Tag: ಲೋಕಾಪುರ

  • ದುರ್ಗಾದೇವಿಗೆ ಭಂಡಾರದ ನೈವೇದ್ಯ – ಮುಧೋಳ ಲೋಕಾಪುರದಲ್ಲಿ 7 ವರ್ಷಕ್ಕೊಮ್ಮೆ ನಡೆಯುತ್ತದೆ ವಿಶಿಷ್ಟ ಜಾತ್ರೆ

    ದುರ್ಗಾದೇವಿಗೆ ಭಂಡಾರದ ನೈವೇದ್ಯ – ಮುಧೋಳ ಲೋಕಾಪುರದಲ್ಲಿ 7 ವರ್ಷಕ್ಕೊಮ್ಮೆ ನಡೆಯುತ್ತದೆ ವಿಶಿಷ್ಟ ಜಾತ್ರೆ

    ಬಾಗಲಕೋಟೆ: ಮುಧೋಳ (Mudhol) ತಾಲೂಕಿನ ಲೋಕಾಪುರದ ದುರ್ಗಾದೇವಿ ದೇವಸ್ಥಾನದ (Lokapur Durga Devi Temple) ಜಾತ್ರೆ ಒಂದು ವಿಶಿಷ್ಟ ಜಾತ್ರೆ ಎಂದು ಕರೆಸಿಕೊಳ್ಳುತ್ತದೆ. ಬಹುತೇಕ ಊರುಗಳಲ್ಲಿ ಜಾತ್ರೆಗಳು ವರ್ಷಕ್ಕೊಮ್ಮೆ ನಡೆದರೆ ಈ ದುರ್ಗಾದೇವಿ ಜಾತ್ರೆ ಏಳು ವರ್ಷಕ್ಕೊಮ್ಮೆ ನಡೆಯುತ್ತದೆ.

    ಜೂನ್ 14 ರಿಂದ ಆರಂಭವಾಗಿರುವ ಈ ಜಾತ್ರೆ 18 ರವರೆಗೆ ಸಂಭ್ರಮ ಸಡಗರದಿಂದ ನಡೆಯುತ್ತೆ. ಭಂಡಾರ ತೂರಿ ಹರಕೆ ತಿರುಸುವುದೇ ಈ ಜಾತ್ರೆಯ ವಿಶೇಷ. ಇದನ್ನೂ ಓದಿ: ರಾಜ್ಯದ ವಾಹನ ಸವಾರರಿಗೆ ಶಾಕ್‌; ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

    ಈ ಲೋಕಾಪುರ ಪಟ್ಟಣ ದುರ್ಗಾಮಾತೆ ನೆಲೆಸಿರುವ ಶಕ್ತಿ ಪರಂಪರೆಯ ಕೇಂದ್ರವಾಗಿದೆ. ಭಕ್ತಾದಿಗಳ ಆರಾಧ್ಯ ದೇವತೆಯಾಗಿರುವ ದುರ್ಗಾದೇವಿ, ಭಕ್ತರ ಇಷ್ಟರ್ಥಗಳನ್ನು ಈಡೇರಿಸುತ್ತಾಳೆಂಬ ನಂಬಿಕೆಯಿದೆ. ಹೀಗಾಗಿ ಏಳು ವರ್ಷಕ್ಕೊಮ್ಮೆ ನಡೆಯುವ ಈ ದೇವಿ ಜಾತ್ರಾಮಹೋತ್ಸವಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.ಈ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ಮಹಾರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.

    ಜಾತ್ರಾ ಮಹೋತ್ಸವದ ಅಂಗವಾಗಿ ಚಕ್ಕಡಿ ಸ್ಪರ್ಧೆ, ಒಂದು ಕುದುರೆ, ಒಂದು ಎತ್ತಿನ ಓಟ ಸ್ಪರ್ಧೆ, ನಿಮಿಷದ ಚಕ್ಕಡಿ ಸ್ಪರ್ಧೆ, ಟಗರಿನ ಕಾಳಗ ಸೇರಿದಂತೆ ಅನೇಕ ಹಳ್ಳಿ ಸೊಗಡಿನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಾತ್ರೆಯ ಕೊನೆಯದಿನ ಸಾಯಂಕಾಲ 5 ಗಂಟೆಗೆ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಭಂಡಾರ ಓಕುಳಿ ಸಂಭ್ರಮ ನಡೆಯಲಿದೆ.

    ದೇವಿಯ ಜಾತ್ರೆಗೆ ಈಗಾಗಲೇ ನೂತನ ರಥ ಸಿದ್ದವಾಗಿದ್ದು ಮತ್ತು ತಮಿಳುನಾಡಿನ ಕುಂಭಕೋಣಂನಿಂದ ಕಲಶವನ್ನು ತರಲಾಗಿದೆ. ಈ ದೇವಿ ರಥ ಲೋಕಾಪುರದ ದೇಸಾಯಿ ಅವರ ವಾಡೆದಿಂದ ಮಾರ್ಗವಾಗಿ ಶ್ರೀ ದುರ್ಗಾದೇವಿ ಗುಡಿಯವರೆಗೆ ಸಕಲ ವಾದ್ಯ ಮೇಳಗಳೊಂದಿಗೆ, ಕುದುರೆ, ಆನೆಗಳ ಮೂಲಕ ಭವ್ಯ ಮೆರವಣಿಗೆ ಜರುಗಲಿದೆ.

    ಜಾತ್ರೆಯ ದಿನ ಸುತ್ತಮುತ್ತಲಿನ ಹಳ್ಳಿಯ ಗೌಡರು ಮನೆತನದವರ ಆರತಿ, ನೈವೇದ್ಯ, ವಿಶೇಷವಾಗಿ ದುರ್ಗಾದೇವಿಯ ತವರೂರು ನಾಗಣಾಪುರ ಗ್ರಾಮದ ದೈವ ಮಂಡಳಿಯಿಂದ ಸೀರೆ, ಖಣ, ಬಳೆ, ದೇವಿಗೆ ನೈವೇದ್ಯ ನಡೆಯಲಿದೆ.

    ಲೋಕಾಪುರ ದೇವಿಯ ಶಕ್ತಿ ಪರಂಪರೆಯ ಕೇಂದ್ರವಾಗಿರುವುದರಿಂದ ಇಲ್ಲಿಯೇ ದುರ್ಗಾಮಾತೆ ನೆಲೆಸಿದ್ದಾಳೆ ಎಂಬ ನಂಬಿಕೆಯಿಂದ‌ ಈ ಭಾಗದ ಜನರು ದುರ್ಗಾದೇವಿ ಜಾತ್ರೆಯನ್ನು ಅದ್ಧೂರಿಯಿಂದ ಆಚರಿಸುತ್ತಾ ಬಂದಿದ್ದಾರೆ.

  • ಕ್ವಾರಂಟೈನ್ ಕೇಂದ್ರದಲ್ಲೇ ಅರಳಿದ ವಿಘ್ನ ವಿನಾಶಕ

    ಕ್ವಾರಂಟೈನ್ ಕೇಂದ್ರದಲ್ಲೇ ಅರಳಿದ ವಿಘ್ನ ವಿನಾಶಕ

    ಬಾಗಲಕೋಟೆ: ಕೆಸರಿನಲ್ಲಿಯೇ ಕಮಲದ ಹೂ ಅರಳುವಂತೆ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರೂ ಜಿಲ್ಲೆಯ ಶಿಲ್ಪಕಲಾವಿದರೊಬ್ಬರು ತಮ್ಮ ಕೈ ಚಳಕದಿಂದ ಗಣೇಶನ ಮೂರ್ತಿ ಕೆತ್ತನೆ ಮಾಡಿ ಗಮನ ಸಳೆದಿದ್ದಾರೆ.

    ಮುಧೋಳ ತಾಲೂಕಿನ ಲೋಕಾಪುರದ ಮಲ್ಲಪ್ಪ ಬಡಿಗೇರ ಅವರ ಕುಟುಂಬಸ್ಥರು ಕೊರೊನಾ ಭೀತಿ ಹಿನ್ನೆಲೆ ಮಹಾರಾಷ್ಟ್ರದಿಂದ ಊರಿಗೆ ವಾಪಸ್ ಆಗಿದ್ದರು. ಆದರೆ ಅವರನ್ನು ಲೋಕಾಪುರದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಹೀಗಾಗಿ ಮಲ್ಲಪ್ಪ ಅವರು ಕೂಡ ಕುಟುಂಬಸ್ಥರೊಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದಿದ್ದರು.

    ಶಿಲ್ಪಕಲಾವಿದ ಮಲ್ಲಪ್ಪ ತಮ್ಮ ಆಸಕ್ತಿಯನ್ನು ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ಅವರು ಮೂರ್ತಿ ಕೆತ್ತನೆ ಕೆಲಸ ಕೊಟ್ಟು ಅಗತ್ಯ ಸಾಮಗ್ರಿಗಳನ್ನು ನೀಡಿದ್ದರು. ತಮಗೆ ದೊರೆತ ಕೆಲವೇ ಕೆಲವು ಸಾಮಗ್ರಿಗಳಿಂದ ಮಲ್ಲಪ್ಪ ಅವರು ವಿಘ್ನ ವಿನಾಶಕ ಗಣೇಶ್‍ನ ವಿಗ್ರಹವನ್ನ ಕೆತ್ತನೆ ಮಾಡಿ ಗಮನ ಸಳೆದಿದ್ದಾರೆ.

    ಲೋಕಾಪುರ ಪಂಚಾಯಿತಿ ಪಿಡಿಓ ಅವರು ಮಲ್ಲಪ್ಪ ಅವರಿಗೆ 10 ಸಾವಿರ ರೂ.ವನ್ನು ಪ್ರೋತ್ಸಾಹ ಧನವಾಗಿ ಕೊಟ್ಟು ಮೂರ್ತಿಯನ್ನು ಖರೀದಿಸಿ ಬೆಂಬಲಿಸಿದ್ದಾರೆ. ಮಲ್ಲಪ್ಪ ಅವರ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಕ್ವಾರಂಟೈನ್‍ನಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.