Tag: ಲೋಕಸಭೆ ಚುನಾವಣೆ

  • ಕೃಷ್ಣಪ್ಪನವರನ್ನು ಸಾಯಿಸಿದ್ದೇ ಜೆಡಿಎಸ್ – ಬಸವರಾಜು ಗಂಭೀರ ಆರೋಪ

    ಕೃಷ್ಣಪ್ಪನವರನ್ನು ಸಾಯಿಸಿದ್ದೇ ಜೆಡಿಎಸ್ – ಬಸವರಾಜು ಗಂಭೀರ ಆರೋಪ

    ತುಮಕೂರು: ಕಳೆದ ಬಾರಿ ಲೋಕಸಭೆ ಚುನಾವಣೆಯ ವೇಳೆ ಪಕ್ಷದ ಅಭ್ಯರ್ಥಿಯಾಗಿದ್ದ ಎ. ಕೃಷ್ಣಪ್ಪನವರನ್ನು ಗೆಲ್ಲಿಸ್ತೀವಿ ಅಂತ ಕರೆದುಕೊಂಡು ಬಂದು ಅವರನ್ನ ಜೆಡಿಎಸ್‍ನವರು ಸಾಯಿಸಿದರು ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಒಕ್ಕಲಿಗ ಮುಖಂಡರ ಕುತಂತ್ರದಿಂದ ಎ.ಕೃಷ್ಣಪ್ಪ ಪ್ರಾಣ ಬಿಟ್ಟರು. ಕೃಷ್ಣಪ್ಪ ಅವರನ್ನು ಗೆಲ್ಲಿಸುತ್ತೇವೆ ಅಂತ ಹೇಳಿ ಜೆಡಿಎಸ್‍ನ ಎಲ್ಲಾ ಮುಖಂಡರೂ ಮುದ್ದಹನುಮೇಗೌಡ ಪರ ಕೆಲಸ ಮಾಡಿದರು. ಹಾಗಾಗಿ ಯಾದವ ಸಮುದಾಯದ ಕೃಷ್ಣಪ್ಪ ಆ ನೋವಿನಿಂದ ಸಾವನ್ನಪ್ಪಿದರು. ‘ಅಂದು ಲಕ್ಕಪ್ಪ, ಇಂದು ಮುದ್ದಹನುಮೇಗೌಡ’ ಎಂದು ಜೆಡಿಎಸ್‍ನ ಒಕ್ಕಲಿಗ ಮುಖಂಡರು ಕರಪತ್ರ ಹಂಚಿದ್ದರು. ಹಾಗಾಗಿ ಜಾತಿಪ್ರೇಮ ಮೆರೆದರು ಎಂದು ಹರಿಹಾಯ್ದಿದ್ದಾರೆ.

    ಜೆಡಿಎಸ್ ಅವರ ಕರಪತ್ರ ಅಂದು ಸುಂಟರಗಾಳಿ ಬೀಸಿದ ಹಾಗೆ ಬೀಸಿತ್ತು. ಈ ರೀತಿ ಸಂಚುಮಾಡಿ ಹಿಂದುಳಿದ ಮುಖಂಡನನ್ನ ಜೆಡಿಎಸ್‍ನವರು ಕೊಂದರು. ಚುನಾವಣಾ ದಿನ ಸ್ವತಃ ಎ.ಕೃಷ್ಣಪ್ಪ ನನಗೆ ಫೋನ್ ಮಾಡಿ, ಬಳಿಕ ಏನಾದರು ಹೊಟ್ಟೆಗೆ ಹಾಕ್ತಿರ ಅಂತ ಕೇಳಿ ನನ್ನ ಮನೆಗೆ ಬಂದಿದ್ದರು. ಆಗ ನಾನು ತಿಂಡಿಕೊಟ್ಟು ಅವರನ್ನು ಸಮಾಧಾನ ಮಾಡಿದ್ದೆ. ಯಾವ ಜೆಡಿಎಸ್ ಶಾಸಕರೂ ನನ್ನ ಜೊತೆಗಿಲ್ಲ, ನನ್ನನ್ನ ಪರದೇಶಿ ಮಾಡಿದ್ದಾರೆ ಅಂತ ಕೃಷ್ಣಪ್ಪ ಕಣ್ಣೀರು ಸುರಿಸಿದ್ದರು. ಅದಾದ ಮಾರನೇ ದಿನವೇ ಹೃದಯಾಘಾತದಿಂದ ಅವರು ಮೃತಪಟ್ಟರು ಎಂದು ಬಸವರಾಜು ಅವರು ಕಿಡಿಕಾರಿದ್ದಾರೆ.

    ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾದ ತಮಗೆ ಟಿಕೆಟ್ ಕೈ ತಪ್ಪುತ್ತೆ ಅನ್ನುವ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ಹೊಲ ಉಳುಮೆ ಮಾಡಿ ಮಾಡಿ ನಮಗೆ ಅನುಭವ ಬಂದಿದೆ. ನಾವು ಹಳೆಯ ಎತ್ತುಗಳು. ಎಷ್ಟು ಏರಿ ಇದ್ದರು ಎಳೀತಿವಿ. ಅದಕ್ಕೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಹಾಯಲ್ಲಾ ಒದೆಯಲ್ಲ ತೆಪ್ಪಗಿರ್ತಿವಿ. ಬಾರದು ಬಪ್ಪದು -ಬಪ್ಪದು ತಪ್ಪದು, ಹಾಗಾಗಿಯೇ ನಾನು ತೆಪ್ಪಗಿದ್ದೇನೆ. ನಾನು ಟಿಕೆಟ್‍ಗಾಗಿ ಅರ್ಜಿ ಹಾಕಿಲ್ಲ. ಪಕ್ಷದ ಆಂತರಿಕ ಸಮೀಕ್ಷಯಂತೆ ಟಿಕೆಟ್ ಕೊಡುತ್ತಾರೆ. ಹೀಗಾಗಿ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಕಲಾವಿದರಾಗಿ ಅಲ್ಲ, ಮನೆ ಮಕ್ಕಳಾಗಿ ಬೆಂಬಲಿಸುತ್ತೇವೆ: ಯಶ್

    ಕಲಾವಿದರಾಗಿ ಅಲ್ಲ, ಮನೆ ಮಕ್ಕಳಾಗಿ ಬೆಂಬಲಿಸುತ್ತೇವೆ: ಯಶ್

    ಬೆಂಗಳೂರು: ನಾವು ಸುಮಲತಾ ಅವರ ಜೊತೆ ಕಲಾವಿದರಾಗಿ ಕೂತಿಲ್ಲ. ಮನೆ ಮಕ್ಕಳಾಗಿ ಕುಳಿತ್ತಿದ್ದೇವೆ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಜೊತೆ ಇರುತ್ತೇವೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ಸುಮಲತಾ ನಡೆಸಿದ್ದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಮೊದಲಿಂದಲೂ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮನೆಯವರೊಂದಿಗೆ ಒಡನಾಟ ಇದೆ. ಅವರ ಮನೆಯಲ್ಲಿ ದರ್ಶನ್ ದೊಡ್ಡ ಮಗನಂತಿದ್ದಾರೆ. ಅಕ್ಕ ಒಂದು ನಿರ್ಧಾರ ತಗೊಂಡಿದ್ದಾರೆ. ಅದಕ್ಕೆ ನಾವು ಯೋಚನೆ ಮಾಡುವ ಅಗತ್ಯ ಇಲ್ಲ. ಅಕ್ಕ ಎಲ್ಲಿ ಹೆಜ್ಜೆ ಇಡುತ್ತಾರೋ ಅವರನ್ನ ನಾವು ಹಿಂಬಾಲಿಸುತ್ತೇವೆ ಎಂದು ಹೇಳಿದರು.

    ಅಂಬರೀಶಣ್ಣ ನಮಗೆ ತುಂಬಾ ಅನುಕೂಲ ಮಾಡಿದ್ದಾರೆ. ಮಂಡ್ಯ ಜನಕ್ಕೆ ಅಂಬರೀಶಣ್ಣ ಯಾರು? ಏನು ಅಂತ ಗೊತ್ತು. ಅಷ್ಟು ವರ್ಷ ಜನರ ಪ್ರೀತಿ ಗಳಿಸೋದು ಸುಲಭವಲ್ಲ. ಅಂಬರೀಶಣ್ಣ ಮಂಡ್ಯದ ಮನೆಮಗ. ಸುಮಲತಾ ಯಾಕೆ ಸ್ಪರ್ಧಿಸುತ್ತಿದ್ದಾರೆ ಅಂತ ಅರ್ಥ ಮಾಡ್ಕೋಬೇಕು. ಇದು ಸೂಕ್ಷ್ಮವಾದ ವಿಚಾರ, ಅವರು ರಾಜಕೀಯ ಲಾಭಕ್ಕಾಗಿ ಸ್ಪರ್ಧಿಸುತ್ತಿಲ್ಲ. ಮಂಡ್ಯದ ನಂಟಿಗೆ ಸರಿಸಾಟಿ ಯಾವುದೂ ಇಲ್ಲ ಎಂದು ಸುಮಲತಾ ಅವರ ಪರ ಯಶ್ ಬ್ಯಾಟಿಂಗ್ ಮಾಡಿದರು.

    ಮಂಡ್ಯದ ಜನತೆಗೆ ಅಂಬರೀಶ್ ಪ್ರೀತಿ ಮೀರಿ ದೊಡ್ಡ ಶಕ್ತಿ ಇದೆ. ಮಂಡ್ಯದ ಜನತೆಗೆ ಜ್ಞಾನ, ಶಕ್ತಿ, ಪ್ರೀತಿ, ಒಡನಾಟ, ತಾಳ್ಮೆ, ಸಹನೆ ಎಲ್ಲ ಇದೆ. ಮಂಡ್ಯದ ಜನ ಅಂಬರೀಶ್ ಕುಟುಂಬವನ್ನು ಕೈ ಬಿಡಲ್ಲ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಸದಾ ಜೊತೆಗಿರುತ್ತೇವೆ ಎಂದು ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.

  • ಯಾವುದೇ ಕಾರಣಕ್ಕೂ ಮುನಿಯಪ್ಪಗೆ ಬೆಂಬಲ ನೀಡಲ್ಲ: ಕೈ ಶಾಸಕ ನಾರಾಯಣಸ್ವಾಮಿ

    ಯಾವುದೇ ಕಾರಣಕ್ಕೂ ಮುನಿಯಪ್ಪಗೆ ಬೆಂಬಲ ನೀಡಲ್ಲ: ಕೈ ಶಾಸಕ ನಾರಾಯಣಸ್ವಾಮಿ

    ಕೋಲಾರ: ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್‍ನಲ್ಲಿ ನಾಯಕರ ನಡುವೆ ಭಿನ್ನಮತ ಬುಗಿಲೆದ್ದಿದ್ದು, ಕೈ ನಾಯಕ ಕೆ.ಎಚ್.ಮುನಿಯಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ವಿ.ಮುನಿಯಪ್ಪ, ಸುಧಾಕರ್ ರೆಡ್ಡಿ, ಶ್ರೀನಿವಾಸಗೌಡ, ಕೊತ್ತೂರು ಮಂಜುನಾಥ್, ವೆಂಕಟಶಿವಾರೆಡ್ಡಿ, ಚೌಡರೆಡ್ಡಿ, ಎಂ.ನಾರಾಯಣಸ್ವಾಮಿ ಅವರನ್ನ ಮೂಲೆಗುಂಪು ಮಾಡಿದ್ದಷ್ಟೆ ಮುನಿಯಪ್ಪನವರ ಸಾಧನೆ. ಕೋಲಾರ ಜಿಲ್ಲೆಗೆ ಮುನಿಯಪ್ಪ ಕೊಡುಗೆ ಶೂನ್ಯ. ಹೀಗಾಗಿ ಬದಲಾವಣೆ ಬೇಕು ಎಂದು ಲೋಕಸಭೆ ಚುನಾವಣೆಗೆ ಹೆಚ್.ಸಿ ಮಹದೇವಪ್ಪರನ್ನು ಕಣಕ್ಕಿಳಿಸುವಂತೆ ಹೈಕಮಾಂಡ್‍ನಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಒಂದು ವೇಳೆ ಮುನಿಯಪ್ಪ ಅವರಿಗೆ ಟಿಕೆಟ್ ನೀಡಿದ್ದಲ್ಲಿ, ನಾವೆಲ್ಲ ಕೂತು ಚರ್ಚಿಸಿ ಮುಂದೇನು ಮಾಡಬೇಕು ಅಂತ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಾಳೆ ಎಲ್ಲವೂ ತಿಳಿಯುತ್ತದೆ. ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ, ಯಾವುದೇ ಕಾರಣಕ್ಕೂ ಮುನಿಯಪ್ಪ ಅವರಿಗೆ ಬೆಂಬಲ ನೀಡಲ್ಲ ಎಂದು ಪರೋಕ್ಷವಾಗಿ ನಾರಾಯಣಸ್ವಾಮಿ ಹೇಳಿದ್ದಾರೆ.

  • ದೇಶದ ಪ್ರಧಾನಿ ಹುದ್ದೆಗೆ ರಾಹುಲ್ ಸಿದ್ಧರಾಗಿಲ್ಲ : ಕಾಂಗ್ರೆಸ್ ಮಾಜಿ ಸಚಿವ

    ದೇಶದ ಪ್ರಧಾನಿ ಹುದ್ದೆಗೆ ರಾಹುಲ್ ಸಿದ್ಧರಾಗಿಲ್ಲ : ಕಾಂಗ್ರೆಸ್ ಮಾಜಿ ಸಚಿವ

    ಕಲಬುರಗಿ: ಭಾರತದ ಪ್ರಧಾನಿಯಾಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಕ್ತವಲ್ಲ. ಅವರು ಇನ್ನೂ ಪ್ರಧಾನಿಯಾಗುವ ಮಟ್ಟಿಗೆ ಸಿದ್ಧವಾಗಿಲ್ಲ ಎಂದು ಕಾಂಗ್ರೆಸ್ ಮಾಜಿ ಸಚಿವ ಮಾಲಕರೆಡ್ಡಿ ನೀಡಿದ್ದಾರೆ.

    ಬಿಜೆಪಿ ಸೇರ್ಪಡೆ ವದಂತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಲಕರೆಡ್ಡಿ, ನಾನು ಕಾಂಗ್ರೆಸ್ ಬಿಡುವುದಿಲ್ಲ. ಅನಾರೋಗ್ಯದ ಕಾರಣದಿಂದ ಚುನಾವಣೆ ವಿಚಾರದಲ್ಲಿ ದೂರವಿದ್ದೇನೆ. ದೇಶದ ಪ್ರಧಾನಿ ಹುದ್ದೆಗೆ ರಾಹುಲ್ ಸೂಕ್ತವಲ್ಲ. ಅವರು ಪ್ರಧಾನಿ ಹುದ್ದೆ ನಿರ್ವಹಿಸಲು ಸಿದ್ಧರಾಗಿಲ್ಲ. ದೇಶದ ರಕ್ಷಣೆ ಮುಖ್ಯ, ಸದ್ಯ ಇರುವ ಪರಿಸ್ಥತಿಯಲ್ಲಿ ಮೋದಿ ಅವರು ದೇಶದ ರಕ್ಷಣಾ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ವಿಷಯದಲ್ಲಿ ನಾನು ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೆನೆ. ರಾಷ್ಟ್ರ ಮಟ್ಟದಲ್ಲಿ ರಾಜಕಾರಣ ಮಾಡಿ ಅನುಭವವಿರುವ ನಾಯಕರೇ ಮೋದಿ ನಾಯಕತ್ವವನ್ನು ಒಪ್ಪಿದ್ದಾರೆ ಎಂದು ಹೇಳಿದರು.

    ಸೋನಿಯಾ ಗಾಂಧಿ ಅವರಿಗೆ ರಾಜಕೀಯದ ಮೇಲಿದ್ದ ಜಾಣ್ಮೆ ರಾಹುಲ್ ಅವರಲ್ಲಿ ನಾನು ಕಂಡಿಲ್ಲ. ಅವರು ಇನ್ನೂ ರಾಜಕೀಯದಲ್ಲಿರುವ ಅನುಭವ ಸಾಲದು. ನಾನು ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಖರ್ಗೆ ಪರ ಪ್ರಚಾರ ಮಾಡಲ್ಲ, ಪಕ್ಷದ ಪರವಾಗಿ ಪ್ರಚಾರ ಮಾಡುತ್ತೆನೆ. ಯಾಕೆಂದರೆ ಇತ್ತೀಚಿಗೆ ಕ್ಷೇತ್ರದಲ್ಲಿ ಖರ್ಗೆಯವರ ವರ್ಚಸ್ಸು ಕಡಿಮೆ ಆಗಿದೆ. ಅದಕ್ಕಾಗಿ ಖರ್ಗೆ ಆಪ್ತರು ಅವರನ್ನು ಬಿಟ್ಟು ಹೋಗುತ್ತಿದ್ದಾರೆ. ನಾನು ಖರ್ಗೆಯ ನಾಯಕತ್ವ ಸಹ ಒಪ್ಪಲ್ಲ ಎಂದು ಹೇಳುವ ಮೂಲಕ ಸ್ಥಳೀಯ ನಾಯಕತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

  • ಲೋಕಸಭಾ ಚುನಾವಣೆ: ಯಾವ ಕ್ಷೇತ್ರದಲ್ಲಿ ಯಾರಿಗೆ ಬಿಜೆಪಿ ಟಿಕೆಟ್?

    ಲೋಕಸಭಾ ಚುನಾವಣೆ: ಯಾವ ಕ್ಷೇತ್ರದಲ್ಲಿ ಯಾರಿಗೆ ಬಿಜೆಪಿ ಟಿಕೆಟ್?

    ಬೆಂಗಳೂರು: ಹಾಲಿ ಬಿಜೆಪಿಯ ಎಲ್ಲ ಸಂಸದರಿಗೆ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಯಡಿಯೂರಪ್ಪ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಸದಾನಂದಗೌಡ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ನಳಿನ್ ಕುಮಾರ್ ಕಟೀಲ್, ಆರ್. ಅಶೋಕ್, ಪ್ರಹ್ಲಾದ್ ಜೋಶಿ, ಅರುಣ್ ಕುಮಾರ್ ಭಾಗಿಯಾಗಿದ್ದರು.

    ಅಂತಿಮಗೊಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಹಿಡಿದುಕೊಂಡು ಯಡಿಯೂರಪ್ಪ ಇಂದು ರಾತ್ರಿಯೇ ದೆಹಲಿಗೆ ತೆರಳಲಿದ್ದು ಸೋಮವಾರ ಹೈಕಮಾಂಡ್ ನಾಯಕರು ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹಾಕಬೇಕೋ? ಬೇಡವೋ ಎಂಬುದರ ನಿರ್ಧಾರ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ. ಹೈಕಮಾಂಡ್ ಅಭ್ಯರ್ಥಿಯನ್ನು ನಿಲ್ಲಿಸಿ ಎಂದು ಸೂಚನೆ ನೀಡಿದರೆ ಸಿದ್ದರಾಜು ಹೆಸರು ಅಂತಿಮಗೊಳಿಸುವ ಸಾಧ್ಯತೆಯಿದೆ.


    ಸಂಭಾವ್ಯ ಅಭ್ಯರ್ಥಿಗಳು
    ಚಿಕ್ಕೋಡಿ- ರಮೇಶ್ ಕತ್ತಿ
    ಬೆಳಗಾವಿ- ಸುರೇಶ್ ಅಂಗಡಿ
    ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
    ವಿಜಯಪುರ- ರಮೇಶ್ ಜಿಗಜಿಣಗಿ

    ಕಲಬುರಗಿ- ಉಮೇಶ್ ಜಾದವ್
    ರಾಯಚೂರು- ಅನಂತರಾಜು ನಾಯಕ್,ಅಮರೇಶ್ ನಾಯಕ್, ಮಹದೇವಮ್ಮ
    ಬೀದರ್- ಭಗವಂತ ಖೂಬಾ
    ಕೊಪ್ಪಳ- ಕರಡಿ ಸಂಗಣ್ಣ
    ಬಳ್ಳಾರಿ- ದೇವೇಂದ್ರಪ್ಪ

    ಹಾವೇರಿ- ಶಿವಕುಮಾರ್ ಉದಾಸಿ
    ಧಾರವಾಡ- ಪ್ರಹ್ಲಾದ ಜೋಷಿ
    ಉತ್ತರ ಕನ್ನಡ- ಅನಂತ್ ಕುಮಾರ್ ಹೆಗಡೆ
    ದಾವಣಗೆರೆ- ಜಿ.ಎಂ ಸಿದ್ದೇಶ್ವರ್
    ಶಿವಮೊಗ್ಗ- ಬಿ.ವೈ ರಾಘವೇಂದ್ರ

    ಉಡುಪಿ – ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ
    ಹಾಸನ – ಎ.ಮಂಜು
    ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್
    ಚಿತ್ರದುರ್ಗ- ಜನಾರ್ದನ್ ಸ್ವಾಮಿ, ಮಾನಪ್ಪ ವಜ್ಜಲ್

    ತುಮಕೂರು- ಜಿ.ಎಸ್. ಬಸವರಾಜು
    ಮೈಸೂರು- ಪ್ರತಾಪ್ ಸಿಂಹ
    ಚಾಮರಾಜನಗರ – ವಿ. ಶ್ರೀನಿವಾಸ್ ಪ್ರಸಾದ್
    ಬೆಂಗಳೂರು ಗ್ರಾಮಾಂತರ- ಸಿ.ಪಿ ಯೋಗೇಶ್ವರ್, ರುದ್ರೇಶ್

    ಬೆಂಗಳೂರು ಉತ್ತರ- ಡಿ. ವಿ ಸದಾನಂದಗೌಡ
    ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್
    ಬೆಂಗಳೂರು ದಕ್ಷಿಣ- ತೇಜಸ್ವಿನಿ ಅನಂತ್ ಕುಮಾರ್
    ಚಿಕ್ಕಬಳ್ಳಾಪುರ- ಬಿ.ಎನ್. ಬಚ್ಚೇಗೌಡ

    ಕೋಲಾರ- ಡಿ.ಎಸ್ ವೀರಯ್ಯ/ ಛಲವಾದಿ ನಾರಾಯಣಸ್ವಾಮಿ
    ಮಂಡ್ಯ – ಸಿದ್ದರಾಮಯ್ಯ (ನಿಲ್ಲಬಹುದು/ ನಿಲ್ಲದೇ ಇರಬಹುದು)

  • ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಮ್ಯಾರನ್ನು ನೆನೆದ ಅಭಿಮಾನಿ

    ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಮ್ಯಾರನ್ನು ನೆನೆದ ಅಭಿಮಾನಿ

    ಮಂಡ್ಯ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಂಸದೆ ರಮ್ಯಾರನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ರಮ್ಯಾ ಅವರ ಸೋಲಿನ ನೋವು ನನ್ನ ಮನಸಲ್ಲಿ ಇನ್ನೂ ಇದೆ, ಮರಿಯೋಕೆ ಆಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಅಭಿಮಾನಿ ನೋವು ತೋಡಿಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಸ್ಟೂಟೆಂಡ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜೀವ್ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ರಮ್ಯಾರನ್ನು ನೆನೆದಿರುವ ಅಭಿಮಾನಿ ರಾಜೀವ್ ಪೋಸ್ಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್ ಗೆ ನೆಟ್ಟಿಗರು ರಮ್ಯಾ ಸೋಲಿಗೆ ಯಾರು ಕಾರಣ? ಕಾಂಗ್ರೆಸ್ ಬಣ ರಾಜಕೀಯ ತಾನೇ ಕಾರಣ ಎಂದು ಕಾಲೆಳೆಯುತ್ತಿದ್ದಾರೆ. ಇನ್ನೊಂದೆಡೆ ರಮ್ಯಾ ಸೋಲಿನ ನೋವನ್ನು ಸುಮಲತಾ ಗೆಲುವಿನ ಮೂಲಕ ತೀರಿಸಿಕೊಳ್ಳಲು ಹೊರಟ್ರಾ ರಮ್ಯಾ ಅಭಿಮಾನಿಗಳು? ರಮ್ಯಾ ಸೋಲಿಗೆ ಅಂಬರೀಷ್ ಕಾರಣಾನ? ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದೆ.

    ರಮ್ಯಾ ಅಭಿಮಾನಿಗೆ ಸೋಲಿಗೆ ಕಾರಣ ಯಾರು ತಿಳಿಸಿ ಎಂದು ಪ್ರಶ್ನಿಸುತ್ತ, ಮಂಡ್ಯದಲ್ಲಿ ಹಿಂದೆ ಅಂಬರೀಷ್, ಎಸ್‍ಎಂಕೆ ಬಣ ರಾಜೀಕೀಯ ಇತ್ತು. ಚುನಾವಣೆಯಲ್ಲಿ ಅಂಬರೀಷ್ ಸಪೋರ್ಟ್ ಮಾಡದೇ ಇದಿದ್ದೇ ರಮ್ಯಾ ಸೋಲಿಗೆ ಕಾರಣ ಎಂದು ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಕಾಂಗ್ರೆಸ್‍ಗೆ ಮಾಜಿ ಸಚಿವ ಎಂ.ಮಂಜು ಗುಡ್‍ಬೈ..!

    ಇಂದು ಕಾಂಗ್ರೆಸ್‍ಗೆ ಮಾಜಿ ಸಚಿವ ಎಂ.ಮಂಜು ಗುಡ್‍ಬೈ..!

    – ಕೈ ತೊರೆಯಲಿದ್ದಾರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ

    ಹಾಸನ: ಲೋಕಸಭಾ ಚುನಾವಣೆಯ ಹಿನ್ನೆಲೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆಗಳಾಗುತ್ತಿದ್ದು, ಇಂದು ಮಾಜಿ ಸಚಿವ ಎ.ಮಂಜು ಕಾಂಗ್ರೆಸ್‍ಗೆ ಗುಡ್‍ಬೈ ಹೇಳಲಿದ್ದಾರೆ.

    ಶುಕ್ರವಾರ ಹಾಸನದ ಅರಸೀಕೆರೆ ಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಎ.ಮಂಜು ಅವರು ಘೋಷಿಸಿದ್ದಾರೆ. ಮಂಜು ಜೊತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಕಾಂಗ್ರೆಸ್ಸಿಗೆ ಗುಡ್‍ಬೈ ಹೇಳುವ ಸಾಧ್ಯತೆಯಿದೆ. ಹಾಗೆಯೇ ಕಾಂಗ್ರೆಸ್‍ನಿಂದ ಬಿಜೆಪಿಗೆ ಎ. ಮಂಜು ಜಿಗಿಯಲಿದ್ದಾರೆ. ಮಂಜು ಜೊತೆಗೆ ಕಾಂಗ್ರೆಸ್‍ನ ಬಹುತೇಕ ಜನಪ್ರತಿನಿಧಿಗಳು ಸಹ ಕಾಂಗ್ರೆಸ್ ಬಿಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬಿಜೆಪಿಗೆ ಸೇರಿ ಹಾಸನದಲ್ಲಿ ಕಾಂಗ್ರೆಸ್‍ಗೆ ಬಿಗ್ ಶಾಕ್ ನೀಡಲು ಎ.ಮಂಜು ಸಿದ್ಧರಾಗಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಎ.ಮಂಜು ಸ್ಪರ್ಧಿಸುವ ಸಾಧ್ಯತೆ ಇದ್ದು, ಮಂಜು ತನ್ನ ಜೊತೆ ನೂರಾರು ಪ್ರಮುಖ ಜಿಲ್ಲಾ ನಾಯಕರನ್ನ ಬಿಜೆಪಿಗೆ ಕರೆದುಕೊಂಡು ಹೋಗ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

    ಸದ್ಯ ಎ.ಮಂಜು ಜೊತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತ ದೇವರಾಜ್ ಕೂಡ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನ್ರು ಕಷ್ಟದಲ್ಲಿದ್ದಾಗ ಬಾರದ ಕಣ್ಣೀರು ಈಗ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಬಂದಿದೆ: ಸಿ.ಟಿ ರವಿ ಟಾಂಗ್

    ಜನ್ರು ಕಷ್ಟದಲ್ಲಿದ್ದಾಗ ಬಾರದ ಕಣ್ಣೀರು ಈಗ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಬಂದಿದೆ: ಸಿ.ಟಿ ರವಿ ಟಾಂಗ್

    ಶಿವಮೊಗ್ಗ: ಮಾಜಿ ಪ್ರಧಾನಿ ದೇವೇಗೌಡರು ಮಣ್ಣಿನ ಮಗ, ರೈತ ನಾಯಕ ಎಂದು ಟ್ಯಾಗ್ ಲೈನ್ ಇಟ್ಟುಕೊಂಡವರು. ಅವರಿಗೆ ಜನರು ಸಂಕಷ್ಟದಲ್ಲಿದ್ದಾಗ ಕಣ್ಣೀರು ಬಾರದೇ, ಈಗ ತಮ್ಮ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಕಣ್ಣೀರು ಬಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದ್ದಾರೆ.

    ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಅಪಹಾಸ್ಯವಾಗಿದೆ. ಮಣ್ಣಿನ ಮಗ, ರೈತ ನಾಯಕ ಎಂದು ಟ್ಯಾಗ್ ಲೈನ್ ಇಟ್ಟುಕೊಂಡಿರುವ ದೇವೇಗೌಡರು, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಯೋಧರು ವೀರ ಮರಣ ಹೊಂದಿದಾಗ ಅತ್ತಿರಲಿಲ್ಲ. ಜನರು ಸಂಕಷ್ಟದಲ್ಲಿದ್ದಾಗ ಕಣ್ಣೀರು ಬಾರದೇ, ಈಗ ತಮ್ಮ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಕಣ್ಣೀರು ಬಂದಿದೆ. ಇದೊಂದು ಅಪಹಾಸ್ಯಕ್ಕೆ ಒಳಗಾದ ಹೈಡ್ರಾಮ ಎಂದು ದೇವೇಗೌಡರ ಕುಟುಂಬದ ಕಣ್ಣೀರಿಗೆ ಲೇವಡಿ ಮಾಡಿದ್ದಾರೆ. ಈ ರೀತಿ ನಟನೆ, ಮೊಮ್ಮಕ್ಕಳ ಭವಿಷ್ಯಕ್ಕೋ, ಜನರ ಬಗ್ಗೆ ಚಿಂತನೆಗೋ ಎಂದು ದೇವೇಗೌಡರೇ ಸ್ಪಷ್ಟಪಡಿಸಲಿ ಎಂದು ಟಾಂಗ್ ನೀಡಿದ್ದಾರೆ.

    ಬಿಜೆಪಿ ಕೋರ್ ಕಮಿಟಿ ಸಭೆ ಈ ತಿಂಗಳ 18 ಮತ್ತು 19ಕ್ಕೆ ನಡೆಯಲಿದೆ. ಅಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ. ಚಿಕ್ಕಮಗಳೂರು ಹಾಗೂ ಉಡುಪಿ ಬಿಜೆಪಿಯ ಭದ್ರಕೋಟೆ. ಇಲ್ಲಿ ಆಕಾಂಕ್ಷಿಗಳು ಬಹಳ ಜನ ಇದ್ದಾರೆ. ನಮ್ಮ ಹೈಕಮಾಂಡ್ ತೀರ್ಮಾನವೇ ಅಂತಿಮ. ದೇಶದ ಹಾಗೂ ರಾಜ್ಯದ ಜನ ಬಿಜೆಪಿ ಜೊತೆಗಿದ್ದಾರೆ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂಬುದು ದೇಶದ ಜನರ ಬಯಸುತ್ತಿದ್ದಾರೆ ಎಂದು ತಿಳಿಸಿದರು.

    ರಾಜ್ಯದಲ್ಲೂ 1998 ರಿಂದಲೂ ನಂ.1 ಸ್ಥಾನದಲ್ಲಿ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅತಿರಥ ಮಹಾರಥರನ್ನು ಸೋಲಿಸಿ ಮನೆಗೆ ಕಳಿಸುತ್ತೇವೆ. 28ಕ್ಕೆ 28 ಸ್ಥಾನಗಳನ್ನು ಕೂಡ ಬಿಜೆಪಿಯೇ ಗೆಲ್ಲಲಿದೆ. ಜಾತಿ, ಕುಟುಂಬದ ಬಗ್ಗೆ ಚರ್ಚೆ ನಡೆಯದೇ, ಈಗ ದೇಶದ ಬಗ್ಗೆ ಚರ್ಚೆ ನಡೆಯುತ್ತಿದೆ. ಎಂಥಹ ನಾಯಕ ಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶ ಗೆಲ್ಲಬೇಕು ಎಂದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಸಿ.ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 5 ವರ್ಷ ಕೆಲ್ಸ ಮಾಡದೇ ಯೋಧರನ್ನು ಬಳಸಿಕೊಂಡು ಚುನಾವಣೆಗೆ ಹೋಗ್ತಿದ್ದಾರೆ: ಶಿವರಾಜ್ ತಂಗಡಗಿ

    5 ವರ್ಷ ಕೆಲ್ಸ ಮಾಡದೇ ಯೋಧರನ್ನು ಬಳಸಿಕೊಂಡು ಚುನಾವಣೆಗೆ ಹೋಗ್ತಿದ್ದಾರೆ: ಶಿವರಾಜ್ ತಂಗಡಗಿ

    ಕೊಪ್ಪಳ: ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎಂಬಂತೆ ನರೇಂದ್ರ ಮೋದಿ ಅವರಂತೆ ಬಿಜೆಪಿಯ ರಾಜ್ಯ ನಾಯಕರೂ ಸುಳ್ಳು ಹೇಳುತ್ತಿದ್ದಾರೆ. 5 ವರ್ಷ ಸರಿಯಾಗಿ ಕೆಲಸ ಮಾಡದ ಅವರು ಯೋಧರನ್ನು ಬಳಸಿಕೊಳ್ಳುವ ಮೂಲಕ ಚುನಾವಣೆಗೆ ಹೋಗುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷ ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ.ಕೆಲಸ ಮಾಡಿ ಚುನಾವಣೆಗೆ ಅವರು ಹೋಗದೆ ಯೋಧರ ಮೂಲಕ ಚುನಾವಣೆಗೆ ಹೋಗುತ್ತಿದ್ದಾರೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಾರೆ. ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುತ್ತಾರೆ ಎಂದು ಆರೋಪಿಸಿದರು.

    ಭಾರತ ಮಾತಾಕೀ ಜೈ ಎಂಬ ಸ್ಲೋಗನ್, ಜೈ ಜವಾನ್, ಜೈ ಕಿಸಾನ್ ಸ್ಲೋಗನ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ, ಬಿಜೆಪಿಯವರು ಆ ಸ್ಲೋಗನ್‍ಗಳನ್ನು ಗುತ್ತಿಗೆ ಪಡೆದವರ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಭಾರತ ಮಾತಾಕಿ ಜೈ ಎಂಬುದು ಯಾವುದೇ ಪಕ್ಷಕ್ಕೆ ಸೀಮಿತವಲ್ಲ. ನಾವೂ ಭಾರತ ಮಾತಾ ಕೀ ಜೈ ಎನ್ನುತ್ತೇವೆ. ಸಂಸದ ಅನಂತ್‍ಕುಮಾರ್ ಹೆಗ್ಡೆಗೆ ತಿಳುವಳಿಕೆ ಇಲ್ಲ. ಹೇಗೆ ಸಂಸದರಾದರೋ ಗೊತ್ತಿಲ್ಲ ಎಂದು ಟೀಕಿಸಿದರು.

    ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಲ್ಲಿ 8 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಾರ್ಚ್ 16 ರಂದು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗುತ್ತದೆ. ಈಗಾಗಲೇ ಜಿಲ್ಲೆಯ ಎಲ್ಲ ನಾಯಕರನ್ನ ಕರೆದು ಸಿದ್ದರಾಮಯ್ಯ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ನಾವೆಲ್ಲರೂ ಒತ್ತಾಯ ಮಾಡಿದ್ದೆವು. ಆದರೆ, ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಅಂತ ಹೇಳಿದ್ದಾರೆ. ರಾಜ್ಯ ರಾಜ್ಯಕಾರಣದಲ್ಲಿಯೇ ನಾನು ಇರುತ್ತೇನೆ. ಇದೇ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಶಿವರಾಜ್ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೇರೆ ಪಕ್ಷಗಳಲ್ಲಿ ಸಿನಿಮಾ ಟಿಕೆಟ್‍ಗೆ ಗೊಂದಲ ಇಲ್ಲ, ಎಂಪಿ ಸೀಟ್‍ಗೆ ಇದೆ: ಪ್ರತಾಪ್ ಸಿಂಹ

    ಬೇರೆ ಪಕ್ಷಗಳಲ್ಲಿ ಸಿನಿಮಾ ಟಿಕೆಟ್‍ಗೆ ಗೊಂದಲ ಇಲ್ಲ, ಎಂಪಿ ಸೀಟ್‍ಗೆ ಇದೆ: ಪ್ರತಾಪ್ ಸಿಂಹ

    ಮೈಸೂರು: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬೇರೆ ಪಕ್ಷಗಳಲ್ಲಿ ಸಿನಿಮಾ ಟಿಕೆಟ್‍ಗೆ ಗೊಂದಲ ಇಲ್ಲ. ಆದರೆ ಚುನಾವಣೆ ಟಿಕೆಟ್‍ಗೆ ಗೊಂದಲ ಇದೆ ಎಂದು ಮೈತ್ರಿ ಪಕ್ಷದ ಟಿಕೆಟ್ ಹಂಚಿಕೆ ವಿಚಾರವನ್ನ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿ ಪಕ್ಷದ ಟಿಕೆಟ್ ಹಂಚಿಕೆ ವಿಚಾರ ಪ್ರತಿಕ್ರಿಯಿಸಿದ್ದಾರೆ. ಬೇರೆ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಗೊಂದಲ ಇರಬಹುದು. ಆದರೆ ಬಿಜೆಪಿಯಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ ಇಲ್ಲ. ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರವೇ ಅಂತಿಮ. ಅವರು ಈಗಾಗಲೇ ಹಾಲಿ ಸಂಸದರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಅವರಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೇಳಿದ್ದಾರೆ.

    ಬಳಿಕ ಚುನಾವಣೆಗೆ ನಿಲ್ಲಬೇಕೆಂದು ಎಲ್ಲರಿಗೂ ಆಸೆ ಇರುತ್ತೆ ಅದು ಸಹಜ ಬಿಡಿ. ಹಾಗಂತ ಎಲ್ಲರಿಗೂ ಟೀಕೆಟ್ ನೀಡಲು ಆಗಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷದಲ್ಲಿ ಈ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv