Tag: ಲೋಕಸಭೆ ಚುನಾವಣೆ

  • ಯಡಿಯೂರಪ್ಪನವರ ಹುಣ್ಣಿಮೆ, ಅಮವಾಸ್ಯೆ ಡೆಡ್‍ಲೈನ್ ಮುಗಿದಿವೆ: ಎಂಬಿಪಿ ಟಾಂಗ್

    ಯಡಿಯೂರಪ್ಪನವರ ಹುಣ್ಣಿಮೆ, ಅಮವಾಸ್ಯೆ ಡೆಡ್‍ಲೈನ್ ಮುಗಿದಿವೆ: ಎಂಬಿಪಿ ಟಾಂಗ್

    ವಿಜಯಪುರ: ಮಾಜಿ ಸಿಎಂ ಯಡ್ಡಿಯೂರಪ್ಪನವರ ಹುಣ್ಣಿಮೆ, ಅಮವಾಸ್ಯೆ, ದೀಪಾವಳಿ, ಸಂಕ್ರಾಂತಿ ಎಲ್ಲ ಮುಗಿದಿವೆ. ಈ ರೀತಿ ಅನೇಕ ಡೆಡ್ ಲೈನ್ ಮುಗಿದರೂ ಕಾಂಗ್ರೆಸ್ ಇರುತ್ತೆ ಎಂದು ಜಿಲ್ಲೆಯ ಕಳ್ಳಕವಟಿಗಿಯಲ್ಲಿ ಗೃಹ ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡ್ಡಿಯೂರಪ್ಪನವರ ಹುಣ್ಣಿಮೆ, ಅಮವಾಸ್ಯೆ, ದೀಪಾವಳಿ, ಸಂಕ್ರಾಂತಿ ಅಂತ ಎಲ್ಲಾ ಡೆಡ್‍ಲೈನ್ ಮುಗಿದಿದೆ. ಅವರು ಆಪರೇಷನ್ ಕಮಲ ಮಾಡೋದು ಬಿಡಲ್ಲ. ಪದೇ ಪದೇ ಅದೇ ಮಾತನ್ನ ಕೇಳಿ ನಿಮಗೂ ಬೇಸರ ಆಗಿದೆ. ಮುಂದೆ ಅಸೆಂಬ್ಲಿ ಚುನಾವಣೆ ಬರುತ್ತೆ, ನಂತರ ಲೋಕಸಭಾ ಚುನಾವಣೆ ಬರುತ್ತೆ. ಆಗಲು ಕಾಂಗ್ರೆಸ್ ಇರುತ್ತೆ ಆಪರೇಷನ್ ಕಮಲ ನಡೆಯಲ್ಲ ಎಂದು ಯಡ್ಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ದೋಸ್ತಿ ಸರ್ಕಾರದಲ್ಲಿ ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿ, ಎಂಪಿ ಸ್ಥಾನದ 12 ಸೀಟುಗಳಿಗೆ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ಜೆಡಿಎಸ್ 2, ಕಾಂಗ್ರೆಸ್‍ನ 10 ಸೀಟುಗಳ ಬಗ್ಗೆ ಯಾವುದೇ ಗೊಂದಲವಿಲ್ಲ. ಉಳಿದ 16 ಸೀಟ್‍ಗಳ ಬಗ್ಗೆ ಗುರುವಾರ ಚರ್ಚೆ ಆಗಿದೆ. ದೆಹಲಿಯಲ್ಲಿ ಮಾರ್ಚ್ 11ಕ್ಕೆ ಮೀಟಿಂಗ್ ಇದೆ. ಅಲ್ಲಿಯೇ ಎಲ್ಲವೂ ತೀರ್ಮಾನ ಆಗುತ್ತದೆ. 2014 ಹಾಗೂ 2018 ರ ವಿಜಯಪುರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಂದಿತ್ತು. ವಿಜಯಪುರ ನಮಗೆ ಬೇಕು ಎಂದು ನಾನು, ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ್ ಹೈಕಮಾಂಡ್‍ಗೆ ಮನವಿ ಮಾಡಿದ್ದೇವೆ ಎಂದರು.

    ಸುಮಲತಾ ಅವರ ಬಗ್ಗೆ ನಾನು ಮಾತನಾಡಲ್ಲ. ಬಹುತೇಕ ಮಂಡ್ಯ ಸೀಟ್ ಜೆಡಿಎಸ್ ಪಾಲಾಗಿದೆ. ಹಾಗಾಗಿ ಅದರ ಬಗ್ಗೆ ನಾನು ಹಸ್ತಕ್ಷೇಪ ಮಾಡಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲೋದರ ಬಗ್ಗೆ ನಾನು ಮಾತನಾಡಲ್ಲ ಎಂದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಟೀಕಿಸಿದ ಬಿಜೆಪಿ ಕಾರ್ಯಕರ್ತರು

    ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಟೀಕಿಸಿದ ಬಿಜೆಪಿ ಕಾರ್ಯಕರ್ತರು

    ಮಂಡ್ಯ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್‍ನಿಂದ ಕುಟುಂಬ ರಾಜಕಾರಣ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೆ ದೇವೇಗೌಡರ ಕುಟುಂಬವನ್ನು ಮನಬಂದಂತೆ ಟೀಕಿಸುತ್ತಿದ್ದಾರೆ. ದೇವೇಗೌಡರ ಕುಟುಂಬದ ವಿರುದ್ಧ ಹಲವು ಪ್ರಶ್ನೆಗಳನ್ನು ಕೇಳಿ, ಲೇವಡಿ ಮಾಡಿ ಪೋಸ್ಟ್ ಗಳನ್ನು ಕೂಡ ಹಾಕುತ್ತಿದ್ದಾರೆ.

    ಕಳೆದ 25 ವರ್ಷಗಳಿಂದ ಪಕ್ಷಕ್ಕೋಸ್ಕರ ದುಡಿದು, ಬೆವರು, ರಕ್ತ ಸುರಿಸಿ ಹೋರಾಡಿದ ನನ್ನ ಜೆಡಿಎಸ್ ಅಣ್ತಮ್ಮಂದಿರ ಆತ್ಮಕ್ಕೆ ಶಾಂತಿ ಸಿಗಲಿ. ಮಂಡ್ಯ ಜಿಲ್ಲೆ ಸ್ವಾಭಿಮಾನ ಅಡವಿಟ್ಟ ನಿಮ್ಮ ಜನ್ಮಕ್ಕೆ ಧಿಕ್ಕಾರವಿರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಪೋಸ್ಟ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಹಾಗೂ ಮಂಡ್ಯದ ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಲೋಕಸಭಾ ಚುನಾವನೆಯಲ್ಲಿ ಆಕಸ್ಮಾತ್ ವಲಸಿಗ ಗೆದ್ದರೆ ನಿಮ್ಮನ್ನ ಮಂಡ್ಯ ಇತಿಹಾಸ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಕೆಲವರು ಬರೆದಿದ್ದರೆ, ಇನ್ನೂ ಕೆಲವರು ಸದ್ಯ ನಮ್ ಪುಣ್ಯ, ನಮ್ ಗೌಡ್ರು ಕ್ರಿಕೆಟ್ ಆಡಕ್ಕೆ ಕಲಿತು ಇಂಡಿಯಾ ಕ್ರಿಕೆಟ್ ಟೀಂ ಸೇರಿಲ್ಲ. ಇಲ್ಲಾಂದಿದ್ದರೆ ಇಷ್ಟೊತ್ತಿಗೆ ಫುಲ್ ಟೀಮ್ ಅಲ್ಲಿ ಅವರ ಕುಟುಂಬದವರೇ ಇರುತ್ತಿದ್ದರು ಎಂದು ಟೀಕಿಸಿದ್ದಾರೆ.

    ಕೆಲವರು ಮೊದಲೆಲ್ಲ ಮಂಡ್ಯ ಬಸ್ ನಿಲ್ದಾಣದಲ್ಲಿ ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ಎಂದು ಕೂಗುತ್ತಿದ್ದರು. ಈಗ ಜೆಡಿಎಸ್ ಅಂದಾಭಿಮಾನಿಗಳು ಮಂಡ್ಯಕ್ಕೆ ನಿಖಿಲ್, ಮದ್ದೂರು ಡಿಸಿ ತಮ್ಮಣ್ಣ, ಚೆನ್ನಪಟ್ಟಣ ಕುಮಾರಸ್ವಾಮಿ, ರಾಮನಗರ ಅನಿತಾ ಕುಮಾರಸ್ವಾಮಿ, ಬೆಂಗಳೂರು ದೇವೇಗೌಡ್ರು ಎಂದು ಕೂಗುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಹೀಗೆ ಟೀಕೆ ಮಾಡಿದವರಲ್ಲಿ ಬಿಜೆಪಿ ಕಾರ್ಯಕರ್ತರೇ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜೆಡಿಎಸ್‍ಗೆ ಬಿಜೆಪಿ ಟೀಕಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಹೊಸ ಬಾಡಿಗೆ ಮನೆ!

    ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಹೊಸ ಬಾಡಿಗೆ ಮನೆ!

    ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸಂಭಾವ್ಯ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಮಂಡ್ಯದಲ್ಲೇ ಮನೆ ಮಾಡಲು ಯೋಚಿಸಿರುವ ಅವರು, ಜಿಲ್ಲೆಯ ಮರೀಗೌಡ ಬಡಾವನೆಯಲ್ಲಿ ಬಂಗಲೆಯೊಂದನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿದ್ದಾರೆ.

    ಮಂಡ್ಯ ಕ್ಷೇತ್ರದಿಂದ ನಿಖಿಲ್ ಅವರೇ ಜೆಡಿಎಸ್‍ನಿಂದ ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಆದರಿಂದ ಜಿಲ್ಲೆಯ ಪ್ರತಿಷ್ಠಿತ ಬಡಾವಣೆಗಳಾದ ಬಂದೀಗೌಡ ಬಡಾವಣೆ, ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ ಹಾಗೂ ಅಶೋಕ ನಗರದಲ್ಲಿ ನಿಖಿಲ್ ಮನೆ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಮರೀಗೌಡ ಬಡಾವಣೆಯಲ್ಲಿ ಪ್ರತಿಷ್ಠಿತ ಬಂಗಲೆಯೊಂದು ಬಾಡಿಗೆಗೆ ಪಡೆಯಲು ನಿಖಿಲ್ ನಿರ್ಧರಿಸಿದ್ದಾರೆ. ಮಂಡ್ಯ ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಚಿಕ್ಕಣ್ಣ ಎಂಬುವವರಿಗೆ ಸೇರಿದ ಮನೆಯನ್ನು ಸದ್ಯಕ್ಕೆ ಬಾಡಿಗೆ ಪಡೆಯಲು ನಿಖಿಲ್ ಚಿಂತಿಸಿದ್ದಾರೆ. ಇದನ್ನೂ ಓದಿ:ಅಂಬಿ ಅದೃಷ್ಟದ ಮನೆಗೆ ಶೀಘ್ರವೇ ಸುಮಲತಾ ಶಿಫ್ಟ್!

    ನಾಲ್ಕು ಬೆಡ್ ರೂಂ, ವಿಶಾಲವಾದ ದೇವರಮನೆ ಹಾಗೂ ವಾಸ್ತು ಪ್ರಕಾರ ಮನೆ ನಿರ್ಮಾಣವಾಗಿದ್ದು, ನಿಖಿಲ್ ರಾಜಕೀಯ ಚುಟುವಟಿಕೆಗೆ ಅನುಕೂಲವಾಗಲೆಂದು ಮನೆ ಬಾಡಿಗೆ ಪಡೆಯಲು ನಿರ್ಧರಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಸ್ವಂತ ಮನೆ ಕಟ್ಟಲು ಕೂಡ ನಿಖಿಲ್ ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ. ಇದನ್ನೂ ಓದಿ:ಮಂಡ್ಯದಿಂದ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಐದು ಎಕರೆ ಜಮೀನು ಖರೀದಿಸಿ ಅಲ್ಲಿಯೂ ತೋಟ, ಮನೆ ನಿರ್ಮಿಸಲು ಈಗಾಗಲೇ ನಿಖಿಲ್ ಪ್ಲಾನ್ ಮಾಡಿದ್ದಾರೆ. ರಾಜಕೀಯ, ಸಿನಿಮಾ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಳ್ಳಲು ನಿಖಿಲ್ ಚಿಂತನೆ ನಡೆಸಿದ್ದಾರೆ. ಮಂಡ್ಯದಲ್ಲಿ ಸ್ವಂತ ಜಮೀನು, ಮನೆ ಮಾಡದಿದ್ದರೆ ಚುನಾವಣೆ ನಂತರ ನಿಖಿಲ್ ಮಂಡ್ಯಕ್ಕೆ ಬರಲ್ಲ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಇದು ಮತಗಳಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹೀಗಾಗಿ ಸ್ವಂತ ಕೃಷಿ ಜಮೀನು, ಮನೆ ನಿರ್ಮಿಸಿ ಮಂಡ್ಯ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ನಿಖಿಲ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ನಿಖಿಲ್‍ಗೆ ಎದುರಾಳಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗಿದ್ದು, ಈಗಾಗಲೇ ಸುಮಲತಾ ಅವರು ಕೂಡ ಮಂಡ್ಯದ ಮಂಜುನಾಥ ನಗರದಲ್ಲಿರುವ ಸೈಟ್‍ನಲ್ಲಿ ಸ್ವಂತ ಮನೆ ಕಟ್ಟುವುದಾಗಿ ತಿಳಿಸಿದ್ದಾರೆ. ಇದರಿಂದ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ದಿನದಿಂದ ದಿನಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

    ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

    ಬೆಳಗಾವಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ವೇಳೆ ಎಲ್ಲರಿಗೂ ದೇಶ ಹಾಗೂ ಸೈನಿಕರ ಚಿಂತೆಯಾದರೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಟೀಕಿಸಿದ್ದಾರೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿಯ ಟಿಳಕವಾಡಿಯಲ್ಲಿ ನಾಥ ಪೈ ಉದ್ಯಾನವನ ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶ ಹಾಗೂ ಸೈನಿಕರ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿರಬೇಕು. ಇಂಥ ವಿಷಯಗಳಲ್ಲಿ ರಾಜಕೀಯ ಮಾಡದೇ ವಿಶ್ವಕ್ಕೆ ಏಕತೆ ಸಂದೇಶ ಸಾರಬೇಕು ಎಂದರು.

    ಏರ್ ಸ್ಟ್ರೈಕ್‍ನಿಂದ 22 ಎಂಪಿ ಸೀಟು ಗೆಲ್ಲುವ ಬಿಎಸ್‍ವೈ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ದೇಶದ ಸೈನ್ಯ ಮತ್ತು ಭದ್ರತೆ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೆಲವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಈ ರೀತಿ ಮಾಡುವುದು ಎಲ್ಲರಿಗೂ ಕೂಡ ಕಪ್ಪು ಚುಕ್ಕೆ. ಎಲ್ಲರಿಗೂ ಕೂಡ ದೇಶದ ಮತ್ತು ಸೈನಿಕರ ಚಿಂತೆಯಾದರೆ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಮುಂಬೈ ಸ್ಫೋಟದ ವೇಳೆ ಚಿತ್ರೀಕರಣ ನೋಡಲು ಅಲ್ಲಿನ ಮುಖ್ಯಮಂತ್ರಿಯ ಮಗ ಮತ್ತು ನಿರ್ದೇಶಕ ಹೋಗಿದ್ದಕ್ಕೆ ಅಂದು ಮುಖ್ಯಮಂತ್ರಿ ಅವರನ್ನು ಬದಲಿಸಲಾಗಿತ್ತು. ಬಹಿರಂಗವಾಗಿ ಹೇಳಿಕೆ ನೀಡಿರುವ ಬಿಎಸ್‍ವೈ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಜರುಗಿಸಲಿದೆ ಎನ್ನುವದನ್ನು ದೇಶಕ್ಕೆ ತೋರಿಸಲಿ ಎಂದು ಸವಾಲು ಹಾಕಿದರು.

    ಶಾಸಕ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಫೈಟ್ ವಿಡಿಯೋ ವಿಚಾರ ಮಾತನಾಡಿ, ಅವರಿಬ್ಬರ ನಡುವೆ ಹೆಣ್ಣುಮಗಳ ವಿಚಾರವಾಗಿ ಜಗಳವಾಗಿರುವುದು ನಂಬಲು ಸಾಧ್ಯವಿಲ್ಲ. ವೈಯುಕ್ತಿಕ ವಿಚಾರಕ್ಕಾಗಿ ಜಗಳ ನಡೆದಿದೆ. ಹೆಣ್ಣುಮಗಳ ವಿಷಯವಾಗಿ ಅವರಿಬ್ಬರ ಮಧ್ಯೆ ಜಗಳವಾಗಿದ್ದು ನನಗೆ ಗೊತ್ತಿಲ್ಲ. ಇದನ್ನು ನಾನು ನೋಡಿಯೂ ಇಲ್ಲ ಕೇಳಿಯೂ ಇಲ್ಲ. ಅವರಿಬ್ಬರು ಸಹೋದರರಂತೆ ಇದ್ದಾರೆ. ಜಗಳ ಕೆಟ್ಟಗಳಿಗೆಯಲ್ಲಿ ಆಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗುತ್ತದೆ. ಮುಂದೆ ಎಲ್ಲವೂ ಸರಿ ಹೋಗಲಿದೆ ಎನ್ನುವ ವಿಶ್ವಾಸವಿದೆ ಎಂದು ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧರ ಬಲಿದಾನವನ್ನು ಬಿಎಸ್‍ವೈ ರಾಜಕಾರಣಕ್ಕೆ ಬಳಸುತ್ತಿಲ್ಲ: ಬಿ.ವೈ.ವಿಜಯೇಂದ್ರ

    ಯೋಧರ ಬಲಿದಾನವನ್ನು ಬಿಎಸ್‍ವೈ ರಾಜಕಾರಣಕ್ಕೆ ಬಳಸುತ್ತಿಲ್ಲ: ಬಿ.ವೈ.ವಿಜಯೇಂದ್ರ

    ಮೈಸೂರು: ಯೋಧರ ಬಲಿದಾನವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ರಾಜಕಾರಣಕ್ಕೆ ಬಳಸಿಲ್ಲ. ಅವರ ಹೇಳಿಕೆಯನ್ನು ಕೆಲವರು ತಿರುಚಿ ಅಪಾರ್ಥ ಮಾಡಿಕೊಂದಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಅವರು ತಮ್ಮ ತಂದೆಯ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 22 ಸೀಟನ್ನು ಗೆಲ್ಲುತ್ತೇವೆ ಎನ್ನುವ ಮಾತನ್ನು ಬಿಎಸ್‍ವೈ ಅವರು ನಿನ್ನೆ ಮೊನ್ನೆಯಿಂದ ಹೇಳುತ್ತಿಲ್ಲ. ಸಮ್ಮಿಶ್ರ ಸರ್ಕಾರ ಬರುವ ಮೊದಲು ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಾಗಲು ಬಿಜೆಪಿ ರಾಜ್ಯದಲ್ಲಿ 22 ಸೀಟು ಗೆದ್ದು ಪ್ರಧಾನಿ ಮೋದಿಯವರಿಗೆ ಮತ್ತೆ ಪ್ರಧಾನಿಯಾಗಲು ಸಹಾಯ ಮಾಡಬೇಕು ಎಂದಿದ್ದರು. ಆದ್ರೆ ಬಿಎಸ್‍ವೈ ಅವರ ಹೇಳಿಕೆಯನ್ನು ಕೆಲವರು ತಿರುಚಿ, ಅದಕ್ಕೆ ಬೇರೆ ಅರ್ಥವನ್ನೇ ಕಲ್ಪಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

    ಸುಮಲತಾ ಅವರು ಮಂಡ್ಯದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ಅಭ್ಯರ್ಥಿಯೇ ಮಂಡ್ಯದಲ್ಲಿ ಸ್ಪರ್ಧೆ ಮಾಡ್ತಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ 2 ಲಕ್ಷದಷ್ಟು ಮತ ಪಡೆದಿದೆ. ಈ ಬಾರಿ ಮಂಡ್ಯದಲ್ಲಿ ಗೆಲ್ಲುವ ವಿಶ್ವಾಸ ಇದೆ. ನಾನು ಎಲ್ಲಿಯೂ ಲೋಕಸಭಾ ಅಭ್ಯರ್ಥಿ ಅಲ್ಲ. ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಮಾಡ್ತಿನಿ ಎಂದು ಬಿಜೆಪಿಯಿಂದ ಸುಮಲತಾ ಅವರನ್ನು ಬೆಂಬಲಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್‍ನೊಂದಿಗೆ ದೇಶದ್ರೋಹ ಹೊಕ್ಕಳು ಬಳ್ಳಿಯಂತೆ ಅಂಟಿಕೊಂಡಿದೆ: ಪ್ರತಾಪ್ ಸಿಂಹ

    ಕಾಂಗ್ರೆಸ್‍ನೊಂದಿಗೆ ದೇಶದ್ರೋಹ ಹೊಕ್ಕಳು ಬಳ್ಳಿಯಂತೆ ಅಂಟಿಕೊಂಡಿದೆ: ಪ್ರತಾಪ್ ಸಿಂಹ

    ಮೈಸೂರು: ಕಾಂಗ್ರೆಸ್‍ನೊಂದಿಗೆ ದೇಶದ್ರೋಹ ಹೊಕ್ಕಳು ಬಳ್ಳಿಯ ರೀತಿ ಅಂಟಿಕೊಂಡಿದೆ. ಬ್ರಿಟಿಷ್ ಕಾಲದಿಂದಲೂ ಹೊಂದಾಣಿಕೆ ಮಾಡಿಕೊಂಡೆ ಕಾಂಗ್ರೆಸ್ಸಿನವರು ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಕಿಡಿಕಾರಿದ್ದಾರೆ.

    ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾಯುದಾಳಿ ನಡೆಸಿದೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬ್ರಿಟಿಷ್ ಕಾಲದಿಂದಲೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡೆ ಬಂದಿದೆ. ಕ್ರಾಂತಿಕಾರಿಗಳು ರಕ್ತಸುರಿಸಿ ಆದರೂ ಸ್ವಾತಂತ್ರ್ಯ ಪಡೆದುಕೊಳ್ತಿವಿ ಅಂತ ಹೋದರೆ ಕಾಂಗ್ರೆಸ್ ಒಪ್ಪಿರಲಿಲ್ಲ. ಬ್ರಿಟಿಷ್ ಬಳಿ ದೇಶ ನಿಮ್ಮ ಹಿಡಿತದಲ್ಲೇ ಇರಲಿ. ಆದ್ರೆ ನಮಗೆ ಅಧಿಕಾರ ಕೊಡಿ ಸಾಕು ಅಂತ ಆಗಿನಿಂದಲೂ ಕಾಂಗ್ರೆಸ್ ಅಧಿಕಾರ ಅನುಭವಿಸಿಕೊಂಡು ಬಂದವರು ಎಂದು ಟೀಕಿಸಿದ್ದಾರೆ.

    ಮುಂಬೈ ಮೇಲೆ ದಾಳಿ ಮಾಡಿದಾಗ ಇವರು ಪಾಕಿಸ್ಥಾನದ ಮೇಲೆ ದಾಳಿ ಮಾಡಬೇಕಿತ್ತು. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಗೆ ಪಾಕಿಸ್ತಾನ ಗಡಿ ದಾಟಿ ಹೋಗಲು ತಾಕತ್ ಇಲ್ಲ. ಆಗ ಕಾಂಗ್ರೆಸ್ ಅವರು ಯುದ್ಧ ಮಾಡಿದ್ದರೆ ಜನರು ಇವರನ್ನು ಹೊಗಳುತ್ತಿದ್ದರು. ಭಾರತದ ಗಡಿ ದಾಟಿ ಯೋಧರ ಶಿರ ತೆಗೆದುಕೊಂಡು ಹೋದಾಗ ಇವರು ಏನು ಮಾಡಲಿಲ್ಲ. ಈಗ ಇವರು ಚುನಾವಣೆ ಹಿನ್ನೆಲೆ ಎಂದು ಹೇಳುತ್ತಾರೆ. ಇವರಿಗೆ ಇದು ಅಭ್ಯಾಸವಾಗಿ ಹೋಗಿದೆ ಎಂದು ಕಿಡಿಕಾರಿದ್ದಾರೆ.

    ದೇಶದ ಸುರಕ್ಷಿತ ದೃಷ್ಟಿಯಿಂದ ಸರ್ಕಾರ ವಾಯುದಾಳಿ ನಡೆಸಿದೆ. ಇವರಿಗೆ ಯಾವಾಗಲೂ ಹೊಂದಾಣಿಗೆ ಬೇಕು. ಹೊಂದಾಣಿಕೆಯಿಂದ ಇವರು ಅಧಿಕಾರ ಅನುಭವಿಸಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರರಿಗೆ ತಕ್ಕ ಉತ್ತರ ನೀಡಿದ್ದಾರೆ. ಯುದ್ಧ ವಿಚಾರದಲ್ಲಿ ಮೋದಿ ಎದೆಗಾರಿಕೆ ತೋರಿದ್ದಾರೆ. ಈ ದಿಟ್ಟ ನಿರ್ಧಾರಗಳು ಜನರಿಗೆ ಆಕರ್ಷಣೆಯಾಗಿವೆ. ಇದನ್ನೇ ಯಡಿಯೂರಪ್ಪ ಅವರು ಹೇಳಿರೋದು. ಕಾಂಗ್ರೆಸ್‍ನವರು ಈ ಹೇಳಿಕೆಯನ್ನು ಬೇರೆ ರೀತಿಯಾಗಿ ಹೇಳುತ್ತಿದ್ದಾರೆ ಅಷ್ಟೇ ಎಂದು ಬಿಜೆಪಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಹೆಚ್.ಡಿ.ದೇವೇಗೌಡ ಅಥವಾ ನಿಖಿಲ್‍ಕುಮಾರಸ್ವಾಮಿ ಸ್ಪರ್ಧೆ ವಿಚಾರ ಪ್ರತಿಕ್ರಿಯಿಸಿ, ನಾಲ್ಕು ಮುಕ್ಕಾಲು ವರ್ಷದಲ್ಲಿ ಮೈಸೂರಿನಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಹಿಂದೆ ಯಾವ ಸಂಸದ ಮಾಡದ ಕೆಲಸ ಮಾಡಿದ್ದೇನೆ. ಮೋದಿ ಗೆಲ್ಲಿಸಲು ಜನರು ಮುಂದಾಗಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆದರು ಕೂಡ ಏನು ಆಗಲ್ಲ. ಇನ್ನೊಮ್ಮೆ ನಾನು ಎಂಪಿ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೆ ಬಿಎಸ್‍ವೈ ಎಡವಟ್ಟು

    ಮತ್ತೆ ಬಿಎಸ್‍ವೈ ಎಡವಟ್ಟು

    ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅದ್ಯಾಕೋ ಇತ್ತೀಚೆಗೆ ಮೇಲಿಂದ ಮೇಲೆ ಎಡವಟ್ಟು ಮಾಡ್ಕೊಳ್ತಾನೆ ಇದ್ದಾರೆ. ಕರ್ನಾಟಕ ರಾಜ್ಯದಲ್ಲಿ 120ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕು ಅಂತ ಹೇಳಿಕೆ ನೀಡಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಜಿಲ್ಲೆಯಲ್ಲಿ ಇಂದು ನಡೆದ ಬಿಜೆಪಿ ವಿಜಯ ಸಂಕಲ್ಪ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡೋ ವೇಳೆ ಈ ರೀತಿಯ ಎಡವಟ್ಟು ಹೇಳಿಕೆ ನೀಡಿದ್ದಾರೆ. ಮಾತಿನ ಭರದಲ್ಲಿ ಕರ್ನಾಟಕದಲ್ಲಿ 120 ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಹೇಳಿ, ಬಳಿಕ ರಾಜ್ಯದಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೀರಾ ಅನ್ನೋ ಮಾಧ್ಯಮದವರ ಪ್ರಶ್ನೆಗೆ 22 ಸ್ಥಾನ ಗೆಲ್ಲುತ್ತೀವಿ ಅಂತ ಹೇಳಿ ಮೈಕ್ ಸರಿಸಿ ಮಾತು ಮುಗಿಸಿದರು.

    ಮಾತಿನ ಭರದಲ್ಲಿ ರಾಜ್ಯದಲ್ಲಿ 22 ಎನ್ನುವ ಬದಲು 120 ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು, ಪ್ರಧಾನಿಯವರ ಕೈ ಬಲ ಪಡಿಸಬೇಕಾಗಿದೆ. 300ಕ್ಕೂ ಹೆಚ್ಚು ಸ್ಥಾನ ಗೆದ್ದು ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕು. ರಾಜ್ಯದಲ್ಲಿ ಕನಿಷ್ಟ 22 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಇನ್ನೊಂದು ವಾರದಲ್ಲಿ ಅಮಿತ್ ಶಾ ಭೇಟಿ ಮಾಡಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ ಎಂದು ಹೇಳಿದ್ದಾರೆ.

    ಮಂಡ್ಯದಲ್ಲಿ ನಟಿ ಸುಮಲತಾ ಸ್ಪರ್ಧೆ ವಿಚಾರ ಪ್ರತಿಕ್ರಿಯಿಸಿ, ಆ ಬಗ್ಗೆ ನಾವು ಇನ್ನು ಚರ್ಚೆ ಮಾಡಿಲ್ಲ, ನೋಡೋಣ. ತುಮಕೂರು ಲೋಕಸಭೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ತೀರ್ಮಾನ ಅಂತಿಮಗೊಳಿಸಿಲ್ಲ, ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ಳೇ ಸುಳ್ಳು…! ಮತ್ತೆ ಸುಳ್ಳು ಹೇಳಿದ ಯಡಿಯೂರಪ್ಪ! – ನೀವು ಹೇಳಿದ್ದನ್ನು ಮತ್ತೊಮ್ಮೆ ಕೇಳಿಸ್ಕೊಳ್ಳಿ

    ಸುಳ್ಳೇ ಸುಳ್ಳು…! ಮತ್ತೆ ಸುಳ್ಳು ಹೇಳಿದ ಯಡಿಯೂರಪ್ಪ! – ನೀವು ಹೇಳಿದ್ದನ್ನು ಮತ್ತೊಮ್ಮೆ ಕೇಳಿಸ್ಕೊಳ್ಳಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿಯ ಮರ್ಯಾದೆಯನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಆದರೆ ಈ ಹೇಳಿಕೆಯ ಕಸಿವಿಸಿ ಬಿಜೆಪಿ ರಾಷ್ಟ್ರ ಮಟ್ಟದ ನಾಯಕರಿಗೆ ಆಗಿದೆ ಎಂದು ಅರಿವಾಗುತ್ತಿದ್ದಂತೆಯೇ, ಬಿ.ಎಸ್.ವೈ ಈಗ ತಮ್ಮ ಮೇಲಿನ ಆರೋಪವನ್ನು ಮಾಧ್ಯಮಗಳ ಮೇಲೆ ಹಾಕುವ ಯತ್ನ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರೇ ನೀವು ನಿನ್ನೆ ಅರ್ಥಾತ್ ಬುಧವಾರ ಏನು ಮಾತಾಡಿದ್ದೀರಿ ಎಂದು ನಿಮಗೆ ಮರೆತಿದ್ದರೆ ನಿನ್ನೆ ನೀವು ಚಿತ್ರದುರ್ಗದಲ್ಲಿ ಏನ್ ಹೇಳಿದ್ರಿ ಅನ್ನೋದನ್ನು ನೀವೇ ಒಂದ್ಸಾರಿ ಕೇಳಿಸಿಕೊಳ್ಳಿ.

    ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ತಲೆ ತಗ್ಗಿಸುವಂತಹ ಹೇಳಿಕೆ ನೀಡಿದ ಯಡಿಯೂರಪ್ಪ ಅವರು ಇಂದು ಟ್ವಿಟ್ಟರ್ ನಲ್ಲಿ, ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥೈಸಲಾಗಿದೆ. ನಾನು ಪರಿಸ್ಥಿತಿ ಬಿಜೆಪಿ ಪರವಾಗಿದೆ ಅಂತಾ ಹೇಳಿದ್ದೇನೆ. ಇದನ್ನ ನಾನು ಹಲವು ತಿಂಗಳಿನಿಂದ ಹೇಳುತ್ತಾ ಬಂದಿದ್ದೇನೆ. ಮೋದಿ ನಾಯಕತ್ವದಲ್ಲಿ ಕನಿಷ್ಠ 22 ಸೀಟು ಗೆಲ್ಲುವುದಾಗಿ ಹೇಳುತ್ತಿದ್ದೇನೆ. ಈ ರೀತಿ ನಾನು ಹೇಳಿರೋದು ಇದೇ ಮೊದಲಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದರು.

    ಆದರೆ ಈ ಟ್ವೀಟ್ ಮಾಡುವುದಕ್ಕೂ ಮುನ್ನ ಇಂದು ಯಾದಗಿರಿಯಲ್ಲಿದ್ದ ಯಡಿಯೂರಪ್ಪ, ನಾನು ಏನೂ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ಇದಾಗಿ ಗಂಟೆಗಳು ಕಳೆಯುವ ಮುನ್ನವೇ ನಿನ್ನೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎನ್ನುತ್ತಿದ್ದಾರೆ.

    https://www.youtube.com/watch?v=LLIlyAySnxg

    ಈ ಎಲ್ಲದರ ನಡುವೆಯೇ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿರುವ ವಿ.ಕೆ.ಸಿಂಗ್ ಅವರು ಟ್ವಿಟ್ಟರ್ ನಲ್ಲೇ ಯಡಿಯೂರಪ್ಪಗೆ ಮಂಗಳಾರತಿ ಮಾಡಿದ್ದಾರೆ. ನಮ್ಮ ದೇಶದ ಕಾರ್ಯಾಚರಣೆ ಚುನಾವಣೆಯಲ್ಲಿ ಕೆಲವು ಎಕ್ಸ್ ಟ್ರಾ ಸೀಟುಗಳನ್ನು ಗೆಲ್ಲಲು ಮಾಡಿದ್ದಲ್ಲ. ನಾವೆಲ್ಲಾ ಜೊತೆಯಾಗಿದ್ದೇವೆ. ದೇಶದ ಹಿತದೃಷ್ಟಿಯಿಂದ ಹಾಗೂ ಜನರ ಸುರಕ್ಷತೆಗಾಗಿ ನಾವು ಈ ಕಾರ್ಯಾಚರಣೆ ಮಾಡಿದ್ದೇವೆ ಎಂದು ಯಡಿಯೂರಪ್ಪ ಅವರ ಹೇಳಿಕೆಯನ್ನು ಖಂಡಿಸಿದ್ದರು.

    ಅಲ್ಲದೆ ಇದರ ಜೊತೆಗೆ ಮಾಜಿ ಪ್ರಧಾನಿ ವಾಜಪೇಯಿಯವರು ಲೋಕಸಭೆಯಲ್ಲಿ ಮಾಡಿದ್ದ ಭಾಷಣದ ತುಣುಕು ಇರುವ ಯೂಟ್ಯೂಬ್ ಲಿಂಕ್ ಹಾಕಿದ್ದರು. ಅಂದಿನ ಭಾಷಣದಲ್ಲಿ ಮೋದಿಯವರು ಏನು ಹೇಳಿದ್ದರು ಎಂಬುದನ್ನೂ ಒಂದು ಸಾರಿ ಕೇಳಿಸ್ಕೊಳ್ಳಿ.

    ಈ ಮಧ್ಯೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಇಡೀ ದೇಶ ಕೇಂದ್ರ, ಸೇನೆಗೆ ಬೆಂಬಲಿಸುತ್ತಿದೆ. ಆದರೆ ಬಿಜೆಪಿ ನಾಯಕರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹೆಚ್ಚು ಸೀಟಿನ ಲೆಕ್ಕಾಚಾರದಲ್ಲಿದ್ದಾರೆ. ಉಗ್ರರ ದಾಳಿ, ಯುದ್ಧವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಇದು ನಾಚಿಕೆಗೇಡಿನ ವಿಚಾರ. ಸೈನಿಕರಿಗೆ ಮಾಡುತ್ತಿರುವ ಅವಮಾನ ಎಂದು ಯಡಿಯೂರಪ್ಪರನ್ನು ಟ್ವೀಟ್ ನಲ್ಲಿ ಕುಟುಕಿದ್ದರು.

    ಈ ಎಲ್ಲ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ ಅವರ ಟ್ವಿಟ್ಟರ್ ಖಾತೆಯಲ್ಲಿ ನಾನು ಹಾಗೆ ಹೇಳಿದ್ದಲ್ಲ ಎಂಬ ಟ್ವೀಟ್ ಕಾಣಿಸಿಕೊಂಡಿದೆ. ಯಡಿಯೂರಪ್ಪ ಅವರ 22 ಸೀಟಿನ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ನಿಮ್ಮ ತಪ್ಪನ್ನು ಒಪ್ಪಿಕೊಂಡು ನೀವು ಇನ್ನಷ್ಟು ದೊಡ್ಡವರಾಗಬಹುದಿತ್ತು. ಆದರೆ ನಿಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಿದ್ಯಾಕೆ ಯಡಿಯೂರಪ್ಪನವರೇ..?

    ಯಡಿಯೂರಪ್ಪ ಅವರ ಹೇಳಿಕೆಯನ್ನು ಕೇಳಿಸಿಕೊಂಡ ಮೇಲೆ ನಿಮಗೇನನ್ನಿಸಿತು ಎಂಬುದನ್ನು ಕಮೆಂಟ್ ಮಾಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನ ಒಳಿತಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ!

    ಮಗನ ಒಳಿತಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ!

    ಮಂಡ್ಯ: ನಟ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಮಂಡ್ಯ ಲೋಕಸಭಾ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದ್ದು, ಒಂದೆಡೆ ನಿಖಿಲ್ ಸ್ಪರ್ಧಿಸುವ ಸುಳಿವು ನೀಡಿದ್ರೆ, ಮತ್ತೊಂದೆಡೆ ನಿಖಿಲ್ ತಾಯಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಗನ ರಾಜಕೀಯ ಭವಿಷ್ಯದ ಒಳಿತಿಗೆ ಹರಕೆ ಹೊತ್ತಿದ್ದಾರೆ.

    ನಿಖಿಲ್ ತಾಯಿ ಹಾಗೂ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪುತ್ರನಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತಿದ್ದಾರೆ. ಒಂದು ಕಾಲು ರೂಪಾಯಿ ಹರಕೆ ಹೊತ್ತರೆ, ಇಷ್ಠಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಿತಾ ಕುಮಾರಸ್ವಾಮಿ, ನಾನು ನನ್ನ ಮಗನಿಗೆ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸಿದ್ದೇನೆ ಅಂತಿದ್ದಾರೆ. ಇದೇ ವೇಳೆ ಮಂಡ್ಯದಿಂದ ಸುಮಲತಾ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿ, ಆ ಬಗ್ಗೆ ನಾನೇನು ಮಾತನಾಡಲ್ಲ. ಆದರೆ ಮಂಡ್ಯ ಜೆಡಿಎಸ್ ಬೆಲ್ಟ್ ಎನ್ನುವ ಮೂಲಕ ತಮ್ಮ ಮಗನ ಸ್ಪರ್ಧೆ ಬಗ್ಗೆಯೂ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಮೈತ್ರಿ ಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಸ್ಪರ್ಧೆ ಬಹುತೇಕ ಖಚಿತವಾಗಿದೆ ಅನ್ನೋ ಚರ್ಚೆ ಮಂಡ್ಯ ಜಿಲ್ಲೆಯಲ್ಲಿ ಜೋರಾಗಿರುವಾಗಲೇ ತಾಯಿ ಅನಿತಾ ಕುಮಾರಸ್ವಾಮಿ ಮಗನ ಶ್ರೇಯೋಭಿವೃದ್ಧಿಗಾಗಿ ದೇವರಲ್ಲಿ ಹರಕೆ ಹೊತ್ತಿದ್ದಾರೆ. ಇತ್ತ ನಿಖಿಲ್ ಕೂಡ ತಮ್ಮ ಸ್ಪರ್ಧೆ ಬಗ್ಗೆ ಮಾತನಾಡುತ್ತ, ಜಿಲ್ಲೆಯ ಜನರ ಭಾವನೆಗಳನ್ನು ಅರ್ಥೈಸಿಕೊಂಡು ನಮ್ಮ ಪಕ್ಷದ ನಾಯಕರು ತೀರ್ಮಾನ ಕೈಗೊಳ್ತಾರೆ ಅಂತಿದ್ದಾರೆ. ಈ ಮೂಲಕ ಈಗಾಗಲೇ ನಿಖಿಲ್ ಸ್ಪರ್ಧೆಗೆ ಒತ್ತಡ ಹೇರುತ್ತಿರುವ ಮುಖಂಡರ ಮನವಿಗೆ ಪಕ್ಷ ಸ್ಪಂದಿಸುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದು, ತಮ್ಮ ಸ್ಪರ್ಧೆಯ ಬಗ್ಗೆ ಖಚಿತ ಪಡಿಸಿದ್ದಾರೆ.

    ಸಕ್ಕರೆ ನಾಡಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಕೂಟದಿಂದ ನಿಖಿಲ್ ಕುಮಾರ್ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಸ್ಪರ್ಧೆ ಬಹುತೇಕ ಖಚಿತವಾಗಿದೆ ಎಂಬ ಚರ್ಚೆ ಜಿಲ್ಲೆಯಾದ್ಯಂತ ಜೋರಾಗಿ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲು ಒತ್ತಾಯ!

    ಹುತಾತ್ಮ ಯೋಧನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲು ಒತ್ತಾಯ!

    ಮಂಡ್ಯ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಪತ್ನಿ ಕಲಾವತಿ ಅವರನ್ನ ಮಂಡ್ಯ ಲೋಕಸಭೆ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಲು ರಾಜ್ಯದ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಲಾಗುತ್ತಿದೆ.

    ಹೌದು, ಬೆಂಗಳೂರು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಕಾಲೋನಿಯ ಹುತಾತ್ಮ ಯೋಧ ಗುರು ನಿವಾಸದಲ್ಲಿ ಪತ್ರ ಬಿಡುಗಡೆ ಮಾಡಿದ ವೆಂಕಟೇಶ್ ಅವರು ಕಲಾವತಿಯವರನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಮಂಡ್ಯದಿಂದ ಸ್ಪರ್ಧಿಸಲು ಅವಕಾಶ ನೀಡಿ ಎಂದು ರಾಜಕೀಯ ಪಕ್ಷಗಳ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.

    ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಹಾಗೂ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ವೆಂಕಟೇಶ್ ಅವರು ಪತ್ರ ಬರೆದಿದ್ದಾರೆ. ಈಗಾಗಲೇ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿಯಲು ನಟಿ ಸುಮಲತಾ, ನಟ ನಿಖಿಲ್ ಕುಮಾರಸ್ವಾಮಿ, ಲಕ್ಷ್ಮಿ ಅಶ್ವಿನ್ ಗೌಡ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಆದ್ರೆ ಯೋಧನ ಪತ್ನಿ ಕಲಾವತಿ ಅವರನ್ನ ಸಂಸತ್‍ಗೆ ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸಿಕೊಡುವ ಬಗ್ಗೆ ಎಲ್ಲಾ ಪಕ್ಷಗಳು ಮುಂದಾಗುವಂತೆ ಈ ಪತ್ರದಲ್ಲಿ ಉಲ್ಲೇಖಿಸಿಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv