶಿವಾನಂದ ಸರ್ಕಲ್ ಬಳಿಯಿರುವ ಸರ್ಕಾರಿ ಬಂಗಲೆ ಗೇಟಿಗೆ ಬೀಗ ಹಾಕಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಗೃಹಪ್ರವೇಶವನ್ನು ನೆರವೇರಿಸಿದ್ದಾರೆ.

    ನವೀಕರಣದಿಂದಲೇ ಸುದ್ದಿಯಾಗಿದ್ದ ರೇವಣ್ಣರ ಸರ್ಕಾರಿ ಬಂಗಲೆಗೆ ಗೃಹ ಪ್ರವೇಶದ ಭಾಗ್ಯ ಸಿಕ್ಕಿದ್ದು, ಶ್ರಾವಣ ಮಾಸದ ಮೊದಲ ಸೋಮವಾರದ ದಿನದಂದು ಗೃಹಪ್ರವೇಶ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ತಾಯಿ ಚೆನ್ನಮ್ಮ ಸೇರಿದಂತೆ ಇಡೀ ದೇವೇಗೌಡರ ಕುಟುಂಬವೇ ಆಗಮಿಸಿತ್ತು. ಸರ್ಕಾರಿ ಬಂಗಲೆಯಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಸಿ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಮಾಡಲಾಯಿತು.

    ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸುವ ಉದ್ದೇಶದಿಂದ ಗೇಟ್‍ಗೆ ಬೀಗ ಹಾಕಿದ್ದಾರೆಂದು ಹೇಳಲಾಗಿದ್ದು, ಗೃಹಪ್ರವೇಶಕ್ಕೆ ಬಂದಿದ್ದ ಪಕ್ಷದ ಯಾವೊಬ್ಬ ಮುಖಂಡರುಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ತೆರಳಿದರು.

    ಗೃಹಪ್ರವೇಶ ಕಾರ್ಯಕ್ರಮಕ್ಕೆ ಸಚಿವ ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕ ಕೋನರೆಡ್ಡಿ, ಪರಿಷತ್ ಸದಸ್ಯ ಶರವಣ, ರಾಜ್ಯ ಸಭಾ ಸದಸ್ಯ ಕುಪ್ಪೇಂದ್ರರೆಡ್ಡಿ, ಮಾಜಿ ಸಚಿವ ರೇವುನಾಯಕ್ ಬೆಳಮಗಿ ಆಗಮಿಸಿದ್ದರು. ಅಲ್ಲದೇ ಶಾಲಿನಿ ರಜನೀಶ್, ರಜನೀಶ್ ಗೋಯಲ್, ನಾಗಲಾಂಭಿಕ ದೇವಿ, ಆರ್.ಪಿ.ಶರ್ಮಾ ಹಾಗೂ ಚಂದ್ರಗುಪ್ತ ಸೇರಿದಂತೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ದಂಡೆ ಆಗಮಿಸಿತ್ತು.

    ಗೃಹಪ್ರವೇಶ ಕಾರ್ಯಕ್ರಮದಿಂದ ತೆರಳುವಾಗ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಕೇರಳ ಪ್ರವಾಹ ಹಾಗೂ ಕೊಡಗು ಮಹಾ ಮಳೆ ಸಂತ್ರಸ್ಥರಿಗೆ ನನ್ನ ಒಂದೊಂದು ತಿಂಗಳ ಸಂಬಳ ಕೊಡಲು ನಿರ್ಧರಿಸಿದ್ದೇನೆ. ಪ್ರವಾಹ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಂಪರ್ಕದಲ್ಲಿದೆ. ಕುಮಾರಸ್ವಾಮಿಯವರನ್ನು ಈಗಾಗಲೇ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸುಮಾರು 9 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

    ನನಗೆ ನಡೆಯಲು ಸಾಧ್ಯವಾಗುತ್ತಿಲ್ಲ, ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿ 5 ದಿನಗಳ ನಂತರ ಸ್ಥಳ ಪರಿಶೀಲನೆ ಮಾಡುತ್ತೇನೆ. ಕೊಡಗು ಜನತೆಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ. ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ನಾವು ಒತ್ತಾಯ ಮಾಡುತ್ತೇವೆ ಎಂದರು.

    ಈ ವೇಳೆ ಮಾಧ್ಯಮಗಳು ಸಚಿವ ರೇವಣ್ಣ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ವಿಚಾರ ಪ್ರಸ್ತಾಪಿಸಿದಾಗ, ಈ ಕುರಿತು ನಿರಾಕರಿಸಿದ ದೇವೇಗೌಡರು, ಯಾಕಪ್ಪ ಅದಕ್ಕೆಲ್ಲಾ ಉತ್ತರ ಕೊಡಬೇಕು ಹೇಳಿ ಅಲ್ಲಿಂದ ತೆರಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಬೈಲ್‍ನಲ್ಲಿ ಟೈಂ ಚೆಕ್ ಮಾಡಿ, ವಾಸ್ತುಪ್ರಕಾರ ರೇವಣ್ಣ ಧ್ವಜಾರೋಹಣ!

    ಮೊಬೈಲ್‍ನಲ್ಲಿ ಟೈಂ ಚೆಕ್ ಮಾಡಿ, ವಾಸ್ತುಪ್ರಕಾರ ರೇವಣ್ಣ ಧ್ವಜಾರೋಹಣ!

    ಹಾಸನ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ರೇವಣ್ಣ ಎಂದಿನಂತೆ ತಮ್ಮ ವಾಸ್ತು ವಿಶೇಷತೆಯಿಂದ ಗಮನ ಸೆಳೆದಿದ್ದಾರೆ. ಖುದ್ದು ಎಸ್ಪಿಯವರ ಮೊಬೈಲ್‍ನಲ್ಲಿ ಟೈಂ ಚೆಕ್ ಮಾಡಿ, ಚಪ್ಪಲಿ ಬಿಟ್ಟು ಧ್ವಜಾರೋಹಣ ನಡೆಸಿದರು.

    ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ದಶಕದ ನಂತರ ಹಾಸನ ಜಿಲ್ಲೆಯಲ್ಲಿ ಧ್ಜಜಾರೋಹಣ ನೇರವೇರಿಸಿದರು. ಈ ಮೊದಲು 2007 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಧ್ವಜಾರೋಹಣ ಮಾಡಿದ್ದರು. ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಮಯ ನಿಗದಿಪಡಿಸಲಾಗಿತ್ತು.

    ಸಮಯಕ್ಕೆ ಮೊದಲೇ ಬಂದಿದ್ದ ರೇವಣ್ಣ ನಿರ್ದಿಷ್ಟ ಸಮಯಕ್ಕೆ ಕಾದು, ಒಂದು ಸೆಕೆಂಡ್ ಕೂಡ ಹೆಚ್ಚು ಕಡಿಮೆ ಆಗದಂತೆ ನಿಗಾವಹಿಸಿದ್ದರು. ಅಲ್ಲದೇ ಪಕ್ಕದಲ್ಲಿ ನಿಂತಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಬಳಿ ಸಮಯ ಸರಿಯಾಗಿದ್ದನ್ನು ಸ್ಪಷ್ಟಪಡಿಸಿಕೊಂಡು ಬಳಿಕ, ಚಪ್ಪಲಿ ಬಿಟ್ಟು ಧ್ವಜಾರೋಹಣ ಮಾಡಿದರು. ಸಾಮಾನ್ಯವಾಗಿ ಪಂಚೆ ಧರಿಸುವ ರೇವಣ್ಣನವರು ಇಂದು ಪ್ಯಾಂಟ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

    ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಬಿಜೆಪಿ ನಾಯಕ ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಿ, ಈಶ್ವರಪ್ಪನವರು ಹೇಳಿದ್ದ ಅಧಿಕಾರಿಗಳನ್ನೂ ಸಹ ನಾನು ವರ್ಗ ಮಾಡಿಕೊಟ್ಟಿದ್ದೇನೆ. ಆ ಅಧಿಕಾರಿಗಳೇನಾದರೂ ನನಗೆ ಹಣ ಕೊಟ್ಟಿದ್ದಾರೆಯೇ ಎಂಬುದನ್ನು ಬಹಿರಂಗ ಪಡಿಸಲಿ. ಅವರೊಬ್ಬ ಪ್ರತಿಪಕ್ಷ ನಾಯಕರು, ಏನೇ ಮಾತನಾಡಿದರು ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಇಲ್ಲವಾದರೆ ಅವರ ಹೇಳಿಕೆಗಳು ಪೊಳ್ಳಾಗಿ ಹೋಗುತ್ತದೆ ಎಂದು ಲೇವಡಿ ಮಾಡಿದರು.

    ಈ ವೇಳೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‍ನ ಒಂದು ನಿಯೋಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರೇ ಈ ಬಗ್ಗೆ ಖುದ್ದು ಪರಿಶೀಲಿಸಲಿ. ನಾನು ಯಾವುದೇ ದುರುದ್ದೇಶದಿಂದ ಯಾರ ಮೇಲೆಯೂ ಕೇಸು ದಾಖಲಿಸಿಲ್ಲ. ಅಲ್ಲದೇ ಯಾರನ್ನೂ ಸಹ ಜೈಲಿಗೆ ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಎಸ್‍ವೈ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ: ಟೆಂಪಲ್ ರನ್ ಸಮರ್ಥಿಸಿಕೊಂಡ ರೇವಣ್ಣ

    ಬಿಎಸ್‍ವೈ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ: ಟೆಂಪಲ್ ರನ್ ಸಮರ್ಥಿಸಿಕೊಂಡ ರೇವಣ್ಣ

    ಬೆಂಗಳೂರು: ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ. ಕುಲದೇವರಿಗೆ ಹೋಗಿ ಪೂಜೆ ಮಾಡಬಾರದೇ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಪ್ರಶ್ನಿಸಿ ಬಿಎಸ್‍ವೈಗೆ ಟಾಂಗ್ ಕೊಟ್ಟಿದ್ದಾರೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಟೆಂಪಲ್ ರನ್ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಮ್ಮ ಮನೆ ದೇವರಿಗೆ ಪೂಜೆ ಮಾಡುವುದು ತಪ್ಪಾ? ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಮ್ಮು-ಕಾಶ್ಮೀರದ ವೈಷ್ಣವಿ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ನಾವು ಇನ್ನು ಅಲ್ಲಿಯವರೆಗೆ ಹೋಗಿಲ್ಲ, ಇಲ್ಲಿಯ ದೇವರನ್ನು ಅಷ್ಟೇ ನೋಡುತ್ತಿದ್ದೇವೆ. ಅವರಂತೆ ದೇಶದ ಹಾಗೂ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಹೋಗಿಲ್ಲ ಎಂದು ಕಾಲೆಳೆದರು.

    ಕುಮಾರಸ್ವಾಮಿ 42 ದೇವಸ್ಥಾನಕ್ಕೆ ಹೋಗಿದ್ದರಿಂದಲೇ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ರೈತರ ಸಾಲ ಮನ್ನಾ ಆಗುತ್ತಿದೆ ಎಂದು ತಮ್ಮ ಟೆಂಪಲ್ ರನ್ ಸಮರ್ಥಿಸಿಕೊಂಡರು.

    ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಪ್ರಧಾನಿ ನರೇಂದ್ರ ಮೋದಿಗೆ ಮಧ್ಯಪ್ರವೇಶಿಸಿ ಮಹದಾಯಿ ಸಮಸ್ಯೆಯನ್ನು ಇತ್ಯರ್ಥ ಮಾಡುಬೇಕೆಂದು ರಾಜ್ಯದ 17 ಜನ ಬಿಜೆಪಿ ಸಂಸದರು ಹಾಗೂ ಬಿಎಸ್ ಯಡಿಯೂರಪ್ಪ ಕೇಳಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡ ಸಚಿವರು, ನಾವು 36.5 ಟಿಎಂಸಿ ನೀರು ಕೇಳಿದ್ದೇವು. ಆದರೆ ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದರು.

    ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಶೀಘ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಣಕ್ಕೆ ಯಾವುದೇ ಚಿಂತೆಬೇಡವೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ರಸ್ತೆಯ ಮೇಲೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು. ಶೀಘ್ರವೇ ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಂಡೀಪುರದಲ್ಲಿ ರಸ್ತೆ ನಿರ್ಮಾಣ ಮಾಡಿ ಅನ್ನೋದಕ್ಕೆ ನಾನ್ಯಾರು: ಸಚಿವ ರೇವಣ್ಣ ಪ್ರಶ್ನೆ

    ಬಂಡೀಪುರದಲ್ಲಿ ರಸ್ತೆ ನಿರ್ಮಾಣ ಮಾಡಿ ಅನ್ನೋದಕ್ಕೆ ನಾನ್ಯಾರು: ಸಚಿವ ರೇವಣ್ಣ ಪ್ರಶ್ನೆ

    ಬೆಂಗಳೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರಗೆ ಹೇರಿದ ನಿಷೇಧವನ್ನು ತೆರವುಗೊಳಿಸುವ ಬಗ್ಗೆ ಮುಖ್ಯ ಕಾರ್ಯದರ್ಶಿಯನ್ನೇ ಕೇಳಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಗರಂ ಆಗಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಬಂಡೀಪುರ ಅರಣ್ಯ ಪ್ರದೇಶದ ಕುರಿತಾಗಿ ಸರ್ಕಾರದ ನಿರ್ಧಾರ ಏನು ಎಂದು ಪ್ರಶ್ನಿಸಿದಕ್ಕೆ ಸಿಡಿಮಿಡಿಗೊಂಡ ಅವರು, ಸುಪ್ರೀಂ ಕೋರ್ಟ್ ನಿಂದ ಆದೇಶ ಹೊರ ಬರದೇ ನಾನು ವೈಯಕ್ತಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಮ್ಮ ಹಿಂದಿನ ಹೇಳಿಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು.

    ಸುಪ್ರೀಂ ಕೋರ್ಟ್, ಅರಣ್ಯ ಹಾಗೂ ಪರಿಸರ ಇಲಾಖೆ ಸೇರಿ ಒಪ್ಪಿಗೆ ನೀಡದೇ ನಾನು ಒಪ್ಪಿಕೊಂಡರೆ ಸಮಸ್ಯೆ ಇತ್ಯರ್ಥ ಆಗುವುದಿಲ್ಲ. ನಾನು ಹೀಗೆ ತೀರ್ಪು ನೀಡಿ ಅಂತಾ ಸುಪ್ರೀಂ ಕೋರ್ಟ್ ಗೆ ಹೇಳಲು ಬರುವುದಿಲ್ಲ. ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಕೊಟ್ಟರೆ ಬೇಡ ಅಂತಾ ಹೇಳುವುದಕ್ಕೆ ನಾನು ಯಾರು? ಆದರೆ ಪತ್ರದ ಬಗ್ಗೆ ನನಗೆ ಕೇಳಬೇಡಿ, ಮುಖ್ಯ ಕಾರ್ಯದರ್ಶಿಗಳನ್ನು ವಿಚಾರಿಸಿ ಎಂದು ಹೇಳಿದರು.

    ಸುದ್ದಿಗೋಷ್ಠಿ ಮುಕ್ತಾಯದವರೆಗೂ ಮಾಧ್ಯಮಗಳ ಪ್ರಶ್ನೆಗಳಿಗೆ, ನಾನ್ಯಾರು ಅದನ್ನು ಹೇಳುವುದಕ್ಕೆ? ನಾನು ಹೇಗೆ ಹೇಳೋದು ಎಂದು ಪ್ರಶ್ನಾರ್ಥಕ ಉತ್ತರಗಳನ್ನು ನೀಡುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews